ಕೆಟ್ಟಬಾಳು ಮತ್ತು ಘನತೆಯ ಸಾವು
ಘನತೆಯ ಆತ್ಮಹತ್ಯೆಗಳೂ ಹೇಡಿತನವಲ್ಲ. ಆಯಸ್ಸು ಮುಗಿದಾಗ ಸಾವನ್ನು ಸ್ವೀಕರಿಸುವ ಸಿದ್ಧತೆಯೇ ಮೃತ್ಯುಂಜಯತ್ವ!
ನಮಗೆ ಪದವಿ ತರಗತಿಯಲ್ಲಿ ಆಂಗ್ಲಕವಿ ಜಾನ್ ಡನ್‌ನ ‘ಡೆತ್ ಬಿ ನಾಟ್ ಪ್ರೌಡ್’ ಕವನವಿತ್ತು. ಅದು ಎಲೈ ಸಾವೇ ಗರ್ವ ಪಡಬೇಡ ಎನ್ನುತ್ತ ಅದರ ತಲೆಯ ಮೇಲೆ ಮೊಟಕುತ್ತದೆ. ಹೇಗೆ ಸಾವು ಭೀಕರವಲ್ಲ ಎಂದು ನಾಟಕೀಯವಾಗಿ ವಾದಿಸುತ್ತ ಹೋಗುತ್ತದೆ. ಅದರ ತರ್ಕದಲ್ಲಿ ಸಾವಿನ ಹಮ್ಮನ್ನು ಮುರಿವ, ಮೃತ್ಯು ಭೀತಿ ಕಳೆದು ಜೀವಕ್ಕೆ ಬದುಕುವ ಹುಮ್ಮಸ್ಸು ಹುಟ್ಟಿಸುವ ಆಶಯವಿದೆ. ಈ ತರ್ಕವು ಎಷ್ಟೇ ಶಕ್ತವಾಗಿದ್ದರೂ, ಅದು ಹುಟ್ಟಿಸುವ ಹುಮ್ಮಸ್ಸು ಸಾವಿನ ಕಟುವಾಸ್ತವದ ಮೇಲೆ ಹಾಸಿದ ಪರದೆಯೇ. ಕವನವನ್ನು ಮೆಚ್ಚಿದರೂ ಆಳದಲ್ಲಿ ಸಾವಿಗೆ ಮನ ಅಳುಕುತ್ತದೆ. ನಾನು ಶವದರ್ಶನಕ್ಕೆ ಅಥವಾ ಮಣ್ಣಿಗೆ ಹೋಗಲು ತಪ್ಪಿಸುತ್ತೇನೆ. ಮೃತದೇಹವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಗೋರಿಯಲ್ಲಿಡುವ ಮುನ್ನ, ಅಂತಿಮ ದರ್ಶನಕ್ಕೆ ಮುಖಭಾಗದ ಕಫನ್ ಭಾಗವನ್ನಷ್ಟೆ ಬಿಚ್ಚಿ ತೋರುವ, ನಿದ್ರಾಭಂಗಿಯಲ್ಲಿ ಎವೆಮುಚ್ಚಿದ ಭಾವನೆಗಳಿಲ್ಲದ ಕಳೇವರ, ನನ್ನನ್ನು ಕಂಗೆಡಿಸುತ್ತದೆ. ಇಕ್ಕಟ್ಟಾಗಿ ತೋಡಿದ ಮಣ್ಣಿನ ಗೋಡೆಗಳ ನಡುವೆ, ಮಣ್ಣ ಹೊದಿಕೆ ಹೊದ್ದುಕೊಂಡು ಲೆಕ್ಕವಿಲ್ಲದಷ್ಟು ಕಾಲ ಮಲಗುವ ಕಲ್ಪನೆಯಿಂದ ಜೀವ ನಡುಗುತ್ತದೆ. ಹುಟ್ಟಿ ಬೆಳೆದು ಬದುಕಿದ ಈ ಲೋಕವನ್ನು- ನದಿ ಕೆರೆ ತಾರೆ ಆಗಸ ಮರ ಹಕ್ಕಿ ಹಾಡು ಪುಸ್ತಕ ಆಪ್ತರನ್ನು-ಮತ್ತೆಂದೂ ಕಾಣದಂತೆ ಖಾಯಮ್ಮಾಗಿ ತೊರೆದು ಹೋಗುವುದು ನಿಜಕ್ಕೂ ಭಯಾನಕ ಕಲ್ಪನೆ.
ಆದರೆ ಈ ಭೀತಿ ದುಗುಡ ತಲ್ಲಣಗಳೆಲ್ಲ ಬದುಕಿರುವವರಿಗೆ. ಸತ್ತವರಿಗಲ್ಲ. ಅಲ್ಲಾಹನು ಗೋರಿಯಲ್ಲಿ ಮಲಗಿರುವ ಎಲ್ಲರನ್ನೂ ಅಂತಿಮ ವಿಚಾರಣೆಯ ದಿನ ಎಬ್ಬಿಸುತ್ತಾನೆಂದು ಮುಸ್ಲಿಮರ ನಂಬಿಕೆ. ಇದನ್ನು ಹಶರ್ ದಿನ ಎನ್ನುವರು. ಆಗ ಏಳಲು ಅನುಕೂಲವಾಗಲೆಂದೇ ಗೋರಿಯಲ್ಲಿ ಮಗ್ಗುಲಾಗಿ ಮಲಗಿಸು ತ್ತಾರೆ. ಅಮ್ಮ ಬಂಧುಗಳ ಜತೆ ನ್ಯಾಯಕ್ಕೆ ಕೂತಾಗ ‘ಮಾತಿಗೆ ತಪ್ಪಿದರೆ ಹಶರಿನ ದಿನ ನಿಮ್ಮ ಕೈಹಿಡಿದು ಕೇಳುತ್ತೇನೆ’ ಎನ್ನುತ್ತಿದ್ದಳು. ಇದು ಶ್ರದ್ಧೆಯುಳ್ಳವರಿಗೆ ನೆಮ್ಮದಿಯನ್ನು ಕೊಡುವ ಸಂಗತಿ. ಸಮಸ್ಯೆಯೆಂದರೆ, ಮೃತ್ಯುವಿನ ನಂತರದ ಪರ್ಯಾಯ ಬದುಕಿನಲ್ಲಿರುವ ನರಕ, ಸ್ವರ್ಗ, ಪುನರ್ಜನ್ಮಗಳು ನಿಜವಾಗಿ ಇವೆಯೊ, ಇಲ್ಲವೊ ಎಂಬ ಪ್ರಶ್ನೆ ಶಂಕಿಗರದ್ದು. ಅದು ಹುಟ್ಟಿಸುವ ಗಾಢ ವಿಷಾದ ಅಭದ್ರತೆ. ಸಾವನ್ನು ಮುಂದಿಟ್ಟುಕೊಂಡು, ಕಾಣದ ಕಡಲಲ್ಲಿ ಯಾನ ಹೊರಡುವ ಕೊನೇ ಗಳಿಯಲ್ಲಿ ತರಹರಿಸುತ್ತ ಹುಟ್ಟಿದ ಮೃತ್ಯುಕವಿತೆಗಳಲ್ಲಿ, ವಿಚಿತ್ರವಾದ ತರಹರಿಸುವ ಸಂಕಟವಿದೆ. ಬಾಳ ಹಾಳೆಯ ಮೇಲೆ ವೇದನೆಯ ಶಾಯಿಯಿಂದ ಬರೆದ ಮೃತ್ಯುಬರೆಹಗಳಂತೆ ಅವು ತೋರುತ್ತವೆ.
