ಎಡಿಟೋರಿಯಲ್

ನಿಯೊಮ್‌ನಲ್ಲಿ ‘ದಿ ಲೈನ್’ ಎಂಬ ಮಾಯಾನಗರಿ

-ಕಾರ್ತಿಕ್ ಕೃಷ್ಣ

ನೀವು ಸಿನಿ ಪ್ರಿಯರಾಗಿದ್ದರೆ ಇಂತಹದ್ದೊಂದು ನಗರವನ್ನು ಯಾವುದಾದರೂ ಸಿನಿಮಾದಲ್ಲಿ ಖಂಡಿತಾ ನೋಡಿರುತ್ತೀರಿ. ಅಲ್ಲಿ ಹಾರುವ ಕಾರುಗಳಿರುತ್ತವೆ, ರಸ್ತೆಗಳಿರುವುದಿಲ್ಲ, ವಿಧವಿಧದ ಆಕಾರದ ಕಟ್ಟಡಗಳಿರುತ್ತವೆ, ಮಾಲಿನ್ಯದ ಅಸ್ತಿತ್ವವೇ ಅಲ್ಲಿರುವುದಿಲ್ಲ ಹಾಗು ನಿಸರ್ಗ ಕಣ್ಣು ಕೋರೈಸುವಂತಿರುತ್ತದೆ. ಬ್ಲಾಕ್ ಪ್ಯಾಂಥರ್ ಸಿನಿಮಾದ ‘ವಕಾಂಡ’ ಪಟ್ಟಣ ಭಾಗಶಃ ಇದೇ ರೀತಿ ಇರುವುದನ್ನು ನೀವು ಗಮನಿಸಿರಬಹುದು. ಅಲ್ಲಿನ ತಂತ್ರಜ್ಞಾನ ಕೂಡ ಸಾಕಷ್ಟು ಮುಂದುವರೆದಿರುತ್ತದೆ. ಭೂಸ್ವರ್ಗವೆಂದರೂ ತಪ್ಪಾಗಲಾರದು! ಕೇಳಲು ಯಾವುದೋ ಮಾಯಾಲೋಕದ ವರ್ಣನೆಯಂತಿದೆಯಲ್ಲವೇ? ಹಾಗೆಯೆ ‘ದಿ ಇಂಟರ್‌ಸ್ಟೆಲ್ಲರ್’ ಸಿನಿಮಾದ ಕೊನೆಯಲ್ಲಿ ತೋರಿಸಲಾದ ಒಂದು ಗೋಲಾಕಾರದ ಪಟ್ಟಣವಂತೂ ಮನುಷ್ಯನ ಅಸಾಧಾರಣ ಕಲ್ಪನಾ ಶಕ್ತಿಯನ್ನು ಸಾರಿ ಹೇಳುತ್ತದೆ. ನಿಮಗೊಂದು ವಿಷಯ ಗೊತ್ತೇ ? ಇನ್ಮುಂದೆ ಇಂತಹ ಪಟ್ಟಣಗಳು ಬರೀ ಸಿನೆಮಾಗಳಲ್ಲೋ ಅಥವಾ ಕಲ್ಪನೆಗಳಲ್ಲಿ ಮಾತ್ರ ಕಂಡುಬರುವುದಿಲ್ಲ. ಅಂತಹ ಅಸಾಧಾರಣ ನಗರವೊಂದು ಈಗಾಗಲೇ ನಿರ್ಮಾಣ ಹಂತದಲ್ಲಿದೆ. ಸೌದಿ ಅರೇಬಿಯಾ ಅಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದು, ಕಳೆದ ತಿಂಗಳು ಬಿಡುಗಡೆಗೊಂಡ ಕೆಲವು ಡ್ರೋನ್ ಚಿತ್ರಣಗಳು ನಗರ ನಿರ್ಮಾಣದ ಕೆಲಸ ಆರಂಭಗೊಂಡಿದ್ದನ್ನು ಸಾಬೀತು ಪಡಿಸಿವೆ.

ಈ ಮಾಯಾನಗರಿ ತಲೆಯೆತ್ತುತ್ತಿರುವುದು ಸೌದಿ ಅರೇಬಿಯಾದ ‘ನಿಯೋಮ್’ ಎಂಬಲ್ಲಿ. ‘ದಿ ಲೈನ್’ (The Line) ಎಂದು ಕರೆಯಲ್ಪಡುವ ಈ ನಗರ ಹೆಸರಿಗೆ ತಕ್ಕಂತೆ ರೇಖೆಯ ಮಾದರಿಯಲ್ಲೇ ಇರಲಿದೆ! ರೇಖೆ ಅಂದರೆ ಸಾಮಾನ್ಯ ರೇಖೆಯಲ್ಲ. ೧೭೦ ಕಿಮಿ ಉದ್ದದ ಬೃಹತ್ ರೇಖಾ ಪಟ್ಟಣವಿದು! ಗಣಿತದಲ್ಲಿ ವಕ್ರ ರೇಖೆ, ಸರಳ ರೇಖೆ ಜೊತೆಗೆ The Line ನಗರವನ್ನೂ ಸೇರಿಸಿಕೊಳ್ಳಬಹುದು. ಈ ನಗರದ ವೈಶಿಷ್ಟ್ಯಗಳು ಹೇಗಿವೆಯೆಂದರೆ, ನಿರ್ಮಾಣ ಪೂರ್ಣಗೊಂಡ ಮೇಲೆ ಇಡೀ ಜಗತ್ತು ಇದನ್ನು ಬೆರಗುಗಣ್ಣಿನಿಂದ ನೋಡುವುದರಲ್ಲಿ ಸಂಶಯವಿಲ್ಲ. ಇದನ್ನು ಒಂದು ನಗರ ಅನ್ನುವುದಕ್ಕಿಂತ, ಹೊಸ ನಾಗರೀಕತೆ ಎಂದರೆ ಹೆಚ್ಚು ಸಮಂಜಸ. ಯಾಕಂದರೆ ಅಲ್ಲಿನ ಜೀವನಶೈಲಿ, ಸೌಕರ್ಯ, ಮಾಲಿನ್ಯ ರಹಿತ ಪರಿಸರ, ನಿಸರ್ಗದೊಂದಿಗೆ ಪುನರ್‌ಸಂಪರ್ಕ ಹಾಗೂ ಮುಂದುವರೆದ ತಂತ್ರಜ್ಞಾನ ಈ ನಗರವನ್ನು ಮುಂಚೂಣಿಯಲ್ಲಿರಿಸಿ, ಹೊಸ ನಾಗರೀಕತೆಯನ್ನೇ ಹುಟ್ಟುಹಾಕಬಹುದಾದ ಸಾಧ್ಯತೆಯಿದೆ.

‘ದಿ ಲೈನ್’ ನಗರವನ್ನು ಮಾತಿನಲ್ಲೇ ಉತ್ತುಂಗಕ್ಕೆ ಏರಿಸಿದ್ದು ಸಾಕು, ಅದರ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಬನ್ನಿ!

ಒಂದು ನಗರವನ್ನು ಕ್ರೋಢೀಕರಿಸಿ, ಬಾಕ್ಸ್ ಒಳಗೆ ತುಂಬಿದರೆ ಹೇಗಿರುತ್ತದೆ? ಮುಖ್ಯವಾಗಿ ನಗರದ ವಿಸ್ತೀರ್ಣ ಕುಗ್ಗಿ, ಅಲ್ಲಿಂದಿಲ್ಲಿಗೆ ಓಡಾಡುವ ಸಮಯ ಕಡಿಮೆಯಾಗುತ್ತದೆ. ಇದೇ ಪರಿಕಲ್ಪನೆಯಲ್ಲಿ ನಿರ್ಮಿಸಲ್ಪಡುತ್ತಿರುವ ನಗರವಿದು. ಇಲ್ಲಿ ಆಸ್ಪತ್ರೆ, ದಿನಸಿ ಅಂಗಡಿ, ಥಿಯೇಟರ್, ಪುಸ್ತಕದ ಅಂಗಡಿ, ಅಪಾರ್ಟ್‌ಮೆಂಟ್ ಇತ್ಯಾದಿ ಎಲ್ಲವೂ ಇರಲಿದೆ. ಮೂರು ಆಯಾಮದ ವಿನ್ಯಾಸದಿಂದ ಇದು ಸಾಧ್ಯವಾಗಲಿದೆಯಂತೆ! ೫೦೦ ಮೀಟರ್ ಎತ್ತರ, ೨೦೦ ಮೀಟರ್ ಅಗಲ, ೧೭೦ ಕಿಮಿ ಉದ್ದದ ಬೃಹತ್ ಕಂಟೈನರ್ ನಂತಿರುವ ಈ ನಗರದ ಒಟ್ಟು ವಿಸ್ತೀರ್ಣ ೩೪ ಚದರ ಕಿಲೋಮೀಟರ್! ಅಲ್ಲಿ ವಾಸಿಸಬಹುದಾದ ಜನಸಂಖ್ಯೆ ಸುಮಾರು ೯೦ ಲಕ್ಷ. ನ್ಯೂಯೋರ್ಕ್ ನಗರದ ವಿಸ್ತೀರ್ಣ ಸುಮಾರು ೭೮೩.೮ ಚದರ ಕಿಲೋಮೀಟರ್ ಆಗಿದ್ದು, ಅಲ್ಲಿನ ಜನಸಂಖ್ಯೆ ಸುಮಾರು ೮೩ ಲಕ್ಷ. ಅಂದರೆ ಸರಿಸುಮಾರು ಒಂದೇ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ನ್ಯೂಯೋರ್ಕ್ ನಗರ ವಿಸ್ತೀರ್ಣದಲ್ಲಿ ‘ದಿ ಲೈನ್’ಗಿಂತ ೨೩ ಪಟ್ಟು ದೊಡ್ಡದು! ಭೂಮಿಯ ಮೇಲ್ಮೈಯನ್ನು ಸಮರ್ಥಕವಾಗಿ ಬಳಸಿಕೊಂಡು, ಪ್ರಕೃತಿಯನ್ನು ಕಾಪಾಡುವುದು ಕೂಡ ಈ ನಗರ ನಿರ್ಮಾಣದ ಉದ್ದೇಶ ಎಂದು ಸೌದಿ ಹೇಳಿಕೊಂಡಿದೆ.

ಇಲ್ಲಿನ ಇನ್ನೊಂದು ವಿಶೇಷತೆಯೆಂದರೆ ಪ್ರತಿಯೊಂದೂ ಕೈಯಳತೆಯಲ್ಲಿಯೇ ದೊರೆಯಲಿದೆ. ಉದಾಹರಣೆಗೆ ಆಸ್ಪತ್ರೆ ಅಥವಾ ದಿನಸಿ ಅಂಗಡಿಗಳನ್ನು ಕೇವಲ ೫ ನಿಮಿಷದ ನಡಿಗೆಯಲ್ಲಿ ತಲುಪಬಹುದಂತೆ! ಇನ್ನೊಂದು ಸೋಜಿಗದ ಸಂಗತಿ ಎಂದರೆ, ೧೭೦ ಕಿಮಿ ನಗರದ ಒಂದು ಕೊನೆಯಿಂದ ಇನ್ನೊಂದು ಕೊನೆ ಮುಟ್ಟಲು ತಗಲುವ ಸಮಯ ಕೇವಲ ೨೦ ನಿಮಿಷ. ಬೇರೆ ನಗರಗಳಂತೆ ಇಲ್ಲಿ ಕಾರಿನ ಕಾರುಬಾರು ಇರುವುದಿಲ್ಲ. ಹಾಗಾಗಿ ಇಂಗಾಲದ ಹೊರಸೂಸುವಿಕೆಯೂ ಇರುವುದಿಲ್ಲ! ಅಕ್ಷರಃ ಘಛ್ಟಿಟ Zero Carbon Emission. ಗಮನಿಸಬೇಕಾದ ಅಂಶವೆಂದರೆ, ಇಡೀ ಪಟ್ಟಣವನ್ನು ನವಿಕರಿಸಬಹುದಾದ ಸಂಪನ್ಮೂಲಗಳಿಂದ ಉತ್ಪಾದಿಸಲ್ಪಟ್ಟ ಶಕ್ತಿಗಳಿಂದ ನಡೆಸಲಾಗುತ್ತದೆಯಂತೆ. ವಿಶ್ವಕ್ಕೆ ಕಚ್ಚಾ ತೈಲವನ್ನು ಮಾರುವ ದೇಶ, ತನ್ನ ನೂತನ ನಗರವನ್ನು ಮರುಪೂರಣಗೊಳಿಸಬಹುದಾದ ಶಕ್ತಿಯಿಂದ ನಡೆಸುತ್ತದೆಯೆಂದರೆ ಆಶ್ಚರ್ಯವಾಗುತ್ತದೆ!

ಈ ನಗರದಲ್ಲಿ ಕೃತಕ ಬುದ್ದಿಮತ್ತೆ (Artificial Intelligence) ಬಳಕೆಯಾಗುತ್ತಿದ್ದು, ಎಲ್ಲಾ ಸೇವೆಗಳೂ ಕಡಿಮೆ ಅವಧಿ ಹಾಗು ಶ್ರಮದಲ್ಲಿ ಜನರಿಗೆ ಸಿಗುತ್ತದೆಯಂತೆ. ತಂತ್ರಜ್ಞಾನದ ಬಳಕೆಯಿಂದ Micro Climate ಅನ್ನು ಸೃಷ್ಟಿಸಲಾಗುತ್ತಿದ್ದು, ವರ್ಷ ಪೂರ್ತಿ ಸಮಶೀತೋಷ್ಣ ವಲಯದಂತೆ ಈ ನಗರ ರಾರಾಜಿಸಲಿದೆ. ಇನ್ನು ಈ ಪಟ್ಟಣದ ವಿನ್ಯಾಸದ ಹೇಳುವುದಾದರೆ, ಇಡೀ ನಗರವು ಮೂರು ಪದರಗಳಿಂದ ಕೂಡಿರುತ್ತದೆ. ಮೊದಲ ಪದರ ಪಾದಚಾರಿಗಳಿಗೆ, ಮೂಲಸೌಕರ್ಯಕ್ಕಾಗಿ ಒಂದು ನೆಲದಡಿಯ ಪದರ, ಭೂಗರ್ಭ ರೈಲ್ವೆಗೆ ಕೊನೆಯ ಪದರ. ಜನರು ೨೦ ನಿಮಿಷಗಳಲ್ಲಿ ನಗರದ ಒಂದು ಬದಿಯಿಂದ ಇನ್ನೊಂದು ಕಡೆಗೆ ಹೋಗಲು ಹೈ-ಸ್ಪೀಡ್ ರೈಲು ಬೇಕಲ್ಲವೇ! ಇದನ್ನು ಸಾಧಿಸಲು ಸರಾಸರಿ ೫೧೨ ಕಿಮೀ/ಗಂ ವೇಗದ ಅಗತ್ಯವಿರುತ್ತದೆ!

ಒಟ್ಟಿನಲ್ಲಿ ‘ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಅಡಿಗರ ಸಾಲಿನಂತೆ, ಸೌದಿ ಅರೇಬಿಯಾ ೫೦೦೦೦ ಕೋಟಿ ಡಾಲರನ್ನು ವ್ಯಯಿಸಿ The Line ಎಂಬ ಮಾಯಾನಗರಿಯನ್ನು ನಿರ್ಮಿಸುತ್ತಿದೆ. ಈ ನಗರದಿಂದ ತನ್ನ ಜಿಡಿಪಿ ೪೮೦೦ ಕೋಟಿ ಡಾಲರ್‌ನಷ್ಟು ಹೆಚ್ಚಲಿದೆ ಎಂದು ಸೌದಿ ಹೇಳಿಕೊಂಡಿದೆ. ಹಾಗೆಯೆ ಸುಮಾರು ೩,೮೦,೦೦೦ ನೌಕರಿಗಳು ‘ದಿ ಲೈನ್’ನಿಂದ ಹುಟ್ಟಲಿದೆ ಎಂಬುದು ತಜ್ಞರ ಲೆಕ್ಕಾಚಾರ.

ಈ ಯೋಜನೆ ಘೋಷಣೆ ಆದಾಗಲೇ ಹಲವಾರು ಟೀಕಾಸ್ತ್ರಗಳು ಸೌದಿಯ ಮೇಲೆರಗಿದ್ದವು. ಮುಖ್ಯವಾಗಿ ಪರಿಸರ ಮತ್ತು ಅಲ್ಲಿ ಪ್ರಸ್ತುತವಾಗಿ ನೆಲೆಸಿರುವ ಜನರ ಮೇಲೆ ಈ ಯೋಜನೆ ಋಣಾತ್ಮಕ ಪ್ರಭಾವ ಬೀರಬಹುದು ಎಂಬುದು ಹಲವರ ವಾದ. ಅದರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಬಗ್ಗೆಯೂ ಕೂಡ ಕೆಲವರು ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸೌದಿ ಅರೇಬಿಯಾ, ಕಳೆದ ಅಕ್ಟೋಬರ್‌ನಲ್ಲಿ ನಗರದ ನಿರ್ಮಾಣವನ್ನು ಆರಂಭಿಸಿದೆ. ಸೌದಿ ಈ ನಗರವನ್ನು ‘ಜಗತ್ತಿಗೆ ಅದ್ಭುತಗಳನ್ನು ನೀಡುವ ನಗರ’ ಎಂದು ಬಣ್ಣಿಸುತ್ತದೆ. ನಿರ್ಮಾಣ ಪೂರ್ಣಗೊಂಡಾಗ ‘ದಿ ಲೈನ್’ ಜಗತ್ತಿನ ಒಂದು ಅದ್ಭುತವಾಗುವುದರಲ್ಲಿ ಸಂಶಯವೇ ಇಲ್ಲ!

andolana

Recent Posts

ಬನ್ನೇರುಘಟ್ಟದ ಕಾಸಾಗ್ರ್ಯಾಂಡ್‌ನಲ್ಲಿ ಇಂದು ಸಂಜೆ ಉದ್ಯಮಿ ಸಿ.ಜೆ.ರಾಯ್ ಅಂತ್ಯಕ್ರಿಯೆ

ಬೆಂಗಳೂರು: ಖ್ಯಾತ ಉದ್ಯಮಿ ಮತ್ತು ಕಾನ್ಪಿಡೆಂಟ್‌ ಗ್ರೂಪ್‌ ಸಂಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದ ಸಿ.ಜೆ.ರಾಯ್‌ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,…

22 mins ago

ಓದುಗರ ಪತ್ರ: ಮೈಸೂರಿನಲ್ಲಿ ಮಳೆ ನೀರು ಕೊಯ್ಲು ಥೀಮ್ ಪಾರ್ಕ್ ಕನ್ನಡಿಯೊಳಗಿನ ಗಂಟು

ಮೈಸೂರು ನಗರದಲ್ಲಿ ಮಳೆನೀರು ಕೊಯ್ಲು ಥೀಮ್ ಪಾರ್ಕ್ ಸ್ಥಾಪಿಸುವ ಹಿಂದಿನ ಹಾಗೂ ಈಗಿನ ಸರ್ಕಾರಗಳ ಭರವಸೆ ಇನ್ನೂ ಕನ್ನಡಿಯೊಳಗಿನ ಗಂಟಾಗಿಯೇ…

4 hours ago

ಓದುಗರ ಪತ್ರ: ಅಂಕೇಗೌಡರಿಗೆ ಸಿಕ್ಕ ಪದ್ಮಶ್ರೀ ಸಾರಸ್ವತ ಲೋಕಕ್ಕೆ ಸಂದ ಗೌರವ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಪುಸ್ತಕ ಪ್ರೇಮಿ ೭೮ ವರ್ಷದ ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕನ್ನಡ…

4 hours ago

ಓದುಗರ ಪತ್ರ: ರಾಮಕೃಷ್ಣನಗರಕ್ಕೆ ಮತ್ತಷ್ಟು ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ರಾಮಕೃಷ್ಣನಗರ ಮಾರ್ಗಕ್ಕೆ ಪ್ರತಿದಿನ ನಗರ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಆದರೆ ಈ ಮಾರ್ಗದಲ್ಲಿ ಓಡಾಡುವ ಬಸ್ಸುಗಳ ಸಂಖ್ಯೆ ಮಾತ್ರ…

4 hours ago

ವಿಜೃಂಭಣೆಯಿಂದ ನಡೆದ ಸಂತೆ ಮಾಸ್ತಮ್ಮನವರ ಜಾತ್ರೆ

ಸರಗೂರು: ಪಟ್ಟಣದಲ್ಲಿ ಗ್ರಾಮದೇವತೆ ಶ್ರೀ ಸಂತೆ ಮಾಸ್ತಮ್ಮನವರ ೩೧ನೇ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ…

4 hours ago

ಕಬಿನಿ ಹಿನ್ನೀರಿನ ರೆಸಾರ್ಟ್‌ಗಳ ದಾಖಲಾತಿ ಪರಿಶೀಲನೆ

ರೆಸಾರ್ಟ್‌ಗಳು, ಹೋಂಸ್ಟೇಗಳಿಗೆ ಅಕ್ರಮ ರೆಸಾರ್ಟ್‌ಗಳ ತನಿಖಾ ಸಮಿತಿಯವರ ದಿಢೀರ್ ಭೇಟಿ ಹೆಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಹಿನ್ನೀರಿನ ನಾಗರಹೊಳೆ ಮತ್ತು ಬಂಡೀಪುರ…

4 hours ago