ಎಡಿಟೋರಿಯಲ್

ಸಾಲುಸಾಲು ಸೋಲಿನ ಕಹಿಯುಂಡ ಕಾಂಗ್ರೆಸ್ ಪಕ್ಷಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಸಾರಥ್ಯ!

ಎಂಭತ್ತು ವರ್ಷದ ಮಾನಪ್ಪ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸತತ ಸೋಲಿನ ಕಹಿಯುಂಡ ಕಾಂಗ್ರೆಸ್ ಪಕ್ಷಕ್ಕೆ ಖರ್ಗೆ ಅವರು ಹೊಸ ಶಕ್ತಿ ತುಂಬಲಿದ್ದಾರೆ ಎಂಬ ನಿರೀಕ್ಷೆ ಕಾಂಗ್ರೆಸ್ ಪಕ್ಷದಲ್ಲಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವ ಕರ್ನಾಟಕದ ಪಾಲಿಗೂ ಈ ಬೆಳವಣಿಗೆ ನಿರ್ಣಾಯಕ. ರಾಜ್ಯದಲ್ಲಿ ಮರಳಿ ಅಧಿಕಾರಗಳಿಸುವ ಕಾಂಗ್ರೆಸ್ ಪಕ್ಷದ ಆಸೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಸಾರಥ್ಯವಹಿಸಿರುವುದು ಒತ್ತಾಸೆಯಾಗಲಿದೆ.

ಬಹಳ ವರ್ಷಗಳ ಕಾಲ ಕಾಂಗ್ರೆಸ್ ಮತಬ್ಯಾಂಕ್ ಎಂದೇ ಕರೆಯಲಾಗುತ್ತಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತದಾರರು ಕಳೆದೊಂದುವರೆ ದಶಕಗಳಿಂದ ಬೇರೆ ಬೇರೆ ಪಕ್ಷಗಳಿಗೆ ಚದುರಿ ಹೋಗಿದ್ದರು. ಅವರನ್ನು ಒಗ್ಗೂಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಆಗಿಂದಾಗ್ಗೆ ಮಾಡುತ್ತ, ವಿಫಲವಾಗುತ್ತಿತ್ತು. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ಅವರೆಲ್ಲರನ್ನೂ ಒಗ್ಗೂಡಿಸುವುದು ಸಾಧ್ಯವೆಂಬುದು ಕಾಂಗ್ರೆಸ್‌ನ ಅಧಿಕಾರ ರಾಜಕಾರಣದ ಲೆಕ್ಕಾಚಾರ.

ಅಧಿಕಾರ ರಾಜಕಾರಣದ ಲೆಕ್ಕಾಚಾರವನ್ನು ಮೀರಿ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷತೆ ವಹಿಸುವ ಅರ್ಹತೆ ಇರುವ ಬೆರಳೆಣಿಕೆಯ ನಾಯಕರಲ್ಲೊಬ್ಬರಾಗಿದ್ದರು. ಅವರೀಗ ನೇಮಕಗೊಂಡ ಅಧ್ಯಕ್ಷರಾಗದೇ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಆಂತರಿಕ ಪ್ರಜಾಪ್ರಭುತ್ವವನ್ನು ಜೀವಂತವಾಗಿಟ್ಟುಕೊಂಡಿದೆ ಎಂಬುದೀಗ ಮತ್ತೆ ಸಾಬೀತಾಗಿದೆ. ೨೪ ವರ್ಷಗಳಲ್ಲಿ ಗಾಂಧಿಯೇತರ ಕುಟುಂಬದ ಮೊದಲ ಅಧ್ಯಕ್ಷರಾಗಿದ್ದಾರೆ. ಎಸ್ ನಿಜಲಿಂಗಪ್ಪ ನಂತರ ಕರ್ನಾಟಕದ ಎರಡನೇ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಾಬು ಜಗಜೀವನ್ ರಾಮ್ ನಂತರ ಪಕ್ಷದ ಅತ್ಯುನ್ನತ ಹುದ್ದೆಗೇರಿದ ಎರಡನೇ ದಲಿತ ನಾಯಕರಾಗಿದ್ದಾರೆ.

ಐದು ದಶಕಗಳ ರಾಜಕೀಯ ಜೀವನದಲ್ಲಿ ಎಂದೂ ಕಳಂಕಗಳನ್ನು ಮೆತ್ತಿಕೊಳ್ಳದ, ವಿವಾದಕ್ಕೆ ಒಳಗಾಗದ ಸೌಮ್ಯ ಸ್ವಭಾವದ ಮಲ್ಲಿಕಾರ್ಜುನ ಖರ್ಗೆ ಅವರು ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಸೋಲುವವರೆಗೂ ‘ಸೋಲಿಲ್ಲದ ಸರದಾರ’ ಎಂದೇ ಹೆಸರಾಗಿದ್ದರು. ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದಿಂದ ಸತತ ಒಂಭತ್ತು ಅವಧಿಗೆ ಆಯ್ಕೆಯಾಗಿದ್ದಾರೆಂಬುದೇ ಅವರ ಜನಪ್ರಿಯತೆ ಮತ್ತು ಪ್ರಾಮಾಣಿಕತೆಯನ್ನು ಸಂಕೇತಿಸುತ್ತದೆ.

