ಎಡಿಟೋರಿಯಲ್

ಮನುಷ್ಯ ಮಾಡಿಕೊಂಡ ಕಾಲದ ಲೆಕ್ಕಾಚಾರಗಳು

ನನಗೆ ಕಾಲವೆನ್ನುವುದೂ ಒಂದು ‘ಕಲ್ಪಿತ’ ಚಮತ್ಕಾರವೆನಿಸುತ್ತದೆ. ನಿಜವಾಗಿ ಇಲ್ಲದೆಯೂ ಇದ್ದೇ ಇದೆಯೆಂದು ನಾವು ನಂಬಿರುವ
ಮತ್ತು ನಮ್ಮನ್ನು ನಂಬಿಸಿರುವ ಅದನ್ನು ಹಾಗಲ್ಲದೆ ಇನ್ನೇನಾಗಿಕಲ್ಪಿಸಿಕೊಳ್ಳಬಹುದು?

ಸರಿಯುವುದೇ ಕೆಲಸವಾದ ಕಾಲವು ಮತ್ತೊಮ್ಮೆ ವರ್ಷಾ ರ್ಸಾಂತ್ಯವನ್ನು ಎಣಿಸುತ್ತಿದೆ. ಮತ್ತೊಂದು ವರ್ಷಾರಂಭದ ಹೊಸ್ತಿಲಿನಲ್ಲಿದೆ. ಡಿಸೆಂಬರಿನ ಚಳಿಗುಳಿರು ಹೊಸ ಜನವರಿಯತ್ತ ಹೊರಳಲಿದೆ. ಇನ್ನೇನು, ಮೂರನೇ ವಾರಕ್ಕೆಲ್ಲ ಮಕರಸಂಕ್ರಮಣಕ್ಕೆಂದು ಧರಣಿ ಸಜ್ಜಾಗಲಿದೆ. ಅತ್ತಲಿನ ತಿಂಗಳೊಪ್ಪತ್ತಿಗೆಲ್ಲ ಹೇಮಂತವು ತೀರಿ ಶಿಶಿರ ಮೊದಲಾಗುತ್ತದೆ. ಆ ಬಳಿಕದ್ದು ವಸಂತಋತು. ಅಷ್ಟು ಹೊತ್ತಿಗೆ ಎರಡು ಸಾವಿರದ ಇಪ್ಪತ್ತನಾಲ್ಕನೇ ಇಸವಿಯು ತಳವೂರಿ ತನಗೆ ತಾನೇ ಹಳತಾಗಿರುತ್ತದೆ. ಬೆಳಗುಬೈಗು, ಹಗಲುರಾತ್ರಿ, ತಿಥಿ, ತೇದಿ, ದಿನ, ವಾರ, ಪಕ್ಷ, ಮಾಸವೆಂದು ಇನ್ನೊಂದು ಸಾಲಿನತ್ತ ಮುಂದುವರಿಯುತ್ತದೆ. ಜಪಮಾಲೆ ಹಿಡಿದ ಬೆರಳು ಮಣಿಯಿಂದ ಮಣಿಗೆ ಹರಿಯುವ ಹಾಗೆ ಕ್ಷಣಕ್ಷಣಕ್ಕೂ ಕ್ಷಣ ಕ್ರಮಿಸುತ್ತದೆ. ದಿನದಿನಕ್ಕೂ ದಿನ ಜರುಗುತ್ತದೆ. ಪ್ರತಿಗಳಿಗೆಯೂ ಮರುಗಳಿಗೆಯನ್ನುಂಗಿಸುತ್ತದೆ. ಪ್ರತಿದಿನವೂ ಮರುದಿನಕ್ಕೆ ಎಡೆದೋರುತ್ತದೆ. ಮುಗಿಯುವ ವರ್ಷವೇ ತನ್ನ ಮುಂದಿನದನ್ನು ಎದುರುನೋಡುತ್ತದೆ. ಮಣಿ ಬಿಟ್ಟು ಮಣಿ ಹಿಡಿಯುವ ಬೆರಳಿನಂತೆಯೇ, ಕಾಲವೆಂಬುದು, ನಿಮಿಷನಿಮಿಷಕ್ಕೂ ಹೊಸಕಂತನೆಣಿಸಿ ಮುಂಜರುಗುತ್ತದೆ.

ಈ ಕಾಲದ ಲೆಕ್ಕಾಚಾರವನ್ನಾದರೂ ನಾವು ಮನುಷ್ಯರು ಮಾಡಿಕೊಂಡಿದ್ದು, ಶಕೆಯಿಸವಿ ಯುಗದೆಣಿಕೆಯನ್ನೆಲ್ಲ ನಾವು ಸ್ವಾನುಕೂಲಕ್ಕೆಂದು ಕಂಡುಕೊಂಡಿದ್ದು, ಸುತ್ತಲಿರುವ ಇತರೆ ಜೀವಸಂಕುಲಕ್ಕೆ, ಅದರಲ್ಲೂ ಪ್ರಾಣಿಪಕ್ಷಿಗಳಿಗೆ, ಹಗಲಿರುಳಾಚೆಗಿನ ಕಾಲಮಾನದ ಅರಿವಿದೆಯೋ ಇಲ್ಲವೋ, ಅರಿಯೆ. ಇದ್ದರೂ ಇಸವಿ, ತಿಂಗಳು, ತಾರೀಖು, ವಾರವೆಂದು ನಿಗದಿಕೊಟ್ಟಿದ್ದನ್ನರಿಯೆ. ನಮ್ಮ ವೈಯಕ್ತಿಕ ನೆನಪನ್ನಲ್ಲದೆ, ಸಮುದಾಯಗಳ ಸಾರ್ವತ್ರಿಕ ಸ್ಮರಣೆಯನ್ನೂ ಪರ್ವವೆಂದೊಂದಾಗಿ ಎಣಿಸುವ ನಾವು- ನಮಗೆ ನಾವೇ ಒಂದಿಷ್ಟು ಪುರಾಣೇತಿಹಾಸ ಕಟ್ಟಿಕೊಂಡಿದ್ದೇವಷ್ಟೆ? ಇತಿಹಾಸದ ಗಣನೆಗೂ ಮುಂಚಿನದನ್ನು ಇತಿಹಾಸಪೂರ್ವವೆಂದು ಲೆಕ್ಕಿಸುತ್ತೇವಷ್ಟೆ? ಹಿಮಯುಗ, ಶಿಲಾಯುಗ, ಲೋಹಯುಗವೆಂದೆಲ್ಲ ಪುರಾತನಕಾಲವನ್ನು ವಿಂಗಡಿಸಿಟ್ಟಿದ್ದೇವಷ್ಟೆ? ಪರ್ಯಾಯವಾಗಿ, ಕೃತ ದ್ವಾಪರ ತ್ರೇತಾ ಕಲಿಯೆನ್ನುವ ವಿಭಾಗಗಳೂ ಇವೆ. ಭೂತ ಭವಿಷ್ಯ ವರ್ತಮಾನಗಳ ಗಣನೆಯೂ ಇದೆ. ಸಾಲದುದಕ್ಕೆ, ಅದೇ ಕಾಲದ ಕ್ರಮಣಕ್ಕೆ ತಕ್ಕುದಾಗಿ ನಾವೂ ಮೈದೊಗಲು ಕೂದಲು ನರೆಯಿಸಿ ವಯಸೆಣಿಸುತ್ತೇವೆ. ಆಯಸು ತೀರಿದಲ್ಲಿ ಕಾಲವಾದವೆನ್ನುತ್ತೇವೆ. ಬದುಕನ್ನು ಜನುಮವೆಂದು ಕರೆದು ಜನ್ಮಾಂತರವನ್ನು ಕಥಿಸುತ್ತೇವೆ. ಸಾಯುವುದು ಮೈಯಿ ಮಾತ್ರ, ಆತ್ಮವಲ್ಲ… ಅದು ನಾವು ಬಟ್ಟೆ ಬದಲಿಸುವ ಹಾಗೆ ಮೈಬದಲಿಸೀತು ಅಷ್ಟೆ… ಎಂಬ ಕತೆಕಟ್ಟಿ, ಅರ್ಥವಾಗದ ಕಾಲವನ್ನು ನಮ್ಮ ಅನರ್ಥಗಳ ಗ್ರಹಿಕೆಯೊಳಗೆ ಹಿಡಿದಿಡುವ ಹವಣು ನಡೆಸುತ್ತೇವೆ. ಕಾಲಕ್ಕಾದರೂ ಮುಂಜರುಗುವುದೇ ಕರುಮ, ಅದರ ಕೂಡ ಮೈಸವೆಯಿಸುವುದು ನಮ್ಮ ಕರುಮ… ಎಂಬ ನಿಶ್ಚಿತಸತ್ಯವನಾಡಿ, ಕಾಲವು ತಡೆದು ನಿಂತಂದು ಲೋಕವೇ ತೀರೀತೆಂದು ನಮ್ಮ ನಿಲುಕಾಚೆಗಿನ ಥಿಯೊರಿ ಬರೆಯುತ್ತೇವೆ. ಈ ನಡುವೊಂದು ಪ್ರಶ್ನೆಯೇಳುತ್ತದೆ. ಧರೆಯ ಮೇಲಿನ ಮನುಷ್ಯಾಸ್ತಿತ್ವವನ್ನೇ ತನ್ನೊಡನೆ ತಳಕಿಕೊಂಡಿರುವ ಕಾಲವೆನ್ನುವ ಕಾಲವು ನಿಜಕ್ಕೂ ಇದೆಯೇ? ಇಲ್ಲಾ, ಅದೊಂದು ಸುಮ್ಮನೆ ಕಲ್ಪನೆಯೇ? ಸೂರ್ಯವಾದರೂ ಮುಳುಗುವುದೇ ಇಲ್ಲ, ಇನ್ನು ಹೊತ್ತೇರಿತೆನ್ನುವುದೂ ಭುವಿಯ ಮೇಲಿನ ಕಣ್ಣನುಭವಿಸುವ ತತ್ಕಾಲೀನ ಭ್ರಮೆಯೆಂದಾದಲ್ಲಿ ಕಾಲವೆಂಬುದೂ ಮನುಷ್ಯನು ಮಾಡಿಕೊಂಡ ಸುಮ್ಮನೆ ಊಹೆಯಿದ್ದೀತಲ್ಲವೆ?

‘ಜಗತ್ಯಾಂ ಜಗತ್’ ಎಂದೊಂದು ವಾಕ್ಕಿದೆ. ಉಪನಿಷತ್ತಿನದು. ಇದನ್ನು ತುಸು ಅಳ್ಳಕವಾಗಿ, ಜಗತ್ತೆಂದರೆ ಜರುಗುವಂಥದ್ದು’ ಎಂದು ಕನ್ನಡಿಸಬಹುದು. ಯಾವುದು ಜರುಗುತ್ತದೋ ಅದು ಜಗತ್ತು, ಜರುಗದ್ದು ಅದಲ್ಲವೆನ್ನುವ ಆಶಯವದರದ್ದು. ಬಲ್ಲವರು ಈ ವಾಕ್ಯನ್ನು ಕುರಿತಾಡುವಾಗ ಸುಂಟರಗಾಳಿಯ ರೂಪಕವೊಂದನ್ನು ಎದುರಿಡುತ್ತಾರೆ. ಸರಭರನೆಂದು ಸುಳಿಯುತ್ತ, ಸುಳಿಸುರುಳಿಯಾಗಿ ಸುತ್ತುತ್ತ ಎದುರುಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಸುತ್ತಿ ಸುತ್ತಿ ಜರುಗುವ ಸುಂಟರಗಾಳಿಯ ನಟ್ಟನಡುವಿನಲ್ಲಿ, ಸುತ್ತದೆ ಸುಳಿಯದೆ ನಿಶ್ಚಲವಿರುವ ಕಣ್ಣಿರುತ್ತದೆ. ತಾನೇ ತಾನಾಗಿ ಏನೂ ಮಾಡದೆ, ಇದ್ದಲ್ಲೇ ಸುಮ್ಮನೆ ಇದ್ದುಕೊಂಡಿರುವ ಕುರುಡುಗಣ್ಣದು. ತನ್ನ ಸುತ್ತಲೂ ಸುತ್ತುವ ಗಾಳಿಯೊಡನೆ, ಅದು ಸುತ್ತಿದಲ್ಲೆಲ್ಲ ಗುಳೆ ಹೊರಡುವ ಈ ಕಣ್ಣು, ತಂತಾನು ಸುತ್ತಲೊಲ್ಲದೆ ಮಿಸುಕಲೊಲ್ಲದೆ ಇದ್ದು, ತನ್ನಾಚೆಯದನ್ನು ಮಾತ್ರ ಸುತ್ತಿಯೇ ಸುತ್ತಿಸುತ್ತದೆ. ತನ್ನ ಸುತ್ತ ಸುತ್ತಿಸುವಷ್ಟೇ ಇತ್ತಲಿಂದತ್ತ ಸುತ್ತಿ ಸುಳಿಯಿಸುತ್ತದೆ.

ಸುಂಟರುಗಾಳಿಯೊಳಗೆ ಸದಾ ‘ಸುಂಟರು’ ಸುತ್ತುತ್ತಿರುವ ಗಾಳಿಯನ್ನು ಜಗತ್ತೆಂದುಕೊಂಡರೆ, ಸದರಿ ಸುಂಟರುಸುತ್ತಿನ ಕಣ್ಣನ್ನು ಜಗತ್ತಿನ ನಿಯಾಮಕವೆನ್ನಬಹುದು. ಜರುಗುವ ಜಗತ್ತಿನಲ್ಲಿ ಜರುಗದ್ದು ಜಗನ್ನಿಯಾಮಕವೆಂದು ಅರ್ಥ.
ನನಗೆ ಕಾಲವೆನ್ನುವುದೂ ಇಂಥದೇ ಒಂದು ‘ಕಲ್ಪಿತ’ ಚಮತ್ಕಾರವೆನಿಸುತ್ತದೆ. ನಿಜವಾಗಿ ಇಲ್ಲದೆಯೂ ಇದ್ದೇ ಇದೆಯೆಂದು ನಾವು ನಂಬಿರುವ ಮತ್ತು ನಮ್ಮನ್ನು ನಂಬಿಸಿರುವ ಅದನ್ನು ಹಾಗಲ್ಲದೆ ಇನ್ನೇನಾಗಿ ಕಲ್ಪಿಸಿಕೊಳ್ಳಬಹುದು? ಇನ್ನೇನಾಗಿ ಅರ್ಥೈಸಿಕೊಳ್ಳಬಹುದು? ಇನ್ನು, ನಿಜವಾಗಿ ಇಲ್ಲದೆಯೂ ಇದ್ದೇ ಇರುವ ಈ ಕಾಲದಂತೆಯೇ ನಮ್ಮ ನಡುವಿದ್ದು, ಸದಾ ಜರುಗುತ್ತಿದ್ದು, ಅಷ್ಟೇ ನಮ್ಮನ್ನೂ ಜರುಗಿಸುತ್ತಿರುವ ಇನ್ನೊಂದು ಸಂಗತಿಯಿದೆಯಷ್ಟೆ? ಅದನ್ನು ನಿಸ್ಸಂದೇಹವಾಗಿ ದುಡ್ಡೆನ್ನಬಹುದು.

ಹಣವೆನ್ನುವುದು ಮನುಷ್ಯಲೋಕವು ಕಟ್ಟಿಕೊಂಡಿರುವ ಬಲುದೊಡ್ಡ ಆವಿಷ್ಠಾರವೆಂತಲೇ ನನ್ನ ನಂಬಿಕೆ. ನಮ್ಮೆಲ್ಲರ ಹುಲುಜನುಮ ಜರುಗುತ್ತಿರುವುದೇ ಅದರ ಸಲುವಾಗಿ, ನಾವು ಬದುಕಿದ್ದೇವೆಂದು ನಂಬಿರುವುದೇ ಅದರ ಸಲುವಾಗಿ ಬಲುವೊಮ್ಮೆ ನಾವು ಬದುಕುವುದೇ ದುಡ್ಡು ಮಾಡುವ ಸಲುವಾಗಿ, ಅಲ್ಲದೆ, ನಮ್ಮೆಲ್ಲ ಎಚ್ಚರದ ಕಟ್ಟೆಚ್ಚರವನ್ನು ನಾವು ಹೂಡಿರುವುದೇ ಹಣಕಾಸಿನ ಮೇಲಷ್ಟೆ? ನಾವು ಸದಾ ಎಚ್ಚರದಿಂದಿರುವುದೇ ಆ ಕುರಿತಷ್ಟೆ? ನಮಗೆ ನಾವು ಎಚ್ಚರಿಕೆ ಹೇಳಿಕೊಳ್ಳುವುದೇ ಜೇಬು ಕುರಿತಾಗಿಯಷ್ಟೆ? ಗಳಿಸಿದ್ದನ್ನುಳಿಸಿಕೊಳ್ಳುವ ಎಚ್ಚರಕ್ಕೂ ಹೆಚ್ಚು ಎಚ್ಚರವುಂಟೇ ಈ ಲೋಕದಲ್ಲಿ? ವಯಸ್ಸು ಹೆಚ್ಚಿದಂತೆಲ್ಲ ಇಳಿಗಾಲಕ್ಕೆಷ್ಟು ಇಡುಗಂಟೆನ್ನುವ ಎಚ್ಚರವಿಲ್ಲದ ಜನವುಂಟೆ ನಮ್ಮ ನಡುವೆ?

‘ನೋಡಿ ನೋಡಿ… ನಿಮ್ಮೊಳಗೇ ಒಂದು ಎಚ್ಚರವಿದೆ…’ ನಿಮ್ಮ ಕೈಫೋನು ಹೀಗೊಂದು ಕೇಳಿಸುತ್ತದೆ. ಅದನ್ನು ಕಾಯಾ ವಾಚಾ ಮನಸಾ ಪಾಲಿಸುವ ನೀವು ಕೆಲಗಳಿಗೆ ಕಣ್ಣುಮುಚ್ಚಿ ಪದ್ಮಾಸನದಲ್ಲಿ ಚಿನ್ಮುದ್ರೆ ತಾಳಿ ಕೂರುತ್ತೀರಿ. ನೆತ್ತಿಯಲ್ಲಿ ಸಹಸ್ರಾರವಿದೆ. ಆಕಾಶದಲ್ಲೂ ಅಂಥದೇ ಎಚ್ಚರವಿದೆ. ಈವಾಗ, ನಿಮ್ಮ ಎಚ್ಚರವನ್ನು ಆಕಾಶದೊಳಗಿನ ಆ ಎಚ್ಚರದೊಡನೆ ಬೆರೆಸಿ. ನಿಧಾನವಾಗಿ ನಿಮ್ಮ ಎಚ್ಚರವನ್ನು ಎತ್ತರಿಸಿ ಆ ಎಚ್ಚರದೊಡನೆ ಹೊಂದಿಸಿ. ಈ ಹಂತದಲ್ಲಿ ನೀವಿರುವ ಮೈಯಿ ನೀವಲ್ಲ. ನೋಯುವ ಕೈಕಾಲು ನಿಮ್ಮದಲ್ಲ. ಉಳುಕಿದ ಸೊಂಟವೂ ನಿಮ್ಮದಲ್ಲ. ಹವುದು. ನೀವೆಂದರೆ ಎಚ್ಚರ, ಬರೇ ಎಚ್ಚರ. ಆಕಾಶದೊಳಗಿನ ಕಟ್ಟೆಚ್ಚರ…’ ಇದು ಕೇಳಲಿಕ್ಕೆ ಚೆನ್ನನಿಸುತ್ತದೆ. ಕಿವಿಗೆ ಇಂಪೆನಿಸುವಷ್ಟೇ ಮನಸ್ಸಿಗೂ ಮುದ ತರುತ್ತದೆ. ಪದ್ಮಾಸನದಲ್ಲಿರುವ ನೀವು ಪುಳಕಿಸಿಸುತ್ತೀರಿ. ಮೊಗ್ಗರಳುವಂತೆ ಪ್ರಫುಲ್ಲಿಸುತ್ತೀರಿ. ಯೋಚಿಸಿ. ಕಣ್ಣುಮುಚ್ಚಿಕೊಂಡಿದ್ದೇ ತಡ, ಹೊರಬೆಳಕಿನೊಡನೆಯ ನಿಮ್ಮ ವಹಿವಾಟು ತಗ್ಗಿ, ನಿಮ್ಮೊಳಗೆ ನೀವು ಅಷ್ಟಿಷ್ಟು ಊರಿಕೊಂಡಿದ್ದೇನೋ ಹವುದು. ಫೋನುಲಿಗೆ ತಕ್ಕುದಾಗಿ ನಿಮ್ಮೊಳಗಿನ ‘ಸೋಕಾಲ್ಡ್’ ಎಚ್ಚರವೂ ತುಸು ಎಚ್ಚೆತ್ತಿದ್ದು ಹವುದು.

ಅಷ್ಟೇ ಸುಮಾರಾಗಿ ಆಕಾಶದೊಳಗೂ ದೊಡ್ಡ ಎಚ್ಚರವುಂಟೆಂದನಿಸಿ, ನಿಮ್ಮದು ಅದರೊಡನೆ ಅಷ್ಟಿಷ್ಟು ಬೆರೆತಿದ್ದೂ ಹವುದು. ನೀವೂ ಕೆಲಗಳಿಗೆ ಮೈಮರೆತಿದ್ದೂ ಹವುದು. ಇಷ್ಟಿದ್ದೂ, ಕಣ್ಣೆರೆದು ಎಚ್ಚೆತ್ತಿದ್ದೇ ತಡ, ಮತ್ತೆ ಮತ್ತದೇ ದುಡ್ಡುಕಾಸಿನತ್ತ ನಿಮ್ಮ ಎಚ್ಚೆತ್ತ ಎಚ್ಚರವು ಹೊರಳುತ್ತದಲ್ಲ, ಅದಕ್ಕೇನನ್ನುವುದು? ಕ್ರೆಡಿಟ್ ಕಾರ್ಡ್ ಪೇಮೆಂಟಿನ ಗಡುವು ತೀರಿತೆಂದು ಮೆಸೇಜು ಬೀಪಿಸಿದ್ದೇ, ಮನಸ್ಸು ಗೌರವ ಮರ್ತ್ಯಕ್ಕಿಳಿದು ಹೌಹಾರುತ್ತದಲ್ಲ, ಆ ಕುರಿತೇನನ್ನುವುದು? ಹೋಗಲಿ, ಈವರೆಗಿನ ಧ್ಯಾನವು ತೋರಿದೆಚ್ಚರವನ್ನು ಸುಮ್ಮನೆ ಪೋಲುಹೋಗದಂತೆ ಹೇಗೆ ಕಟ್ಟಿಟ್ಟುಕೊಳ್ಳುವುದು? ನಿಮ್ಮ ಓಟೀಪಿ ಪಾಸ್ವರ್ಡುಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬೇಡಿ ಅಂತೆನ್ನುವ ಅನುದಿನದ ಎಚ್ಚರವನ್ನು ಎಲ್ಲಿ ಅಲ್ಲಗಳೆಯುವುದು? ಎಲ್ಲಕ್ಕಿಂತ, ನಿಮ್ಮ ಬ್ಯಾಂಕ್-ಬ್ಯಾಲೆನ್ಸಿನ ಸ್ವಾಸ್ಥ್ಯ ಚೆನ್ನಿಲ್ಲದಲ್ಲಿ ಇಂತೆಲ್ಲ ಧ್ಯಾನವ್ಯಾನ ಸಾಧ್ಯವಾಗುತ್ತದೆಲ್ಲಿ?

ಐವತ್ತರ ತರುವಾಯದ ‘ಗಂಡು’ ಮನಸನ್ನು ಹಣಕಾಸಿನಾಚೆ ಕಾಪಿಡುವುದು ಕಷ್ಟವೇನೆ. ಐವತ್ತರ ಕತೆಯಿರಲಿ, ಸಂಪಾದನೆಗೆ ತೊಡಗಿದಾಗಿನಿಂದಲೂ ಲೋಕದ ಪ್ರತಿಯೊಬ್ಬ ಗಂಡಸು ಎಣಿಸುವುದು ಈ ಎರಡನ್ನೇ. ಒಂದು, ಒಂದೇ ಸಮ ಮೈಚಪ್ಪರಿಸಿ ತೀರುವ ಕಾಲವನ್ನು, ಇನ್ನೊಂದು, ಗಳಿಸಬೇಕಿರುವ ದುಡ್ಡನ್ನು. ಬಲುವೊಮ್ಮೆ ವಯಸ್ಸಿಗೂ ಹೆಚ್ಚಾಗಿ ಎರಡನೆಯದನ್ನು. ಇನ್ನು, ಈ ಎಣಿಕೆಯ ಬಗೆಯಾದರೂ ಎಂಥದ್ದು? ಎಲ್ಲೆಷ್ಟು ಸೈಟು, ಎಲ್ಲೆಲ್ಲಿ ಇನ್ವೆಂಟು, ಇನ್ಸೂರೆನ್ಸೆಷ್ಟು, ಇನ್ನಿಮೆಂಟೆಷ್ಟು… ಎಂದು ಸದಾ ತಲೆಕೆಡಿಸುವಂಥದ್ದು. ಇಷ್ಟಕ್ಕಿಷ್ಟಾದರೆ ಅಷ್ಟಕ್ಕಷ್ಟೆನ್ನುವ ಕಡುದುಷ್ಟ ಕೋಷ್ಟಕ ಹಚ್ಚಿ ಹೆಕ್ಕಿದ ಲೆಕ್ಕಾಚಾರದ್ದು. ಅಲ್ಲಿ ಹೂಡಿದರಿನ್ನೂ ಚೆನ್ನು, ಇಲ್ಲಿಗಿಂತ ಅಲ್ಲಿ ಚೆನ್ನು… ಇನ್ನೆಲ್ಲೋ ಇದ್ದರೆ ಪರ್ಸೆಂಟು ಹೆಚ್ಚು ಗಿಟ್ಟಿತು…

ಎಷ್ಟೇ ಬದಲು ಶೇರು ಲೇಸಾದೀತು, ಚಿನ್ನದ ಬದಲು ಜಮೀನು ಕೊಳ್ಳುವುದೊಳಿತು… ಇಂತೊಂದಿಷ್ಟು ಗಣಿತಗಳದ್ದು. ಕಾರಿನ ಕಂತು ತೀರಿಲ್ಲ, ಸೈಟಿನ ಪೇಪರು ಸರಿಯಿಲ್ಲ, ಮನೆಗಂದಾಯ ಕಟ್ಟಿಲ್ಲ, ಮಗನಿನ್ನೂ ಕೈಯಿಗೆ ಬಂದಿಲ್ಲ… ಆರೋಗ್ಯವಿಮೆ ಸಾಲುತ್ತಿಲ್ಲ… ಇವಿವೇ ದಿನನಿತ್ಯದ ಗೊಡವೆಗಳದ್ದು. ಹೀಗಿರುವಾಗ, ಗಡಿಬಿಡಿಯ ಬದುಕಿನ ಅನುದಿನದ ಅಡಾವುಡಿಗಳ ನಡುವೆ ಒಳಮನಸ್ಸನ್ನು ತನ್ನೊಳಗಿನ ಅಲೌಕಿಕ ಎಚ್ಚರದತ್ತ ಸರಿಸುವುದು ಸರಿಸಾಮಾನ್ಯರಿಗೆ ಸಾಧ್ಯವೇ? ನಡುವಯಸ್ಸು ತೀರುತ್ತಿರುವ ನನ್ನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಮುಂದೇನೆನ್ನುವ ಪ್ರಶ್ನೆಯಿಂದ ವರ್ತಮಾನವೂ ಹೊರಬರುತ್ತಿಲ್ಲ. ಇನ್ನು, ದಂಡಿದಂಡಿ ಕನಸುವ ಮನಸಿಗೆ ತಕ್ಕುದಾಗಿ ಮೈಸಹಕರಿಸದೆನ್ನುವ ಸತ್ಯಕ್ಕೆ ಅರೆಯೆಲ್ಲಿ? ಕಣ್ಣೆದುರೆ ಹಣ್ಣಿದ್ದೂ ಕೈಯೆಟುಕದ್ದೆನ್ನುವ ಸದ್ಯಕ್ಕೆ ಕೊರೆಯೆಲ್ಲಿ? ಬರೆದಿದ್ದು ಸಾಕಷ್ಟಿದೆ, ತಿದ್ದಲಿಕ್ಕೆ ಮನಸ್ಸು ಬರುತ್ತಿಲ್ಲ. ಬರೆಯಲಿಕ್ಕೂ ಬಹಳವಿದೆ, ಎಟುಕಿ ಬರುತ್ತಿಲ್ಲ. ಫಲಿಸದ ಆಸೆಗಳೇನೂ ಕಡಿಮೆಯಿಲ್ಲ.

ಎಷ್ಟು ದುಡಿದರೂ ಸಾಕೆನಿಸುವುದಿಲ್ಲ. ತೂತುಗೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಕಿಸೆಯಲ್ಲಿಟ್ಟರೂ ಪೋಲೇ… ಮಹಾನಗರದಲ್ಲಿ ವೆಚ್ಚಕ್ಕೆಲ್ಲಿ ಬರ ಹೇಳಿ. ಇಷ್ಟಿದ್ದೂ, ಸುಮ್ಮನೆ ಫೋನು ಕ್ಲಿಕ್ಕಿಸಿದರೆ ಸಾಲ ಕೊಡುವವರಿದ್ದಾರೆ. ಅಪ್ಪಿತಪ್ಪಿ ಇಸಕೊಂಡಿರೋ ವಸೂಲಿಗೆ ಯಮಕಿಂಕರರೇ ಬಂದೊದಗುತ್ತಾರೆ. ಈ ವಯಸ್ಸಿನಲ್ಲಿ ಸಲೀಸಾಗಿ ಏನೂ ದಕ್ಕುವುದಿಲ್ಲ. ಬೇಕೆನಿಸಿದಾಗ ಸಹಾಯ ಸಿಕ್ಕುವುದಿಲ್ಲ. ಕಷ್ಟಪಡದೆ ಬಂದು ಪರಿಸ್ಥಿತಿಯಲ್ಲಿ ರಿಟೈರಾಗುವುದು ಸಲ್ಲ. ಇನ್ನೂ ಹತ್ತು ವರ್ಷ ದುಡಿದರೆ ಮಾತ್ರ ಸೈಯಿ…’ ಆಡಿಟರು ವರ್ಷವರ್ಷವೂ ಹೇಳಿದ್ದೇ ಹೇಳುತ್ತಾನೆ. ಕಷ್ಟ ಹೇಳಿಕೊಂಡಷ್ಟೂ ಫೀಸು ಹೆಚ್ಚಿಸುತ್ತಾನೆ. ಗೋಗರೆದಲ್ಲಿ ಫೋನು ಬಡಿಸುತ್ತಾನೆ. ಸಾಲದೆಂಬಂತೆ, ಈ ದೇಶದಲ್ಲಿ ಮುಗ್ಗಟ್ಟಿಗೂ ಜಿಎಸ್ಟಿ ತೆರುವುದಾಗುತ್ತದೆ. ಗೋಳಿನ ಸಂಕಷ್ಟದ ಮೇಲೂ ಸರಿಯಾಗಿ ಹದಿನೆಂಟು ಪರ್ಸೆಂಟು ಕಕ್ಕುವುದಾಗುತ್ತದೆ. ಕೊಡದಿದ್ದಲ್ಲಿ ಅರ್ಥ ದಿಗ್ಧಂಧನವಿದ್ದಿದ್ದೇ. ಆಯಸಿದ್ದಷ್ಟೂ ಬದುಕು ತುಟ್ಟಿ. ಸ್ವಾಸ್ಥ್ಯ ತಪ್ಪಿದಷ್ಟೂ ಖರ್ಚಿನ ಮೇಲೆ ಖರ್ಚು. ನಾನು ಜೋತುಕೊಂಡಿರುವ ಈ ನಾಗರಿಕತೆಯಲ್ಲಿ ಎಲ್ಲಕ್ಕಿಂತ ಸೋವಿ ನನ್ನ ಜೀವವೊಂದೇ. ಕಾಮಾಲೆ, ತುಂಬುವುದು ಇ-ಮೇಲಿನ ಇನ್ಸಾಕು ಮಾತ್ರ…

‘ಈಗಿರುವ ಇಷ್ಟರ ನಡುವೆ, ಸಭ್ಯಸಂಭಾವಿತವಾಗಿ ಬದುಕುವುದೇ ಕಷ್ಟವಾಗಿಬಿಟ್ಟಿದೆ. ಹೋಗಲಿ, ಸಭ್ಯವಾಗಿ ಬದುಕುವುದೆಂದರೇನು? ಶಿಷ್ಟಾಚಾರವೆಂದರೇನು? ನಾಗರಿಕವೆಂಬುದರ ಅರ್ಥವದೇನು? ನನಗೋ, ಈಗಿತ್ತಲಾಗಿ ಓದಿಗೆ ತಕ್ಕ ನೌಕರಿಯೆನ್ನುವ ಸೂತ್ರವೇ ವಿಚಿತ್ರವೆನಿಸುತ್ತದೆ. ಓದು-ಉದ್ಯೋಗದ ನಡುವಿನ ತಾಳೆತಳಕು ರೊಚ್ಚಿಗೆಬ್ಬಿಸುತ್ತದೆ. ಯಾವ ಓದಿಗೇನು ಸ್ಕೋಪೆನ್ನುವ ಪ್ರಶ್ನೆಯಂತೂ ಹಿಂದೆಂದಿಗೂ ಹೆಚ್ಚು ದಿಗಿಲುಂಟಾಗಿಸುತ್ತದೆ. ಇಷ್ಟು ಓದಿಗಷ್ಟು ದುಡ್ಡು, ಅಷ್ಟು ದುಡ್ಡಿಗಿಷ್ಟು ಸೌಖ್ಯ, ಇಷ್ಟು ತೆತ್ತರಷ್ಟು ಕುಶಲ, ಅಷ್ಟು ರೋಗಕ್ಲಿಷ್ಟು ವೆಚ್ಚ.. ಇಂತಿಂತವಷ್ಟೇ ನಾವು ಬದುಕುವ ನಾಗರಿಕತೆಯ ಮಾನದಂಡವಾಗಿರುವುದು ಕಳವಳ ತರುತ್ತದೆ. ಅನ್ನಕ್ಕೂ ಹೆಚ್ಚು ಅಗ್ಗವಾದ ಇಂಟರ್ನೆಟ್ಟು ನಾಡಿನ ನಿಜಸೌಭಿಕ್ಷವನ್ನು ದ್ಯೋತಿಸುತ್ತದೆಯೇ? ಸಮೂಹಮಾಧ್ಯಮದ ತಲೆತಲೆಯೂ ತಲೆಯೆತ್ತಿ ಹೇಳುವ ಅಭಿಪ್ರಾಯಗಳು ಲೋಕಾಭಿಮತದ ನೇರ ಬಿಂಬವೇ? ಅಂಗೈಯಲ್ಲಿನ ಫೋನು ಜಗತ್ತಿನ ಆಗುಹೋಗನ್ನು ನಿರ್ಧರಿಸುತ್ತಿದೆಯೇ? ಅರ್ಥವಾಗುವುದಿಲ್ಲ. ಅಳವಿಗೆ ಸಿಕ್ಕದ ಕಾಲದ ಅನಂತತೆಯಂತೆಯೇ ಅಗಾಧವೆನಿಸಿ ತೋರುವ ದೊಡ್ಡ ದೊಡ್ಡಂಕಿಗಳ ನಮ್ಮ ಸಂಪತ್ತಿನ ನಿಗದಿಯು ಮನುಷ್ಯತ್ವದ ಯಾವ ನಗದನ್ನು ಬಿಚ್ಚಿಟ್ಟಿದೆಯೆಂದು ಹೊಳೆಯುತ್ತಿಲ್ಲ. ಹಣಕಾಸಿನ ಅಸಲಿ ಮೊಬಲಗು ನಾವು ಈ ಭೂಮಿಯನ್ನು ಹಾಳುಹೊಯ್ದಿದ್ದೆಷ್ಟೆಂದು ಸೂಚಿಸುತ್ತದೆಂದು ಯಾರೂ ಮನಗಂಡಂತಿಲ್ಲ. ನಮ್ಮ ಕೈಫೋನುಗಳಲ್ಲಿ ಮಿರುಗುವ ಗಾಜಿನ ತೆರೆಯು ಹೊಳೆಮರಳನ್ನು ಸಂಸ್ಕರಿಸಿದ್ದೆಂದೂ, ಅದರ ಸಾಧಕಬಾಧಕವೇನೆಂದು ಯಾರೂ ಅರಿತಿಲ್ಲ. ತೆಳ್ಳಗಿರುವುದೇ ಸೌಂದರ್ಯವೆಂದು ನಂಬುವ ನಾವು, ನಮ್ಮ ನದಿಗಳು ತೆಳುಮೆಯಲ್ಲಿ ನಮ್ಮ ನಟೀಮಣಿಯರೊಡನೆ ಪೈಪೋಟಿಯಲ್ಲಿರುವುದನ್ನು ಗಮನಿಸಿಲ್ಲ. ಜಗತ್ತಿನ ತಾಪಮಾನವು ಒಂದರೆ ಡಿಗ್ರಿ ಹೆಚ್ಚಿದರೂ ಚೆನ್ನೈ-ಮುಂಬಯಿ-ಕೊತ್ತೆಗಳು ಇಲ್ಲವಾಗುತ್ತವೆಂಬುದು ನಮ್ಮನ್ನು ಎಚ್ಚರಿಸಿಲ್ಲ. ಇಷ್ಟಿದ್ದೂ, ದಿನದಿನಕ್ಕೂ ನಾವು ನಾಗರಿಕರೆಂದು ಬೀಗುತ್ತೇವೆ. ನಾವುಗಳಿರಲಿ, ಇಡೀ ಜಗತ್ತೇ ತನ್ನನ್ನು ತಾನು ನಾಗರಿಕವೆಂದು ಕೊಂಡಾಡುತ್ತದೆ. ನಮ್ಮಂತಿಲ್ಲದ ಮಂದಿಗೆ ನಾವೇ ಅನಾಗರಿಕರೆನ್ನುವ ಬಿರುದು ದಯಪಾಲಿಸಿದ್ದೇವೆ. ಯೋಚಿಸಿ. ಸಭ್ಯರೂ, ಸಂಭಾವಿತರೂ, ನಾಗರಿಕರೂ, ಶಿಷ್ಟಾಚಾರವುಳ್ಳವರೂ ಆದ ನಾವು ನಮ್ಮಂತಿಲ್ಲದವರಿಗೂ ಹೆಚ್ಚು ಭೂಮಿಯನ್ನು ಬಳಸುತ್ತೇವೆ. ನಮ್ಮೊಳಗಿನ ಹಣವಂತರು ಅದೇ ಭೂಮಿಯನ್ನು ಇನ್ನಷ್ಟು ಕಬಳಿಸುತ್ತಾರೆ.

ಇಷ್ಟಿದ್ದೂ, ಈ ಇಪ್ಪತ್ತೆರಡನೇ ಇಸವಿಯು ಮುಗಿಯುವ ಹೊತ್ತಿನಲ್ಲಿ ಇಪ್ಪತ್ತನಾಲ್ಕನೆಯದನ್ನು ಎದುರುಗೊಳ್ಳುವ ಅನಿವಾರ್ಯವಿದ್ದೇ ಇದೆ. ನನ್ನ ಕಣ್ಣೆದುರೇ ತೆರೆದ ಹೊಸ ಸಹಸ್ರಮಾನವು ನಾನಿರುವಾಗಲೇ ಕಾಲು ಶತಮಾನವನ್ನು ಪೂರೈಯಿಸಲಿದೆಯೆಂಬುದು ಕಡಿಮೆಯೇನಲ್ಲ. ಆದರೆ, ಕಳೆದ ಇಪ್ಪತ್ತಮೂರು ವರ್ಷಗಳಲ್ಲಿ ಸುತ್ತಲಿನ ಜಗತ್ತು ಕಂಡಿರುವ ಪರಿವರ್ತನೆಯೇನೂ ಹಿಗ್ಗಿನ ಬುಗ್ಗೆಯಂತಿಲ್ಲ. ವರ್ಷದಿಂದ ವರ್ಷಕ್ಕೂ ನಮ್ಮ ಹಳ್ಳಿಹೊಳಲುಗಳು ಹೆಚ್ಚು ಹೆಚ್ಚು ಹಣಕಾಸು ಕಂಡು ಬೆಳೆದಿರುವ ಪರಿ ಆಶಾದಾಯಕವಾಗಿಲ್ಲ. ಇಷ್ಟರ ಮಧ್ಯೆ, ನಮ್ಮ ನಡುವುಂಟಾಗಿರುವ ಹೊಸ ತಲೆಮಾರಿಗೆ ತಾನು ಹೊತ್ತ ಹೊಣೆಗೆ ತಕ್ಕ ಹೆಗಲುಂಟೆಂದು ನನಗನಿಸುವುದಿಲ್ಲ. ಮೂವತ್ತೈದು ವರ್ಷಗಳಿಂದ ಆರ್ಕಿಟೆಕ್ಟರಿನ ಬೋಧನೆಯಲ್ಲಿರುವ ನನಗೆ ವರ್ಷದಿಂದ ವರ್ಷಕ್ಕೆ ತಗ್ಗುತ್ತಿರುವ ಕಲಿಕೆಗೆ ಬರುವವರ ಬೌದ್ಧಿಕ ಗುಣಮಟ್ಟ ಭವಿಷ್ಯವನ್ನು ಕುರಿತು ಆಸ್ಥೆ ಕುದುರಿಸಿಲ್ಲ. ಇದು ಎಲ್ಲ ಕಾಲಕ್ಕೂ ಹೀಗೇ ಇದ್ದಿತೆನ್ನುವ ಸಮಜಾಯಿಷಿಯಿದೆಯಾದರೂ, ಈಗಿನವರ ಕೈಯಲ್ಲಿರುವ ಹಣಕಾಸು ಮತ್ತು ಅದು ಹುಟ್ಟಿಸುವ ಅನುಕೂಲಗಳು ನಾನು ಹೇಳಿಕೊಳ್ಳುವ ಸಮಾಧಾನವನ್ನೇ ಗುಮಾನಿಯಿಂದ ನೋಡುವಂತೆ ಮಾಡಿವೆ. ಇಂತಹ ಶಿಥಿಲವಾದ ಹೊತ್ತುಗೊತ್ತಿನಲ್ಲಿ ಮತ್ತೊಂದು ಹೊಸವರ್ಷವು ಮೂಡುತ್ತಿದೆ. ಲೋಕದಲ್ಲಿ ಸುಖವಿರಲೆನ್ನುವ ಹಾರೈಕೆಯೊಡನೆ, ಸದರಿ ಸುಖವು ಬರೇ ದುಡ್ಡಿನೆಣೆಯಲ್ಲಿ ಅಳೆಯಲ್ಪಡದಿರಲೆಂದೂ ಆಶಿಸುತ್ತೇನೆ.

(ಲೇಖಕರು ಕನ್ನಡದ ಖ್ಯಾತ ಕಥೆಗಾರ ಮತ್ತು ಹೆಸರಾಂತ ವಾಸ್ತುಶಿಲ್ಪಿ) vastareysmdc.co.in 

andolana

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

2 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago