ವಸು ವತ್ಸಲೆ, ಕವಯಿತ್ರಿ, ಬೆಂಗಳೂರು.
ಜಾನಪದ ಲೋಕದ ರಮ್ಯಾದ್ಭುತ ಕಲೆ ನಾಟಕ. ಅನಾದಿ ಕಾಲದಿಂದಲೂ ರಂಗು ರಮ್ಯತೆಯಿಂದ ಶ್ರೀಮಂತವಾಗಿ, ಪ್ರತಿಭಾ ಸಂಪನ್ನತೆಯಿಂದ ಜನಮನ ತಲುಪಿ ಹೊಸ ಆಯಾಮವನ್ನೇ ನಟನಾ ಕ್ಷೇತ್ರ ಪಡೆದುಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಒಬ್ಬ ರಂಗಕರ್ಮಿಯ ಜೀವನ, ಸಾಧನೆಯನ್ನು ಒಳಗೊಂಡಂತೆ, ‘ರಂಗ ತಪಸ್ವಿ ನಾರಾಯಣ ರೈ’ ಎಂಬ ಕೃತಿಯನ್ನು ಡಾ.ಮಾದುಪ್ರಸಾದ್ ಹುಣಸೂರು ಸಂಪಾದಕರಾಗಿ ಹೊರ ತಂದಿರುವುದು ನಾಟಕಕಾರನ ಸಾರ್ಥಕ ಬದುಕಿಗೆ ಕನ್ನಡಿ ಹಿಡಿದಂತಾಗಿದೆ.
ರಂಗಕರ್ಮಿ ನಾರಾಯಣ ರೈಯವರಿಗೆ ಈಗ 82ರ ಹರೆಯ. ಈ ಹೊತ್ತಿನಲ್ಲಿ ಅವರ ಒಡನಾಡಿಗಳೆಲ್ಲಾ ಅವರ ಕಲಾ ತಪಸ್ಸಿನ ಬಗ್ಗೆ ತಮ್ಮ ಲೇಖನಗಳಲ್ಲಿ ಸುದೀರ್ಘವಾಗಿ ಬರೆಯುತ್ತಾ, ಪ್ರೀತಿಯನ್ನು ಹಂಚಿಕೊಂಡಿರುವುದನ್ನು ಈ ಕೃತಿ ದೃಢಪಡಿಸುತ್ತದೆ.
1940ರಲ್ಲಿ ಜನಿಸಿದ ರೈ ಅವರು, ಕರಾವಳಿಯ ಪ್ರಕೃತಿಯ ಒಡನಾಟದಲ್ಲಿ ಬೆಳೆದವರು. ಬದುಕಿನ ಅಭದ್ರತೆಯ ನಡುವೆ ಹಸಿವಿನ ಸಂಕಟವನ್ನು ಅನುಭವಿಸಿ, ಮಂಗಳೂರಿನಿಂದ ಹುಣಸೂರಿಗೆ ನೆಲೆ ಅರಸಿ ಬಂದ ನಾರಾಯಣ ರೈ, ಹುಣಸೂರಿನ ಹೊಗೆಸೊಪ್ಪು ಸಂಶೋಧನಾ ಕೇಂದ್ರದಲ್ಲಿ ಸಣ್ಣ ಸಂಬಳದ ಕೆಲಸಕ್ಕೆ ಸೇರಿದವರು. ಡಾಕ್ಟರ್ ಇಲಿಯಾಸ್‌ರಂತಹ ಮಾನವಂತ ಮತ್ತು ಪ್ರಜ್ಞಾವಂತ ವಿಜ್ಞಾನಿಗಳೊಡನೆ ಸೇರಿ ಅನೇಕ ಪ್ರಯೋಗಗಳನ್ನು ನಡೆಸಿ ತಂಬಾಕು ಸಂಶೋಧನೆಯಲ್ಲಿ ಹೊಸ ವಿಕ್ರಮವನ್ನು ಸಾಽಸಿದವರು.
ಭೂತಕೋಲ, ದೈವಾರಾಧನೆ, ಬಯಲಾಟ ಯಕ್ಷಗಾನದಂತಹ ದೇಸಿ ಕಲೆಯನ್ನು ಹುಣಸೂರಿನವರೆಗೂ ತಂದು ನಮ್ಮದೆಂಬ ಅಭಿಮಾನದಿಂದ ಬೆಳೆಸಿದವರು. ನಂತರ ಅವರನ್ನು ಸೆಳೆದುಕೊಂಡಿದ್ದು ನಾಟಕ ರಂಗ. ‘ಮಿತ್ರ ವೃಂದ’ ಎಂಬ ತಂಡವನ್ನು ಕಟ್ಟಿಕೊಂಡು ಹಲವು ನಾಟಕಗಳನ್ನು ತಮ್ಮ ಮಿತ್ರರೊಂದಿಗೆ ನಟಿಸಿದರು. ಮುನ್ನುಡಿಯಲ್ಲಿ ಮೋದೂರು ಮಹೇಶಾರಾಧ್ಯರು ‘ರೈ’ಗಳ ವ್ಯಕಿತ್ವ ಮತ್ತು ಅವರ ಜೀವನ ಎಲ್ಲವನ್ನೂ ಸ್ಛುಟವಾಗಿ ವಿವರಿಸುತ್ತಾ “ಆ ವೇಳೆಗಾಗಲೇ ರೈಗಳು ನಾಟಕಗಳಲ್ಲಿ ಅಭಿನಯಿಸುತ್ತ ನನ್ನಂತಹ ನೂರಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಅವರು ಝಂಡಾ ಮೈದಾನದಲ್ಲಿ ಅಭಿನಯಿಸುತ್ತಿದ್ದ ದಾಕ್ಷಿಣ್ಯ, ಮಲಯಾಳಿ ಮಾಂತ್ರಿಕ, ಬಚ್ಚೆ ಪೈದೆ ಹೋಗ, ಟಿಪ್ಪು ಸುಲ್ತಾನ್, ಕರ್ನಾಟಕ ರಮಾರಮಣ ಮುಂತಾದ ನಾಟಕಗಳು ಹುಣಸೂರಿನ ಸಹೋದರರ ಎದೆಯಲ್ಲಿ ಅವರ ಹೆಸರನ್ನು ಚಿರವಾಗಿಸಿದ್ದವು’ ಎಂದು ಅಭಿಮಾನ ಪೂರ್ವಕವಾಗಿ ಬರೆಯುತ್ತಾರೆ.
ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿಯವರ ‘ಸರ್ಕಾರ ಮರೆಯಬಾರದ ಜನಾನುರಾಗಿ ಕಲಾವಿದ ಶ್ರೀ ನಾರಾಯಣ ರೈ’ ಎಂಬ ಲೇಖನ ಮನೋಜ್ಞವಾಗಿದೆ. ಇಲ್ಲಿ ಒಂದು ಘಟನೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ. ‘ನಾಗರಾಜ ವೈಭವ ನಾಟ್ಯ ಸಂಘ’ ಎಂಬ ಕಂಪೆನಿ ನಾಟಕದವರು ಹುಣಸೂರಿನಲ್ಲಿ ಟೆಂಟು ಹಾಕಿ ಕಲೆಕ್ಷನ್ ಇಲ್ಲದೆ ಊಟಕ್ಕೂ ತೊಂದರೆಯಾದಾಗ ನಾರಾಯಣ ರೈಗಳು ನೊಂದುಕೊಂಡು ಎಲ್ಲರನ್ನೂ ಒಪ್ಪಿಸಿ ಟಿಪ್ಪು ಸುಲ್ತಾನ್ ನಾಟಕವನ್ನಾಡಿಸಿ ಒಂದಿಷ್ಟು ಹಣ ಸಂಗ್ರಹಿಸಿ ಅವರನ್ನು ಸಂತೈಸಿದ್ದು ಮಾಸದ ನೆನಪು’ ಎಂದು ಹೆಮ್ಮೆಪಟ್ಟ ಹವ್ಯಾಸಿ ಕಲಾವಿದ ಜೈರಾಮ್ ಅವರ ಮಾತುಗಳನ್ನು ಸ್ಟ್ಯಾನ್ಲಿ ನೆನೆಯುತ್ತಾರೆ. ಇದಲ್ಲದೆ, 1980ರ ದಶಕದಲ್ಲಿ ಹೈಸ್ಕೂಲು, ಪಿಯುಸಿ, ಡಿಗ್ರಿ ಕಾಲೇಜು ಎಲ್ಲಾ ಮುನ್ಸಿಪಾಲಿಟಿ ಕಟ್ಟಡದಲ್ಲಿ ನಡೆಯುತ್ತಿದ್ದವು. ಪ್ರತ್ಯೇಕ ವ್ಯವಸ್ಥೆಗಾಗಿ ಹೋರಾಡುತ್ತ, ಸ್ಥಳೀಯ ಆಡಳಿತ ಜಮೀನು ನೀಡಲು ವಿಫಲವಾದಾಗ ಸಹಾಯಾರ್ಥ ನಾಟಕ ಪ್ರದರ್ಶನಗಳನ್ನು ನೀಡಿ ಹಣ ಸಂಗ್ರಹಿಸಿ, ಪಟ್ಟಣದ ಹೃದಯ ಭಾಗದಲ್ಲಿ ಜಮೀನು ಖರೀದಿಸಿ ದಾನ ಮಾಡಿದುದನ್ನು ಗೌರವಪೂರ್ವಕವಾಗಿ ನೆನೆಯುತ್ತಾರೆ.
‘ನಾರಾಯಣ ರೈ: ಕಲಾರಾಧನೆಯ ಸಾರ್ಥಕ ಜೀವ’ ಎಂದು ಆಪ್ತ ಶೀರ್ಷಿಕೆ ಕೊಟ್ಟು ಮಹದೇವ ಕಲ್ಕುಣಿಕೆಯವರು ಅವರ ನಾಟಕಗಳ ಪಾತ್ರ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಮೆಲುಕು ಹಾಕುತ್ತಾರೆ. ರೈಗಳು ಅಭಿನಯಿಸಿರುವ ಕುರುಕ್ಷೇತ್ರ ನಾಟಕದ ಅಶ್ವಾತ್ಥಾಮನ ಪಾತ್ರ, ಟಿಪ್ಪು ಸುಲ್ತಾನ್ ನಾಟಕದಲ್ಲಿನ ಮೀರ್‌ಸಾದಕ್ ಪಾತ್ರ, ಮಹಾಭಾರತದ ಶಕುನಿಯ ಪಾತ್ರದಲ್ಲಿ ದುರ್ಯೋಧನನೆಡಗಿನ ತನ್ನ ಆಂತರಿಕ ಆಕ್ರೋಶ ಭಾವವನ್ನು ಮುಖದ ಮೇಲಿನ ಪ್ರಖರ ವ್ಯಂಗ್ಯ, ಸೇಡಿನ ಕುಲುಮೆಯಲ್ಲಿ ಕೊತ ಕೊತ ಕುದಿಯುವ ಅಭಿನಯದ ಅನನ್ಯತೆ ಅವರಿಗೆ ಸಿದ್ಧಿಸಿದ ಬಗ್ಗೆ ಅಭಿಮಾನದಿಂದ ನುಡಿದಿದ್ದಾರೆ.
‘ಹೆಣ್ಣು ಸಂಸಾರದ ಕಣ್ಣು’ ಎಂಬ ಕಿರುಚಿತ್ರದಲ್ಲೂ ನಟಿಸಿರುವ ನಾರಾಯಣ ರೈ, ಅವರ ಸಹಜ ನಟನೆಯ ಬಗ್ಗೆ ಈಗಲೂ ಅವರ ಒಡನಾಡಿಗಳು ಅಭಿಮಾನ ಅಕ್ಕರೆಯಿಂದ ಸ್ಮರಿಸಿಕೊಳ್ಳುತ್ತಾರೆ. ಟಿ.ಲೋಕೇಶ್ ಅವರು ‘ನಾರಾಯಣ ರೈ ಅವರ ಜೀವನ ನಮಗೆ ಆದರ್ಶ’ ಎಂಬ ತಮ್ಮ ಲೇಖನದಲ್ಲಿ ‘ಜನಸಂಖ್ಯಾ ಸ್ಛೋಟದ ಬಗ್ಗೆ ಅರಿವು ಮೂಡಿಸುವ ದಾಕ್ಷಿಣ್ಯ ನಾಟಕ ಮಾಡಿದ್ದು, ಆ ನಾಟಕ ೨೦೦ಕ್ಕೂ ಹೆಚ್ಚು ಪ್ರದರ್ಶನ ಕಂಡು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಯಶಸ್ವಿಯಾಗಿತ್ತು’ ಎಂದು ಸ್ಮರಿಸಿಕೊಳ್ಳುತ್ತಾರೆ.
ಎಲ್ಲಕ್ಕಿಂತ ಮಿಗಿಲಾಗಿ, ಬೆನ್ನುಡಿಯಲ್ಲಿ ನಾರಾಯಣ ರೈ ಅವರ ಮಗ ನವೀನ್ ರೈ ಅಪಾರ ಅಭಿಮಾನ ದಿಂದ,ಹೆಮ್ಮೆಯಿಂದ ಪದಪದಗಳಲ್ಲೂ ತಂದೆಯ ಗುಣಗಾನ ಮಾಡುತ್ತಾರೆ. ತಂದೆಯಂತೆ ಆದರ್ಶ ಬೋಽಸದೆ ಬಾಳಿ ತೋರಿಸುತ್ತೇವೆ… ಅವರ ಹೆಸರನ್ನುಳಿಸುತ್ತೇವೆಂದು ಸೂಚ್ಯವಾಗಿ ಹೇಳಿದ್ದಾರೆ. ಇವರಲ್ಲದೆ, ಹಿರಿಯ ರಂಗಭೂಮಿ ಕಲಾವಿದ ಜಯರಾಂ, ಆನಂದ್, ಚಿಲ್ಕುಂದ ಮಹೇಶ್, ಜಿ.ಎಲ್.ಉದಯ್, ಲೋಕೇಶ್ ಬಾಬು, ನಿಂಗರಾಜ ಮಲ್ಲಾಡಿ ಮತ್ತಿತರರು ಕೂಡ ನಾರಾಯಣ ರೈ ಅವರನ್ನು ಕುರಿತು ಲೇಖನ ಬರೆದಿದ್ದಾರೆ.
ಒಟ್ಟಾರೆ, ಸಂಪಾದಕರು ಒಂದು ಸಾರ್ಥಕ ಕೃತಿಯನ್ನು ಸಾರ್ಥಕ ವ್ಯಕ್ತಿತ್ವಕ್ಕಾಗಿ ಶ್ರಮಿಸಿ ಅಮೂಲ್ಯ ಲೇಖನಗಳನ್ನು ಸಂಗ್ರಹಿಸಿರುವುದು ಪ್ರಶಂಸನೀಯ. ಹಾಗೇ ತಂದೆಯ ಆಸೆಯಂತೆ ಮಗ ನವೀನ್ ರೈ ಶಾಲೆಯ ಅಂಗಳದಲ್ಲಿ ಅದ್ಭುತವಾದ ರಂಗ ಮಂದಿರ ಕಟ್ಟಿಸಿ ಗೌರವ ಸಲ್ಲಿಸಿರು ವುದನ್ನು ಅಭಿನಂದಿಸಲೇಬೇಕು.
ಮಂಡ್ಯ: ಸಕ್ಕರೆ ನಗರಿಯಲ್ಲಿ ಶುಕ್ರವಾರ ಆಕ್ಷರಶಃ ದೊಡ್ಡ ಜಾತ್ರೆಯ ಸೊಬಗು ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ; ಅದು…
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…