droupadi murmu and supreme court
ನಮ್ಮ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಅವರು ಸಾರ್ವಭೌಮ ಅಧಿಕಾರವನ್ನು ಹೊಂದಿದ್ದಾರೆ. ಹಾಗೆಯೇ ದೇಶದ ಕಾನೂನು ರಕ್ಷಣೆಯಲ್ಲಿ ಸುಪ್ರೀಂ ಕೋರ್ಟ್ ಪರಮಾಧಿಕಾರವನ್ನು ಹೊಂದಿರುವುದು ನಮಗೆಲ್ಲ ಗೊತ್ತಿರುವ ಸಾಮಾನ್ಯ ತಿಳಿವಳಿಕೆ. ಈ ಎರಡೂ ಆಡಳಿತ ವ್ಯವಸ್ಥೆಯ ನಡುವೆ ಇದುವರೆಗೂ ಯಾವುದೇ ಅಪಸ್ವರ ಕೇಳಿ ಬಂದಿರಲಿಲ್ಲ. ಆದರೆ ರಾಜ್ಯ ವಿಧಾನಸಭೆಗಳು ಮತ್ತು ಮಂತ್ರಿ ಮಂಡಲಗಳು ಅಂಗೀಕರಿಸಿದ ಮಸೂದೆಗಳು ಹಾಗೂ ತೀರ್ಮಾನಗಳಿಗೆ ರಾಜ್ಯಪಾಲರು ಸಕಾಲದಲ್ಲಿ ತಮ್ಮ ಒಪ್ಪಿಗೆಯ ಮುದ್ರೆ ಒತ್ತದೆ ತಿಂಗಳಾನುಗಟ್ಟಲೆ ಮತ್ತು ವರ್ಷಗಟ್ಟಲೆ ವಿಳಂಬ ಮಾಡುವ ಕುರಿತು ಮೇ ತಿಂಗಳ 8 ರಂದು ತಮಿಳುನಾಡು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಈಗ ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟಿನ ನಡುವೆ ಕಾನೂನು ಸಮರದ ವಿವಾದವನ್ನು ಸೃಷ್ಟಿಸಿದೆ.
ತಮಿಳುನಾಡು ಸರ್ಕಾರವು ಕೆಲವು ವರ್ಷಗಳ ಹಿಂದೆ ವಿಧಾನಸಭೆಯು ಅಂಗೀಕರಿಸಿದ ಹತ್ತು ಮಸೂದೆಗಳನ್ನು ರಾಜ್ಯಪಾಲರ ಸಹಿಗೆ ಕಳುಹಿಸಿತ್ತು. ಆದರೆ ರಾಜ್ಯಪಾಲ ಆರ್. ಎನ್. ರವಿ ಅವರು ಮಸೂದೆಗಳಿಗೆ ಸಹಿ ಹಾಕದೆ ವರ್ಷಗಟ್ಟಲೆ ತಮ್ಮ ಬಳಿ ಇಟ್ಟುಕೊಂಡಿದ್ದನ್ನು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಈ ಪ್ರಕರಣದ ಬಗೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ. ಬಿ. ಪರ್ದಿವಾಲ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮೇ 8ರಂದು ತೀರ್ಪು ನೀಡಿ, ರಾಜ್ಯ ಸರ್ಕಾರಗಳ ಮಸೂದೆಗಳಿಗೆ ಸಹಿ ಹಾಕುವ ಸಂಬಂಧ ರಾಜ್ಯಪಾಲರು ಮತ್ತು ರಾಷ್ಟ್ರಪತಿ ಅವರಿಗೂ ಕಾಲಮಿತಿಯನ್ನು ಗೊತ್ತುಪಡಿಸಿದ್ದು ಈಗ ಕಾನೂನು ಸಮರಕ್ಕೆ ಎಡೆಮಾಡಿಕೊಟ್ಟಿದೆ.
ಸಂವಿಧಾನದ ವಿಧಿ 200ರ ಅನ್ವಯ ರಾಜ್ಯಪಾಲರು ಯಾವುದೇ ಸಕಾರಣಗಳಿಲ್ಲದೆ ರಾಜ್ಯ ಸರ್ಕಾರ ಕಳುಹಿಸಿದ ಮಸೂದೆಗಳನ್ನು ಹೆಚ್ಚು ದಿನ ಹಿಡಿದಿಟ್ಟುಕೊಳ್ಳುವ ಹಾಗಿಲ್ಲ. ಹಾಗೆ ಮಾಡಲು ಅವರಿಗೆ ಸಂವಿಧಾನದತ್ತ ಅಧಿಕಾರವೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು. ಈ ತೀರ್ಪಿನಿಂದ ಸಹಜವಾಗಿಯೇ ತಮಿಳುನಾಡು ಸರ್ಕಾರ ತನ್ನ ವಾದಕ್ಕೆ ಜಯ ಸಿಕ್ಕಿದಂತೆ ಬೀಗಿತು. ಯಾವುದೇ ಮಸೂದೆಗೆ ರಾಜ್ಯಪಾಲರು ಒಂದು ತಿಂಗಳ ಒಳಗಾಗಿ ತಮ್ಮ ಒಪ್ಪಿಗೆ ನೀಡಬೇಕು. ಇಲ್ಲವೇ ಅದು ಸಂವಿಧಾನಕ್ಕೆ ವಿರುದ್ಧವಾಗಿದ್ದಲ್ಲಿ ಸಮಜಾಯಿಷಿ ಕೇಳಿ ಪುನರ್ ವಿವೇಚನೆಗೆ ವಾಪಸ್ ಕಳುಹಿಸಬೇಕು. ರಾಜ್ಯ ವಿಧಾನ ಮಂಡಲಗಳು ಮತ್ತು ಮಂತ್ರಿ ಪರಿಷತ್ತು ತನ್ನ ಮಸೂದೆ ಮತ್ತು ನಿರ್ಧಾರಗಳಿಗೆ ಒಪ್ಪಿಗೆ ನೀಡಿದ ಮೇಲೆ ಅಂತಹ ಯಾವುದೇ ತೀರ್ಮಾನವನ್ನು ರಾಜ್ಯಪಾಲರು ಅನವಶ್ಯವಾಗಿ ಹಿಡಿದಿಟ್ಟುಕೊಂಡು ವಿಳಂಬ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು. ಇದಿಷ್ಟೇ ಆಗಿದ್ದರೆ ಸಮಸ್ಯೆ ಅಥವಾ ವಿವಾದ ಉಂಟಾಗುತ್ತಿರಲಿಲ್ಲ.
ರಾಜ್ಯ ಸರ್ಕಾರಗಳು ಕಳುಹಿಸುವ ಮಸೂದೆ ಮತ್ತು ಸಂಪುಟದ ತೀರ್ಮಾನಗಳಿಗೆ ರಾಜ್ಯಪಾಲರು ಒಂದು ತಿಂಗಳ ಒಳಗೆ ಸಹಿ ಹಾಕುವ ಬಗೆಗೆ ನಿರ್ಧಾರ ಕೈಗೊಳ್ಳಬೇಕು. ಹಾಗೆಯೇ ರಾಷ್ಟ್ರಪತಿ ಅವರು ಕೂಡ ರಾಜ್ಯಪಾಲರು ಕಳುಹಿಸುವ ಮಸೂದೆಗಳಿಗೆ ಮೂರು ತಿಂಗಳುಗಳೊಳಗೆ ತಮ್ಮ ಒಪ್ಪಿಗೆ ನೀಡಬೇಕೆಂದು ಕಾಲ ಮಿತಿ ನಿಗದಿ ಮಾಡಿ ಸುಪ್ರೀಂ ಕೋರ್ಟು ನೀಡಿದ ತೀರ್ಪು ಈಗ ರಾಷ್ಟ್ರಪತಿ ಭವನ ಮತ್ತು ಸುಪ್ರೀಂ ಕೋರ್ಟಿನ ನಡುವೆ ಜಟಾಪಟಿಗೆ ಎಡೆಮಾಡಿಕೊಟ್ಟಿದೆ. ಈ ಎರಡು ಅತ್ಯುನ್ನತ ಸಾಂವಿಧಾನಿಕ ಅಧಿಕಾರ ಹೊಂದಿರುವ ಆಡಳಿತ ವ್ಯವಸ್ಥೆಗೆ ಈ ವಿವಾದ ಸವಾಲು ತಂದಿಟ್ಟಿದ್ದು, ಈ ಪ್ರಕರಣ ಹೇಗೆ ಕೊನೆಗೊಳ್ಳಲಿದೆ ಎನ್ನುವುದು ಕುತೂಹಲಕಾರಿಯಾಗಿದೆ.