ಮುಪ್ಪು ಬೇನೆ ಸಾವುಗಳ ಕಠೋರ ವಾಸ್ತವವು ಹತಾಶೆಗೊಳಿಸುವಂತೆ ತೀವ್ರವಾಗಿ ಬದುಕುವುದಕ್ಕೂ ಒತ್ತಾಸೆ ಸೃಷ್ಟಿಸಬಹುದು. ನಾನಿನ್ನೂ ಪ್ರಾಯದಲ್ಲಿರುವ ಕೆಳರೆಪ್ಪೆಯ ಅಡಿಯಲ್ಲಿ ಬೆಳ್ಳನೆಯ ಗುರುತು ಕಾಣಿಸಿದವು. ವೈದ್ಯರು ಹೇಳಿದರು. ‘ಇದು ಝಾಂತಿಮಾ. ದೇಹ ಅಗತ್ಯಕ್ಕಿಂತ ಹೆಚ್ಚು ಕೊಬ್ಬನ್ನು ಉತ್ಪತ್ತಿ ಮಾಡುತ್ತಿದೆ. ನಿಯಂತ್ರಿಸಬೇಕು. ದೇಹ ದಂಡಿಸು. ಮಾಂಸಾಹಾರ ನಿಲ್ಲಿಸು. ಇಲ್ಲದಿದ್ದರೆ ನಲವತ್ತರೊಳಗೆ ಹೃದಯಾಘಾತದ ಸಾಧ್ಯತೆಯಿದೆ’. ಝಾಂತಿಮಾ! ಘೋರ ಸತ್ಯಕ್ಕೆ ಎಷ್ಟು ಇಂಪಾದ ಶಬ್ದ. ಮದುವೆಯಾಗಿ ಐದು ವರ್ಷವಷ್ಟೆ. ಬಾಳ ನೌಕೆ ಈಗಷ್ಟೇ ದಡ ಬಿಟ್ಟಿದೆ. ಅರ್ಧದಾರಿಯೂ ಸವೆದಿಲ್ಲ. ಅಷ್ಟರೊಳಗೆ ಮೃತ್ಯು ಕದತಟ್ಟುವ ಅವಸರವೇನಿತ್ತು? ಆಸ್ಪತ್ರೆಯಿಂದ ಹೊರಟು ಬಸ್ಸಿನಲ್ಲಿ ಮನೆಗೆ ಬರುವಾಗ, ಕಿಟಕಿಯಾಚೆಗಿನ ದೃಶ್ಯಗಳನ್ನು ಖಿನ್ನನಾಗಿ ಶೂನ್ಯಭಾವದಲ್ಲಿ ನೋಡುತ್ತ ಕೂತೆ. ಬಾನು, ನನ್ನ ಕೈಯನ್ನು ತನ್ನ ಕೈಯಲ್ಲಿ ಹಿಡಿದು ಹಿಸುಕುತ್ತ, ಭುಜದ ಮೇಲೆ ತಲೆಯೊರಗಿಸಿ ನಿಟ್ಟುಸಿರು ಬಿಟ್ಟಳು.
ಹಾಗೆ ಕಂಡರೆ, ಬಾಳಲ್ಲಿ ಮರಣದ ಮುಖಾಬಿಲೆಯನ್ನು ನಾನು ಹಲವು ಸಲ ತಪ್ಪಿಸಿದ್ದೇನೆ. ಎಳವೆಯಲ್ಲಿದ್ದಾಗ ಮನೆಯ ಪಕ್ಕವಿದ್ದ ಕೆರೆಯಲ್ಲಿ ಈಜುತ್ತ ನಡುಗೆರೆಗೆ ಹೋಗಿದ್ದೆ. ಅಲ್ಲಿ ಕಾಲಿಗೆ ತಾವರೆಯ ಅಂಬುಗಳೊ ನೀರಕಳೆಯ ಬಳ್ಳಿಗಳೊ ಸುತ್ತಿಕೊಂಡವು. ಕೈಸೋತು ಗಾಬರಿಯಲ್ಲಿ ನಾನು ಮುಳುಗೇಳುವುದನ್ನು ದಡದಲ್ಲಿ ಎತ್ತುಗಳ ಮೈತೊಳೆಯುತ್ತಿದ್ದ ಒಬ್ಬ ನೋಡಿದನು. ಎತ್ತನ್ನು ಈಜಿಸುತ್ತ ತಂದು ‘ದುಂ ಪಕಡಲೇರೇ’ ಎಂದು ಅರಚಿದನು. ಎತ್ತಿಗೆ ನೊಣವನ್ನಟ್ಟುವ ಬೀಸಣಿಗೆಯಾದ ಪುಚ್ಛ ನನ್ನ ಜೀವವುಳಿಸುವ ಹಸ್ತವಾಯಿತು. ಮತ್ತೊಮ್ಮೆ ತುಂಗಭದ್ರಾ ಬಲದಂಡೆ ಕಾಲುವೆಯಲ್ಲೊಮ್ಮೆ ಈಜುತ್ತಿರುವಾಗ ಕೈಸೋತಿತು. ದಡ ಹತ್ತಲು ಯತ್ನಿಸಿದೆ. ೭೦ ಡಿಗ್ರಿಯಲ್ಲಿದ್ದ ಗೋಡೆಯ ಮೇಲೆ ಬೆಳೆದ ಪಾಚಿ ಕೈಯನ್ನು ಜಾರಿಸುತ್ತಿತ್ತು. ಗೋಡೆ ಹಿಡಿಯಲೆತ್ನಿಸಿದರೆ ಉಗುರೇ ಕಿತ್ತು ಬಂದವು. ಅದು ನೀರು ತಿರುವಿಕೊಳ್ಳುವ ಸೆಳವಿನ ಜಾಗ. ಜತೆಗೆ ವಾಕಿಂಗಿಗೆ ಬಂದಿದ್ದ ಗೆಳೆಯರು ದಡದಲ್ಲಿದ್ದ ಮರದಿಂದ ಉದ್ದನೆಯ ಕೊಂಬೆ ಕಿತ್ತು ಚಾಚಿದರು. ಮೇಲೆ ಬಂದೆ. ಎಲಾ! ಆಳ ಕಡಲಲ್ಲಿ ಹೊಳೆಯಲ್ಲಿ ಕೆರೆಯಲ್ಲಿ ಎಷ್ಟೊಂದು ಈಜಿರುವೆ? ರೈಲ್ವೆ ಸೇತುವೆಯಿಂದ ನೀರಿಗೆ ಹಾರಿರುವೆ. ಈಗೇಕೆ ಹೀಗೆ? ವಯಸ್ಸಾಯಿತೇನು?
ಒಂದು ದಿನ ಕಾಲುವೆ ದಂಡೆಯಲ್ಲಿ ವಾಕ್ ಮಾಡುತ್ತಿದ್ದೆ. ಹಗಲೂ ರಾತ್ರಿ ಕೂಡಾವಳಿಯಾಗುವ ಮುಸ್ಸಂಜೆ ಮಸುಕು. ಯಾರೊ ಹಾದಿಗಡ್ಡವಾಗಿ ಮಫಲರನ್ನು ಬೀಳಿಸಿಕೊಂಡು ಹೋಗಿದ್ದರು. ಅದೇನೆಂದು ನೋಡಲು ಬಾಗಿದೆ. ನನ್ನಮುಖ ಹತ್ತಿರ ಹೋದೊಡನೆ ಮಫ್ಲರು ಗಿಲ್ಲಿಯಂತೆ ಎರಡು ಮಾರುದೂರ ನೆಗೆಯಿತು. ಹಂಪಿ ಸೀಮೆಯಲ್ಲಿ ರಾತ್ರಿ ನೀರುಕಟ್ಟಲು ಹೋಗುವ ರೈತರನ್ನು ಕೊಲ್ಲುವುದರಲ್ಲಿ ಕುಖ್ಯಾತವಾಗಿರುವ ಕನ್ನಡಿಹಾವು! ಮಫ್ಲರ್ ನನ್ನ ಮುಖಕ್ಕೆ ಅಪ್ಪಳಿಸಬಹುದಿತ್ತು. ಅದಕ್ಕೂ ಭಯ. ಮತ್ತೊಮ್ಮೆ ಮಡದಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಗೆಳೆಯರೊಬ್ಬರನ್ನು ಕಾಣಲು ನಾನೂ ಬಾನು ಸ್ಕೂಟರಿನಲ್ಲಿ ಹೋಗುತ್ತಿದ್ದೆವು. ಎದುರಿನಿಂದ ಮೈನ್ಸ್ ಲಾರಿಯೊಂದು ಹಂಪನ್ನು ನಿವಾರಿಸಲು ರಾಂಗ್‌ಸೈಡಿನಲ್ಲಿ ಚಕ್ಕನೆ ಮೈಮೇಲೆ ಬಂತು. ಕತೆ ಮುಗೀತು ಎಂದು ಸ್ಕೂಟರನ್ನು ಸೈಡಿಗಿಳಿಸಿದೆ. ಕಲ್ಲುನೆಲದಲ್ಲಿ ಗಾಡಿ ಸರ್ರನೆ ಜಾರಿ ಇಬ್ಬರೂ ಆಳವಾದ ಗುಂಡಿಯೊಳಕ್ಕೆ ಬಿದ್ದೆವು. ಹೆಂಡತಿಯ ಜತೆ ಒಟ್ಟಿಗೆ ಹೊಂಡಕ್ಕೆ ಬೀಳುವ ಭಾಗ್ಯ ಎಷ್ಟು ಜನರಿಗಿದೆ? ಪಂಪನ ವಜ್ರಜಂಘ-ಶ್ರೀಮತಿಯರಂತೆ ಒಟ್ಟಿಗೆ ಸಾಯುವ ಭಾಗ್ಯ ತಪ್ಪಿತು. ಮೈಕೈ ತರಚಿತು. ನುಂಗಿದ ಸಾವು ಹೊರಗೆ ಉಗುಳಿ ಬದುಕಿಕೊಳ್ಳಿ ಎಂದು ಬಿಟ್ಟಿತು.
ಹೀಗೆ ಮೃತ್ಯುವನ್ನು ವಂಚಿಸಿ, ವೈದ್ಯರ ಭವಿಷ್ಯವಾಣಿ ಹುಸಿಗೊಳಿಸಿ ಆರು ದಶಕ ದಾಟಿಸಿದೆ. ಅರವತ್ತರ ಸುಮಾರಿಗೆ ಮಧುಮೇಹ ಕಾಣಿಸಿದಾಗ ಝಾಂತಿಮಾ ಕಾಲದ ಆಘಾತವಾಗಲಿಲ್ಲ. ಇದು ನಿಯಂತ್ರಣ ಮೀರಿದರೆ ಯಾವೆಲ್ಲ ಅಂಗಾಂಗಗಳಿಗೆ ನಷ್ಟ ಎಂದು ವೈದ್ಯರು ಹೇಳಿದರು. ಅವುಗಳಲ್ಲಿ ಕಣ್ಣದೃಷ್ಟಿ ಕಳೆಯುವುದು ಘೋರವೆನಿಸಿತು. ಲೋಕವನ್ನು ನೋಡಲಾಗದೆ ಪುಸ್ತಕ ಓದಲಾಗದೆ ಲೋಕಸಂಚಾರ ಮಾಡಲಾಗದೆ ಇರುವುದೆಂತಹ ಬಾಳು? ಹಾಗಾದ ದಿನ ಕಿವಿಯ ಮೂಲಕ ಲೋಕವನ್ನು ನೋಡಿದರಾಯಿತು. ಕಣ್ಣಿದ್ದಾಗ ಕೇಳಲಾರದ ಸದ್ದುಗಳು ಆಗ ಸೂಕ್ಷ್ಮವಾಗಿ ಕೇಳಬಹುದು. ಬೇನೆಗಳ ಜತೆ ಭಂಡುಬಿದ್ದು ಬದುಕುವುದು ಒಮ್ಮೆ ಅಭ್ಯಾಸವಾದರೆ, ಅವನ್ನು ಹೆದರಿಸುವುದೂ ಸಾಧ್ಯವೆಂದು ತಿಳಿಯಿತು. ಅವುಗಳ ಇರುವಿಕೆಯೇ ಸಹಜ ಲಯವಾಗಿ ಮೃತ್ಯುಭೀತಿ ಮರೆತೇಹೋಯಿತು. ಆದರೆ ಅದು ಮುಖ್ಯಪಾತ್ರ ವಾಗಿ ಥಟ್ಟನೆ ರಂಗಕ್ಕೆ ಜಿಗಿದು ಯಾವಾಗ ಬರಬಹುದೊ ತಿಳಿಯದು. ಮೃತ್ಯು ಕದತಟ್ಟುವುದು ನಮಗೆ ಮಾತ್ರವಲ್ಲ, ನಮ್ಮ ಮನೆಗಳಿಗೂ ಇದೆ. ನಾವು ಹಂಪಿ ಸೀಮೆಯ ಬಂಡೆಗಳಿಂದ ದೃಢವಾದ ಕಟ್ಟಿದೆವು. ಮೊನ್ನೆಯ ಧಾರಾಕಾರ ಮಳೆಗೆ ಮಾಳಿಗೆಯಿದ ನೀರು ತೊಟ್ಟಿಕ್ಕಿತು. ಸೀಲಿಂಗಿನಿಂದ ಗಾರೆ ಚಕ್ಕೆಯೊಂದು ಕಳಚಿ ಬಿದ್ದಿತು. ರಿಪೇರಿ ಮಾಡಿಕೊಂಡು ಬದುಕಿದ್ದೇವಲ್ಲ.
ಸಾವನ್ನು ಅಳುಕಿಲ್ಲದ ಸ್ವೀಕರಿಸುವ ಧೈರ್ಯ ನಿಧಾನವಾಗಿ ಅನಿವಾರ್ಯವಾಗಿ ಬರುತ್ತಿರುವಂತೆ ಕಾಣುತ್ತಿದೆ. ಆದರೆ ಸಾವಿಗೆ ಮುನ್ನ ನಡೆಯುವ ಆಚರಣೆಗಳು ಮಾತ್ರ ಕಿರಿಕಿರಿ ಹುಟ್ಟಿಸುತ್ತವೆ. ಉದಾಹರಣೆಗೆ. ಸತ್ತವರನ್ನು ನೋಡಲು ಹೋದಾಗ ಶವಕ್ಕೆ ಮುತ್ತಿಗೆ ಹಾಕಿದಂತೆ ಕೂರುವ ಮಹಿಳೆಯರು, ಬಂದವರ ದುಃಖದ ಪರಿ ಮತ್ತು ಪ್ರಮಾಣ ಅಳೆಯಲು ಕೂತ ಪರೀಕ್ಷಕರಂತೆ ವರ್ತಿಸುವುದು. ಸಾವಿನ ನೆಮ್ಮದಿಯನ್ನು ರೋಗಿಯೂ ಬಯಸುತ್ತಿರುವಾಗ, ರೋಗಿಯ ಹೇಲುಉಚ್ಚೆ ಬಳಿದು ಬಸವಳಿದಿರುವ ಕುಟುಂಬವೂ ಸಾವನ್ನು ಆಶಿಸುತ್ತಿರುವಾಗ, ಅಯ್ಯೋ ಸತ್ತರಲ್ಲ ಎಂದು ಶಾಸ್ತ್ರಕ್ಕಾಗಿ ಅರಚಾಡುವುದು; ಇದೆಲ್ಲ ಅಸೂಕ್ಷ್ಮ ಮಾತ್ರವಲ್ಲ, ಅಮಾನವೀಯ. ಬದುಕಿನ ಹೊಳೆ ಜಲಪಾತವಾಗಿ ಮುರಿದುಕೊಂಡು ಬೀಳುತ್ತದೆ. ಬಿದ್ದಲ್ಲಿಂದ ಎದ್ದು ಬೇರೆಬೇರೆ ಚಲಿಸುತ್ತದೆ. ಸಾವನ್ನು ಕಂಡವರಲ್ಲಿ ಕೆಲವರಾದರೂ ಒಗರನ್ನು ಕಳೆದು ಮಾಗಬಹುದು. ಬದುಕಿದ್ದಾಗ ಜಿದ್ದಾಜಿದ್ದಿ ದ್ವೇಷ ಮಾಡಿದ ಇಬ್ಬರು, ಕೊನೆಗಾಲದಲ್ಲಿ ಪರಸ್ಪರ ಭೇಟಿ ಮಾಡುವ ಪ್ರಸಂಗವೊಂದು ‘ಮರಳಿಮಣ್ಣಿಗೆ’ಯಲ್ಲಿದೆ; ಲೋಕಕ್ಕೆ ವಿದಾಯ ಹೇಳುವವರನ್ನು ಕಂಡು ಬಂದವರ ಪರಿತಾಪವು ಅವರ ಬಾಕೀ ಬದುಕಿನ ವ್ಯಾಖ್ಯೆಯನ್ನೇ ಬದಲಾಯಿಸುತ್ತದೆ. ‘ಕಾನೂರು ಹೆಗ್ಗಡಿತಿ’ಯಲ್ಲೂ ತಾನು ದ್ವೇಷಿಸುತ್ತಿದ್ದ ಹೂವಯ್ಯನು ಅಂತಿಮ ಭೇಟಿಗೆ ಬಂದಾಗ ಕ್ಷಮಿಸು ಎಂಬರ್ಥದಲ್ಲಿ ಚಂದ್ರೇಗೌಡರು ಹಣೆಗೆ ಕೈಯಿಟ್ಟು ನಮಸ್ಕರಿಸುತ್ತಾರೆ-ಸಣ್ಣತನವು ತನ್ನ ಕೃತ್ಯಕ್ಕೆ ತಾನೇ ನಾಚಿದಂತೆ.
