ಎಡಿಟೋರಿಯಲ್

ವಿಫಲ ಪ್ರೇಮದ ನಾಲ್ಕು ಅಧ್ಯಾಯ

ಪಿ.ಯುಸಿ ಓದುವಾಗ ಒಬ್ಬ ಸಹಪಾಠಿ ಇಷ್ಟವಾಗಿದ್ದಳು. ನೀಟಾಗಿ ಬಟ್ಟೆಧರಿಸಿ ಬರುತ್ತಿದ್ದಳು. ಜಾಣೆ. ಚೆನ್ನಾಗಿ ಕ್ಲಾಸ್‌ನೋಟ್ಸ್ ಬರೆಯುತ್ತಿದ್ದಳು. ಅವಳ ಬಳಿಕ ನೀಟಾಗಿ ನೋಟ್ಸ್ ಬರೆಯುವುದಕ್ಕೆ ಖ್ಯಾತವಾಗಿದ್ದು ನನ್ನ ಹೆಸರು. ಆಕೆ ರಜೆ ಹೋದಾಗ ನನ್ನ ನೋಟ್ಸ್ ಕೇಳಿ ಪಡೆಯುತ್ತಿದ್ದಳು. ನಾನೊಮ್ಮೆ ಜ್ವರದಿಂದ ವಾರಕಾಲ ಕಾಲೇಜಿಗೆ ಹೋಗಿರಲಿಲ್ಲ. ಶನಿವಾರ ಜ್ವರ ಬಿಟ್ಟಿತು. ಸಂಜೆ ಆಕೆಯ ಮನೆಗೆ ಹೋದೆ. ಮನೆಯವರೆಲ್ಲ ಕಾಂಪೌಂಡಿನ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಚಹ ಕುಡಿಯುತ್ತ ಹರಟುತ್ತಿದ್ದರು. ಆಕೆಯ ಅಪ್ಪನ ಮುಖದ ಮೇಲೆ ಮುಳುಗು ಸೂರ್ಯನ ಬೆಳಕು ಬಿದ್ದು ಹೊಳೆಯುತ್ತಿತ್ತು. ಗೇಟಿನ ಬಳಿ ನಿಂತು ‘…ಇದ್ದಾರಾ?’ ಎಂದೆ. ಅಪ್ಪನು ತಟ್ಟನೆದ್ದು ರಭಸದಲ್ಲಿ ಬಂದು ‘ಯಾರು ನೀನು?’ ಎಂದು ಗರ್ಜಿಸಿದ- ಕನ್ಯಾಪಹರಣಕ್ಕೆ ಕುದುರೆಯ ಮೇಲೆ ಬಂದಿರುವೇನೊ ಎಂಬಂತೆ. ಜ್ವರದಿಂದ ಹೈರಾಣವಾಗಿದ್ದ ದೇಹ ಥರಥರಿಸಿತು. ತೊದಲುವ ದನಿಯಲ್ಲಿ ‘ನೋಟ್ಸ್ ಬೇಕಿತ್ತು’ ಎಂದೆ. ಸಹಪಾಠಿಣಿಯ ಗಲಿಬಿಲಿ ಹೇಳತೀರದು. ಮುಖದಿಂದ ಕಿತ್ತುಕೊಂಡು ಹೊರ ಬರುತ್ತವೇನೊ ಎಂಬಂತೆ ಕೆಕ್ಕರಿಸುವ ಕಂಗಳಿಂದ ಅಪ್ಪ ಮಗಳತ್ತ ತಿರುಗಿ-‘ಇವನ ಪುಸ್ತಕ ನೀನ್ಯಾಕೆ ತಗೊಂಡಿದ್ದೆ?’

‘ನಾನು ತಗೊಂಡಿಲ್ಲ’

‘ಮತ್ಯಾಕೆ ಬಂದಿದಾನೆ ಇವನು ಮನೆ ಹತ್ರ?’

ಸಹಪಾಠಿಯ ತಾಯಿ ಬಂದು ಬಿಪಿಯೇರಿದ ಪತಿದೇವರನ್ನು ಹಿಂದಕ್ಕೆಳೆದು, ಗೇಟಿನ ಮೇಲೆ ಕೈಯಿಟ್ಟುಕೊಂಡು ನಿಂತಿದ್ದ ನನ್ನ ಬಳಿ ಬಂದು ಸಮಾಧಾನವಾಗಿ ‘ಏನಪ್ಪ ಸಮಾಚಾರ?’ ಎಂದು ಕೇಳಿದರು. ಕಾರಣ ವಿವರಿಸಿದೆ. ಅವರು ಏದುಸಿರು ಬಿಡುತ್ತಿದ್ದ ಗಂಡನನ್ನು ಸಂತೈಸುತ್ತ ‘ನೀವು ಸ್ವಲ್ಪ ಸಮಾಧಾನವಾಗಿರಿ. ನೋಟ್ಸಂತೆ. ಹೋಗೆ ತಂದುಕೊಡು’ ಎಂದರು. ಇತಿಹಾಸ ಮತ್ತು ಸಮಾಜಶಾಸ್ತ್ರದ ನೋಟ್ಸ್ ಸಿಕ್ಕಿತು. ಅವನ್ನು ಕಾಲೇಜಿನಲ್ಲಿ ಹಿಂತಿರುಗಿಸುವಾಗ ‘ತಪ್ಪಾಯ್ತಾ?’ ಎಂದು ಕೇಳಿದೆ. ‘ಇನ್ನೊಂದ್ಸಲ ಮನೆಹತ್ರ ಬರಬ್ಯಾಡ’ ಎಂದಳು. ಅಲ್ಲಿಗೆ ಎಳೆಯನೊಬ್ಬನ ದುಸ್ಸಾಹಸ ಪ್ರೇಮಭಗ್ನವೆಂಬ ಪ್ರಥಮ ಅಧ್ಯಾಯ ಪರಿಸಮಾಪ್ತಿಯಾಯಿತು.

ಎರಡನೆಯ ಅಧ್ಯಾಯ ಬಿಎ ಪದವಿಯಲ್ಲಿದ್ದಾಗ ತೆರೆದುಕೊಂಡಿತು. ಸಹ್ಯಾದ್ರಿ ಪದವಿ ತರಗತಿಯಲ್ಲಿ ಓದುವಾಗ, ಪ್ರಾಯದ ಮೊದಲ ದಿನಗಳು, ಹುಡುಗಿಯರ ಬಗ್ಗೆ ವಿವರಿಸಲಾಗದ ಆಕರ್ಷಣೆ ಗೊಂದಲ ಹಿಂಜರಿಕೆಗಳಿಂದ ಕೂಡಿದ್ದವು. ಅವರ ಬಗ್ಗೆ ಆಸಕ್ತಿ. ಮಾತಾಡಿಸಲು ಭಯ. ಚೆಲುವೆಯಾದ ಒಬ್ಬ ಸಹಪಾಠಿಯನ್ನು ಇಷ್ಟಪಟ್ಟಿದ್ದೆ. ಆಕೆ ಕಾರಿಡಾರಿನಲ್ಲಿ ಬರುವಾಗ ಕಿಟಕಿಯ ಕಟ್ಟೆಯಲ್ಲಿ ಕಾಲಿಳಿಬಿಟ್ಟುಕೊಂಡು ಕೂತಿರುತ್ತಿದ್ದವನು ಇಳಿದು ಎದ್ದು ನಿಲ್ಲುತ್ತಿದ್ದೆ. ಆಕೆ ನನ್ನ ಗೌರವವಂದನೆಗೆ ಸೊಪ್ಪುಹಾಕದೆ ನಿರ್ಲಿಪ್ತ ವಾಗಿ ಹೊರಟುಹೋಗುತ್ತಿದ್ದಳು. ಆಕೆಗೆ ನನ್ನಂತೆಯೇ ಅನೇಕ ಏಕಮುಖಿ ಪ್ರೇಮಿಗಳಿದ್ದರು. ಒಂದು ದಿನ ಆಕೆ ಸೈಕಲ್ ಮೇಲೆ ಬರುತ್ತಿದ್ದ ಚಂದದ ಹುಡುಗನ ಜತೆಯಿರುವುದನ್ನು ಕಂಡೆ. ಕೀಳರಿಮೆ ಅಸೂಯೆಗಳಿಂದ ನಾನು ಬೆಂದೆಹೋದೆ. ಬೂದಿಯಾಗಲಿಲ್ಲ.

ಪದವಿಯಲ್ಲಿದ್ದಾಗ ಡಿಬೇಟು ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಎರಡನೇ ಮೂರನೇ ಬಹುಮಾನ ಗ್ಯಾರಂಟಿ. ಮೊದಲನೇ ಬಹುಮಾನವನ್ನು ಒಬ್ಬ ಸಹಪಾಠಿ ಪಡೆಯುತ್ತಿದ್ದಳು. ನಾವಿಬ್ಬರೂ ಹಲವಾರು ಕಾಲೇಜುಗಳಲ್ಲಿ ಭೇಟಿಯಾಗುತ್ತಿದ್ದೆವು. ಒಟ್ಟಿಗೆ ಪಯಣ ಮಾಡಬೇಕಾಗುತ್ತಿತ್ತು. ಒಮ್ಮೆ ಪ್ರಬಂಧ ಸ್ಪರ್ಧೆಯ ಬಹುಮಾನ ಸ್ವೀಕರಿಸಲು ಕಾರ್ಗಲ್‌ಗೆ ಹೋದೆವು. ಸಂಘಟಕರು ಸಮೀಪವಿದ್ದ ಜೋಗಕ್ಕೆ ಕಳಿಸಿಕೊಟ್ಟರು. ಇಬ್ಬರಿಗೂ ಜೋಗದ ತಳ ಭಾಗದವರೆಗೆ ನಡೆದುಹೋಗಬೇಕು ಅನಿಸಿತು. ಕಿರುದಾರಿ. ಮಳೆಯಿಂದ ಹಾವಸೆಗಟ್ಟಿದ್ದ ಮಣ್ಣ ಪಾವಟಿಗೆ ಜಾರುತ್ತಿದ್ದವು. ಆಕೆಯೂ ನಾನೂ ಹಲವು ಸಲ ಬಿದ್ದೆವು. ಆಕೆಬಿದ್ದಾಗ ನಾನೂ ನಾನು ಉರುಳಿದಾಗ ಆಕೆಯೂ ಕೈಹಿಡಿದು ಎಬ್ಬಿಸುತ್ತ ಕೆಳಗಿಳಿದೆವು. ಕಾಲಿಗೆ ಇಂಬಳ. ಅವಳ ಕಣ್ಣಲ್ಲಿ ಹುಡುಗನ ಜತೆ ಕಾಡುಸುತ್ತುವ ಮೊದಲ ಅನುಭವದ ಆನಂದವಿತ್ತು. ನನಗೂ ರೋಮಾಂಚನ. ಹತ್ತುವಾಗ ಸುಸ್ತಾಗಿ ಒಂದೆಡೆ ನಿಂತಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು. ನೋಟದ ಅರ್ಥವನ್ನು ಅಸ್ಪಷ್ಟವಾಗಿ ಊಹಿಸಿದೆ. ಚುಂಬಿಸಲು ಧೈರ್ಯಬರಲಿಲ್ಲ. ಆಕೆ ನನ್ನನ್ನು ಮದುವೆಯಾಗಬೇಕೆಂದು ನಿರಂತರ ಪತ್ರ ಬರೆದಳು. ಪತ್ರಗಳನ್ನು ಮನೆಯವರೆಲ್ಲ ಓದುತ್ತಿದ್ದರು. ಒಮ್ಮೆ ಮನೆಗೂ ಬಂದಳು. ಅಮ್ಮ ಸತ್ತಬಳಿಕ ನಮ್ಮ ದೇಖರೇಖಿಗೆಂದು ವಸ್ತಿ ಮಾಡಿದ್ದ ಅಜ್ಜಿ, ‘ಯಾವ ಮತದವರಮ್ಮ ನೀವು?’ ಎಂದು ವಿಚಾರಣೆ ಮಾಡುತ್ತಿದ್ದರು. ಆಕೆಯ ಮನಸ್ಸನ್ನು ನಾನೀಗ ಓದಲು ಶಕ್ತನಾಗಿದ್ದೆ. ಆಕೆಗೆ ತನ್ನ ಚೆಲುವಿನ ಬಗ್ಗೆ ಕೀಳರಿಮೆಯಿತ್ತು. ಜೀವನ ಕಟ್ಟಿಕೊಳ್ಳಲು ಜಾತಿಕಟ್ಟನ್ನು ಮುರಿಯುವ ಸಾಹಸವೂ ಇತ್ತು. ಆದರೆ ಯಾಕೊ ನನ್ನೊಳಗೆ ಪ್ರೀತಿ ಅಂಕುರಿಸಲಿಲ್ಲ. ಜೀವನದಲ್ಲಿ ಭದ್ರವಾದ ನೆಲೆಯಿಲ್ಲದೆ ಪ್ರೇಮದ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕೆ ತಯಾರಾಗಲಿಲ್ಲ. ಆಕೆ ಪತ್ರ ಬರೆಯುವುದನ್ನು ನಿಲ್ಲಿಸಿದಳು. ನಾನು ಎಂಎ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದೆ.

ಮೂರನೇ ಅಧ್ಯಾಯ ಮೈಸೂರಿನ ದಿನಗಳಲ್ಲಿ ಶುರುವಾಯಿತು. ಈಗ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಬಹುದು ಅನಿಸಿತು. ಡಿಗ್ರಿ ಮುಗಿದ ಬಳಿಕ ಇಬ್ಬರಿಗೂ ಕೆಲಸ ಸಿಕ್ಕುತ್ತದೆ. ಸಂಸಾರ ನಡೆಸಬಲ್ಲೆವು ಎನ್ನುವ ಧೈರ್ಯ ಬಂದಿತ್ತು. ಅನೇಕ ಸಹಪಾಠಿಗಳು ಹಾಸ್ಟೆಲ್‌ಮೇಟುಗಳು ಗೆಳೆಯರು ಪ್ರೇಮದಲ್ಲಿ ಬಿದ್ದಿದ್ದರು. ಈ ದಿಸೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರು. ಆಗ ಪ್ರೇಮವಿವಾಹ ಮತ್ತು ಅಂತರ್ಜಾತೀಯ/ಅಂತರ್‌ಧರ‍್ಮೀಯ ವಿವಾಹಗಳು ಆದರ್ಶವಾಗಿದ್ದವು. ಕೆಲವು ಗೆಳೆಯರಿಗೆ ಪುಟ್ಟ ವಿಧವೆಯನ್ನು ಕೈಹಿಡಿದು ಲೋಕದೆದುರು ಧಿರೋದಾತ್ತನಾಗುವ ಉಮೇದಿತ್ತು. ಯಾರೂ ತರುಣಿಯರು ವಿಧವೆಯರೇ ಆಗುತ್ತಿಲ್ಲವಲ್ಲ ಎಂದು ಹಂಬಲಿಸುತ್ತಿದ್ದರೊ ಏನೊ. ಸಂಗಾತಿ ಆಗುವವಳಲ್ಲಿ ನಿಜವಾದ ಪ್ರೇಮ ಹುಟ್ಟಿದೆಯೇ, ಇಬ್ಬರ ಜೀವನದೃಷ್ಟಿಗಳು ಹೊಂದಿಕೊಳ್ಳುತ್ತವೆಯೇ ಎಂಬುದು ಅಷ್ಟು ಮುಖ್ಯವಾಗಿರಲಿಲ್ಲ. ಲೋಕವಿರೋಧಿಗಳಾಗಿ ಸಂಪ್ರದಾಯವಾದಿಗಳ ಹೊಟ್ಟೆಯುರಿಸಬೇಕು. ಚಳವಳಿಗಾರರ ಮೆಚ್ಚುಗೆಗೆ ಪಾತ್ರರಾಗಬೇಕು ಇದೇ ತುಡಿತ. ನೀಟಾಗಿ ಡ್ರೆಸ್ ಮಾಡಿಕೊಂಡು ಮಿರುಗುವ ಶೂಧರಿಸಿ ಬರುತ್ತಿದ್ದ ಚೆನ್ನಾಗಿ ಉಂಡುತಿಂದು ಸೊಕ್ಕಿದ ಹಾಸ್ಟೆಲುಮೇಟುಗಳ ಮುಂದೆ, ನನ್ನ ಪೀಚಲು ಮೈಕಟ್ಟು, ತಿರುಗಾಮುರುಗ ಉಡುತ್ತಿದ್ದ ಎರಡು ಜತೆ ಬಟ್ಟೆ ಕೀಳರಿಮೆ ಹುಟ್ಟಿಸುತ್ತಿದ್ದವು. ಈ ಬಿಕ್ಕಟ್ಟಿನ ಕಾಲದಲ್ಲಿ ಒಬ್ಬ ಕೃಷ್ಣಸುಂದರಿಯ ಮುಗುಳುನಗೆ ನನಗೆ ಆಕರ್ಷಣೆ ಮಾಡಿತು. ಆಕೆಯಲ್ಲಿ ವಯೋಸಹಜ ಚೆಲ್ಲುತನಕ್ಕೆ ಬದಲು, ಹೊಣೆಗಾರಿಕೆಯ ಪ್ರಜ್ಞೆಯಿತ್ತು. ನನ್ನ ಬಗ್ಗೆ ಕಾಳಜಿಯಿತ್ತು. ಈಕೆ ಒಪ್ಪಿದರೆ ಬದುಕು ಹಸನಾದೀತು ಎಂದು ಮನ ಹಂಬಲಿಸಿತು. ಅಪ್ಪನನ್ನೊ ಅಕ್ಕಂದಿರನ್ನೊ ಒಪ್ಪಿಸುವುದು ಕಷ್ಟವಾಗಿರಲಿಲ್ಲ.

ನಾನು ಪ್ರೇಮವನ್ನು ಸಿನಿಮೀಯವಾಗಿ ಪ್ರಕಟಪಡಿಸಿದೆನೊ ಏನೊ? ಗೆಳೆಯರೆಲ್ಲ ಕೂಡಿ ಪ್ರವಾಸಕ್ಕೆಂದು ಹೋದೆವು. ಅಲ್ಲಿಜಜಿಜ ಸರೋವರದಲ್ಲಿ ಎಲ್ಲರೂ ತಮಗೆ ಪ್ರಿಯರಾದವರನ್ನು ದೋಣಿಯಲ್ಲಿ ಕೂರಿಸಿಕೊಂಡು ಹುಟ್ಟುಹಾಕುವ ಉಪಾಯ ಹೂಡಿದ್ದೆವು. ಭಾವೀ ಜೀವನ ಸಂಗಾತಿಯನ್ನು ದೋಣಿಗೆ ಆಹ್ವಾನಿಸಿ ಕೂರಿಸಿಕೊಂಡೆ. ಹುಟ್ಟುಹಾಕುತ್ತ ‘ದೋಣಿಸಾಗಲಿ ಮುಂದೆ ಹೋಗಲಿ’ ಕವನವನ್ನು ಹಾಡಿದೆ. ತಪ್ಪಾದ ಹುಟ್ಟುಹಾಕುವಿಕೆಯಿಂದ ದೋಣಿ ವಾಲಾಡಿತು. ಸಿನಿಮಾದಲ್ಲಿ ಆಗುವಂತೆ ಆಕೆ ಲಜ್ಜೆಯಿಂದ ಪ್ರೇಮದಿಂದ ವಾರೆನೋಟದಿಂದ ನೋಡುತ್ತಾಳೆಂದು ನಿರೀಕ್ಷಿಸಿದ್ದೆ. ಆಕೆ ಎಲ್ಲಿ ಮುಳುಗಿಸುತ್ತಾನೊ ಎಂಬ ಗಾಬರಿಯಿಂದ ದಡಕ್ಕೆ ತಿರುಗಿಸು ಎಂದು ಚೀರಿದಳು. ಗೋಗರೆದಳು. ನಾನು ಮುಳುಗುವಾಗ ಆಕೆ ಭರವಸೆ ನೀಡುವ ದಡವಾಗುವಳೂ ಎಂದು ಆಶಿಸಿದ್ದೆ. ಆದರೀಗ ದೋಣಿಯು ಇಬ್ಬರನ್ನು ಕೆಡವಿ ತಾನೊಂದೇ ದಡಕ್ಕೆ ತೆರಳುವ ನಿಶ್ಚಯ ಮಾಡಿತ್ತು. ಬಹುಶಃ ‘ದೋಣಿಸಾಗಲಿ ಮುಂದೆ ಹೋಗಲಿ’ ಅಪಸರದಲ್ಲಿ ಹಾಡಿದ್ದು ಆಕೆಯಲ್ಲಿ ಬೇಗುದಿ ಹುಟ್ಟಿಸಿತೇ? ಪ್ರವಾಸ ಮುಗಿಸಿಕೊಂಡು ಮರಳಿದ ಮಾರನೇ ದಿನ ಆಕೆ ನನ್ನನ್ನು ಕಂಡಳು. ನಿರ್ಭಾವುಕ ಭಂಗಿಯಲ್ಲಿ ಎಚ್ಚರಿಕೆ ನಿವೇದನೆ ಬೆರೆತ ದನಿಯಲ್ಲಿ. ‘ಪ್ರೀತಿಗೀತಿ ಅಂತ ತಲೆಗೆ ಹಚ್ಚಿಕೊಳ್ಳಬೇಡ. ನಮ್ಮ ಮದುವೆ ಸಾಧ್ಯವಿಲ್ಲ. ಅಮ್ಮ ತನ್ನ ತಮ್ಮನಿಗೆ ಕೊಡಬೇಕು ಅಂತ ಚಿಕ್ಕಂದಿನಲ್ಲೇ ನಿರ್ಧರಿಸಿದ್ದಾಳೆ. ನಾನು ಬೇರೆ ಮದುವೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸ್ನೇಹಿತರಾಗಿ ಉಳಿಯೋಣ’ ಎಂದಳು. ನಾನು ದಿಗ್ಮೂಢನಂತೆ ಸುಮ್ಮನೆ ಕೇಳಿಸಿಕೊಂಡೆ. ಕುಕ್ಕರಹಳ್ಳಿಯ ಕೆರೆ ಒಡೆದು ನಮ್ಮಿಬ್ಬರನ್ನು ಕೊಚ್ಚಿಕೊಂಡು ಹೋಗಬಾರದೇ ಅನಿಸಿತು. ಆದರೆ ನಾನಿನ್ನ ಬಿಡಲಾರೆ ಎಂಬಷ್ಟು ಪ್ರೇಮ ಆಳವಾಗಿ ಬೆಳೆದಿರಲಿಲ್ಲವಾಗಿ ದೇವದಾಸನಾಗುವುದು ತಪ್ಪಿತು. ಪ್ರೇಮವಿವಾಹವಾಗಿ ಕ್ರಾಂತಿ ಮಾಡುವ ಅವಕಾಶ ಕಳೆದುಕೊಂಡ ವ್ಯಥೆ ಬಹುಕಾಲ ಉಳಿದಿತ್ತು. ನಾಲ್ಕನೆಯ ಅಧ್ಯಾಯವು ಶಿವಮೊಗ್ಗೆಯಲ್ಲಿ ಬಾಡಿಗೆ ಮನೆಯಲ್ಲಿ ತೆರೆದುಕೊಂಡಿತು. ವಿಧವೆಯನ್ನು ವರಿಸಬೇಕೆಂಬ ಒಂದು ಕಾಲಕ್ಕಿದ್ದ ಆದರ್ಶವನ್ನು ಅಗ್ನಿಪರೀಕ್ಷೆಗೆ ಒಡ್ಡಲೆಂದೇ ವಿಧಿ ಹೂಟ ಹೂಡಿತ್ತು. ಆಕೆ ದಿಟಕ್ಕೂ ಸುಂದರಿ. ವಿಚ್ಛೇದನವಾಗಿ ಒಂದು ಕೂಸಿತ್ತು. ವಯಸ್ಸಿನಲ್ಲಿ ತುಸು ಹಿರಿಯಳು. ತಮ್ಮ ಮನೆಯಲ್ಲಿ ವಿಶೇಷ ಅಡುಗೆಯಾದಾಗಲೆಲ್ಲ ಅದನ್ನು ಕೊಡಲು ಆಕೆಯೂ ಆಕೆಯ ಪುಟ್ಟಮಗನೂ ಕೋಣೆಗೆ ಬರುತ್ತಿದ್ದರು. ಆಕೆ ಹೋದ ಅರ್ಧಗಂಟೆಯ ತನಕವೂ ಸುಗಂಧ ರೂಮಿನಲ್ಲಿ ಇರುತ್ತಿತ್ತು. ಆಕೆ ನನ್ನನ್ನು ಕೈಹಿಡಿಯುವ ಪ್ರಸ್ತಾಪವನ್ನು ಅಕ್ಕಂದಿರ ಬಳಿ ಮಾಡಿದಳಂತೆ. ಅದು ಶೀಘ್ರವೇ ನನಗೂ ರವಾನೆಯಾಯಿತು. ಆದರೆ ಮಗುವಿನ ತಾಯಿಯಲ್ಲಿ ಪ್ರೇಮ ತಾನಾಗಿ ಮೊಳೆಯಲಿಲ್ಲ. ಬದುಕಿನಲ್ಲಿ ಬೆಂದುಹೋಗಿದ್ದ ಆಕೆಯೊಳಗಿದ್ದ ಅತಿವಿವೇಕ, ಕೂಸಿನ ಬಗೆಗಿನ ಹೊಣೆಗಾರಿಕೆ, ಸದಾ ಮ್ಲಾನವಾದ ವದನ ನನ್ನೊಳಗೆ ಮಧುರ ಭಾವನೆಗಳನ್ನು ಹುಟ್ಟಿಸಲಿಲ್ಲ. ಆಕೆ ಕುಟುಂಬದ ಜಗಳ ರಗಳೆಗಳೆಲ್ಲ ಸುತ್ತಿಕೊಂಡು ಹೈರಾಣಾಗಿದ್ದಳು. ಕೈಕಾಲು ಕಟ್ಟಿಸಿಕೊಂಡು ಮಡುವಿಗೆ ಬೀಳುವ ಅಂಜಿಕೆಯಾಯಿತು. ಹಿಂದಿನ ಆದರ್ಶ ಬಿಟ್ಟುಕೊಟ್ಟು ನಾನೀಗ ಲೆಕ್ಕಾಚಾರಿಯಾಗಿದ್ದೆ.

ಒಮ್ಮೆ ಪಾರ್ಟಿಯಲ್ಲಿದ್ದಾಗ ಹಿರಿಯರೊಬ್ಬರು ‘ನೀವು ಒಬ್ಬ ಹೆಣ್ಣನ್ನು ಪ್ರೀತಿಸಿ ಕೈಕೊಟ್ಟಿರಂತೆ ನಿಜವೇ? ಬಲ್ಲಮೂಲಗಳಿಂದ ನನ್ನಲ್ಲಿ ಮಾಹಿತಿ ಇದೆ’ ಎಂದು ಜಬರಿಸಿದರು. ನಾನು ದುಃಖದಿಂದ ‘ಪ್ರೀತಿ ಮಾಡಿದ್ದು ನಿಜ. ಆದರೆ ಕೈಕೊಡಲಿಲ್ಲ’ ಎಂದೆ. ಅವರು ‘ತಮಾಷೆಗೆ ಕೇಳಿದೆ ಕಂಡ್ರಿ. ಎಲ್ಲರ ಜೀವನದಲ್ಲೂ ಮದುವೆಗೆ ಮುನ್ನ ಹಲವು ಪ್ರೇಮಿಗಳು ಪ್ರವೇಶಿಸಿರುತ್ತಾರೆ. ಇದನ್ನು ಖಚಿತಪಡಿಸಿಕೊಳ್ಳೋಕೆ ಕೇಳಿದೆ. ನೀವು ದೋಣಿವಿಹಾರ ಮಾಡಿಸಿದಾಕೆಯನ್ನು ಮದುವೆ ಆಗಬೇಕಿತ್ತು. ಆಕೆಯ ತಾಯಿ ಕೆರೆಬಾವಿ ಪಾಲಾಗುತ್ತಿರಲಿಲ್ಲ. ಸಂಪ್ರದಾಯವಾದಿಗಳು ಹೀಗೇ ಹೆದರಿಸುವುದು. ಮುಂದಿನ ಜನ್ಮದಲ್ಲಿ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ’ ಎಂದು ಹಾರೈಸಿದರು.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

7 hours ago