ಇತ್ತೀಚೆಗೆ ಯುವಕನೋರ್ವ ಕಾವೇರಿ ಮಾತೆ ಹಾಗೂ ಕೊಡವರ ಬಗ್ಗೆ ಅವಹೇಳನ ಮಾಡಿದ ವಿಚಾರ ಕೊಡಗು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯೊಬ್ಬ ಈ ಕೃತ್ಯವೆಸಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಯಬಿಡಲಾಗಿತ್ತು. ಕೊಡವ ಸಮಾಜಗಳು, ಬಿಜೆಪಿ, ಕಾಂಗ್ರೆಸ್, ಹಿಂದೂಪರ ಸಂಘಟನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದಲ್ಲದೆ, ಆರೋಪಿಯನ್ನು ಬಂಧಿಸಿ ಗಡೀಪಾರು ಮಾಡುವಂತೆ ಒತ್ತಾಯಿಸಿದ್ದರು. ತಪ್ಪಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಲಾಗಿತ್ತು.
ಮತ್ತೊಂದೆಡೆ ಈ ಸಂದೇಶ ನೋಡಿದ ಆ ವಿದ್ಯಾರ್ಥಿ ಮತ್ತು ಆ ಮನೆಯವರಿಗೆ ಆಘಾತ ಎದುರಾಗಿತ್ತು. ತಾನು ಕೃತ್ಯವೆಸಗದಿದ್ದರೂ ತನ್ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ವಿದ್ಯಾರ್ಥಿ ನೊಂದುಕೊಂಡಿದ್ದರು.
ಕೂಡಲೇ ವಿದ್ಯಾರ್ಥಿ ಮತ್ತು ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಈ ಕೃತ್ಯಕ್ಕೂ ತಮಗೂ ಸಂಬಂಧವಿಲ್ಲ ಎಂಬುವುದನ್ನು ತಿಳಿಸುವ ಪ್ರಯತ್ನ ಮಾಡಿದ್ದರು. ವಿದ್ಯಾರ್ಥಿಯ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಆರೋಪಿ ಎಂದು ಆರೋಪಿಸಲಾಗುತ್ತಿದ್ದ ವಿದ್ಯಾರ್ಥಿಗೂ ಘಟನೆಗೂ ಸಂಬಂಧವಿಲ್ಲ ಎಂಬುದು ಪೊಲೀಸರಿಗೆ ಮನವರಿಕೆಯಾಗಿತ್ತು. ಕೊಡವ ಸಮಾಜಗಳ ಒಕ್ಕೂಟಗಳ ನೇತೃತ್ವದಲ್ಲಿ ಆರೋಪಿ ಬಂಧನಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಯುತ್ತಿತ್ತು. ಆರೋಪಿ ಬಂಧಿಸಲೇಬೇಕಾದ ಒತ್ತಡಕ್ಕೆ ಸಿಲುಕಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ತಂತ್ರಜ್ಞಾನದ ಸಹಾಯ ಪಡೆದು ಕಾರ್ಯಚರಣೆ ನಡೆಸಿದ ಪೊಲೀಸರು ಕಡೆಗೂ ಪ್ರತಿಭಟನೆಗೂ ಮುನ್ನವೇ ನೈಜ ಆರೋಪಿಯನ್ನು ಬಂಧಿಸಿದರು. ಪೊಲೀಸರ ಈ ಕಾರ್ಯಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಬಂಧನಕ್ಕೊಳಗಾದ ಆರೋಪಿ ಕೊಡವ ಸಮುದಾಯಕ್ಕೆ ಸೇರಿದ ವ್ಯಕ್ತಿಯೇ ಎಂಬುದು ಹೋರಾಟಕ್ಕೆ ಸಿದ್ಧಗೊಂಡವರಿಗೆ ಕಸಿವಿಸಿ ಉಂಟು ಮಾಡಿತ್ತು. ಜೊತೆಗೆ ಬಿಜೆಪಿ ಮುಖಂಡನೊಬ್ಬನ ಪುತ್ರನೇ ಕೃತ್ಯವೆಸಗಿರುವುದು ಪೊಲೀಸರ ತನಿಖೆಯಿಂದ ಬಯಲಾಗಿತ್ತು.
ವಿಧಾನ ಪರಿಷತ್ ಸದಸ್ಯರೊಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮುಖಂಡನ ಪುತ್ರ ದಿವಿನ್ ದೇವಯ್ಯ(೨೯) ಬಂಧನಕ್ಕೊಳಗಾದ ಆರೋಪಿ.
ಪ್ರತಿಭಟನೆ ನಡೆಸಲು ಮುಂದಾಗಿದ್ದ ಸಂಘಟನೆಗಳು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿಕೆ ನೀಡಿ ಪ್ರತಿಭಟನೆಯನ್ನು ಹಿಂಪಡೆದಿವೆ. ಇದು ಉತ್ತಮ ಬೆಳವಣಿಗೆಯಾದರೂ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಕಾಡಲಾರಂಭಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಕೃತ್ಯವೊಂದನ್ನು ಎಸಗಿ ಅದರ ಲಾಭವನ್ನು ಪಡೆಯಲು ಉದ್ದೇಶಿಸಲಾಗಿತ್ತೇ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಮುಸ್ಲಿಂ-ಕೊಡವ ಸಂಘರ್ಷ ಉಂಟು ಮಾಡುವ ಪ್ರಯತ್ನವಾಗಿತ್ತೆ ಎನ್ನುವ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಆರೋಪಿ ಯಾವ ಕಾರಣಕ್ಕೆ ಕೃತ್ಯವೆಸಗಿದ್ದಾನೆ ಎಂಬ ಮಾಹಿತಿಯನ್ನು ಪೊಲೀಸರು ಕೂಡ ಬಹಿರಂಗ ಪಡಿಸದೇ ಇರುವುದರಿಂದ ಪ್ರಕರಣದ ಉದ್ದೇಶ ನಿಗೂಢವಾಗಿಯೇ ಉಳಿದಿದೆ.
ಸದ್ಯ ಮುಸ್ಲಿಂ ಸಮುದಾಯದ ಮುಖಂಡರು ಘಟನೆಯನ್ನು ಖಂಡಿಸಿದ್ದು, ಆರೋಪಿ ಗಡೀಪಾರಿಗೆ ಒತ್ತಾಯಿಸಲಾರಂಭಿಸಿದ್ದಾರೆ.
ಇನ್ಸ್ಟಾಗ್ರಾಮ್ ಗ್ರೂಪ್‌ನಲ್ಲಿ ಟಿಪ್ಪು ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಇದರಿಂದ ನಮಗೇನು ಆಗಬೇಕು ಎನ್ನುವ ನಿಲುವು ಹೊಂದಿದ್ದ ದಿವಿನ್ ದೇವಯ್ಯ ನಕಲಿ ಖಾತೆ ಮೂಲಕ ಕಾವೇರಿ ಮಾತೆ ಹಾಗೂ ಕೊಡವ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ ಎನ್ನಲಾಗಿದೆ. ಇದಕ್ಕೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಯೊಬ್ಬನ ಫೋಟೋ ಮತ್ತು ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಖಾತೆ ತೆರೆದಿದ್ದ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಖಾತೆಯನ್ನು ಕ್ಲೋಸ್ ಮಾಡಿ ತನಗೂ ಘಟನೆಗೂ ಸಂಬಂಧವಿಲ್ಲದಂತೆ ದಿವಿನ್ ನಟಿಸಿದ್ದ. ಪೊಲೀಸರ ಮಿಂಚಿನ ಕಾರ್ಯಾಚರಣೆ ಎಲ್ಲವನ್ನೂ ಬಯಲಿಗೆಳೆದಿದೆ.
ಕೋಮು ಸಂಘರ್ಷ ಉಂಟು ಮಾಡಲಿದ್ದ ಪ್ರಕರಣ ನೈಜ ಆರೋಪಿಯ ಬಂಧನದಿಂದ ಶಾಂತಿಯುತವಾಗಿ ಮುಕ್ತಾಯಗೊಂಡಿರುವುದು ಶ್ಲಾಘನೀಯ.
ಆದರೆ, ಪ್ರಕರಣದ ಬಗೆಗಿನ ಅನುಮಾನಗಳು ಬಗೆಹರಿಯಬೇಕಾಗಿದೆ. ಯಾವುದೇ ಒತ್ತಡಕ್ಕೂ ಮಣಿಯದೆ ಇಂತಹ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಪ್ರಕರಣದ ಹಿಂದೆ ಕಾಣದ ಕೈಗಳು ಇರುವ ಅನುಮಾನ ಕೂಡ ವ್ಯಕ್ತವಾಗಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿ ಬಹಿರಂಗಪಡಿಸುವ ಮೂಲಕ ಮುಂದೆ ಇಂತಹ ಘಟನೆಗಳು ನಡೆಯದಂತೆ ಸಮಾಜಕ್ಕೆ ಎಚ್ಚರಿಕೆ ನೀಡುವ ಅವಶ್ಯಕತೆ ಇದೆ. ಶಾಂತಿ ಸಹಬಾಳ್ವೆಗೆ ಹೆಸರಾದ ಕೊಡಗಿನಲ್ಲಿ ಇಂತಹ ಕೃತ್ಯವೆಸಗಲು ಮುಂದಾಗುವವರನ್ನು ಮಟ್ಟಹಾಕುವ ಕೆಲಸ ಮಾಡಬೇಕಿದೆ.
ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ…
ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್ 29ಕ್ಕೆ ಕೆಎಎಸ್ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…