ವಿಘ್ನವಿನಾಯಕನ ಹಬ್ಬದ ವೇಳೆ ತಮ್ಮ ‘ಮಾರ್ಕ್ ಆಂಟನಿ’ ಚಿತ್ರದ ಹಿಂದಿ ಆವೃತ್ತಿಯ ಬಿಡುಗಡೆಗೆ ಪ್ರಮಾಣಪತ್ರ ಪಡೆಯಲು ಹೋದ ನಟ, ನಿರ್ಮಾಪಕ ವಿಶಾಲ್ ಅವರಿಗೆ ಎದುರಾದ ವಿಘ್ನ, ಅದನ್ನು ಪರಿಹರಿಸಲು ಅವರು ನೀಡಬೇಕಾಗಿ ಬಂದ ಲಂಚದ ವಿಷಯವನ್ನು ಅವರೇ ಬಹಿರಂಗಪಡಿಸಿದ್ದರು. ತಾವು 6.5 ಲಕ್ಷ ರೂ. ಲಂಚವನ್ನು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮಧ್ಯವರ್ತಿಗಳಿಗೆ ಕೊಡಬೇಕಾಯಿತು ಎಂದು ಅವರು ದಾಖಲೆ ಸಮೇತ ತಮ್ಮ ಖಾತೆಯಲ್ಲಿ ಹೇಳಿದ್ದರು. ಮಂಡಳಿ ಇದಕ್ಕೆ ಪ್ರತಿಕ್ರಿಯೆಯಾಗಿ, ಈ ಲಂಚವನ್ನು ಪಡೆದವರು ಇಲ್ಲಿನ ಸದಸ್ಯರಾಗಲಿ, ಸಲಹಾ ಸಮಿತಿಯವರಾಗಲಿ ಅಲ್ಲ ಎಂದು ಹೇಳಿದೆ. ಭ್ರಷಾಚಾರವನ್ನು ಎಂದೂ ಸಹಿಸುವುದಿಲ್ಲ ಎಂದಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇದರ ಕುರಿತಂತೆ ಕೂಡಲೇ ತನಿಖೆಗೆ ಒತ್ತಾಯಿಸಿದೆ. ತನಿಖೆ ಆರಂಭವಾಗಿದೆ ಎನ್ನಿ. ಸಂಬಂಧಪಟ್ಟವರನ್ನು ಕಂಡುಹಿಡಿದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದೂ ಅದು ಹೇಳಿದೆ.
ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವಾಗ, ಮಂಡಳಿಯ ಜಾಲತಾಣದಲ್ಲಿರುವ ಇ-ಸಿನಿಪ್ರಮಾಣ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು, ಮಧ್ಯವರ್ತಿಗಳಿಂದ, ನಿರ್ಮಾಪಕರು ಮತ್ತು ಅವರ ತಂಡ ದೂರವಿರಬೇಕು ಎಂದೂ ಅದು ಹೇಳಿದೆ. ಮೊದಲೂ ಅಂತೆಯೇ ನಡೆಯುತ್ತಿತ್ತು.
ಪ್ರಮಾಣಪತ್ರ ಪಡೆಯಲು ಬೇಕಾದ ಕಾಲಾವಕಾಶದಂತೆ ಅದನ್ನು ನೀಡಲಾಗುವುದು, ಕೊನೆಯ ಕ್ಷಣದಲ್ಲಿ ಒತ್ತಡ ತರುವಂತಿಲ್ಲ ಎಂದಿದೆ ಮಂಡಳಿ. ಸಿನಿಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು, 1983, ವಿವಿಧ ಸಂದರ್ಭಗಳಲ್ಲಿ ಪ್ರಮಾಣೀಕರಣಕ್ಕೆ ಅನ್ವಯವಾಗುವ ಸಮಯ ಹೀಗಿದೆ:
೧. ಪ್ರಮಾಣಪತ್ರಕ್ಕೆ ಸಲ್ಲಿಸಿದ ಅರ್ಜಿಯ ಪರಿಶೀಲನೆ -7 ದಿನಗಳು
೨. ಪರಿಶೀಲನಾ ಸಮಿತಿಯ ರಚನೆ – 15 ದಿನಗಳು
೩. ಪರಿಶೀಲನಾ ಸಮಿತಿಯ ವರದಿಯನ್ನು ಅಧ್ಯಕ್ಷರಿಗೆ ರವಾನಿಸುವುದು – ೧೦ ದಿನಗಳು
೪. ಅರ್ಜಿದಾರರಿಗೆ ಮಂಡಳಿಯ ಆದೇಶದ ಪತ್ರ – 3 ದಿನಗಳು
೫. ನಿರ್ಮಾಪಕರು ಕತ್ತರಿಸಿದ ಭಾಗವನ್ನು ಒಪ್ಪಿಸುವ ಅವಧಿ – 14 ದಿನಗಳು
೬. ಕತ್ತರಿಸಿದ ಭಾಗದ ಅವಲೋಕನ – 14 ದಿನಗಳು
೭. ಪ್ರಮಾಣಪತ್ರದ ವಿತರಣೆ – 5 ದಿನಗಳು
ನಿಯಮದಂತೆ ನಿರ್ಮಾಪಕರೊಬ್ಬರು ಅರ್ಜಿ ಸಲ್ಲಿಸಿ ಎರಡು ತಿಂಗಳಿಗೂ ಹೆಚ್ಚು ಕಾಲ ಪ್ರಮಾಣಪತ್ರಕ್ಕಾಗಿ ಕಾಯಬೇಕಾಗುತ್ತದೆ. ಮಂಡಳಿಯ ಪ್ರಕಾರ 12000 ದಿಂದ 15000 ರೂ.ಗಳವರೆಗೆ ಪ್ರತಿವರ್ಷ ಚಿತ್ರಗಳು ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿರುತ್ತವೆ. ಮುಂಬೈ, ಚೆನ್ನೆ , ಬೆಂಗಳೂರು, ದೆಹಲಿ, ಕೊಲ್ಕೊತ್ತಾ, ಹೈದರಾಬಾದ್, ತಿರುವನಂತಪುರ, ಕಟಕ್, ಗೌಹಾತಿ ಪ್ರಾದೇಶಿಕ ಕಚೇರಿಗಳಲ್ಲಿ ಆಯಾ ಪ್ರದೇಶಗಳಲ್ಲಿ ತಯಾರಾದ ಚಿತ್ರಗಳನ್ನು ವೀಕ್ಷಿಸಿ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ.
ಈ ಒತ್ತಡವನ್ನು ಗಮನಿಸಿಕೊಂಡು ನಿರ್ಮಾಪಕರು ಸಾಕಷ್ಟು ಮೊದಲೇ ಚಿತ್ರಗಳ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕು ಎನ್ನುವುದು ಮಂಡಳಿಯ ಕೋರಿಕೆ.
ವಿಶಾಲ್ ಅವರ ದೂರನ್ನು ಗಮನದಲ್ಲಿಟ್ಟುಕೊಂಡು, ಕೆಲವೊಂದು ಬದಲಾವಣೆಗಳನ್ನು ಪ್ರಮಾಣೀಕರಣ ಮಂಡಳಿ ಮಾಡಿದೆ. ಯಾವುದೇ ದಾಖಲೆಗಳನ್ನು ಕಚೇರಿಯಲ್ಲಿ ಹೋಗಿ ನೀಡುವಂತಿಲ್ಲ. ನೀಡಿದರೂ ಅದನ್ನು ಸ್ವೀಕರಿಸದೆ ನಿರಾಕರಿಸಲಾಗುವುದು. ಪ್ರಮಾಣಪತ್ರದ ಪ್ರತಿಯನ್ನು ಈ ಮೊದಲು ನಿರ್ಮಾಪಕರು ಹೋಗಿ ಪಡೆದುಕೊಳ್ಳುತ್ತಿದ್ದರು. ಇನ್ನು ಮುಂದೆ ಅದನ್ನು ಸ್ಕಾ ನ್ ಮಾಡಿ ನಿರ್ಮಾಪಕರ ಇ-ಮೇಲ್‌ಗೆ ಕಳುಹಿಸಲಾಗುವುದು; ಅಗತ್ಯಬಿದ್ದರೆ, ಅದರ ಪ್ರತಿಯನ್ನು ಕಳುಹಿಸಿಕೊಡಲಾಗುತ್ತದೆ.
ವಿಶಾಲ್ ಅವರ ದೂರಿನ ಕುರಿತಂತೆ ಈಗಾಗಲೇ ಹೇಳಿದಂತೆ ಸಾಕಷ್ಟು ಪ್ರತಿಕ್ರಿಯೆಗಳು ಅವರ ಅಧಿಕೃತ ಜಾಲತಾಣ ಮತ್ತು ಸಚಿವಾಲಯದ ಜಾಲತಾಣಗಳಲ್ಲಿವೆ. ಮುಖ್ಯವಾಗಿ, ದೇಶಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಇರುವ ಭ್ರಷ್ಟಾಚಾರದ ಕುರಿತು! ಯಾವುದೇ ಕಚೇರಿಗೆ ಹೋದರೂ, ಅಲ್ಲಿನ ಮುಖ್ಯಸ್ಥರಿಂದ ಮೊದಲ್ಗೊಂಡು ಜವಾನನವರೆಗೆ ಲಂಚಕ್ಕೆ ಕೈಚಾಚುವುದನ್ನು, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದನ್ನು ತಡೆಯುವ ಕೆಲಸವೂ ಆಗಬೇಕು ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ.
ವಿಶಾಲ್ ಲಂಚ ಕೊಟ್ಟದ್ದರ ಕುರಿತೂ ಪರ, ವಿರೋಧ ಅಭಿಪ್ರಾಯಗಳಿವೆ. ಲಂಚ ಪಡೆಯುವುದಷ್ಟೇ ಅಲ್ಲ, ಲಂಚ ನೀಡುವುದೂ ಅಪರಾಧ ಎನ್ನುವ ಹಿನ್ನೆಲೆಯಲ್ಲೂ ಪ್ರತಿಕ್ರಿಯೆಗಳಿದ್ದವು. ತಮ್ಮ ಚಿತ್ರವನ್ನು ಕೂಡಲೇ ವೀಕ್ಷಿಸಲು ಮೂರು ಲಕ್ಷ ರೂ., ಪ್ರಮಾಣ ಪತ್ರ ನೀಡಲು ಮೂರೂವರೆ ಲಕ್ಷ ರೂ.ಗಳನ್ನು ಕೊಡಬೇಕಾಯಿತು. ಸಿನಿಮಾಗಳಲ್ಲಿ ಭ್ರಷ್ಟಾಚಾರ ತೋರಿಸುವುದೇನೋ ಸರಿ, ಆದರೆ ನಿಜಜೀವನದಲ್ಲಿ ಅದನ್ನು ಅರಗಿಸಿಕೊಳ್ಳಲೂ ಆಗುತ್ತಿಲ್ಲ ಎಂದಿರುವ ವಿಶಾಲ್ ಅವರ ನಡೆಯನ್ನೂ ಮಂದಿ ಪ್ರಶ್ನಿಸಿದ್ದಾರೆ. ಲಂಚ ಪಡೆಯುವಷ್ಟೇ ಲಂಚ ನೀಡುವುದೂ ಅಪರಾಧ, ಶಿಕ್ಷಾರ್ಹ ಎನ್ನುವುದಾದರೆ, ಇಲ್ಲಿ ಇಬ್ಬರೂ ಶಿಕ್ಷಾರ್ಹರಲ್ಲವೇ ಎಂದು ಪ್ರಶ್ನಿಸಿದವರೂ ಇದ್ದಾರೆ.
ಸಿನಿಮಾಟೋಗ್ರಾಫ್ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ಆಗಿದೆ. ಈ ಹಿಂದೆ ಇದ್ದ ಯು, ಎ, ಯು/ಎ, ಎಸ್, ವಿಭಾಗೀಕರಣ ವಯೋಮಾನಕ್ಕನುಗುಣವಾಗಿ ಬದಲಾಗಿದೆ. ಅದರ ಆದೇಶ ಇನ್ನೂ ಬಂದಿಲ್ಲ. ಈ ಕಾಯ್ದೆಯಂತೆ ಹಲವು ನಿಯಮಗಳ ಉಲ್ಲಂಘನೆ ನಡೆಯುತ್ತಲೇ ಇದೆ. ಅದನ್ನು ಸಂಬಂಧಪಟ್ಟವರು ಗಮನಿಸುವುದೇ ಇಲ್ಲ ಅನಿಸುತ್ತದೆ.
ಯಾವುದೇ ಚಿತ್ರ ಪ್ರಮಾಣಪತ್ರ ಪಡೆದ ಮೇಲೆ, ಅದು ಪ್ರಚಾರಕ್ಕಾಗಿ ನೀಡುವ ಜಾಹೀರಾತು, ಭಿತ್ತಿಪತ್ರಗಳಲ್ಲಿ ಅದನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಇಲ್ಲದೇ ಇದ್ದರೆ ಅದು ಅಪರಾಧ. ಆದರೆ ನಮ್ಮಲ್ಲಿ ಬಹುತೇಕ ಮಂದಿ ನಿರ್ಮಾಪಕರಿಗೆ ಇದು ತಿಳಿದಂತಿಲ್ಲ. ಇದರಂತೆಯೇ, ಯಾವುದೇ ಚಿತ್ರ ವಯಸ್ಕರ ಚಿತ್ರಕ್ಕಿರುವ ‘ಎ’ ಪ್ರಮಾಣಪತ್ರ ಪಡೆದಿದ್ದರೆ, ಅಂತಹ ಚಿತ್ರಗಳ ಪ್ರದರ್ಶನವಾಗುವ ಚಿತ್ರಮಂದಿರಗಳು, ೧೮ ವರ್ಷಕ್ಕಿಂತ ಕಡಿಮೆ ಪ್ರಾಯದವರಿಗೆ ಪ್ರವೇಶ ನೀಡುವಂತಿಲ್ಲ. ಮೂರು ವರ್ಷಗಳವರೆಗಿನ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ವರೆಗಿನ ದಂಡ ಇದಕ್ಕಿದೆ. ಇದಕ್ಕಾಗಿ ಚಿತ್ರಮಂದಿರದ ಲೈಸನ್ಸ್ ಕೂಡ ರದ್ದು ಮಾಡಬಹುದು. ಚಿತ್ರಮಂದಿರದ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಮಾಣೀಕರಣ ಮಂಡಳಿಯ ಸದಸ್ಯರೋ, ಸಲಹಾ ಸಮಿತಿಯ ಸದಸ್ಯರೋ ಈ ಕುರಿತ ದೂರನ್ನು ನೀಡಬಹುದು. ಅವರ ಅಽಕಾರ, ಅದು ಕೇಂದ್ರ ಸರ್ಕಾರದ ಕೆಲಸಕ್ಕೆ ಸಮಾನವಾಗಿರುತ್ತದೆ. ಪ್ರೇಕ್ಷಕರೂ ಈ ದೂರನ್ನು ದಾಖಲಿಸಬಹುದು.
ಪ್ರಮಾಣಪತ್ರ ಪಡೆಯದ ಚಿತ್ರಗಳ ಪ್ರದರ್ಶನ ಕೂಡ ಶಿಕ್ಷಾರ್ಹ ಅಪರಾಧ. ಅದು ಕೂಡ ಜಾಮೀನು ರಹಿತ. ಚಿತ್ರಗಳು ಪ್ರಮಾಣಪತ್ರ ಪಡೆಯುವ ವೇಳೆ ಅದರಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಿದ್ದರೆ ಅದರ ವಿವರವನ್ನು ಪ್ರಮಾಣಪತ್ರದ ಹಿಂದಿನ ಪುಟದಲ್ಲಿ ನಮೂದಿಸುತ್ತಾರೆ. ಚಿತ್ರಮಂದಿರ ಪ್ರವೇಶಿಸುವ ಪ್ರೇಕ್ಷಕರಿಗೆ ಕಾಣುವಂತೆ ಅದನ್ನು ಪ್ರದರ್ಶಿಸಬೇಕು.
ಇವನ್ನು ಪರೀಕ್ಷಿಸಲು ಪ್ರಮಾಣೀಕರಣ ಮಂಡಳಿಯ ಸದಸ್ಯರಾಗಲಿ, ಸಲಹಾ ಸಮಿತಿಯ ಸದಸ್ಯರಾಗಲಿ, ಯಾವುದೇ ಸಮಯದಲ್ಲಿ ಚಿತ್ರಮಂದಿರಗಳಿಗೆ ಪ್ರವೇಶಿಸುವ ಅಽಕಾರ ಹೊಂದಿರುತ್ತಾರೆ, ಅವರಿಗೆ ಆಸನ ವ್ಯವಸ್ಥೆ ಮಾಡಿಕೊಡಬೇಕಾದ ಕರ್ತವ್ಯ ಅಲ್ಲಿನ ಮಾಲೀಕರದ್ದು.
ಪ್ರಮಾಣೀಕರಣ ಮಂಡಳಿಯ ಒತ್ತಡ, ಸಮಸ್ಯೆಗಳೇನೇ ಇರಲಿ, ನಿರ್ಮಾಪಕರ ಒತ್ತಡವನ್ನೂ ಗಮನದಲ್ಲಿಟ್ಟುಕೊಂಡು ಅದು ಕೆಲಸ ಮಾಡುತ್ತಿದೆ ಎನ್ನುವ ಮಾತೂ ಇದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ, ನವೆಂಬರ್ ಡಿಸೆಂಬರ್ ತಿಂಗಳು ಹೆಚ್ಚು ಒತ್ತಡದ ಕಾಲ. ರಾಜ್ಯ ಸರ್ಕಾರದ ಸಹಾಯಧನ ಮತ್ತು ಪ್ರಶಸ್ತಿಗಳಿಗೆ ಚಿತ್ರಗಳನ್ನು ಪರಿಗಣಿಸುವ ಅವಽ ಕ್ಯಾಲೆಂಡರ್ ವರ್ಷವಾದ್ದರಿಂದ ಈ ಒತ್ತಡ. ಬೆಂಗಳೂರು ಪ್ರಾದೇಶಿಕ ಕಚೇರಿ ಕಳೆದೆರಡು ವರ್ಷಗಳಿಂದ ನಿರ್ಮಾಪಕರಿಗೆ ಅನುಕೂಲಕರ ವಾತಾವರಣ ಕಲ್ಪಿಸಿದೆ ಎನ್ನಲಾಗುತ್ತಿದೆ.
ಯಾವುದೇ ಭಾಷೆಯ ಚಿತ್ರ ಇತರ ಭಾಷೆಗಳಿಗೆ ಡಬ್ ಆಗುವುದಾದರೆ, ಮೂಲ ಚಿತ್ರಕ್ಕೆ ಪ್ರಮಾಣಪತ್ರ ಪಡೆದ ಜಾಗದಲ್ಲೇ ಅದನ್ನೂ ಪಡೆಯಬೇಕು ಎಂದು ಸಿನಿಮಾಟೋಗ್ರಫಿ ಕಾಯ್ದೆ ಹೇಳುತ್ತದೆ. ಒಂದು ಅಪವಾದದ ಹೊರತಾಗಿ! ಹಿಂದಿ ಭಾಷೆಗೆ ಡಬ್ ಆದ ಚಿತ್ರಗಳು ಪ್ರಮಾಣಪತ್ರವನ್ನು ಮುಂಬೈಯಲ್ಲೇ ಪಡೆಯಬೇಕು! ಒಂದು ಭಾಷೆಯಿಂದ ಇನ್ನೊಂದು ಭಾರತೀಯ ಭಾಷೆಗೆ ಡಬ್ ಆಗುವ ಚಿತ್ರ, ಮೂಲ ಚಿತ್ರ ಪ್ರಮಾಣಪತ್ರ ಪಡೆದ ಜಾಗದಲ್ಲೇ ಪಡೆಯಬೇಕು ಎನ್ನುವ ನಿಯಮ ಹಿಂದಿಗೇಕೆ ಲಾಗುವಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ವಿಶಾಲ್ ಅನುಭವಕ್ಕೂ ಇದಕ್ಕೂ ಸಂಬಂಧ ಇದೆಯೇ?
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…