ಎಡಿಟೋರಿಯಲ್

ಭಾರತದಲ್ಲಿ ಅಧ್ಯಯನ ಸಂಶೋಧನೆ ಮತ್ತು ಮಹಿಳಾ ಪ್ರಾತಿನಿಧ್ಯ

ಸುಪ್ರಕಾಶ್ ಚಂದ್ರ ರಾಯ್
ಲಿಂಗತ್ವದ ವಿಚಾರಗಳು, ನಿರ್ದಿಷ್ಟವಾಗಿ ಉನ್ನತ ಶಿಕ್ಷಣದ ಅಧ್ಯಯನ ವಲಯದಲ್ಲಿ ಲಿಂಗತ್ವ ಅಸಮಾನತೆ ಮತ್ತು ತಾರತಮ್ಯಗಳು, ಮೊಟ್ಟಮೊದಲ ಬಾರಿ ಭಾರತದಲ್ಲಿ ಬೆಳಕಿಗೆ ಬಂದಿದ್ದು ೧೯೩೩ರಲ್ಲಿ. ಕೋಮಲ ಸೋಹೊನೀ ಎಂಬ ವಿದ್ಯಾರ್ಥಿನಿ ಸರ್ ಸಿ.ವಿ.ರಾಮನ್ ಅವರ ಮಾರ್ಗದರ್ಶನದಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಅಪೇಕ್ಷಿಸಿದ್ದರು. ನೊಬೆಲ್ ಪ್ರಶಸ್ತಿ ವಿಜೇತರೂ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿಷ್ಠಿತ ನಿರ್ದೇಶಕರೂ ಆಗಿದ್ದ ಸಿ. ವಿ.ರಾಮನ್ ಈ ಮನವಿಯನ್ನು, ಆಕೆ ಮಹಿಳೆ ಎಂಬ ಕಾರಣಕ್ಕಾಗಿ ತಿರಸ್ಕರಿಸಿದ್ದರು.
ಲಿಂಗತ್ವ ತಾರತಮ್ಯವನ್ನು ಆಧರಿಸಿದ ಈ ನಿರಾ ಕರಣೆಯನ್ನು ನಿರ್ಲಕ್ಷಿಸಿ ಸೊಹೊನೀ ನಿರ್ದೇಶಕರ ಕಚೇರಿಯ ಮುಂದೆ ಸತ್ಯಾಗ್ರಹ ಹೂಡಿದ್ದರು. ಆನಂತರ ಆಕೆಗೆ ಒಂದು ವರ್ಷದ ಅವಧಿಗೆ ಷರತ್ತುಬದ್ಧ ಪ್ರವೇಶ ನೀಡಲಾಯಿತು. ಆ ವರ್ಷದಲ್ಲಿ ಆಕೆ ಕೈಗೊಳ್ಳುವ ಸಂಶೋಧನೆಯ ಗುಣಮಟ್ಟ ನಿರ್ದೇಶಕರಿಗೆ ಸಮಾಧಾನಕರ ವಾಗಿ ಇದ್ದರೆ ಹಾಗೂ ಆಕೆಯ ಇರುವಿಕೆಯು ಸಂಸ್ಥೆಯಲ್ಲಿ ಸಂಶೋಧನೆಯಲ್ಲಿ ತೊಡಗಿರುವ ಪುರುಷ ಸಹೋದ್ಯೋಗಿಗಳ ಚಿತ್ತಭಂಗ ಮಾಡದೆ ಇದ್ದಲ್ಲಿ ಆಕೆಯ ಸಂಶೋಧನೆಯ ಅವಧಿಯನ್ನು ಮಾನ್ಯ ಮಾಡುವುದಾಗಿ ಷರತ್ತು ಹಾಕಲಾಗಿತ್ತು. ಇದೇ ರೀತಿ ೧೯೩೭ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ. ಡಿ.ಎಮ್.ಬೋಸ್, ಬಿಭಾ ಚೌಧುರಿ ಎಂಬ ಸಂಶೋಧನಾ ವಿದ್ಯಾರ್ಥಿನಿಯನ್ನು ತಮ್ಮ ಸಂಶೋಧನೆಯ ತಂಡದಲ್ಲಿ ಸೇರಿಸಿಕೊಳ್ಳಲು ಹಿಂಜರಿದಿದ್ದರು. ಮಹಿಳೆಯರಿಗೆ ಒಪ್ಪಿಸುವಂತಹ ಸೂಕ್ತ ಸಂಶೋಧನಾ ಯೋಜನೆಗಳು ತಮ್ಮ ಬಳಿ ಇಲ್ಲ ಎನ್ನುವುದು ಅವರ ನಿರಾಕರಣೆಗೆ ಕಾರಣವಾಗಿತ್ತು. ಬಿಬಾ ಚೌಧುರಿ ಇದರಿಂದ ವಿಚಲಿತರಾಗದೆ ತಮ್ಮ ಸಂಶೋಧನೆಯನ್ನು ಮುಂದುವರಿಸಿದ್ದರು. ಮೇಸಾನುಗಳ (ಪರಮಾಣು ಬೀಜದಲ್ಲಿ ಪ್ರೋಟಾನ್ ನ್ಯೂಟ್ರಾನ್‌ಗಳನ್ನು ಬಂಧಿಸುವುದರಲ್ಲಿ ಭಾಗವಹಿಸುವುದೆನ್ನಲಾದ ಮೂಲ ಕಣಗಳ ವರ್ಗಕ್ಕೆ ಸೇರಿದ ಯಾವುದೇ ಕಣ) ಅವಿಚ್ಛಿನ್ನ ರಾಶಿಯನ್ನು ನಿರ್ಧರಿಸುವಲ್ಲಿ ಕಾಸ್ಮಿಕ್ ಕಿರಣಗಳ ಮಹತ್ವವನ್ನು ಕುರಿತು ಆಕೆ ಮಾಡಿದ ಸಂಶೋಧನೆ ಚಾರಿತ್ರಿಕವಾದ ಮಹತ್ವ ಪಡೆದಿದೆ.

