ಕುವೆಂಪು ವಿರಚಿತ ಕನ್ನಡ ಭಾಷಾ ಸಂವಿಧಾನದ ಐದು ಸಂಕ್ಷಿಪ್ತ ವ್ಯಾಖ್ಯೆಗಳು

-ಪ್ರೊ. ಶಿವರಾಮಯ್ಯ, ಬೆಂಗಳೂರು

ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಒಂದು ದೇಶಕ್ಕೆ ಒಂದು ಭಾಷೆ ಇರಬೇಕು ಮತ್ತು ಅದು ಹಿಂದಿಯೇ ಆಗಬೇಕು ಎಂದು ಪ್ರತಿಪಾದಿಸಿ ೨೦೧೯ರ ಸೆಪ್ಟೆಂಬರ್ ೧೪ ಅನ್ನು ಹಿಂದಿ ದಿವಸ್ ಎಂದು ಆಚರಿಸಲು ಆದೇಶ ನೀಡಿದರು. ಅಲ್ಲಿಂದೀಚೆಗೆ ಹಿಂದಿ ದಿವಸ್ ಆಚರಣೆೆ ಜಾರಿಗೆ ಬಂತು ಮತ್ತು ಇದಕ್ಕಾಗಿ ಹಿಂದಿಯೇತರ ರಾಜ್ಯಗಳ ಆದಾಯವನ್ನು ವ್ಯಯ ಮಾಡಲಾಗುತ್ತಿದೆ. ಇದು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರುವ ಉತ್ತರಾಧಿಕಾರ ಧೋರಣೆ. ಇದು ಭಾರತದ ಭಾಷಾವಾರು ಒಕ್ಕೂಟ ಪ್ರಾಂತಗಳ ಸಂವಿಧಾನಬದ್ಧ ಹಕ್ಕನ್ನು ಮೊಟಕು ಮಾಡುತ್ತದೆ. ಇದರಿಂದ ಸಾಮಾಜಿಕ ನ್ಯಾಯಕ್ಕೆ ಭಂಗ ಬರುತ್ತದೆ. ಹಾಗೆ ನೋಡಿದರೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಮುಂತಾಗಿ ಸಂವಿಧಾನದ ೮ನೇ ಪರಿಚ್ಛೇದದಲ್ಲಿರುವ ಎಲ್ಲ ೨೨ ಭಾಷೆಗಳೂ ಅಧಿಕೃತ ಭಾಷೆಗಳೇ. ಈ ಎಲ್ಲ ಪ್ರಜೆಗಳೂ ಭಾರತೀಯರೇ. ಹಿಂದಿಯನ್ನು ಒಳಕ್ಕೆ ಬಿಡದಂತೆ ವ್ಯವಹಾರ ನಿರ್ವಹಿಸುತ್ತಿರುವ ತಮಿಳರು ಭಾರತೀಯರಲ್ಲವೆ? ಹಾಗಾದರೆ ಹಿಂದಿಗೆ ಮಾತ್ರ ಏನು ಹೆಚ್ಚುಗಾರಿಕೆ? ಕೇಂದ್ರದೊಡನೆ ವ್ಯವಹಾರಕ್ಕೆ ಇಂಗ್ಲಿಷ್ ಆದರೇನು? ಹಿಂದಿ ಆದರೇನು? ಭಾಷೆ ಯಾರ ಸ್ವತ್ತೂ ಅಲ್ಲ. ಕಲಿತವರ ಸ್ವತ್ತು. ಆದ್ದರಿಂದ ಈಗಾಗಲೇ ಚಾಲ್ತಿಯಲ್ಲಿರುವ ಇಂಗ್ಲಿಷ್ ಭಾಷೆಯೇ ಕೇಂದ್ರದೊಡನೆ ವ್ಯವಹಾರಕ್ಕೂ ಆಯಾ ರಾಜ್ಯ ಭಾಷೆಯೇ ರಾಜ್ಯಗಳ ಆಂತರಿಕ ವ್ಯವಹಾರಕ್ಕೂ ಸಾಕು. ಇದರಿಂದ ಮಕ್ಕಳ ಕಲಿಕೆಯ ಕಾಲ, ಶ್ರಮ ಹಾಗೂ ಪೋಷಕರ ಹಣ ಮಿಗಿತಾಯವಾಗುತ್ತದೆ. ಮಾತೃಭಾಷೆಯಲ್ಲಿ ಕಲಿಯುವುದು ಮಗುವಿಗೂ ಆನಂದ ನೀಡುತ್ತದೆ!

