ಪ್ರೊ.ಆರ್.ಎಂ.ಚಿಂತಾಮಣಿ
ಈಗ ಭಾರತದಲ್ಲಿ 80,000ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್‌ಅಪ್ ಕಂಪೆನಿಗಳಿವೆ ಎಂದು ಒಂದು ಅಂದಾಜಿದೆ. ಇವುಗಳಲ್ಲಿ 100ಕ್ಕೂ ಹೆಚ್ಚು ವೇಗವಾಗಿ ಬೆಳೆದು (ಮೌಲ್ಯವನ್ನು ಹೆಚ್ಚಿಸಿಕೊಂಡು) ಒಂದು ಬಿಲಿಯನ್ ಡಾಲರ್ (8,000 ಕೋಟಿ ರೂ.)ಗಳಿಗೂ ಹೆಚ್ಚು ಮೌಲ್ಯದ ದೊಡ್ಡ ಕಂಪೆನಿಗಳಾಗಿವೆ. ಉಳಿದಂತೆ ಶೇ.25-30ರಷ್ಟು ತಂತ್ರಜ್ಞಾನವನ್ನು ಉನ್ನತೀಕರಿಸುತ್ತಾ ತಮ್ಮ ಮಿತಿಯಲ್ಲಿ ಸಮರ್ಥವಾಗಿ ಬೆಳೆಯುತ್ತಿರುವುದನ್ನು ಗಮನಿಸಬಹುದು. ಇನ್ನಿತರ ಶೇ.70ರಷ್ಟು ಸ್ಟಾರ್ಟ್‌ಅಪ್‌ಗಳು ಬಂಡವಾಳದ ಕೊರತೆಯೂ ಸೇರಿದಂತೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವುದಾಗಿ ವರದಿಗಳು ಹೇಳುತ್ತವೆ. ಈ ಗುಂಪಿನಲ್ಲಿ ಕೆಲವು ಯುನಿಕಾರ್ನ್‌ಗಳೂ ಸೇರಿದಂತೆ ಸಣ್ಣ, ದೊಡ್ಡ ಸ್ಟಾರ್ಟ್ಅಪ್ಗಳಿವೆ. ಕೆಲವು ತಪ್ಪು ಕಾರಣಗಳಿಗಾಗಿ ಸದಾ ಸುದ್ದಿಯಲ್ಲಿದ್ದು, ಹೆಸರು ಕೆಡಿಸಿಕೊಂಡಿವೆ. ಬಹಳಷ್ಟು ಈಗಲೋ ಆಗಲೋ ಮುಚ್ಚುವ ಸ್ಥಿತಿಯನ್ನು ತಲುಪಿವೆ. ಇಂಥ ಗಂಭೀರ ಸ್ಥಿತಿಯಿಂದ ಹೊರಬಂದು ಸಮಸ್ಯೆಗಳನ್ನು ನಿವಾರಿಸಿಕೊಂಡು, ಚೇತರಿಸಿಕೊಂಡು ಮುನ್ನಡೆಯುವ ಸ್ಥಿತಿಗೆ ಮರಳುವುದಾದರೆ ಅದೊಂದು ಪವಾಡವೆಂದೇ ಹೇಳಬೇಕಾಗುತ್ತದೆ. ಸರ್ಕಾರವೇನೋ ಹಲವು ತೆರಿಗೆ ವಿನಾಯಿತಿಗಳು ಮತ್ತು ಇತರೆ ಸವಲತ್ತುಗಳನ್ನು ಒದಗಿಸಿದೆ. ಅವುಗಳನ್ನೆಲ್ಲ ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಈ ಸ್ಟಾಟ್‌ಅಪ್‌ಗಳು ಸಮರ್ಪಕ ವಾಗಿ ಕಾಯ್ದೆ ಪಾಲನೆ ಮಾಡಬೇಕಲ್ಲ.
ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಲು ತಂತ್ರಜ್ಞರ ತಂಡಗಳೇ ಸ್ಥಾಪಿಸಿ ನಡೆಸುತ್ತಿರುವ ಕಂಪೆನಿಗಳಿಗೆ ಸ್ಟಾರ್ಟ್ ಅಪ್‌ಗಳೆಂದು ಕರೆಯಲಾಗುತ್ತದೆ. ಇವು ಆರ್ಥಿಕ ಚಟುವಟಿಕೆಗಳ ಎಲ್ಲ ವಲಯಗಳಲ್ಲೂ ಕಾರ್ಯನಿರ್ವಹಿಸುತ್ತಿವೆ. ಆರಂಭಿಕ ಮತ್ತು ನಂತರ ಅವಶ್ಯಕತೆ ಇದ್ದಾಗ ಇವಕ್ಕೆ ಬಂಡವಾಳವನ್ನು ಒದಗಿಸುವವರು ಜಗತ್ತಿನಾದ್ಯಂತ ವೃತ್ತಿನಿರತ ವೆಂಚರ್ ಕ್ಯಾಪಿಟಲ್ ಫಂಡುಗಳು ಮತ್ತು ಖಾಸಗಿ ಇಕ್ವಿಟಿ ಫಂಡುಗಳಲ್ಲದೆ, ಹೊಸ ಉದ್ಯಮಕ್ಕೆ ಉತ್ತೇಜನ ಕೊಡುವ ಆಸಕ್ತಿಯುಳ್ಳ ಶ್ರೀಮಂತ ಹೂಡಿಕೆದಾರ ವ್ಯಕ್ತಿಗಳು (high networth individuals).
ಈ ಶತಮಾನದ ಆರಂಭದಿಂದಲೇ ಸ್ಟಾರ್ಟ್‌ಅಪ್‌ಗಳು ಹುಟ್ಟಿ ಬೆಳೆಯಲಾರಂಭಿಸಿದವು. ಕಳೆದ ದಶಕದಲ್ಲಿ ಬೆಳವಣಿಗೆ ತೀವ್ರಗೊಂಡಿತು. ಅದು ಕೋವಿಡ್-19 ಅವಧಿಯಲ್ಲಿ ಹೆಚ್ಚಿನ ವೇಗ ಪಡೆಯಿತು. ಈ ಅವಧಿಯಲ್ಲಿ ಬೇರೆ ಕಡೆಗಳಲ್ಲಿ ಅವಕಾಶ ಇಲ್ಲವಾದ್ದರಿಂದಲೋ, ಇಲ್ಲಿ ಬಂಡವಾಳ ಬೇಗ ವೃದ್ಧಿಯಾಗುವ ಸಾಧ್ಯತೆ ಹೆಚ್ಚಾಗಿರುವುದು ಎಂಬ ನಂಬಿಕೆಯಿಂದಲೋ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದು ಬಂದಿತು. ನಂತರ ಬಂಡವಾಳದ ಒಳಹರಿವು ಕಡಿಮೆಯಾಗುತ್ತಾ ಬಂತು.
ಬಂಡವಾಳದ ಹರಿವು ಕುಸಿತ…
ಆರಂಭದಿಂದ 2021ರ ಕೊನೆಯವರೆಗೂ ಸುಮಾರು 250 ಬಿಲಿಯನ್ ಡಾಲರ್‌ನಷ್ಟು ಹೂಡಿಕೆಗಳು (ಬಹುಭಾಗ ವಿದೇಶಿ ಬಂಡವಾಳ) ಈ ಕಂಪೆನಿಗಳಿಗೆ ಹರಿದು ಬಂದಿದ್ದು ಒಂದು ದಾಖಲೆಯೇ ಸರಿ. 2022ರ ಮೊದಲರ್ಧದಲ್ಲಿ ಕೆಲವೇ ಯಶಸ್ವಿ ಸ್ಟಾರ್ಟ್‌ಅಪ್‌ಗಳಿಗೆ 18.3 ಬಿಲಿಯನ್ ಡಾಲರ್ ಬಂದಿದ್ದು ನಂತರ ತೀರಾ ಕಡಿಮೆಯಾಗುತ್ತಾ ಬಂತು. ಇದು ಈ ವರ್ಷ ಜೂನ್‌ವರೆಗೆ ಕೇವಲ 3.5 ಬಿಲಿಯನ್ ಡಾಲರ್‌ಗಳಿಗೆ ಇಳಿದಿದೆ. ಶೇ.80ರಷ್ಟು ಕುಸಿತ. ಇದನ್ನೇ ಹೂಡಿಕೆಯ ಆಕುಂಚನ ಕಾಲ ಎಂದು ಹೇಳುವುದು (investment winter).
ಕಾರಣಗಳು ಹಲವು. ಬೇರೆ ಕಡೆಗೆ ಲಾಭದಾಯಕ ಮತ್ತು ಮೌಲ್ಯ ವೃದ್ಧಿ ಹೂಡಿಕೆಗಳ ಅವಕಾಶಗಳು ಹೆಚ್ಚಾಗುತ್ತಿರುವುದು ಒಂದು ಕಾರಣವಾದರೆ, ನಮ್ಮ ಸ್ಟಾರ್ಟ್‌ಅಪ್‌ಗಳಲ್ಲಿಯ ಲೋಪದೋಷಗಳು ಮಹತ್ವದ ಕಾರಣ ವೆಂದು ಹೇಳಲೇಬೇಕಾಗುತ್ತದೆ. ಹೂಡಿಕೆದಾರರು ಎಷ್ಟು ಉದಾರಿಗಳಾಗಿದ್ದರೂ ತಮ್ಮ ಹಣದ ಸದುಪಯೋಗ, ಭದ್ರತೆ ಮತ್ತು ಲಾಭದಾಯಕತೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಹಲವು ವರ್ಷಗಳಾದರೂ ನಷ್ಟದಲ್ಲೇ ಮುಂದುವರಿಯುತ್ತಿರುವುದು ಆದರೂ ಇನ್ನೊಂದು ಸುತ್ತಿನ ಹೆಚ್ಚುವರಿ ಬಂಡವಾಳ ಕೇಳುವುದು ಹೂಡಿಕೆದಾರರ ನಿರಾಸಕ್ತಿಗೆ ಕಾರಣವಾಗಿರಬಹುದು. ಹಳೆಯ ಪ್ರಸಿದ್ಧ ಕಂಪೆನಿಗಳಾದ ಒ ವೈ ಒ, ನೈಕಾ, ಪೇಟಿಎಂ ಮುಂತಾದ ಮನೆಮಾತಾಗಿರುವ ಕಂಪೆನಿಗಳು ಸಹಿತ ತಮ್ಮ ಹಿಂದಿನ ನಷ್ಟಗಳನ್ನು ತುಂಬಿಕೊಂಡು ಲಾಭದ ಕಡೆಗೆ ಈಗ ಬರುತ್ತೇವೆ, ಇನ್ನೊಂದು ವರ್ಷಕ್ಕೆ ಬರುತ್ತೇವೆ ಎಂದು ಹೇಳುತ್ತಲೇ ಇರುತ್ತವೆ.
ಷೇರುಪೇಟೆಯಲ್ಲಿ ವ್ಯವಹರಿಸಲ್ಪಡುವ ಹಲವು ಸ್ಟಾರ್ಟ್‌ಅಪ್ ಷೇರುಗಳ ಬೆಲೆಗಳನ್ನು ಆರಂಭದ ದಿನ ಮೇಲ್ಮಟ್ಟದಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಪೇಟೆಯಲ್ಲಿ ಅಂದಿನ ಬೆಲೆಗಿಂತ ತೀರಾ ಕೆಳಗೆ ಕುಸಿಯುವುದು, ಸ್ವಲ್ಪ ಮೇಲೆ ಬರುವುದು, ಮತ್ತೆ ಕುಸಿಯುವುದು ಹೀಗೆ ಏರುಪೇರುಗಳು ಹೆಚ್ಚಾಗಿರುವುದು ಕಂಡುಬಂದಿದೆ. ಇದರಿಂದ ಹೂಡಿಕೆದಾರರು ತಮ್ಮ ಹೂಡಿಕೆಗಳ ಮೌಲ್ಯ ಗಳನ್ನು ಲೆಕ್ಕ ಹಾಕುವುದೇ ಕಷ್ಟವಾಗುತ್ತಿದೆ. ಹೀಗಾಗಿ ಕೆಲವು ದೊಡ್ಡ ಹೂಡಿಕೆದಾರರು ತಮ್ಮ ಹೂಡಿಕೆಗಳ ಮೌಲ್ಯಗಳನ್ನು ಅರ್ಧಕ್ಕೆ ಇಳಿಸಿಕೊಂಡಿರುವುದು ವರದಿಯಾಗಿದೆ.
ಸ್ಟಾರ್ಟ್‌ಅಪ್‌ಗಳಿಂದ ಜನಜೀವನಕ್ಕೆ ಅನುಕೂಲವಾಗಿರುವುದು ನಿಜ. ನಗದು ರಹಿತ ವ್ಯವಹಾರಗಳು ಹೆಚ್ಚಾಗಿವೆ. ಮನೆಯಲ್ಲೇ ಕುಳಿತು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ಆಡಳಿತ, ನೈತಿಕತೆ ಹೆಚ್ಚಬೇಕಷ್ಟೆ.
ಆಡಳಿತ ಮತ್ತು ನೈತಿಕ ಸವಾಲುಗಳು
ನಮ್ಮಲ್ಲಿಯ ಅನೇಕ ಸ್ಟಾರ್ಟ್‌ಅಪ್‌ಗಳು ಅಮೆರಿಕದ ಕಂಪೆನಿಗಳ ನಕಲುಗಳು ಎಂದು ಹೇಳಲಾಗುತ್ತದೆ. ತಂತ್ರಜ್ಞಾನದಲ್ಲಿ ನಿರಂತರ ನಾವೀನ್ಯತೆ ಮತ್ತು ಸ್ವಂತಿಕೆ ಮುಖ್ಯ. ಅವುಗಳಿಲ್ಲದಿದ್ದರೆ ಯಶಸ್ಸು ಕಷ್ಟ. ಸಂಶೋಧನೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ (ಮಾನವ ಬಂಡವಾಳದಲ್ಲಿ) ಹೆಚ್ಚು ಹೂಡಿಕೆ ಮಾಡಿದರೆ ಅದು ದೀರ್ಘಾವಽಯಲ್ಲಿ ಫಲ ಕೊಡುತ್ತದೆ.
ಸ್ಟಾರ್ಟ್‌ಅಪ್‌ಗಳಲ್ಲಿ ಗಿಗ್ ವರ್ಕರ್ಸ್ ಸೇರಿ ಹಲವು ಕಂಪೆನಿಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಆದರೆ ಬಂಡವಾಳದ ಒಳಹರಿವು ಕಡಿಮೆಯಾದ ನಂತರ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಇದ್ದ ನಗದು ರಕ್ಷಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು ಕೆಲಸದಿಂದ ತೆಗೆಯಲಾಗುತ್ತದೆ. ಈ ಆರು ತಿಂಗಳಲ್ಲೇ 70ಕ್ಕೂ ಹೆಚ್ಚು ಸಣ್ಣ, ದೊಡ್ಡ ಸ್ಟಾರ್ಟ್‌ಅಪ್‌ಗಳಲ್ಲಿ 17,000ಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡಿದ್ದಾರೆ. ಅವರಲ್ಲಿ ತಂತ್ರಜ್ಞಾನ ಪರಿಣತರೇ ಹೆಚ್ಚು. ಬೈಜೂಸ್ ಸೇರಿ ಎಜ್ಯುಟೆಕ್ ಕಂಪೆನಿಗಳಲ್ಲಿಯೇ ಇದು ಹೆಚ್ಚು. ಇದು ಒಂದು ರೋಗದಂತೆ ಹರಡುತ್ತಿದೆ.
ನಾಯಕತ್ವ ವಹಿಸಿಕೊಂಡವರ ಒರಟುತನ, ಸರ್ವಾಧಿಕಾರ ಮನೋಭಾವ ಮತ್ತು ಸ್ವಾರ್ಥಗಳು ಕಂಪೆನಿಗಳು ಹಿನ್ನಡೆ ಕಾಣಲು ಕಾರಣವಾಗಿವೆ. ಭಾರತ ಪೇ ಕಂಪೆನಿಯ ಅಶನೀರ ಗ್ರೋವರ ಅವ್ಯವಹಾರಗಳು ಜನಜನಿತವಾಗಿವೆ. ಬೈಜೂಸ್ನ ರವೀಂದ್ರನ್ ಇಂಥ ನಡೆಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸ್ಥಾಪಕ ತಂಡಗಳಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆ. ಇದರಿಂದ ನಿರ್ದೇಶಕರು, ಸ್ವತಂತ್ರ ನಿರ್ದೇಶಕರು ಮತ್ತು ಆಡಿಟರ್‌ಗಳು ಹೊರ ಹೋಗುತ್ತಿರುವ ಪ್ರಸಂಗಗಳು ಸರ್ವೇಸಾಮಾನ್ಯವಾಗಿವೆ.
ಕಂಪೆನಿಯ ನೈತಿಕ ಆಡಳಿತ (corporate governance) ವಿಷಯದಲ್ಲಿ ಸ್ಟಾರ್ಟ್‌ಅಪ್‌ಗಳಲ್ಲಿ ಲೋಪದೋಷಗಳು ಕಂಡುಬರುತ್ತವೆ. ಸರಿಪಡಿಸಲು ಸಲಹೆಕೊಟ್ಟ ಪರಿಣತರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದನ್ನೂ ಇಲ್ಲಿ ಗಮನಿಸಬಹುದು. ಇನ್ನೂ ಹಲವು ಸರಿಪಡಿಸಬೇಕಾದ ದೋಷಗಳಿವೆ.
ತಂತ್ರಜ್ಞಾನ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರುವುದರಿಂದ ನಮ್ಮ ಸ್ಟಾರ್ಟ್‌ಅಪ್‌ಗಳು ಇದೆಲ್ಲ ಗೊಂದಲ ಗಳಿಂದ ಹೊರಬಂದು ಬೆಳೆಯಲೇಬೇಕಾದ ಅನಿವಾರ್ಯತೆಯಿದೆ.
ಒಂದು ಮಾತು: ಯಾವುದೇ ಉದ್ದಿಮೆ ವ್ಯವಹಾರದಲ್ಲಿ, ವಿಶೇಷವಾಗಿ ತಂತ್ರಜ್ಞಾನ ಕಂಪೆನಿಗಳಲ್ಲಿ ತಂಡ ಪ್ರಜ್ಞೆ ಮತ್ತು ಒಮ್ಮತದ ನಿರ್ಧಾರ (team work) ಮುಖ್ಯ. ನಾಯಕನಾದವನಿಗೆ ಇತರರ ಮನಸ್ಸಿನಲ್ಲ್ಲಿ ಇರುವುದನ್ನು ಅರಿಯುವ (empathy) ಸಾಮರ್ಥ್ಯವಿರಬೇಕು. ಎಲ್ಲರ ಅಭಿಪ್ರಾಯ ಕೇಳುವ ತಾಳ್ಮೆ ಇರಬೇಕು. ಇದು ಯಶಸ್ಸಿನ ರಾಜಮಾರ್ಗ.
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…
ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…
ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…
ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…
ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…