ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಆನೆ ಟಾಸ್ಕ್ ಫೋರ್ಸ್ ಘೋಷಿಸಿದೆ. ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದ್ದರೂ ಇದು ಪರಿಣಾಮಕಾರಿಯಾಗಿ ಎಷ್ಟರಮಟ್ಟಿಗೆ ಜಾರಿಯಾಗಲಿದೆ ಎಂಬುದೇ ಪ್ರಶ್ನೆಯಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲೆಫೆಂಟ್ ಟಾಸ್ಕ್ ಫೋರ್ಸ್ ಅನ್ನು ಪ್ರತಿ ಜಿಲ್ಲೆಗೊಂದರಂತೆ ರಚಿಸಲು ಸರ್ಕಾರ ಆದೇಶ ನೀಡಿದೆ. ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಜನವಸತಿ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್‌ಗಳಲ್ಲಿ ಆನೆಗಳ ಚಲನವಲನ ಗುರುತಿಸಿ ಅರಣ್ಯಕ್ಕೆ ಆನೆಗಳನ್ನು ಹಿಮ್ಮೆಟ್ಟಿಸುವುದು ಮತ್ತಿತರ ಕಾರ್ಯಗಳನ್ನು ಈ ಟಾಸ್ಕ್ ಫೋರ್ಸ್ ಮಾಡಬೇಕು.
ಕಾಡಾನೆ ಇರುವ ಪ್ರದೇಶಗಳಲ್ಲಿ ಸ್ಥಳೀಯರಿಗೆ ಮಾಹಿತಿ ನೀಡುವುದು, ಆ ಭಾಗದಲ್ಲಿ ಸಂಚರಿಸದಂತೆ ಎಚ್ಚರಿಕೆ ನೀಡುವ ಕೆಲಸವನ್ನು ಈ ಟಾಸ್ಕ್ ಫೋರ್ಸ್ ಮಾಡಬೇಕಿದೆ.
ಪ್ರತಿ ಟಾಸ್ಕ್ ಫೋರ್ಸ್ ಕೇಂದ್ರಸ್ಥಾನದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು. ಅರಣ್ಯ ಪಡೆ ಮುಖ್ಯಸ್ಥರು ಜಿಲ್ಲಾ ಟಾಸ್ಕ್ ಫೋರ್ಸ್‌ಗೆ ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕರನ್ನು ಸ್ಥಳಕ್ಕೆ ನಿಯುಕ್ತಿಗೊಳಿಸಬೇಕು. ಆನೆ ಹಾವಳಿ ಪ್ರದೇಶಗಳಿಗೆ ಕೂಡಲೇ ತಲುಪಲು ಅನುಕೂಲವಾಗುವಂತೆ ಜಿಲ್ಲಾ ಟಾಸ್ಕ್ ಫೋರ್ಸ್‌ಗಳಿಗೆ ೩ ಬೊಲೆರೋ ಜೀಪ್ ಒದಗಿಸಲು ಸರ್ಕಾರ ಆದೇಶ ನೀಡಿದೆ.
ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ೨೦೧೪ರಿಂದಲೇ ಕಾಡಾನೆಗಳನ್ನು ಓಡಿಸಲು ಕ್ಷಿಪ್ರಪಡೆ ಎಂಬ ಪ್ರತ್ಯೇಕ ಟಾಸ್ಕ್ ಫೋರ್ಸ್ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಈ ಟಾಸ್ಕ್ ಫೋರ್ಸ್‌ನಲ್ಲಿ ೧೩೦ ಮಂದಿ ಕಾರ್ಯನಿರ್ವಹಿಸುತ್ತಿದ್ದು, ಕಾಡಾನೆ ಹಾವಳಿ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುತ್ತಿದೆ. ಆದರೂ ಕಾಡಾನೆಗಳ ಹಾವಳಿ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಸರ್ಕಾರದ ಈಗಿನ ಆದೇಶದ ಪ್ರಕಾರ ೩೦ ಮಂದಿ ಟಾಸ್ಕ್ ಫೋರ್ಸ್‌ಗೆ ನಿಯೋಜಿಸುವಂತೆ ಆದೇಶಿಸಿರುವುದರಿಂದ ೧೦೦ ಮಂದಿ ಕೆಲಸ ಕಳೆದುಕೊಳ್ಳುವುದರೊಂದಿಗೆ ಸ್ಥಳೀಯರಿಗೆ ಇನ್ನಷ್ಟು ಸಮಸ್ಯೆ ಎದುರಾಗಲಿದೆ.
ಕೊಡಗಿನಲ್ಲಿ ೨೦೦ಕ್ಕೂ ಅಧಿಕ ಕಾಡಾನೆಗಳು ದಾಂಧಲೆ ನಡೆಸುತ್ತಿದೆ ಎನ್ನಲಾಗಿದೆ. ಜಿಲ್ಲೆಯಾದ್ಯಂತ ಬೀಡುಬಿಟ್ಟಿರುವ ಕಾಡಾನೆಗಳನ್ನು ಓಡಿಸಲು, ನಿಯಂತ್ರಿಸಲು ೧೩೦ ಸಿಬ್ಬಂದಿಯೇ ಸಾಕಾಗುತ್ತಿರಲಿಲ್ಲ. ಹೀಗಿರುವಾಗ ಸರ್ಕಾರ ಇದೀಗ ರಚಿಸಿದ ೩೦ ಮಂದಿಯ ಟಾಸ್ಕ್ ಫೋರ್ಸ್‌ನಿಂದ ಕಾಡಾನೆ ಹಾವಳಿ ತಡೆಯಲು ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಸರ್ಕಾರದ ಆದೇಶದ ಪ್ರಕಾರ ಜಿಲ್ಲಾ ಕೇಂದ್ರದಲ್ಲಿ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿದೆ. ಆದರೆ ಬೆಟ್ಟ ಗುಡ್ಡಗಳಿಂದ ಕೂಡಿದ ಕೊಡಗು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾಡಾನೆ ಹಾವಳಿ ನಡೆದರೆ ಜಿಲ್ಲಾ ಕೇಂದ್ರದಿಂದ ನಿಯಂತ್ರಿಸಲು ಸಾಧ್ಯವಿದೆಯೇ ಎನ್ನುವ ಪ್ರಶ್ನೆಯೂ ಇದೆ. ಜೊತೆಗೆ ೫ ತಾಲ್ಲೂಕುಗಳ ಜಿಲ್ಲೆಗೆ ೩ ವಾಹನಗಳನ್ನು ಸರ್ಕಾರ ನೀಡಿದ್ದು, ವಾಹನಗಳ ಸಂಖ್ಯೆ ಕೂಡ ಸಾಕಾಗುವುದಿಲ್ಲ.
ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರತಿಯೊಂದು ಅರಣ್ಯ ವಲಯ ವ್ಯಾಪ್ತಿಯ ಕೃಷಿ ಜಮೀನುಗಳಿಗೆ ಕಾಡಾನೆಗಳು ನುಗ್ಗಿದ ಸಂದರ್ಭ ಸಾರ್ವಜನಿಕರ ಮಾಹಿತಿಯನ್ವಯ ಈಗಿರುವ ೧೩೦ ಮಂದಿಯ ಕ್ಷಿಪ್ರಪಡೆಯ ತಂಡ ಸ್ಥಳಕ್ಕೆ ದೌಡಾಯಿಸಿ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸ ಮಾಡುತ್ತಿದೆ. ವಾಕಿಟಾಕಿ, ಪಟಾಕಿ, ಬಂದೂಕು ಮತ್ತಿತರ ಅಗತ್ಯ ವಸ್ತುಗಳು ಈಗಾಗಲೇ ಈ ಕಾರ್ಯಪಡೆಯೊಂದಿಗಿದೆ. ಇವುಗಳಿಂದ ಪರಿಣಾಮಕಾರಿಯಾಗಿ ಕಾಡಾನೆ ನಿಯಂತ್ರಿಸಲು ಸಾಧ್ಯವಾಗಿಲ್ಲ.
ಇದೀಗ ಇದೇ ಕೆಲಸಕ್ಕೆ ಹೊಸ ಹೆಸರನ್ನು ನೀಡಿರುವುದರಿಂದ ಕಾಡಾನೆ ಹಾವಳಿ ತಡೆಗಟ್ಟಲು ಸಾಧ್ಯವೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇತ್ತಿಚೆಗೆ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಇತರ ಜಿಲ್ಲೆಗಳಲ್ಲೂ ಕಾಡಾನೆ ಹಾವಳಿ ತಡೆಗೆ ವಿಫಲವಾದ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಜನರ ಕಣ್ಣೊರೆಸುವ ತಂತ್ರವಾಗಿ ಟಾಸ್ಕ್ ಫೋರ್ಸ್ ರಚಿಸುವುದಕ್ಕಿಂತ ವೈಜ್ಞಾನಿಕವಾಗಿ ಸೂಕ್ತ ಯೋಜನೆ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ.
ಕಾಡಾನೆ ನಿಯಂತ್ರಣಕ್ಕೆ ಹೊಸ ತಂತ್ರಜ್ಞಾನದ ಅವಶ್ಯಕತೆ ಇದೆ. ಕಾಡಾನೆ ದಾಳಿಯಿರುವ ಶಾಸಕರು, ಬೆಳೆಗಾರರ ಸಂಘಟನೆಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಶಾಶ್ವತ ಕ್ರಮಕ್ಕೆ ಸರ್ಕಾರ ಮುಂದಾಗಬೇಕಿದೆ. ಕೊಡಗಿನಲ್ಲಿ ಈಗಿರುವ ಕ್ಷಿಪ್ರ ಕಾರ್ಯಪಡೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ತಂಡಕ್ಕೆ ವೈಜ್ಞಾನಿಕವಾಗಿ ಬಲ ನೀಡಬೇಕೇ ಹೊರತು ಇರುವ ತಂಡದ ಸಿಬ್ಬಂದಿ ಕಡಿತಗೊಳಿಸಿದರೆ ಕಾಡಾನೆ ಹಾವಳಿ ತಡೆಗಟ್ಟಲು ಹೇಗೆ ಸಾಧ್ಯ?
ದೊಡ್ಡಕವಲಂದೆ: 3 ವರ್ಷಗಳಾದರೂ ನಿರ್ಮಾಣವಾಗದ ಶೌಚಾಲಯ; ಗುತ್ತಿಗೆದಾರ ನಾಪತ್ತೆ ಶ್ರೀಧರ್ ಆರ್. ಭಟ್ ನಂಜನಗೂಡು: ಸ್ವಚ್ಛತೆಗಾಗಿ ಕೇಂದ್ರ ಮತ್ತು ರಾಜ್ಯ…
ಬಿ. ಆರ್. ಜೋಯಪ್ಪ ಕೊಡಗಿನಲ್ಲಿ ಸ್ಥಳೀಯರು ‘ಕಾಡುಪಾಪ’ವನ್ನು ‘ಚೀಂಗೆ ಕೋಳಿ’ ಎಂದು ಕರೆಯುತ್ತಾರೆ. ಇದೊಂದು ನಿಶಾಚರಿ, ನಿರುಪದ್ರವಿ ಕಾಡಿನ ಜೀವಿ.…
ಚಾಮರಾಜನಗರ ನೆಲದ ಕಲಾವಿದರು, ಅಲ್ಲಿನ ಆಡುಭಾಷೆಯನ್ನೇ ಜೀವಾಳವಾಗಿಸಿಕೊಂಡು ಗೆದ್ದ ಅನ್ನ ಚಲನಚಿತ್ರ ರಶ್ಮಿ ಕೋಟಿ ಮನೆಗೆ ಕರೆದುಕೊಂಡು ಹೋಗಲು ಬಂದ…
ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್. ನಾಗವೇಣಿಯವರ ಕತೆಗಳಲ್ಲಿ ಕೂಡ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಆ…
ಐಐಟಿ, ಐಐಎಂ, ಐಐಎಸ್‌ಪಿ, ಎನ್‌ಐಟಿಯಂತಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ. ಜಾತಿ ಮತ್ತು ಪ.ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನವನ್ನು…
ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಕಾಲೇಜುಗಳಲ್ಲಿ ಸುಮಾರು ನಾಲ್ಕು ಸಾವಿರದಷ್ಟು ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು, ಮುಖ್ಯಮಂತ್ರಿಗಳ ಅನುಮತಿ…