ಎಡಿಟೋರಿಯಲ್

ಭೂಮಿಗೆ ಮೊದಲ ಬಾರಿಗೆ ನೀರನ್ನು ಹೊತ್ತು ತಂದದ್ದೇ ಉಲ್ಕೆಗಳು!

ಕಾರ್ತಿಕ್ ಕೃಷ್ಣ

ಬೇಂದ್ರೆಯವರ ‘ಗಂಗಾವತರಣ’ ಕವನದ ಸಾಲುಗಳು ನನ್ನನ್ನು ಆಗಾಗ ಕಾಡುತ್ತಿರುತ್ತವೆ. ‘ದಿಗ್ದಿಗಂತದಲಿ ಹಣಿಸಿ ಬಾ….ಚರಾಚರಗಳಿಗೆ ಉಣಿಸಿ ಬಾ…ಇಳಿದು ಬಾ ತಾಯಿ ಇಳಿದು ಬಾ..’ ಎಂದು ಅವರು ಗಂಗೆಯನ್ನು ಭುವಿಗೆ ಇಳಿಸುವ ಪರಿ ನಿಜಕ್ಕೂ ರೋಮಾಂಚನಕಾರಿ! ಹಾಗೆಯೇ ಭಗೀರಥ ಪ್ರಯತ್ನದಿಂದ, ಮೇಲಿನಿಂದ ವೇಗವಾಗಿ ಇಳಿದುಬಂದ ಗಂಗೆಯನ್ನು ಮಹಾದೇವ ತನ್ನ ಜಟೆಯಲ್ಲಿ ಹಿಡಿದಿಟ್ಟ ಕಥೆ ನಿಮಗೆ ಗೊತ್ತಿರಬಹುದು. ಅಂತೂ ಗಂಗಾ ನದಿ ಇಳಿದುಬಂದದ್ದು ಮೇಲಿನಿಂದ ಎಂಬುದು ಪ್ರತೀತಿ. ನಾನಿಲ್ಲಿ ಪುರಾಣ ಕಥೆಯನ್ನು ಉಲ್ಲೇಖಿಸಿ, ಗಂಗೆ ಇಳಿದು ಬಂದದ್ದು ಮೇಲಿನಿಂದ ಎಂದು ಹೇಳಲು ಕಾರಣವಿದೆ. ಅದೇನೆಂದರೆ, ಭೂಮಿಯ ಮೇಲೆ ನೀರು ಹೇಗೆ ಸೃಷ್ಟಿಯಾಯಿತು ಎಂಬುದರ ಬಗೆಗೊಂದು ನಿಖರವಾದ ಮಾಹಿತಿ ವಿಜ್ಞಾನಿಗಳಿಗೆ ಸಿಕ್ಕಿ, ವರುಷಗಳಿಂದ ಇದ್ದ ಊಹೆಯನ್ನು ಸಾಬೀತುಪಡಿಸಿದ್ದಾರೆ. ಹಾಗಾದರೆ, ಭೂಮಿಗೆ ನೀರು ಹರಿದು ಬಂದದ್ದು ಎಲ್ಲಿಂದ? ಮೇಲಿನಿಂದ ! ಹೇಗೆ ಗೊತ್ತೇ? ವಿಜ್ಞಾನದ ಒಂದು ಪ್ರಸ್ತಾಪದಲ್ಲಿ ಭುವಿಯ ಮೇಲಿನ ನೀರಿನ ಹುಟ್ಟಿಗೆ ಕಾರಣ ಕೋಟ್ಯಾಂತರ ವರುಷಗಳ ಹಿಂದೆ ಅಪ್ಪಳಿಸಿದ ʼಉಲ್ಕಾಶಿಲೆʼ ಯಾನೆ  Meteorite.

ಭೂಮಿ ಶೇಖಡಾ ೭೧ರಷ್ಟು ನೀರಿನಿಂದ ಆವರಿಸಿದೆ. ಅದರಲ್ಲಿ ಶೇಖಡಾ ೯೧.೬೫ ನೀರು ಇರುವುದು ಸಮುದ್ರದಲ್ಲಿ. ಅಷ್ಟೊಂದು ಅಗಾಧವಾಗಿ ವ್ಯಾಪಿಸಿರುವ ನೀರು ಹುಟ್ಟಿದ್ದಾದರೂ ಎಲ್ಲಿಂದ? ವಿಜ್ಞಾನಿಗಳ ಪ್ರಕಾರ ಭೂಮಿಯ ಹುಟ್ಟಿನ ಸಮಯದಲ್ಲಿ ನೀರಿನ ಅಂಶ ಇಲ್ಲಿರಲಿಲ್ಲ. ಕಾಲ ಕ್ರಮೇಣ ಭೂಮಿಗೆ ಅಪ್ಪಳಿಸಿದ ಉಲ್ಕಾಶಿಲೆಗಳು ನೀರಿನ ಅಂಶವನ್ನು ಬಾಹ್ಯಾಕಾಶದಿಂದ ಹೊತ್ತು ತಂದವು ಎಂಬುದು ವಿಜ್ಞಾನ ವಲಯದಲ್ಲಿ ಇರುವಂತ ಒಂದು ವಾದ. ಅದನ್ನು ನಿರೂಪಿಸಲು ಹಲವಾರು ಪ್ರಯತ್ನಗಳು ಕೂಡ ನಡೆದಿವೆ. ಆ ವಾದವನ್ನು ಸಮರ್ಥವಾಗಿ ನಿರೂಪಿಸುವಂತ ಅಧ್ಯಯನ ಕಳೆದೊಂದು ವರುಷದಿಂದ ನಡೆದು, ಕರಾರುವಾಕ್ ಸಾಕ್ಷಿಗಳು ಸಿಕ್ಕಿ, ಭೂಮಿಗೆ ನೀರನ್ನು ಕರೆತಂದದ್ದು ಉಲ್ಕಾಶಿಲೆಗಳೇ ಎಂದು ಸಾಬೀತಾಗಿದೆ. ಅದರ ಬಗ್ಗೆ ಮುಂಚೆ ಒಂದು ಸೋಜಿಗದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ. ಇಡೀ ಬ್ರಹ್ಮಾಂಡದಲ್ಲಿ ಇರುವ ನೀರಿನ ಪರಿಮಾಣವನ್ನು ನೀವು ಈ ಅಂಕಿಅಂಶದಿಂದ ಊಹಿಸಬಹುದು.

ಖಗೋಳ ಶಾಸ್ತ್ರಜ್ಞರು, ಭೂಮಿಯಿಂದ ೧೨೦೦ ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿ ಬೃಹತ್ ಗಾತ್ರದ ನೀರಿನ ಜಲಾಶಯವೊಂದನ್ನು ಕಂಡುಹಿಡಿದ್ದಾರಂತೆ. ಆ ಜಲಾಶಯದಲ್ಲಿ ಭೂಮಿಯ ಮೇಲಿನ ನೀರಿಗಿಂತ ೧೪೦ ಟ್ರಿಲಿಯನ್ ಪಟ್ಟು ಹೆಚ್ಚು ನೀರಿದೆ ಎಂಬುದು ನಾಸಾದ ಅಭಿಪ್ರಾಯ! ಬ್ರಹ್ಮಾಂಡದ ಆಳ ಹಾಗೂ ಅಗಲ ಯಾರಿಗೂ ತಿಳಿದಿಲ್ಲ. ಇಂತಹ ನೀರಿನ ಮೂಲಗಳು ಅದೆಷ್ಟಿದೆಯೋ!

೨೦೨೧ರ ಫೆಬ್ರವರಿ ತಿಂಗಳಿನಲ್ಲಿ ಇಂಗ್ಲೆಂಡ್ ದೇಶದ ವಿಂಚ್ಕೊಂಬ್ ಪಟ್ಟಣಕ್ಕೆ ಅಸಾಧಾರಣವಾದುದೊಂದು ಉಲ್ಕಾಶಿಲೆ ಅಪ್ಪಳಿಸಿತ್ತು. ಸುಮಾರು ೪೬೦ ಕೋಟಿ ವರುಷ ಹಳೆಯ ಉಲ್ಕೆಯದು! ಅದರ ಮೇಲೆ ಅಧ್ಯಯನ ನಡೆಸಿದ ಸಂಶೋಧಕರಿಗೆ ಸಿಕ್ಕಿದ್ದು ಏನು ಗೊತ್ತೇ? ಭೂಮಿಯ ಮೇಲಿನ ನೀರಿನಂತೆ ಸಂಯೋಜನೆಯುಳ್ಳ ನೀರಿನ ಅಂಶ! ನಮ್ಮ ಗ್ರಹವು ‘ಜೀವ ಸೆಲೆ’ಯನ್ನು ಹೇಗೆ ಪಡೆದುಕೊಂಡಿತು ಎಂಬುದಕ್ಕೆ ಈ ಸಂಶೋಧನೆ ಸಂಭವನೀಯ ವಿವರಣೆಯನ್ನು ನೀಡಿ, ನೀರಿನ ಉಗಮದ ವಾದಕ್ಕೆ ತೆರೆಯೆಳೆಯಿತು.

ನಿಮಗೆ ತಿಳಿದಿರಲಿ, ನಮ್ಮ ಸೌರ ವ್ಯೆಹ ಇನ್ನೂ ಸೃಷ್ಟಿಯ ಹಂತದಲ್ಲಿದ್ದಾಗ ಎಲ್ಲಾ ಗ್ರಹಗಳು ಸೂರ್ಯನಿಗೆ ತೀರಾ ಹತ್ತಿರದಲ್ಲಿದ್ದು, ಯಾವ ಬಗೆಯ ಜೀವರಾಶಿಯೂ ಅಸ್ತಿತ್ವದಲ್ಲಿರಲಿಲ್ಲ. ಹಾಗಾದರೆ ಭೂಮಿಯ ಮೇಲೆ ಹಾಗೂ ಬೇರೆಲ್ಲಾ ಜೀವ ರಾಶಿ ಉಗಮಗೊಂಡಿದ್ದು ಹೇಗೆ? ಕಾಲ ಕ್ರಮೇಣ, ಸೂರ್ಯ ಹಾಗು ಭೂಮಿಯ ಅಂತರ ಹೆಚ್ಚಿ, ಭೂಮಿಯು ತಣ್ಣಗಾದಾಗ ಮತ್ತು ಹೊರಗಿನ ಸೌರವ್ಯೆಹದಿಂದ ಮಂಜುಗಡ್ಡೆಯ ಕ್ಷುದ್ರಗ್ರಹಗಳು ಹೆಪ್ಪುಗಟ್ಟಿದ ನೀರನ್ನು ಹೊತ್ತು ಭೂಮಿಗೆ ಅಪ್ಪಳಿಸಿದಾಗ ಜೀವ ವೈವಿಧ್ಯದ ಉಗಮ ಆಯಿತು ಎನ್ನುತ್ತಾರೆ ಖಗೋಳಶಾಸ್ತ್ರಜ್ಞರು. ಈಗ, ವಿಂಚ್ಕಾಂಬ್ ಉಲ್ಕಾಶಿಲೆಯ ಹೊಸ ವಿಶ್ಲೇಷಣೆಯು ಈ ಸಿದ್ಧಾಂತಕ್ಕೆ ಮತ್ತಷ್ಟು ಪುಷ್ಟಿನೀಡುತ್ತದೆ.

ಇದರ ಕುರಿತು ಸೈನ್ಸ್ ಅಡ್ವಾನ್ಸಸ್ ಜರ್ನಲ್ ನಲ್ಲಿ ಪ್ರಕಟಗೊಂಡ ವಿಶ್ಲೇಷಣೆಯ ಸಹ ಲೇಖಕರಾದ ಲ್ಯೂಕ್ ಡಾಲಿ ಅವರ ಪ್ರಕಾರ, ಈ ಅನ್ವೇಷಣೆಯು ಬರೀ ನೀರಿನ ಉಗಮದ ಬಗ್ಗೆ ಮಾಹಿತಿಯನ್ನು ನೀಡುವುದಲ್ಲದೆ, ಭೂಮಿಯ ಮೇಲೆ ಜೀವ ವೈವಿಧ್ಯದ ಹುಟ್ಟಿನ ಬಗ್ಗೆಯೂ ಇಲ್ಲಿಯ ವರೆಗೆ ತಿಳಿಯದ ರಹಸ್ಯಗಳನ್ನು ಬಹಿರಂಗ ಪಡಿಸಲಿದೆಯಂತೆ! ಇಂಗ್ಲೆಂಡ್ ನಲ್ಲಿ ಅಪ್ಪಳಿಸಿದ ಆ ಉಲ್ಕೆಯ ಬಗ್ಗೆ ಹೇಳುವುದಾದರೆ, ಅದೊಂದು ‘ಕಾರ್ಬೊನೇಸಿಯಸ್ ಕಾಂಡ್ರೈಟ್’ ಎಂದು ಕರೆಯಲ್ಪಡುವ ಅಪರೂಪದ ಕಾರ್ಬನ್-ಸಮೃದ್ಧ ಉಲ್ಕೆ.

ಅದು ಅಪ್ಪಳಿಸಿದ ಕೆಲವೇ ಘಂಟೆಗಳಲ್ಲಿ ಅದನ್ನು ಸಂಗ್ರಹಿಸಿದ ಕಾರಣ ಅದೊಂದು ಕಲುಷಿತಗೊಳ್ಳದ ಶುದ್ಧ ಉಲ್ಕೆಯೆಂದು ವಿಶ್ಲೇಷಣೆಯ ಮುಖ್ಯ ಲೇಖಕರಾದ ಆಶ್ಲೇ ಕಿಂಗ್ ಬಣ್ಣಿಸುತ್ತಾರೆ. ಹೀಗೆ ಸಿಕ್ಕಿದ ಉಲ್ಕೆಯು, ಭೂಮಿಯ ವಾತಾವರಣದ ಹೊಡೆತಕ್ಕೆ ಸಿಕ್ಕದೆ ತನ್ನ ಮೂಲ ರೂಪದಲ್ಲಿರುವುದರಿಂದ ಅದನ್ನು  Prestine rock’ ಎನ್ನುವುದುಂಟು. ಮೂಲ ರೂಪದಲ್ಲಿಯೇ ಉಲ್ಕೆಯೊಂದು ಸಿಗುವುದು ತೀರಾ ಅಪರೂಪ. ಉಲ್ಕೆಯೊಂದು ಅಪ್ಪಳಿಸಿದ ಕೂಡಲೇ ಸಂಶೋಧಕರೊಡನೆ ಜನ ಸಾಮಾನ್ಯರೂ ಅದರ ತುಣುಕುಗಳನ್ನು ಸಂಗ್ರಹಿಸಲು ದೌಡಾಯಿಸುತ್ತಾರೆ. ವಿಂಚ್ಕೊಂಬ್ ನಲ್ಲಿ ಹೀಗೆ ಸಿಕ್ಕಿದ ೧.೭ ಗ್ರಾಂ ತೂಕದ ಉಲ್ಕೆಯ ತುಂಡೊಂದು ಸುಮಾರು ೧೦ ಲಕ್ಷ ರೂಪಾಯಿಗೆ ಹರಾಜಾಗಿತ್ತಂತೆ!

ಉಲ್ಕೆಯ ಸಂಯೋಜನೆಯನ್ನು ಪರೀಕ್ಷಿಸಲು ಸಂಶೋಧನಾ ತಂಡವು ಅದನ್ನು ಹಲವಾರು ಪರೀಕ್ಷೆಗೆ ಒಳಪಡಿಸಿದ್ದರು.

ಅತಿಯಾದ ಶಾಖದಲ್ಲಿರಿಸಿ ಕ್ಷ ಕಿರಣಗಳನ್ನು ಹರಿಸಿ, ಲೇಸರ್‌ನಲ್ಲಿ ತೋಯಿಸಿ ನೋಡಿದಾಗ ಅದರಲ್ಲಿ ಶೇಕಡಾ ೧೧ ರಷ್ಟು ನೀರಿನ ಅಂಶವಿರುವುದು ತಿಳಿದುಬಂತು. ಹಾಗೆಯೆ ಅದು ಭೂಮಿಗೆ ಅಪ್ಪಳಿಸುವ ಮೊದಲು ಗುರು ಗ್ರಹದ ಆಸುಪಾಸಿನಲ್ಲಿ ಸುತ್ತುತ್ತಿತ್ತು ಎಂಬುದೂ ಕೂಡ ಮನವರಿಕೆಯಾಯಿತು. ಉಲ್ಕಾಶಿಲೆಯಲ್ಲಿ ನೀರು ಕಂಡುಬಂದದ್ದು, ಸಾಮಾನ್ಯವಾಗಿ ಕಂಡುಬರುವ ಹೈಡ್ರೋಜನ್ ಹಾಗೂ ಡ್ಯೂಟೇರಿಯಮ್ ಎಂದು ಕರೆಯಲ್ಪಡುವ ಹೈಡ್ರೋಜನ್ ಸಮಸ್ಥಾನಿಯ ರೂಪದಲ್ಲಿ. ಹೈಡ್ರೋಜನ್ ಮತ್ತು ಡ್ಯೂಟೇರಿಯಮ್ ನ ಅನುಪಾತವು ನಮ್ಮ ಗ್ರಹದಲ್ಲಿ ಕಂಡುಬರುವ ನೀರಿನಂತೆಯೇ ಇದೆ ಎಂದು ಸಂಶೋಧಕರು ಧೃಡಪಡಿಸಿದ್ದಾರೆ. ಬಾಹ್ಯಾಕಾಶ ಶಿಲೆಯಲ್ಲಿ ಕಂಡುಬಂದ ನೀರು ಮತ್ತು ಭೂಮಿಯ ನೀರು ಒಂದೇ ಮೂಲವನ್ನು ಹೊಂದಿವೆ ಎಂಬುದಕ್ಕೆ ಈ ಅನ್ವೇಷಣೆಯೊಂದು ಬಲವಾದ ಸಾಕ್ಷಿಯಾಗಿದ್ದು, ಮುಂಬರುವ ದಿನಗಳಲ್ಲಿ ಜೀವ ವೈವಿಧ್ಯದ ಉಗಮದ ಬಗ್ಗೆಯೂ ಕುತೂಹಲಕಾರಿ ಮಾಹಿತಿ ಅನಾವರಣಗೊಳ್ಳಲಿದೆಯೇ ಎಂದು ಕಾದು ನೋಡಣ!

 

andolanait

Recent Posts

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

4 hours ago