america
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳು ಸೃಷ್ಟಿಸುತ್ತಿರುವ ಗೊಂದಲಗಳಿಗೆ ಕೊನೆ ಇದ್ದಂತೆ ಕಾಣುತ್ತಿಲ್ಲ. ಆಡಳಿತಾತ್ಮಕವಾಗಿ ಅವರು ತೆಗೆದುಕೊಂಡ ತೀರ್ಮಾನಗಳು ಈಗಾಗಲೇ ಅಮೆರಿಕದ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಅಮೆರಿಕದೊಳಕ್ಕೆ ಬರುವ ಎಲ್ಲ ವಸ್ತುಗಳ ಮೇಲೆ ವಿಧಿಸಿರುವ ಸುಂಕ ಅಥವಾ ತೆರಿಗೆಗಳಿಗೆ ಕೆಲವು ನ್ಯಾಯಾಲಯಗಳು ತಡೆ ನೀಡಿವೆ. ಕೆಲವು ಅವುಗಳನ್ನು ತಾತ್ಕಾಲಿಕವಾಗಿ ಮುಂದುವರಿಸಿವೆ. ಟ್ರಂಪ್ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದೂ ಕೆಲ ಕೋರ್ಟುಗಳು ಅಭಿಪ್ರಾಯಪಟ್ಟಿವೆ. ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಬರುವವರೆಗೆ ಗೊಂದಲ ಮುಂದುವರಿಯಲಿದೆ. ಈ ಗೊಂದಲದ ಕೆಟ್ಟ ಪರಿಣಾಮ ಹೆಚ್ಚಾಗಿ ಚೀನಾ, ಕೆನಡಾ, ಯೂರೋಪ್, ಭಾರತದ ಮೇಲೆ ಆಗುತ್ತಿದೆ.
ಗೊಂದಲ ಕೇವಲ ವಾಣಿಜ್ಯ ಸುಂಕಕ್ಕೆ ಸಂಬಂಧಿಸಿದಂತೆ ಮಾತ್ರ ಸೀಮಿತವಾಗಿಲ್ಲ, ಶಿಕ್ಷಣ, ರಕ್ಷಣೆ, ವಿದೇಶ ವ್ಯವಹಾರ ಮತ್ತಿತರ ಕ್ಷೇತ್ರಗಳನ್ನೂ ಆವರಿಸಿದೆ. ಅಮೆರಿಕವನ್ನು ಮತ್ತೆ ವಿಶ್ವದ ಶ್ರೇಷ್ಠ ದೇಶವನ್ನಾಗಿಸುತ್ತೇನೆ ಎಂದು ಸದಾ ಹೇಳುತ್ತಿರುವ ಟ್ರಂಪ್ ತಾವು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ತಮ್ಮ ಬಗ್ಗೆ ತಾವೇ ಕೊಚ್ಚಿಕೊಳ್ಳುತ್ತಾರೆ. ಸದಾ ಉದ್ಯಮಿ- ವ್ಯಾಪಾರಗಾರರಂತೆ ನಡೆದುಕೊಳ್ಳುತ್ತಾರೆ. ಇದಕ್ಕೆ ಉತ್ತಮ ಉದಾ ಹರಣೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಘೋಷಿತವಾದ ಕದನ ವಿರಾಮ ಘಟನೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಭಾರತವು, ಪಾಕಿಸ್ತಾನದ ಮೇಲೆ ನಡೆಸಿದ ಮಿಲಿಟರಿ ದಾಳಿ, ನಂತರ ಪಾಕಿಸ್ತಾನ ನಡೆಸಿದ ಪ್ರತಿದಾಳಿ, ದೊಡ್ಡ ಯುದ್ಧವಾಗಿ ಬೆಳೆಯುವುದನ್ನು ತಡೆದ್ದದೇ ತಾನು ಎಂದು ಟ್ರಂಪ್ ಹೇಳಿಕೊಂಡು ಬರುತ್ತಿ ದ್ದಾರೆ. ಅಮೆರಿಕದ ಮಧ್ಯಸ್ಥಿಕೆಯಿಂದಾಗಿಯೇ ಕದನ ವಿರಾಮ ಘೋಷಣೆ ಯಾಯಿತು ಎನ್ನುವುದು ಟ್ರಂಪ್ ಅಭಿಪ್ರಾಯ. ಈ ವಿಚಾರದಲ್ಲಿ ಮೊದ ಮೊದಲು ಸ್ವಲ್ಪ ಗೊಂದಲವಿದ್ದದ್ದು ನಿಜ. ಆದರೆ ಈಗ ಸತ್ಯ ಹೊರಬಿದ್ದಿದೆ. ಯುದ್ಧ ನಿಲುಗಡೆಯಲ್ಲಿ ಭಾರತದ ಮಟ್ಟಿಗೆ ಟ್ರಂಪ್ ಪಾತ್ರ ಇರಲಿಲ್ಲ. ಕದನ ವಿರಾಮ ಕೋರಿಕೆ ಬಂದದ್ದೇ ಪಾಕಿಸ್ತಾದಿಂದ. ಅದರ ಪ್ರಕಾರ ಯುದ್ಧ ನಿಲುಗಡೆಯಾಗಿದೆ ಎಂದು ಭಾರತದ ವಿದೇಶಾಂಗ ಸಚಿವರು ಖಚಿತವಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಕದನ ವಿರಾಮದ ಲಾಭ ಪಡೆಯಲು ಟ್ರಂಪ್ ಯತ್ನಿಸುತ್ತಿರುವುದು ಖಚಿತವಾದಂತೆ ಆಗಿದೆ.
ಕದನ ವಿರಾಮ ಕೋರಿಕೆ ಸಲ್ಲಿಸುವಂತೆ ಬಹುಶಃ ಟ್ರಂಪ್ ಪಾಕಿಸ್ತಾನದ ಮೇಲೆ ಒತ್ತಡ ಹೇರಿರುವ ಸಾಧ್ಯತೆ ಇದೆ. ಭಾರತದ ಪರ ನಿಲ್ಲದೆ ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಟ್ರಂಪ್ ಮುತುವರ್ಜಿ ವಹಿಸಲು ಬೇರೆ ಕಾರಣವೂ ಇದ್ದಂತಿದೆ. ಟ್ರಂಪ್ ಅವರ ಪುತ್ರ ಎರಿಕ್ ಪಾಕಿಸ್ತಾನದ ಕ್ರಿಪ್ಟೋ ಕಂಪೆನಿಯಲ್ಲಿ ಭಾರೀ ಮೊತ್ತದ ಬಂಡವಾಳ ಹೂಡಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮಗನ ಹಿತಾಸಕ್ತಿ ಕಾಪಾಡಲು ಟ್ರಂಪ್ ಪಾಕಿಸ್ತಾನದ ಪರವಾಗಿ ಕೆಲಸ ಮಾಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಅಮೆರಿಕ ಮೊದಲಿನಿಂದಲೂ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿದೆ. ಹಿಂದೆ ಆಫ್ಗಾನಿಸ್ತಾದಿಂದ ಸೋವಿಯತ್ ಒಕ್ಕೂಟದ ಮಿಲಿಟರಿಯನ್ನು ಹೊರಗಟ್ಟಲು ಅಮೆರಿಕ ಅಲ್ಲಿ ಭಯೋತ್ಪಾದಕರಿಗೆ ನೆರವಾಯಿತು. ಪಾಕಿಸ್ತಾನಕ್ಕೂ ಅಮರಿಕ ನೆರವು ನೀಡುತ್ತಾ ಬಂತು. ಪಾಕಿಸ್ತಾನ ಈ ನೆರವನ್ನು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಬಳಸಿಕೊಂಡಿತು. ಈ ವಿಚಾರವನ್ನು ಅಮೆರಿಕಕ್ಕೆ ತಿಳಿಸಿದರೂ ಉಪಯೋಗವಾಗಲಿಲ್ಲ. ಆಫ್ಘಾನಿಸ್ತಾನದಲ್ಲಿ ಅಮೆರಿಕದ ಮಿಲಿಟರಿ ಮಣ್ಣು ಮುಕ್ಕಿದ ನಂತರವೂ ಪಾಕಿಸ್ತಾನಕ್ಕೆ ನೆರವು ನೀಡುವುದು ನಿಲ್ಲಲಿಲ್ಲ. ಪಾಕಿಸ್ತಾನವನ್ನು ಆಟದ ಗೊಂಬೆಯಂತೆ ಬಳಸಿಕೊಂಡು ಪ್ರಬಲ ವಾಗುತ್ತಿರುವ ಚೀನಾ ಮತ್ತು ಭಾರತದ ಪ್ರಭಾವ ತಗ್ಗಿಸಲು ಅಸ್ಥಿರತೆ ಸೃಷ್ಟಿಸುವುದು ಅಮೆರಿಕದ ನೀತಿ. ಈ ನೀತಿ ಟ್ರಂಪ್ ಕಾಲದಲ್ಲಿಯೂ ಬೇರೆ ಸ್ವರೂಪದಲ್ಲಿ ಮುಂದುವರಿದಂತೆ ಕಾಣುತ್ತಿದೆ.
ಅಮೆರಿಕದ ಸುಂಕದ ಯುದ್ಧ ಸೃಷ್ಟಿಸಿರುವ ಗೊಂದಲದ ಮಧ್ಯೆಯೇ ಶಿಕ್ಷಣ ಕ್ಷೇತ್ರದಲ್ಲಿ ಟ್ರಂಪ್ ತಮ್ಮ ನಿರ್ಧಾರಗಳಿಂದಾಗಿ ಗೊಂದಲ ಎಬ್ಬಿಸಿದ್ದಾರೆ. ಟ್ರಂಪ್ ಅಕ್ರಮ ವಲಸಿಗರ ವಿರುದ್ಧ ತಮ್ಮ ಮೊದಲ ದಾಳಿ ನಡೆಸಿದರು. ಕಾನೂನುಬದ್ಧವಾಗಿ ಅಮೆರಿಕ ಪ್ರವೇಶಿಸದೆ ಇರುವವರನ್ನು ಹಿಡಿದು ಜೈಲಿನಲ್ಲಿಟ್ಟು ಅವರವರ ದೇಶಗಳಿಗೆ ಕಳುಹಿಸುವ ಕ್ರಮ ಆರಂಭವಾಗಿ ಹಲವು ತಿಂಗಳುಗಳೇ ಆಗಿವೆ. ಭಾರತದ ನೂರಾರು ಮಂದಿ ಅಕ್ರಮ ವಲಸಿಗರನ್ನೂ ಬಂಽಸಿ ವಾಪಸ್ ಕಳುಹಿಸಲಾಗಿದೆ. ವಲಸೆ ನಿಯಮಗಳಿಗೆ ತಿದ್ದುಪಡಿ ತಂದು ಅಪರಾಧದ ಆರೋಪ ಹೊತ್ತಿರುವವರನ್ನೂ ಹಿಡಿದು ಅವರವರ ದೇಶಕ್ಕೆ ಕಳುಹಿಸಲಾಗುತ್ತಿದೆ. ಕಾನೂನು ಬದ್ಧವಾಗಿಯೇ ವಲಸೆ ಬಂದು ಶಾಶ್ವತ ಪ್ರಜೆಯಾಗಿದ್ದರೂ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದರೆ ಅಂಥವರನ್ನೂ ದೇಶದಿಂದ ಹೊರಗಟ್ಟಲಾಗುವುದು ಎಂದು ಘೋಷಿಸಲಾಗಿದೆ. ಒಂದೆರಡು ಪ್ರಕರಣಗಳಲ್ಲಿ ಕೋರ್ಟ್‌ನಿಂದ ತಡೆಯೂ ಬಂದಿದೆ. ಆದರೆ ಸರ್ಕಾರ ತನ್ನ ನೀತಿಯಿಂದ ಹಿಂದೆ ಸರಿದಿಲ್ಲ.
ದೇಶದಿಂದ ಹೊರಹಾಕುವ ಪ್ರಕ್ರಿಯೆಯನ್ನು ಈಗ ಶಿಕ್ಷಣ ಕ್ಷೇತ್ರಕ್ಕೂ ವಿಸ್ತರಿಸಲಾಗಿದೆ. ಯಹೂದಿ ವಿರೋಽ ಚಟುವಟಿಕೆಗಳಲ್ಲಿ ತೊಡಗಿರುವವರನ್ನೂ ಹೊರಹಾಕುವ ಪ್ರಕ್ರಿಯೆ ಆರಂಭಿಸಲಾಗಿದೆ. ಗಾಜಾ ಮೇಲೆ ಇಸ್ರೇಲ್ ದಾಳಿ ಆರಂಭಿಸಿದ ನಂತರ ಅಮೆರಿಕದಲ್ಲಿ ಪ್ಯಾಲೆಸ್ಟೇನ್ ಜನರ ಪರ ಮತ್ತು ಇಸ್ರೇಲ್ ನ ಯಹೂದಿ ಆಡಳಿತಗಾರರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಅವು ಹಿಂಸಾತ್ಮಕ ಸ್ವರೂಪ ಪಡೆದದ್ದೂ ಇದೆ. ಈ ಚಳವಳಿಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಹೊರಗಟ್ಟುವ ಟ್ರಂಪ್ ಸರ್ಕಾರದ ನಿರ್ಧಾರ ಶಿಕ್ಷಣ ಕ್ಷೇತ್ರಕ್ಕೆ ಬರಸಿಡಿಲಿನಂತೆ ಎರಗಿದೆ. ಪ್ಯಾಲೆಸ್ಟೇನ್ ಪರ ಚಳವಳಿಯಲ್ಲಿ ಭಾಗಹಿಸಿದವರಲ್ಲಿ ಬಹುಮಂದಿ ವಿದ್ಯಾರ್ಥಿಗಳು.
ಅಭಿವ್ಯಕ್ತಿ ಸ್ವಾತಂತ್ರ್ಯ ಅಮೆರಿಕದ ಸಂವಿಧಾನದ ಬಹುಮುಖ್ಯ ಅಂಶ. ವಿಶ್ವವಿದ್ಯಾನಿಲಯಗಳು ಕೂಡ ಮುಕ್ತ ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುತ್ತಾ ಬಂದಿವೆ. ಜಗತ್ತಿನ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾದರೂ ಮೊದಲ ಪ್ರತಿಭಟನೆ ನಡೆಯುವುದು ವಿದ್ಯಾರ್ಥಿಗಳಿಂದ. ಅನೇಕ ಕಾರಣಗಳಿಂದ ಅಮೆರಿಕದ ಎಲ್ಲ ಸರ್ಕಾರಗಳೂ ಇಸ್ರೇಲ್ ಮತ್ತು ಯಹೂದಿಗಳ ಪರ ಕೆಲಸಮಾಡುತ್ತಾ ಬಂದಿವೆ. ಟ್ರಂಪ್ ಸಹಜವಾಗಿ ತಮ್ಮ ಯಹೂದ್ಯ ಪ್ರೇಮವನ್ನು ಪ್ರದರ್ಶಿಸುವ ಉದ್ದೇಶದಿಂದ ಯಹೂದಿ ವಿರೋಽ ವಿದ್ಯಾರ್ಥಿ ಚಳವಳಿಗಾರರ ವಿರುದ್ಧ ಕಾನೂನು ಅಸ್ತ್ರ ಬಳಸಲಾರಂಭಿಸಿದ್ದಾರೆ. ಮೊದಲ ದಾಳಿ ನಡೆದದ್ದು ಖಾಸಗಿ ವಲಯದ ಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮೇಲೆ. ಮುಕ್ತ ಅಭಿವ್ಯಕ್ತಿಯನ್ನು ನಿರ್ಬಂಽಸುವ ಷರತ್ತುಗಳಿಗೆ ಬದ್ಧವಾಗಿರಬೇಕೆಂದು ವಿಶ್ವವಿದ್ಯಾಲಯಕ್ಕೆ ಮೊದಲು ತಿಳಿಸಲಾಯಿತು. ಕ್ರಮೇಣ ನಿರ್ದಿಷ್ಟ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವೀಸಾವನ್ನು ರದ್ದು ಮಾಡಲಾಯಿತು. ಸಹಜವಾಗಿಯೇ ವಿವಿ ಆಡಳಿತ ವರ್ಗ ಇದನ್ನು ವಿರೋಧಿಸಿತು. ಕೋರ್ಟ್ ಮೆಟ್ಟಿಲೇರಿತು. ಕೋರ್ಟ್ ಸರ್ಕಾರದ ಹಸ್ತಕ್ಷೇಪಕ್ಕೆ ತಡೆ ನೀಡಿತು. ಸರ್ಕಾರ ವಿವಿಗೆ ನೀಡುತ್ತಿದ್ದ ಸಹಾಯ ಧನ ನಿಲ್ಲಿಸುವ ಆದೇಶ ಹೊರಡಿಸಿತು. ಅದಕ್ಕೂ ವಿವಿ ಆಡಳಿತ ಬಗ್ಗಲಿಲ್ಲ. ಸರ್ಕಾರ ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಶೇ ೧೫ಕ್ಕೆ ಇಳಿಸುವಂತೆ ಸೂಚಿಸಿತು. ಇದೀಗ ಸರ್ಕಾರ ದೇಶದ ಎಲ್ಲ ವಿವಿಗಳಿಗೂ ಅನ್ವಯಿಸುವಂತೆ ಇಡೀ ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿಗೇ ತಡೆ ನೀಡಿದೆ. ಈಗಾಗಲೇ ಸಂದರ್ಶನಕ್ಕೆ ಕರೆದಿರುವ ವಿದ್ಯಾರ್ಥಿಗಳಿಗೆ ತೊಂದರೆ ಇಲ್ಲ. ಆದರೆ ಹೊಸ ಪ್ರವೇಶಾತಿ ಪ್ರಕ್ರಿಯೆ ನಡೆಯುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ವಿವಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಪೂರ್ವಾಪರ ಪತ್ತೆಮಾಡಿದ ನಂತರವೇ ಮುಂದಿನ ಪ್ರವೇಶ ಎಂದು ಪ್ರಕಟಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಯ ಸಾಮಾಜಿಕ ಮಾಧ್ಯಮದ ಚಟುವಟಿಕೆ, ನಿಲುವು, ಚಿಂತನೆ ಮುಂತಾದವುಗಳನ್ನು ಪತ್ತೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೊಸದಾಗಿ ಪ್ರವೇಶ ಬಯಸುತ್ತಿರುವ ವಿದ್ಯಾರ್ಥಿಗಳಷ್ಟೇ ಅಲ್ಲ, ಈಗಾಗಲೇ ಪ್ರವೇಶ ಪಡೆದಿರುವವರ ಪೂರ್ವಾಪರಗಳನ್ನು ಶೋಽಸಿ ಸರ್ಕಾರ ವಿರೋಽ ಚಟುವಟಿಕೆ ಕಂಡುಬಂದರೆ ಅವರ ವೀಸಾವನ್ನು ರದ್ದು ಮಾಡಲಾಗುವುದೆಂದು ತಿಳಿಸಲಾಗಿದೆ. ತರಗತಿಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ತರಗತಿಗೆ ಚಕ್ಕರ್ ಹಾಕಿದರೆ ಅಂಥವರ ವೀಸಾ ರದ್ದು ಮಾಡಿ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣ ಉದ್ದೇಶಕ್ಕೆ ವಿವಿ ಸೇರಿದ್ದು ಅದನ್ನು ಮಾತ್ರ ಮಾಡಬೇಕು ಎಂಬುದು ಸರ್ಕಾರದ ನಿಯಮ. ಅಕಸ್ಮಾತ್ ಸ್ವದೇಶಕ್ಕೆ ಹೋದರೆ ಅಲ್ಲಿನ ಚಟುವಟಿಕೆಗಳ ವಿವರ ನೀಡಬೇಕಾಗುತ್ತದೆ. ಈ ನಿಯಮಗಳ ವ್ಯಾಪ್ತಿಗೆ ಚೀನಾವನ್ನೂ ಈಗ ಸೇರಿಸಲಾಗಿದೆ. ಕಮ್ಯುನಿಸ್ಟ್ ಪಾರ್ಟಿಯ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಹೊರಹಾಕಲು ನಿರ್ಧರಿಸಲಾಗಿದೆ. ಚೀನಾದ ಅಧ್ಯಕ್ಷ, ಚೀನಾ ಕಮ್ಯುನಿಸ್ಟ್ ಪಾರ್ಟಿಯ ನಾಯಕ ಕ್ಸಿ ಜಿನ್‌ಪಿಂಗ್ ಅವರ ಪುತ್ರಿ ಕ್ಸಿ ಮಿಂಗ್ಜೆ ಹಾರ್ವರ್ಡ್ ವಿವಿಯಲ್ಲಿ ಶಿಕ್ಷಣ ಪಡೆದವರು. ಅಮೆರಿಕದ ಮೆಸಾಚೂಸೆಟ್ಸ್ ರಾಜ್ಯದಲ್ಲಿ ವಾಸವಾಗಿದ್ದಾರೆ. ಟ್ರಂಪ್ ಅವರನ್ನು ಹೊರಹಾಕುವರಾ ಎಂದು ಕೆಲವರು ತಮಾಷೆ ಮಾಡಿದ್ದಾರೆ.
ಟ್ರಂಪ್ ಸರ್ಕಾರದ ಕ್ರಮಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಕಾದುಕುಳಿತಿರುವ ವಿಶ್ವದ ವಿವಿಧ ದೇಶಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ. ಕಳೆದ ವರ್ಷ ಅಮೆರಿಕದ ವಿವಿಧ ವಿವಿಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿವಿಧ ದೇಶಗಳ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೧೨ ಲಕ್ಷ. ಈ ಪೈಕಿ ಭಾರತದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ನಾಲ್ಕು ಲಕ್ಷ. ಚೀನಾದ ವಿದ್ಯಾರ್ಥಿಗಳ ಸಂಖ್ಯೆ ಮೂರು ಲಕ್ಷ. ದಕ್ಷಿಣ ಕೊರಿಯಾ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೨೮ ಸಾವಿರ. ಅಮೆರಿಕದ ವಿವಿಗಳಲ್ಲಿ ಶಿಕ್ಷಣ ಪಡೆಯಲು ಪ್ರತಿ ವಿದ್ಯಾರ್ಥಿಗೆ ಆಗುವ ವಾರ್ಷಿಕ ವೆಚ್ಚ ಕನಿಷ್ಠ ೬೦ ಲಕ್ಷ ರೂಪಾಯಿಗಳು. ಈ ಮೂಲಕ ಅಮೆರಿಕ ಕಳೆದ ವರ್ಷ ಗಳಿಸಿದ ಹಣ ೪೩. ೮ ಬಿಲಿಯನ್ ಡಾಲರ್‌ಗಳು.
ಭಾರತದ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಕೊಟ್ಟಿರುವ ಶಿಕ್ಷಣ ಶುಲ್ಕ ಕನಿಷ್ಟ ೮ ಬಿಲಿಯನ್ ಡಾಲರ್‌ಗಳು. ಅಮೆರಿಕದ ವಿಶ್ವವಿದ್ಯಾಲಯಗಳಿಗೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶದಿಂದ ಸಾಕಷ್ಟು ಹಣ ಹರಿದು ಬರುತ್ತದೆ. ಟ್ರಂಪ್ ಸರ್ಕಾರ ಇದೀಗ ಹಾಕಿರುವ ನಿರ್ಬಂಧ ವಿವಿಗಳನ್ನು ಆರ್ಥಿಕ ಸಂಕಷ್ಟಕ್ಕೆ ನೂಕಲಿದೆ.
ಇದೊಂದು ತಾತ್ಕಾಲಿಕ ಸ್ಥಿತಿ. ಪರಿಸ್ಥಿತಿ ಬದಲಾಗುತ್ತದೆ ಎಂದು ಶಿಕ್ಷಣ ತಜ್ಞರು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳ ಪೂರ್ವಪರ ಪರಿಶೀಲಿಸಲು ಸರ್ಕಾರ ನಿರ್ಧರಿಸಿರುವುದರಿಂದ ಸದ್ಯಕ್ಕೆ ಸಮಸ್ಯೆ ಎಂದು ಹೇಳಲಾಗುತ್ತಿದೆ. ಶೈಕ್ಷಣಿಕ ವರ್ಷ ಆರಂಭವಾಗುವ ಸೆಪ್ಟೆಂಬರ್ ತಿಂಗಳ ವೇಳೆಗೆ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಆಕಾಂಕ್ಷಿಗಳಿಗೆ ಸಮಾಧಾನ ಹೇಳಲಾಗುತ್ತಿದೆ. ಇದೇನೇ ಇದ್ದರೂ ಅಮೆರಿಕದ ವಿವಿಗಳಲ್ಲಿ ಶಿಕ್ಷಣ ಪಡೆಯುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಗೊಂದಲಕ್ಕೆ ಈಡಾಗಿದೆ. ಇದೇನೇ ಇದ್ದರೂ ವಿದೇಶಿ ವಿವಿಗಳಲ್ಲಿ ಶಿಕ್ಷಣ ಪಡೆದರೆ ಉತ್ತಮ ಕೆಲಸ ಸಿಗುತ್ತದೆ ಎನ್ನುವ ಕಾಲ ಈಗಿಲ್ಲ. ಎಲ್ಲ ದೇಶಗಳೂ ಸ್ವದೇಶೀಯರಿಗೆ ಆದ್ಯತೆ ನೀಡುತ್ತಿವೆ. ಈ ದೃಷ್ಟಿ ಯಿಂದ ಭಾರತವೂ ಮತ್ತಷ್ಟು ಉತ್ತಮ ವಿವಿಗಳನ್ನು ಅಭಿವೃದ್ಧಿ ಮಾಡುವ ಅಗತ್ಯ ಇದೆ. ಉತ್ತಮ ವಿವಿಗಳನ್ನು ಅಭಿವೃದ್ಧಿ ಮಾಡಿದರೆ ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳು ಇಲ್ಲಿಯೇ ಶಿಕ್ಷಣ ಪಡೆಯಬಹುದಾಗಿದೆ. ವಿದೇಶಗಳಿಗೆ ಹರಿದುಹೋಗುತ್ತಿರುವ ಹಣ, ಪ್ರತಿಭೆಯನ್ನು ತಡೆಯ ಬಹುದಾಗಿದೆ.
ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…
ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…
ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…
ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…