ಸರ್ಕಾರದ ಉತ್ತೇಜನಗಳು
ಕಳೆದ ಹಲವು ದಶಕಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮತ್ತು ದುಡಿಮೆಯ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಮಹತ್ತರವಾದ ಸುಧಾರಣೆ ಕಂಡುಬಂದಿದ್ದರೂ, ಈ ಹಾದಿಯ ಪ್ರಗತಿ ಇನ್ನೂ ಅಸಮಾನತೆಯಿಂದ ಕೂಡಿದೆ. ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಭಾರತ ಸರ್ಕಾರವು ಲಿಂಗತ್ವ ತಾರತಮ್ಯಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದೆ. ಇಂತಹ ಪ್ರಯತ್ನಗಳಲ್ಲಿ ಪರಿವರ್ತಕ ಸಂಸ್ಥೆಗಳಲ್ಲಿ ಲಿಂಗತ್ವ ಮುನ್ನಡೆ (ಜಿಎಟಿಐ) ಎಂಬ ಒಂದು ಪ್ರಾಯೋಗಿಕ ಯೋಜನೆ ಗಮನಾರ್ಹವಾಗಿದ್ದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಮಾನತೆಯನ್ನು ಸಾಧಿಸಲು ಪ್ರಯತ್ನಿಸುತ್ತದೆ. ಹಾಗೆಯೇ ‘ಪೋಷಣೆಯ ಮೂಲಕ ಸಂಶೋಧನೆಯ ಮುನ್ನಡೆಯಲ್ಲಿ ಅರಿವಿನ ಒಳಗೊಳ್ಳುವಿಕೆ’ – ಕಿರಣ್ (ಕೆಐಆರ್‌ಎಎನ್) ಯೋಜನೆಯಡಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ಕ್ಷೇತ್ರಗಳಲ್ಲಿ ಮಹಿಳಾ ವಿಜ್ಞಾನಿಗಳಿಗೆ ಉತ್ತೇಜನ ನೀಡಲು ಪ್ರಯತ್ನಿಸುತ್ತದೆ.
ಆದಾಗ್ಯೂ ಈ ಎಲ್ಲ ಸರ್ವಪ್ರಯತ್ನಗಳ ಹೊರತಾಗಿಯೂ ಲಿಂಗತ್ವ ತಾರತಮ್ಯಗಳು ಚಾಲ್ತಿಯಲ್ಲಿದ್ದು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಿಲ್ಲ. ಮೂಲ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್- STEM) ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲೂ ಮಹಿಳಾ ಸಮೂಹದ ಪ್ರಾತಿನಿಧ್ಯ ನಗಣ್ಯವಾಗಿಯೆ ಉಳಿದಿದೆ.

ಮಹಿಳೆಯರು ಮತ್ತು STEM 

ಈ ಸಂಬಂಧ ಶೈಕ್ಷಣಿಕ ವಲಯದಲ್ಲಿ ಭಾರತದ ಸ್ಥಾನಮಾನ ನಿರಾಶಾದಾಯಕವಾಗಿದೆ. ಯುನೆಸ್ಕೋ ಸಂಸ್ಥೆಯ ಕೆಲವು ದೇಶಗಳ ಲಭ್ಯ ದತ್ತಾಂಶಗಳ ಅನುಸಾರ ಭಾರತ ಕಟ್ಟಕಡೆಯ ಸ್ಥಾನದಲ್ಲಿದ್ದು stem ವಲಯದಲ್ಲಿ ಕೇವಲ ಶೇ.೧೪ರಷ್ಟು ಮಹಿಳಾ ಸಂಶೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತ ಬಹಳ ಹಿಂದೇನೂ ಉಳಿದಿಲ್ಲ. ಜಪಾನ್‌ನಲ್ಲಿ ಶೇ. ೧೬ರಷ್ಟು ಮಹಿಳಾ ಸಂಶೋಧಕರಿದ್ದಾರೆ, ನೆದರ್‌ಲೆಂಡಿನಲ್ಲಿ ಶೇ. ೨೬, ಅಮೆರಿಕದಲ್ಲಿ ಶೇ. ೨೭ ಮತ್ತು ಬ್ರಿಟನ್ನಿನಲ್ಲಿ ಶೇ. ೩೯ರಷ್ಟು ಮಹಿಳಾ ಸಂಶೋಧಕರಿದ್ದಾರೆ. ಸಂಶೋಧನೆಯ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಪುರುಷರು ಸಮಾನ ಸಂಖ್ಯೆಯಲ್ಲಿರುವ ರಾಷ್ಟ್ರಗಳೆಂದರೆ ದಕ್ಷಿಣ ಆಫ್ರಿಕಾ ಶೇ ೪೫ ಮತ್ತು ಕ್ಯೂಬಾ ಶೇ.೪೯ರಷ್ಟು ಇದ್ದಾರೆ. ಅತಿ ಹೆಚ್ಚಿನ ಮಹಿಳಾ ಸಂಶೋಧಕರು ಟ್ಯುನಿಷಿಯಾ ಆಫ್ರಿಕಾದಲ್ಲಿ ( ಶೇ.೫೫), ಅರ್ಜೆಂಟೈನಾ ( ಶೇ. ೫೩) ಮತ್ತು ನ್ಯೂಜಿಲೆಂಡ್ ( ಶೇ. ೫೨)ರಷ್ಟಿದ್ದಾರೆ.

ಭಾರತದಲ್ಲಿ stem ವಲಯದಲ್ಲಿ ಪದವಿ ಹಂತದಲ್ಲಿರುವ ಮಹಿಳೆಯರ ಸಂಖ್ಯೆ ಶೇ. ೪೩ರಷ್ಟಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣವಾಗಿದ್ದರೂ ಇದಕ್ಕೆ ವ್ಯತಿರಿಕ್ತವಾದ ಚಿತ್ರಣವನ್ನೂ ಕಾಣಬಹುದು. ಕೇವಲ ಶೇ. ೧೪ರಷ್ಟು ಮಹಿಳೆಯರು ಮಾತ್ರ ಶೈಕ್ಷಣಿಕ ಅಧ್ಯಯನ ಸಂಸ್ಥೆಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯುತ್ತಾರೆ. ಪದವಿ ವ್ಯಾಸಂಗದ ಹಂತದಲ್ಲಿ ಪುರುಷರು ಮತ್ತು ಮಹಿಳೆಯರ ಭಾಗವಹಿಸುವಿಕೆ ಸಮಾನವಾಗಿದ್ದರೂ ಸಂಶೋಧನೆಯ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಕುಸಿತ ಕಂಡಿದ್ದು, ಶೇ. ೭೩ರಷ್ಟು ಪುರುಷರಿದ್ದರೆ ಶೇ.೨೭ರಷ್ಟು ಮಹಿಳೆಯರಿದ್ದಾರೆ.
೧೯೩೪ರಲ್ಲಿ ಸ್ಥಾಪನೆಯಾದ ಭಾರತೀಯ ವಿಜ್ಞಾನಗಳ ಅಧ್ಯಯನ ಸಂಸ್ಥೆ (ಐಎಎಸ್)ಯಲ್ಲಿ ಶೇ. ೭ರಷ್ಟಿದ್ದರೆ, ೧೯೩೫ರಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಧ್ಯಯನ ಸಂಸ್ಥೆ (ಐಎನ್‌ಎಸ್‌ಎ)ಯಲ್ಲಿ ಶೇ. ೫ರಷ್ಟಿದ್ದಾರೆ. ೧೯೩೦ರಲ್ಲಿ ಸ್ಥಾಪನೆಯಾದ ಭಾರತದಲ್ಲಿ ವಿಜ್ಞಾನಗಳ ರಾಷ್ಟ್ರೀಯ ಅಧ್ಯಯನ ಸಂಸ್ಥೆ (ಎನ್‌ಎಎಸ್‌ಐ)ಯಲ್ಲಿ ಶೇ. ೮ರಷ್ಟು ಮಹಿಳೆಯರಿದ್ದಾರೆ.
ಇತ್ತೀಚೆಗೆ ಪ್ರಕಟಿಸಲಾದ ವರದಿಯೊಂದರ ಅನುಸಾರ ಬಹುಪಾಲು stem ಸಂಸ್ಥೆಗಳಲ್ಲಿ ಎಲ್ಲ ವೃತ್ತಿಪರ ಹುದ್ದೆಗಳಲ್ಲಿ ಮಹಿಳೆಯರು ಶೇ. ೨೦ರಷ್ಟಿದ್ದಾರೆ. ಸಂಸ್ಥೆಯು ಹೆಚ್ಚು ಪ್ರತಿಷ್ಠಿತವಾದಂತೆಲ್ಲಾ ಮಹಿಳಾ ಉದ್ಯೋಗಿಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತದೆ. ಉದಾಹರಣೆಗೆ ಮದ್ರಾಸ್‌ಐಐಟಿಯಲ್ಲಿ ೩೧೪ ಪ್ರಾಧ್ಯಾಪಕರ ಪೈಕಿ ೩೧ (ಶೇ.೧೦.೨) ಮಹಿಳೆಯರಿದ್ದಾರೆ. ಐಐಟಿ ಬಾಂಬೆಯಲ್ಲಿ ೧೪೩ ಪ್ರಾಧ್ಯಾಪಕರ ಪೈಕಿ ೨೫ ( ಶೇ. ೧೭.೫) ಮಹಿಳೆಯರಿದ್ದಾರೆ.
ಯುಜಿಸಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ; ೫೪ ಕೇಂದ್ರ ವಿಶ್ವವಿದ್ಯಾಲಯಗಳ ಪೈಕಿ ೭ರಲ್ಲಿ (ಶೇ. ೧೩), ೪೫೬ ರಾಜ್ಯ ವಿಶ್ವವಿದ್ಯಾಲಯಗಳ ಪೈಕಿ ೫೨ರಲ್ಲಿ ( ಶೇ. ೧೧), ೧೨೬ ಪರಿಭಾವಿತ ವಿಶ್ವವಿದ್ಯಾಲಯಗಳ ಪೈಕಿ ೧೦ರಲ್ಲಿ ( ಶೇ. ೮), ೪೧೯ ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ ೨೩ರಲ್ಲಿ (ಶೇ. ೬), ಮಹಿಳಾ ಉಪಕುಲಪತಿಗಳಿದ್ದಾರೆ. ೨೦ನೆಯ ಶತಮಾನದಲ್ಲಿ ಸ್ಥಾಪಿಸಲಾದ ಆರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿಗಳ) ಪೈಕಿ , ಐಐಟಿ ಖರಗ್‌ಪುರ ಮತ್ತು ಐಐಟಿ ದೆಹಲಿಯಲ್ಲಿ ಮಾತ್ರ ಆಡಳಿತ ಮಂಡಲಿಯಲ್ಲಿ ಮಹಿಳಾ ಸದಸ್ಯರಿದ್ದಾರೆ.

ಕಾರ್ಪೊರೇಟ್ ಜಗತ್ತಿನಲ್ಲಿ
ಇದಕ್ಕೆ ವ್ಯತಿರಿಕ್ತವಾಗಿ, ಖಾಸಗಿ ಉದ್ದಿಮೆಗಳಲ್ಲಿ (ಕಾರ್ಪೋರೇಟ್ ವಲಯ) ನಿರ್ಧಾರ ಕೈಗೊಳ್ಳುವ ಹುದ್ದೆಗಳಲ್ಲಿ ಮತ್ತು ಮುಂಚೂಣಿ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಮಾನಗಳು, ಅಧ್ಯಯನ ಸಂಸ್ಥೆಗಳಿಗೆ ಹೋಲಿಸಿದರೆ, ಅಚ್ಚರಿ ಮೂಡಿಸುವಂತಿದೆ. ಭಾರತದಲ್ಲಿ ಕಾರ್ಪೊರೇಟ್ ವಲಯದಲ್ಲಿನ ಹಿರಿಯ ನಿರ್ವಾಹಕ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.೩೯ರಷ್ಟಿದೆ. ಇದು ಜಾಗತಿಕ ಸರಾಸರಿಗಿಂತಲೂ ಹೆಚ್ಚು. ಫಾರ್ಚೂನ್ ೫೦೦ ಕಂಪೆನಿ ಗಳಲ್ಲಿನ ಮಹಿಳಾ ಸಿಇಒಗಳ ಸಂಖ್ಯೆ ಶೇ. ೧೫ರಷ್ಟಿದೆ . ಖಾಸಗಿ ಉದ್ದಿಮೆಗಳ ಆಡಳಿತ ನಿರ್ವಹಣೆಯಲ್ಲಿ ಆಡಳಿತ ಮಂಡಲಿಯ ಸದಸ್ಯರ ಪೈಕಿ ಮಹಿಳೆಯರ ಸಂಖ್ಯೆ ಸತತವಾಗಿ ಏರುತ್ತಲೇ ಇದ್ದು ೨೦೧೬ರಲ್ಲಿ ಶೇ. ೧೫ರಷ್ಟಿದ್ದುದು ೨೦೧೮ರಲ್ಲಿ ಶೇ.೧೬.೯, ೨೦೨೨ರಲ್ಲಿ ಶೇ. ೧೯.೭ರಷ್ಟಾಗಿದೆ. ಈ ಪ್ರವೃತ್ತಿಯೇ ಮುಂದುವರಿದರೆ ೨೦೪೫ರ ವೇಳೆಗೆ ಸಾಮ್ಯತೆ ಸಾಧ್ಯವಾಗಬಹುದು ಎಂದು ಡೆಲಾಯ್ಟ್ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ದುಡಿಮೆಯ ವಲಯದಲ್ಲಿ ಸರ್ಕಾರವು ಜಾರಿಗೊಳಿಸಿರುವ ಕೆಲವು ಪ್ರಯತ್ನಗಳು, ಸ್ವತಂತ್ರ ಭಾರತದ ಶತಮಾನೋತ್ಸವ, ೨೦೪೭ರ ವೇಳೆಗಾದರೂ ಸಾಮ್ಯತೆಯನ್ನು ಸಾಧಿಸಲು ನೆರವಾಗಬಹುದು ಎಂದು ಆಶಿಸಲಾಗಿದೆ. ಬಹುಮುಖ್ಯವಾದ ಅಂಶವೆಂದರೆ, ಲಿಂಗತ್ವ ಸಮಾನತೆ ಅಥವಾ ಸಾಮ್ಯತೆ ಸಾಧ್ಯವಾಗಬೇಕಾದರೆ ಮನೋಭಾ ವವೂ ಬದಲಾಗಬೇಕು. ಮತ್ತು ಸಂಸ್ಥೆಗಳು ಮಹಿಳೆಯರನ್ನು ಆಸ್ತಿ ಎಂದು ಪರಿಗಣಿಸಬೇಕೇ ಹೊರತು, ಕೇವಲ ವೈವಿಧ್ಯತೆಯನ್ನು ಸರಿಪಡಿಸುವ ಪ್ರಕ್ರಿಯೆ ಎಂದು ಭಾವಿಸಕೂಡದು.
(ಲೇಖಕರು ಸೈನ್ಸ್ ಅಂಡ್ ಕಲ್ಚರ್ ಜರ್ನಲ್‌ನ ಪ್ರಧಾನ ಸಂಪಾದಕರು)
ಮೂಲ- ದ ಹಿಂದೂ, ಅನುವಾದ : ನಾ ದಿವಾಕರ

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

8 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

8 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

9 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

9 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

9 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago