ಎಡಿಟೋರಿಯಲ್

ಸಂಪಾದಕೀಯ: ಕಾವೇರಿ ನದಿ ದಂಡೆಯ ಗ್ರಾಮಗಳ ಅಂಚಿನಲ್ಲಿ ತಡೆಗೋಡೆ ತ್ವರಿತ ನಿರ್ಮಾಣವಾಗಲಿ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಕಾವೇರಿ ನದಿ ದಂಡೆಯ ೯ ಗ್ರಾಮಗಳು ಮುಂಗಾರು ಮಳೆಗಾಲದಲ್ಲಿ ಪ್ರವಾಹ ಭೀತಿ ಎದುರಿಸುತ್ತವೆ. ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಧಾರಾಕಾರ ಮಳೆಯಾದರೆ ಹಾರಂಗಿ, ಕಾವೇರಿ, ಕಬಿನಿ ಜಲಾಶಯಗಳು ಭರ್ತಿಯಾಗಿ ಕಾವೇರಿ ನದಿಗೆ ೧.೫೦ ರಿಂದ ೨ ಲಕ್ಷ ಕ್ಯೂಸೆಕ್ ನೀರು ಹರಿಯ ಬಿಟ್ಟಾಗ ಉಕ್ಕಿ ಹರಿದು ಗ್ರಾಮಗಳು ಹಾಗೂ ಇವುಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಫಸಲು ಜಲಾವೃತಗೊಳ್ಳುತ್ತವೆ. ಪ್ರತಿವರ್ಷ ೯ ಗ್ರಾಮಗಳ ಜನರು ಮುಂಗಾರು ಮಳೆಗಾಲಕ್ಕೆ ಪ್ರವಾಹ ಭೀತಿ ಎದುರಿಸುತ್ತಾರೆ.

೨೦೧೬ ಮತ್ತು ೨೦೧೯ ರಲ್ಲಿ ಕಾವೇರಿ ನದಿ ಭೋರ್ಗರೆದು ಪ್ರವಾಹ ಉಂಟಾಗಿ ಗ್ರಾಮಗಳು ಜಲಾವೃತಗೊಂಡಿದ್ದವು. ಫಸಲು ನೀರು ಪಾಲಾಗಿ ಜನರು, ಜಾನುವಾರುಗಳನು ಕೊಳ್ಳೇಗಾಲ ಪಟ್ಟಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆಗಾಗ ಎದುರಾಗುವ ಈ ಸಮಸ್ಯೆಯನ್ನು ಶಾಶ್ವತವಾಗಿ ನಿಯಂತ್ರಿಸಲು ಗ್ರಾಮಗಳ ಅಂಚಿನಲ್ಲಿ ತಡೆಗೋಡೆ ನಿರ್ಮಿಸಲು ಉದ್ದೇಶಿಸಿದ್ದ ಯೋಜನೆ ಕಾಗದದಲ್ಲೇ ಉಳಿದಿದೆ. ಪ್ರವಾಹ ಬಂದಾಗ ಈ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳು, ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗುತ್ತದೆ ನಂತರ ಮರೆತು ಸುಮ್ಮನಾಗುತ್ತಾರೆ.

೨೦೧೯ರಲ್ಲಿ ರಣಮಳೆಯಾಗಿ ಕೊಡಗು ಜಿಲ್ಲೆಯಲ್ಲಿ ಗುಡ್ಡಗಳು, ಬರೆಗಳು, ಮನೆಗಳು ಕುಸಿತವಾಗಿತ್ತು. ಕಾವೇರಿ ನದಿ ಪ್ರವಾಹ ಉಂಟಾಗಿ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹರಳೆ, ಮುಳ್ಳೂರು, ಹಳೇ ಅಣಗಳ್ಳಿ, ಧನಗೆರೆ, ಸರಗೂರು, ಹಳೇ ಹಂಪಾಪುರ, ಶಿವನಸಮುದ್ರದ ಸಮೂಹ ದೇವಾಲಯದ ರಸ್ತೆ ಜಲಾವೃತಗೊಂಡಿದ್ದವು. ಮುಸುಕಿನಜೋಳ, ಭತ್ತ, ತರಕಾರಿ ಫಸಲು ನೀರು ಪಾಲಾಗಿದ್ದವು. ಜಾನುವಾರುಗಳು, ರಸ್ತೆಗಳು ನೀರಿನಲ್ಲಿ ಕೊಚ್ಚಿಹೋಗಿ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ದಿನ ಬಳಕೆ ವಸ್ತುಗಳು ನೆನೆದು ಹೋಗಿದ್ದವು. ಅಂದಿನ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕೊಳ್ಳೇಗಾಲ ತಾಲೂಕಿನಲ್ಲೇ ವಾಸ್ತವ್ಯ ಹೂಡಿ ಪ್ರವಾಹಪೀಡಿತರನ್ನು ಕೊಳ್ಳೇಗಾಲ ಪಟ್ಟಣದಲ್ಲಿ ತೆರೆದಿದ್ದ ಗಂಜಿಕೇಂದ್ರಗಳಿಗೆ ಸ್ಥಳಾಂತರಿದ್ದರು.

ಇದೆಲ್ಲವನ್ನು ಗಮನಿಸಿದ್ದ ಸಚಿವ ವಿ.ಸೋಮಣ್ಣ ಅವರು ಕಾವೇರಿ ನದಿ ಅಂಚಿನ ಗ್ರಾಮಗಳಲ್ಲಿ ನೆರೆ ಬಂದಾಗ ನೀರು ಗ್ರಾಮದೊಳಗೆ ನುಗ್ಗದಂತೆ ನಿಯಂತ್ರಿಸಲು ತಡೆಗೋಡೆ ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಲು ಸೂಚಿಸಿದ್ದರು. ಅಧಿಕಾರಿಗಳು ೫೨ ಕೋಟಿ ರೂ. ಯೋಜನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಇದು ಧೂಳು ತಿನ್ನುತ್ತ ಬಿದ್ದಿದೆ. ಯೋಜನೆ ತಯಾರಿಸಿ ೨ ವರ್ಷಗಳು ಕಳೆದಿದ್ದರೂ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಎನ್.ಮಹೇಶ್, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶಕುಮಾರ್, ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಮನಹರಿಸಲಿಲ್ಲವೇ ಅಥವಾ ಅದೊಂದು ಸಮಸ್ಯೆ ಎನ್ನುವುದು ಅವರಿಗೆ ಕಾಣಲಿಲ್ಲವೇ ಎಂಬುದು ಸ್ಥಳೀಯರ ಪ್ರಶ್ನೆ.

ನೆರೆಗೆ ತುತ್ತಾದ ಸಾಮಾನ್ಯ ಜನರು, ರೈತರು ಯಾವ ಬಗೆಯ ಕಷ್ಟ ಅನುಭವಿಸುತ್ತಾರೆ ಎಂಬುದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣಾರೆ ಕಂಡಿರುತ್ತಾರೆ. ಆದರೂ ಶಾಶ್ವತ ಯೋಜನೆಯೊಂದನ್ನು ಅನುಷ್ಠಾನ ಮಾಡಲು ಇಚ್ಚಾಶಕ್ತಿ ಪ್ರದರ್ಶನ ಮಾಡುವುದೇ ಇಲ್ಲ. ಮಳೆಗಾಲ ಬಂದರೆ ಪೂರ್ವಭಾವಿಯಾಗಿ ಅಧಿಕಾರಿಗಳ ಸಭೆ ನಡೆಸಿ ತಾತ್ಕಾಲಿಕ ಕ್ರಮ ಕೈಗೊಳ್ಳಿ ಎಂದು ಸ್ಥಳೀಯ ಶಾಸಕರು ಸೂಚನೆ ನೀಡಿ ಕೈ ತೊಳೆದು ಕೊಳ್ಳುತ್ತಾರೆ. ಏನಾದರೂ ಅನಾಹುತವಾದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

೨೦೧೬ ರಲ್ಲೂ ಪ್ರವಾಹ ಬಂದಾಗ ಜನರು ಪರದಾಡಿದ್ದರು. ಹಿಂದೆ ಗ್ರಾಮಗಳ ಜನರು ನದಿ ಅಂಚಿನಲ್ಲಿ ಮಣ್ಣಿನ ಗೋಡೆಗಳನ್ನು ನಿರ್ಮಿಸಿಕೊಂಡಿದ್ದರು ಅದು ಹೆಚ್ಚು ಕಾಲ ಉಳಿದಿಲ್ಲ. ಧನಗೆರೆ ಗ್ರಾಮದ ಸಮುದಾಯ ಭವನದ ಬಳಿ ೧೦೦ ಮೀಟರ್ ತಡೆಗೋಡೆ ನಿರ್ಮಿಸಲಾಗಿದೆ. ಇದೊಂದನ್ನು ಬಿಟ್ಟರೆ ಎಲ್ಲಿಯೂ ತಡೆಗೋಡೆ ನಿರ್ಮಿಸಿಲ್ಲ. ಇದಕ್ಕಾಗಿ ಗ್ರಾಮಗಳ ರೈತ ಮುಖಂಡರು ಹೋರಾಟ ಮಾಡುತ್ತ ಬಂದಿದ್ದಾರೆ ಆದರೂ ದಪ್ಪ ಚರ್ಮದ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಅವರು ಈಗ ಬಿಜೆಪಿಗೆ ಸೇರಿದ್ದಾರೆ. ಅದೇ ಪಕ್ಷದ ಸರ್ಕಾರ ರಾಜ್ಯಾಡಳಿತ ನಡೆಸುತ್ತಿದೆ. ಶಾಸಕರು ಒತ್ತಡ ಹಾಕಿದರೆ ರಾಜ್ಯ ಸರ್ಕಾರದ ಮುಂದಿರುವ ಈ ತಡೆಗೋಡೆ ಯೋಜನೆಗೆ ಚಾಲನೆ ಕೊಡಿಸಬಹುದು.

ಜಿಲ್ಲೆಯ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ೨೦೧೯ ರಲ್ಲಿ ಕಾವೇರಿ ನದಿ ದಂಡೆಯ ಗ್ರಾಮಗಳ ಜನರು ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದನ್ನು ಕಣ್ಣಾರೆ ಕಂಡಿದ್ದ ಮತ್ತು ನಿಭಾಯಿಸಿದ್ದ ಬಿ.ಬಿ.ಕಾವೇರಿ ಅವರು ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿದ್ದಾರೆ. ಇವರೆಲ್ಲರು ಸಂಘಟಿತವಾಗಿ ಪ್ರಯತ್ನ ಮಾಡಿದರೆ ತಡೆಗೋಡೆ ಯೋಜನೆ ಜಾರಿಗೊಳ್ಳುವುದರಲ್ಲಿ ಅನುಮಾನವಿಲ್ಲ. ಈ ಯೋಜನೆಯ ಅವಶ್ಯಕತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು.

ಇಲ್ಲದಿದ್ದರೆ ಕಾವೇರಿ ನದಿಯಲ್ಲಿ ಪ್ರವಾಹ ಬಂದಾಗ ಸದ್ದು ಮಾಡುವ ತಡೆಗೋಡೆ ಯೋಜನೆ ಮತ್ತೆ ಮರೆಯಾಗುತ್ತದೆ. ಅಧಿಕಾರಿಗಳು, ಜನಪ್ರತಿನಿಧಿಗಳ ಮೇಲೆ ಇಟ್ಟುಕೊಳ್ಳುವ ನಿರೀಕ್ಷೆ ಹುಸಿಯಾಗುತ್ತದೆ. ಆದ್ದರಿಂದ ಸಂಬಂಧಪಟ್ಟವರು ಯೋಜನೆ ಜಾರಿಗೆ ಕಟಿಬದ್ದರಾಗಬೇಕು. ಏನಾದರೂ ಒಳ್ಳೆಯ ಕಾರ್ಯ ಮಾಡಿದ್ದೇನೆ ಎಂಬುದನ್ನು ಹೇಳಿಕೊಳ್ಳಲಿಕ್ಕಾದರೂ ಶಾಸಕರು ಅನುಷ್ಠಾನ ಮಾಡಿಸಿದರೆ ಒಳಿತು.

 

andolana

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

2 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

2 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

3 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

3 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

3 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

4 hours ago