ಬದುಕನ್ನು ಮುಗಿಸುತ್ತಿರುವ ಮುದುಕರ ರೋಗ ನರಳಿಕೆಯನ್ನು, ಬಾಳನ್ನು ಈಗಷ್ಟೇ ಆರಂಭಿಸುತ್ತಿರುವ ತರುಣ ತರುಣಿಯರ ತಲೆಗೆ ಸಾಮಾಜಿಕ ನೈತಿಕತೆಯ ಹೆಸರಲ್ಲಿ ಹೊರಿಸುವುದು ಕ್ರೂರವೆಂದೂ, ಅಂತಹ ಸನ್ನಿವೇಶ ಬಂದಾಗ ಸ್ವಹತ್ಯೆ ಮಾಡಿಕೊಳ್ಳುವುದು ಉಚಿತವೆಂದೂ ಲಂಕೇಶ್, ಮರಣೋನ್ಮುಖ ದಿನಗಳಲ್ಲಿ ಬರೆದಿದ್ದುಂಟು. ಇದು ಜೀವವಿರುವಾಗ ಉತ್ಕಟವಾಗಿ ಬದುಕುವ ಮುಪ್ಪಿನಲ್ಲಿ ಸಾವನ್ನು ಧೈರ್ಯದಿಂದ ಬರಮಾಡಿಕೊಳ್ಳುವ ಯೂರೋಪಿಯನ್ ಮನಃಸ್ಥಿತಿ ಕೂಡ. ಈ ದಿಸೆಯಲ್ಲಿ ಘನತೆಯ ಆತ್ಮಹತ್ಯೆಗಳೂ ಹೇಡಿತನವಲ್ಲ.
ಘನತೆಯ ಸಾವು ಕೆಟ್ಟಬಾಳಿಗಿಂತ ಮಿಗಿಲು. ಸಾವು ದಾರುಣ, ಕೆಟ್ಟ, ನಿಜ. ಆದರೆ ಅದಿಲ್ಲವಾಗಿದ್ದರೆ ಲೋಕ ಅದೆಷ್ಟು ಅರಾಜಕವಾಗುತ್ತಿತ್ತು? ಆಯಸ್ಸು ಮುಗಿದಾಗ ಸಾವನ್ನು ಸ್ವೀಕರಿಸುವ ಸಿದ್ಧತೆಯೇ ಮೃತ್ಯುಂಜಯತ್ವ. ಬಾಳು ಸಾಕೆನಿಸಿದ ಬಳಿಕ ತಣ್ಣಗೆ ಹೋಗಿಬಿಡುವ ಇಚ್ಛಾಮರಣಿಗಳು ಆದರ ಹುಟ್ಟಿಸುತ್ತಾರೆ. ಸಾವು ಖಚಿತವಾಗಿದ್ದಾಗಲೂ ನಿರಾಳವಾಗಿ ನಗುತ್ತ ಹರಟಿದ ಧೀಮಂತರನ್ನು ನಾನು ಕಂಡಿರುವೆ. ಜಾನ್ ಡನ್ ಕವನದ ಮೃತ್ಯು ಮೀಮಾಂಸೆಯನ್ನು ಬದುಕಿದವರು ಇವರು. ಟೈಟಾನಿಕ್ ಹಡಗು ಮುಳುಗುವುದು ಖಚಿತವಾದಾಗ, ಅದರಲ್ಲಿದ್ದ ಸಂಗೀತಗಾರರು ವೈಲಿನ್ ನುಡಿಸುವ ಸನ್ನಿವೇಶ ನನಗೆ ಸದಾ ನೆನಪಾಗುತ್ತದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…