ಎಡಿಟೋರಿಯಲ್

ಸಂಸ್ಕೃತಿ, ಸಾಹಿತ್ಯ ಮತ್ತು ಚಲನಚಿತ್ರ ಪರಂಪರೆಯ ಹೆಸರಲ್ಲಿ…

   ಕರ್ನಾಟಕದ ಶ್ರೀಮಂತ  ಸಂಸ್ಕೃತಿ, ಸಾಹಿತ್ಯ ಮತ್ತು ಚಲನಚಿತ್ರ ಪರಂಪರೆಯನ್ನು ಉತ್ತೇಜಿಸುವ ಮತ್ತು ಪ್ರಚಾರ ಮಾಡುವ ಪ್ರಯತ್ನ ಇನೊವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ್ದು- ಹೀಗೆಂದು ಹೇಳಿಕೊಂಡಿರುವ ಚಿತ್ರೋತ್ಸವವೊಂದರ ಉದ್ಘಾಟನೆ ನಿನ್ನೆ ಬೆಂಗಳೂರಿನಲ್ಲಿ ಆಗಿದೆ. ಇದನ್ನು ಆಯೋಜಿಸಿರುವುದು ಇನೊವೇಟಿವ್ ಫಿಲಂ ಅಕಾಡೆಮಿ. ಭಾರತ ಸರ್ಕಾರ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಬೆಂಬಲದೊಂದಿಗೆ ಎನ್ನುವ ಸಾಲೂ ಆಹ್ವಾನ ಪತ್ರಿಕೆಯಲ್ಲಿತ್ತು. ಚಿತ್ರೋತ್ಸವ ನಡೆಯುತ್ತಿರುವುದು ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಇನೊವೇಟಿವ್ ಮಲ್ಟಿಪ್ಲೆಕ್ಸ್‌ನಲ್ಲಿ.

ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಸಾಹಿತ್ಯ ಮತ್ತು ಚಲನಚಿತ್ರ ಪರಂಪರೆಯನ್ನು ಉತ್ತೇಜಿಸುವ ಮತ್ತು ಪ್ರಚಾರ ಮಾಡುವ ಈ ಚಿತ್ರೋತ್ಸವಕ್ಕೆ ನೆರವಿಗೆ ನಿಂತ ಸಂಘಟನೆಗಳ ಪಟ್ಟಿಯೂ ಬಹು ದೊಡ್ಡದು. ಚಿತ್ರೋತ್ಸವ ನಿರ್ದೇಶನಾಲಯ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಫಿಲಂ ಫೆಡರೇಶನ್ ಆಫ್ ಇಂಡಿಯಾ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ, ದಾದಾ ಸಾಹೇಬ್ ಎoಎಸ್‌ಕೆ ಪ್ರತಿಷ್ಠಾನ, ಚಿತ್ರ ನಿರ್ಮಾಪಕರ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟ,  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ಅಕಾಡೆಮಿ, ತಮಿಳು ಚಿತ್ರ ನಿರ್ದೇಶಕರ ಸಂಘ, ತೆಲುಗು ಚಿತ್ರ ನಿರ್ಮಾಪಕರ ಸಂಘ, ಮಲಯಾಳ ಚಿತ್ರ ನಿರ್ಮಾಪಕರ ಸಂಘ, ಬಂಗಾಲಿ ಚಲನಚಿತ್ರ ಮತ್ತು ಟಿವಿ ವಾಣಿಜ್ಯ ಮಂಡಳಿ, ಕೇರಳ ಚಲನಚಿತ್ರ ವಾಣಿಜ್ಯ ಮಂಡಳಿ, ವೆಲ್ಸ್ ಫಿಲಂ ಇಂಟರ್‌ನ್ಯಾಶನಲ್ ಲಿ., ಗೀತಾ ಆರ್ಟ್ಸ್, ಸುರೇಶ್ ಪ್ರೊಡಕ್ಷನ್ಸ್ ಮತ್ತು ಇನ್‌ವೆನಿಯೊ ಒರಿಜಿನ್ ಈ ಸಂಸ್ಥೆಗಳು.

ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೈ ಕೆಳಗೆ ಇರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಹೆಸರಿರುವುದರಿಂದ ಈ ಚಿತ್ರೋತ್ಸವದ ಕುರಿತು ಅದರ ರಿಜಿಸ್ಟ್ರಾರ್ ಹಿಮಂತರಾಜು ಅವರನ್ನು ಕೇಳಿದರೆ ತಮಗೆ ಇದರ ಮಾಹಿತಿಯೇ ಇಲ್ಲ ಎಂದರು.

ಒಂದು ವೇಳೆ ವಾರ್ತಾ ಇಲಾಖೆಗೆ ಈ ಸಂಬಂಧ ಪತ್ರ ಬಂದಿದ್ದರೆ ಅದು ರಿಜಿಸ್ಟ್ರಾರ್ ಅವರ ಗಮನಕ್ಕೆ ಬಂದೇ ಬರುತ್ತಿತ್ತು. ಬಂದಿಲ್ಲ. ಯಾವುದೇ ಸಂಸ್ಥೆಯ ಹೆಸರನ್ನು, ಅದರಲ್ಲೂ ಸರ್ಕಾರದ ಸಂಸ್ಥೆಯ ಹೆಸರನ್ನು ಅವರ ಅನುಮತಿ ಇಲ್ಲದೆ, ಅವರಿಗೆ ತಿಳಿಯದೆ ಬಳಸುವುದು ಕಾನೂನು ಬಾಹಿರವಲ್ಲವೇ? ಹೌದು. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರು? ಚಿತ್ರೋತ್ಸವಕ್ಕೆ ಬೆಂಬಲ ನೀಡುವುದಾಗಿ ಹೆಸರಿರುವ ಇತರ ಸಂಸ್ಥೆಗಳ ಜೊತೆಗೂ ಇದೇ ರೀತಿ ಆಗಿದ್ದರೂ ಆಶ್ಚರ್ಯವಿಲ್ಲ.

ಬೆಂಬಲ ನೀಡುವ ಸಂಸ್ಥೆಗಳ ವಿಷಯ ಹಾಗಿರಲಿ, ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಚಿತ್ರಗಳಿಗೆ ಸಂಬಂಧಪಟ್ಟವರಿಗೆ ಅದರ ಮಾಹಿತಿ ಇದೆಯೇ? ಅದೂ ಇಲ್ಲ. ನಿನ್ನೆ ಪ್ರದರ್ಶನವಾಗುವ ಚಿತ್ರಗಳಲ್ಲಿ ಕಳೆದ ವರ್ಷ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ತೆರೆಕಂಡ ‘ಮಧ್ಯಂತರ’ ಮತ್ತು ‘ನಾನು ಕುಸುಮ’ ಚಿತ್ರಗಳು ಸೇರಿದ್ದವು. ‘ಮಧ್ಯಂತರ’ ಚಿತ್ರದ ನಿರ್ದೇಶಕರಾದ ಬಸ್ತಿ ದಿನೇಶ್ ಶೆಣೈ ಅವರನ್ನು ಸಂಪರ್ಕಿಸಿದಾಗ ಅವರು ಮಂಗಳೂರಿಗೆ ಹೋಗುತ್ತಿರುವುದಾಗಿ ಹೇಳಿದರು. ಅವರಿಗೆ ಈ ಚಿತ್ರೋತ್ಸವದ ಮಾಹಿತಿ ಇರಲಿಲ್ಲ. ‘ನಾನು ಕುಸುಮ’ ಚಿತ್ರದ ಕೃಷ್ಣೇಗೌಡ ಅವರಂತೂ ಆಹ್ವಾನ ಪತ್ರಿಕೆ ನೋಡಿ ವಿಷಯ ತಿಳಿಯುತ್ತಲೇ, ಆಯೋಜಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಯಾವುದೇ ಕಾರಣಕ್ಕೂ ತಮ್ಮ ಚಿತ್ರದ ಪ್ರದರ್ಶನ ಕೂಡದು ಎಂದು ಖಂಡತುಂಡವಾಗಿ ಹೇಳಿದರಂತೆ. ಸಾಮಾನ್ಯವಾಗಿ ಪನೋರಮಾ ವಿಭಾಗದಲ್ಲಿ ಪ್ರದರ್ಶನವಾಗುವ ಚಿತ್ರಗಳನ್ನು ಇತರ ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಕಳುಹಿಸಲು ನಿರ್ಮಾಪಕರಿಂದ ಪೂರ್ವಾನುಮತಿ ಪಡೆದಿರಲಾಗುತ್ತದೆ. ಹಾಗಂತ, ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ವೇಳೆಗೆ, ಅದೂ ಬೆಂಗಳೂರಿನಲ್ಲಿ ಪ್ರದರ್ಶಿಸುವಾಗ, ಅವರಿಗೆ ಮಾಹಿತಿ ನೀಡಿ, ಆಹ್ವಾನಿಸುವ ಕೆಲಸವನ್ನಾದರೂ ಮಾಡಬೇಕು ಚಿತ್ರೋತ್ಸವದ ಆಯೋಜಕರು.

