ಎಡಿಟೋರಿಯಲ್

ಭಾರತೀಯ ಸಂವಿಧಾನಕ್ಕೆ ಎದುರಾಗುತ್ತಿರುವ ಅಪಾಯಗಳು

ಡಾ.ಬಿ.ಪಿ.ಮಹೇಶ ಚಂದ್ರ ಗುರು

ಭಾರತವು ಸುಮಾರು ಒಂದು ಸಾವಿರ ವರ್ಷಗಳ ದಾಸ್ಯದಿಂದ ಬಿಡುಗಡೆ ಹೊಂದಿ 1947ರಲ್ಲಿ ಸ್ವಾತಂತ್ರ್ಯ ಪಡೆಯಲು ಹಲವಾರು ದಾರ್ಶನಿಕರು, ಮುತ್ಸದ್ದಿಗಳು ಮತ್ತು ಹೋರಾಟಗಾರರ ಅವಿರತ ಶ್ರಮ, ತ್ಯಾಗ ಮತ್ತು ಬಲಿದಾನಗಳು ಕಾರಣವಾಗಿವೆ. ಭಾರತಕ್ಕೆ ಸರಿಹೊಂದುವ ಸಂಸದೀಯ ಪ್ರಜಾಸತ್ತೆಯನ್ನು ರಾಷ್ಟ್ರನಾಯಕರು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡು ದೇಶವನ್ನು ಏಕಚಕ್ರಾಧಿಪತ್ಯದಿಂದ ಪಾರು ಮಾಡಿದ್ದಾರೆ. ಮಹಾತ್ಮರು ಮತ್ತು ಹುತಾತ್ಮರು ಕಂಡ ಸಮಸಮಾಜ ನಿರ್ಮಾಣದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಭಾರತೀಯ ಸಂವಿಧಾನ ಸಶಕ್ತವಾಗಿದೆ.
ಮಹಿಳೆಯರು, ದಮನಿತರು ಮತ್ತು ಸಮಸ್ತ ಭಾರತೀಯರ ಪಾಲಿಗೆ ನಮ್ಮ ಸಂವಿಧಾನ ಸಂಜೀವಿನಿಯಾಗಿದ್ದು ಸ್ವತಂತ್ರ ಭಾರತದಲ್ಲಿ ಸಂಪೂರ್ಣವಾಗಿ ಜಾರಿಯಾಗದೇ ಪ್ರಬಲರು ಮತ್ತು ದುರ್ಬಲರ ನಡುವಣ ಅಂತರ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. “ನಾನು ಹಲವಾರು ಪ್ರತಿರೋಧಗಳ ನಡುವೆಯೂ ಅತ್ಯಂತ ಪ್ರೀತಿ ಮತ್ತು ಬದ್ಧತೆಗಳಿಂದ ರಚಿಸಿರುವ ಸಂವಿಧಾನದ ಆಶಯಗಳು ಪೂರ್ಣವಾಗಿ ಜಾರಿಗೆ ಬರಬೇಕಾದರೆ ರಾಜ್ಯವನ್ನು ಆಳುವ ಸ್ಥಾನದಲ್ಲಿ ಮಹಿಳೆಯರು ಮತ್ತು ದಮನಿತ ವರ್ಗಗಳು ಕೂರುವುದು ಅತ್ಯಮೂಲ್ಯ” ಎಂಬ ಅಂಬೇಡ್ಕರರ ಸಂದೇಶವನ್ನು ಭಾರತೀಯರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ.
ಸ್ವಾತಂತ್ರ್ಯಾನಂತರದಲ್ಲಿ ವೈದಿಕರು, ವ್ಯಾಪಾರಿಗಳು, ಭೂಮಾಲೀಕರು, ಪ್ರಬಲರು ರಾಜ್ಯಾಧಿಕಾರವನ್ನು ಕಟ್ಟುಪುರಾಣಗಳ ಬಲ, ಜಾತಿಬಲ, ಧನಬಲ ಮತ್ತು ತೋಳ್ಬಲಗಳ ಆಧಾರದ ಮೇಲೆ ಅನುಭವಿಸಿದ ಕಾರಣ ಅಂಬೇಡ್ಕರ್ ಬಯಸಿದ ತಾರತಮ್ಯ ರಹಿತ ಸಮಾಜ ನಿರ್ಮಾಣದ ಕನಸು ಪೂರ್ಣವಾಗಿ ನನಸಾಗಿಲ್ಲ. ಯುಪಿಎ-2ರ ವೈಫಲ್ಯಗಳಿಂದ ಬೇಸತ್ತ ಭಾರತೀಯ ಮತದಾರರು ಪರ್ಯಾಯವೊಂದನ್ನು ಬಯಸಿದಂತಹ ಅನಿವಾರ್ಯ ಸಂದರ್ಭದಲ್ಲಿ ಎನ್‍ಡಿಎ ಸರ್ಕಾರದ ಸಾರಥ್ಯವನ್ನು ನರೇಂದ್ರಮೋದಿಯವರು ವಹಿಸಿದರು. ಇವರು ವಾಸ್ತವವಾಗಿ ಹಿಂದುಳಿದ ಸಮುದಾಯದ ಪ್ರತಿನಿಧಿಯಾಗಿದ್ದರೂ ಇವರು ಆರ್‍ಎಸ್‍ಎಸ್ ಪ್ರತಿನಿಧಿಸುವ ವೈದಿಕಶಾಹಿ ಮತ್ತು ಬಂಡವಾಳಶಾಹಿಗಳ ನಿಯಂತ್ರಣದಲ್ಲಿರುವುದು ಅನುಭವವೇದ್ಯವಾಗಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸರ್ಕಾರ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ಆರ್ಥಿಕ ನೀತಿ, ಶಿಕ್ಷಣ ನೀತಿ, ಸಾಂಸ್ಕೃತಿಕ ನೀತಿ ಮೊದಲಾದವುಗಳನ್ನು ರೂಪಿಸಿ ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸಿರುವುದಕ್ಕೆ ಹಲವಾರು ನಿದರ್ಶನಗಳಿವೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅತ್ಯಂತ ಬಲಿಷ್ಟ ಹಾಗೂ ಅಭಿವೃದ್ಧಿಶೀಲವಾಗಿದ್ದ ಭಾರತೀಯ ರೈಲ್ವೆ, ಬಿಎಸ್‍ಎನ್‍ಎಲ್, ವಾಯು ಸಾರಿಗೆ ವಿವಿಧ ಸಾರ್ವಜನಿಕ ಉದ್ದಿಮೆಗಳು, ಪ್ರತಿಷ್ಟಿತ ವಿಶ್ವವಿದ್ಯಾಲಯಗಳು, ಕಲಿದ್ದಲು ಗಣಿ, ಪ್ರಾಕೃತಿಕ ಸಂಪನ್ಮೂಲಗಳು ಮೊದಲಾದವುಗಳನ್ನು ಖಾಸಗೀಕರಣಗೊಳಿಸಿದೆ. ಅಲ್ಲದೆ ರೈತರ ಭೂಮಿಯನ್ನು ಉದ್ದಿಮೆದಾರರಿಗೆ ನೀಡುವ ಸಲುವಾಗಿ ಭೂಸುಧಾರಣೆ ಕಾನೂನನ್ನು ತಿದ್ದುಪಡಿ ಮಾಡಿರುವುದು, ಕಾರ್ಮಿಕರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳುವ ಸಲುವಾಗಿ ಕಾರ್ಮಿಕ ವಿರೋಧಿ ಮಸೂದೆಗಳನ್ನು ರೂಪಿಸಿರುವುದು, ಯುವಜನರ ಶೈಕ್ಷಣಿಕ ಹಕ್ಕುಗಳನ್ನು ಕಸಿದುಕೊಳ್ಳಲು ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಕೇಸರೀಕರಣ ಮತ್ತು ಖಾಸಗೀಕರಣ ಪ್ರಕ್ರಿಯೆಗಳಿಗೆ ಒಳಪಡಿಸುವುದು, ದಮನಿತರಿಗೆ ಧ್ವನಿ ಕೊಟ್ಟ ಪ್ರಗತಿಪರ ಚಿಂತಕರನ್ನು ನಗರ ನಕ್ಸಲೀಯರೆಂದು ಬಿಂಬಿಸಿ ಜೈಲಿಗೆ ಅಟ್ಟುವುದು, ದೇಶದ ಆರ್ಥಿಕತೆಯನ್ನು ಬಲಾಢ್ಯ ಉದ್ದಿಮೆದಾರರ ಕೈಗೊಪ್ಪಿಸುವುದು ಮೊದಲಾದ ಕ್ರಮಗಳು ಭಾರತೀಯ ದಮನಿತ ಸಮುದಾಯಗಳ ಮಾನವ ಹಕ್ಕುಗಳು ಮತ್ತು ಸಾಂವಿಧಾನಿಕ ಆಶಯಗಳ ದಮನಕ್ಕೆ ಕಾರಣವಾಗಿವೆ.
ಈ ಹಿನ್ನೆಲೆಯಲ್ಲಿ ಸರ್ವರಿಗೂ ಸಮಬಾಳು– ಸರ್ವರಿಗೂ ಸಮಪಾಲು ನೀಡುವ ಶಕ್ತಿಯುಳ್ಳ ಭಾರತೀಯ ಸಂವಿಧಾನದ ಅಸ್ತಿತ್ವಕ್ಕೆ ಬಹುದೊಡ್ಡ ಸಂಚಕಾರ ನಮ್ಮನ್ನು ಆಳುವವರಿಂದ ಉಂಟಾಗಿದೆ. ಹಿಂದುತ್ವವಾದಿಗಳು ಮತ್ತು ಪ್ರಭುತ್ವವಾದಿಗಳು ‘ಮಂದಿರ ನಿರ್ಮಾಣದಿಂದ ದೇಶೋದ್ಧಾರ, ಖಾಸಗೀಕರಣದಿಂದ ಬಡತನ ನಿರ್ಮೂಲನೆ, ಮೋದಿ ಸರ್ಕಾರದಿಂದ ಸರ್ವಜನರ ಉದ್ಧಾರ’ ಮೊದಲಾದ ಘೋಷಣೆಗಳನ್ನು ಸೃಷ್ಟಿಸಿ ಭಾರತೀಯ ಪ್ರಜಾಸತ್ತೆಯನ್ನು ಕವಲುದಾರಿಗೆ ಕೊಂಡೊಯ್ದಿದ್ದಾರೆ. ಅಲ್ಲದೆ ಮೋದಿಯವರ ‘ಆತ್ಮನಿರ್ಭರ ಭಾರತ’ ಘೋಷಣೆ ಕೂಡ ಸಮಸ್ತ ಭಾರತೀಯರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿಲ್ಲ.
ಪ್ರಸ್ತುತ ಸಂದರ್ಭದಲ್ಲಿ ಭಾರತವನ್ನು ವೈದಿಕಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳ ದಮನಕಾರಿ ಪ್ರವೃತ್ತಿಗಳಿಂದ ಉಳಿಸುವ ಸಲುವಾಗಿ ಎಲ್ಲರಲ್ಲಿಯೂ ಸಂವಿಧಾನಪ್ರಜ್ಞೆ ಮೂಡಿಸುವ ಅನಿವಾರ್ಯತೆಯಿದೆ. ಸಂವಿಧಾನ ಮತ್ತು ಪ್ರಜಾಸತ್ತೆಗಳನ್ನು ಉಳಿಸಬೇಕಾದ ಜವಾಬ್ದಾರಿ ಹೊಂದಿರುವ ಯುವಜನರನ್ನು ದಾರಿತಪ್ಪಿಸುವ ಕೆಲಸದಲ್ಲಿ ಆರ್‍ಎಸ್‍ಎಸ್ ನೇತೃತ್ವದ ಸಂಘ ಪರಿವಾರಿಗಳು ನಿರತರಾಗಿದ್ದಾರೆ. ಎ.ಕೆ.ಸುಬ್ಬಯ್ಯನವರು ಬರೆದಿರುವ ‘ಆರ್‍ಎಸ್‍ಎಸ್ ಅಂತರಂಗ-ಬಹಿರಂಗ, ದೇವನೂರ ಮಹಾದೇವ ಬರೆದಿರುವ ‘ಆರ್‍ಎಸ್‍ಎಸ್ ಆಳ-ಅಗಲ ಮತ್ತು ಇತರ ಅಸಲಿ ರಾಷ್ಟ್ರೀಯ ವಾದಿಗಳು ಅಭಿವ್ಯಕ್ತಗೊಳಿಸಿರುವ ಆರ್‍ಎಸ್‍ಎಸ್ ಕೇಂದ್ರಿತ ವಿಚಾರಧಾರೆಗಳನ್ನು ಯುವಜನರು ಸರಿಯಾಗಿ ಅರ್ಥಮಾಡಿಕೊಂಡು ಸಂವಿಧಾನ ಮತ್ತು ಪ್ರಜಾಸತ್ತೆಗಳನ್ನು ಉಳಿಸುವ ಕಾಯಕದಲ್ಲಿ ತೊಡಗಬೇಕು.
ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಗಳು ಲಭಿಸದಿದ್ದರೆ ಭಾರತದ ರಾಜಕೀಯ ಪ್ರಜಾಸತ್ತೆ ನಿಚ್ಛಳವಾಗಿ ದುರ್ಬಲಗೊಳ್ಳುವ ಅಪಾಯವನ್ನು ಅಂಬೇಡ್ಕರ್ ಮನಗಂಡಿದ್ದರು. ಫ್ರಭುತ್ವ ಕೇಂದ್ರಿತ ಸಮಾಜವಾದವನ್ನು ಅಂಬೇಡ್ಕರ್ ಬಯಸಿದರು. ಆದರೆ ಇಂದು ಪ್ರಭುತ್ವ ಕೇಂದ್ರಿತ ಖಾಸಗೀಕರಣ ಮತ್ತು ಕೇಸರೀಕರಣಗಳಿಂದ ಶೋಷಿತ ಸಮುದಾಯಗಳು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತವಾಗಿವೆ. ವೈದಿಕಶಾಹಿ ಮತ್ತು ಬಂಡವಾಳಶಾಹಿ ನಿಯಂತ್ರಣಕ್ಕೆ ಒಳಪಡುವ ರಾಜಕಾರಣ ಮತ್ತು ಅರ್ಥವ್ಯವಸ್ಥೆಗಳಿಂದ ಭಾರತೀಯರಿಗೆ ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸಮಾನತೆಗಳು ಲಭಿಸುವುದಿಲ್ಲ.
ಅಂಬೇಡ್ಕರ್ ಭಾರತೀಯರಿಗೆ ಸಂವಿಧಾನವನ್ನು ಸಮಗ್ರವಾಗಿ ಓದಿ ಅರ್ಥಮಾಡಿಕೊಂಡು ಸಂಸತ್ತಿಗೆ ಪ್ರಜ್ಞಾಪೂರ್ವಕವಾಗಿ ಪ್ರವೇಶಿಸಿ ಎಂದು ನೀಡಿರುವ ಕರೆ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಮದ್ಯದಂಗಡಿಗಳು ಮತ್ತು ದೇವಾಲಯಗಳ ಸಹವಾಸದಿಂದ ಬಹುಸಂಖ್ಯಾತ ದುರ್ಬಲ ವರ್ಗಗಳು ಮುಕ್ತರಾಗಿಲ್ಲ. ಇವುಗಳು ಪ್ರಜೆಗಳನ್ನು ಅವನತಿಯೆಡೆಗೆ ದಬ್ಬುವ ಕೇಂದ್ರಗಳೆಂದು ಅಂಬೇಡ್ಕರ್ ಬಹಳ ಹಿಂದೆಯೇ ಎಚ್ಚರಿಸಿದ್ದರು. ಸಂವಿಧಾನದ ಸಂಪೂರ್ಣ ರಕ್ಷಣೆ ಮತ್ತು ರಾಜ್ಯಾಧಿಕಾರ ಗಳಿಕೆ ಶೋಷಿತರ ಪಾಲಿಗೆ ಬಿಡುಗಡೆಯ ಮಾರ್ಗಗಳೆಂದು ದಮನಿತ ಸಮುದಾಯಗಳಿಗೆ ಅರ್ಥವಾಗಿಲ್ಲ. ಹಿಂದುಳಿದ ವರ್ಗದ ಪ್ರಧಾನಿ, ಆದಿವಾಸಿ ಸಮುದಾಯದ ರಾಷ್ಟ್ರಪತಿ, ಅವಕಾಶವಾದಿಗಳಿಗೆ ಉನ್ನತ ಸ್ಥಾನಮಾನಗಳು ಮೊದಲಾದವುಗಳನ್ನು ನೀಡುವುದರಿಂದ ಅಲಕ್ಷಿತ ವರ್ಗಗಳ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ.
ಇಡೀ ವಿಶ್ವದಲ್ಲಿ ಜರುಗಿದ ಮಾನವ ಹಕ್ಕುಗಳ ಹೋರಾಟದಿಂದ ಪ್ರಭಾವಿತರಾದ ಅಂಬೇಡ್ಕರ್ ಭಾರತೀಯ ಸಂವಿಧಾನದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಅಂಬೇಡ್ಕರ್ ಅವರು ತಮ್ಮ ಆಯ್ಕೆಯನ್ನು ಅತ್ಯಂತ ಚೆನ್ನಾಗಿ ಸಮರ್ಥಿಸಿಕೊಂಡರಷ್ಟೇ ಅಲ್ಲದೆ ತಮಗೆ ವಹಿಸಿದ ಜವಾಬ್ದಾರಿಗೆ ಘನತೆಯನ್ನು ತಂದುಕೊಟ್ಟಿದ್ದಾರೆಂಬ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್‍ರವರ ಮಾತುಗಳು ಅಂಬೇಡ್ಕರ್ ಅವರಿಗೆ ನುಡಿನಮನಗಳೇ ಆಗಿವೆ. ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಪ್ರಜಾಸತ್ತಾತ್ಮಕವಾಗಿ ಹಿಮ್ಮೆಟ್ಟಿಸಬೇಕು. ಭಾರತದ ಶೋಷಿತ ಸಮುದಾಯಗಳು ಎಲ್ಲ ಅಸ್ಮಿತೆಗಳನ್ನು ಬದಿಗಿಟ್ಟು ಒಗ್ಗೂಡಿ ಹೋರಾಡಿದರೆ ಎಂತಹ ಪ್ರಭುತ್ವದ ವಿರುದ್ಧವಾದರೂ ಗೆಲುವು ಸಾಧಿಸಿ ಸಂಸದೀಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು.
ಭಾರತೀಯ ರಾಷ್ಟ್ರೀಯತೆಯೆಂಬುದು ಬಹುತ್ವವನ್ನು ಪ್ರಧಾನವಾಗಿ ಅವಲಂಬಿಸಿದೆ. ಬಹುಸಾಂಸ್ಕೃತಿಕತೆಯನ್ನು ರಕ್ಷಿಸಲು ಏಕತ್ವವನ್ನು ಬದಿಗಿತ್ತು ಬಹುತ್ವವನ್ನು ಸಾಂಸ್ಥೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಚಳುವಳಿ ಅತ್ಯವಶ್ಯಕ. ಭಾರತವು ಹಿಂದುತ್ವ ಕೇಂದ್ರಿತ ರಾಷ್ಟ್ರವಾಗಿರದೇ ಧರ್ಮನಿರಪೇಕ್ಷತೆ ಕೇಂದ್ರಿತ ಒಕ್ಕೂಟ ವ್ಯವಸ್ಥೆಯನ್ನು ಹೊಂದಿದೆ. ಧರ್ಮನಿರಪೇಕ್ಷತೆ ರಕ್ಷಣೆಯಿಂದಲೇ ಭಾರತದಲ್ಲಿ ಭ್ರಾತೃತ್ವ ಮತ್ತು ಪ್ರಜೆಗಳ ಸಾರ್ವಭೌಮತ್ವವನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಇಂದು ದೇಶದಾದ್ಯಂತ ‘ಸಂವಿಧಾನ ರಕ್ಷಿಸಿ’ ಚಳುವಳಿಯನ್ನು ಪ್ರಜ್ಞಾವಂತ ಭಾರತೀಯರು ಸಂಘಟಿಸುವುದು ಅನಿವಾರ್ಯವಾಗಿದೆ. ಆರ್ ಎಸ್‍ಎಸ್ ಮುಕ್ತ ಭಾರತ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಮತ್ತೊಂದು ಪ್ರಜಾಸತ್ತಾತ್ಮಕ ರಾಷ್ಟ್ರೀಯ ಸಂಗ್ರಾಮಕ್ಕಾಗಿ ಮಹಿಳೆಯರು, ಯುವಜನರು ಮತ್ತು ದಮನಿತ ಸಮುದಾಯಗಳನ್ನು ಸಜ್ಜುಗೊಳಿಸುವಲ್ಲಿ ‘ಭಾರತ್ ಜೋಡೋ’ ದಂತಹ ಕಾರ್ಯಕ್ರಮಗಳು ಉಪಯುಕ್ತವಾಗಿವೆ.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago