ಎಡಿಟೋರಿಯಲ್

ಗ್ರಾ.ಪಂ. ಅಧ್ಯಕ್ಷರ ಅಧಿಕಾರ ಮೊಟಕು ಪ್ರಸ್ತಾವ ತಿರಸ್ಕಾರ ಸರ್ಕಾರದ ಪ್ರಬುದ್ಧ ನಡೆ

ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ತಿರಸ್ಕಾರ ಮಾಡಿರುವುದು ಸ್ವಾಗತರ್ಹ. ಈ ನಿಟ್ಟಿನಲ್ಲಿ ಸರ್ಕಾರದ ನಡೆ ಪ್ರಬುದ್ಧವಾಗಿದೆ. ಹಾಗೆ ನೋಡಿದರೆ, ಅಧಿಕಾರ ವಿಕೇಂದ್ರಿಕರಣ ಆಶಯವನ್ನು ಸಮಗ್ರ ಪಂಚಾಯತ್ ರಾಜ್ ಕಾಯ್ದೆಯನ್ನು ಮೊದಲು ಜಾರಿಗೆ ತಂದ ಹೆಗ್ಗಳಿಕೆ ಕರ್ನಾಟಕದ್ದು. ಆ ನಂತರ ಸಂವಿಧಾನದ ೭೩ ನೇ ತಿದ್ದುಪಡಿಯ ಮೂಲಕ ೧೯೯೩ ಮೇ ೧೦ ರಂದು ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಗ್ರಾಮ, ತಾಲ್ಲೂಕು ಮತ್ತು ಜಿಲ್ಲೆ ಸೇರಿ ಮೂರು ಹಂತದಲ್ಲಿ (ತ್ರೀಟಯರ್) ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಹೊಸ ಬೆಳಕು ಹರಿಸಲಾಯಿತು. ಇದಕ್ಕೂ ಮುನ್ನ ೧೯೮೩ರಲ್ಲಿ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸೇತರ ಜನತಾ ಪಕ್ಷದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ‘ಜನರಿಗೆ ಶಕ್ತಿ’ ಎಂದು ಘೋಷಿಸುವ ಮೂಲಕ ಸ್ಥಳೀಯ ಸರ್ಕಾರಗಳ ರಚನೆಯ ಹೊಸ ಪ್ರಯೋಗಕ್ಕೆ ಮುಂದಾಯಿತು. ಅಶೋಕ್ ಮೆಹ್ತಾ ಸಮಿತಿಯ ಶಿಫಾರಸುಗಳ ಮಾದರಿಯಲ್ಲೇ ಜನತಾ ಸರ್ಕಾರ ಒಂದು ಮಸೂದೆ ತಯಾರಿಸುವ ಮೂಲಕ ೧೯೮೩ರಲ್ಲಿ ಜಿಲ್ಲಾ ಪರಿಷತ್ ಮತ್ತು ಮಂಡಲ್ ಪಂಚಾಯಿತಿಗಳನ್ನು ಅನುಷ್ಠಾನಗೊಳಿಸಿತು. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗೆ ಜನರಿಂದ ನೇರವಾಗಿ ಸದಸ್ಯರು ಆಯ್ಕೆ ಆಗುತ್ತಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಚುನಾಯಿತ ಸದಸ್ಯರು ಆಯ್ಕೆ ಮಾಡುತ್ತಾರೆ.

೧೯೯೩ ರ ಹೊಸ ಕಾಯ್ದೆಯ ಅನ್ವಯ, ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸ್ಥಾನಗಳನ್ನು ಮತ್ತು ಮಹಿಳಾ ಮೀಸಲಾತಿಯನ್ನೂ ಒದಗಿಸಿದೆ. ಅದರಲ್ಲಿಯೂ, ಗ್ರಾಮ ಪಂಚಾಯಿತಿ ಎಂಬುದು ಭಾರತೀಯ ಹಳ್ಳಿಗಳಲ್ಲಿ ಮೂಲಭೂತ ಗ್ರಾಮ-ಆಡಳಿತ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ತಳಮಟ್ಟದಲ್ಲಿ ಪ್ರಜಾಸತ್ತಾತ್ಮಕ ರಚನೆಯಾಗಿದೆ. ಇದು ರಾಜಕೀಯ ಸಂಸ್ಥೆಯಾಗಿದ್ದು, ಹಳ್ಳಿಯ ಕ್ಯಾಬಿನೆಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇನ್ನು ಗ್ರಾಮ ಪಂಚಾಯಿತಿ ಆಡಳಿತ ಚುನಾಯಿತ ಮುಖ್ಯಸ್ಥರಾದ ಅಧ್ಯಕ್ಷರೇ ಆ ಗ್ರಾಮದ ‘ಮುಖ್ಯಮಂತ್ರಿ’ ಎಂಬಂತಾಗಿರುತ್ತಾರೆ. ಇಂತಹ ಗ್ರಾಮ ಆಡಳಿತ ಪ್ರಮುಖರಾಗಿರುವ ಅಧ್ಯಕ್ಷರ ಅಧಿಕಾರವನ್ನು ಕುಂದಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಾಗಿಯೂ ಸರ್ಕಾರ ಇಂತಹ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ಅಧಿಕಾರ ವಿಕೇಂದ್ರಿಕರಣದ ಆಶಯ ಮತ್ತು ಗ್ರಾಮ್ ಸ್ವರಾಜ್ ಪರಿಕಲ್ಪನೆಯನ್ನು ಎತ್ತಿ ಹಿಡಿದಿವೆ.

ಪ್ರಸ್ತುತ ರಾಜ್ಯದಲ್ಲಿ ೫೯೬೩ ಗ್ರಾಮ ಪಂಚಾಯಿತಿಗಳಿವೆ. ೯೧,೫೦೦ ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿದ್ದಾರೆ. ಅಧಿಕಾರ ಮೊಟಕುಗೊಳಿಸುವ ಪ್ರಸ್ತಾವನೆಯಂತೆ ಇಂತಹ ಸಾಂಸ್ಥಿಕ ಪ್ರಾತಿನಿಧ್ಯದ ಚುನಾಯಿತ ಮುಖ್ಯಸ್ಥರಾದ ಗ್ರಾಪಂ ಅಧ್ಯಕ್ಷರ ಹಣಕಾಸು ಮತ್ತು ಇತರೆ ಕೆಲವು ಅಧಿಕಾರಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ವರ್ಗಾವಣೆಯಾಗಿದ್ದರೆ ಗ್ರಾಪಂ ಅಧ್ಯಕ್ಷರಿಗೆ ಮತ್ತು ಇಡೀ ಗ್ರಾಮ ಆಡಳಿತದ ಚುನಾಯಿತ ಸದಸ್ಯರಿಗೆ ದೊಡ್ಡ ಮಟ್ಟದ ಹಿನ್ನಡೆಯಾಗುತ್ತಿತ್ತು. ಗ್ರಾಮ ಪಂಚಾಯಿತಿಯ ಹಣಕಾಸಿನ ವ್ಯವಹಾರವನ್ನು ಸರ್ಕಾರ ಸೂಚಿಸಿರುವ ಅಧಿಕಾರಿಗಳು ಮತ್ತು ಪ್ರಾಧಿಕಾರ ನಿರ್ವಹಿಸಬಹುದಿತ್ತು. ಇಂತಹ ಅಧಿಕಾರ ಅಧ್ಯಕ್ಷರಿಗೆ ಇರುತಿತ್ತು. ನರೇಗಾ, ವಿವಿಧ ವಸತಿ ಯೋಜನೆಗಳ ಅನುಷ್ಟಾನ, ಹಣಕಾಸಿನ ನಿಧಿ, ತೆರಿಗೆ, ವೆಚ್ಚ ಇತ್ಯಾದಿ ಎಲ್ಲ ಚೆಕ್‌ಗಳಿಗೂ ಪಿಡಿಒ ಅಥವಾ ಕಾರ್ಯದರ್ಶಿ ಜೊತೆಗೆ ಜಂಟಿಯಾಗಿ ಅಧ್ಯಕ್ಷರ ಸಹಿ ಇರುತ್ತಿತ್ತು. ಗ್ರಾಪಂ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ಣಯ ತೆಗೆದುಕೊಂಡ ನಂತರ ಪಂಚಾಯಿತಿ ನಿರ್ಣಯ ಸಂಖ್ಯೆ, ದಿನಾಂಕ ನಮೂದಿಸಿ ಇ-ಸ್ವತ್ತು ತಂತ್ರಾಂಶದ ಮೂಲಕ ತೆರಿಗೆ ನಿರ್ಧಾರ ಪಟ್ಟಿಯನ್ನು ವಿತರಿಸಲಾಗುತಿತ್ತು. ಗ್ರಾಪಂ ವ್ಯಾಪ್ತಿಯ ಗೃಹ, ವಾಣಿಜ್ಯ, ಕಟ್ಟಡ ಕಾಮಗಾರಿ, ಗಣಿಗಾರಿಕೆ, ಅಂಗಡಿ, ಹೋಟೆಲ್ ಇತರ ವಹಿವಾಟುಗಳ ಆರಂಭಕ್ಕೆ ಪರವಾನಿಗಿ ಮತ್ತು ಇ-ಸ್ವತ್ತು ನೀಡುವುದರ ಸಂಬಂಧ ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ ಬೀಳುತ್ತಿತ್ತು.