ಇನೊವೇಟಿವ್ ಫಿಲಂ ಅಕಾಡೆಮಿಯ ಜಾಲತಾಣಕ್ಕೆ ಪ್ರವೇಶಿಸಿದರೆ, ಅಲ್ಲಿ ಅದು ನೀಡುವ ತರಬೇತಿ ಮತ್ತಿತರ ವಿವರಗಳೊಂದಿಗೆ, ಇನೊವೇಟಿವ್ ಫಿಲಂ ಸಿಟಿ ಮತ್ತು ಅಲ್ಲಿ ಸಿಗುವ ಸೌಲಭ್ಯಗಳ ವಿವರ ಕಾಣಬಹುದು. ಆದರೆ ಆ ಚಿತ್ರನಗರಿ ಈಗಿಲ್ಲ ಎನ್ನುವುದು ಬಹಳ ಮಂದಿಗೆ ಗೊತ್ತಿಲ್ಲ. ಅದನ್ನು ನಡೆಸುತ್ತಿದ್ದ ಮಂದಿ ದಿವಾಳಿ ಘೋಷಿಸಿ, ನಂತರ ಸರ್ಕಾರ ಮಧ್ಯಸ್ಥಿಕೆದಾರರನ್ನು ನೇಮಿಸಿ, ನ್ಯಾಯಾಲಯದ ಮೂಲಕ ಬೇರೊಬ್ಬರಿಗೆ ಹಸ್ತಾಂತರವಾಯಿತು. ಅದೀಗ ತಮಿಳುನಾಡಿನ ಒಂದು ಸಂಸ್ಥೆಯ ಪಾಲಾಗಿದ್ದು, ‘ಜಾಲಿವುಡ್’ ಹೆಸರಿನಲ್ಲಿ ಪ್ರವಾಸಿ ಕೇಂದ್ರವಾಗಿದೆ. ಚಿತ್ರೀಕರಣಕ್ಕೆ ಮಾತ್ರ ಮೀಸಲಲ್ಲ. ಇನೊವೇಟಿವ್ ಹೆಸರಲ್ಲಿದ್ದಾಗಲೂ ಪ್ರವಾಸಿಗರಿಗೂ ತೆರೆದಿತ್ತೆನ್ನಿ.

ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಎಂದು ಹೇಳಿರುವ ಸಂಸ್ಥೆ ಆಹ್ವಾನಪತ್ರಿಕೆಯಲ್ಲಿ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬಳಸುವ ನವಿಲಿನ ಚಿತ್ರವನ್ನು ಬಳಸಿಕೊಂಡಿದೆ. ಹೀಗೆ ಬಳಸಿಕೊಳ್ಳಬಹುದೇ, ಕೃತಿಸ್ವಾಮ್ಯದ ವ್ಯಾಪ್ತಿಗೆ ಬರುವುದಿಲ್ಲವೇ ಎನ್ನುವುದನ್ನು ಈ ನಿಟ್ಟಿನಲ್ಲಿ ಬಲ್ಲವರು ಹೇಳಬೇಕು.

ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಸಾಹಿತ್ಯ ಮತ್ತು ಚಲನಚಿತ್ರ ಪರಂಪರೆಯನ್ನು ಉತ್ತೇಜಿಸುವ ಮತ್ತು ಪ್ರಚಾರ ಮಾಡುವ ಪ್ರಯತ್ನದ ಈ ಚಿತ್ರೋತ್ಸವದಲ್ಲಿ ನಿನ್ನೆ ನಟ ಎನ್.ಟಿ.ರಾಮರಾವ್ ಅವರ ಶತಮಾನೋತ್ಸವದ ಸಂಭ್ರಮವಿತ್ತು. ಸುವರ್ಣಯುಗದ ಮರುಪ್ರವೇಶದಲ್ಲಿ ತಮಿಳಲ್ಲಿ ಹೆಸರಾಗಿದ್ದ ಕೆ.ಬಾಲಚಂದರ್ ಅವರ ಹೆಸರಿತ್ತು. ಚಿತ್ರೋದ್ಯಮದಲ್ಲಿ ಐವತ್ತು ವರ್ಷಗಳ ಸಂಭ್ರಮಕ್ಕೆ ನಟ ಸಾಯಿಕುಮಾರ್ ಅವರಿದ್ದರು. ಟ್ರೆಂಡಿಂಗ್ ನಿರ್ದೇಶಕರ ಸಾಲಿನಲಿ ‘೨೦೧೮’ರ ಜೂಡ್ ಆಂಟನಿ ಜೋಸೆಫ್, ‘ಬೇಬಿ’ ಚಿತ್ರದ ನಿರ್ದೇಶಕ ಸಾಯಿ ರಾಜೇಶ್ ನೀಲಂ ಮತ್ತು ‘ಮಿಸ್ ಶೆಟ್ಟಿ – ಮಿ. ಪೊಲಿಶೆಟ್ಟಿ’ ಚಿತ್ರದ ಮಹೇಶ್ ಬಾಬು ಅವರ ಹೆಸರಿತ್ತು! ಇವರೆಲ್ಲ ಸಾಧಕರಲ್ಲ ಎಂದಲ್ಲ. ಕನ್ನಡ ಚಿತ್ರರಂಗದ ಹೆಸರನ್ನು ಹೇಳಿ ಇಲ್ಲಿನವರನ್ನು ನೆನಪಿಸಿಕೊಳ್ಳದೆ ಇದ್ದರೆ ಹೇಗೆ?

ಈ ಚಿತ್ರೋತ್ಸವದಲ್ಲಿ ದಕ್ಷಿಣದ ಎಲ್ಲ ಭಾಷೆಗಳ ಚಿತ್ರಗಳಿಗೂ ಪ್ರಶಸ್ತಿಗಳಿವೆಯಂತೆ. ಚಿತ್ರಗಳನ್ನು ಅದಕ್ಕಾಗಿ ಆಹ್ವಾನಿಸಿದ ಕುರಿತಂತೆ ಮಾಹಿತಿ ಇಲ್ಲ. ಇನೊವೇಟಿವ್ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಅದರ ಅಕಾಡೆಮಿ ಹಮ್ಮಿಕೊಳ್ಳುವುದರ ಬಗ್ಗೆ ತಕರಾರಿಲ್ಲ. ಯಾರು ಯಾವುದನ್ನು ಮಾಡುವುದಕ್ಕೂ ಇಲ್ಲಿ ಅಡ್ಡಿ ಏನಿಲ್ಲ. ಆದರೆ ಹೆಸರುಗಳನ್ನು ಬಳಸುವುದು, ಅದರಲ್ಲೂ ಕನ್ನಡದ ಹೆಸರನ್ನು ಬಳಸಿಕೊಳ್ಳುವುದರ ಕುರಿತಂತೆ ಮಾತ್ರ ತಕರಾರು. ತಮಗೆ ಬೇಕಾದವರನ್ನು ಮೆರೆಸಲು ಕನ್ನಡದ ಹೆಸರು ಹೇಳುವುದು ಸರಿಯಲ್ಲ ಎನ್ನುವುದು.

ಹಾಗಂತ ಯಾರ ಹೆಸರನ್ನೂ ಹೇಳಿಲ್ಲ ಎಂದಲ್ಲ. ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಮತ್ತು ಎಸ್.ವಿ.ರಾಜೇಂದ್ರಸಿಂಗ್ (ಬಾಬು) ಹಾಗೂ ನಟ, ನಿರ್ದೇಶಕರಾದ ರಿಷಭ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರ ಹೆಸರುಗಳಿವೆ. ಕಾಸರವಳ್ಳಿಯವರು ಸಮಾರಂಭಕ್ಕೆ ಹೋಗಲು ನಿರಾಕರಿಸಿ, ನಿನ್ನೆ ಮಧ್ಯಾಹ್ನವೇ ಸಂಬಂಧಪಟ್ಟವರಿಗೆ ತಿಳಿಸಿದ್ದರು.

ಇನೊವೇಟಿವ್ ಫಿಲಂ ಸಿಟಿಯ ದಿವಾಳಿ, ಬೇರೆಯವರ ಕೈಗೆ ಪರಭಾರೆ ಆಗುತ್ತಲೇ, ಅಕಾಡೆಮಿಯನ್ನು ಹಿಂದಿನ ಮೊದಲ ಮಾಲೀಕರೇ ಉಳಿಸಿಕೊಂಡರು. ಅಕಾಡೆಮಿ, ಬೆಂಗಳೂರು ವಿವಿ ಮಾನ್ಯತೆ ಮಾಡಿದ ಸಿನಿಮಾ ಡಿಪ್ಲೊಮಾ ತರಗತಿಗಳನ್ನು ನಡೆಸುತ್ತಿದೆ ಎಂದು ಹೇಳಿದೆ. ಅಲ್ಲಿಂದ ತರಬೇತಿ ಪಡೆದ ಎಷ್ಟು ಮಂದಿ ಅದರ ಪ್ರಯೋಜನ ಪಡೆದಿದ್ದಾರೆ ಎನ್ನುವುದರ ಬಗ್ಗೆ ವಿವರಗಳಿಲ್ಲ.

ಕನ್ನಡದ ಹೆಸರಲ್ಲಿ, ರಾಜ್‌ಕುಮಾರ್ ಹೆಸರಲ್ಲಿ ಏನು ಮಾಡಿದರೂ ಯಾರೂ ಪ್ರಶ್ನಿಸುವುದಿಲ್ಲ ಎನ್ನುವ ಭಾವನೆ ಮೂಡುವಂತಿವೆ ಇತ್ತೀಚಿನ ಬೆಳವಣಿಗೆಗಳು. ಕೃತಿಸ್ವಾಮ್ಯದ ಕುರಿತಂತೆಯೂ. ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ ಕೃತಿಯೊಂದನ್ನು ಅನುಮತಿ ಪಡೆಯದೆ ಖಾಸಗಿಯಾಗಿ ಪ್ರಕಟಿಸಿದ ಪ್ರಸಂಗ ಬಹಳ ಮಂದಿಗೆ ತಿಳಿದಿರಲಾರದು. 1983ರಲ್ಲಿ ರಾಜ್‌ಕುಮಾರ್ ಅವರಿಗೆ ಪದ್ಮಭೂಷಣ ಗೌರವ ಸಂದಾಗ. ಕರ್ನಾಟಕದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಹೊರತಂದ ‘ಪದ್ಮಭೂಷಣ’ ಸ್ಮರಣ ಸಂಚಿಕೆಯನ್ನು ಬೇರೊಂದು ಹೆಸರಲ್ಲಿ ಸಂಬಂಧಪಟ್ಟವರ ಗಮನಕ್ಕೂ ತಾರದೆ ಸಂಸ್ಥೆಯೊಂದು ಪ್ರಕಟಿಸಿತು. ಸಂಚಿಕೆಗೆ ವಿ.ಎನ್.ಸುಬ್ಬರಾವ್, ನಾರಾಯಣ ಸ್ವಾಮಿ, ಎಂ.ವಿ.ರಾಮಕೃಷ್ಣಯ್ಯ ಮತ್ತು ಶ್ಯಾಮಸುಂದರ ಕುಲಕರ್ಣಿ ಈ ನಾಲ್ವರು ಹಿರಿಯ ಪತ್ರಕರ್ತರು ಸಂಪಾದಕರಿದ್ದರು. ಅವರಲ್ಲಿ ಕುಲಕರ್ಣಿಯವರು ಇದ್ದಾರೆ. ಅವರ ಗಮನಕ್ಕೂ ತಾರದೆ ಈ ಕೃತಿ ಪ್ರಕಟವಾಗಿದೆ. ಅವರನ್ನು ಕೇಳುವ ಅಗತ್ಯವಿಲ್ಲ ಎನ್ನುವುದು ಈ ಕೃತಿಯನ್ನು ಹೊರತಂದವರ ಅಂಬೋಣ. ಅವರು, ಮತ್ತವರ ಜೊತೆಗಾರರ ಪ್ರಕಾರ, ಲಕ್ಷಾಂತರ ಜನ ರಾಜ್‌ಕುಮಾರ್ ಅಭಿಮಾನಿಗಳ ಬೇಡಿಕೆಯ ಮೇರೆಗೆ ಈ ಕೃತಿಯನ್ನು ಮರುಮುದ್ರಿಸಲಾಗಿದೆ! ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅದರ ಬಿಡುಗಡೆಯೂ ಆಯಿತು. ಎಲ್ಲವೂ ಇನೋವೇಟಿವ್. ಹೊಸ ಬಗೆ.

andolanait

Share
Published by
andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

9 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago