ಎಡಿಟೋರಿಯಲ್

ಸಂಪ್ರದಾಯ, ಪಾರದರ್ಶಕತೆಯಿಂದ ನಡೆಯಲಿ ಮಡಿಕೇರಿ ದಸರಾ!

ಪ್ರಕೃತಿ ವಿಕೋಪ, ಕೊರೊನಾದಿಂದ ಸಂಕಷ್ಟದಲ್ಲಿದ್ದ ಕೊಡಗಿನ ಜನತೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರವಾಸೋದ್ಯಮ ಕೂಡ ಉತ್ತಮ ಲಾಭದಲ್ಲಿದೆ. ಈ ನಡುವೆ ೪ ವರ್ಷಗಳ ಬಳಿಕ ಐತಿಹಾಸಿಕ ಮಡಿಕೇರಿ ದಸರಾದ ಅದ್ಧೂರಿ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಚೇತರಿಕೆಯಲ್ಲಿರುವ ಪ್ರವಾಸೋದ್ಯಮಕ್ಕೆ ಈ ಬಾರಿಯ ಅದ್ಧೂರಿ ದಸರಾ ಮತ್ತಷ್ಟು ಟಾನಿಕ್ ಒದಗಿಸಲಿದೆ. ಆದರೆ, ದಸರಾಕ್ಕೆ ಮಂಜೂರಾಗಿರುವ ಅನುದಾನದ ಸಮರ್ಪಕ ಬಳಕೆ ಆಗಬೇಕಿದೆ.

೨೦೧೮ರಿಂದ ಸತತ ಪ್ರಕೃತಿ ವಿಕೋಪ ಹಾಗೂ ಕಳೆದ ೨ ವರ್ಷಗಳ ಕೊರೊನಾ ಕಾರಣಗಳಿಂದ ಕೊಡಗಿನ ಪ್ರವಾಸೋದ್ಯಮ ನಷ್ಟ ಅನುಭವಿಸುವಂತಾಗಿತ್ತು. ಆದರೆ, ಈ ಬಾರಿ ಬೇಸಿಗೆ ರಜೆಯಲ್ಲಿಯೇ ಪ್ರವಾಸೋದ್ಯಮ ಚೇತರಿಕೆ ಕಂಡಿತ್ತು. ಮಳೆಯಿಂದ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಲು ಕೊಂಚ ಹಿಂದೇಟು ಹಾಕಿದರೂ ಪ್ರವಾಸೋದ್ಯಮ ಲಾಭದಲ್ಲಿಯೇ ಮುಂದುವರಿದಿದೆ. ಈ ನಡುವೆ ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆದಿರುವುದು ಪ್ರವಾಸೋದ್ಯಮ ಅವಲಂಬಿತರಲ್ಲಿ ಭರವಸೆ ಮೂಡಿಸಿದೆ.
ಮೈಸೂರಿನಲ್ಲಿ ಹಗಲಿನಲ್ಲಿ ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ದೇವಲೋಕಕ್ಕೆ ಕರೆದೊಯ್ಯುತ್ತದೆ. ಹೀಗಾಗಿ ಮೈಸೂರು ದಸರಾ ನೋಡಿಕೊಂಡು ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ ಪ್ರವಾಸೋದ್ಯಮಿಗಳೊಂದಿಗೆ ಇತರರೂ ಲಾಭದ ಲೆಕ್ಕಾಚಾರದಲ್ಲಿದ್ದಾರೆ.
ಈ ಬಾರಿ ಮಡಿಕೇರಿ ದಸರಾಕ್ಕೆ ೧ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿರುವುದರಿಂದ ವಿಜೃಂಭಣೆಯಿಂದ ದಸರಾ ಆಚರಿಸಲು ದಸರಾ ಸಮಿತಿ ಹಾಗೂ ದಶಮಂಟಪಗಳ ಸಮಿತಿಗಳು ನಿರ್ಧರಿಸಿವೆ. ಆದರೆ, ಅನುದಾನ ದುರ್ಬಳಕೆಯಾಗದೆ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕಿದೆ.
ಈ ಹಿಂದೆ ನಡೆದಂತೆ ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾಗಳನ್ನು ಅರ್ಥಪೂರ್ಣವಾಗಿ ನಡೆಸಬೇಕಿದೆ.
ಚಲನವಲನಗಳನ್ನೊಳಗೊಂಡ ಕಲಾಕೃತಿಗಳ ಕಥಾ ಹಂದರವನ್ನು ಮಂಟಪಗಳಲ್ಲಿ ಅಳವಡಿಸಿ ನೋಡುಗರನ್ನು ಸೆಳೆಯುವುದು ಮಡಿಕೇರಿ ದಸರಾದ ವಿಶೇಷತೆ. ಹೀಗಾಗಿ ಈ ಬಾರಿಯೂ ಸೊಗಸಾದ ಮಂಟಪಗಳನ್ನು ನಿರ್ಮಿಸುವ ಸಿದ್ಧತೆಯಲ್ಲಿ ದಶ ಮಂಟಪಗಳು ತೊಡಗಿಸಿಕೊಂಡಿವೆ. ಜೊತೆಗೆ ಉತ್ತಮ ಮಂಟಪಗಳಿಗೆ ಪ್ರಶಸ್ತಿ ನೀಡುವುದರಿಂದ ಪಾರದರ್ಶಕ ತೀರ್ಪುಗಾರಿಕೆ ನಡೆಯುವಂತೆ ನೋಡಿಕೊಳ್ಳಬೇಕಿದೆ.
ವಿಜಯದಶಮಿ ದಿನ ರಾತ್ರಿ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ ಮಂಟಪಗಳ ಶೋಭಾಯಾತ್ರೆ ವೀಕ್ಷಿಸಲು ಜಿಲ್ಲೆಯ ಜನರೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ಇದರೊಂದಿಗೆ ಪ್ರವಾಸಿಗರು ಆಗಮಿಸಲಿದ್ದು, ಪ್ರವಾಸಿಗರನ್ನು ಅವಲಂಬಿಸಿರುವ ಉದ್ಯಮಗಳಿಗೆ ಲಾಭವಾಗುವ ನಿರೀಕ್ಷೆ ಹೊಂದಲಾಗಿದೆ. ಹೋಟೆಲ್, ಹೋಂಸ್ಟೆ, ರೆಸಾರ್ಟ್,  ಸಾಂಬಾರಪದಾರ್ಥಗಳ ಮಳಿಗೆಗಳು ಸೇರಿದಂತೆ ಕೊಡಗಿನ ಆಟೋ, ಟ್ಯಾಕ್ಸಿ ಮತ್ತಿತರ ಉದ್ಯಮಗಳಿಗೂ ಪ್ರವಾಸಿಗರ ಆಗಮನದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೆ.೨೬ರಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಕಲಾತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ಕಲ್ಪಿಸಿದರೆ ಅನುಕೂಲವಾಗಲಿದೆ. ಜೊತೆಗೆ ಸ್ಥಳೀಯ ವಿಭಿನ್ನ ಕಲೆಗಳಿಗೆ ಆದ್ಯತೆ ನೀಡಬೇಕಾಗಿದೆ.
ಕಳೆದ ಬಾರಿ ದಸರಾ ಉತ್ಸವಕ್ಕೆ ೧ ಕೋಟಿ ರೂ. ಅನುದಾನ ಬಿಡುಗಡೆ ಯಾಗಿತ್ತು. ಅದರಲ್ಲಿ ೨೫ ಲಕ್ಷ ರೂ. ದಸರಾ ಉತ್ಸವಕ್ಕೆ ಬಳಸಿ ಉಳಿದ ೭೫ ಲಕ್ಷ ರೂ.ಗಳನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗಿತ್ತು. ಈ ಬಾರಿ ೧ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಎಲ್ಲಾ ಅನುದಾನವನ್ನು ದಸರಾಕ್ಕೆ ಬಳಸ ಲಾಗುತ್ತಿದೆ. ಹಾಗಾಗಿ ಕಲಾವಿದರಿಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಮಳೆ ಬರುವ ಸಾಧ್ಯತೆ ಇರುವುದರಿಂದ ಸುಸಜ್ಜಿತ ವೇದಿಕೆ ನಿರ್ಮಾಣದ ಅವಶ್ಯಕತೆ ಇದೆ. ಕಲಾಪ್ರಿಯರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಬೇಕಿದೆ.
ದಸರಾಕ್ಕೆ ಸ್ಥಳೀಯ ಆಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ನಗರದ ಸ್ವಚ್ಛತಾ ಕಾರ್ಯ ನಡೆಸುವುದರೊಂದಿಗೆ ರಸ್ತೆಗಳಲ್ಲಿರುವ ಗುಂಡಿ ಮುಚ್ಚುವ ಕೆಲಸ ಆಗಬೇಕಿದೆ. ದಸರಾ ದಿನದಂದು ಸಾವಿರಾರು ಸಂಖ್ಯೆಯ ವಾಹನಗಳು ನಗರದತ್ತ ಆಗಮಿಸುವುದರಿಂದ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ.
ಕೊಡಗು ಸೂಕ್ಷ್ಮ ಜಿಲ್ಲೆಯಾಗಿದ್ದು, ಇತ್ತೀಚೆಗಷ್ಟೇ ಕೋಮು ಸಂಘರ್ಷ ಉಂಟಾಗುವ ಭೀತಿ ಎದುರಾಗಿತ್ತು. ಆದರೆ, ದಸರಾ ಉತ್ಸವದಲ್ಲಿ ಎಲ್ಲಾ ಧರ್ಮೀಯರು ಪಾಲ್ಗೊಳ್ಳುವುದರಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ತರಲೂ ದಸರಾ ಸಹಕಾರಿಯಾಗಲಿದೆ. ಆದ್ದರಿಂದ ಯಾವುದೇ ಗೊಂದಲಗಳಿಗೆ ಎಡೆಮಾಡದೆ ಈ ಬಾರಿಯ ಮಡಿಕೇರಿ ದಸರಾವನ್ನು ಅರ್ಥಪೂರ್ಣ ಹಾಗೂ ಪಾರದರ್ಶಕವಾಗಿ ಆಚರಿಸಬೇಕಿದೆ. ಸ್ನೇಹ ಸೌಹಾರ್ದತೆ ಸಾರುವ ಕೊಡಗಿನ ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ.
andolana

Recent Posts

ಮಂಡಿ ಮಾರುಕಟ್ಟೆ : ಹೊರಗೆ ಥಳುಕು-ಒಳಗೆ ಹುಳುಕು

ಶಿಥಿಲಗೊಂಡಿರುವ ಸುಮಾರು 130 ವರ್ಷ ಇತಿಹಾಸ ಹೊಂದಿರುವ ಕಟ್ಟಡ ಕೆ.ಪಿ.ಮದನ್ ಮೈಸೂರು : ಪುಟ್ಟದಾದರೂ ವಿಶಿಷ್ಟ ವಾಸ್ತು ಶೈಲಿಯಿಂದ ಗಮನಸೆಳೆಯುವ…

3 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ 14 ಗುರುವಾರ

3 hours ago

ಮಣ್ಣಲ್ಲಿ ಮಣ್ಣಾದ ನಟ ದಿಲೀಪ್‌ ರಾಜ್‌

ರಾಮನಗರ: ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದ ನಟ ದಿಲೀಪ್‌ ರಾಜ್‌ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ರಾಮನಗರ ತಾಲ್ಲೂಕಿನ…

16 hours ago

ಹನೂರು: ಶ್ರೀರಂಗನಾಥಸ್ವಾಮಿ ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಅನುಮತಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದಲ್ಲಿನ ಪುರಾತನ…

17 hours ago

ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದ ಸೋನಿಯಾಗಾಂಧಿ ಮನೆಗೆ ವಾಪಸ್‌

ನವದೆಹಲಿ: ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಗಾ ಗಾಂಧೀ ಅವರು ನಿಯಮಿತ ವೈದ್ಯಕೀಯ ತಪಾಸಣೆಗೆ ತೆರಳಿದ್ದರು. ಇದೀಗ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.…

17 hours ago

ಇನ್ನೊಂದು ವಾರದೊಳಗೆ ನೀಟ್-ಯುಜಿ ಪರೀಕ್ಷೆ ದಿನಾಂಕ ಘೋಷಣೆ

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಪರಿಣಾಮ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಾತಿಗೆ ಕಳೆದ ಮೇ.3ರಂದು ನಡೆದಿದ್ದ ನೀಟ್- ಯುಜಿ ಮರುಪರೀಕ್ಷೆಯ ದಿನಾಂಕವನ್ನು…

17 hours ago