ರಾಜ್ಯದಲ್ಲಿ ಮಹಾಮಳೆ ಸುರಿಯುತ್ತಲೇ ಇದೆ. ಮೊದಲೆಲ್ಲ ತಗ್ಗು ಪ್ರದೇಶಗಳಲ್ಲಿ ಮಾತ್ರ ಭಾರಿ ಮಳೆ ಬಂದಾಗ ನೀರು ನಿಲ್ಲುತ್ತಿತ್ತು. ತಗ್ಗು ಪ್ರದೇಶದ ಜನರಷ್ಟೇ ಸಂಕಷ್ಟ ಅನುಭವಿಸುತ್ತಿದ್ದರು. ಸ್ಥಳೀಯ ಆಡಳಿತಗಳು ಜನರನ್ನು ಸ್ಥಳಾಂತರ ಮಾಡಿ ರಕ್ಷಿಸುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಭಾರಿ ಮಳೆ ಬಂದರೆ ತಗ್ಗುಪ್ರದೇಶಗಳಷ್ಟೇ ಮುಳುಗುಡೆಯಾಗುವುದಿಲ್ಲ. ಸುಸಜ್ಜಿತ, ಪ್ರತಿಷ್ಠಿತ ಬಡಾವಣೆಗಳಲ್ಲೂ ಆಳೆತ್ತರದಷ್ಟು ನೀರು ನಿಲ್ಲುತ್ತದೆ. ಕಾರು, ಬೈಕುಗಳೆಲ್ಲ ನೀರಿನಲ್ಲಿ ಮುಳುಗಿ ಹೋಗುತ್ತವೆ. ನೆಲ ಅಂತಸ್ತಿನಲ್ಲಿದ್ದವರ ಮನೆಯೊಳಗಿನ ಸರ್ವಪರಿಕರಗಳೂ ಹಾನಿಯಾಗುತ್ತವೆ. ಬದುಕು ಬರ್ಬರವಾಗುತ್ತದೆ. ಮನೆ ಇದ್ದರೂ ಇರಲಾಗದ ಸ್ಥಿತಿ, ರಾತ್ರಿ ವೇಳೆ ಮಂಚ ಹಾಸಿಗೆಗಳಿದ್ದರೂ ನಿದ್ರೆ ಮಾಡಲಾಗದ ದುಸ್ಥಿತಿ.
ಈ ಸಮಸ್ಯೆ ಈಗ ಪ್ರತಿಷ್ಠತೆಯ ಸಂಕೇತವಾಗಿರುವ ದಶಪಥ ಹೆದ್ದಾರಿಗೂ ವ್ಯಾಪಿಸಿದೆ. ಹೆದ್ದಾರಿಯಂತ ಹೆದ್ದಾರಿಯೇ ಸರೋವರವಾಗಿ ಪರಿವರ್ತನೆಯಾಗುತ್ತದೆ. ಸಂಚರಿಸುವವರ ಸಂಕಷ್ಟ ಕೇಳುವವರೇ ಇಲ್ಲ.
ಮಳೆ ಸಮಸ್ಯೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡಗಳಂತಹ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳು, ಹೋಬಳಿ ಕೇಂದ್ರಗಳು ಅಷ್ಟೇ ಏಕೆ ಗ್ರಾಮ ಗ್ರಾಮಗಳಿಗೂ ವ್ಯಾಪಿಸಿದೆ.
ಈ ಎಲ್ಲಾ ಕಡೆಗಳಲ್ಲೂ ಮಳೆ ಸಮಸ್ಯೆಯಾಗಿ ನಾಗರಿಕರನ್ನು ಕಾಡುತ್ತಿರುವುದಕ್ಕೆ ಪ್ರಕೃತಿಯೇ ಕಾರಣ ಎಂಬ ಉಡಾಫೆಯ ಮಾತುಗಳು ಕೇಳಿ ಬರುತ್ತವೆ.
ಮಳೆಯಿಂದ ಅವಾಂತರ, ಮಳೆಯಿಂದ ಸಂಕಷ್ಟ ಇತ್ಯಾದಿ ರೀತಿಯಲ್ಲಿ ಮಳೆಯ ವರದಿಗಳಾಗುತ್ತವೆ. ಅಷ್ಟಕ್ಕೂ ಅವಾಂತರ ಮಾಡಿಕೊಂಡಿರುವುದು ಯಾರು? ಪ್ರಕೃತಿ ಅವಾಂತರ ಸೃಷ್ಟಿಸಿದೆಯೇ? ಸುರಿದ ಮಳೆ ನೀರು ಹರಿದು ಹೋಗುವ ಜಾಗಗಳೆಲ್ಲವನ್ನು ಒತ್ತುವರಿ ಮಾಡಿ ಕಟ್ಟಡ ಕಟ್ಟಿದವರು ಯಾರು? ರಸ್ತೆ ನಿರ್ಮಿಸಿದವರು ಯಾರು? ಬಿದ್ದ ಮಳೆ ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆಯೇ? ಬಿದ್ದ ನೀರು ಹರಿದು ಹೋಗುವುದಾದರೂ ಎಲ್ಲಿಗೆ?
ಇಡೀ ಸಮಸ್ಯೆಯ ಮೂಲ ಇರುವುದು ಮಳೆ ನೀರು ನಿರ್ವಹಣೆಯಲ್ಲಿ ಸ್ಥಳೀಯ ಆಡಳಿತ ಮತ್ತು ನಾಗರಿಕರ ವೈಫಲ್ಯದಲ್ಲಿ. ನೈಸರ್ಗಿಕವಾಗಿ ಬಿದ್ದ ಮಳೆನೀರು ಹರಿದು ಹೋಗುವ ಜಾಗವನ್ನೆಲ್ಲ ಕಬಳಿಸುವ ಭೂಮಿಬಾಕತನ, ಸಿಕ್ಕಸಿಕ್ಕಲ್ಲೆಲ್ಲ ಕಟ್ಟಡ ಕಟ್ಟುವ ಆಸೆಬುರಕತನಗಳ ಬಗ್ಗೆ ಯಾರೂ ಮತನಾಡುವುದೇ ಇಲ್ಲ.
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳೂ ಜಲಾವೃತವಾಗಿರುವುದು, ಪ್ರತಿಷ್ಠಿತ ದಶಪಥ ಹೆದ್ದಾರಿಯಲ್ಲೂ ಸರೋವರ ಸೃಷ್ಟಿಯಾಗಿರುವುದು ಇಡೀ ಆಡಳಿತ ವ್ಯವಸ್ಥೆಗೆ ಪ್ರಕೃತಿಯೇ ಕಲಿಸಿದ ಪ್ರಾಯೋಗಿಕ ಪಾಠದಂತಿದೆ. ಹೆದ್ದಾರಿ ನಿರ್ಮಿಸುವಾಗ, ಹೊಸ ಬಡಾವಣೆಗಳನ್ನು ನಿರ್ಮಿಸುವಾಗ ಜಲಮೂಲಗಳು ಮತ್ತು ಜಲಸಂಗ್ರಹಾಗಾರಗಳನ್ನು ನಾಶ ಮಾಡಿ ನಿರ್ಮಿಸಿದರೆ ಏನಾಗುತ್ತದೆ ಎಂಬುದನ್ನು ಈ ಮಹಾಮಳೆ ಪ್ರಾತ್ಯಕ್ಷಿಕೆ ಮೂಲಕವೇ ತೋರಿಸಿಕೊಟ್ಟಿದೆ.
ಕೆರೆಗಳ ಒತ್ತುವರಿ, ಮಳೆ ನೀರು ಕಾಲುವೆಗಳು, ರಾಜಕಾಲುವೆಗಳ ಒತ್ತುವರಿಯಿಂದಾಗಿ ಸೃಷ್ಟಿಯಾಗಿರುವ ಪರಿಸ್ಥಿತಿ ಇದು. ಪ್ರತಿಯೊಂದು ಬೀದಿಯಲ್ಲಿರುವ ಚರಂಡಿಗಳು, ಒಳಚರಂಡಿಗಳು, ಮಳೆ ನೀರು ಕಾಲುವೆಗಳು ಸ್ವಚ್ಛವಾಗಿದ್ದರೆ ಮಳೆ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ.
ಬಡಾವಣೆ ನಿರ್ಮಿಸುವಾಗ ವೈಜ್ಞಾನಿಕವಾಗಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆಯೊಂದನ್ನು ರೂಪಿಸಿದರೆ ಮಳೆ ಎಂದೂ ಸಮಸ್ಯೆಯೇ ಅಲ್ಲ. ಹೆದ್ದಾರಿ ನಿರ್ಮಿಸುವಾಗ ಜಲಮೂಲಗಳನ್ನು ಒತ್ತುವರಿ ಮಾಡಿದ್ದರೆ, ನೀರು ಹರಿಯಲು ವೈಜ್ಞಾನಿಕವಾಗಿ ಪರ್ಯಾಯವ್ಯವಸ್ಥೆ ಮಾಡಿದರೆ ಹೆದ್ದಾರಿಯಲ್ಲೇಕೆ ಸರೋವರ ನಿರ್ಮಾಣ ವಾಗುತ್ತದೆ?
ವಾಸ್ತವವಾಗಿ ವಸತಿ ಬಡಾವಣೆಗಳನ್ನು ವೈಜ್ಞಾನಿಕವಾಗಿ ಮಳೆ ನೀರು ಹರಿವಿನ ತಾಂತ್ರಿಕ ಅಧ್ಯಯನ ನಡೆಸದೆಯೇ ನಿರ್ಮಿಸಲಾಗುತ್ತಿದೆ. ಕೆರೆ ಒತ್ತುವರಿ ಮಾಡಿ ನಿರ್ಮಿಸಿದ ಬಡಾವಣೆಯಲ್ಲಿ ಬಿದ್ದ ಮಳೆ ನೀರು ಅಲ್ಲೇ ನಿಲ್ಲದೇ ಹೋಗುವುದಾದರೂ ಎಲ್ಲಿಗೆ?
ಇನ್ನಾದರೂ ಹೆದ್ದಾರಿ ನಿರ್ಮಿಸುವಾಗ, ಬಡಾವಣೆಗಳನ್ನು ನಿರ್ಮಿಸುವಾಗ ಮಳೆ ನೀರು ಹರಿವಿನ ವೈಜ್ಞಾನಿಕ ವಿಶ್ಲೇಷಣೆ ನಡೆಸಿ, ಅದಕ್ಕನುಗುಣವಾಗಿ ನಿರ್ಮಾಣ ಕೈಗೊಳ್ಳಬೇಕು. ಈಗಾಗಲೇ ಒತ್ತುವರಿ ಆಗಿರುವ ಮಳೆನೀರು ಕಾಲುವೆಗಳು ಮತ್ತು ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆ ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮಗೊಳಿಸಬೇಕು. ಪ್ರತಿಯೊಂದು ನಿರ್ಮಾಣ ಕಾರ್ಯ ಕೈಗೊಳ್ಳುವಾಗಲು ಅಲ್ಲಲ್ಲಿ ಮಳೆ ನೀರು ಇಂಗಿ ಹೋಗುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ಈ ನಿಯಮಗಳನ್ನು ಮಹಾನಗರಗಳಿಗೆ ಮಾತ್ರವಲ್ಲ, ರಾಜ್ಯವ್ಯಾಪಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅಗತ್ಯಬಿದ್ದರೆ, ಈ ನಿಟ್ಟಿನಲ್ಲಿ ಕಾನೂನು ರೂಪಿಸುವ ಅಥವಾ ಹಾಲಿ ಇರುವ ಕಾನೂನುಗಳಿಗೆ ಸೂಕ್ತ ಮಾರ್ಪಾಡು ಮಾಡಲೂ ರಾಜ್ಯ ಸರ್ಕಾರ ಹಿಂಜರಿಯಬಾರದು.
ಇಲ್ಲಿಯವರೆಗೆ ಎಲ್ಲ ಲೋಪಗಳನ್ನು ಪ್ರಕೃತಿಯ ಮೇಲೇ ಹಾಕುತ್ತಾ ಕಾಲತಳ್ಳುತ್ತಾ ಬಂದಿದ್ದೇವೆ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಮತ್ತು ತಿದ್ದಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲೆ ಇರುವಷ್ಟೇ ನಾಗರಿಕರ ಮೇಲೂ ಇದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಮತ್ತೆ ನಮ್ಮ ತಪ್ಪುಗಳಿಗೆ ನಾವೇ ಮಳೆಗೆ ಶಾಪಹಾಕುವುದು ತಪ್ಪುವುದಿಲ್ಲ!
ಬೆಳಗಾವಿ: ಸಿಎಂ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಸಿಎಂ ಬದಲಾವಣೆ…
ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ನಿರ್ದೇಶಕರ…
ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ…
ಬೆಳಗಾವಿ: ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಸ್ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…
ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ…
ಮೈಸೂರು: ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…