Memorial of Great Poet Shadaksharadeva Awaits Transformation
ಮಾಗನೂರು ಶಿವಕುಮಾರ್
೧೭ನೇ ಶತಮಾನದಲ್ಲಿ ೧೬ ಕೃತಿಗಳನ್ನು ರಚಿಸಿದ ಮಹಾಕವಿ ಷಡಕ್ಷರದೇವ ಅವರ ಮೂಲಸ್ಥಾನ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಧನಗೂರು ಗ್ರಾಮ. ಅಲ್ಲಿಯ ವೀರಶೈವ ಮಠಕ್ಕೆ ಮಠಾಧಿಪತಿಯಾಗಿದ್ದರು. ಇವರು ಜನಿಸಿದ ಗ್ರಾಮ ಮಂಡ್ಯ ಜಿಲ್ಲೆಯಲ್ಲಿರುವುದು ಪ್ರತಿಯೊಬ್ಬ ಸಾಹಿತಿಗೂ ಹೆಮ್ಮೆಯ ವಿಷಯವಾದರೂ, ಅವರ ಕಾರ್ಯಸ್ಥಾನವಾಗಿದ್ದ ಮಠ ಹಾಗೂ ಇಲ್ಲಿನ ಸ್ಮಾರಕಗಳು ಶಿಥಿಲಗೊಂಡಿರುವುದು ವಿಪರ್ಯಾಸ.
ಷಡಕ್ಷರದೇವ ಕವಿ ಅಪಾರ ಶಿಷ್ಯರನ್ನು ಹೊಂದಿದ್ದು, ಪಾಠ ಪ್ರವಚನಗಳನ್ನು ಹೇಳಿಕೊಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಉನ್ನತ ಜ್ಞಾನ ಪಡೆದಿದ್ದ ಅವರು ರಾಜಶೇಖರ ವಿಲಾಸಂ, ಶಬರ ಶಂಕರ ವಿಲಾಸಂ, ವೃಷಭೇಂದ್ರ ವಿಜಯಂ ಎಂಬ ಮೇರುಕೃತಿಗಳನ್ನು ರಚಿಸಿದ್ದರು. ಷಡಕ್ಷರದೇವ ರಚಿಸಿದ ಕರ್ಣರಸಾಯನ ಸಂಸ್ಕೃತ ಮಹಾಕಾವ್ಯವಾಗಿದ್ದು, ಶಿವಾದಿತ್ಯ ರತ್ನಾವಳಿ, ಭಕ್ತಾದಿತ್ಯ ರತ್ನಾವಳಿ ಮೊದಲಾದ ೧೬ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು.
ಅಂದು ಕಾಡು, ಕಣಿವೆ, ಕೆರೆ-ಕಟ್ಟೆಗಳು ಹಸಿರು ಹೊದಿಕೆಯ ನಡುವೆ ಇದ್ದ ಶ್ರೀ ಗೌರೀಶ್ವರ, ವೀರಭದ್ರೇಶ್ವರ ದೇವಾಲಯ, ಗವಿಮಠ ಆದಿಯಾಗಿ ಪ್ರಕೃತಿಯ ರಮಣೀಯತೆ ಷಡಕ್ಷರದೇವ ಅವರ ಕಾವ್ಯಗಳಲ್ಲಿ ಸೃಜಿಸಿರುವ ಕುರುಹುಗಳಿವೆ. ಧನಗೂರು ಮಠದ ಪಕ್ಕದಲ್ಲಿರುವ ಕಲ್ಲುಮಂಟಪದಲ್ಲಿ ಷಡಕ್ಷರದೇವ ಕೃತಿಗಳ ರಚನೆ, ತಪಸ್ಸು ಮಾಡುತ್ತಿದ್ದರು. ಆ ಮಂಟಪಕ್ಕೆ ಅಂದಿನ ಪಾಳೇಗಾರ, ಫಿರಂಗಿ ಗುಂಡು ಹೊಡೆಸಿ ಕೆಡವಿಸಿದ್ದು, ಅವಶೇಷವನ್ನು ಈಗಲೂ ನೋಡಬಹುದು.
ಧನಗೂರು ಮಠದ ಪರಂಪರೆಯಲ್ಲಿ ಮಠಾಧಿಪತಿಗಳಾಗಿದ್ದ ೧೬ ಮಂದಿಯ ಪೈಕಿ ೧೧ ಜನರ ಸಮಾಧಿಗಳು ಪತ್ತೆಯಾಗಿವೆ. ಅವುಗಳಿಗೆ ಈಗಲೂ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಷಡಕ್ಷರದೇವ ಕವಿಯ ವಿದ್ವತ್ತನ್ನು ತಿಳಿದ ಅಂದಿನ ರಾಜರು ಚಾಮರಾಜನಗರ ಜಿಲ್ಲೆಯ ಯಳಂದೂರಿಗೆ ಬರಮಾಡಿಕೊಂಡು ಅವರನ್ನು ರಾಜಗುರುವಾಗಿ ಮಾಡಿದ್ದರು. ತದನಂತರ ಅವರು ಅಲ್ಲಿಯೇ ನೆಲೆಸಿ ಯಳಂದೂರು ಮಠದಲ್ಲಿಯೇ ಕೊನೆಯುಸಿರೆಳೆದರು.
ಅವರು ನಿಧನರಾದ ಸ್ಥಳ ಯಳಂದೂರಿನ ರಾಷ್ಟ್ರೀಯ ಹೆದ್ದಾರಿ ೨೦೯ ಪಕ್ಕದಲ್ಲೇ ಪಾಳುಬಿದ್ದಿದೆ. ಷಡಕ್ಷರದೇವ ಅವರು ರಚಿಸಿದ ಗ್ರಂಥಗಳನ್ನು ಪ್ರಕಟಿಸಲು ಹಾಗೂ ಷಡಕ್ಷರದೇವ ಸ್ಮಾರಕ ನಿರ್ಮಿಸಲು ಯಳಂದೂರಿನ ದುಗ್ಗಟ್ಟಿ ವೀರಭದ್ರಪ್ಪ ಬಹಳ ಶ್ರಮವಹಿಸಿದರು. ಅಲ್ಲದೆ, ಷಡಕ್ಷರ ಅವರು ರಚಿಸಿದ ಗ್ರಂಥವನ್ನು ಸುತ್ತೂರು ಶ್ರೀಗಳಿಂದ ಬಿಡುಗಡೆಗೊಳಿಸಿದ್ದರು ಎಂಬುದಾಗಿ ಮೈಸೂರಿನ ನಂಜುಂಡಸ್ವಾಮಿ ಅವರು ಸ್ಮರಿಸುತ್ತಾರೆ.
ಷಡಕ್ಷರ ಕವಿಯು ತಾಳೆಗರಿಯಲ್ಲಿ ರಚಿಸಿರುವ ರಾಜಶೇಖರ ವಿಲಾಸಂ ಕೃತಿಯನ್ನು ಧರ್ಮಸ್ಥಳದ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಉಳಿದ ಮೂಲಕೃತಿಗಳು ಲಭ್ಯವಾಗಿಲ್ಲ. ಷಡಕ್ಷರದೇವ ನೆಲೆಸಿದ್ದ ಧನಗೂರು ಮಠ, ಇಲ್ಲಿನ ಪ್ರಾಚೀನ ಕಲ್ಲು ಮಂಟಪ, ಹಲಸಹಳ್ಳಿ ಗವಿಮಠ, ಹಿರಿಯ ಶ್ರೀಗಳ ಗದ್ದುಗೆಗಳು ಹಾಗೂದೇವಾಲಯಗಳು ಸೊರಗಿ ಅವನತಿಯತ್ತ ಸಾಗುತ್ತಿವೆ.
ಷಡಕ್ಷರದೇವ ರಚಿಸಿದ ಸಮಗ್ರ ಸಾಹಿತ್ಯ ಪುನರ್ ಪ್ರಕಟಣೆ, ಶಿಥಿಲಗೊಂಡಿರುವ ಕಲ್ಲು ಮಂಟಪಕ್ಕೆ ಕಾಯಕಲ್ಪ ನೀಡುವ ಅಗತ್ಯವಿದೆ. ಇದರ ಬಗ್ಗೆ ಸರ್ಕಾರಗಳಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿ ಕೊಂಡಂತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಈ ಮಠದ ಕಡೆಗೆ ಗಮನಹರಿಸಿ ಸರ್ಕಾರದ ಗಮನಕ್ಕೆ ತಂದು ಷಡಕ್ಷರ ಕವಿಯ ಎಲ್ಲ ಕೃತಿಗಳನ್ನೂ ಸಂಗ್ರಹಿಸಿ ಮರು ಪ್ರಕಟಣೆ ಮಾಡಿ, ಪಾಳು ಬಿದ್ದಿರುವ ಮಠವನ್ನು ಸ್ಮಾರಕವಾಗಿ ನಿರ್ಮಿಸಿ ಪ್ರವಾಸಿ ತಾಣ ಮಾಡಬೇಕು. ಈ ಸ್ಥಳದಲ್ಲಿ ಕವಿಯ ಹೆಸರು ಚಿರಾಯುವಾಗುವಂತೆ ಮಾಡಬೇಕೆಂಬ ಮಹದಾಸೆ ಈ ಭಾಗದ ಜನರದ್ದಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಜಿ ಸಚಿವರಾದ ಪಿ.ಎಂ. ನರೇಂದ್ರ ಸ್ವಾಮಿ ಕೋಟಿ ರೂ. ವೆಚ್ಚದಲ್ಲಿ ಷಡಕ್ಷರದೇವನ ಮೂಲಸ್ಥಾನವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಆದರೆ ಸಮ್ಮೇಳನದ ನಂತರ ಅದು ಅವರಿಗೆ ಮರೆತುಹೋಗಿದೆ. ಇನ್ನು ಮುಂದಾದರೂ ಈ ಬಗ್ಗೆ ಗಮನಹರಿಸುವರೇ, ಈ ಮಹಾಕವಿ ನೆಲೆಸಿದ ಸ್ಥಳವನ್ನು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದರೊಂದಿಗೆ ಅವರು ರಚಿಸಿದ ಮಹಾನ್ ಕೃತಿಗಳಿಗೆ ಮರುಜೀವ ನೀಡುವರೇ, ಸಾಹಿತಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತ್ತ ಗಮನ ಹರಿಸುವುದೆ ಎಂಬುದನ್ನು ಎಂದು ಕಾದು ನೋಡಬೇಕಿದೆ.
ಶ್ರೀಗಳ ಅಭಿಲಾಷೆ: ಈಗ ಮಠದಲ್ಲಿರುವ ಶ್ರೀ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ‍್ಯ ಸ್ವಾಮೀಜಿ ಅವರು ಸರ್ಕಾರದ ಗಮನ ಸೆಳೆ ಯಲು ಯತ್ನಿಸುತ್ತಿದ್ದಾರೆ. ಷಡಕ್ಷರ ದೇವ ಕವಿಯ ಹೆಸರಿ ನಲ್ಲಿ ಪುಟ್ಟ ಕಲಾಮಂಟಪವನ್ನು ನಿರ್ಮಿಸಿ ಅವರ ಹೆಸರಿನಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭಿಸಿದ್ದಾರೆ. ಅಕ್ಷರದ ಜೊತೆಗೆ ಅನ್ನ ದಾಸೋಹವೂ ನಡೆಯುತ್ತಿದೆ. ಷಡಕ್ಷರ ದೇವನ ಹೆಸರಿನಲ್ಲಿ ಸಾಹಿತ್ಯ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು ಎಂಬುದು ಸ್ವಾಮೀಜಿಯವರ ಇಂಗಿತ.
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…
ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ…
ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…