ಅರ್ಥವ್ಯವಸ್ಥೆಯಲ್ಲಿ ಮಧ್ಯಮ ಆದಾಯ ಕುಟುಂಬಗಳ ಪಾತ್ರವನ್ನು ಹೆಚ್ಚು ವಿವರವಾಗಿ ಹೇಳುವ ಅವಶ್ಯಕತೆ ಇಲ್ಲ. ಉತ್ಪಾದನೆ, ವಿತರಣೆ, ವಿನಿಮಯ ಮತ್ತು ಉಪಭೋಗಗಳಲ್ಲಿ ಇವುಗಳು ಪ್ರಮುಖ ಪಾತ್ರವಹಿ ಸುತ್ತವೆ. ಎಲ್ಲ ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮದೇ ರೀತಿಯಲ್ಲಿ ಪಾಲ್ಗೊಳ್ಳುತ್ತವೆ. ಈಗಿನ ಲೆಕ್ಕಾಚಾರದಂತೆ ನಮ್ಮ ದೇಶದಲ್ಲಿ ವಾರ್ಷಿಕ 5 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳವರೆಗೆ ಆದಾಯ ಹೊಂದಿರುವ ಕುಟುಂಬಗಳೆಂದು ಕರೆಯಲಾಗುವುದು. ಅಂದರೆ ಮಾಸಿಕ ಅಂದಾಜು 40,000 ರೂ.ಗಳಿಂದ 2.5ಲಕ್ಷ ರೂ. ಆದಾಯ ಪಡೆಯುವ ಕುಟುಂಬಗಳು. ಇವುಗಳನ್ನೇ ಮಧ್ಯಮ ವರ್ಗದ ಕುಟುಂಬಗಳು ಎಂದು ಗುರುತಿಸಲಾಗುವುದು.
ಒಂದಿಷ್ಟು ವಿವರಗಳನ್ನು ಪರಿಶೀಲಿಸೋಣ. ಮಧ್ಯಮ ವರ್ಗ ಎಂದರೂ ಸರಿ.
ಭಾರತದಲ್ಲಿ 2021ರಲ್ಲಿ 9.1 ಕೋಟಿ ಮಧ್ಯಮ ವರ್ಗದ ಕುಟುಂಬಗಳಿದ್ದವು ಎಂದು ‘ಭಾರತದ ಉಪಭೋಗಕ ಅರ್ಥವ್ಯವಸ್ಥೆಯ ಬಗ್ಗೆ ಜನರ ಸಂಶೋಧನೆ’ (people’s research on india consumers economy ) ಸಂಸ್ಥೆ ಹೇಳುತ್ತದೆ. ಅದರ ಅಧ್ಯಯನದಂತೆ ಈ ವರ್ಗ ಅಂದಿನ ದೇಶದ ಒಟ್ಟು ಆದಾಯ ತರುವ ಜನಸಂಖ್ಯೆಯ (ಕುಟುಂಬಗಳ) ಶೇ.30 ರಷ್ಟಿತ್ತು. ಮಧ್ಯಮ ವರ್ಗ ವೇಗವಾಗಿ ಬೆಳೆಯುತ್ತಿದ್ದು, ವಾರ್ಷಿಕ ಸರಾಸರಿ ಶೇ.6.3ರಷ್ಟು ಬೆಳೆಯುತ್ತಿದೆ. ಹೀಗೆ ಬೆಳೆಯುತ್ತಾ ಹೋದರೆ 2021ರ ಹೊತ್ತಿಗೆ 16.5 ಕೋಟಿ ಕುಟುಂಬಗಳಾಗುವ ಅಂದಾಜಿದೆ. ಇದು ಅಂದಿನ ಒಟ್ಟು ಕುಟುಂಬಗಳ ಶೇ.46 ರಷ್ಟಾಗಬಹುದೆಂದೂ ಹೇಳಲಾಗಿದೆ.
ಮಧ್ಯಮ ವರ್ಗದಲ್ಲಿರುವವರು: ಹಳ್ಳಿ ಮತ್ತು ನಗರಗಳಲ್ಲಿರುವ ದೊಡ್ಡ ರೈತರು, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿಗಳು, ಸರ್ಕಾರ ಮತ್ತು ಕಂಪೆನಿಗಳಲ್ಲಿಯ ಮಧ್ಯಮ ಹಂತದ ನೌಕರರು, ಅತಿ ಸಣ್ಣ ಮತ್ತು ಸಣ್ಣ ಉದ್ಯಮಿಗಳು, ನಗರಗಳಲ್ಲಿರುವ ಕುಶಲಕರ್ಮಿಗಳು (ಕೌಶಲಗಳೊಡನೆ ವೃತ್ತಿ ನಿರತರು), ಶಿಕ್ಷಣ ರಂಗದಲ್ಲಿಯ ಶಿಕ್ಷಕರು ಮತ್ತು ನೌಕರರು, ಬ್ಯಾಂಕುಗಳು ಮತ್ತು ಉದ್ಯಮ ರಂಗಗಳಲ್ಲಿಯ ಮಧ್ಯಮ ಹಂತದ ನೌಕರರು, ಕೆಲವು ವಿಶಿಷ್ಟ ಸೇವೆಗಳಲ್ಲಿ ತೊಡಗಿರುವ ಕೌಶಲಯುಕ್ತ ವೃತ್ತಿನಿರತರು ಮತ್ತು ಇಂತಹ ಮಧ್ಯಮ ಗಾತ್ರದ ಆದಾಯ ಪಡೆಯುವವರನ್ನು ಈ ವರ್ಗದಲ್ಲಿ ಸೇರಿಸಬಹುದು. ಬೇರೆ ಬೇರೆ ಪ್ರದೇಶಗಳಲ್ಲಿ ಒಟ್ಟಿನಲ್ಲಿ ಸಾಮಾನ್ಯ ಮಟ್ಟದಲ್ಲಿ ಜೀವನ ನಡೆಸಲಿಕ್ಕೆ ಸಾಕಾಗುವಷ್ಟು ಆದಾಯವಿದ್ದು, ಅದು ನಿಧಾನಗತಿಯಲ್ಲಿ ಬೆಳೆಯುತ್ತಿರುವ ಎಲ್ಲರನ್ನೂ ಇಲ್ಲಿ ಗುರುತಿಸಬಹುದು.
1980ರ ದಶಕದವರೆಗೆ ಮಧ್ಯಮ ವರ್ಗದ ಕುಟುಂಬಗಳು ಶ್ರೀಮಂತ ರಂತೆ ಬೇಕಾದುದನ್ನು ಬೇಕೆಂದಾಗ ದೊಡ್ಡ ಬೆಲೆ ಕೊಟ್ಟು ಖರೀದಿಸುವುದೂ ಆಗದೆ ಪ್ರತಿಷ್ಠೆ ಬಿಟ್ಟು ಬಡವರಂತೆ ಇದ್ದುದರಲ್ಲೇ ಬದುಕಲೂ ಆಗದೆ ಸರ್ಕಾರದ ಸವಲತ್ತುಗಳಿಗೆ ಕೈಚಾಚಲು ಮುಜುಗರಪಡುತ್ತ ತ್ರಿಶಂಕು ಸ್ಥಿತಿಯಲ್ಲಿ ಬದುಕುವ ಸ್ಥಿತಿ ಇತ್ತು. ಆಗ ಸಾಂಸ್ಥಿಕ ಸಾಲಗಳು ಉಪಭೋಗಕ್ಕೆ ಮತ್ತು ಮನೆ ಮುಂತಾದವುಗಳನ್ನು ಹೊಂದಲು ಲಭ್ಯವಿಲ್ಲದೆ ಇರುವುದರಿಂದ ಒಂದು ವಾಸದ ಮನೆ ಹೊಂದಲು ಜೀವನವಿಡೀ ಕೂಡಿಟ್ಟ ಉಳಿತಾಯಗಳನ್ನು ಜೋಡಿಸಿ ಕೊನೆಗಾಲದಲ್ಲಿ ಪ್ರಯತ್ನಿಸಬೇಕಾಗಿತ್ತು. ಆಟೋಮೊಬೈಲ್ ದೂರವೇ ಉಳಿಯಿತು, ಒಂದು ಬೈಸಿಕಲ್ ಕೊಳ್ಳಲು ಹಿಂದೆ ಮುಂದೆ ನೋಡಬೇಕಾಗಿತ್ತು.
ನಿತ್ಯ ಜೀವನವೇನೋ ಸಾಧ್ಯವಾಗುತ್ತಿತ್ತು. ಹಿರಿಯರು ಮಾಡಿಟ್ಟ ಸಣ್ಣಪುಟ್ಟ ಆಸ್ತಿಗಳೇನಾದರೂ ಇದ್ದರೆ ಅವುಗಳಿಂದ ಬರುವ ಅಷ್ಟೋ ಇಷ್ಟೋ ಆದಾಯವಿದ್ದರೆ ಅಂತಹ ಕುಟುಂಬಗಳ ಸ್ಥಿತಿ ಸ್ವಲ್ಪ ಉತ್ತಮವಾಗಿರುತ್ತಿತ್ತು. ಮದುವೆ ಮುಂತಾದ ಸಮಾರಂಭಗಳಿಗಾಗಿ ಖಾಸಗಿ ಸಾಲ ಮಾಡಿ ಬಡ್ಡಿ ಕಟ್ಟುವ ಇಲ್ಲವೇ ಪಿತ್ರಾರ್ಜಿತ ಆಸ್ತಿಗಳನ್ನು ಮಾರುವ ಸ್ಥಿತಿ ಅನೇಕ ಕುಟುಂಬಗಳದ್ದಾಗಿತ್ತು. ಗೌರವ ಕಾಪಾಡಿಕೊಳ್ಳಲು ಹೆಣಗುತ್ತಿದ್ದವು.
ನಂತರದ ದಿನಗಳಲ್ಲಿ ಕೃಷಿಯಲ್ಲಿ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಕ್ರಮಗಳು ಮುಂತಾದವುಗಳಿಂದಾಗಿ ಮಧ್ಯಮ ವರ್ಗದ ಆದಾಯಗಳು ಮತ್ತು ಸಂಬಳಗಳು ಹೆಚ್ಚಾಗುತ್ತಾ ನಡೆದವು. ನಗರೀಕರಣ ಹೆಚ್ಚಾದಂತೆ ಈ ವರ್ಗದ ಸ್ಥಿತಿಯ ಸುಧಾರಣೆ ತೀವ್ರಗೊಂಡಿತು. ಆರ್ಥಿಕವಾಗಿ ಕೆಳಹಂತದಲ್ಲಿದ್ದ ಕುಟುಂಬಗಳು ಮೇಲ್ಮಟ್ಟಕ್ಕೇರಿ ಮಧ್ಯಮ ವರ್ಗವನ್ನು ಸೇರಿಕೊಳ್ಳುವುದು ಹೆಚ್ಚಾಯಿತು.
1991ರ ಆರ್ಥಿಕ ಸುಧಾರಣೆಗಳ (ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ) ಪರಿಣಾಮವಾಗಿ ಮಧ್ಯಮ ವರ್ಗದ ಅವಕಾಶಗಳ ವಿಸ್ತರಣೆಯಾಯಿತು. ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಹಲವು ರೀತಿಯಲ್ಲಿ ರಿಟೇಲ್ ಸಾಲಗಳನ್ನು ಕೊಡಲಾರಂಭಿಸಿದವು. ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ಮತ್ತು ಗೃಹ ಕೈಗಾರಿಕೆಗಳಿಗೆ ಉತ್ತೇಜನಗಳು ಹೆಚ್ಚಾದವು. ಮಧ್ಯಮ ವರ್ಗದ ಕೈಯಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿ ಪೇಟೆಯಲ್ಲಿ ಬೇಡಿಕೆ ಹೆಚ್ಚಾಗಿ ಸರಕು ಸೇವೆಗಳ ಪೂರೈಕೆಯು ಹೆಚ್ಚಾಯಿತು.
ಇನ್ನೊಂದೆಡೆ ಮಧ್ಯಮ ವರ್ಗ ತಮ್ಮ ಉಳಿತಾಯಗಳ ಭದ್ರತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವುದರಿಂದ ಅವುಗಳಲ್ಲಿ ಬಹುಪಾಲು ಸಣ್ಣ ಉಳಿತಾಯಗಳು ಮತ್ತು ಬ್ಯಾಂಕುಗಳಲ್ಲಿ ಠೇವಣಿಗಳು ಇರುವುದರಿಂದ ಅವುಗಳೆಲ್ಲ ಅಭಿವೃದ್ಧಿ ಕಾರ್ಯಗಳಿಗೆ ಬಂಡವಾಳವಾಗಿ ಪರಿವರ್ತನೆಯಾಗು ತ್ತವೆ. ಹೂಡಿಕೆಗಳಾಗಿ ಉಪಯೋಗವಾಗುತ್ತವೆ. ಮಧ್ಯಮ ವರ್ಗದಲ್ಲಿ ಶಿಕ್ಷಣ ಮಟ್ಟ ಹೆಚ್ಚಾಗಿದ್ದು, ಮಾಹಿತಿ ಕೊರತೆ ಇರುವುದಿಲ್ಲ. ಸಂಪರ್ಕಗಳೂ ಹೆಚ್ಚಾಗಿರುತ್ತವೆ. ಅವಕಾಶಗಳನ್ನು ಮತ್ತು ಅನುಕೂಲಗಳನ್ನು ಬಳಸಿಕೊಂಡು ಕೆಳ ಮಧ್ಯಮ ವರ್ಗದಿಂದ ಮೇಲ್ಮಧ್ಯಮ ವರ್ಗಕ್ಕೆ ಮೇಲೇರಬಹುದು. ಇವರಿಂದ ಮಾಹಿತಿ ಪಡೆದು ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಆದಾಯ ಹೆಚ್ಚಿಸಿಕೊಂಡು ಬಡವರು ಮಧ್ಯಮ ವರ್ಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜಿಗಿದದ್ದುಂಟು.
ಮಧ್ಯಮ ವರ್ಗ ಬೆಳೆಯುತ್ತಿರುವುದೆಲ್ಲಿ?:1991ರಿಂದ ಸುಮಾರು 20 ವರ್ಷಗಳು ಮಾಧ್ಯಮ ವರ್ಗವು ವಿಸ್ತರಣೆಯಾಗಿದ್ದು ಮೆಟ್ರೋಗಳಲ್ಲಿ ಮತ್ತು ಅವುಗಳ ನಂತರದ ಮಹಾನಗರಗಳಲ್ಲಿ ಎಂದು ಅಧ್ಯಯನ ಹೇಳುತ್ತದೆ. ಆನಂತರ ೨೦೨೧ರವರೆಗೆ ಈ ವರ್ಗ 10 ರಿಂದ 40 ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ವೇಗವಾಗಿ ಬೆಳೆದಿರುವುದು ಕಂಡುಬರುತ್ತದೆ. ಈಗ ಇದು ವಿಸ್ತರಣೆಯಾಗಿ ದೇಶಾದ್ಯಂತ ದೊಡ್ಡ ನಗರಗಳ ಸಮೀಪವಿರುವ ದೊಡ್ಡ ದೊಡ್ಡ ಹಳ್ಳಿ, ಪಟ್ಟಣಗಳಲ್ಲಿ ನಗರೀಕರಣ ವೇಗವಾಗಿ ಬೆಳೆಯುತ್ತಿದೆ. ಹಳ್ಳಿಗಳಲ್ಲಿ ಆರ್ಥಿಕತೆ ಸುಧಾರಿಸಿದಂತೆಲ್ಲ ಮಧ್ಯಮ ವರ್ಗದ ಕುಟುಂಬಗಳು (ಅಥವಾ ಮೇಲ್ದರ್ಜೆಗೆ ಬಂದವರು) ಮಕ್ಕಳ ಶಿಕ್ಷಣಕ್ಕಾಗಿಯೋ, ಲಾಭದಾಯಕ ಉದ್ಯೋಗ ಅರಸಿಯೋ ಈ ‘ಛಾಯಾ ನಗರ’ಗಳಲ್ಲಿ ವಾಸ್ತವ್ಯ ವರ್ಗಾಯಿಸುವುದರಿಂದ ಅಲ್ಲಿ ಇದು ವೇಗವಾಗಿ ಬೆಳೆಯುತ್ತಿದೆ. ಅಲ್ಲಿಯ ಆರ್ಥಿಕ ಚಟುವಟಿಕೆಗಳಿಗೆ ಇದು ಪೂರಕ.
ಮಾಧ್ಯಮ ವರ್ಗ ಹೆಚ್ಚಾದಂತೆ ಮತ್ತು ಅದರ ಆರ್ಥಿಕ ಸ್ಥಿತಿ ಸುಧಾರಿಸಿದಂತೆ ಅವರು ಬಟ್ಟೆಗಳು, ಮೊಬೈಲ್‌ಗಳು ಸೇರಿ ವಿದ್ಯುನ್ಮಾನ ಉಪಕರಣಗಳು, ಸಾರಿಗೆ, ವೈಯಕ್ತಿಕ ಸೌಖ್ಯದ ಅವಶ್ಯಕತೆಗಳು, ಆರೋಗ್ಯ ಸೌಲಭ್ಯಗಳು ಮತ್ತು ಮನರಂಜನೆಗೆ ಖರ್ಚು ಮಾಡುತ್ತಾರೆ. ಇದು ಅಷ್ಟರ ಮಟ್ಟಿಗೆ ಆಯಾ ವಲಯಗಳಿಗೆ ಮತ್ತು ಒಟ್ಟಾರೆ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಅನುಕೂಲವಾಗುತ್ತದೆ.
ನಂಜನಗೂಡು: ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ನಗರದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14…
ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…
ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…
ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…
ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…
ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ…