ಎಡಿಟೋರಿಯಲ್

ನಾಡಹಬ್ಬ ಕೆಲವರ ‘ಉತ್ಸವ’ವಾಗದೆ ಸಾಮಾನ್ಯ ಜನರ ‘ಉತ್ಸಾಹ’ ಹೆಚ್ಚಿಸಲಿ

ಮೈಸೂರು ದಸರಾ.. ಎಷ್ಟೊಂದು ಸುಂದರ.. ಈ ಹಾಡು ಆಲಿಸದ ಕಿವಿಗಳಿಲ್ಲ. ಇದನ್ನು ಕೇಳಿದರೆ ದಸರಾ ಎಂಬ ನಾಲ್ಕು ನೂರು  ವರ್ಷಗಳಿಗೂ ಮಿಗಿಲಾಗಿ ಇತಿಹಾಸವಿರುವ ವಿಶಿಷ್ಟ ಹಬ್ಬದ ಗತವೈಭವವನ್ನು ಸಾರುತ್ತದೆ. ‘ಚಾಮುಂಡಿಬೆಟ್ಟ- ಅರಮನೆ- ಜಂಬೂ ಸವಾರಿ’ಯೊಂದಿಗೆ ಬೆಸೆದುಕೊಂಡಿರುವ ದಸರಾಪರಂಪರೆ ವಿಶ್ವದ ಪ್ರಮುಖ ಉತ್ಸವಗಳ ಸಾಲಿನಲ್ಲಿ ನಿಲ್ಲುತ್ತದೆ. ಕೋವಿಡ್‌ನಿಂದ ೨ ವರ್ಷಗಳ ಕಾಲ ಅರಮನೆ ಆವರಣಕ್ಕೆ ಸೀಮಿತಗೊಂಡು ನಿಸ್ತೇಜಗೊಂಡಿದ್ದ ನಾಡಹಬ್ಬ ದಸರಾ ಮತ್ತೆ ತನ್ನ ಹಿಂದಿನ ವೈಭವಕ್ಕೆ ಮರಳಿದೆ. ಜಂಬೂ ಸವಾರಿಯಿಂದಾಗಿ ವಿಶ್ವದಲ್ಲೇ ಗಮನ ಸೆಳೆದಿರುವ ನಾಡಹಬ್ಬ ದಸರಾಗೆ ಸೋಮವಾರ ಸಡಗರದ ಚಾಲನೆ ದೊರೆತಿದೆ. ಈ ಬಾರಿ ದೇಶದ ಪ್ರಥಮ ಪ್ರಜೆ, ಗಿರಿಜನ ಸಮುದಾಯದವರಾದ ದ್ರೌಪದಿ ಮುರ್ಮು ಅವರು ದಸರಾಗೆ ಚಾಲನೆ ನೀಡಿರುವ ಕಾರಣಕ್ಕೂ ಗಮನ ಸೆಳೆದಿದೆ. ಹಾಗೆ ನೋಡಿದರೆ ಮೈಸೂರಿನಲ್ಲಿ ಒಂದೂವರೆ ತಿಂಗಳ ಮೊದಲೇ ಗಜಪಡೆಯ ಸ್ವಾಗತದೊಂದಿಗೆ ದಸರಾ ಆರಂಭವಾಗುತ್ತದೆ. ಮೈಸೂರಿಗೆ ಆಗಮಿಸಿ ಅರಮನೆ ಅಂಗಳದಲ್ಲಿ ಗಜಸೇವಕರ ಕುಟುಂಬಗಳೊಂದಿಗೆ ಬೀಡುಬಿಡುವ ಆನೆಗಳ ನಿತ್ಯದ ತಾಲೀಮು ನಾಡಹಬಕ್ಕೆ ಕಳೆ ತರುತ್ತದೆ. ಯುವ ದಸರಾದ ಭಾಗವಾದ ಯುವ ಸಂಭ್ರಮದ ಮೂಲಕವೂ ಉಮೇದು ಸೃಷ್ಟಿಸುವ ಪ್ರಯತ್ನವೂ ವಾರದ ಮುಂಚೆಯೇ ನಡೆಯುತ್ತದೆ. ದೀಪಾಲಂಕಾರದ ತಯಾರಿಯೂ ಬೆಳಕಿನ ವೈಭವ ಸೃಷ್ಟಿಸುತ್ತದೆ. ಇಷ್ಟೆಲ್ಲಾ ನಡೆದರೂ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ, ವೇದಿಕೆ ಕಾರ‌್ಯಕ್ರಮಗಳ ಮೂಲಕವೇ ದಶ ದಿನಗಳ ವೈಭವಕ್ಕೆ ಚಾಲನೆ ದೊರೆಯುತ್ತದೆ. ಮೊದಲ ದಿನವೇ ೧೫ಕ್ಕೂ ಹೆಚ್ಚು ದಸರಾ ಚಟುವಟಿಕೆಗಳು ಆರಂಭಗೊಂಡು ಜನರನ್ನು ಸೆಳೆದಿವೆ.

ಹಿಂದೆ  ದಸರಾ  ಎಂದರೆ ಅರಮನೆಗೆ ಸೀಮಿತವಾಗಿತ್ತು. ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ೧೦ ದಿನಗಳು ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ‌್ಯಕ್ರಮಗಳಿಗೆ ತನ್ನದೇ ಆದ ಘನತೆಯಿತ್ತು. ದೇಶದ  ವಿದ್ವಾಂಸರು ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನೀಡುತ್ತಿದ್ದರು. ಅದನ್ನು ಸೀಮಿತ ಮಂದಿ ಆಸ್ವಾದಿಸುತ್ತಿದ್ದರು. ಆನಂತರ ಜಂಬೂ ಸವಾರಿ ಮೆರವಣಿಗೆಯೊಂದಿಗೆ ದಸರಾ ಸಂಪನ್ನಗೊಳ್ಳುತ್ತಿತ್ತು. ಕ್ರೀಡೆ, ಕುಸ್ತಿಗಳನ್ನು ದಸರಾ ವೇಳೆ ಆಯೋಜಿಸಿ ಯುವ ಸಮುದಾಯವನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಕವಿಗೋಷ್ಠಿಯೂ ಆಸ್ಥಾನ ವಿದ್ವಾಂಸರ ದಿನಗಳನ್ನು ನೆನಪಿಸುತ್ತಿತ್ತು. ೨೦೦೦ರ ನಂತರ ದಸರಾ ಸ್ವರೂಪದಲ್ಲಿ ಬದಲಾವಣೆಯಾಗಿದೆ. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ವಿಶ್ವನಾಥ್ ಅವರು ದಸರಾ ಕೆಲವರಿಗೆ ಮಾತ್ರ ಮೀಸಲಾಗದಿರಲಿ. ಯುವಕರು ಸೇರಿದಂತೆ ಎಲ್ಲ ವರ್ಗದವರನ್ನೂ ಸೆಳೆಯೋಣ, ಖಾಸಗಿ ಪ್ರಾಯೋಜಿಕತ್ವದೊಂದಿಗೆ ಸರ್ಕಾರದ ಮೇಲೆ ಅವಲಂಬನೆಯಾಗುವುದನ್ನು ತಪ್ಪಿಸೋಣ ಎಂದು ಯೋಚಿಸಿದರು. ಆಗಲೇ ದಸರಾ ವೈವಿಧ್ಯಯ ಸ್ವರೂಪ ದೊರೆತು ಜನರ ಒಳಗೊಳ್ಳುವಿಕೆಯೂ ಹೆಚ್ಚಾಯಿತು. ಕೆಲ ವರ್ಷಗಳಲ್ಲಿ ದಸರಾ ಕಾರ‌್ಯಕ್ರಮಗಳು ಅಂತಃಸತ್ವವನ್ನೇ ಕಳೆದುಕೊಂಡಂತಹ ಸನ್ನಿವೇಶವೂ ನಿರ್ಮಾಣವಾಯಿತು. ಕವಿಗೋಷ್ಠಿಯಂತೂ ‘ಕವಿಗಳು ಸಾರ್ ಕವಿಗಳು’ ಎಂದು ಹಿರಿಯ ಕವಿ ಸಿದ್ದಲಿಂಗಪಟ್ಟಣಶೆಟ್ಟಿ ಅವರಂತಹವರು ವ್ಯಂಗ್ಯವಾಡುವ ಮಟ್ಟಿಗೆ ಹೋಯಿತು. ಆದರೆ ಕಳೆದ ದಶಕದಲ್ಲಿ ಶೋಭಾ ಕರಂದ್ಲಾಜೆ ಅವರು ಉಸ್ತುವಾರಿ ಸಚಿವರಾಗಿದ್ದಾಗ ಮಹಿಳೆಯರು, ಮಕ್ಕಳು ಸೇರಿ ಇನ್ನಷ್ಟು ವರ್ಗಗಳನ್ನು ಒಳಗೊಳ್ಳುವ ಪ್ರಯತ್ನವಾಯಿತು. ಮೈಸೂರು ಅಭಿವೃದ್ಧಿಗೆ ಇದೇ ನೆಪದಲ್ಲಿ ೧೦೦ ಕೋಟಿ ರೂ. ವಿಶೇಷ ಅನುದಾನವನ್ನೂ ಅವರು ಕೊಡಿಸಿದರು. ಆನಂತರ ದಸರಾ ಜನೋತ್ಸವವಾಗಿ ಬದಲಾಗಿರುವುದು ಸ್ವಾಗತಾರ್ಹ ಬೆಳವಣಿಗೆಯೇ.

ಈ ವರ್ಷ ದಸರಾ ಉತ್ಸಾಹಕ್ಕೆ ಕೊರತೆಯೇನು ಕಾಣುತ್ತಿಲ್ಲ. ರಾಜ್ಯ ಸರ್ಕಾರವೂ ಈ ವರ್ಷದ ದಸರಾವನ್ನು ಸಡಗರದಿಂದಲೇ ಆಚರಿಸುತ್ತಿದೆ. ಈ ಬಾರಿ ಕೈಗಾರಿಕಾ ದಸರಾ ಹೊಸ ಸೇರ್ಪಡೆಯಾಗಿದೆ.

ಈ ಬಾರಿ ವಾಡಿಕೆ ಮಳೆ ಮಿತಿ ಮೀರಿ ಸುರಿದು ರಾಜ್ಯದ ಎಲ್ಲ ಕಡೆಯೂ ಕೆರೆಕಟ್ಟೆಗಳು ತುಂಬಿವೆ. ಬಹಳಷ್ಟು ಕಡೆ ಮಳೆ ಅನಾಹುತವನ್ನು ತಂದೊಡ್ಡಿ ಜನ ತೊಂದರೆಗಳಿಂದ ಇನ್ನೂ ಹೊರಗೆ ಬಂದಿಲ್ಲ. ಮೈಸೂರಿನಲ್ಲಿ ದಸರಾ ಕಾಲಕ್ಕೆ ಕೊನೆ ಕ್ಷಣದಲ್ಲಿ ಗುಂಡಿ ಮುಚ್ಚುವುದು ನಿಂತಿಲ್ಲ. ಮೈಸೂರು ಗುಂಡಿಮಯ ನಗರವಾಗಿ ಮಾರ್ಪಟ್ಟಿದೆ. ಮೊದಲ ದಿನವೇ ಉದ್ಘಾಟನೆ ವೇಳೆ ರಾಷ್ಟ್ರಪತಿಯವರ ಶಿಷ್ಟಾಚಾರ ಪಾಲಿಸುವ ಭರದಲ್ಲಿ ಸ್ಥಳೀಯ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಮೇಯರ್ ಶಿವಕುಮಾರ್ ಅವರಿಗೆ                ಜಿಲ್ಲಾಡಳಿತ ಅವಮಾನ ಮಾಡಿದೆ ಎನ್ನುವ ವಿವಾದವೂ ಜಿಲ್ಲಾಡಳಿತಕ್ಕೆ ಸುತ್ತಿಕೊಂಡಿದೆ.
ಉತ್ಸವಗಳನ್ನು ಆಚರಿಸುವ ಉದ್ದೇಶವೇ ನಮ್ಮ ಸಂಸ್ಕೃತಿಯನ್ನು ಹೊರ ಜಗತ್ತಿಗೆ ಬಿಂಬಿಸಿ ಜನರನ್ನು ಬೆಸೆಯುವುದು. ಜತೆಗೆ ಪ್ರವಾಸೋದ್ಯಮ ಚಟುವಟಿಕೆಗೂ ಉತ್ತೇಜನ ನೀಡಿ ಜನರು ಆರ್ಥಿಕವಾಗಿ ಸಬಲರಾಗಲು ಪ್ರೋತ್ಸಾಹಿಸುವುದು ಪ್ರಮುಖ ಆಶಯ. ಕೋಟಿಗಟ್ಟಲೇ ಹಣ ವೆಚ್ಚ ಮಾಡಿ ದಸರಾ ಕೆಲವರ ಉತ್ಸವ ಆಗದೇ ಆಶಯಕ್ಕೆ ಚ್ಯುತಿ ಬಾರದಂತೆ ಆಚರಿಸುವುದು ಸರ್ಕಾರದ ಹೊಣೆಯೂ ಹೌದು.

andolana

Share
Published by
andolana

Recent Posts

ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ ಸರ್ಕಾರ ರೈತರ…

20 mins ago

ಹಾಸನಕ್ಕೆ ಎಚ್‌ಡಿಡಿ ಕುಟುಂಬ ನೀಡಿದ ಕೊಡುಗೆ ಏನೆಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ

ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ…

54 mins ago

ಫೇಕ್‌ ಎನ್‌ಕೌಂಟರ್‌: ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಎಚ್.ಸಿ.ಮಹದೇವಪ್ಪ ತಿರುಗೇಟು

ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್‌ ಎನ್‌ಕೌಂಟರ್‌ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ…

1 hour ago

ಗ್ರೇಟರ್ ಮೈಸೂರು ಯೋಜನೆಗೆ ನವೀನ ಕಾರ್ಯತಂತ್ರ ಅಗತ್ಯ

50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…

2 hours ago

ಸಿ.ಟಿ.ರವಿ ಪ್ರಕರಣ; ಬಿಜೆಪಿಗೆ ಮಹತ್ವದ ಸಲಹೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…

2 hours ago

ಕೈಗಾರಿಕಾ ವಲಯದ ಪ್ರಸ್ತಾವನೆಗಳಿಗೆ ಸಿಎಂ ಅನುಮೋದನೆ

ಬೆಂಗಳೂರು:  ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…

2 hours ago