ಎಡಿಟೋರಿಯಲ್

ರಷ್ಯಾ-ಉಕ್ರೇನ್ ಯುದ್ಧ ಅಂತ್ಯ ಸಾಧ್ಯವೇ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೃಷ್ಟಿಸುತ್ತಿರುವ ಗೊಂದಲಗಳಿಗೆ ಕೊನೆ ಮೊದಲಿಲ್ಲದಂತಾಗಿದೆ. ವಲಸೆ ನಿಯಮ ಗಳೂ ಸೇರಿದಂತೆ ಅಮೆರಿಕದ ಆಡಳಿತಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ಹೊಸ ಹೊಸ ಆದೇಶಗಳನ್ನು ಹೊರಡಿಸುತ್ತ ಹಿಂದಿನದೆಲ್ಲವನ್ನು ತಿರುಗು ಮುರುಗು ಮಾಡುತ್ತಿದ್ದಾರೆ. ಅವರು ಆಂತರಿಕ ವಿಷಯಗಳಲ್ಲಿ ಅಷ್ಟೇ ಅಲ್ಲ ವಿದೇಶಗಳಿಗೆ ಸಂಬಂಧಿಸಿದ ವಿಚಾರದಲ್ಲಿಯೂ ಸಾಕಷ್ಟು ಗೊಂದಲ ಗಳನ್ನು ಸೃಷ್ಟಿಸಿ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿದ್ದಾರೆ.

ಗಾಜಾ ಸಮಸ್ಯೆ ಪರಿಹರಿಸಲು ಹೊರಟ ಟ್ರಂಪ್ ಅಂತಿಮವಾಗಿ ಅದನ್ನು ಅಮೆರಿಕವೇ ವಶಮಾಡಿಕೊಂಡು ಮನರಂಜನೆ ಮತ್ತು ವಿಶ್ರಾಂತಿ ಧಾಮ ವನ್ನಾಗಿ ಮಾಡಲಾಗುವುದೆಂದು ಹೇಳಿ ಆಘಾತ ಉಂಟುಮಾಡಿದ್ದಾರೆ. ಲಕ್ಷಾಂತರ ಪ್ಯಾಲೆಸ್ಟೇನೀಯರನ್ನು ಗಾಜಾ ಪ್ರದೇಶದಿಂದ ಹೊರಹಾಕುವ ಅವರ ಆಲೋಚನೆ ಭಯಂಕರವಾದುದೇ ಆಗಿದೆ. ಇದೀಗ ಟ್ರಂಪ್ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಹೋಗಿ ಉಕ್ರೇನ್ ಅಧ್ಯಕ್ಷ ವ್ಲಾಡಮಿರ್ ಝಲನ್ಸ್ಕಿಸರ್ವಾಧಿಕಾರಿ ಮತ್ತು ಚುನಾಯಿತ ಅಧ್ಯಕ್ಷರೇ ಅಲ್ಲ ಎಂದು ಹೇಳುವ ಮೂಲಕ ಹೊಸ ಸಮಸ್ಯೆಯನ್ನು ಹುಟ್ಟುಹಾಕಿದ್ದಾರೆ.

ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ಪುಟಿನ್ ಅವರ ಸುಳ್ಳುಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಂತೆ ಮಾತನಾಡುತ್ತಿದ್ದಾರೆ ಎಂಬ ಝಲನ್ಸ್ಕಿ ಅವರ ಪ್ರತಿ ಕ್ರಿಯೆಯಿಂದ ಕುಪಿತರಾಗಿ ಏನೇನೋ ಮಾತನಾಡುತ್ತಿದ್ದಾರೆ. ಟ್ರಂಪ್ ಅವರ ಪ್ರಕಾರ ರಷ್ಯಾದ ಮೇಲೆ ಮೊದಲು ದಾಳಿ ಮಾಡಿದ್ದೇ ಉಕ್ರೇನ್. ಇದು ಸತ್ಯಕ್ಕೆ ದೂರವಾದುದು ಎಂದು ಹೇಳಲು ಯೂರೋಪಿನ ನಾಯಕರು ಹೆಣಗಾಡುತ್ತಿದ್ದಾರೆ. ೨೦೧೪ರಲ್ಲಿಯೇ ರಷ್ಯಾ ಮಿಲಿಟರಿ ಉಕ್ರೇನ್ ಗೆ ಸೇರಿದ ಕ್ರ್ತ್ಯೈಮಿಯಾವನ್ನು ವಶಮಾಡಿಕೊಂಡ ಬಗ್ಗೆ ಮತ್ತು ಮೂರು ವರ್ಷಗಳ ಹಿಂದೆ ಉಕ್ರೇನ್‌ನ ಗಡಿ ಪ್ರದೇಶಗಳನ್ನು ವಶಪಡಿಸಿಕೊಂಡ ಬಗ್ಗೆ ವಿವರ ನೀಡಲು ಝಲನ್ಸ್ಕಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಮಾತನ್ನು ಟ್ರಂಪ್ ನಂಬುತ್ತಲೇ ಇಲ್ಲ. ‘ನೀವು ಚುನಾಯಿತ ಅಧ್ಯಕ್ಷರಲ್ಲ. ನಿಮ್ಮ ಜೊತೆ ಒಪ್ಪಂದ ಮಾಡಿಕೊಳ್ಳುವುದು ಹೇಗೆ? ‘ ಎಂಬ ಪ್ರಶ್ನೆ ಎತ್ತಿದ್ದಾರೆ. ವಾಸ್ತವವಾಗಿ ಝಲನ್ಸ್ಕಿಚುನಾಯಿತ ಅಧ್ಯಕ್ಷರಾಗಿದ್ದು, ಯುದ್ಧ ಆರಂಭವಾದದ್ದರಿಂದ ಚುನಾವಣೆ ನಡೆದಿಲ್ಲ ಅಷ್ಟೆ. ಅವರ ಜನಪ್ರಿಯತೆ ಕಡಿಮೆಯಾಗುತ್ತಿದೆ ಎನ್ನುವುದು ನಿಜ. ಹಾಗೆಂದು ಅವರು ಜನಪ್ರಿಯ ನಾಯಕರಲ್ಲ ಎಂದು ಹೇಳಲು ಬರುವುದಿಲ್ಲ. ಹಾಗೆ ನೋಡಿದರೆ ಈ ವಾದವನ್ನು ಮುಂದಿಡುತ್ತಿರುವವರು ಪುಟಿನ್. ಝಲನ್ಸ್ಕಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ತಮ್ಮದೇ ಕೈಗೊಂಬೆ ಅಧ್ಯಕ್ಷರನ್ನು ಅಲ್ಲಿ ಆಯ್ಕೆಯಾಗುವಂತೆ ಮಾಡಿ ಉಕ್ರೇನ್ ಮೇಲೆ ಹಿಡಿತ ಸಾಧಿಸುವುದೇ ಪುಟಿನ್ ಉದ್ದೇಶ. ಪುಟಿನ್ ಅವರ ಈ ಒಳ ರಾಜಕೀಯ ಟ್ರಂಪ್‌ಗೆ ತಿಳಿಯದಿರುವುದೇನೂ ಅಲ್ಲ. ಆದರೆ ಟ್ರಂಪ್ ಲೆಕ್ಕಾಚಾರವೇ ಬೇರೆ. ಈ ಜಗತ್ತಿನ ಆಳುವ ಶಕ್ತಿಯಾಗಲು ರಷ್ಯಾದ ಸ್ನೇಹ ಅಗತ್ಯ ಎಂದು ಟ್ರಂಪ್ ಭಾವಿಸಿರು ವಂತಿದೆ. ಹೀಗಾಗಿ ಪುಟಿನ್ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಟ್ರಂಪ್ ಮಾಡುತ್ತಿರುವ ತಂತ್ರ ಇದು. ಆದರೆ ಪುಟಿನ್ ಸಾಮಾನ್ಯರಲ್ಲ. ಟ್ರಂಪ್ ಅವರನ್ನು ಈಗಾಗಲೇ ತಮ್ಮ ಕಡೆಗೆ ಸೆಳೆದುಕೊಂಡಿದ್ದಾರೆ. ರಷ್ಯಾದ ಮೇಲೆ ಹಾಕಿರುವ ಆರ್ಥಿಕ ನಿರ್ಬಂಧಗಳನ್ನು ರದ್ದುಮಾಡುವಂತೆ ಮಾಡುವುದು ಪುಟಿನ್ ಉದ್ದೇಶ. ಹೀಗಾಗಿಯೇ ಉಕ್ರೇನ್ ಯುದ್ಧವನ್ನು ದಾಳವಾಗಿ ಬಳಸುತ್ತಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧ ನಿಲ್ಲಿಸುವ ದಿಸೆಯಲ್ಲಿ ಟ್ರಂಪ್ ಈಗಾಗಲೇ ಮಾತುಕತೆ ಆರಂಭಿಸಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಒಂದು ಸುತ್ತು ಮಾತುಕತೆ ಮುಗಿಸಿದ್ದಾರೆ. ಈ ಮಾತುಕತೆಯ ಮುಂದಿನ ಭಾಗವಾಗಿ ಸೌದಿ ಅರೇಬಿಯಾದಲ್ಲಿ ರಷ್ಯಾ ಮತ್ತು ಅಮೆರಿಕದ ನಿಯೋಗ ಮಾತುಕತೆ ನಡೆಸಿದೆ.

ಈ ಮಾತುಕತೆಗೆ ಉಕ್ರೇನ್ ಅಧ್ಯಕ್ಷರನ್ನು ಆಹ್ವಾನಿಸಿಲ್ಲ. ಅಂತೆಯೇ ಯುರೋಪ್ ಪ್ರತಿನಿಽಯನ್ನೂ ಕರೆದಿಲ್ಲ. ಉಕ್ರೇನ್ ಪ್ರತಿನಿಧಿಸದೆ ಇರುವ ಮಾತುಕತೆಗೆ ಬೆಲೆಯಿಲ್ಲ ಎಂದು ಯುರೋಪ್ ಮತ್ತು ಉಕ್ರೇನ್ ಈಗಾಗಲೇ ಪ್ರತಿಕ್ರಿಯೆ ನೀಡಿವೆ. ಉಕ್ರೇನ್ ಅಧ್ಯಕ್ಷ ಝಲನ್ಸ್ಕಿ ಸ್ವಲ್ಪ ಕಟುವಾಗಿಯೇ ಟ್ರಂಪ್ ಅವರನ್ನು ಟೀಕಿಸಿದ್ದಾರೆ. ಇದರಿಂದ ಕುಪಿತರಾದ ಟ್ರಂಪ್ ಅವರು ಜಲನಸ್ಕಿ ಜನರಿಂದ ಆಯ್ಕೆಯಾದ ಅಧ್ಯಕ್ಷರಲ್ಲ, ಅವರ ಜೊತೆಯಲ್ಲಿ ಹೇಗೆ ಮಾತುಕತೆ ನಡೆಸುವುದು ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಆದರೆ ಯುರೋಪಿಯನ್ ನಾಯಕರು ಈ ವಾದಕ್ಕೆ ಮನ್ನಣೆ ನೀಡಿಲ್ಲ. ಮಾತುಕತೆಗಳಲ್ಲಿ ಯುರೋಪ್‌ಗೆ ಪ್ರಾತಿನಿಧ್ಯ ನೀಡದಿರುವ ಬಗ್ಗೆ ಯೂರೋಪಿಯನ್ ನಾಯಕರು ಅಸಮಾ ಧಾನ ವ್ಯಕ್ತ ಮಾಡಿದ್ದಾರೆ. ರಷ್ಯಾದ ಪರ ಅಮೆರಿಕ ನಿಂತರೆ ಅದೊಂದು ರೀತಿ ಪ್ರಜಾತಂತ್ರಕ್ಕೆ ಆದ ಹಿನ್ನಡೆ ಎಂದು ಯೂರೋಪ್ ನಾಯಕರು ಭಾವಿಸಿದ್ದಾರೆ.

ಉಕ್ರೇನ್‌ನ ಕೆಲವು ಪ್ರದೇಶಗಳನ್ನು ರಷ್ಯಾ ಅತಿಕ್ರಮಿಸಿದೆ. ಅದನ್ನು ರಷ್ಯಾ ಬಿಟ್ಟುಕೊಡಬೇಕು. ಹಾಗೆ ಮಾಡದೆ ಹೋದರೆ ರಷ್ಯಾ ಮತ್ತಷ್ಟು ಪ್ರದೇಶ ಗಳನ್ನು ಕಬಳಿಸುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಇನ್ನಷ್ಟು ದೇಶಗಳ ಮೇಲೆ ಸವಾರಿ ಮಾಡುತ್ತದೆ ಎಂದು ಯುರೋಪ್ ನಾಯಕರು ಹೇಳುತ್ತಾರೆ. ಈ ಎಲ್ಲ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಮುಂದಿನ ವಾರ ಫ್ರಾನ್ಸ್ ಅಧ್ಯಕ್ಷ ಮೆಕ್ರಾನ್, ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರು ಟ್ರಂಪ್ ಅವರನ್ನು ಭೇಟಿ ಮಾಡುವ ಮತ್ತು ಯೂರೋಪ್ ಭೀತಿಯ ಬಗ್ಗೆ ಮನವರಿಕೆ ಮಾಡಿಕೊಡುವ ಬಗ್ಗೆ ಯೋಜಿಸುತ್ತಿದ್ದಾರೆ. ಆದರೆ ಅವರು ತಮ್ಮ ಯತ್ನದಲ್ಲಿ ಸಫಲರಾಗುತ್ತಾರೆಂದು ಹೇಳಲು ಸಾಧ್ಯವಿಲ್ಲ.

ರಷ್ಯಾ – ಉಕ್ರೇನ್ ಯುದ್ಧದಿಂದಾಗಿ ಅಮೆರಿಕಕ್ಕೆ ಆಗುತ್ತಿರುವ ವೆಚ್ಚವನ್ನು ತಗ್ಗಿಸುವ ಕಡೆಗೇ ಟ್ರಂಪ್ ಅವರ ಗಮನ. ಈಗಾಗಲೇ ೨೫೦ ಮಿಲಿಯನ್ ಡಾಲರ್ ನೆರವನ್ನು ಉಕ್ರೇನ್‌ಗೆ ನೀಡಲಾಗಿದೆ. ಹಿಂದಿನ ಅಧ್ಯಕ್ಷ ಬೈಡನ್ ಅವರ ತಪ್ಪು ನೀತಿಯಿಂದಾಗಿ ಅಮೆರಿಕ ೨೫೦ ಬಿಲಿಯನ್ ಡಾಲರ್ ಕಳೆದುಕೊಂಡಿದೆ. ಅದಕ್ಕೆ ಪ್ರತಿಫಲವಾಗಿ ಅಮೆರಿಕಕ್ಕೆ ಬಂದದ್ದಾದರೂ ಏನು ಎಂದು ಟ್ರಂಪ್ ಪ್ರಶ್ನಿಸುತ್ತಾರೆ. ಹೀಗಾಗಿಯೇ ಈ ನೆರವನ್ನು ಸಾಲವಾಗಿ ಪರಿವರ್ತಿಸಿ ಅದಕ್ಕೆ ಪ್ರತಿಯಾಗಿ ನೈಸರ್ಗಿಕ ಸಂಪನ್ಮೂಲವನ್ನು ನೀಡಬೇಕೆಂದು ಟ್ರಂಪ್ ಒತ್ತಾಯಿಸುತ್ತಿದ್ದಾರೆ. ಉಕ್ರೇನ್‌ನಲ್ಲಿ ಅಪಾರ ಪ್ರಮಾಣದಲ್ಲಿ ಟೈಟಾನಿಯಂ, ಲೀಥಿಯಂ, ಕಲ್ಲಿದ್ದಲು, ಅನಿಲ, ತೈಲ, ಯುರೇನಿಯಂ, ಗ್ರಾಫೈಟ್ ಮತ್ತಿತರ ಸಂಪನ್ಮೂಲಗಳಿವೆ. ಈ ಸಲಹೆಗೆ ಜಲನಸ್ಕಿ ಮೊದಮೊದಲು ವಿರೋಧ ವ್ಯಕ್ತ ಮಾಡಿದರಾದರೂ ದೇಶದ ಭದ್ರತೆಗಾಗಿ ಕೇಳಿದಷ್ಟು ಅಲ್ಲ, ಶೇ. ೫೦ರಷ್ಟು ಕೊಡಲು ಒಪ್ಪಿಗೆ ಸೂಚಿಸಿದ್ದರು. ಇಷ್ಟಾದರೂ ಟ್ರಂಪ್ ತಮ್ಮ ರಷ್ಯಾ ಪರವಾದ ನಿಲುವನ್ನು ಬದಲಿಸಿದಂತೆ ಕಾಣುತ್ತಿಲ್ಲ. ಇದೀಗ ಟ್ರಂಪ್ ಅವರ ಭದ್ರತಾ ಸಲಹೆಗಾರ ಮೈಕ್ ವಾಜ್ ಉಕ್ರೇನ್‌ಗೆ ಹೋಗಿ ಜಲನಸ್ಕಿ ಜೊತೆ ಮಾತುಕತೆ ನಡೆಸಿದ್ದಾರೆ. ರಾಜಿಗೆ ಸಿದ್ಧವಿರಬೇಕು ಮತ್ತು ಆ ದಿಸೆಯಲ್ಲಿ ಕೆಲವು ಪ್ರದೇಶಗಳನ್ನು ಬಿಟ್ಟುಕೊಡಲು ಸಿದ್ಧವಿರಬೇಕೆಂದು ಅವರಿಗೆ ತಿಳಿಸಲಾಗಿದೆ. ಇದಕ್ಕೆ ಜಲನಸ್ಕಿಯ ಒಪ್ಪಿಗೆ ಇಲ್ಲ. ಆದರೆ ರಷ್ಯಾ ಆಕ್ರಮಿತ ಪ್ರದೇಶಗಳನ್ನು ಬಿಟ್ಟುಕೊಡಲು ಪುಟಿನ್ ಸಿದ್ಧವಿಲ್ಲ. ಟ್ರಂಪ್ ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಉಕ್ರೇನ್ ಮೇಲೆ ಒತ್ತಡ ತರುವ ಸಾಧ್ಯತೆ ಹೆಚ್ಚು.

ಅಮೆರಿಕ ಯುದ್ಧಾಸ್ತ್ರಗಳ ನೆರವು ನಿಲ್ಲಿಸಿದರೆ ಉಕ್ರೇನ್ ಯುದ್ಧ ಮುಂದುವರಿಸುವುದು ಕಷ್ಟ. ಅಂಥ ಸಂದರ್ಭದಲ್ಲಿ ಯುರೋಪ್ ಉಕ್ರೇನ್ ನೆರವಿಗೆ ಹೋಗಬೇಕಾಗುತ್ತದೆ. ಯುರೋಪ್ ಉಕ್ರೇನ್ ಪರ ಇದೆ. ಆದರೆ ರಷ್ಯಾ ಮತ್ತು ಅಮೆರಿಕದ ಮಿಲಿಟರಿ ಬಲವನ್ನು ಸರಿದೂಗಿಸುವಂಥ ಸ್ಥಿತಿಯಲ್ಲಿ ಯುರೋಪ್ ಇಲ್ಲ. ಈಗಾಗಲೇ ನ್ಯಾಟೋಗೆ ಕೊಡುತ್ತಿರುವ ತಮ್ಮ ಪಾಲಿನ ರಕ್ಷಣಾ ವೆಚ್ಚವನ್ನು ಹೆಚ್ಚಿಸಬೇಕೆಂದು ಯುರೋಪ್ ಮೇಲೆ ಟ್ರಂಪ್ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಯುರೋಪ್ ದೇಶಗಳು ತಮ್ಮ ದೇಶಗಳ ರಕ್ಷಣಾ ವೆಚ್ಚವನ್ನು ಒಲ್ಲದ ಮನಸ್ಸಿನಿಂದ ಏರಿಸುತ್ತಿವೆ. ಅದೂ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಯೂರೋಪಿನ ಸ್ಥಿತಿ ಟ್ರಂಪ್ ಅವರಿಗೂ ಗೊತ್ತಿದೆ. ನ್ಯಾಟೋ ನಿರ್ವಹಣೆಗೆ ಅಮೆರಿಕ ಏಕೆ ಹೆಚ್ಚು ವೆಚ್ಚ ಮಾಡಬೇಕು ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ತೆರಿಗೆ ವಿಚಾರದಲ್ಲಿಯೂ ಟ್ರಂಪ್ ಭಿನ್ನ ದಾರಿ ತುಳಿದಿದ್ದಾರೆ. ಗ್ಯಾಟ್ ಒಪ್ಪಂದಕ್ಕೆ ಅವರ ಸಹಮತ ಇಲ್ಲ. ಹೀಗಾಗಿ ಅವರೇ ತೆರಿಗೆ ಪ್ರಮಾಣವನ್ನು ನಿರ್ಧರಿಸುತ್ತಿದ್ದಾರೆ. ಹೀಗಾಗಿ ಯೂರೋಪ್ ಆರ್ಥಿಕ ಒತ್ತಡಕ್ಕೆ ಒಳಗಾಗಿದೆ.

ಇಂಥ ಸಂದರ್ಭದಲ್ಲಿ ಉಕ್ರೇನ್ ನೆರವಿಗೆ ಹೋಗುವವವರು ಯಾರೂ ಇಲ್ಲದಂತಾಗಿದೆ. ಇದನ್ನು ತಿಳಿದೇ ಟ್ರಂಪ್ ಅವರು ಜಲನಸ್ಕಿಯ ಮೇಲೆ ಒತ್ತಡ ಹೇರುತ್ತಿದ್ದಾರೆ. ನ್ಯಾಟೋ ಸೇರುವ ಆಸೆಯನ್ನು ಕೈಬಿಡಬೇಕೆಂದೂ ಉಕ್ರೇನ್‌ಗೆ ತಿಳಿಸಲಾಗಿದೆ. ಪುಟಿನ್ ಅಭಿಪ್ರಾಯವೂ ಇದೆ ಆಗಿದೆ. ಇಬ್ಬರು ಬಲಿಷ್ಠರು ಒಂದಾದರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಯಾರೇ ನೆರವಿಗೆ ಬರದಿದ್ದರೂ ರಷ್ಯಾ ವಿರುದ್ಧದ ಹೋರಾಟ ನಿಲ್ಲುವುದಿಲ್ಲ ಎಂದು ಜಲನಸ್ಕಿ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಂತಿ ಸ್ಥಾಪಿಸುವ ಟ್ರಂಪ್ ಪ್ರಯತ್ನ ವಿಫಲವಾದರೆ ಆಶ್ಚರ್ಯವಿಲ್ಲ. ಆದರೆ ಟ್ರಂಪ್ ಮತ್ತು ಯೂರೋಪ್ ನಾಯಕರು ಉಕ್ರೇನ್ ಜನರಿಗೆ ಅನ್ಯಾಯವಾಗದಂಥ ಸೂತ್ರವೊಂದನ್ನು ರೂಪಿಸಿ ಪುಟಿನ್ ಮನವೊಲಿಸಬಹುದಾದ ಸಾಧ್ಯತೆಗಳೂ ಇವೆ. ಟ್ರಂಪ್ ಅವರ ಶಾಂತಿ ಯತ್ನ ಇಷ್ಟು ದೂರ ಸಾಗುತ್ತದೆಯೇ ಎಂಬುದೇ ಪ್ರಶ್ನೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

10 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

11 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

11 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

12 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

12 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

13 hours ago