ಒಂದು ವೇಳೆ ಹೀಗಾಗಿದ್ದರೆ, ಅಧಿಕಾರ ವಿಕೇಂದ್ರಿಕರಣ ಮತ್ತು ಗ್ರಾಮ ಸ್ವರಾಜ್ ಆಶಯಕ್ಕೆ ದೊಡ್ಡ ಪೆಟ್ಟು ಬೀಳುತ್ತಿತ್ತು. ಗ್ರಾಮದ ಆಡಳಿತದಲ್ಲಿ ಚುನಾಯಿತ ಸದಸ್ಯರ ಮಾತಿಗೆ ಕಿಮ್ಮತ್ತೇ ಇರುತ್ತಿರಲಿಲ್ಲ. ಅಧಿಕಾರಿಶಾಹಿಗಳು ಸದಸ್ಯರ ಸಲಹೆ, ಸೂಚನೆಗಳನ್ನು ಕಡೆಗಣಿಸಿ ತಮಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಸಂವಹನ ಮತ್ತು ಸಂಯೋಜನೆಯ ಕೊರತೆಯುಂಟಾಗುವ ಮೂಲಕ ಹಾಗೂ ವಿಶ್ವಾಸ ಕಡಿಮೆಯಾಗುವ ಮೂಲಕ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗುತಿತ್ತು. ಒಂದು ಹಂತವನ್ನು ಮೀರಿ ಇವರುಗಳ ನಡುವೆ ಗಲಾಟೆ, ಜಗಳ ಆಗುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಾಗಿರಲಿಲ್ಲ. ಸಭೆಗಳು ಸರಿಯಾಗಿ ಮತ್ತು ಸೂಕ್ತ ರೀತಿಯಲ್ಲಿ ನಡೆಯಲು ಉತ್ತಮ ವಾತಾವರಣ ಇಲ್ಲವಾಗುತ್ತಿತ್ತು. ಆಯ್ಕೆ ಮಾಡಿದ ಜನರಿಂದಲೂ ಗೌರವ ಸಿಗುತ್ತಿರಲಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಗಳು ನಡೆಯದೆ ಇರುವುದರಿಂದ ಅಲ್ಲಿನ ಆಡಳಿತದಲ್ಲಿ ಅಧಿಕಾರಗಳದ್ದೆ ದರ್ಬಾರ್ ಆಗುತ್ತಿದೆಯಲ್ಲ ಹಾಗೆ.
ಒಟ್ಟಾರೆಯಾಗಿ ತ್ರಿಸ್ತರ ಪಂಚಾಯಿತಿ ವ್ಯವಸ್ಥೆಯ ಪ್ರಬಲಸ್ತರವಾಗಿರುವ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಕುಂದಿಸುವ ಎಲ್ಲ ಪ್ರಯತ್ನಗಳನ್ನು ತಳ್ಳಿ ಹಾಕುವ ಮೂಲಕ ಅಧಿಕಾರ ವಿಕೇಂದ್ರಕರಣ ಮತ್ತು ಗ್ರಾಮ ಸ್ವರಾಜ್ ಆಶಯವನ್ನು ಗೌರವಿಸಿರುವ ಸರ್ಕಾರದ ನಿಲುವು ಸ್ವಾಗತಾರ್ಹವಾಗಿದೆ.

andolana

Recent Posts

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಲೋಕಾ ಪೊಲೀಸ್‌ ಕಸ್ಟಡಿಗೆ : ಕೋರ್ಟ್‌ ಆದೇಶ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್‌…

4 hours ago

ಅನಾರೋಗ್ಯ ಹಿನ್ನಲೆ ದುಬಾರೆ ಸಾಕಾನೆ ʻತಕ್ಷʼ ಸಾವು

ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…

6 hours ago

ಮೈಸೂರು | ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೇ ಚಾಕು ಇರಿತ

ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…

7 hours ago

ಮಹಿಳಾ ಉದ್ಯೋಗಿಗೆ ಕಿರುಕುಳ : ಕಾರ್ಖಾನೆ ಮಾಲೀಕನ ವಿರುದ್ದ ದೂರು

ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…

7 hours ago

ಚಾಮುಂಡೇಶ್ವರಿ ದರ್ಶನ : ಸೇವಾ ಶುಲ್ಕ ಏರಿಕೆಗೆ ಖಂಡನೆ

ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…

7 hours ago

ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್‌

ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…

7 hours ago