ನನ್ನ ಬಾಲ್ಯದಲ್ಲೆ ಎತ್ತಿನಗಾಡಿ ಕಟ್ಟಿಕೊಂಡು ನಂಟರ ಮನೆಗೆ ಹೋಗಿಬರುವ ಪದ್ಧತಿ ಕೊನೆಯ ದಿನಗಳನ್ನು ಎಣಿಸುತ್ತಿತ್ತು. ಆದರೂ ಅಂತರಗಟ್ಟೆಗೆ ಮದುವೆಗೆ, ಸಂತೆಗೆ, ಸಿನಿಮಾಕ್ಕಾಗಿ ಕೆಲವರಾದರೂ ಬಂಡಿ ಕಟ್ಟಿಸುತ್ತಿದ್ದರು. ಸಿನಿಮಾ ಟಾಕೀಸಿನ ಬದಿ ಬಂಡಿಗಳನ್ನು ನಿಲ್ಲಿಸಲು ಬೇಕಾದಷ್ಟು ಜಾಗವೂ ಇರುತ್ತಿತ್ತು.
ನಾನು ಕಂಡ ಮೊದಲನೇ ಬಸ್ಸು 1965ರ ಆಸುಪಾಸು. ತರೀಕೆರೆಯಿಂದ ಅಜ್ಜಂಪುರಕ್ಕೆ ಓಡುತ್ತಿತ್ತು. ಅದನ್ನು ಮುಂಭಾಗದಿಂದ ರಾಡು ಹಾಕಿ ತಿರುವಿ ಚಾಲೂ ಮಾಡಲಾಗುತ್ತಿತ್ತು. ಕ್ರಮೇಣ ಬಸ್ಸುಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ತರೀಕೆರೆ ಜಂಕ್ಷನ್, ಅಲ್ಲಿಂದ ಭದ್ರಾವತಿ–ಶಿವಮೊಗ್ಗ; ಕೊಪ್ಪ–ಶೃಂಗೇರಿ, ತುಮಕೂರು–ಬೆಂಗಳೂರು, ಕೆಮ್ಮಣ್ಣುಗುಂಡಿ– ಚಿಕ್ಕಮಗಳೂರು, ಹೊಸದುರ್ಗ–ಚಿತ್ರದುರ್ಗದ ಕಡೆ ಬಸ್ಸುಗಳು ಹೊರಡು ತ್ತಿದ್ದವು. ಬೆಂಗಳೂರು–ಶಿವಮೊಗ್ಗ ನಡುವೆ ಸರ್ಕಾರಿ ಬಸ್ಸುಗಳಿದ್ದರೂ, ಅವುಗಳ ಜತೆ ನಮ್ಮ ಸಂಬಂಧ ಕಡಿಮೆ. ನಮ್ಮೂರ ಖಾಸಗಿ ಬಸ್ಸುಗಳೆಂದರೆ, ಶಾಹಿನ್, ಶಂಕರ್, ಆಂಜನೇಯ, ಗಜಾನನ, ರಿಲಯಬಲ್, ಜಯಪದ್ಮ, ಉದಯ, ಖಲೀಲ್, ವಿನಾಯಕ, ಮಹಾಬಲೇಶ್ವರ, ಸಿದ್ದರಾಮೇಶ್ವರ, ಸಿಪಿಸಿ, ಎಚ್‌ಐಎಚ್. ಕೊನೆಯ ಎರಡು ಬಸ್ಸುಗಳ ಅಕ್ಷರ ಅರ್ಥವೇನೆಂದು ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ನಮಗೆಲ್ಲ ಬಸ್ಸುಗಳು ತಮ್ಮ ಬಣ್ಣ ಮತ್ತು ಹಾರನ್ ಸಮೇತ ಪರಿಚಿತವಾಗಿದ್ದವು. ಉದಯ ಬಸ್ಸಿನ ಬಣ್ಣ ಹುರುಳಿಕಟ್ಟಿನದು. ಸಿದ್ದರಾಮೇಶ್ವರ ಬೂದು. ಶಂಕರ್ ಬೆಳ್ಳಗೆ ಕೊಕ್ಕರೆಯಂತಿತ್ತು. ಎಲ್ಲವೂ ಟಾಟಾ ಕಂಪನಿಯವು. ಉದಯ ಮಾತ್ರ ಲೇಲ್ಯಾಂಡಿನದು. ಸಿಪಿಸಿ ಮೂರಕ್ಷರದ ಮುದ್ರೆಯನ್ನು ಹೊಟ್ಟೆಗೆ ಒತ್ತಿಸಿಕೊಂಡು ಸೈನಿಕ ವಾಹನದಂತೆ ಓಡಾಡುತ್ತಿತ್ತು. ಎಲ್ಲ ಬಸ್ಸುಗಳಿಗೂ ತಾಡಪಾಲಿನ ಪರದೆ. ಈ ಪರದೆಯನ್ನು ಸುರುಳಿಸುತ್ತಿ ಕಿಟಕಿಯ ಮೇಲುಭಾಗಕ್ಕೆ ಕಟ್ಟಲಾಗುತ್ತಿತ್ತು. ಮಳೆ ಬಂದಾಗ ತಾಡುಪಾಲುಗಳ ಸುರುಳಿಯ ಬೆಲ್ಟನ್ನು ಬಿಚ್ಚಿ ಕೆಳಗೆ ಇಳಿಸಿಕೊಳ್ಳಬೇಕಿತ್ತು. ಶಂಕರ್ಗೆ ಮಾತ್ರ ಗಾಜಿನ ಕಿಟಕಿ. ಅದು ಮಲೆನಾಡಿನ ಮೂಲಕ ಬರುತ್ತಿದ್ದರಿಂದ ಇದು ಅಗತ್ಯವಾಗಿತ್ತು. ಇದು ಸಮಯಪಾಲನೆಗೂ ಹೆಸರಾಗಿತ್ತು. ಬಸ್ಸುಗಳು ನಮ್ಮೂರ ಗಡಿಯಾರಗಳಾಗಿದ್ದವು. ‘ಅಲೇ ಶಂಕರ್ ಬಂತು, ಇನ್ನೂ ಸ್ಕೂಲಿಗೆ ಹೋಗಿಲ್ಲವಲ್ಲೊ’ ಎಂದು ತಾಯಂದಿರು ಎಚ್ಚರಿಸುತ್ತಿದ್ದರು. ಸಂಜೆಗೆ ಬರುತ್ತಿದ್ದ ಶಂಕರ್ ಬಸ್ಸಿನ ಗಾಜಿನ ಮೇಲೆ ಮೇಲ್ ಎಂದು ಬರೆದಿರುತ್ತಿತ್ತು. ಮಲೆನಾಡಿನ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು ಇತ್ಯಾದಿ ಊರುಗಳನ್ನು ಬೀರೂರು, ಕಡೂರಿನಂತಹ ಬಯಲ ಸೀಮೆಯ ಊರುಗಳ ಜತೆ ಲಗತ್ತಿಸುತ್ತಿದ್ದ ಈ ಬಸ್ ಮಲೆನಾಡ ಊರುಗಳಿಂದ ತರುತ್ತಿದ್ದ ಅಂಚೆಯನ್ನು ಬೀರೂರಿನ ರೈಲ್ವೆಸ್ಟೇಷನ್ನಿಗೆ ತಲುಪಿಸುತ್ತಿತ್ತು. ಇದಕ್ಕಾಗಿ ಬಸ್ಸಿನ ಕೊನೆಯ ಸೀಟಿನ ಕೆಳಗೆ ಒಂದು ಡಬ್ಬ ಇರಿಸಲಾಗಿತ್ತು. ತುರ್ತು ಪತ್ರಗಳನ್ನು ನಾವು ಅದರಲ್ಲಿ ಹಾಕುತ್ತಿದ್ದೆವು.
ನಮ್ಮೂರಿಂದ ಹೊರಡುತ್ತಿದ್ದ ಬಸ್ಸಗಳೆಂದರೆ ವಿನಾಯಕ ಮತ್ತು
ಎಚ್‌ಐಎಚ್. ವಿನಾಯಕ ಲಕ್ಕವಳ್ಳಿ, ಭದ್ರಾವತಿ, ಚನ್ನಗಿರಿ ಮೂಲಕ ದಾವಣಗೆರೆಗೆ ಹೋಗುತ್ತಿತ್ತು. ಎಚ್‌ಐಎಚ್ ಹೊಸದುರ್ಗ, ಮಾರಿಕಣಿವೆ ಮೂಲಕ ಹಿರಿಯೂರನ್ನು ಮುಟ್ಟುತ್ತಿತ್ತು. ಇದು ನಿಧಾನ ಚಲನೆಗೂ, ಸಿಕ್ಕಲ್ಲೆಲ್ಲ ನಿಲ್ಲುವುದಕ್ಕೂ ಖ್ಯಾತಿಯಾಗಿತ್ತು. ಚಲಿಸುವಾಗಲೇ ಕೆಳಗಿಳಿದು ಮೂತ್ರಮಾಡಿ ಓಡಿಹೋಗಿ ಮತ್ತೆ ಹತ್ತಬಹುದಿತ್ತು. ಅವಸರಕ್ಕೆ ಹೋಗುವವರು ಇದರ ಹಿಂದಿನ ಬಸ್ಸುಗಳನ್ನು ಹಿಡಿದು ಊರು ಮುಟ್ಟುತ್ತಿದ್ದರು. ಅದರಲ್ಲೂ ಗುರುವಾರ ಸಂಜೆ ಬಸ್ಸುಗಳಿಗೆ ಕೂತವರಿಗೆ ಮಹಾಸಹನೆ ಬೇಕು. ಅವು ಪ್ರತಿ ಹಳ್ಳಿಯಲ್ಲೂ ನಿಂತು ಗೇಟಿನಲ್ಲಿದ್ದ ಮೂಟೆಗಳನ್ನು ಏರಿಸಿಕೊಳ್ಳುತ್ತಿದ್ದವು. ಕ್ಲೀನರ್ ಬಸ್ಸು ನಿಧಾನವಾದೊಡನೆ ಇಳಿದು ಓಡುತ್ತಾ ಪಯಣಿಕರನ್ನು ಹತ್ತಿಸಿ, ಲಗೇಜನ್ನು ಎತ್ತಿ ಒಳಗಿಟ್ಟು ನಾಲಗೆಯನ್ನು ಪಾನುಬೀಡದಂತೆ ಮಡಚಿ ಶಿಳ್ಳೆ ಹಾಕುತ್ತಿದ್ದನು. ಟಾಪಿಗೆ ಹತ್ತಿ ಕೆಳಗಿಂದ ರೈತರು ಎತ್ತಿಕೊಡುವ ಮೂಟೆಗಳನ್ನು ಚಕಚಕ ಎಳೆದು ಜೋಡಿಸುತ್ತಿದ್ದನು. ಪ್ರಯಣಿಗರ ತೂಕ ಕಾಲುಭಾಗ; ಮೂಟೆಗಳದ್ದು ಮುಕ್ಕಾಲು ಭಾಗ. ರೂಟಿನ ಊರುಗಳನ್ನು ಹೋಟೆಲಿನ ಮಾಣಿ ಗಿರಾಕಿಗಳ ಮುಂದೆ ತಿಂಡಿಗಳ ಪಟ್ಟಿ ಒದರುವಂತೆ ಹೇಳುತ್ತಿದ್ದನು. ಮೂಟೆಗಳನ್ನು ಒಳಗೆ ಮೇಲೆ ಮೇಲೆ ಹೇರಿಕೊಂಡು ಬಸ್ಸು ತುಂಬಿದ ದಿಮ್ಮನಿಸಿಯಾಗುತ್ತಿತ್ತು. ಅದು ಊರು ಮುಟ್ಟುವ ಹೊತ್ತಿಗೆ ಪಯಣಿಕರ ಹಸಿವಿನಿಂದ ಹೊಟ್ಟೆಯೊಳಗಿನ ಹುಳ ಸತ್ತು ಹೋಗಿರುತ್ತಿದ್ದವು. ಒಳ್ಳೆಯ ಬಟ್ಟೆ ಧರಿಸಿ ಮದುವೆಗೆ ಹೋಗುವವರು ಎಚ್‌ಐಎಚ್ ಹತ್ತುತ್ತಿರಲಿಲ್ಲ. ಮಳೆಗೆ ಸೋರುತ್ತಿತ್ತು. ಅದರ ಹಿಂಬದಿಯ ಕೊನೆಯ ಸೀಟುಗಳನ್ನು ತೆಗೆದು ಅಂಕಣ ಮಾಡಲಾಗಿತ್ತು. ಅದರಲ್ಲಿ ಶುಕ್ರವಾರದ ಸಂತೆಗೆ ಕುರಿಯನ್ನು ತುಂಬಲಾಗುತ್ತಿತ್ತು. ಕುರಿಯ ಗಂಜಳ ಹಿಕ್ಕೆಗಳ ಪರಿಮಳದಿಂದ ಬಸ್ಸು ಘಮಗುಡುತ್ತಿತ್ತು.
ಬಾಬಾಬುಡನಗಿರಿಗೆ ಹೋಗುವ ಬಸ್ಸು ಆಂಜನೇಯ, ಖಲೀಲ್ ಹಳೆಯದಾಗಿದ್ದು, ಬೆಟ್ಟ ಹತ್ತುವಾಗ ಇಂಜಿನ್ನಿನ ನೀರು ಕೊತಕೊತ ಕುದಿಯುತ್ತ ಪ್ರಯಾಣಿಕರ ಮೇಲೆ ಸಿಡಿದು ಹಾಹಾಕಾರ ಎಬ್ಬಿಸುತ್ತಿತ್ತು. ಅಪ್ಪಿನಲ್ಲಿ ಗೇರು ಬದಲಾವಣೆ ಮಾಡಲು ಡ್ರೈವರು ಹರಸಾಹಸ ಮಾಡುತ್ತಿದ್ದನು. ಅದು ಬೀಳದಿದ್ದಾಗ ಕಂಡಕ್ಟರ್ ಬಂದು ಅದನ್ನು ಹಾರೆಯನ್ನು ಬಂಡೆಗಲ್ಲು ಎಬ್ಬಿಸಲು ಮೀಟುವಂತೆ ಎತ್ತುತ್ತ್ತಿದ್ದನು. ಅದು ಹೊಗೆಕೊಳವೆಯಿಂದ ಕಲ್ಲಿದ್ದಲ ರೈಲು ಇಂಜಿನಿನಂತೆ ಕಪ್ಪನೆಹೊಗೆ ಬಿಡುತ್ತಿತ್ತು. ಆಂಜನೇಯ ಬಸ್ಸಿಗೆ ಈ ಹೆಸರಿಡಲು ಕಾರಣ, ಅದು ಗಿರಿಗಳನ್ನು ಹತ್ತಿ ಬಾಬಾಬುಡನಗಿರಿಗೆ, ಚಿಕ್ಕಮಗಳೂರಿಗೆ ಹೋಗುವುದೇ ಆಗಿತ್ತು. ಆಂಜ ಶಬ್ದದ ಬಳಿಕ ಹನುಮಂತನು ಬೆಟ್ಟವನ್ನು ಕೈಯಲ್ಲಿಟ್ಟು ಹಾರುವ ಚಿತ್ರವಿದ್ದು ಬಳಿಕ ನೇಯ ಶಬ್ದವನ್ನು ಬೋರ್ಡಿನಲ್ಲಿ ಬರೆಯಲಾಗಿತ್ತು. ಶಾಹಿನ್ ಬಸ್ಸು ಚಿಕ್ಕಮಗಳೂರಿನಿಂದ ಬರುತಿತ್ತು. ಅದರ ಹಾರ್ನು ಉದ್ದವಾಗಿ ಮಧುರವಾಗಿ ಇರುತಿತ್ತು. ಉದಯ ಬಸ್ಸಿನದು ಬಲೂನನ್ನು ಒತ್ತುವ ಮೂಲಕ ಎಮ್ಮೆಕರ ಅರಚಿದಂತೆ ಪೋಂಪೋಂ ಸದ್ದು. ಸಿದ್ದರಾಮೇಶ್ವರ ಬಸ್ಸುಗಳು ಚೌಳಹಿರಿಯೂರಿಗೆ ಹೋಗುತ್ತಿದ್ದವು. ಒಂದು ಬಸ್ಸು ತಣಿಗೆ ಬಯಲಿಗೆ ಹೋಗಿ ರಾತ್ರಿ ಹಾಲ್ಟ್ ಆಗುತ್ತಿತ್ತು. ಬಜಾರಿಗೆ ಬಂದ ಕಾಫಿ ಎಸ್ಟೇಟುಗಳ ಕಾರ್ಮಿಕರು ಅದನ್ನು ಏರುತ್ತಿದ್ದರು. ಅದರಲ್ಲಿ ಹೆಚ್ಚಿನವರು ಎಣ್ಣೆಪಾರ್ಟಿಗಳೇ ಇರುತ್ತಿದ್ದರು.
ಟಿಕೆಟ್ ಬುಕ್ ಮಾಡುವ ಏಜೆಂಟರುಗಳಿಂದ ಬಸ್ಸು ನಿಲ್ದಾಣ ಗದ್ದಲದಿಂದ ಕೂಡಿರುತ್ತಿತ್ತು. ಅವರಲ್ಲಿ ಮಹಾ ಸಿಟ್ಟಿನ ಏಜೆಂಟೆಂದರೆ ಜಯಣ್ಣನವರು. ಚಿಲ್ಲರೆ ಕೊಡದವರಿಗೆ, ಅಗತ್ಯಕ್ಕಿಂತ ಹೆಚ್ಚು ಲಗೇಜು ತಂದವರಿಗೆ, ಯಾಕಿಷ್ಟು ಚಾರ್ಜು ಎಂದು ಚೌಕಾಸಿ ಮಾಡುವವರಿಗೆ, ಚಿಕ್ಕಮಕ್ಕಳ ವಯಸ್ಸನ್ನು ಕಮ್ಮಿ ಹೇಳುವವರಿಗೆ ನಿಷ್ಠುರವಾಗಿ ಮಾತಾಡುತ್ತಿದ್ದರು. ಸಡಿಲವಾದ ಅಂಗಿ ಚೊಣ್ಣ ತೊಟ್ಟ ದಡೂತಿ ಬ್ಯಾರಿ ಏಜೆಂಟನು, ಏನಾದರೂ ಹೇಳಿ ಪ್ರಯಾಣಿಕರನ್ನು ನಗಿಸುತ್ತಿದ್ದನು. ಅವನು ಚಿಲ್ಲರೆ ಕೊಡುವಾಗ ಪೈಸೆಗಳನ್ನು ರೂಪಾಯಿಗೆ ಬದಲಿಸಿ ಹೇಳುತ್ತಿದ್ದನು. ನಾಲ್ಕಾಣೆ ಚಿಲ್ಲರೆ ಬಾಕಿ ಉಳಿಸಿಕೊಂಡರೆ ಇಪ್ಪತ್ತೈದು ರೂಪಾಯಿ ಆಮೇಲೆ ಕೊಡ್ತೇನೆ ಎನ್ನುತ್ತಿದ್ದನು.
ಶುಕ್ರವಾರದ ದಿನ ಸೀಟು ಹಿಡಿಯಲು ಜನ ತಮ್ಮ ಟವೆಲು ಬ್ಯಾಗುಗಳನ್ನು ಮಾತ್ರವಲ್ಲದೆ, ಸಣ್ಣಕಿರುವ ಮಕ್ಕಳನ್ನು ಕೆಲವೊಮ್ಮೆ ಹೆಂಡತಿಯನ್ನು ಎತ್ತಿ ಕಿಟಕಿಯಲ್ಲಿ ತೂರಿಸುತ್ತಿದ್ದರು. ಇಕ್ಕಟ್ಟಿನಲ್ಲಿ ತನ್ನ ದೇಹವನ್ನು ತೂರಿಸಿಕೊಂಡು ಕಂಡಕ್ಟರ್ ಬರುತ್ತಿದ್ದನು. ಮಹಿಳೆಯರು ಮೈತಾಗಿಸ್ತೀಯಲ್ಲ ನಿನಗೇನು ಮನ್ಯಾಗೆ ಅಕ್ಕತಂಗಿಯರಿಲ್ಲವೇ ಎಂದು ಗದರುತ್ತಿದ್ದರು. ಸುಧಾರಿಸಕೋಬೇಕಮ್ಮ, ಇವತ್ತು ಸಂತೆ ಎಂದು ಮುನ್ನಡೆಯುತ್ತಿದ್ದನು. ಒಳಗೆ ಜಾಗ ಸಾಲದಿದ್ದರೆ ಜನ ಗಂಟುಮೂಟೆ ಇಟ್ಟುಕೊಂಡು ಟಾಪುಗಳ ಮೇಲೆ ಕೂತು ಪಯಣಿಸುವ ಅವಕಾಶವಿತ್ತು. ಕೆಲವರು ಗೇರು ಬಾಕ್ಸಿರುವ ಶವಪೆಟ್ಟಿಗೆ ಆಕಾರದ ಡೂಮಿನ ಮೇಲೆ ಕೂರುತ್ತಿದ್ದರು. ಬಸ್ಸುಗಳಲ್ಲಿ ದಯವಿಟ್ಟು ಇಲ್ಲಿ ಕೂರಬೇಡಿ ಎಂದು ಬರೆದಿರುತ್ತಿತ್ತು. ಒಂದು ಬಸ್ಸಿನಲ್ಲಿ ಮಾತ್ರ ಎದ್ದೇಳು ಮಂಗ ಎಂದು ಬರೆಯಲಾಗಿತ್ತು. ಇನ್ನೊಂದು ಬಸ್ಸಿನಲ್ಲಿ ಗೇರ್‌ಬಾಕ್ಸಿನ ಮೇಲೆ ಯಾರೂ ಕೂರದಂತೆ ಸಲಾಕಿಗಳನ್ನು ಮೊಳೆಗಳಂತೆ ನಿಲ್ಲಿಸಿ ವೆಲ್ಡ್ ಮಾಡಲಾಗಿತ್ತು.
ಬಸ್ಸು ನಿಲ್ದಾಣಕ್ಕೆ ಬಂದು ನಿಂತೊಡನೆ ಒಳಗೆ ಹೊರಗೆ ನುಗ್ಗಿ ವೀಳ್ಯದೆಲೆ, ಬಾಳೆಹಣ್ಣು, ಕಿತ್ತಲೆ, ಮಾವಿನಹಣ್ಣು, ಪಿನ್ನು, ಪೆನ್ನು, ಕಲ್ಲಂಗಡಿಸೀಳು, ಸೌತೆಕಾಯಿ ಮಾರುವವರು ಮುಕುರಿಬಿಡುತ್ತಿದ್ದರು. ಭಿಕ್ಷುಕರು ಕೂಡ. ಅನೇಕ ಬಸ್ಸುಗಳಲ್ಲಿ ಚಾಲಕರು ನಮ್ಮ ಬಂಧುಗಳೇ ಇರುತ್ತಿದ್ದರು. ನಾವು ಅವರಿಗೆ ಬಸ್ಸು ಬರುವ ವೇಳೆಯಲ್ಲಿ ರಸ್ತೆಬದಿ ನಿಂತು ಟಾಟಾ ಮಾಡುತ್ತಿದ್ದೆವು. ಬಸ್ಸುಗಳಲ್ಲಿ ಎಲ್ಲಿಗಾದರೂ ಹೋಗುವುದು ಎಂದರೆ ನಮಗೆ ರೆಕ್ಕೆ ಬರುತ್ತಿದ್ದವು. ಬಸ್ಸುಗಳು ಸ್ಥಳಬಂಧಿತರಾದ ನಮ್ಮನ್ನು ಹೊಸ ಸ್ಥಳಕ್ಕೆ ಕರೆದೊಯ್ಯುವ ದೇವದೂತರಾಗಿದ್ದವು.
ಸಂಶೋಧನ ಲೋಕದಲ್ಲಿ ಒಂದು ವಾಡಿಕೆ ಮಾತಿದೆ. ಸಂಶೋಧಕರಿಗೆ ತಮ್ಮದೇ ಆದ ಒಂದು ಲೋಕದೃಷ್ಟಿ,ಸ್ಟ್ಯಾಂಡು ಇರಲೇಬೇಕು. ಅದು ಇರದಿದ್ದರೆ ಅದು ಬಸ್ಸ್ಟ್ಯಾಂಡು. ಅಂದರೆ ಯಾವುದೇ ದಿಕ್ಕಿಲ್ಲದೆ ಚಲಿಸುವವರು ಎಂದರ್ಥ. ಆದರೆ ಈ ಜೋಕು ನಮ್ಮೂರ ಬಸ್‌ಸ್ಟ್ಯಾಂಡಿಗೆ ಅನ್ವಯವಾಗದು. ಅಲ್ಲಿ ಬಂದು ದಿಕ್ಕನ್ನು ಕಂಡುಕೊಳ್ಳುವವರೇ ಇದ್ದರು.
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…
ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…
ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ವಿಧಾನಪರಿಷತ್ ಕಲಾಪದಲ್ಲಿ…
ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…
ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ…
ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…