ಈ ನಿಟ್ಟಿನಲ್ಲಿ ರಾಷ್ಟ್ರಕವಿ ಕುವೆಂಪು ಕಾಲ ಕಾಲಕ್ಕೆ ಕನ್ನಡ ಭಾಷಾ ಸಂವಿಧಾನದ ಬಗ್ಗೆ ನಡೆಸಿರುವ ಚಿಂತನೆಗಳನ್ನು ಕನ್ನಡ ‘ಅಭಿವೃದ್ಧಿ ಪ್ರಾಧಿಕಾರ’ವು ಕುವೆಂಪು ವಿರಚಿತ ‘ಕನ್ನಡ ಭಾಷಾ ಸಂವಿಧಾನ’ (೨೦೧೫) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದೆ. ಇದರ ಪ್ರಧಾನ ಸಂಪಾದಕರು ಡಾ. ಎಲ್. ಹನುಮಂತಯ್ಯ. ಸಂಪಾದಕರು ಡಾ. ವಿ. ಚಂದ್ರಶೇಖರ ನಂಗಲಿ. ಕುವೆಂಪು ಅವರ ಕನ್ನಡ ಭಾಷಾ ಸಂವಿಧಾನದ ಆ ಐದು ಸಂಕ್ಷಿಪ್ತ ವ್ಯಾಖ್ಯಾನಗಳು ಕೆಳಕಂಡಂತಿವೆ:

೧. ಪ್ರಾಂತೀಯ ಪ್ರಜಾಪ್ರಭುತ್ವ: ರೀಜನಲ್ ಡೆಮಾಕ್ರಸಿ

ಭರತಮಾತೆಯನ್ನು ಬಂಧನಮುಕ್ತಳನ್ನಾಗಿ ಮಾಡುವುದಕ್ಕೆ ನಾನಾ ಪ್ರಾಂತಗಳ ಆಕೆಯ ಪುತ್ರರೆಲ್ಲರೂ ಒಟ್ಟುಗೂಡಿ ದುಡಿಯಬೇಕು ಎನ್ನುವ ವಿಚಾರದಲ್ಲಿ ಯಾರಲ್ಲಿಯೂ ಎರಡು ಮನಸ್ಸಿಲ್ಲ. ಆದರೆ ಆಕೆಯ ತನುಜಾತೆಯಂತಿರುವ ಪ್ರಾಂತಗಳೆಲ್ಲವೂ ಬಹುಕಾಲದಿಂದಲೂ ಬೆಳೆಯಿಸಿಕೊಂಡು ಬಂದ ತಮ್ಮ ತಮ್ಮ ಸಂಪದ್ಯುಕ್ತವಾದ ವ್ಯಕ್ತಿತ್ವಗಳನ್ನೆಲ್ಲ ಬಲಿಗೊಡಬೇಕು ಎಂಬ ರಾಜಕೀಯಾದ್ವೈತವಾದವು ಅನೇಕ ಸದಭಿಪ್ರಾಯದ ಮತ್ತು ಸದ್ಬುದ್ಧಿಯ ಶ್ರದ್ಧಾಳುಗಳಿಗೆ ಅರ್ಥವಾಗುತ್ತಿಲ್ಲ. ಅಲ್ಲದೆ ವಿಲಕ್ಷಣವಾಗಿಯೂ ತೋರುತ್ತದೆ.

ಆದುದರಿಂದ ಪ್ರಾಂತ ಪ್ರಾಂತಗಳ ವ್ಯಕ್ತಿತ್ವರಕ್ಷಣೆಗೆ ಸ್ವಾತಂತ್ರ್ಯವೂ ಭರತಖಂಡದ ಪೂರ್ಣ ಸ್ವಾತಂತ್ರ್ಯದಷ್ಟೇ ಅವಶ್ಯವಾದುದು. ಆದರೆ ಪ್ರತಿಯೊಂದು ಪ್ರಾಂತಕ್ಕೂ ಅದರ ಬೆಳೆ, ಅದರ ಕೈಗಾರಿಕೆ, ಅದರ ಹಣಕಾಸಿನ ವ್ಯವಸ್ಥೆ, ಅದರ ನಡೆನುಡಿ, ಸಾಹಿತ್ಯ, ಸಂಸ್ಕೃತಿ ಮೊದಲಾದವುಗಳನ್ನು ಕಾಪಾಡಿಕೊಳ್ಳುವ ಹಕ್ಕು ಅದಕ್ಕೆ ಬೇಕೇ ಬೇಕಾಗುತ್ತದೆ. ಆ ಹಕ್ಕಿಗೆ ಭಂಗ ಬಂದರೆ, ಭರತಖಂಡವು ಸಂಪೂರ್ಣ ಸ್ವರಾಜ್ಯವನ್ನು ಸಂಪಾದಿಸಿದರೂ ಆ ಸ್ವಾತಂತ್ರ್ಯವು ಭಗ್ನದರ್ಪಣವಾಗುತ್ತದೆ, ಅಂತಃಕಲಹದ ವಿಕಾರವನ್ನು ಮಾತ್ರ ವಿಕಾರವಾಗಿ ಪ್ರತಿಬಿಂಬಿಸುವ ಒಡೆದ ಕನ್ನಡಿಯಾಗುತ್ತದೆ. (-‘ದೇಶದೇವಿಯ ಪೂಜೆಗೆ ಬನ್ನಿ’ ಲೇಖನದಿಂದ)

೨. ಭಾಷಿಕ ಪ್ರಜಾಪ್ರಭುತ್ವ: ಲಿಂಗ್ವಿಸ್ಟಿಕ್ ಡೆಮಾಕ್ರಸಿ

‘‘ಕನ್ನಡವನ್ನು ಬಲಾತ್ಕಾರದ ಭಾಷೆಯನ್ನಾಗಿ ಮಾಡಲು ಹೇಳುತ್ತಿಲ್ಲ. ಅದು ಪ್ರಥಮ ಭಾಷೆಯಾಗಿರಲಿ. ಮಾತೃಭಾಷೆಗೆ ಸಿಗಬೇಕಾದ ಎಲ್ಲ ಗೌರವವೂ ಅದಕ್ಕೆ ದೊರೆಯಲಿ ಎಂಬುದಷ್ಟೇ ನನ್ನ ಅಭಿಪ್ರಾಯ.

ಇಂಗ್ಲಿಷ್ ಬಲಿಷ್ಠ ಭಾಷೆ. ಅದರ ಕಾಲು ಮುರಿದು ಆಳಾಗಿಸಿಕೊಳ್ಳಿ. ಹೇಳಿದ ಕೆಲಸ ಮಾಡಿಕೊಂಡು ಬಿದ್ದಿರುತ್ತದೆ. ಹಿಂದಿಗೆ ಸ್ವಾತಂತ್ರ್ಯ ಕೊಡುವುದು ಬೇಡ. ಅದರ ಸೊಂಟ ಮುರಿಯಿರಿ. ಅದರಿಂದ ನಮಗೆ ಅಪಾಯವಿಲ್ಲ. ಒಬ್ಬ ಕುಂಟ, ಒಬ್ಬ ಹೆಳವ, ಅವು ನಮ್ಮ ಮೈಮೇಲೆ ಬೀಳುವುದಿಲ್ಲ.

ಇಂಗ್ಲಿಷ್ ಶಿಕ್ಷಣ ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೆ ನಿತ್ಯರೋಗಿಯಂತಿರಬೇಕಾಗುತ್ತದೆ’’. (-ಕನ್ನಡ ಡಿಂಡಿಮ, ಪ್ರೇತ-ಕ್ಯೂ ಕವನ ಸಂಕಲನದ ಮುನ್ನುಡಿಯಿಂದ.)

‘‘ಆಯಾ ದೇಶಭಾಷೆಗಳ ವಿಷಯದಲ್ಲಿ ಆಯಾ ಪ್ರದೇಶಗಳು ಎಷ್ಟು ಶ್ರಮಿಸಿದರೂ ಸಾಲದಾಗಿದೆ, ಎಷ್ಟು ಪ್ರೋತ್ಸಾಹ ಕೊಟ್ಟರೂ ಎಂದಿಗೂ ಅತಿರೇಕ ಅನ್ನಿಸಿಕೊಳ್ಳಲಾರದು. ಸರಕಾರಗಳಾಗಲಿ, ವಿದ್ಯಾಭ್ಯಾಸ ಇಲಾಖೆಗಳಾಗಲಿ, ವಿಶ್ವವಿದ್ಯಾನಿಲಯಗಳಾಗಲಿ, ಇತರ ಸಾಂಸ್ಕೃತಿಕ ಸಂಸ್ಥೆಗಳಾಗಲಿ, ಕಡೆಗೆ ವ್ಯಾಪಾರ ವಾಣಿಜ್ಯಾದಿ ಸಂಸ್ಥೆಗಳಾಗಲಿ ದೇಶ ಭಾಷೆಗೇ ಮೊತ್ತ ಮೊದಲನೆಯ ಸ್ಥಾನ ಕೊಡಬೇಕು. ಹಾಗೆ ಮಾಡದಿದ್ದರೆ ಪ್ರಜಾಪ್ರಭುತ್ವದ ಬುಡದ ಬೇರಿಗೆ ಬೆನ್ನೀರೆರೆದಂತಾಗುತ್ತದೆ’’.

(-‘ಸಂಸ್ಕೃತಿ ಕರ್ಣಾಟಕ’ ಲೇಖನದಿಂದ)

೩. ಧಾರ್ಮಿಕ ಪ್ರಜಾಪ್ರಭುತ್ವ: ರಿಲಿಜಿಯಸ್ ಡೆಮಾಕ್ರಸಿ

‘‘ನಮ್ಮ ರಾಷ್ಟ್ರವನ್ನು ಸೆಕ್ಯೂಲರ್ ಸ್ಟೇಟ್ ಎಂದು ಸಾರಿದ್ದೇವೆ. ಎಂದರೆ ಧರ್ಮಬಾಹಿರ, ಮತ ವಿದ್ವೇಷಕರ, ನಾಸ್ತಿಕ ಅಥವಾ ಚಾರ್ವಾಕ ಎಂದರ್ಥವಲ್ಲ. ಸಮನ್ವಯ ರಾಷ್ಟ್ರ ಎಂದರ್ಥ. ಎಲ್ಲ ಮತಗಳೂ ಸತ್ಯದೆಡೆಗೆ ನಮ್ಮನ್ನು ಕೊಂಡೊಯ್ಯುವ ಬೇರೆ ಬೇರೆ ಪಥಗಳು. ಆದ್ದರಿಂದ ಯಾವ ಮತವಾಗಲಿ ಇನ್ನೊಂದು ಮತವನ್ನು ನಿಂದಿಸಲು ಕಾರಣವಿಲ್ಲ. ಎಲ್ಲ ಮತಗಳೂ ದೇವರೆಡೆಗೆ ದಾರಿಗಳೆ ಆಗಿರುವುದರಿಂದ ಮತಾಂತರಗೊಳಿಸುವಂತಹ ಅರ್ಥ ಬರ್ಬರಕ್ರಿಯೆಗಳಿಗೆ ಇಲ್ಲಿ ಅರ್ಥವಿಲ್ಲ. ಆದ್ದರಿಂದ ಸ್ಥಾನವಿಲ್ಲ. ಎಲ್ಲರೂ ತಮ್ಮ ತಮ್ಮ ದಾರಿಗಳನ್ನರಿತು ಭಕ್ತಿಯಿಂದ ಭಗವಂತನೆಡೆಗೆ ಸಾಗುವುದರ ಜೊತೆಗೆ, ಅನ್ಯಮತಗಳನ್ನು ಸಹಾನುಭೂತಿಯಿಂದ ಅರಿತು, ಇತರರ ಸಾಮಾಜಿಕ ಜೀವನದೊಂದಿಗೆ ಮೈತ್ರಿಯಿಂದ ಬೆರೆತು, ಭಾಗವಹಿಸಿ, ರಾಷ್ಟ್ರದ ಜನರಲ್ಲಿ ಸಹೋದರಭಾವವನ್ನೂ, ಐಕ್ಯಮತದ ಬುದ್ಧಿಯನ್ನೂ ನೆಲೆಗೊಳಿಸಬೇಕು’’.

(-‘ಸಂಸ್ಕೃತಿ ಕರ್ಣಾಟಕ’ ಲೇಖನದಿಂದ)

೪. ಶಿಕ್ಷಣ ಮಾಧ್ಯಮದಲ್ಲಿ ಪ್ರಜಾಪ್ರಭುತ್ವ

‘‘ಇಂಗ್ಲಿಷ್ ಮಾಧ್ಯಮ ಭರತಖಂಡದಲ್ಲಿ ಎಂತಹ ದುರಂತ ಪರಿಣಾಮಗಳನ್ನುಂಟು ಮಾಡಿದೆ ಎಂಬುದನ್ನು ದೇಶ ಭಾಷಾಮಾಧ್ಯಮ ಹೇಗೆ ತಾರಕವಾಗಬಲ್ಲದೆಂಬುದನ್ನು ಪೂಜ್ಯ ಮಹಾತ್ಮ ಗಾಂಧಿಯವರು ತಮ್ಮ ಅಸ್ಖಲಿತವಾದ ಜ್ಯೋತಿರ್ವಾಣಿಯಿಂದ ಘೋಷಿಸಿದ್ದಾರೆ. ಈ ನಿಲುವನ್ನು ಎಲ್ಲ ಶಿಕ್ಷಣ ತಜ್ಞರೂ ನಿಸ್ಸಂದಿಗ್ಧವಾಗಿ ಎತ್ತಿ ಹಿಡಿದಿದ್ದಾರೆ. ಇಷ್ಟಾದರೂ ಇಂಗ್ಲಿಷ್ ಮಾಧ್ಯಮವನ್ನು ಉಳಿಸಿಕೊಳ್ಳಬೇಕೆಂಬುದು ಪಟ್ಟಭದ್ರ ಹಿತಾಸಕ್ತಿಗಳ ಹತಾಶ ಪ್ರಯತ್ನವಾಗಿದೆ. ಇಂಗ್ಲಿಷ್ ಬೇಡವೆಂದಲ್ಲ, ಯಾರಿಗೆ ಬೇಕು, ಎಷ್ಟು ಬೇಕು ಎಂಬುದು ಮುಖ್ಯವಾದ ಪ್ರಶ್ನೆ. ಕೇವಲ ಹಿಡಿಮಂದಿಯ ಸುಖಸ್ವಾರ್ಥಗಳಿಗಾಗಿ ಇಂಗ್ಲಿಷಿನ ವಧ್ಯಪೀಠದ ಮೇಲೆ ಕೋಟ್ಯಂತರ ಜನತೆಯ ಕಲ್ಯಾಣದ ಮಾರಣಹೋಮವಾಗುತ್ತಿರುವುದು ಪ್ರಜಾಪ್ರಭುತ್ವ ತತ್ವದ ಬುಡಕ್ಕೇ ಕಠಾರ ಪ್ರಾಯವಾಗಿದೆ’’. (-ಕರ್ಣಾಟಕ: ‘ಇಟ್ಟ ಹೆಸರು ಕೊಟ್ಟ ಮಂತ್ರ’ ಲೇಖನದಿಂದ)

‘‘ಭಾರತದ ಒಂದು ಭಾಷೆ ಕನ್ನಡ. ಭಾರತಿಗೆ ಒಂದು ಬಾಹು ಕನ್ನಡ. ನಾನೇನಾದರೂ ಚಿತ್ರಕಾರನಾಗಿದ್ದರೆ ಭಾರತಿಗೆ ಹದಿನಾಲ್ಕು (ಈಗ ಇಪ್ಪತ್ತೆರಡು) ಬಾಹುಗಳನ್ನು ಚಿತ್ರಿಸುತ್ತಿದ್ದೆ. ಆ ಹದಿನಾಲ್ಕು ಬಾಹುಗಳ ಭಾರತದ ಹದಿನಾಲ್ಕು ಮುಖ್ಯ ಭಾಷೆಗಳನ್ನು ಪ್ರತಿನಿಧಿಸುತ್ತವೆ. ಈಗ ಪ್ರಾಂತ ಭಾಷೆಗಳ ವಿಷಯದಲ್ಲಿ, ಅವುಗಳ ಸಾಮರ್ಥ್ಯದಲ್ಲಿ ಎಳ್ಳಷ್ಟೂ ಅಧೈರ್ಯಪಡಬೇಕಾಗಿಲ್ಲ. ಇಂಗ್ಲಿಷಿಗೆ ಸರಿದೊರೆಯಾಗಿ ಹೆಗಲೆಣೆಯಾಗಿ ನಿಲ್ಲಬಲ್ಲ ಕನ್ನಡದಂತಹ ಭಾಷೆಗಳು ಭಾರತದಲ್ಲಿವೆ. ಎಂತಹ ಗಹನವಾದ ವಿಷಯವನ್ನಾಗಲಿ, ಸೂಕ್ಷ್ಮವಾದ ಭಾವವನ್ನಾಗಲಿ ಕನ್ನಡದಲ್ಲಿ ಸರಳವಾಗಿಯೂ ಸುಲಭವಾಗಿಯೂ ಶಕ್ತಿಪೂರ್ಣವಾಗಿಯೂ ವಿವರಿಸುವುದು ಸಾಧ್ಯ’’.

(-‘ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು’ ಲೇಖನದಿಂದ.)

೫. ಕೇಂದ್ರ ಮತ್ತು ರಾಜ್ಯಗಳ ಸಂಬಂಧದಲ್ಲಿ ಪ್ರಜಾಪ್ರಭುತ್ವ

‘‘ಇಂಗ್ಲಿಷ್‌ಗಿಂತ ಹಿಂದಿ ಹೆಚ್ಚು ಅಪಾಯಕಾರಿ. ನಾವು ಎಂದು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡೆವೋ ಅಂದೇ ಹಿಂದಿ ಉರುಳಿಗೆ ಸಿಕ್ಕಿದೆವು. ತ್ರಿಭಾಷಾ ಸೂತ್ರವನ್ನು ತಮಿಳುನಾಡು ಒಪ್ಪಿಲ್ಲ. ಈ ವಿಷಯದಲ್ಲಿ ನಾವು ತಮಿಳರನ್ನು ಅನುಸರಿಸಬೇಕು. ‘ಬಹುಭಾಷೆಗಳಲ್ಲಿ ದ್ವಿಭಾಷೆ’- ಎಂಬುದು ನಮ್ಮ ಸೂತ್ರವಾಗಬೇಕು. ಹಿಂದಿ ಇದುವರೆಗೆ ಪರೀಕ್ಷೆಯ ವಿಷಯವಾಗಿರಲಿಲ್ಲ. ಈಗ ಆಗಿದೆಯಂತೆ. ಇದು ತಪ್ಪು. ಹಳ್ಳಿಗಳಿಗೂ ಹಿಂದಿಯನ್ನು ವಿಸ್ತರಿಸುವುದು ಅವಿವೇಕ. ಇಂತಹುದು ಯಾವ ದೇಶದಲ್ಲೂ ಇಲ್ಲ.

ನಾವು ನೆಹರೂ ಮುಂತಾದ ನಾಯಕರ ಮೇಲಿನ ಗೌರವದಿಂದ ಕೆಲವು ವಿಷಯಗಳನ್ನು ಸುಮ್ಮನೆ ಒಪ್ಪಿಕೊಂಡು ತಪ್ಪುಮಾಡಿದೆವೆನಿಸುತ್ತದೆ. ರಾಜ್ಯಗಳಿಗೆ ಸ್ವಾಯತ್ತೆ ಅಗತ್ಯ. ಅಮೆರಿಕದ ಖಠಿಠಿಛಿಗಳಿಗಿರುವಂತೆ. ಅಲ್ಲಿ ಹೊಸ ಹೊಸ ಸಂಸ್ಥಾನಗಳು ಉದ್ಭವಿಸುತ್ತಲೇ ಇವೆ. ಅವುಗಳಿಗೂ ಸ್ವಾತಂತ್ರ್ಯವಿರುತ್ತದೆ, ರಾಷ್ಟ್ರಕ್ಕೂ ಭದ್ರತೆಯಿರುತ್ತದೆ. ನಮ್ಮದು ಖ್ಞಿಜಿಠಿಛಿ ಖಠಿಠಿಛಿ ಟ್ಛ ಐ್ಞಜಿ ಆಗಬೇಕೆಂಬುದೇ ನಮ್ಮ ದೃಢವಾದ ಅಭಿಪ್ರಾಯ. ಇದು ಇಂದಲ್ಲ ನಾಳೆ ಆಗುತ್ತದೆ. ರಾಜ್ಯಗಳು ಸ್ವಾಯತ್ತವಾಗಿರಲಿ, ಸೈನ್ಯ ಮುಂತಾದ ವ್ಯವಸ್ಥೆಗಳು ಕೇಂದ್ರದ ಕೈಯಲ್ಲಿರಲಿ’’.

(’ಕನ್ನಡ ಚಳವಳಿ ಜೀವಂತವಾಗಿರಲಿ’ ಲೇಖನದಿಂದ)

ಪ್ರಜಾಪ್ರಭುತ್ವದ ತತ್ವವನ್ನು ಕುವೆಂಪು ಎಷ್ಟೊಂದು ವೈವಿಧ್ಯಮಯ ನೆಲೆಗಳಿಂದ ವ್ಯಾಖ್ಯಾನಿಸಿದ್ದಾರೆಂಬುದಕ್ಕೆ ಮೇಲಿನ ಐದು ಉಪಶೀರ್ಷಿಕೆಗಳ ಚಿಂತನೆ ಮುಖ್ಯ ನಿದರ್ಶನ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಬ್ರಿಟಿಷರ ವಿರುದ್ಧ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ, ಬಂಗಾಳದಿಂದ ಪಾಕಿಸ್ತಾನದವರೆಗೆ ನಮ್ಮ ಜನ ಒಮ್ಮನಸ್ಸಿನಿಂದ ಭಾಗವಹಿಸಿದ್ದರು. ಅವಿಭಜಿತ ಇಂಡಿಯಾ ಉಪಖಂಡ ಭಾವೈಕ್ಯತೆಯಿಂದ ಕೂಡಿತ್ತಲ್ಲವೆ? ಆಗ ಹಿಂದಿಯೇನು ಎಲ್ಲರ ಭಾಷೆ ಆಗಿರಲಿಲ್ಲ. ಆದರೂ ಜಾತ್ಯತೀತವಾಗಿ, ಭಾಷಾತೀತವಾಗಿ, ವರ್ಗಾತೀತವಾಗಿ ಭಾರತ ಒಂದಾಗಿತ್ತು. ಭಾರತೀಯರು ನಾವು ಎಂದೆಂದು ಮುಂದೆ; ಕುಗ್ಗದೆಯೆ ಜಗ್ಗದೆಯೆ ನುಗ್ಗಿ ನಡೆ ಮುಂದೆ ಎಂದು ಗಾಂಧೀಜಿಯ ಹೆಜ್ಜೆಗೆ ಹೆಜ್ಜೆ ಹಾಕಿ ನಡೆದರು.

