ಸನ್ನಿವೇಶಕ್ಕೆ ತಕ್ಕಂತೆ ಅಭಿನಯಿಸುವ ಕಲೆ ಕಲಿಸಿದ ಬದುಕಿನ ರಂಗಭೂಮಿ, ಕಷ್ಟದ ಗಳಿಗೆಯನ್ನು ರಟ್ಟೆಬಲದಿಂದ ದಾಟುವ ಆತ್ಮವಿಶ್ವಾಸ ಕೊಟ್ಟಿತು!
ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಪ್ರವಾಹದಲ್ಲಿರುವ ತೇಲುವ ಎಲೆಯಂತೆ ಸದಾ ಅಸ್ಥಿರವಾಗಿರುತ್ತಿತ್ತು. ಬೇಸಗೆಯಲ್ಲಿ ಸುಖದ ತಾರಕಕ್ಕೇರುವ ಗ್ರಾಫು, ಆಷಾಢದಲ್ಲಿ ರೋಗಿಯಂತೆ ಹಾಸಿಗೆಯಲ್ಲಿ ಬಿದ್ದು ಮುಲುಕುತ್ತಿತ್ತು. ಬೇಸಗೆಯಲ್ಲಿ ಅಪ್ಪ ಕೈಸಾಲ ಕೊಡುವಷ್ಟು ಚಿಗುರಿರುತ್ತಿದ್ದನು. ಮಳೆಗಾಲದಲ್ಲಿ ಹಂಡೆ ಕೊಡಪಾನ ಬುಗುಡಿ ಗಿರವಿ ಅಂಗಡಿಗೆ ಪಯಣಿಸುತ್ತಿದ್ದವು. ನಮ್ಮ ಆಸುಪಾಸಿನ ಬಹುತೇಕ ಜನರು, ಆಯಾ ಸೀಜನ್ನಿನಲ್ಲಿ ಸಿಗುವ ಕೆಲಸವನ್ನು ಹದ್ದಿನಂತೆ ಹೊಂಚಿಕೊಂಡಿದ್ದು, ಗಬಕ್ಕನೆ ಹಿಡಿದು ಮಾಡುತ್ತಿದ್ದವರು. ನಾವಾದರೂ ಶೇಂಗಾ ಬಿಡಿಸುವ, ನೆಲ್ಲುಕೊಯ್ಯುವ, ಕಳೆಕೀಳುವ, ಅಡಕೆ ಆರಿಸುವ ತರಹೇವಾರು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದೆವು. ಅಪ್ಪ ದೊಡ್ಡಹೊಲಗಳನ್ನು ರಾಗಿನಾಟಿ ಹಾಕುವುದಕ್ಕೆ ಗುತ್ತಿಗೆ ಹಿಡಿಯುತ್ತಿದ್ದನು. ಕುಟುಂಬವೇ ಹೊಲಕ್ಕೆ ಮುತ್ತಿಗೆ ಹಾಕಿದಂತೆ ಬಿದ್ದು ನಾಟಿ ಮುಗಿಸುತ್ತಿತ್ತು. ಜಿಟಿಜಿಟಿ ಸೋನೆಯಲ್ಲಿ ಗೊಪ್ಪೆ ಹಾಕಿಕೊಂಡು ಪಶ್ಚಿಮಕ್ಕೆ ಬೆನ್ನುಕೊಟ್ಟು ಬಾಗಿ ನಾಟಿ ಹಾಕುವಾಗ ಚಳಿಗಾಳಿಗೆ ಜೀವ ತತ್ತರಿಸುತ್ತಿತ್ತು.
ನಮ್ಮ ಕಡೆಯ ಸಾಬರ ಹುಡುಗರಿಗೆ ಬೇಸಾಯಕ್ಕಿಂತ ವ್ಯಾಪಾರ, ಕುಶಲಕಸುಬು ಹಾಗೂ ಮೆಕ್ಯಾನಿಕ್ ಕೆಲಸಗಳೆಂದರೆ, ಮೀನಿಗೆ ನೀರುಸಿಕ್ಕಂತೆ. ಶುಕ್ರವಾರದಂದು ಶಾಲೆ ತಪ್ಪಿಸಿ, ತರೀಕೆರೆಯ ಸಂತೆಯಲ್ಲಿ ಕುಡ ಕುಳ ಜಿಗಣೆ ಕುಡಗೋಲು ಮಚ್ಚು ಮಾರುವುದು ನನ್ನ ಕರ್ತವ್ಯವಾಗಿತ್ತು. ಆದರೆ ಸುಡುಬಿಸಿಲಲ್ಲಿ ಕೂತು ಕಬ್ಬಿಣದ ಸಾಮಾನು ಮಾರುವುದಕ್ಕಿಂತ, ಹಿತ್ತಲ ತರಕಾರಿ ಮಾರಾಟ ನನಗೆ ಹೆಚ್ಚು ಖುಶಿ ಕೊಡುತ್ತಿತ್ತು. ಗುರುವಾರ ಸಂಜೆಯೇ ಹಳ್ಳಿಯ ಹೊಲದಲ್ಲಿದ್ದ ಬದನೆ ಮೆಣಸಿನಕಾಯಿ ಅವರೆಕಾಯಿಯನ್ನೊ, ಮನೆಯಲ್ಲಿದ್ದ ಹುಚ್ಚೆಳ್ಳು ಎಳ್ಳು ಕುಸುಬೆ ಹುರುಳಿಯನ್ನೊ ಬಂಡಿಯಲ್ಲಿ ಹೇರಿಕೊಂಡು ಸಂತೆಗೆ ಹೋಗುತ್ತಿದ್ದ ಸೋದರಮಾವನ ಜತೆ ಹೋಗುತ್ತಿದ್ದೆ. ಹಿತ್ತಲಿನ ನುಗ್ಗೆಕಾಯಿ ಹಾಕಿಕೊಂಡು ಆಸುಪಾಸಿನ ಸಂತೆಗಳಿಗೆ ಒಬ್ಬನೇ ತಿರುಗುತ್ತಿದ್ದೆ. ಸಂತವೇರಿಯ ಸಂತೆಯಲ್ಲಿ ಕಾಫಿ ಎಸ್ಟೇಟುಗಳಿಂದ ಬರುತ್ತಿದ್ದ ಕೂಲಿಕಾರರು ಅವನ್ನು ಪರಮಾಯಿಶಿಯಿಂದ ಕೊಳ್ಳುತ್ತಿದ್ದರು. ಅಪ್ಪ ಮಾವಿನ ಮರಗಳನ್ನು ಚೇಣಿ ಹಿಡಿದಾಗ, ಹಣ್ಣನ್ನು ಬೀದಿಯಲ್ಲಿ ಹೊತ್ತು ಮಾರಬೇಕಾಗುತ್ತಿತ್ತು. ಅಂಗೈಯಲ್ಲಿ ಮೂರು ಹಣ್ಣಿನ ಬುನಾದಿ ಮೇಲೆ ಮತ್ತೊಂದನ್ನು ಶಿಖರದಂತೆ ನಿಲ್ಲಿಸಿಕೊಂಡು, ಆಂಜನೇಯ ಬೆಟ್ಟವೆತ್ತಿಹಿಡಿದ ಶೈಲಿಯಲ್ಲಿ ಬಸ್ಸಿನ ಕಿಟಕಿಯ ಬದಿ ಕೂತ ಪಯಣಿಕರ ಮುಂದೆ ಹಿಡಿವ ಕಲೆಯಲ್ಲಿ ತುಸು ಉದ್ದಕ್ಕಿದ್ದ ನನ್ನ ಎತ್ತರ ನೆರವಾಗುತ್ತಿತ್ತು. ಮನೆಯ ದೈನಿಕ ಖರೀದಾರಿಯ ಖಾತೆಯನ್ನೂ ನಾನೇ ನಿರ್ವಹಿಸಬೇಕಿತ್ತು. ಅಂಗಡಿಯಿಂದ ಅಕ್ಕಿ ಬೇಳೆ ಲವಾಜಮೆಯನ್ನೂ ಚಟದ ಪರಿಕರಗಳಾದ ಎಲೆಯಡಿಕೆ ಸಕ್ಕರೆ ಟೀಪುಡಿ ಬೀಡಿ ಬೆಂಕಿಪೊಟ್ಟಣಗಳನ್ನೂ ತರುವುದರಲ್ಲಿ ನಾನು ಪರಿಣತನಾಗಿದ್ದೆ. ಈ ವಿಷಯದಲ್ಲಿ ಅಮ್ಮ ಕಟ್ಟುನಿಟ್ಟಾದ ತರಬೇತಿ ಕೊಟ್ಟಿದ್ದಳು. ಉದಾ:ಗೆಮ ಸೊಪ್ಪಿನ ಎಲೆ ಹುಳಹೊಡೆದು ಛಿದ್ರವಾಗಿರಬಾರದು; ಮುಳಗಾಯಿಗೆ ತೂತುಗಳಿವೆಯೆ ಚೆಕ್ ಮಾಡಬೇಕು; ಬೀನ್ಸು ಬೆಂಡೆಗಳ ತುದಿ ಮುರಿದು, ಸೋರೆಕಾಯಿಗೆ ಉಗುರಗಚ್ಚು ಹಾಕಿ ಎಳತನ್ನು ಪರಿಶೀಲಿಸಬೇಕು; ತೆಂಗಿನಕಾಯಿ ಹಗುರವಾಗಿದ್ದು ಅಲುಗಿಸಿದರೆ ಚಿಳ್ಚಿಳ್ ಶಬ್ದ ಹೊರಡಬೇಕು; ಟೊಮೊಟೊ ಖರೀದಿ ಕೊನೆಗೆ ಮಾಡಿ ಅವನ್ನು ಬ್ಯಾಗಿನ ಮೇಲುಸ್ತರದಲ್ಲಿ ಇಡಬೇಕು; ಅಕ್ಕಿಕಾಳು ಕಡಿದರೆ ಕಟಕ್ ಎನ್ನಬೇಕು; ತಂಬಾಕು ಒಣಗಿದ ಕೋಲಿನಂತಿದ್ದು ಮೇಲೆ ಬೂದಿ ಬಿಳುಪಿರಬೇಕು, ಬಿಚ್ಚಿದರೆ ಒಳಗೆ ಕಪ್ಪಿರಬಾರದು; ವೀಳ್ಯದೆಲೆ ತೀರ ಬಲಿಯದ ಎಳೆಚಿಗುರೂ ಆಗಿರದ ಮಧ್ಯಮ ಹಂತದಲ್ಲಿರಬೇಕು; ಕೊಚ್ಚಡಕೆ ಹೊಳಪಿರಬಾರದು; ಚೂಪುತುದಿ ಅಗಲಕಮ್ಮಿ ಇರುವ ವಾನಂಬಾಡಿ ಎಲೆ ಖಾರವಾಗಿದ್ದು, ಅದನ್ನೆಂದೂ ತರಬಾರದು. ರಾಗಿಯನ್ನು ನುಣ್ಣಗೆ ಮಿಲ್ ಮಾಡಿಸಬಾರದು-ಮುದ್ದೆ ಗಂಟಾಗುತ್ತದೆ ಇತ್ಯಾದಿ. ಅವಸರದಲ್ಲಿ ಸಿಕ್ಕಿದ್ದನ್ನು ಕೊಂಡು ಬಂದರೆ ಅಮ್ಮ ಅಂಗಳಕ್ಕೆ ಒಗೆಯುತ್ತಿದ್ದಳು. ಒಮ್ಮೆ ನಾನು ತಂದ ಗೋಧಿಹಿಟ್ಟು ಮುಗ್ಗಾಗಿತ್ತು. ಚಪಾತಿ ಕಹಿಯಾದವು. ಆಕೆ ಚಪಾತಿಯನ್ನೂ ಬಾಕೀ ಹಿಟ್ಟನ್ನೂ ನನ್ನ ತಲೆಮೇಲೆ ಹೊರೆಸಿಕೊಂಡು ಅಂಗಡಿಗೆ ಕರೆದೊಯ್ದಳು. ರೊಟ್ಟಿಚೂರನ್ನು ಮುರಿದು ಕಾಕಾನಿಗೆ ಕೊಟ್ಟು ‘ಇದನ್ನು ತಿಂದು ತೋರಿಸು’ ಎಂದಳು. ಅವನು ತಿನ್ನುವ ಧೈರ್ಯ ಮಾಡದೆ, ಬೇರೆ ಹಿಟ್ಟನ್ನು ಕೊಟ್ಟನು. ಇಂತಹ ಕಠಿಣ ವಿಧಿನಿಷೇಧಗಳಿಂದ ನಾನೊಬ್ಬ ನಮ್ಮ ಸೀಮೆಯ ನುರಿತ ಗ್ರಾಹಕನಾಗಿ ಮಾರ್ಪಟ್ಟಿದ್ದೆ. ಸಂತೆಯಲ್ಲಿ ಹರಿದಾಡಿ ಎಲ್ಲಿ ಸೋವಿಗೆ ಒಳ್ಳೆಯ ಮಾಲು ಸಿಗುತ್ತದೆಯೆಂದು ಹುಡುಕಬಲ್ಲವನಾಗಿದ್ದೆ. ಸಣ್ಣರೈತರು ತರಕಾರಿ ಹೊತ್ತು ಸಂತೆಗೆ ಪ್ರವೇಶಿಸುವ ಮುನ್ನವೇ ದಾರಿಯಲ್ಲಿ ಬುಟ್ಟಿ ಇಳಿಸಿ ಕೊಳ್ಳುತ್ತಿದ್ದೆ. ಅವರಾದರೂ ಜಕಾತಿಯ ನಾಲ್ಕಾಣೆ ತಪ್ಪಿಸಲು ಅಥವಾ ತಲೆಹೊರೆಯ ತಿಣ್ಣವಿಳಿಸಲು ಸಂತೆಮಾಳದ ಹೊರಗೇ ತೂರಿಬಿಡುತ್ತಿದ್ದರು. ಇದಲ್ಲದೆ ನಾನು ಕೆಲವು ಸ್ವತಂತ್ರ ಉದ್ಯಮಗಳನ್ನು ನಡೆಸಬೇಕಾಯಿತು. ಅವುಗಳಲ್ಲಿ ಬೆರಣೋದ್ಯಮವೂ ಒಂದು. ಬಂಡಿಯ ಚಕ್ರಕ್ಕೆ ತೊಡಿಸುವ ಕಬ್ಬಿಣದ ಹಳಿಯನ್ನು ಕೆಂಪಗೆ ಕಾಯಿಸಲು ಬೆರಣಿಯ ಜರೂರಿತ್ತು. ಸಕಾಲಕ್ಕೆ ಅದು ಸಿಗದೆ ಕೆಲಸ ನಿಂತುಹೋಗುತ್ತಿತ್ತು. ಇದುವೇ ನನಗೆ ಪ್ರೇರಣೆ ಕೊಟ್ಟಿತು. ನಾನೂ ತಮ್ಮನೂ ನಸುಕಿಗೇ ಎದ್ದು ಕೆರೆಯಂಗಳಕ್ಕೆ ಧಾವಿಸುತ್ತಿದ್ದೆವು. ಸದಾ ಹಚ್ಚಗಿರುತ್ತಿದ್ದ ಹುಲ್ಲನ್ನು ಮೇದು ಊರದನ ಹಾಕಿರುತ್ತಿದ್ದ ತೊಪ್ಪೆಯನ್ನು ಹೆಕ್ಕಿ ತರುತ್ತಿದ್ದೆವು. ಅದನ್ನು ಭತ್ತದ ಹೊಟ್ಟಿನಲ್ಲಿ ಕಲಸಿ ದೊಡ್ಡ ಮೈದಾನದಲ್ಲಿ ತಟ್ಟುತ್ತಿದ್ದೆವು. ವರುಷಕ್ಕೆ ಇನ್ನೂರು ರೂಪಾಯಿಯಷ್ಟು ಆದಾಯ ಸಿಗುತ್ತಿತ್ತು. ಅಪ್ಪ ನಮ್ಮ ಕಮಾಯಿಯನ್ನು ನಾವೇ ಇಟ್ಟುಕೊಳ್ಳಲು ಹೇಳುತ್ತಿದ್ದನು. ‘ನಿನ್ನ ಬ್ಯಾಂಕಲ್ಲಿದ್ದರೆ ಐವತ್ತು ರೂಪಾಯಿ ಕೊಟ್ಟಿರಪ್ಪ, ಮುಂದಿನವಾರ ಕೊಡ್ತೀನಿ’ ಎಂದು ಕೈಸಾಲ ಕೇಳುತ್ತಿದ್ದನು. ಅಮ್ಮ ಎಲೆಯಡಿಕೆ ಖರ್ಚಿಗೆ ನನ್ನಿಂದ ಹಣ ಪಡೆಯುತ್ತಿದ್ದಳು.
ಅಪ್ಪ ಭುಜಂಗಯ್ಯನ ದಶಾವತಾರಿ. ಒಂದು ಕಸುಬನ್ನು ಅವಲಂಬಿಸಿರಲಿಲ್ಲ. ನಮ್ಮಲ್ಲಿದ್ದ ಬಂಡಿ-ಎತ್ತುಗಳನ್ನು ಬಳಸಿ ಬಾಡಿಗೆ ಹೋಗುತ್ತಿದ್ದೆವು. ನಮ್ಮ ಸೀಮೆಯ ಸಮಸ್ಯಾತ್ಮಕ ಮದುವೆಗಳು, ಊರಲ್ಲಿದ್ದರೆ ಗಲಾಟೆಯಾಗುವ ಸಾಧ್ಯತೆಗಳಿದ್ದ ಕಾರಣ, ದೂರದ ಕಲ್ಲತ್ತಿಗಿರಿಯಲ್ಲಿ ಜರುಗುತ್ತಿದ್ದವು. ಮದುವೆಗೆ ಸಂಬಂಧಿಸಿ ಭಾಂಡೆ ವಸ್ತುಗಳನ್ನು ಬಂಡಿಯಲ್ಲಿ ಹೇರಿಕೊಂಡು ನಾನೂ ಅಣ್ಣನೂ ಗಿರಿಗೆ ಹೋಗುತ್ತಿದ್ದೆವು. ಗುರುವಾರ ರಾತ್ರಿ ನಮ್ಮೂರ ಸಂತೆಗೆ ಆಗಮಿಸುವ ಸರಕನ್ನಿಳಿಸಿ, ರೈತರು ಸಾರಾಸಗಟು ಮಾರುವ ಜಾಗಕ್ಕೆ ಸಾಗಿಸುತ್ತಿದ್ದೆವು. ಅಣ್ಣ ಪಟಪಟ ಕೋತಿಯಂತೆ ಬಸ್ಸಿನೇಣಿ ಏರಿ ಟಾಪ್ ಮೇಲಿಂದ ರಾಗಿ ದನಿಯಾ ಹುರುಳಿ ಚೀಲಗಳನ್ನು ಕೆಳಕ್ಕೆ ಜಾರಿಸಿದರೆ, ಬಂಡಿಯಲ್ಲಿ ನಿಂತು ಅಪ್ಪ ಅವನ್ನು ಮೆಲ್ಲಗೆ ಇಳಿಸಿಕೊಳ್ಳುತ್ತಿದ್ದನು. ಆಗ ನಾನು ಮೂಕಿಯ ಮೇಲೆ ಕೂತು ಎತ್ತುಗಳನ್ನು ಸಂಭಾಳಿಸುತ್ತಿದ್ದೆ. ಈ ಆರೋಹಣ ಅವರೋಹಣ ಬೆಳಗು ಜಾವಕ್ಕೆ ಮುಗಿಯುತ್ತಿತ್ತು. ನಡುರಾತ್ರಿ ಬೆಂಗಳೂರು ಮೈಸೂರಿನಿಂದ ಪ್ರಯಾಣಿಕರು ಕುಟುಂಬ ಸಮೇತ ಇಳಿಯುತ್ತಿದ್ದರು. ಲಗೇಜು ಹೆಚ್ಚಿದ್ದರೆ ಬಂಡಿಯಲ್ಲಿ ಸಾಗಿಸುತ್ತಿದ್ದೆವು. ಕಮ್ಮಿಯಿದ್ದರೆ ತಲೆಹೊರೆಯಲ್ಲಿ ಸಾಗಿಸುತ್ತಿದ್ದೆವು.
ನನಗೆ ಗಾರೆಕೆಲಸ ಕಲಿಸಿದ ಗುರು ಈಡಿಗರ ರುದ್ರಣ್ಣನನ್ನು ನೆನೆಯಬೇಕು. ಆತ ಮನೆಕಟ್ಟಡದ ಗುತ್ತಿಗೆ ಹಿಡಿಯುತ್ತಿದ್ದನು. ಬೇಸಗೆ ರಜೆಯಲ್ಲಿ ಬಿಡಾಡಿ ದನಗಳಂತೆ ಓಡಾಡುತ್ತಿದ್ದ ನಮ್ಮನ್ನು ಹಿಡಿದು, ಕಂತ್ರಾಟು ಹಿಡಿದ ಊರಿಗೆ ಸಾಗಿಸುತ್ತಿದ್ದನು. ನಾವು ಬುನಾದಿಗೆಂದು ಹೋದವರು ಮನೆಗೆ ಸುಣ್ಣಬಣ್ಣ ಮುಗಿಸಿ, ಗೃಹಪ್ರವೇಶದ ಪಾಯಸ ಚಿತ್ರಾನ್ನ ತಿಂದು ಮರಳುತ್ತಿದ್ದೆವು. ಊಟ ಬಸ್‌ಚಾರ್ಜು ಕಳೆದು ಎರಡು ತಿಂಗಳಿಗೆ ಐವತ್ತು ರೂಪಾಯಿ ಸಿಗುತ್ತಿತ್ತು. ನಾನು ಗಾರೆಕೆಲಸದಿಂದ ಮರಳಿ ಬಂದಾಗ ಗಾರೆಯಿಂದ ಪೋಟುಬಿದ್ದ ನನ್ನ ಕೈಗಳಿಗೆ ಅಮ್ಮ ಮದ್ದು ಹಚ್ಚುತ್ತಿದ್ದಳು. ಎಣ್ಣೆಹಚ್ಚಿ ಸ್ನಾನಮಾಡಿಸಿ ಮಾಂಸದಡಿಗೆ ಮಾಡುತ್ತಿದ್ದಳು. ನಾನು ಕೈಗಿಡುತ್ತಿದ್ದ ರೊಕ್ಕವನ್ನು ‘ನನ್ನ ಮಗ ದುಡಿದ್ದಿದ್ದು’ ಎಂದು ಹೆಮ್ಮೆಯಿಂದ ಲೋಕಕ್ಕೆ ಸಾರುತ್ತಿದ್ದಳು. ರವಿಕೆ ಹೊಲಿಸಿಕೊಳ್ಳುತ್ತಿದ್ದಳು. ಎಷ್ಟೊಸಲ, ಕುಲುಮೆಯಿಂದ ನೇರವಾಗಿ ಶಾಲೆಗೆ ಹೋದಾಗ ಮೈಯಲ್ಲಿ ಧೂಳಿರುತ್ತಿತ್ತು. ಬೆರಣಿ ತಟ್ಟಿದ ಕೈಯಿಂದ ಚಿಂಗು ವಾಸನೆ ಬರುತ್ತಿತ್ತು. ಈ ಬಗ್ಗೆ ಸಹಪಾಠಿಗಳ ಏನಂದುಕೊಳ್ಳುತ್ತಿದ್ದರೊ, ಅರಿವ ಸೂಕ್ಷ್ಮತೆ ಇರಲಿಲ್ಲ. ಸಹಪಾಠಿಗಳಲ್ಲಿ ಕಟ್ಟಿಗೆ ಹುಲ್ಲು ಮಾರಿ, ಅಡಕೆಬೇಯಿಸಿ ಹಾಲು ಅಥವಾ ಬೋಂಡಮಾರಿ ಶಾಲೆಗೆ ಬರುತ್ತಿದ್ದ ಬೇಕಾದಷ್ಟು ಮಂದಿ ಇದ್ದರು. ಅವರ ಬಟ್ಟೆ ಮತ್ತು ಮೈಗಳು ನಾನಾತರಹದ ಸುವಾಸನೆಗಳನ್ನು ಯಥಾಶಕ್ತಿ ಹೊಮ್ಮಿಸುತ್ತಿದ್ದವು; ಹಳ್ಳಿಗಳಿಂದ ನಡೆದುಕೊಂಡು ಬರುತ್ತಿದ್ದ ಸಹಪಾಠಿಗಳಂತೂ ಬೆವರಿನಿಂದ ಮುದ್ದೆ ಆಗಿರುತ್ತಿದ್ದರು. ಈ ಸುವಾಸನೆಗಳು, ಶುಭ್ರವಾಗಿ ಜಳಕಮಾಡಿ ಮಲ್ಲಿಗೆ ಗುಲಾಬಿ ಸಂಪಿಗೆ ಮುಡಿದು ಬರುತ್ತಿದ್ದ ನಮ್ಮ ಸಹಪಾಠಿಣಿಯರಿಂದ ಹೊಮ್ಮುತ್ತಿದ್ದ ಪರಿಮಳದ ಜತೆ ಬೆರೆತುಹೋಗುತ್ತಿದ್ದವು.
ಸನ್ನಿವೇಶಕ್ಕೆ ತಕ್ಕಂತೆ ಅಭಿನಯಿಸುವ ಕಲೆಯನ್ನು ಬದುಕಿನ ರಂಗಭೂಮಿ ಕಲಿಸಿತು. ಕಷ್ಟದ ಗಳಿಗೆಯನ್ನು ರಟ್ಟೆಬಲದಿಂದ ದಾಟಬಹುದು ಎಂಬ ಆತ್ಮವಿಶ್ವಾಸವನ್ನು ಅದು ಕೊಟ್ಟಿತು. ಅದು ಕೊಟ್ಟ ತರಬೇತಿ, ಮುಂದೆ ಸಂಶೋಧನೆಗಾಗಿ ದೀರ್ಘ ಪಯಣ ಮಾಡುವ, ಊಟನೀರಿಲ್ಲದೆ ಬಹಳ ಕಾಲ ಇರುವ, ಧೂಳು ಸೆಖೆ ಮಳೆಗಳನ್ನು ಸಹಿಸುವ, ನಿದ್ದೆಗೆಡುವ, ಬಸ್ಸಿಗೆ ಕಾಯುವ, ಮಂದಿಯ ತಾತ್ಸಾರವನ್ನು ಬೇಸರವಿಲ್ಲದೆ ಸ್ವೀಕರಿಸುವ ಕ್ಷೇತ್ರಕಾರ್ಯದಲ್ಲಿ ಕೆಲಸಕ್ಕೆ ಬಂದಿತು. ಕಾಯಕದ ಲೀಲೆಯಲ್ಲಿ ಯಾವುದೂ ವ್ಯರ್ಥವಲ್ಲ.