ಕೆ. ಪಿ. ನಾಗರಾಜ್, ಪಬ್ಲಿಕ್ ಟಿವಿ
ಎಸ್. ಎಂ. ಕೃಷ್ಣ ಪಾಲಿಗೆ ಮೈಸೂರು ಎರಡನೇ ತವರೂರು! ಏಕೆಂದರೆ ತಮ್ಮ ೧೨ನೇ ವಯಸ್ಸಿಗೆ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಎಸ್. ಎಂ. ಕೃಷ್ಣ ಇಲ್ಲಿಯೇ ಹೈಸ್ಕೂಲ್, ಕಾಲೇಜ್ ಹಾಗೂ ಪದವಿ ಶಿಕ್ಷಣ ಪಡೆದರು. ಒಂದು ರೀತಿಯಲ್ಲಿ ತಮ್ಮ ಯೌವನದ ಬಹುದಿನಗಳನ್ನು ಕಳೆದಿದ್ದು ಮೈಸೂರಿನಲ್ಲೇ. ಹೀಗಾಗಿ ಮೈಸೂರು ಅಂದರೆ ಎಸ್‌ಎಂಕೆ ಪಾಲಿಗೆ ಇನ್ನೊಂದು ತವರೂರು!
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದಿ ಅದೇ ಮೈಸೂರು ವಿವಿಯ ಗೌರವ ಡಾಕ್ಟರೇಟ್‌ಗೂ ಪಾತ್ರರಾದರು. ಯಾವ ದಸರಾವನ್ನು ಕಾಲೇಜು ದಿನಗಳಲ್ಲಿ ಸಾಮಾನ್ಯ ಜನರಂತೆ ನೋಡಿ ಕಣ್ತುಂಬಿಕೊಳ್ತಿದ್ದರೋ ಅದೇ ದಸರಾವನ್ನು ಮುಂದೆ ತಾವೇ ಉದ್ಘಾಟಿಸಿದರು. ಇದೆಲ್ಲ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಸಾಮಾನ್ಯನಿಂದ ಅಸಾಮಾನ್ಯ ವೃಕ್ತಿಯಾಗಿ ಬೆಳೆದ ನಿಂತ ಪರಿಗೆ ಸಾಕ್ಷಿ.
ತಾನು ಓದಿ ಬೆಳೆದ ಊರಿನ ಋಣವನ್ನು ಕೃಷ್ಣ ಬಹು ಆದ್ಯತೆಯಿಂದ ತೀರಿಸುವ ಕೆಲಸ ಮಾಡಿದರು. ಮೈಸೂರು ಅಧುನಿಕ ಅಭಿವೃದ್ಧಿಯ ಪಥಕ್ಕೆ ಬರುವ ಆರಂಭಿಕ ಹಂತದಲ್ಲಿ ಇದ್ದಾಗಲೇ ಮೈಸೂರಿಗೆ ಒಂದು ಭವಿಷ್ಯದ ಥೀಮ್ ಹಾಕಿಕೊಟ್ಟವರು ಕೃಷ್ಣ. ಮೈಸೂರಿಗೆ ಬೆಂಗಳೂರಿನಂತೆ ಬೆಳೆಯುವ ಶಕ್ತಿ ಇದೆ. ಆದರೆ ಮೈಸೂರು ಬೆಂಗಳೂರಿನಂತೆ ಹೇಗ್ಹೇಗೋ ಬೆಳೆಯಬಾರದು, ಇದಕ್ಕೆ ಅಚ್ಚುಕಟ್ಟು ಇರಬೇಕು ಅಂತ ತಾವು ಸಿಎಂ ಆಗಿದ್ದ ವೇಳೆಯಲ್ಲಿ ಹತ್ತಾರು ಬಾರಿ ಹೇಳಿದ್ದರು. ಈ ಕಾರಣಕ್ಕೆ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಮುಂದಾದರು.
ಆಗ ಬಹಳಷ್ಟು ಮೈಸೂರಿಗರೆ ಮೈಸೂರಿಗೆ ಯಾಕೆ ಹೊರ ವರ್ತುಲ ರಸ್ತೆ, ಇಲ್ಲಿರುವ ರಸ್ತೆಗಳೇ ಖಾಲಿ ಇವೆ. ನಮಗೆ ಯಾಕೆ ಬೇಕು ಹೊರ ವರ್ತುಲ ರಸ್ತೆ ಅಂತಾ ಕೇಳುವ ವೇಳೆಯಲ್ಲಿ ಇಲ್ಲ ಮೈಸೂರಿನ ಭವಿಷ್ಯಕ್ಕೆ ಇದು ಬೇಕು ಅಂತಾ ನಿರ್ಧರಿಸಿ ಹೊರ ವರ್ತುಲ ರಸ್ತೆಗೆ ಗುದ್ದಲಿಪೂಜೆ ಮಾಡಿದರು. ೨೨ ವರ್ಷಗಳ ಹಿಂದೆ ಮೈಸೂರಿಗೆ ಯಾವುದು ಬೇಡವಾಗಿತ್ತೋ ಇವತ್ತು ಅದೇ ಹೊರ ವರ್ತುಲ ರಸ್ತೆ ಮೈಸೂರಿನ ಅಭಿವೃದ್ಧಿಯನ್ನೇ ೧೦ ಪಟ್ಟು ಹೆಚ್ಚು ಮಾಡಿಸಿದೆ.
ಇವತ್ತು ಆ ಹೊರ ವರ್ತುಲ ರಸ್ತೆ ಇರದಿದ್ದರೆ ಮೈಸೂರು ಒಳಗಿನ ಸಂಚಾರ ದಟ್ಟಣೆ ಎಷ್ಟಿರುತ್ತಿತ್ತು? ಹೊರ ವರ್ತುಲ ರಸ್ತೆ ಇರದಿದ್ದರೆ ಈ ವೇಳೆಗಾಗಲೇ ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಮೈಸೂರು ಪೈಪೋಟಿ ಕೊಡುವುದಕ್ಕೆ ಶುರು ಮಾಡಿ ಬಿಡುತ್ತಿತ್ತು. ಅಂತಹದೊಂದು ಅಪಾಯದಿಂದ ಮೈಸೂರನ್ನು ತಕ್ಕ ಮಟ್ಟಿಗೆ ಬಚಾವ್ ಮಾಡಿದ್ದು ಕೃಷ್ಣ ಅವರು.
ಬೆಂಗಳೂರು ಮೈಸೂರು ನಡುವೆ ನಾಲ್ಕು ಪಥದ ರಸ್ತೆ ಮಾಡಿಸಿದ ಎಸ್. ಎಂ. ಕೃಷ್ಣ ಬೆಂಗಳೂರು ಮತ್ತು ಮೈಸೂರು ನಡುವೆ ಬಹಳ ದೊಡ್ಡ ಕೊಂಡಿ ನಿರ್ಮಿಸಿ ಮೈಸೂರಿನ ವೇಗದ ಬೆಳವಣಿಗೆಗೆ ಕಾರಣರಾದರು.
ಯಾವಾಗ ಮೈಸೂರು – ಬೆಂಗಳೂರು ನಡುವೆ ನಾಲ್ಕು ಪಥದ ರಸ್ತೆ, ಮೈಸೂರಿಗೆ ಹೊರ ವರ್ತುಲ ರಸ್ತೆ ಶುರುವಾದವೋ ಮೈಸೂರಿನಲ್ಲಿ ಐಟಿ – ಬಿಟಿ ಕ್ಷೇತ್ರ ಚಿಗುರೊಡೆಯಿತು. ಇನ್ಛೋಸಿಸ್, ವಿಪ್ರೋ, ನೆಸ್ಟ್ಲೆಯಂತಹ ದೊಡ್ಡ ದೊಡ್ಡ ಕಂಪೆನಿಗಳು ಮೈಸೂರಿನಲ್ಲಿ ಶುರುವಾಗುವುದಕ್ಕೆ ಓಂಕಾರ ಹಾಕಿದ್ದು ಕೃಷ್ಣ!
ಐಟಿ ಬಿಟಿ ಕಂಪೆನಿಗಳು ಮೈಸೂರಿಗೆ ಹೆಜ್ಜೆ ಇಟ್ಟಿದ್ದು ರಿಂಗ್ ರೋಡ್ ಕಾಮಗಾರಿ ಶುರುವಾಗಿದ್ದು ಮೈಸೂರಿನ ಖದರ್ ಅನ್ನೇ ಬದಲಾಯಿಸಿ ಬಿಟ್ಟಿತು. ಭೂಮಿಯ ಬೆಲೆ ಗಗನಕ್ಕೆ ಏರಿತು. ರಿಯಲ್ ಎಸ್ಟೇಟ್‌ಗೆ ಬೂಸ್ಟರ್ ಡೋಸ್ ಸಿಕ್ಕಂತಾಯಿತು. ಹೂಡಿಕೆದಾರರ ಪಾಲಿಗೆ ಮೈಸೂರು ಬೆಂಗಳೂರಿಗಿಂತ ಬೆಟರ್ ಅನ್ನಿಸಿತೊಡಗಿತ್ತು. ಇದೆಲ್ಲದರ ಕಾರಣಕ್ಕೆ ಇವತ್ತು ಮೈಸೂರು ಅತಿ ವೇಗದ ಅಭಿವೃದ್ಧಿಯ ನಗರವಾಗಿದೆ. ಅವತ್ತು ಕೃಷ್ಣ ಅವರು ಹಾಕಿದ ಅಧುನಿಕ ಅಭಿವೃದ್ಧಿಯ ಬೀಜ ಇವತ್ತಿಗೆ ಫಲ ನೀಡಿದೆ. ಆ ಫಲವನ್ನು ಎಸ್. ಎಂ. ಕೃಷ್ಣ ಕಣ್ಣಾರೆ ಕಂಡರು ಕೂಡ ಇದೆಲ್ಲಾ ಆಗಿದ್ದು ನನ್ನಿಂದ ಅಂತ ಎಂದಿಗೂ ಬೀಗಿದವರಲ್ಲ. ತಾವು ಬಿತ್ತಿದ ಅಧುನಿಕ ಅಭಿವೃದ್ಧಿಯ ಬೀಜ ಈ ನಾಡಿನ ದಿಕ್ಕನ್ನೇ ಬದಲಾಯಿಸಿತು ಎಂದು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಕೂಡ ಎಂದೆಂದಿಗೂ ಇದಕ್ಕೆಲ್ಲ ಕಾರಣ ನನ್ನ ದೂರದೃಷ್ಟಿ ಎಂದು ಹೇಳದೆ ಮೌನವಾಗಿಯೇ ಇದ್ದುಬಿಟ್ಟರು. ಈ ಗುಣ ಅವರನ್ನು ಜನಮಾನಸದಲ್ಲಿ ಇನ್ನೂ ದೊಡ್ಡವರಾಗಿಸಿತು. ಹೀಗೆ ತಾವು ಓದಿದ ಊರಿನ ಋಣವನ್ನು ಕೃಷ್ಣ ಅವರು ಬಡ್ಡಿ ಸಮೇತ ತೀರಿಸಿದರು. ಉಪ್ಪಿನ ಋಣ ತೀರಿಸೋದು ಅಂದರೆ ಇದೇ ಇರಬೇಕೇನೋ! ಕೃಷ್ಣ ಸರ್ ನಿಮ್ಮನ್ನು ಮೈಸೂರು ಎಂದಿಗೂ ಮರೆಯಲ್ಲ. ಏಕೆಂದರೆ ಮೈಸೂರಿನ ಮಣ್ಣು ಯಾವತ್ತಿಗೂ ಕೃತಜ್ಞತೆಯ ಸೊಗಡು ಕಳೆದುಕೊಳ್ಳುವುದಿಲ್ಲ.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…