ನವರಾತ್ರಿಯಲ್ಲಿ ಮಹಿಷಾಸುರನನ್ನು ಪೂಜಿಸುವ ಅಸುರರು
ಪ್ರತೀವರ್ಷ ನವರಾತ್ರಿ ಬಂತೆಂದರೆ ಇಡೀ ದೇಶ ಸರ್ವಾಲಂಕಾರಗೊಂಡು ಮಹಿಷಾಸುರ ಮರ್ದಿನಿ ದುರ್ಗೆಯನ್ನು ಸ್ವಾಗತಿಸಿ, ಒಂಬತ್ತು ದಿನಗಳ ಕಾಲ ಸಂಭ್ರಮಿಸುತ್ತದೆ. ಆದರೆ, ಇದೇ ಹೊತ್ತಲ್ಲಿ ಪ.ಬಂಗಾಳ, ಜಾರ್ಖಾಂಡ್, ಬಿಹಾರ, ಒಡಿಶಾ, ಛತ್ತೀಸ್‌ಗಢ್, ಮಧ್ಯಪ್ರದೇಶ ಮತ್ತು ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ವಾಸಿಸುವ ಒಂದು ಬುಡಕಟ್ಟು ಜನಾಂಗ ಇದೇ ಮಹಿಷಾಸುರನ ಸಾವಿಗಾಗಿ ಶೋಕಾಚರಣೆ ನಡೆಸುತ್ತದೆ!
ಅಸುರ ಎಂಬ ಹೆಸರಿನ ಈ ಬುಡಕಟ್ಟು ಜನಾಂಗ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಬರುವ ಅಶ್ವಿನಿ ತಿಂಗಳ ಹುಣ್ಣಿಮೆಯ ರಾತ್ರಿಯಂದು ಒಂದೆಡೆ ಸೇರಿ ಮಹಿಷಾಸುರನ ಪೂಜೆ ನಡೆಸುತ್ತದೆ. ಈ ಪೂಜೆಗೆ ‘ಅಶ್ವಿನ್ ಪೂಜ’ ಅಥವಾ ‘ಅಸುರ್ ಪೂಜ’ ಎಂದು ಹೆಸರು. ಅಸುರ ಜನಾಂಗ ವರ್ಷದಲ್ಲಿ ಎರಡು ಬಾರಿ ಅಸುರ್ ಪೂಜ ನಡೆಸುತ್ತದೆ. ಮಾರ್ಚ್ ತಿಂಗಳಲ್ಲಿ ಬರುವ ಫಗುನ್ (ಫಲ್ಗುಣ?) ತಿಂಗಳಲ್ಲಿ ಮತ್ತು ಅಶ್ವಿನ್ ತಿಂಗಳಲ್ಲಿ. ಅಸುರ್ ಪೂಜೆಯಲ್ಲಿ ಕೋಳಿ, ಅನ್ನ, ಕುಂಕುಮ ಮತ್ತು ‘ಹರಿಯ’ ಎಂದು ಕರೆಯಲಾಗುವ ಇವರೇ ತಯಾರಿಸುವ ಸಾರಾಯಿಯ ನೈವೇದ್ಯ ಇಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅಸುರ್ ಪೂಜೆಯನ್ನು ಅಸುರ್ ಜನಾಂಗ ಮಾತ್ರವಲ್ಲದೆ, ಪ. ಬಂಗಾಳದ ಬಗ್ಡಿ, ಮುಂಡಾ, ಸಾಂತಾಲಿ, ನಾಮಶೂದ್ರ ಮೊದಲಾಗಿ ಇತರ ಹಲವು ದಲಿತ ಹಾಗೂ ಬುಡಕಟ್ಟು ಜನಾಂಗಗಳೂ ‘ಹುರ್ದು ದುರ್ಗಾ’ ಎಂಬ ಹೆಸರಲ್ಲಿ ನಡೆಸುತ್ತಿದ್ದಾರೆ. ದಸರೆಗೆ ಜಗದ್ವಿಖ್ಯಾತವಾದ ಮೈಸೂರಿನಲ್ಲೂ ಕೆಲ ವರ್ಷಗಳಿಂದ ‘ಮಹಿಷಾ ದಸರಾ’ ನಡೆಯುತ್ತಿದೆ. ೨೦೧೬ ರಲ್ಲಿ ಕೇಂದ್ರ ಮಂತ್ರಿ ಸ್ಮೃತಿ ಇರಾನಿ ಆಗ ವಿವಿಧ ಕಾರಣಗಳಿಗೆ ಸುದ್ದಿಯಲ್ಲಿದ್ದ ಜೆಎನ್‌ಯು ವಿಶ್ವವಿದ್ಯಾನಿಲಯದ ಬಗ್ಗೆ ಮಾತಾಡುತ್ತ, ಮಹಿಷಾಸುರ ಪೂಜೆಯನ್ನು ಪ್ರಸ್ತಾಪಿಸಿ ಕಟು ಮಾತುಗಳನ್ನು ಆಡಿದ ನಂತರ ಅಸುರ ಪೂಜೆ ಇಡೀ ದೇಶದ ಗಮನ ಸೆಳೆಯುವಂತಾಯಿತು.
ನವರಾತ್ರಿಯ ಒಂಬತ್ತು ದಿನಗಳ ಕಾಲ ಅಸುರ ಬುಡಕಟ್ಟಿನ ಜನಾಂಗದವರು ಹಗಲು ಹೊತ್ತು ಕೆಲಸ ಮಾಡುವುದಿಲ್ಲ. ರಾತ್ರಿ ಹೊತ್ತಲ್ಲಿ ಮನೆಗಳಿಂದ ಹೊರ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಒಂಬತ್ತನೇ ರಾತ್ರಿ ಬುಡಕಟ್ಟಿನ ಸುರಕ್ಷತೆಗಾಗಿ ಗತಿಸಿದ ತಮ್ಮ ಪೂರ್ವಿಕರಿಗೆ ಪೂಜೆ ನಡೆಸುತ್ತಾರೆ. ಅಸುರ ಪೂಜೆಯನ್ನು ನಡೆಸುವವರು ಜನಾಂಗದ ಗಂಡಸರು ಮಾತ್ರ. ಹೆಂಗಸರು ಪೂಜೆಯ ಕೊನೆಯಲ್ಲಿ ನಡೆಯುವ ಅಸುರ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದಿನ ದಿನಗಳಲ್ಲಿ, ಜಮೀನ್ದಾರರು ದುರ್ಗಾ ಪೂಜೆಗೆ ನಡೆಸುವಾಗ ಅವರ ಒಕ್ಕಲಿಗರಾಗಿದ್ದ ಅಸುರ ಜನಾಂಗದ ಜನ ಪೂಜೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಟ್ಟು, ಪೂಜೆ ಶುರುವಾಗುತ್ತಿದ್ದಂತೆ ಅಲ್ಲಿಂದ ಹೊರಟು ತಮ್ಮ ಮನೆ ಸೇರಿ, ಸಮುದಾಯದ ರಕ್ಷಣೆಗಾಗಿ ಪೂರ್ವಿಕರಿಗೆ ಪೂಜೆ ಮಾಡುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸುವ ಮೊದಲು ಪ. ಬಂಗಾಳದಲ್ಲಿ ದುರ್ಗಾ ಪೂಜೆ (ನವರಾತ್ರಿ) ಜಮೀನ್ದಾರಿ ವರ್ಗಕ್ಕಷ್ಟೇ ಸೀಮಿತವಾಗಿತ್ತು. ೧೮ನೇ ಶತಮಾನದಲ್ಲಿ ಹೂಗ್ಲಿಯಲ್ಲಿ ಹನ್ನೆರಡು ಜನರ ತಂಡವೊಂದು ಪ್ರಪ್ರಥಮ ಬಾರಿಗೆ ‘ಬಾರೋಆರಿ ಪೂಜಾ’ ಎಂಬ ಹೆಸರಲ್ಲಿ ಸಮುದಾಯ ದುರ್ಗಾ ಪೂಜೆ ನಡೆಸುವ ಮೂಲಕ ದುರ್ಗಾಪೂಜೆ ಸಾರ್ವಜನಿಕ ಹಬ್ಬವಾಗಿ ಆಚರಿಸಲ್ಪಟ್ಟು, ಈಗಿನ ರೂಪವನ್ನು ಪಡೆದಿದೆ.
ಅಸುರ ಜನಾಂಗ ಹಿಂದಿನ ಕಾಲದಲ್ಲಿ ತಮ್ಮ ಹೊಟ್ಟೆಪಾಡಿಗಾಗಿ ಸಾಂಪ್ರದಾಯಿಕ ಪದ್ಧತಿಯ ಕಬ್ಬಿಣದ ಅದಿರುಗಾರಿಕೆಯನ್ನು ಮಾಡುತ್ತಿತ್ತು. ಅವರು ತಯಾರಿಸುತ್ತಿದ್ದ ಕಬ್ಬಿಣ ಪರಿಸರ ಸ್ನೇಹಿಯಾಗಿರುತ್ತಿದ್ದುದು ಮಾತ್ರವಲ್ಲದೆ ಅದಕ್ಕೆ ತುಕ್ಕು ಹಿಡಿಯುತ್ತಿರಲಿಲ್ಲ. ಮಗಧ ಸಾಮ್ರಾಜ್ಯವು ಅಸುರರು ತಯಾರಿಸುತ್ತಿದ್ದ ಆಯುಧಗಳನ್ನು ಬಹಳವಾಗಿ ಅವಲಂಬಿತವಾಗಿತ್ತು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಆ ಕಾಲದಲ್ಲೇ ಅಸುರರು ಬಿಚಿ (ಹೀಮಾಟೈಟ್), ಪೋಲಾ (ಮ್ಯಾಗ್ನಟೈಟ್) ಮತ್ತು ಗೋಟಾ (ಲ್ಯಾಟರೈಟ್) ಎಂಬ ಮೂರು ಬಗೆಯ ಕಬ್ಬಿಣದ ಅದಿರುಗಳನ್ನು ಕಂಡು ಹಿಡಿದಿದ್ದರು. ಆದರೆ, ಸರಕಾರದ ನಿರ್ಲಕ್ಷ್ಯ, ವಿವಿಧ ಅರಣ್ಯ ಕಾಯಿದೆ ಮತ್ತು ಆಧುನಿಕ ತಂತ್ರಜ್ಞಾನದಿಂದಾಗಿ ಅವರ ಈ ವಿದ್ಯೆ ಹೆಚ್ಚೂಕಡಿಮೆ ನಶಿಸಿ ಹೋಗಿದೆ. ಅವರೆಲ್ಲ ಈಗ ಜೀವನ ನಿರ್ವವಣೆಗೆ ಕೃಷಿ ಹಾಗೂ ಇತರ ಸಾಮಾನ್ಯ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.
ತಮ್ಮನ್ನು ಮಹಿಷಾಸುರನ ವಂಶಸ್ಥರು ಎಂದು ಹೇಳಿಕೊಳ್ಳುವ ಅಸುರರ ಬಗ್ಗೆ ಋಗ್ವೇದ, ಅರಣ್ಯಕ, ಬ್ರಾಹ್ಮಣಾ ಮತ್ತು ಉಪನಿಷದ್ ಮೊದಲಾದವುಗಳಲ್ಲಿ ಪ್ರಸ್ತಾಪ ಕಂಡು ಬರುತ್ತದೆ. ಇವರಲ್ಲಿ ಬಿರ್ ಅಸುರ, ಬಿರಿಜಾ ಅಸುರ ಮತ್ತು ಅಗಾರಿಯ ಅಸುರ ಎಂಬ ಮೂರು ಉಪಪಂಗಡಗಳಿವೆ. ಪಳಯುಳಿಕೆ ತಜ್ಞರು ಅಸುರರನ್ನು ಆಸ್ಟ್ರಲಾಯ್ಡ್ ಮಾನವರಿಗೂ ಹಿಂದಿನವರು ಎಂದು ಗುರುತಿಸುತ್ತಾರೆ. ಅಸುರರು ಮಾತಾಡುವ ಭಾಷೆಗೆ ಅಸುರಿ ಎಂದು ಹೆಸರು. ೨೦೧೧ರ ಜನಗಣತಿಯ ಪ್ರಕಾರ ಅಸುರ ಜನಾಂಗದ ಜನಸಂಖ್ಯೆ ಜಾರ್ಖಾಂಡನಲ್ಲಿ ೨೨,೪೫೯ ಮತ್ತು ಬಿಹಾರದಲ್ಲಿ ೪,೧೨೯ ಆಗಿತ್ತು.
ಅಸುರರಲ್ಲಿ ‘ಸೊಹ್ರಾಯ್’ ಎಂಬ ಒಂದು ಕುತೂಹಲದ ಕ್ರಮ ರೂಢಿಯಲ್ಲಿದೆ. ಮಹಿಷಾಸುರ ಕೊಲ್ಲಲ್ಪಟ್ಟಾಗ ಅವನ ಹೊಕ್ಕುಳ, ಎದೆ ಮತ್ತು ಮೂಗಿನಿಂದ ರಕ್ತ ಜಿನುಗಿತೆಂದು ಅವರು ನಂಬುತ್ತಾರೆ. ಅದರ ಸಂಕೇತವಾಗಿ ಅಸುರರು ದೀಪಾವಳಿ ಸಮಯದಲ್ಲಿ ತಮ್ಮ ಹೊಕ್ಕುಳ, ಎದೆ ಮತ್ತು ಮೂಗಿಗೆ ಕರಂಜ ಎಣ್ಣೆಯನ್ನು ಲೇಪಿಸಿಕೊಳ್ಳುತ್ತಾರೆ. ಸೌತೆಕಾಯಿಯನ್ನು ಅವರು ಮಹಿಷಾಸುರನನ್ನು ಕೊಂದವರ ಯಕೃತ್ತಿನ ಸಂಕೇತವೆಂದು ಭಾವಿಸಿ, ಅದನ್ನು ತಿಂದು ಸಾಂಕೇತಿಕವಾಗಿ ತಮ್ಮ ದೊರೆಯ ಕೊಲೆಯ ಸೇಡನ್ನು ತೀರಿಸಿಕೊಳ್ಳುತ್ತಾರೆ. ಅಸುರರ ಇನ್ನೊಂದು ವಿಶೇಷತೆಯೆಂದರೆ ಅವರು ಗೋವಿನ ಹಾಲನ್ನು ಕುಡಿಯುವುದಿಲ್ಲ! ಅವರ ಪ್ರಕಾರ, ಗೋವಿನ ಹಾಲು ಸಂಪೂರ್ಣವಾಗಿ ಅದರ ಕರುವಿಗೆ ಸೇರಿದ್ದು, ಕರು ತಾಯಿಯ ಹಾಲು ಕುಡಿದು ದಷ್ಟಪುಷ್ಟವಾಗಿ ಬೆಳೆದರೆ ಕೃಷಿ ಕೆಲಸಕ್ಕೆ ಹೆಚ್ಚಿನ ಪ್ರಯೋಜನ ಎಂದು ಭಾವಿಸುತ್ತಾರೆ.
ಭಾರತದ ಬೇರೆಲ್ಲ ಜನಾಂಗ ಬುಡಕಟ್ಟುಗಳಂತೆ ಅಸುರ ಜನಾಂಗವೂ ಆಧುನಿಕ ಶಿಕ್ಷಣ ಪಡೆದು, ಯುವಕ ಯುವತಿಯರು ಉದ್ಯೋಗ ನಿಮಿತ್ತ ನಗರಗಳನ್ನು ಸೇರಿ, ತನ್ನ ಹಿಂದಿನ ಸಂಪ್ರದಾಯಗಳನ್ನು ಹಿನ್ನೆಲೆಗೆ ಸೇರಿಸುತ್ತಿದೆ. ಅಸುರಿ ಭಾಷೆಯನ್ನಾಡುವ ಅಸುರರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅಲ್ಲದೆ, ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಅಸುರರು ಬಹುಸಂಖ್ಯಾತ ನಂಬಿಕೆಗೆ ಸಂಪೂರ್ಣ ವಿರುದ್ಧವಾದ ತಮ್ಮ ನಂಬಿಕೆ ಮತ್ತು ಸಂಪ್ರದಾಯಗಳನ್ನು ಬಹಳ ಜಾಗರೂಕರಾಗಿ ಆಚರಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಹಲವು ಶಿಕ್ಷಿತ ಅಸುರ ಯುವಕ ಯುವತಿಯರು ತಮ್ಮ ಹೆಸರಿನೊಂದಿಗೆ ಅಸುರ ಎಂಬ ಜಾತಿ ಸೂಚಕ ಹೆಸರವನ್ನು ಬಿಟ್ಟು ಟೋಪೋ, ಕಾರ್ಜು ಮೊದಲಾದ ಹೆಸರುಗಳನ್ನು ಹಾಕಿಕೊಳ್ಳುತ್ತಿದ್ದಾರೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…