ಗೋಕಾಕ್ ಚಳವಳಿ
1982ನೇ ವರ್ಷ. ಗೋಕಾಕ್ ಚಳವಳಿ ನಿಧಾನವಾಗಿ ರಾಜ್ಯಾದ್ಯಂತ ಹಬ್ಬುತ್ತಲಿತ್ತು. ಕನ್ನಡ ಸಂಘಟನೆಗಳು, ಸಾಹಿತಿಗಳೆಲ್ಲರೂ ಅಪೂರ್ವ ಬೆಂಬಲ ನೀಡಿ ಬೀದಿಗಿಳಿದಿದ್ದರು. ಆ ದಿನಗಳಲ್ಲಿ ಕಂಡಿದ್ದ ಬೃಹತ್ ಚಳವಳಿ ಎಂದರೆ ರೈತ ಚಳವಳಿ ಮಾತ್ರ. ಆ ಬಗೆಯ ಜನಸೇರ್ಪಡೆ ಬೇರಾವುದೇ ಪ್ರತಿಭಟನೆಗಿರಲಿಲ್ಲ. ಸಾಹಿತಿಗಳು, ಸಂಘಟನೆಗಳು, ವಿದ್ಯಾರ್ಥಿಗಳು ಒಕ್ಕೊರಲಿನಿಂದ ಏನೇ ಗರ್ಜಿಸಿ ಮೆರವಣಿಗೆ ತೆಗೆದರೂ ಅವುಗಳು ಕನ್ನಡದ ಕಿರು ಕಾಲುವೆಗಳಷ್ಟೇ.
ಆಗ ಬಂದವರೇ ಡಾ.ರಾಜ್ ಕುಮಾರ್. ಕನ್ನಡ ಕಲಾವಿದರೊಂದಿಗೆ ಊರೂರಿಗೂ ಭೆಟ್ಟಿ ನೀಡಲು ಉದ್ಯುಕ್ತರಾದರು. ಅವರು ನಾಯಕತ್ವ ತೆಗೆದುಕೊಂಡಾಗ, ಅಧಿಕಾರದಲ್ಲಿದ್ದವರು ಏನು ಮಹಾ ಎಂದು ಮೂಗು ಮುರಿದಿದ್ದರು. ‘ಜನ ಶೀಟಿ ಹೊಡೆದು ಬಿಟ್ಟರೆ ಅವನೊಬ್ಬ ದೊಡ್ಡ ನಾಯಕನಾ? ದುಡ್ಡು ಕಾಸು ಸುರಿದು, ಲಾರಿ ಬಸ್ಸಲ್ಲಿ ಜನ ಸಂಘಟಿಸಿ ಮೆರವಣಿಗೆ ಮಾಡುವ ಶಕ್ತಿ ಇದೆಯೇ? ನಟರನ್ನು ಕಂಡು ನಾಲ್ಕಾರು ಕಾಲಿ ಪೋಲಿಗಳು ಬಂದು ಶೀಟಿ ಚಪ್ಪಾಳೆ ಹೊಡೆದು ಹೋಗ್ತಾರೆ’ ಅಂತ ಅಧಿಕಾರಸ್ತರು ಉಪೇಕ್ಷೆ ಮಾಡಿದರು.
ಆ ಮೊತ್ತ ಮೊದಲ ದಿನ ಬೆಂಗಳೂರಿನಿಂದ ಬೆಳಿಗ್ಗೆ ಹನ್ನೊಂದು ಗಂಟೆಗೆ ಡಾ.ರಾಜ್ ತಂಡ ಮೈಸೂರಿಗೆ ಬರಬೇಕಿತ್ತು. ಕಾರ್ಯಕ್ರಮವಾದರೂ ಎಷ್ಟು ಹೊತ್ತಿನದು? ಕೇವಲ ಅರ್ಧಗಂಟೆ. ಅಲ್ಲಿಂದ ಮುಂದೆ ನಂಜನಗೂಡಿಗೆ ತೆರಳಲಿತ್ತು. ರಾಜ್ಯಾದ್ಯಂತ ಪ್ರವಾಸದ ನಾಂದಿ ಅದು. ಆದರೆ ಒಂದಿನಿತೂ ಪ್ರಚಾರವಿಲ್ಲ. ಲೌಡ್ ಸ್ಪೀಕರ್ ಗದ್ದಲವಿಲ್ಲ. ಪತ್ರಿಕೆಗಳಂತೂ ಮೂಲೆ ಸಾಲಿನ ಸುದ್ದಿ ಹಾಕಿ ಸುಮ್ಮನಾಗಿದ್ದವು. ಜನ ಬಂದಾರೆಯೇ ಮೈದಾನ ತುಂಬಬಲ್ಲದೇ?
ಆ ದಿನ ಮಧ್ಯಾಹ್ನ ಡಾ.ರಾಜ್ ನೇತೃತ್ವದಲ್ಲಿ ವಿಷ್ಣು ಮೊದಲಾಗಿ ಲೋಕೇಶ್, ದ್ವಾರಕೀಶ್ ತನಕ ಕಲಾವಿದರ ದಂಡೇ ಬಸ್ಸಿನಲ್ಲಿ ಬಂದಿತು. ಎರಡು ಮೈಕ್ ಬಿಟ್ಟರೆ ವೇದಿಕೆಯೂ ಇಲ್ಲ. ಎಲ್ಲರೂ ಟೌನ್‌ಹಾಲ್ ಮೇಲ್ಭಾಗದ ಕಾರಿಡಾರಿಗೆ ದಡದಡ ಹತ್ತಿದರು. ಅದೆಲ್ಲಿದ್ದರೋ ಜನ ಧಗಧಗ ನುಗ್ಗಿ ಬಂದರು. ನೋಡ ನೋಡುತ್ತಿದ್ದಂತೆ ಸಾವಿರಾರು ಜನರಿಂದ ಗಿಜಿಗುಟ್ಟಿತು.
‘ನಮ್ಮ ನೆಚ್ಚಿನ ರಾಜಣ್ಣನೇ ಮುಂದಿನ ಮುಖ್ಯಮಂತ್ರಿ. ಅವರ ನೇತೃತ್ವದಲ್ಲಿ ನಾವೆಲ್ಲರೂ ಬಂದಿದ್ದೇವೆ’ ಎಂದು ನಟ ದ್ವಾರಕೀಶ್ ಘೋಷಿಸಿಯೇ ಬಿಟ್ಟರು. ಧಿರೇಂದ್ರ ಗೋಪಾಲ್ ಥೇಟ್ ಗುಂಡೂರಾಯರಂತೆಯೇ ಮಾತಾಡಿದರು. ಹೀಗೆ ಒಬ್ಬೊಬ್ಬ ನಟ, ನಟಿಯರ ಮಾತೂ ಒಂದೊಂದು ಬಗೆಯ ವೀರಾವೇಶದಲ್ಲಿ ಮುಗಿಯಿತು. ಒಬ್ಬೊಬ್ಬರಿಗೂ ಜೋರು ಚಪ್ಪಾಳೆ ತಟ್ಟುತ್ತಿದ್ದ ಜನ ತಾಳ್ಮೆಯಿಂದ, ಕುತೂಹಲದಿಂದ ಮುಂದಿನ ಮಾತಿಗಾಗಿ ಕಾದು ನಿಂತಿದ್ದರು.
ಇನ್ನೇನು ಡಾ.ರಾಜ್ ಮಾತನಾಡಲಿದ್ದಾರೆ ಎಂಬ ಸೂಚನೆ ವೈರ್‌ಲೆಸ್‌ನಲ್ಲಿ ಬಂತು. ಅದಾದರೆ ಸಭೆಯೇ ಬರಕಾಸ್ತು. ಡಾ.ರಾಜ್ ಮೈಕ್‌ನ ಮುಂದೆ ನಿಂತರು. ಕಲರವವಿದ್ದ ಇಡೀ ಜನಸಾಗರ ಫಕ್ಕನೇ ಶಾಂತವಾಯಿತು. ಇಂತಹ ಶಾಂತ ನೀರವತೆಯೇ ಪೊಲೀಸರಿಗೆ ಡೇಂಜರಸ್!
ಡಾ.ರಾಜ್ ಒಂದೆರಡು ನಿಮಿಷ ಏನೂ ಮಾತಾಡಲಿಲ್ಲ. ಮೈಕನ್ನು ಗಟ್ಟಿಯಾಗಿ ಹಿಡಿದು ನಿಂತರು. ಏನು ಮಾತಾಡುತ್ತಾರೋ? ಜನರೂ ಕಾತರರಾಗಿ ಕಾಯುತ್ತಿದ್ದರು. ಮೌನದ ನಂತರ ನಿಧಾನವಾಗಿ ಗದ್ಗದ ದನಿಯಲ್ಲಿ ರಾಜ್ ಮಾತು ಶುರುವಾಯಿತು. ‘ನಮ್ಮನ್ನೆಲ್ಲ ಸಾಕಿ ಬೆಳೆಸಿದ ನಮ್ಮ ಕನ್ನಡ ತಾಯಿ… ತನ್ನ ನೆಲದಲ್ಲೇ ಈವತ್ತು ಅನಾಥಳಾಗಿ…’ ಮುಂದಿನ ಮಾತಾಡಲಾಗದೇ ಬಿಕ್ಕಳಿಸುತ್ತಾ, ‘ನನ್ನ ತಾಯಿ ತನ್ನ ಈ ನೆಲದಲ್ಲೇ ತಬ್ಬಲಿಯಾಗಿದ್ದಾಳೆ…’ ಗಂಟಲುಬ್ಬಿ ಕಣ್ಣೀರು ಮಿಡಿದರು.
ಅಷ್ಟೇ ಸಾಕಾಯ್ತು. ನೆರೆದ ಜನರ ಕಣ್ಣಲ್ಲಿ ಝಿಲ್ಲನೆ ನೀರು ಹರಿಯಿತು. ನಮ್ಮ ಕಣ್ಣುಗಳೂ ಹನಿದವು. ಆವತ್ತಿನ ಸನ್ನಿವೇಶದ ವಿಹಂಗಮತೆ ಈ ಲೇಖನ ಓದುತ್ತಿರುವ ಅನೇಕರಿಗಾದರೂ ನೆನಪಿರಲೇಬೇಕು. ಯಾವುದೇ ವ್ಯಕ್ತಿಯೊಬ್ಬ ಮಾತನ್ನೇ ಪೂರ್ಣವಾಗಿ ಆಡದೆ ಜನಸಮುದ್ರದ ಕಣ್ಣೀರು ಮಿಡಿಸಿದ್ದನ್ನು ನಾನೆಂದೂ ನೋಡಿರಲಿಲ್ಲ. ಇಂದಿಗೂ ನೋಡಿಲ್ಲ.
ಆ ಜನರೋ? ಎಲ್ಲೆಲ್ಲಿಂದಲೋ ಹೇಗೋ ಬಂದು ಸಭೆಗೆ ಸೇರಿಕೊಂಡಿದ್ದವರು. ಊಟದ ಸಮಯ ಮೀರಿತ್ತು. ರಾಜ್ಗೆ ಮುನ್ನ ಮಾತಾಡಿದ ನಟ ನಟಿಯರದೆಲ್ಲವೂ ನಾನಾ ಬಗೆಯ ತಾಲಿ-ಬಜಾವ್ ಆರ್ಭಟದ ಮಾತುಗಳು. ಕನ್ನಡ ಚಳವಳಿಯ ಅಂಶವೇ ಅಲ್ಲಿ ಹರಳು ಗಟ್ಟಿರಲಿಲ್ಲ. ಇಡೀ ಜನಜಂಗುಳಿಯ ಮನೋಭಾವವೇ ಬೇರೆ ಮೂಡ್ನಲ್ಲಿತ್ತು. ಅದು ಹೇಗೆ ರಾಜ್‌ರ ನಾಲ್ಕಾರು ಅರ್ಧಂಬರ್ಧ ಮಾತುಗಳು ಕಣ್ಣೀರು ಚಿಮ್ಮಿಸಿದವು ಎಂಬುದು ಈಗಲೂ ಅರ್ಥವಾಗದ ಯಕ್ಷ ವಿಸ್ಮಯ.
ಡಾ.ರಾಜ್ ಅವರ ತಾದಾತ್ಮ್ಯತೆ ಯಾವಾಗಲೂ ವಿಸ್ಮಯಕಾರಿ. ಅವರ ಹತ್ತಾರು ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ಹತ್ತಿರದಿಂದ ಗಮನಿಸಿದ್ದೆ. ಒಂದೆರಡು ಸಂಗೀತ ಸಂಜೆಗಳ ಉದ್ಘೋಷಕನಾಗಿಯೂ ಕಾರ್ಯನಿರ್ವಹಿಸಿದ್ದೆ. ಅವರೆಂದೂ ಗೀತೆಗಳನ್ನು ನೋಡಿಕೊಂಡು ಹಾಡುತ್ತಿರಲಿಲ್ಲ ಅಥವಾ ಬರೆದಿರುವ ಗೀತೆಗಳ ಮೇಲೆ ಎಲ್ಲೆಲ್ಲಿ ಉಸಿರೆಳೆದುಕೊಳ್ಳಬೇಕು, ಏರಿಳಿತಗಳ ಗತಿ ಹೇಗೆ ಸಾಗಬೇಕು ಎಂಬುದನ್ನೂ ಗುರ್ತು ಹಾಕಿಕೊಳ್ಳುತ್ತಿರಲಿಲ್ಲ. ಮೈಕ್ ಹಿಡಿದರೆಂದರೆ ಮುಗಿಯಿತು. ರೆಕಾರ್ಡೆಡ್ ನೆನಪು ಅವರದು. ಮೂಲ ಗೀತೆಯ ಅದೇ ಪಿಚ್, ಅದೇ ರಾಗ, ಅದೇ ಧಾಟಿ ಪಡೆ ಮೂಡುತ್ತಿತ್ತು. ಸಹ ಗಾಯಕಿಯರೇನಾದರೂ ತಪ್ಪಿದರೂ ಅದನ್ನು ತಾವೂ ಜೊತೆ ಜೊತೆಯಲ್ಲೇ ಹಾಡುತ್ತಾ ಸರಿದೂಗಿಸಿಬಿಡುತ್ತಿದ್ದರು. ಎಲ್ಲಿ ಲೋಪವಾಗಿತ್ತು ಅಂತಲೇ ಗೊತ್ತಾಗುತ್ತಿರಲಿಲ್ಲ.
ಕಾರ್ಗಿಲ್ ನಿಧಿ ಸಂಗ್ರಹಣೆ ಮತ್ತು ಶಕ್ತಿಧಾಮದ ಸಂಗೀತ ಸಂಜೆಗಳ ಉದ್ಘೋಷಕ (comperer) ನಾನಾಗಿದ್ದೆ. ಹಾಡುವ ಮೊದಲು ರಂಗದ ಹಿಂದೆ ಗೀತೆಯನ್ನು ಯಾವ ರೀತಿ ನೋಡಿ ಸಿದ್ಧತೆ ಮಾಡಿಕೊಳ್ಳುತ್ತಾರೋ ಹೇಗೆ ಎಂದು ಗಮನಿಸುತ್ತಿದ್ದೆ. ಹೊಸ ಹಾಡಿಗೆ ಮೊದಲು ಬಟ್ಟೆ ಬದಲಿಸಿ ತಕ್ಷಣ ಬಂದು ಸೈಡ್ ವಿಂಗಿನಲ್ಲಿ ನಿಂತಿರುತ್ತಿದ್ದರು. ಆಗಲೂ ಚೀಟಿ ಇತ್ಯಾದಿ ನೋಡಿಕೊಳ್ಳುತ್ತಿರಲಿಲ್ಲ. ಅವರಿಗೆ ಸ್ಟೇಜ್ ಎಂಬುದು ದೈವ ಸಮಾನ. ಮಂಡಿನೋವಿನ ಸಮಸ್ಯೆಯಿದ್ದರೂ ಕುರ್ಚಿಯಲ್ಲಿ ಕೂರುತ್ತಿರಲಿಲ್ಲ. ಓಡಲು ಸಿದ್ಧವಾದ ಕುದುರೆಯ ತವಕ ಅವರಲ್ಲಿತ್ತು. ಹಾಡಿನ ಶಕ್ತಿಯನ್ನು ಮೈದುಂಬಿಕೊಳ್ಳುವವರಂತೆ ಧ್ಯಾನಸ್ಥ ಸ್ಥಿತಿಯಲ್ಲಿ ನಿಂತಿರುತ್ತಿದ್ದರು.
ಕಾರ್ಗಿಲ್ ಯೋಧರಿಗಾಗಿ ನಿಧಿ ಸಂಗ್ರಹಿಸಲು, ಡಾ.ರಾಜ್ ಅವರ ರಸಮಂಜರಿ ಕಾರ್ಯಕ್ರಮ ಮೈಸೂರಿನ ಕಲಾಮಂದಿರದಲ್ಲಿ ಏರ್ಪಾಡಾಗಿತ್ತು. ಉದಯ ಟಿವಿಯಲ್ಲಿ ಲೈವ್ ಪ್ರಸಾರ. ನನ್ನದೇ ಕಂಪೀರಿಂಗ್ ನಿರೂಪಣೆ. ರಾಜ್ ಹಾಡುವ ಪ್ರತಿ ಗೀತೆಗೂ ಒಂದೊಂದು ಹಿನ್ನೆಲೆಯ ವಿವರಣೆ ಸಿದ್ಧಪಡಿಸಿಕೊಂಡಿದ್ದೆ. ಅಂದು ಡಾ.ರಾಜ್ ವಿಶೇಷ ಸ್ಛೂರ್ತಿಯಲ್ಲಿದ್ದರು. ನಟಿ ಜಯಮಾಲ ಮತ್ತು ಜ್ಯೋತಿ ಸಹ ಗಾಯಕಿಯರು. ಒಂದೊಂದು ಹಾಡೂ ಸೂಪರ್ ಸಕ್ಸಸ್. ಮುಂದಿನ ಗೀತೆಯೇ ‘ಹುಟ್ಟಿದರೇ ಕನ್ನಡನಾಡಿನಲ್ಲಿ ಹುಟ್ಟಬೇಕು’. ಡಾ.ರಾಜ್ ಸೈಡ್ ವಿಂಗಿನಲ್ಲಿ ರೆಡಿಯಾಗಿ ನಿಂತಿದ್ದರು. ಅನೌನ್ಸ್ ಮಾಡಿದೆ: ‘ಸಂಗೀತದ ದೃಷ್ಟಿಯಿಂದ ನೋಡಿದರೆ ಇದೊಂದು ಸಾಧಾರಣ ಗೀತೆ. ಆದರೆ ಅಸಾಧಾರಣ ಯಶಸ್ಸನ್ನು ಕಾಣುವಂತಾಗಲು ಡಾ.ರಾಜ್ ಹಾಡಿರುವುದು ಮುಖ್ಯ ಕಾರಣ. ಇದೇ ನಮ್ಮ ನಾಡಗೀತೆಯೇನೋ ಎಂಬಷ್ಟು ಪ್ರಸಿದ್ಧಿ ಪಡೆಯುವಂತಾಗಲು ಡಾ.ರಾಜ್ ಅವರ ಸಿರಿ ಕಂಠದ ಮಾಂತ್ರಿಕ ಸ್ಪರ್ಶ ಕಾರಣ…’ ಎಂದೇನೇನೋ ಹೇಳುತ್ತಿದ್ದೆ.
ತೆರೆಯ ಹಿನ್ನೆಲೆಯಲ್ಲಿದ್ದ ಡಾ.ರಾಜ್ ತಕ್ಷಣ ಸ್ಟೇಜಿಗೆ ಧಾವಿಸಿ ಬಂದರು. ತಮ್ಮ ಹಸ್ತವನ್ನು ಚಾಚಿ ತಡೆಯಿರಿ ತಡೆಯಿರಿ ಎಂಬಂತೆ ಸಂಜ್ಞೆ ಮಾಡಿದರು. ಮಾತು ನಿಲ್ಲಿಸಿದೆ. ‘ಈ ಗೀತೆಯ ಯಶಸ್ಸಿಗೆ ನಾನೊಬ್ಬನೇ ಕಾರಣ ಅಂದರೆ ದೊಡ್ಮಾತು. ಅದನ್ನು ಕೂತು ಬರೆದು ರಾಗ ಸಂಯೋಜನೆ ಮಾಡಿದವರು ನಮ್ಮ ಹಂಸಲೇಖ ಅವರು. ಈ ಹಾಡಿನ ಕೀರ್ತಿ ಅವರಿಗೆ ಸಲ್ಲಬೇಕು. ಇದು, ನಾವೆಲ್ಲರೂ ಸೇರಿ ಕಡೆದ ಗೀತೆ. ಇದರ ಯಶಸ್ಸು ಒಬ್ಬ ರಾಜಕುಮಾರನದಲ್ಲ. ಎಲ್ಲರದೂ. ಆ ಹಾಡಿನ ಕೀರ್ತಿ ನಮ್ಮೆಲ್ಲರದು’ ಎಂದರು.
ಎಷ್ಟೊಂದು ಚೆನ್ನಾಗಿ ಹೇಳಿದರು ಡಾ.ರಾಜ್. ನನ್ನ ಮಾತನ್ನು ಅವರು ತಿದ್ದಿದರು ಎಂಬ ಬೇಸರ ನನಗೂ ಆಗಕೂಡದು ಅಷ್ಟು ಚೆನ್ನಾಗಿ, ಕ್ಲುಪ್ತವಾಗಿ ಹೇಳಿದರು. ಅವರೆಂದೂ ನಾನತ್ವದ ನಾನಾಗಿರಲಿಲ್ಲ. ನಾವು ಆಗಿದ್ದರು!
(ಮುಂದುವರಿಯುವುದು)
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…