ಈಗ ಪ್ರಶ್ನೆ ಅಥವಾ ವಿವಾದ ಎದ್ದಿರುವುದು ರಾಷ್ಟ್ರಪತಿ ಅವರ ಸಹಿಗೆ ಸುಪ್ರೀಂ ಕೋರ್ಟು ಕಾಲಮಿತಿ ವಿಧಿಸಬಹುದೇ ಎನ್ನುವುದು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಅವರು ಸಾರ್ವಭೌಮರು. ಸುಪ್ರೀಂ ಕೋರ್ಟು ಅಪರಾಧಿಯೊಬ್ಬನಿಗೆ ಮರಣದಂಡನೆ ವಿಧಿಸಿದರೂ ರಾಷ್ಟ್ರಪತಿ ಅವರು ತಮ್ಮ ವಿವೇಚನಾಽಕಾರ ಬಳಸಿ ಕ್ಷಮಾದಾನ ನೀಡುವ ಅತ್ಯುನ್ನತ ಅಧಿಕಾರವನ್ನು ಹೊಂದಿದ್ದಾರೆ. ಕೇಂದ್ರ ಸರ್ಕಾರ, ಸಂಸತ್ತು ಮತ್ತು ಸೇನೆಯ ಮಹಾದಂಡನಾಯಕನ ಅಧಿಕಾರವನ್ನು ರಾಷ್ಟ್ರಪತಿ ಹೊಂದಿದ್ದಾರೆ. ಇವರು ಸಂವಿಧಾನದ ಮುಖ್ಯಸ್ಥರು, ಅವರಿಗೆ ಸುಪ್ರೀಂ ಕೋರ್ಟು ರಾಜ್ಯ ವಿಧಾನ ಮಂಡಲ ಕೈಗೊಳ್ಳುವ ಮಸೂದೆಗೆ ತಮ್ಮ ಒಪ್ಪಿಗೆ ನೀಡಲು ಕಾಲಮಿತಿ ಹಾಕಲು ಸಾಧ್ಯವೇ ಎನ್ನುವ ಪ್ರಶ್ನೆ ಈಗ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಕಾನೂನು ತಜ್ಞರ ನಡುವೆ ಜಿಜ್ಞಾಸೆಗೆ ಕಾರಣವಾಗಿದೆ.
ದಿ ಹಿಂದೂ ಪತ್ರಿಕೆಯು ಮೇ 17ರಂದು ತನ್ನ ಸಂಪಾದಕೀಯ ದಲ್ಲಿ ಒಕ್ಕೂಟ ಆಡಳಿತ ವ್ಯವಸ್ಥೆಯನ್ನು ಕುರಿತು ಸಂವಿಧಾನದ ಕರಡು ಸಮಿತಿ ಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಯನ್ನು ಉಲ್ಲೇಖಿಸಿ ‘ಚುನಾಯಿತ ವಿಧಾನ ಸಭೆಯು ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿ ಅವರು ಸ್ವೇಚ್ಛಾನುಸಾರವಾಗಿ ಅನಿರ್ದಿಷ್ಟ ಕಾಲದವರೆಗೆ ಸಹಿ ಹಾಕದೆ ತಮ್ಮ ಬಳಿ ಹಿಡಿದಿಟ್ಟುಕೊಳ್ಳುವುದಕ್ಕೆ ಆಗದು’ ಎಂದು ಪ್ರಸ್ತಾಪಿಸಿರುವುದು ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.
ಈ ಮಧ್ಯೆ ರಾಷ್ಟ್ರಪತಿ ಅವರು ಸುಪ್ರೀಂ ಕೋರ್ಟಿನ ಈ ತೀರ್ಪಿನ ಬಗೆಗೆ ಹದಿನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟು ವಿವರಣೆ ಕೇಳಿದ್ದಾರೆ. ಈ ಹದಿನಾಲ್ಕು ಪ್ರಶ್ನೆಗಳಿಗೆಲ್ಲ ನ್ಯಾಯಾಲಯದಿಂದ ಸ್ಪಷ್ಟ ವಿವರಣೆ ನೀಡಬೇಕಾದುದು ಮುಖ್ಯ. ಹಾಗಾಗಿ ಸಂವಿಧಾನದತ್ತವಾಗಿ ರಾಜ್ಯಪಾಲರಿಗೆ ದೊರೆತಿರುವ ವಿಧಿ 200, ರಾಷ್ಟ್ರಪತಿ ಅವರಿಗೆ ಇರುವ ವಿಧಿ 201 ವಿವೇಚನಾಧಿಕಾರದ ಬಗೆಗೆ ನ್ಯಾಯಾಲಯ ಪುನರ್ ಪರಿಶೀಲನೆಗಾಗಿ ಆಳವಾದ ಅಧ್ಯಯನಕ್ಕೆ ತೊಡಗಬೇಕಿದೆ. ಇಲ್ಲಿ ರಾಷ್ಟ್ರಪತಿ ಅವರು ಎತ್ತಿರುವ ಪ್ರಶ್ನೆಗಳಲ್ಲಿ ಮುಖ್ಯವಾಗಿ ‘ಸಂವಿಧಾನದ 201ನೇ ವಿಧಿಯಡಿ ತಾವು ಹೊಂದಿರುವ ವಿವೇಚನಾಧಿಕಾರ ಚಲಾಯಿಸಬಹುದಾಗಿದೆ. ಅವರ ಈ ಅಧಿಕಾರ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ? ’ ಎನ್ನುವುದು.
ಹಾಗೆಯೇ ರಾಷ್ಟ್ರಪತಿಯವರಿಗೆ ಕಾಲಮಿತಿ ಮತ್ತು ಅವರು ಹೇಗೆ ತಮ್ಮ ಅಧಿಕಾರ ಚಲಾಯಿಸಬೇಕು ಎಂಬ ಬಗೆಗೆ ಸಂವಿಧಾನದಲ್ಲಿ ಸ್ಪಷ್ಟ ಆದೇಶ ಇಲ್ಲದಿದ್ದಾಗ, ಈ ವಿಷಯದಲ್ಲಿ ನ್ಯಾಯಾಲಯಗಳು ಆದೇಶ ಹೊರಡಿಸುವ ಮೂಲಕ ಕಾಲಮಿತಿ ನಿಗದಿ ಮಾಡಬಹುದೇ? ಅಂತೆಯೇ ರಾಷ್ಟ್ರಪತಿ ಅವರು ಹೊಂದಿರುವ ಅಧಿಕಾರ ಕುರಿತು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 143ನೇ ವಿಧಿಯಡಿ, ರಾಷ್ಟ್ರಪತಿ ಅವರು ಸುಪ್ರೀಂ ಕೋರ್ಟಿನ ಸಲಹೆ ಕೇಳಬೇಕೆ? ರಾಷ್ಟ್ರಪತಿ ಅಂಕಿತಕ್ಕಾಗಿ ಮಸೂದೆಯೊಂದನ್ನು ರಾಜ್ಯಪಾಲರು ಕಾಯ್ದಿರಿಸಿದ ಸಂದರ್ಭದಲ್ಲಿ ರಾಷ್ಟ್ರಪತಿ ಅವರು ಸುಪ್ರೀಂ ಕೋರ್ಟಿನ ಅಭಿಪ್ರಾಯ ಕೇಳಬೇಕೆ? ಎನ್ನುವ ಪ್ರಶ್ನೆಗಳಿಗೆ ಈಗ ಸುಪ್ರೀಂ ಕೋರ್ಟು ತಮಗಿರುವ ಅಧಿಕಾರದ ವ್ಯಾಪ್ತಿಯಲ್ಲಿ ಕಾನೂನಿನಲ್ಲಿ ಇರುವ ಸಂವಿಧಾನದತ್ತ ಅಧಿಕಾರದ ವ್ಯಾಖ್ಯಾನ ಮಾಡಬೇಕಿದೆ.
ಆದರೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಎರಡು ಮನವಿಗಳಿಗೆ ಸಂಬಂಧಿಸಿದಂತೆ 4 ಫೆಬ್ರವರಿ 2016ರಲ್ಲಿ ವಿವಿಧ ಸಚಿವಾಲಯಗಳಿಗೆ ನೀಡಿರುವ ಮಾರ್ಗ ಸೂಚಿಯೊಂದರಲ್ಲಿ ರಾಜ್ಯಪಾಲರಿಂದ ತಮ್ಮ ವಿವೇಚನೆಗೆ ಬಂದ ಮಸೂದೆಗೆ ಒಪ್ಪಿಗೆ ನೀಡಲು ರಾಷ್ಟ್ರಪತಿ ಅವರಿಗೆ ಮೂರು ತಿಂಗಳ ಕಾಲಾವಕಾಶವನ್ನು ವಿಧಿಸಿರುವುದನ್ನು ಉಲ್ಲೇಖಿಸಿದೆ. ಇದು ಈ ಎಲ್ಲ ರಾದ್ಧಾಂತಗಳಿಗೆ ಕಾರಣ ಎಂಬುದಾಗಿ ಹೇಳಲಾಗುತ್ತಿದೆ ( ದಿ ಹಿಂದೂ ಮೇ ೧೭, ೨೦೨೫ ಪುಟ ೧೪). ಇದರಿಂದ ಕೇಂದ್ರ ಸರ್ಕಾರದ ಗೃಹ ಇಲಾಖೆಯೇ ಈಗ ಇಂತಹ ವಿವಾದಗಳಿಗೆ ತಲೆದಂಡ ತೆರಬೇಕಾಗಬಹುದು.
ಇದೇನೇ ಇದ್ದರೂ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪಿನಿಂದ ಸಾಮಾನ್ಯವಾಗಿ ಕೇಂದ್ರ ಸರ್ಕಾರದ ರಾಜಕೀಯ ಆಡುಂಬೊಲವಾಗಿರುವ ರಾಜ್ಯಪಾಲರ ಸ್ವೇಚ್ಛಾಚಾರಕ್ಕೆ ಖಂಡಿತ ಕಡಿವಾಣ ಹಾಕಿದಂತಾಗಲಿದೆ ಎನ್ನುವುದು ಸಾಮಾನ್ಯರ ಅಭಿಪ್ರಾಯ. ಹೀಗಾದರೆ ರಾಜ್ಯಪಾಲರ ಈ ಉಪಟಳಕ್ಕೆ ಬಿಜೆಪಿ ಆಡಳಿತ ಹೊರತಾಗಿ ಈಗಾಗಲೇ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ತೆಲಂಗಾಣ, ಪಂಜಾಬ್ ಮತ್ತು ಕರ್ನಾಟಕ ಸರ್ಕಾರ ಗಳು ನಿಟ್ಟಿಸಿರು ಬಿಡುವಂತಾಗುತ್ತದೆ. ತಮಿಳುನಾಡು ಸರ್ಕಾರ ರಾಜ್ಯಪಾಲರು ನೀಡಿದ ಕಿರುಕುಳದಿಂದ ಬೇಸತ್ತು ರಾಜ್ಯ ಸರ್ಕಾರಗಳಿಗೆ ಮತ್ತು ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿದ್ದರ ಪರಿಣಾಮವಿದು. ಒಂದು ಹಂತದಲ್ಲಿ ರಾಜ್ಯಪಾಲರ ಹುದ್ದೆಯನ್ನೇ ರದ್ದು ಮಾಡಬೇಕು ಎನ್ನುವುದು ತಮಿಳು ನಾಡು ಸರ್ಕಾರದ ಬಲವಾದ ವಾದ.
ಕೇಂದ್ರದಲ್ಲಿ ಅಧಿಕಾರ ನಡೆಸುವವರು ರಾಜಕೀಯ ಕಾರಣಗಳಿಗಾಗಿ ತಮ್ಮ ಪಕ್ಷದಲ್ಲದ ರಾಜ್ಯ ಸರ್ಕಾರಗಳನ್ನು ಬೇಕೆಂದಾಗ ಉರುಳಿಸಲು ರಾಜ್ಯಪಾಲರು ಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಹೊಸದೇನೂ ಅಲ್ಲ. ಈ ಹಿಂದೆ ಕಾಂಗ್ರೆಸ್, ಜನತಾ ಪಕ್ಷ ಹಾಗೂ ಯುನೈಟೆಡ್ ಫ್ರಂಟ್ ಆಡಳಿತದಲ್ಲಿಯೂ ದುರುಪಯೋಗ ನಡೆದಿದೆ.
ಆ ಚಾಳಿ ಈಗ ಬಿಜೆಪಿ ಆಡಳಿತದಲ್ಲಿ ನಿರಾತಂಕವಾಗಿ ಮುಂದುವರಿದಿರುವುದು ಅಚ್ಚರಿ ಏನಲ್ಲ. ಆದರೆ ರಾಜ್ಯಗಳಲ್ಲಿ ಜನ ತಂತ್ರ ವ್ಯವಸ್ಥೆಯ ಆಡಳಿತ ಉಳಿಯಲು ಇದಕ್ಕೊಂದು ಕಾನೂನಿನ ಕಡಿವಾಣ ಹಾಕುವುದು ಈಗ ಅನಿವಾರ್ಯ.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…