ಎಡಿಟೋರಿಯಲ್

ಸಾವಿರಾರು ಜನರನ್ನು ‘ವಿಧವೆ’ಯರನ್ನಾಗಿಸಿದ ‘ಮ್ಯಾಡಮ್ ಗಿಲೋಟಿನ್’!

ಗಿಲೊಟಿನ್ ಎಂಬ ಶಬ್ದ ಕೇಳಿದರೆ, ಓದಿದರೆ ಇದರ ಬಗ್ಗೆ ತಿಳಿದವರಿಗೆ ಮೈಯಲ್ಲಿ ಸಣ್ಣಗೆ ನಡುಕ ಹುಟ್ಟುತ್ತದೆ! ಮಾನವನ ಭಯಾನಕ ಆವಿಷ್ಕಾರಗಳಲ್ಲಿ ಇದೂ ಒಂದು. ಫ್ರಾನ್ಸಿನಲ್ಲಿ ಆವಿಷ್ಕಾರಗೊಂಡ ಈ ಶಿರಶ್ಚೇಧ ಯಂತ್ರ ಕತ್ತರಿಸಿ ಹಾಕಿದ ರುಂಡಗಳಿಗೆ ನಿಖರವಾದ ಲೆಕ್ಕವಿಲ್ಲ! ಆದರೂ, ಈ ಸಂಖ್ಯೆ ೧೭,೦೦೦ ದಿಂದ ೪೦,೦೦೦ ಎಂದು ಅಂದಾಜಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ ಈ ಶಿರಶ್ಚೇಧಕ ಯಂತ್ರ ಆವಿಷ್ಕಾರಗೊಂಡುದುದೇ ಮಾನವೀಯತೆಯ ನೆಲೆಯಲ್ಲಿ ಎಂಬುದು ಕುತೂಹಲದ ಸಂಗತಿ! ಮತ್ತು, ಫ್ರೆಂಚ್ ಕ್ರಾಂತಿಗೂ ಈ ಗಿಲೊಟಿನ್ ಯಂತ್ರಕ್ಕೂ ನೇರ ಸಂಬಂಧವಿದೆ ಎನ್ನುವುದು ಇನ್ನೊಂದು ಸ್ವಾರಸ್ಯದ ವಿಚಾರ.

ಗಿಲೊಟಿನ್‌ನ ಆವಿಷ್ಕಾರಕ್ಕೆ ಮೊದಲು ಮರಣ ದಂಡನೆಗೆ ಗುರಿಯಾದವರನ್ನು ವಧಿಸುವ ಕ್ರಮಗಳು ಬಹಳ ಕ್ರೂರವೂ, ಅನಾಗರಿಕವೂ ಆಗಿದ್ದವು. ಸಾಮಾನ್ಯ ಅಪರಾಧಿಗಳಾಗಿದ್ದರೆ ಅವರನ್ನು ನೇಣು ಹಾಕುವುದು, ಕೈಕಾಲುಗಳನ್ನು ಎತ್ತು, ಕುದುರೆಗಳಿಗೆ ಕಟ್ಟಿ ಅವುಗಳು ನಾಲ್ಕು ದಿಕ್ಕುಗಳಲ್ಲಿ ಎಳೆಯುವುದು ಮೊದಲಾದ ಕ್ರಮಗಳಲ್ಲಿ ಸಾಯಿಸಿದರೆ, ಗಣ್ಯ ಅಪರಾಧಿಗಳಾದರೆ ಖಡ್ಗದಿಂದ ರುಂಡ ತೆಗೆಯುವುದು, ಗುಂಡಿಟ್ಟು ಕೊಲ್ಲುವುದು ಮಾಡಲಾಗುತ್ತಿತ್ತು. (ಒಂದೇ ಏಟಿಗೆ ಹೆಚ್ಚು ನೋವಿಲ್ಲದಂತೆ ಮರಣವಾಗಲು ಅಪರಾಧಿಯ ಸಂಬಂಧಿಕರು ವಧಾಕಾರನಿಗೆ ಖಡ್ಗವನ್ನು ಹೆಚ್ಚು ಹರಿತಗೊಳಿಸಲು ಲಂಚ ನೀಡುವುದೂ ಇದ್ದಿತ್ತು!).

ಆಗ ಫ್ರಾನ್ಸಿನ ಚಕ್ರವರ್ತಿಯಾಗಿದ್ದ ಹದಿನಾರನೇ ಲೂಯಿ, ಕಡಿಮೆ ನೋವು ತರುವ ಹೊಸ ರೀತಿಯ ಮರಣ ದಂಡನೆ ಕ್ರಮವನ್ನು ಕಂಡು ಹಿಡಿಯಲು ಆಂಟೋನಿ ಲೂಯಿ ಎಂಬ ರಾಜವೈದ್ಯನ ಮುಂದಾಳತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದನು. ಆ ಸಮಿತಿಯ ಸದಸ್ಯರಲ್ಲಿ ದೇಹ ರಚನಾ ಶಾಸ್ತ್ರದ ಪ್ರಾಧ್ಯಾಪಕನೂ, ಪ್ಯಾರೀಸಿನ ವೈದ್ಯನೂ ಆಗಿದ್ದ ಡಾ. ಜೋಸೆಫ್ ಇಗ್ನೇಸ್ ಗಿಲೊಟಿನ್ ಎಂಬುವವನೂ ಒಬ್ಬ.

ಡಾ ಗಿಲೊಟಿನ್ ಮೊದಲಿನಿಂದಲು ಮರಣ ದಂಡನೆ ಶಿಕ್ಷೆಯನ್ನು ವಿರೋಧಿಸುತ್ತ ಬಂದವನು. ಮರಣ ದಂಡನೆಗೆ ಬಳಸುವ ಅಮಾನವೀಯವಾದ ಕ್ರಮಗಳನ್ನು ಕಂಡು ಮನನೊಂದ ಆತ ಮರಣ ದಂಡನೆ ಶಿಕ್ಷೆಯ ವಿರುದ್ಧ ದೇಶವ್ಯಾಪೀ ಚರ್ಚೆಯನ್ನು ಹುಟ್ಟು ಹಾಕಿದ್ದನು. ಆದರೆ, ಅಧಿಕಾರದಲ್ಲಿದ್ದವರ ಕೈಯಲ್ಲಿ ತಮಗಾಗದವರನ್ನು ಮುಗಿಸಲು ಮರಣ ದಂಡನೆ ಒಂದು ಅಸ್ತ್ರವಾಗಿದ್ದುದರಿಂದ ಅವನ ಶ್ರಮ ಫಲಪ್ರದವಾಗಿರಲಿಲ್ಲ. ಆಗ ಆತ, ಮರಣ ದಂಡನೆ ಶಿಕ್ಷೆಯನ್ನು ನಿಲ್ಲಿಸಲಾಗದಿದ್ದರೂ ಅದು ಕೊನೇ ಪಕ್ಷ ತುಸು ಕಡಿಮೆ ನೋವಿದಾದರೂ ಆಗಿರಲಿ ಎಂಬ ಇಂಗಿತದಿಂದ ಈ ಶಿರಶ್ಚೇಧಕ ಯಂತ್ರವನ್ನು ಪ್ರತಿಪಾದಿಸಿದನು. ೧೩೦೭ರಷ್ಟು ಹಿಂದೆಯೇ ಐರ್‌ಲ್ಯಾಂಡ್, ಇಟಲಿ ಮತ್ತು ದಕ್ಷಿಣ ಫ್ರಾನ್ಸಿನಲ್ಲಿ ಇಂತಹ ಕೊಲ್ಲುವ ಯಂತ್ರಗಳು ಬಳಕೆಯಲ್ಲಿದ್ದವು. ಅವುಗಳು ಗಣ್ಯ, ಕುಲೀನ ಅಪರಾಧಿಗಳನ್ನು ಕೊಲ್ಲಲಷ್ಟೇ ಬಳಕೆಯಾಗುತ್ತಿದ್ದವು. ಡಾ ಗಿಲೊಟಿನ್ ಶಿಫಾರಸು ಮಾಡಿ ರೂಢಿಗೆ ಬಂದ ಈ ಯಂತ್ರಕ್ಕೆ ಅವನ ಗೌರವಾರ್ಥ ‘ಗಿಲೊಟಿನ್’ ಎಂಬ ಅವನ ಮನೆತನದ ಹೆಸರನ್ನೇ ನೀಡಲಾಯಿತು.

ಆದರೆ, ಮುಂದೆ ಈ ಯಂತ್ರ ವಿವೇಚನಾ ರಹಿತವಾಗಿ ರುಂಡಗಳನ್ನು ಹಾರಿಸುವುದಕ್ಕೆ ಬಳಕೆಯಾಗುವುದನ್ನು ನೋಡಿ ಜಿಗುಪ್ಸೆಗೊಂಡ ಡಾ. ಗಿಲೊಟಿನ್ನ ವಂಶಸ್ಥರು ‘ಗಿಲೊಟಿನ್’ ಎಂಬ ತಮ್ಮ ಮನೆತನದ ಹೆಸರನ್ನೇ ಬದಲಾಯಿಸಿಕೊಂಡರು!

೧೭೯೨ರ ಜನವರಿ ೨೫ರಂದು ನಿಖೊಲಸ್ ಜಾಕಿಸ್ ಎಂಬ, ಜನರನ್ನು ಕ್ರೂರವಾಗಿ ಕೊಲ್ಲುತ್ತಿದ್ದ ಒಬ್ಬ ಸ್ಥಳೀಯ ಕ್ರಿಮಿನಲ್ ಗಿಲೊಟಿನ್‌ನ ಮೊದಲ ಬಲಿ. ೧೭೯೩ರ ಜೂನ್-೧೭೯೪ರ ಜುಲೈ ನಡುವಿನ ಹದಿನಾಲ್ಕು ತಿಂಗಳು ೧೭೮೯ರಲ್ಲಿ ಪ್ರಾರಂಭಗೊಂಡ ಫಾನ್ಸ್ ಕ್ರಾಂತಿಯ ಅತ್ಯಂತ ರಕ್ತಸಿಕ್ತ ಅವಧಿ. ಆ ಕರಾಳ ವರ್ಷದಲ್ಲಿ ಈ ಶಿರಶ್ಚೇಧಕ ಯಂತ್ರ ಶ್ರೀಸಾಮಾನ್ಯರು, ಸೂಳೆಯರು, ಬುದ್ಧಿಜೀವಿಗಳು, ರಾಜಕಾರಣಿಗಳು ಅಥವಾ ರಾಜ ಮಹಾರಾಜಗಳು ಎಂಬ ಭೇದವಿಲ್ಲದೆ ೧,೬೦೦ರಿಂದ ೪,೦೦೦ ಜನರ ರುಂಡಗಳನ್ನು ಕತ್ತರಿಸಿತು.

ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಇತರರ ರುಂಡಗಳನ್ನು ತೆಗೆಯಲು ತನ್ನನ್ನು ಬಳಸಿಕೊಂಡವರ ರುಂಡಗಳನ್ನೂ ತೆಗೆಯಿತು. ತಾನು ರೂಢಿಗೆ ಬರಲು ಕಾರಣನಾದ ಸರ್ವಾಧಿಕಾರಿ ಹದಿನಾರನೇ ಲೂಯಿಯನ್ನೂ ಇದು ಬಿಡಲಿಲ್ಲವೆಂದರೆ ಇದರ ಭಯಾನಕತೆಯನ್ನು ಊಹಿಸಬಹುದು!

ಗಿಲೊಟಿನ್ ಮುಂದೆ ಜನರ ಮನೋರಂಜನೆಯ ಯಂತ್ರವಾಗಿ ಬದಲಾದದ್ದು ಇನ್ನೊಂದು ವಿಪರ್ಯಾಸ. ಸಾಮಾನ್ಯ ಜನರು ಇದನ್ನು ಬಹು ಮುದ್ದಿನಿಂದ ‘ಮೇಡಮ್ ಗಿಲೊಟಿನ್’ ಎಂದು ಕರೆಯುತ್ತಿದ್ದರೆ, ಫ್ರಾನ್ಸಿನ ಅಂಡರ್ವಲ್ರ್ಡ್ ಇದಕ್ಕೆ ‘ದಿ ವಿಡೋ (ವಿಧವೆ)’ ಎಂಬ ಹೆಸರು ಕೊಟ್ಟಿತ್ತು.

ಮೇಡಮ್ ಗಿಲೊಟಿನ್ ಸಾರ್ವಜನಿಕವಾಗಿ ರುಂಡಗಳನ್ನು ಹಾರಿಸುವುದನ್ನು ನೋಡಲು ಹೆಂಗಸರೂ ಕೂಡಾ ಮಕ್ಕಳು ಮರಿಗಳನ್ನು ಕಟ್ಟಿಕೊಂಡು, ಜೊತೆಯಲ್ಲಿ ಸ್ವೆರ್ಟರ್ ಹೆಣೆಯುವ ದಬ್ಬಣ ದಾರಗಳೊಂದಿಗೆ ಮೊದಲೇ ಬಂದು, ವೀಕ್ಷಿಸಲು ಹೆಚ್ಚು ಸೂಕ್ತವಾದ ಜಾಗಗಳನ್ನು ಆರಿಸಿಕೊಳ್ಳುತ್ತಿದ್ದರು. ಶಿಕ್ಷೆಗೆ ಒಳಪಡುವವರ ಹೆಸರುಗಳನ್ನುಳ್ಳ ಹ್ಯಾಂಡ್ ಬಿಲ್ಗಳನ್ನು ಮುಂಚಿತವಾಗಿ ಹಂಚಲಾಗುತ್ತಿತ್ತು. ೧೪ ಅಡಿ ಎತ್ತರದಿಂದ ೮೮.೨ ಪೌಂಡು ಭಾರದ ಬ್ಲೇಡು ಸೆಕೆಂಡಿಗೆ ೨೧ ಅಡಿ ವೇಗದಲ್ಲಿ ಜಾರುತ್ತ ಬಂದು ರುಂಡವನ್ನು ಕತ್ತರಿಸಿ ಹಾರಿಸಿದಾಗ ಜನ ಹೋ ಎಂದು ಉದ್ಘಾರ ಮಾಡುತ್ತಿದ್ದರು! ಸರ್ವಾಧಿಕಾರಿ ಹದಿನಾರನೆಯ ಲೂಯಿಯ ತಲೆಯನ್ನು ಹಾರಿಸಿದಾಗಂತೂ ಜನ ತಮ್ಮ ಕರವಸ್ತ್ರಗಳನ್ನು ಅವನ ರಕ್ತದಲ್ಲಿ ಅದ್ದಿ ಕೊಂಡೊಯ್ದಿದ್ದರಂತೆ!

ಗಿಲೊಟಿನ್‌ಅನ್ನು ನಿಜವಾಗಿಯೂ ಕೊಲ್ಲುವ ಯಂತ್ರವಾಗಿ ಬದಲಾಯಿಸಿದವನು ಸರ್ವಾಧಿಕಾರವನ್ನು ಕೊನೆಗಾಣಿಸಿ ಅಧಿಕಾರಕ್ಕೆ ಬಂದ ಫ್ರೆಂಚ್ ಕ್ರಾಂತಿಯ ನಾಯಕರೊಲ್ಲಬ್ಬನಾದ ಮ್ಯಾಕ್ಷಿಮಿಲಿಯನ್ ರೋಬಿಸ್ಪಿರ್ಯ ಎಂಬಾತ. ಈತ ಹದಿನಾರನೇ ಲೂಯಿ ಮತ್ತು ರಾಣಿ ಮೇರಿ ಆಂಟೋನಿಯಟ್ಯನ್ನು ಗಿಲೊಟಿನ್‌ಗೆ ಆಹುತಿ ಕೊಟ್ಟ ನಂತರ, ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ವಿರೋಧಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ಗಿಲೊಟಿನ್ ಮೂಲಕ ಕೊಲ್ಲಿಸಿದನು. ೧೭೯೩-೯೪ರ ಆ ಕರಾಳ ಅವಧಿಯಲ್ಲಿ ಈತ ಎಷ್ಟು ಹವ್ಯಾಹತವಾಗಿ ರುಂಡಗಳನ್ನು ಹಾರಿಸಿದನೆಂದರೆ, ರುಂಡಗಳು ಹಾರುವುದನ್ನು ನೋಡಿ ಮನೋರಂಜನೆ ಪಡೆಯುತ್ತಿದ್ದ ಜನರಿಗೇ ರೇಜಿಗೆ ಹುಟ್ಟಿ, ಅವರೇ ೧೭೯೪ರ ಜುಲೈಯಲ್ಲಿ ಮ್ಯಾಕ್ಷಿಮಿಲಿಯನ್ನನ್ನು ಗಿಲೊಟಿನ್ ಬಾಯಿಗೆ ಕೊಟ್ಟರು! ಅದರೊಂದಿಗೆ ಫ್ರಾನ್ಸಿನ ಅತ್ಯಂತ ರಕ್ತಸಿಕ್ತ ಅಧ್ಯಾಯಕ್ಕೆ ತೆರೆ ಬಿತ್ತು. ಮತ್ತು, ಸಾರ್ವಜನಿಕವಾಗಿ ಜನರನ್ನು ಗಿಲೊಟಿನ್‌ಗೆ ನೀಡುವ ಪರಿಪಾಠವೂ ಕೊನೆಯಾಯಿತು. ೧೯೭೭ರ ಸೆಪ್ಟಂಬರ್ ೧೦ರಂದು, ತನ್ನ ಪ್ರೇಯಸಿಯನ್ನು ಚಿತ್ರಹಿಂಸೆ ಕೊಟ್ಟು ಕೊಂದ ಹಮೀದಾ ಚಾಂದೌಬಿ ಗಿಲೊಟಿನ್ ಬಾಯಿಗೆ ಸಿಕ್ಕ ಕೊನೆಯ ಬಲಿ.

ಈಗ ‘ಮ್ಯಾಡಮ್ ಗಿಲೊಟಿನ್’ ಪ್ಯಾರೀಸ್‌ನ ‘ಮುಸೀ ಡಿ’ ಓರ್ಸೇ ಮ್ಯೂಜಿಯಮ್‌ನ ಮೂಲೆಯೊಂದರಲ್ಲಿ ‘ವಿಧವೆ’ಯಂತೆ ಮುಸುಕು ಹೊದ್ದು, ತಾನು ಚೆಂಡಾಡಿದ ರುಂಡಗಳನ್ನು ಲೆಕ್ಕ ಹಾಕುತ್ತ ಕುಳಿತಿದೆ!

 

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago