ಎಡಿಟೋರಿಯಲ್

ಸಂಪಾದಕೀಯ : ಪ್ರತ್ಯೇಕ ದಸರಾ ಪ್ರಾಧಿಕಾರ ರಚನೆಗೆ ಇದು ಸಕಾಲ

ದೇಶ-ವಿದೇಶದ ಲಕ್ಷಾಂತರ ಜನರನ್ನು ಆಕರ್ಷಿಸುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ನವರಾತ್ರಿಗೆ ಸೀಮಿತಗೊಳಿಸದೆ ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮಾಡಲು ಪ್ರತ್ಯೇಕ ‘ದಸರಾ ಪ್ರಾಧಿಕಾರ’ ರಚನೆ ಮಾಡಬೇಕೆಂಬ ಕೂಗು ಪ್ರತಿ ವರ್ಷ ಕೇಳಿಬರುತ್ತಿದ್ದು, ಸಾಫಲ್ಯ ಮಾತ್ರ ಆಗಿಲ್ಲ. ರಾಜ್ಯ ಸರ್ಕಾರ ಈ ಬಾರಿಯಾದರೂ ಗಟ್ಟಿ ಮನಸ್ಸು ಮಾಡಿ ದಸರಾ ಪ್ರಾಧಿಕಾರ ರಚನೆ ಮಾಡುವ ಅಗತ್ಯವಿದೆ. ದಸರಾ ಪ್ರಾಧಿಕಾರ ಮತ್ತು ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಮಾಡಬೇಕೆಂಬ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಮಾತಿಗೆ ಜಿಲ್ಲೆಯ ಜನಪ್ರತಿನಿಧಿಗಳೂ ಸಮ್ಮತಿಸಿದ್ದಾರೆ. ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಯಾಗದಿದ್ದರೂ ದಸರಾ ಪ್ರಾಧಿಕಾರ ರಚನೆ ಮಾಡಬೇಕೆಂಬ ಸ್ಥಳೀಯ ಜನರ ಕೂಗಿಗೆ ಈಗ ಮತ್ತಷ್ಟು ಪುಷ್ಟಿ ಬಂದಿದೆ.

ಮೊನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತಾಧಿಕಾರ ಮಟ್ಟದ ಸಭೆಯಲ್ಲಿ ಪ್ರತ್ಯೇಕ ದಸರಾ ಪ್ರಾಧಿಕಾರ ರಚನೆಯ ವಿಷಯವನ್ನು ಸ್ವತಃ ಜಿ.ಟಿ.ದೇವೇಗೌಡರು ಪ್ರಸ್ತಾಪಿಸುವ ಜತೆಗೆ ಈ ಬಾರಿಯ ದಸರಾ ಮಹೋತ್ಸವದ ವೇಳೆ ಪ್ರಕಟಿಸುವಂತೆ ಕೋರಿದ್ದಾರೆ. ಅಲ್ಲಿಯೇ ಆಸೀನರಾಗಿದ್ದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ದನಿಗೂಡಿಸಿ ಸಿಎಂ ಮೇಲೆ ಒತ್ತಡ ಹೇರಿದ್ದಾರೆ. ಇದರ ಪರಿಣಾಮ ಮುಖ್ಯಮಂತ್ರಿಗಳು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದು ಅನಿವಾರ್ಯವಾಗಿದೆ. ಶೋಭಾ ಕರಂದ್ಲಾಜೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಪ್ರತ್ಯೇಕ ದಸರಾ ಪ್ರಾಧಿಕಾರ ರಚನೆಯ ಮಾತು ಕೇಳಿ ಬರುವ ಜತೆಗೆ ಅದರ ಚಿಂತನೆ ರಾಜ್ಯ ಮಟ್ಟದಲ್ಲೂ ನಡೆದಿತ್ತು. ಆದರೆ, ಬದಲಾದ ಕಾಲಕ್ಕೆ ಈ ಪ್ರಸ್ತಾಪ ಮರೀಚಿಕೆಯಾಗಿದ್ದು, ಪ್ರವಾಸೋದ್ಯಮ ಸಚಿವರು ತಮ್ಮ ಕಾಲದಲ್ಲಾದರೂ ರಚನೆ ಮಾಡಿಸಲು ಮುಂದಾಗಬೇಕಿದೆ.

ಜಿಲ್ಲಾಧಿಕಾರಿಗಳೇ ದಸರಾ ಮಹೋತ್ಸವದ ವಿಶೇಷಾಧಿಕಾರಿಯಾಗಿರುವುದರಿಂದ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಲ್ಲ. ಈಗಾಗಲೇ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ ಆಯುಕ್ತರು, ಅರಮನೆ ಮಂಡಳಿಗೆ ಪ್ರತ್ಯೇಕ ನಿರ್ದೇಶಕರು ಇರುವಂತೆ ಪ್ರಾಧಿಕಾರಕ್ಕೂ ಪೂರ್ಣ ಪ್ರಮಾಣದ ಹಿರಿಯ ಐಎಎಸ್ ಅಧಿಕಾರಿಯನ್ನು ನಿಯೋಜಿಸಿದರೆ ಸಾಕಷ್ಟು ಅನುಕೂಲವಾಗಲಿದೆ. ಅರಮನೆ ಮಂಡಳಿ ಇದ್ದರೂ ಜಿಲ್ಲಾಧಿಕಾರಿಗಳು ಅಧ್ಯಕ್ಷರು, ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಆದರೆ, ಇದು ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರ ವಿಚಾರಕ್ಕಷ್ಟೇ ಆಡಳಿತ ಸೀಮಿತವಾಗಿದೆ. ಅದೇ ರೀತಿ ಪರಂಪರೆ ಇಲಾಖೆಯು ಮೈಸೂರು ನಗರದಲ್ಲೇ ಇದ್ದರೂ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಇನ್ನಿತರ ಕೆಲಸಗಳನ್ನು ನೋಡಿಕೊಳ್ಳಲಿದೆ. ಆದರೆ, ದಸರಾ ಮಹೋತ್ಸವ ಬಂದಾಗ ಜಿಲ್ಲಾಧಿಕಾರಿಗಳೇ ದಸರಾ ಮಹೋತ್ಸವ ಉಪಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಕಾರಣ ಸಾಕಷ್ಟು ಒತ್ತಡ ಇರುತ್ತದೆ. ಜಿಲ್ಲಾಧಿಕಾರಿಗಳು ದೈನಂದಿನ ಕೆಲಸಗಳ ಜತೆಗೆ ಎರಡು ತಿಂಗಳ ದಸರಾ ವಿಚಾರದಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಅದರ ಬದಲು ದಸರಾ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಿದರೆ ಉತ್ತಮವಾಗಲಿದೆ. ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ನೇಮಿಸಿ ತಮ್ಮ ಅಧೀನದಲ್ಲಿ ಬರುವ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಿದರೆ ವರ್ಷಪೂರ್ತಿ ಕಾರ್ಯಕ್ರಮ ನಡೆಸಬಹುದು. ಮತ್ತಷ್ಟು ವಿಸ್ತರಿಸಲು ಅನುಕೂಲವಾಗಲಿದೆ. ಹಾಗಾಗಿ, ಸರ್ಕಾರ ಮೊದಲು ಪ್ರಾಧಿಕಾರ ರಚನೆ ಮಾಡಲು ನಿರ್ಧಾರ ಮಾಡಿದರೆ ಉತ್ತಮ.

ಅರಮನೆ ಎದುರು ಇರುವ ಜತೆಗೆ ವಿಶಾಲ ಜಾಗಹೊಂದಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ವರ್ಷಪೂರ್ತಿ ವಸ್ತು ಪ್ರದರ್ಶನ ನಡೆಯಬೇಕಿದೆ. ದಸರಾ ಸಂದರ್ಭದಲ್ಲಿ ೧೧೦ರಿಂದ ೧೨೦ ದಿನ ನಡೆಸಿದ ಬಳಿಕ ಖಾಲಿ ಖಾಲಿ ಹೊಡೆಸುವ ಬದಲು ವರ್ಷ ಪೂರ್ತಿ ಪ್ರವಾಸಿಗರನ್ನು ಆಕರ್ಷಿಸಬೇಕಿದೆ. ಪ್ರಾಧಿಕಾರಕ್ಕೆ ಅಧ್ಯಕ್ಷರು, ಸಿಇಒ, ಸಿಬ್ಬಂದಿ ಸೇರಿದಂತೆ ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವ ಸರ್ಕಾರ ಈ ಬಗ್ಗೆ ಚಿಂತಿಸಬೇಕಿದೆ. ಖಾಸಗಿಯವರಿಗೆ ದಸರಾ ವಸ್ತು ಪ್ರದರ್ಶನದ ಟೆಂಡರ್ ಕೊಡುವ ಬದಲಿಗೆ ರಾಜ್ಯಸ ರ್ಕಾರದ ಮೂಲಕವೇ ನಿರ್ವಹಿಸಿದರೆ ಆದಾಯವೂ ಉಳಿತಾಯವಾಗಲಿದೆ. ಹೊರಗಿನವರಿಗೆ ಟೆಂಡರ್ ನೀಡುವುದೂ ತಪ್ಪಲಿದೆ.

ನಾಡಹಬ್ಬ ದಸರಾ ಮಹೋತ್ಸವವನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ಮೂರು ತಿಂಗಳ ಮುನ್ನವೇ ಸಿದ್ಧತೆ ಆರಂಭಿಸುವುದು ಅತ್ಯಗತ್ಯವಾಗಿದ್ದು, ರಾಜ್ಯ ಸರ್ಕಾರ ನಾಡಹಬ್ಬಕ್ಕಾಗಿ ಬೇಕಾದ ತಯಾರಿ ಮಾಡಲು ಮುಂದಾಗಬೇಕಾಗಿದೆ. ದಸರಾ ಆರಂಭದ ಕೆಲವೇ ದಿನಗಳು ಇರುವಾಗ ತಯಾರಿ ಮಾಡುವ ಬದಲು ಅದಷ್ಟು ಬೇಗನೆ ನಡೆದು ಸಿದ್ಧತೆಗೆ ಹಸಿರುನಿಶಾನೆ ತೋರಬೇಕಿದೆ. ಈಗಿನಿಂದಲೇ ದಸರಾ ಮಹೋತ್ಸವದ ಸಿದ್ಧತೆ ಆರಂಭಿಸಿದರೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗಾಪುರ ಹಾಡಿಯಿಂದ ಹೊರಡುವ ಗಜಪಯಣ, ಅರಮನೆ ಅಂಗಳದಲ್ಲಿ ಗಜಪಡೆ ಸ್ವಾಗತಕ್ಕೂ ಭರ್ಜರಿ ಪ್ರಚಾರ ಸಿಗುವಂತೆ ಮಾಡಬೇಕಾಗಿದೆ. ಸರ್ಕಾರ ಕೂಡಲೇ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಣ್ಯ ಇಲಾಖೆ ಮೊದಲಾದ ಇಲಾಖೆಗಳನ್ನು ಜೋಡಿಸಿ ವ್ಯವಸ್ಥಿತವಾದ ರೂಪದಲ್ಲಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಹೊಸ ರೂಪ ಕೊಡುವ ಕೆಲಸ ಮಾಡಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಹೆಸರು ಬರಲಿದೆ. ಮಲೆ ಮಹದೇಶ್ವರ ಪ್ರಾಧಿಕಾರದಿಂದ ಮಹದೇಶ್ವ ಬೆಟ್ಟದಲ್ಲಿ ಆಗಿರುವ ಕೆಲಸಗಳೇ ದಸರಾ ಪ್ರಾಧಿಕಾರಕ್ಕೂ ಪ್ರೇರಣೆಯಾಗಲಿ ಎಂಬುದು ಜನರ ಆಶಯವಾಗಿದೆ.

andolana

Recent Posts

ಇನ್ಮುಂದೆ ಕಬ್ಬನ್‌ ಪಾರ್ಕ್‌ನಲ್ಲಿ ಗುಂಪು ಚಟುವಟಿಕೆಗೆ ಅನುಮತಿ ಪಡೆಯುವುದು ಕಡ್ಡಾಯ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ರಸಿದ್ಧ ಪಾರ್ಕ್‌ ಆದ ಕಬ್ಬನ್‌ ಪಾರ್ಕ್‌ನಲ್ಲಿ ಇನ್ನು ಮುಂದೆ ಯಾವುದೇ ಸಂಘಟನೆಗಳು ತಮ್ಮ ಚಟುವಟಿಕೆ…

2 mins ago

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ವೈಭವ್‌ ಸೂರ್ಯವಂಶಿ

13 ವರ್ಷದ ವೈಭವ್‌ ಸೂರ್ಯವಂಶಿ ಐಪಿಎಲ್‌ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…

7 mins ago

ಕುವೈತ್‌ ಪ್ರವಾಸದಲ್ಲಿ ಪ್ರಧಾನಿ ಮೋದಿ: ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ

ಕುವೈತ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್‌ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್‌ ಮಿಶಾಲ್‌…

13 mins ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸಮನ್ಸ್‌ ನೀಡಿದ ರಾಯ್‌ ಬರೇಲಿ ನ್ಯಾಯಾಲಯ

ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…

33 mins ago

ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚು: ಮಕ್ಕಳನ್ನು ಕಾಡುತ್ತಿರುವ ಕಾಲು ಬಾಯಿ ರೋಗ

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…

43 mins ago

ವಿವಾದದ ನಡುವೆಯೂ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳದನಲ್ಲಿ ಬಾಡೂಟ ವಿತರಣೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…

54 mins ago