ಆದರೆ ಪ್ರಸಕ್ತ ಕೇಂದ್ರ ಸರಕಾರ ಹಿಂದಿ ಮಾತ್ರ ದೇಶವನ್ನು ಒಂದುಗೂಡಿಸುವುದು ಎಂದು ಜನರ ನಡುವೆ ಭಾಷಾ ವೈಷಮ್ಯವನ್ನು ಹುಟ್ಟುಹಾಕಿ ರಾಜಕಾರಣ ಮಾಡುತ್ತಿರುವುದು ಪ್ರಾಂತೀಯ ಭಾಷೆಗಳಿಗೆ ಎಸಗುವ ಅಪಮಾನ. ಸಂವಿಧಾನದ ಪ್ರಕಾರ ಇಲ್ಲಿರುವ ಎಲ್ಲ ಪ್ರಜೆಗಳೂ ಸಮಾನರು. ಹಾಗೆ ಅವರಾಡುವ ಮಾತೃಭಾಷೆಗಳೆಲ್ಲವೂ ಅಧಿಕೃತ ಭಾಷೆಗಳೇ. ಆದ್ದರಿಂದ ಬಿಜೆಪಿ ನೇತಾರರು ‘ಹಿಂದಿ ದಿವಸ್’ ಮುಂತಾದ ಆಚರಣೆಯನ್ನು ಕೈ ಬಿಡಬೇಕು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕೇಂದ್ರಸರಕಾರವು ಹಿಂದಿಯನ್ನು ಹೇರಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೆಂದಂತೆ ಇದು ‘ಇಂಡಿಯಾ’ ದೇಶವೇ ಹೊರತು ‘ಹಿಂದಿಯಾ’ ದೇಶ ಅಲ್ಲ. ತಮಿಳು ಭಾಷಿಕರಿಗಿರುವ ಈ ಭಾಷಾಭಿಮಾನ, ಆತ್ಮಪ್ರತ್ಯಯ ಉಳಿದ ಪ್ರಾಂತೀಯ ಜನಪ್ರತಿನಿಧಿಗಳಲ್ಲೂ ಜಾಗೃತವಾಗಬೇಕು. ಈ ತಿಳುವಳಿಕೆಯಿಂದ ಪ್ರಸಕ್ತ ನಮ್ಮ ಜನಪ್ರತಿನಿಧಿಗಳು, ಸಂಸದರು, ಶಾಸಕರು, ಸಾರ್ವಜನಿಕರು ಹಿಂದಿ ಹೇರಿಕೆಯನ್ನು ವಿರೋಧಿಸಿ ಅದರ ಪಾರಮ್ಯವನ್ನೂ, ಉತ್ತರದವರ ಯಾಜಮಾನ್ಯವನ್ನೂ ತಡೆಗಟ್ಟಬೇಕಾಗಿದೆ.

ಯಾಕೆಂದರೆ ಕುವೆಂಪು ಅವರೆಂದಂತೆ ‘‘ಉತ್ತರದ ಕಾಶಿಯಲಿ ಕತ್ತೆಮಿಂದೈತರಲು ದಕ್ಷಿಣದ ದೇಶಕದು ಕುದುರೆಯಹುದೆ?’’

(-‘ಸಾಯುತಿದೆ ನಿಮ್ಮನುಡಿ ಓ ಕನ್ನಡದ ಕಂದರಿರ’, ‘ಕೋಗಿಲೆ ಮತ್ತು ಸೋವಿಯತ್ ರಶ್ಯ’ ಕವನ ಸಂಕಲನ.)

ಕೃಪೆ- ವಾರ್ತಾ ಭಾರತಿ

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

6 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

6 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

7 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

7 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

7 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

7 hours ago