ಕಾರ್ಮಿಕ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ೧೯೬೯ ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಈ ೫೩ ವರ್ಷಗಳ ಅವಧಿಯಲ್ಲಿ ಒಂದೊಂದೇ ಮೆಟ್ಟಿಲೇರುತ್ತಾ ಬಹು ಎತ್ತರಕ್ಕೆ ಏರಿದವರು. ಕರ್ನಾಟಕದ ಮುಖ್ಯಮಂತ್ರಿಯೂ ಆಗಬೇಕಿದ್ದ ಖರ್ಗೆ ಅವರಿಗೆ ಆ ಸ್ಥಾನ ಜಾತಿ ರಾಜಕಾರಣದಿಂದಲೋ, ಅಧಿಕಾರ ರಾಜಕಾರಣದ ಲೆಕ್ಕಚಾರದಿಂದಲೋ ತಪ್ಪಿ ಹೋಗಿದೆ. ಅದಕ್ಕಾಗಿ ಅವರೆಂದೂ ಪಕ್ಷವನ್ನು ದೂಷಿಸಿಲ್ಲ. ಪಕ್ಷದ ವಿರುದ್ಧ ಹೆಜ್ಜೆ ಇಟ್ಟಿಲ್ಲ.

ಗಾಂಧಿ ಕುಟುಂಬದ ಅತ್ಯಂತ ನಿಷ್ಠ ಎಂಬ ಹಣೆಪಟ್ಟಿ ಅವರಿಗೆ ಇದೆ. ಮಲ್ಲಿಕಾರ್ಜುನ ಖರ್ಗೆ ಅವರಂತಹ ನಿಷ್ಕಳಂಕ, ವಿವಾದತೀತ ವ್ಯಕ್ತಿಗಳು ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದರೆ ಅದಕ್ಕೆ ಗಾಂಧಿ ಕುಟುಂಬ ಹೆಮ್ಮೆಪಡಬೇಕು. ಆ ಹೆಮ್ಮೆಯಿಂದಾಗಿಯೇ ಅಶೋಕ್ ಗೆಲ್ಹಾಟ್ ಅವರು ಎಐಸಿಸಿ ಅಧ್ಯಕ್ಷ ಚುನಾವಣೆ ಸ್ಪರ್ಧಿಸಲು ಹಿಂಜರಿದಾಗ, ಖರ್ಗೆ ಅವರನ್ನು ಕಣಕ್ಕೆ ಇಳಿಸಲಾಯಿತು.

ಗಾಂಧಿ ಕುಟುಂಬಕ್ಕಿರುವ ನಿಷ್ಠೆಯಿಂದ ಮಾತ್ರವೇ ಎಐಸಿಸಿ ಅಧ್ಯಕ್ಷ ಗಾದಿ ಸಿಕ್ಕಿದೆ ಎಂದರೆ ಅದು ಮಲ್ಲಿಕಾರ್ಜುನ ಖರ್ಗೆ ಅವರ ಸಾಮರ್ಥ್ಯವನ್ನು ಅನುಮಾನಿಸಿ, ವ್ಯಕ್ತಿತ್ವಕ್ಕೆ ಅವಮಾನಿಸಿದಂತಾಗುತ್ತದೆ. ೨೦೧೪ರ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಗಟ್ಟಿ ದನಿಯಾದವರು ಮಲ್ಲಿಕಾರ್ಜುನ ಖರ್ಗೆ. ಲೋಕಸಭೆಯಲ್ಲೇ ಇರಲಿ, ರಾಜ್ಯಸಭೆಯಲ್ಲೇ ಇರಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಡಕತ್ತರಿಗೆ ಸಿಕ್ಕಿಸುವ ಚಾಕಚಕ್ಯತೆ ಇರುವ ನಾಯಕ. ಈಗಲೂ ಪ್ರಧಾನಿ ಮೋದಿ ಅವರಿಗೆ ನಿಜವಾದ ಎದುರಾಳಿಯಾಗಬಲ್ಲ ಸಮರ್ಥ ವ್ಯಕ್ತಿ ಖರ್ಗೆ ಅವರು.

ರಾಜ್ಯದಲ್ಲಿ ವಿವಿಧ ಖಾತೆಗಳ ಸಚಿವರಾಗಿ, ಕೇಂದ್ರದಲ್ಲಿ ರೈಲ್ವೆಯಂತಹ ಮಹತ್ವದ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ ಖರ್ಗೆ ಅವರ ಹೆಚ್ಚುಗಾರಿಕೆ ಇರುವುದು ಅವರ ತಿಳುವಳಿಕೆ ಮತ್ತು ಸಂಯಮದ ನಡೆ ನುಡಿಯಲ್ಲಿ. ದಲಿತರು ಮಾತ್ರವಲ್ಲ, ದುರ್ಬಲರೆಲ್ಲರ ಏಳಿಗೆಗಾಗಿ ಶ್ರಮಿಸುತ್ತಾ ಬಂದವರು.
ಅವರ ಹಿರಿತನ ಮತ್ತು ಅನುಭವ ಸಾಲು ಸಾಲು ಸೋಲಿನ ಕಹಿಯುಂಡ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ನೆರವಾಗಲಿದೆ. ಖರ್ಗೆ ಅವರು ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸುವುದು ಆ ಪಕ್ಷಕ್ಕೆ ಮಾತ್ರವೇ ಮುಖ್ಯವಲ್ಲ. ದೇಶಕ್ಕೂ ಅದು ಮುಖ್ಯ. ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ, ಬಹುಮತದ ಬೆಂಬಲದೊಂದಿಗೆ ಚರ್ಚೆಯೇ ಇಲ್ಲದೇ ಹೊಸ ಕಾನೂನು ರೂಪಿಸುವ, ಕಾನೂನನ್ನು ಬೇಕಾದಂತೆ ಪರಿವರ್ತಿಸುವ ಪ್ರವೃತ್ತಿಗೆ ತಡೆ ಹಾಕಲು ಪ್ರಬಲ ಪ್ರತಿಪಕ್ಷವೊಂದರ ಅಗತ್ಯವಿದೆ. ಕಾಂಗ್ರೆಸ್ ಪಕ್ಷವನ್ನು ಪ್ರಬಲ ಪ್ರತಿ ಪಕ್ಷವಾಗಿ ರೂಪಿಸುವ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಆ ಪಕ್ಷದ ಅಧ್ಯಕ್ಷರಾಗಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ, ಹೊಸ ರಾಜಕೀಯ ಶಕೆಯೊಂದಕ್ಕೆ ನಾಂದಿ ಹಾಡಲಿದ್ದಾರೆ ಎಂಬ ನಿರೀಕ್ಷೆ ಇದೆ. ಆ ನಿರೀಕ್ಷೆಗಳನ್ನು ಮಲ್ಲಿಕಾರ್ಜುನ ಖರ್ಗೆ ಅವರು ಹುಸಿ ಮಾಡಬಾರದು.

andolana

Recent Posts

ಕೆ.ಜೆ.ಜಾರ್ಜ್‌ ರಾಜೀನಾಮೆ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಿದ್ದರು ಎಂಬ…

16 mins ago

ವಿಕಲಚೇತನರಿಗಾಗಿಯೇ ಬೃಹತ್‌ ಉದ್ಯೋಗ ಮೇಳ ಆಯೋಜನೆ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

ಬೆಂಗಳೂರು: ವಿಕಲಚೇತನರಿಗಾಗಿಯೇ ಮುಂದಿನ ಮೂರು ತಿಂಗಳಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್…

17 mins ago

ಕೊಡಗಿನಲ್ಲಿ ಮುಂದುವರೆದ ಆನೆ–ಮಾನವ ಸಂಘರ್ಷ: ಕಾಡಾನೆ ದಾಳಿಗೆ ವ್ಯಕ್ತಿ ದಾರುಣ ಸಾವು

ಕೊಡಗು: ಜಿಲ್ಲೆಯಲ್ಲಿ ಆನೆ–ಮಾನವ ಸಂಘರ್ಷ ಮತ್ತೆ ಜೀವ ಬಲಿ ಪಡೆದಿದೆ. ಸಿದ್ದಾಪುರ ಸಮೀಪದ ಗೌರಿ ಬೆಟ್ಟ ಬಳಿ ಕಾಡಾನೆ ದಾಳಿಗೆ…

39 mins ago

ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ಸಾವು ಪ್ರಕರಣ: ದುರಂತದ ಸಂಪೂರ್ಣ ತನಿಖೆಯಾಗಲಿದೆ ಎಂದ ಯದುವೀರ್‌ ಒಡೆಯರ್‌

ಮಡಿಕೇರಿ: ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಕತೆ ಕಟ್ಟುತ್ತಿದ್ದಾರೆ ಎಂದು…

1 hour ago

ಶಾಲಾ ವಾಹನವನ್ನು ಅಟ್ಟಿಸಿಕೊಂಡು ಬಂದ ಒಂಟಿ ಸಲಗ: ಭಯಭೀತರಾದ ವಿದ್ಯಾರ್ಥಿಗಳು

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ಶಾಲಾ ಬಸ್ಸನ್ನು ಒಂಟಿ ಸಲಗ ಅಟ್ಟಿಸಿಕೊಂಡು ಬಂದ ಘಟನೆ…

2 hours ago

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ: ಮಹದೇಶ್ವರ ಬೆಟ್ಟಕ್ಕೆ ಹೋಗದಂತೆ ಇಮ್ಮಡಿ ಮಹದೇವಸ್ವಾಮಿಗೆ ನಿರ್ಬಂಧ

ಚಾಮರಾಜನಗರ: ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು…

2 hours ago