ಎಡಿಟೋರಿಯಲ್

ಖಾದಿ ಕೇಂದ್ರಗಳಿಗೆ ಚೈತನ್ಯ ನೀಡುವ ನಿಟ್ಟಿನಲ್ಲಿ ಸರ್ಕಾರದ ಹೆಜ್ಜೆ

ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ನೆನಪಿನಾರ್ಥವಾಗಿ ಆಚರಿಸುವ ಸರ್ವೋದಯ ದಿನದಂತೆ ರಾಜ್ಯ ಸರ್ಕಾರ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಗಮನಾರ್ಹ.

ಸರ್ಕಾರಿ ಅಧಿಕಾರಿಗಳು, ನೌಕರರು ಪ್ರತಿ ತಿಂಗಳ ಮೊದಲನೇ ಶನಿವಾರ ಖಾದಿ ಉಡುಪುಗಳನ್ನು ಧರಿಸಿ ಕಚೇರಿಗೆ ಬರಬೇಕು ಎಂದು ಆದೇಶ ಹೊರಡಿಸಿದೆ. ನಂಜನಗೂಡು ತಾಲ್ಲೂಕಿನ ಬದನವಾಳು, ತಗಡೂರು ಸೇರಿದಂತೆ ರಾಜ್ಯಾದ್ಯಂತ ಇರುವ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಪುನಶ್ಚೇತನ ನೀಡಬೇಕು ಎಂಬ ಒತ್ತಾಯ ಆಗಾಗ್ಗೆ ಕೇಳಿಬರುತ್ತಿದೆ. ಈ ಸಮಯದಲ್ಲೇ ಸರ್ಕಾರ ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ ಅನಿಸುತ್ತದೆ.

ಇಂತಹ ಪರೋಕ್ಷ ಕ್ರಮಗಳಿಂದ ಖಾದಿ ಗ್ರಾಮೋದ್ಯೋಗ ಕೆಂದ್ರಗಳ ಪುನರುಜ್ಜೀವನ ಸಾಧ್ಯವೇ ಎಂಬ ಪ್ರಶ್ನೆಗಳಿಗೆ ಸರ್ಕಾರ ಸಮಜಾಯಿಷಿ ನೀಡಬೇಕಾಗಿದೆ. ಆದರೆ, ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯಿಂದಲೇ ಉಡುಪು ಖರೀದಿಸಲು ಆದೇಶ ಮಾಡಿರುವುದು ಸ್ವಲ್ಪ ಮಟ್ಟಿಗೆ ಆಶಾದಾಯಕವಾಗಿದೆ.

೨೦೧೫ರಲ್ಲಿ ಬದನವಾಳುವಿನಲ್ಲಿ ಖಾದಿ ಕೇಂದ್ರದ ಬಲವರ್ಧನೆಗಾಗಿ ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರ ನೇತೃತ್ವದಲ್ಲಿ ದೊಡ್ಡ ಮಟ್ಟದ ಸತ್ಯಾಗ್ರಹ ನಡೆಯಿತು. ಆದರೆ, ನಿರೀಕ್ಷೆ ಯಷ್ಟು ಫಲ ದೊರೆಯಲಿಲ್ಲ. ೩.೫೦ ಕೋಟಿ ರೂ. ವೆಚ್ಚದಲ್ಲಿ ಒಂದು ಬೃಹತ್ ಕಟ್ಟಡ ನಿರ್ಮಾಣದ ಹೊರತು ಬೇರೆ ಏನೂ ಆಗಿಲ್ಲ ಎಂಬುದನ್ನು ಸರ್ಕಾರ ಗಮನಿಸಬೇಕು. ಅಲ್ಲದೆ, ಇತ್ತೀಚೆಗೆ ಬದನವಾಳು ಕೇಂದ್ರದ ಅಭಿವೃದ್ಧಿಗೆ ೪೦ ಕೋಟಿ ರೂ. ಅನುದಾನಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎನ್ನಲಾಗಿದೆ. ಆದರೆ, ಸರಿಯಾದ ನೀಲನಕ್ಷೆಯೇ ಇಲ್ಲ. ಹೀಗಿರುವಾಗ ಅನುದಾನ ವ್ಯರ್ಥವಾಗುವ ಅಪಾಯ ಇದೆ.

ಹಲವು ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಕುಂಟುತ್ತಾ ಸಾಗಿವೆ. ನೇಕಾರರು, ನೂಲುಕಾರರಿಗೆ ವೇತನ ನಿಯಮಿತವಾಗಿ ದೊರೆಯುತ್ತಿಲ್ಲ ಎಂಬ ಆರೋಪಗಳು ಇವೆ. ತಗಡೂರು ಕೇಂದ್ರದಲ್ಲಿ ನೂಲುಕಾರರು ಕೆಲಸ ಮಾಡುತ್ತಿದ್ದು, ನೂಲು ಸಂಗ್ರಹಣೆ ಅಧಿಕವಾಗಿದೆ. ಆದರೆ, ನೇಕಾರರು ಕೆಲಸ ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಪ್ರಮುಖವಾಗಿ ಖಾದಿ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಿದೆ. ಮಹಾತ್ಮ ಗಾಂಧೀಜಿ ಅವರು ಆರ್ಥಿಕ ಸ್ವಾತಂತ್ರ್ಯ, ಮಹಿಳಾ ಸಬಲೀಕರಣ ಹಾಗೂ ಗ್ರಾಮ ಸ್ವರಾಜ್‌ನ ಅನುಷ್ಠಾನದ ಭಾಗವಾಗಿ ಈ ಖಾದಿ ಕೇಂದ್ರಗಳ ಸ್ಥಾಪನೆಯನ್ನು ಬಯಸಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಖಾದಿ ಕೇಂದ್ರಗಳು, ಜನಜೀವನದ ಸಹಜ ಭಾಗವಾಗಿಬಿಟ್ಟಿದ್ದು, ಖಾದಿ ವಸ್ತ್ರಗಳಿಗೆ ಬೇಡಿಕೆ ಇತ್ತು. ಸ್ವಾತಂತ್ರ್ಯಾನಂತರ ಪಾಶ್ಚಿಮಾತ್ಯೀಕರಣ, ಜಾಗತೀಕರಣದ ದಾಳಿಗೆ ಸಿಲುಕಿದ ಈ ಕೇಂದ್ರಗಳು ಶೈಶವವಾಸ್ಥೆಗೆ ತಲುಪಿಬಿಟ್ಟಿವೆ. ಅತ್ಯಾಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಖಾದಿ ಬಟ್ಟೆಗಳಿಗೆ ಮತ್ತೆ ಬೇಡಿಕೆ ಕುದುರಿಸುವುದು ತ್ರಾಸದಾಯಕದ ಕೆಲಸ. ಅಲ್ಲದೆ, ಖಾದಿ ಕೇಂದ್ರಗಳಿಗೆ ಯಂತ್ರಗಳು ಪ್ರವೇಶ ಮಾಡಿದರೆ ದೇಸಿತನಕ್ಕೆ ಧಕ್ಕೆ ಒದಗುತ್ತದೆ ಎಂಬುದು ಖಾದಿ ಕೇಂದ್ರಗಳ ಪರವಾದವರ ಆತಂಕ.

ಹಾಗಾಗಿ ಕೈಮಗ್ಗದ ಉತ್ಪನ್ನಗಳಿಗೆ ಆದ್ಯತೆ ನೀಡಬೇಕಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವೆನಿಸುತ್ತದೆ. ಖಾದಿ ಉತ್ಪನ್ನಗಳ ಮಾರುಕಟ್ಟೆಗೆ ಸಾರ್ವಜನಿಕರೇ ಗ್ರಾಹಕರಾಗಬೇಕು. ಖಾದಿ ಉಡುಪುಗಳು ದುಬಾರಿ ಅನಿಸಿದರೆ, ಒಂದು ಪಂಚೆ, ಒಂದು ಟವೆಲ್… ಹೀಗೆ ಸಣ್ಣಪುಟ್ಟ ಖಾದಿ ಉತ್ಪನ್ನಗಳನ್ನು ನಿಯಮಿತವಾಗಿ ಖರೀದಿಸಬೇಕು ಎನ್ನುವ ಪ್ರಸನ್ನ ಹೆಗ್ಗೋಡು ಅವರ ನಿಲುವಿನಲ್ಲಿ ಅರ್ಥವಿದೆ. ಒಂದು ರೀತಿಯಲ್ಲಿ ಜನರೇ ಖಾದಿ ಉತ್ಪನ್ನಗಳ ರಾಯಭಾರಿಗಳಾಗಬೇಕು. ಅದರಿಂದ ದೇಸಿ ಚಳವಳಿಯ ಘಮಲು, ಸರಳತೆಯನ್ನು ಉಳಿಸಿದಂತಾಗುತ್ತದೆ.

ಒಂದೆಡೆ ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಇನ್ನೊಂದೆಡೆ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ಇಡುವ ಮಾತನಾಡುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಧಿಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯ ಅರಿವು ಮೂಡಿಸುವ ಯತ್ನ ನಡೆಸುವ ಆಲೋಚನೆ ಮಾಡಿದಂತಿದೆ. ಆದರೆ ಮುಖ್ಯವಾಗಿ ಸರ್ಕಾರದ ನಿರ್ಧಾರದ ಹಿಂದೆ ಇರುವುದು ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಬದಲಾವಣೆ ಮಾಡಿ ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕ ಮಿಷನ್- ಗ್ರಾಮೀಣ್ (ವಿಬಿ ಜಿ ರಾಮ್ ಜಿ) ಜಾರಿಗೆ ಮುಂದಾಗಿರುವುದಕ್ಕೆ ತಿರುಗೇಟು ನೀಡುವ ಉದ್ದೇಶವಾಗಿದೆ. ಇತ್ತೀಚೆಗೆ ಹಲವು ದಿನಪತ್ರಿಕೆಗಳ ಮುಖಪುಟಗಳಲ್ಲಿ ರಾಜ್ಯ ಸರ್ಕಾರ ವಿಬಿ ಜಿ ರಾಮ್ ಜಿ ವಿರುದ್ಧ ಜಾಹೀರಾತು ನೀಡಿತ್ತು. ಇದು ಪ್ರಸ್ತುತ ಅಧಿವೇಶನದಲ್ಲಿ ವಿಪಕ್ಷಗಳ ವಿರೋಧಕ್ಕೆ ಕಾರಣವಾಗಿ ಗದ್ದಲವೂ ನಡೆಯಿತು. ಆದರೆ, ರಾಜ್ಯ ಸರ್ಕಾರ ನಿಜವಾಗಿ ಗಾಂಧಿಜಿ ಅವರ ಆಶಯಗಳಲ್ಲಿ ಒಂದಾದ ಸ್ವದೇಶಿ ಖಾದಿ ಉತ್ಪನ್ನ ಕೇಂದ್ರಗಳ ಸಬಲೀಕರಣ ಹಾಗೂ ಗ್ರಾಮ ಸ್ವರಾಜ್ ಅನುಷ್ಠಾನಕ್ಕೆ ಇಚ್ಛಾಶಕ್ತಿ ತೋರಿಸುವುದು ಅತ್ಯಗತ್ಯ. ಹಾಗಿದ್ದರೆ ಮಾತ್ರ ಸರ್ಕಾರಿ ನೌಕರರಿಗೆ ಒಂದು ದಿನ ಖಾದಿ ಉಡುಪು ಕಡ್ಡಾಯಗೊಳಿಸಿರುವುದು ಮತ್ತು ಖಾದಿ ಗ್ರಾಮೋದ್ಯೋಗ ಕೇಂದ್ರಗಳ ಚೇತರಿಕೆಯ ಕ್ರಮಗಳು ಅರ್ಥವತ್ತಾಗುತ್ತವೆ

” ಒಂದೆಡೆ ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಇನ್ನೊಂದೆಡೆ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ಇಡುವ ಮಾತನಾಡುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಧಿಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯ ಅರಿವು ಮೂಡಿಸುವ ಯತ್ನ ನಡೆಸುವ ಆಲೋಚನೆ ಮಾಡಿದಂತಿದೆ.”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಬೈಕ್‌ ಟ್ಯಾಕ್ಸಿಗೆ ಒಪ್ಪಿಗೆ: ಸುಪ್ರೀಂಕೋರ್ಟ್‌ ಮೊರೆ ಹೋಗಲಿದೆ ಸರ್ಕಾರ?

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಅಪ್ಲಿಕೇಶನ್‌ ಆಧಾರಿತ ಟ್ಯಾಕ್ಸಿ ನೀಡುವ ಕಂಪನಿಗಳ ನಡುವೆ ಬೈಕ್‌ ಟ್ಯಾಕ್ಸಿ ವಿಚಾರಕ್ಕೆ ಜಟಾಪಟಿ ನಡೆದಿತ್ತು.…

22 mins ago

ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್ ಮಂಡಿಸಿದೆ: ರೈತ ಹಳ್ಳಿಕೆರೆಹುಂಡಿ ಭಾಗ್ಯರಾಜ್

ಮೈಸೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್‌ ಆಗಿದೆ…

41 mins ago

ಹಿರೀಕಾಟಿಯಲ್ಲಿ ಅಂಬೇಡ್ಕರ್‌ ಪ್ರತಿಮೆ ನಿರ್ಮಾಣ ಸಂಬಂಧ ಮುಖಂಡರೊಂದಿಗೆ ಚರ್ಚೆ

ಮೈಸೂರು: ಗುಂಡ್ಲುಪೇಟೆ ತಾಲ್ಲೂಕಿನ ಹಿರೀಕಾಟಿ ಗ್ರಾಮದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕುರಿತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ…

1 hour ago

ರಾಮನಗರದಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೇ ಒಂದೇ ಕುಟುಂಬದ ಮೂವರು ಸಾವು

ರಾಮನಗರ: ಕನಕಪುರ ಪಟ್ಟಣದಲ್ಲಿ ನಡೆದಿದ್ದ ಭೀಕರ ಗ್ಯಾಸ್‌ ಸಿಲಿಂಡರ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮನಕಲಕುವ ಸುದ್ದಿ ಹೊರಬಂದಿದೆ. ಗ್ಯಾಸ್‌…

2 hours ago

ಮೌನ ಸಾಧಕ ಎಂ.ಶ್ರೀನಿವಾಸ್ @ 75

ಮಂಡ್ಯದಲ್ಲಿ ಮೂರು ಬಾರಿ ಶಾಸಕರಾಗಿ ಗೆದ್ದು ದಾಖಲೆ ಡಾ.ಎಸ್.ಶಿವರಾಮು ಇತಿಹಾಸದಲ್ಲಿ ವ್ಯಕ್ತಿಚರಿತ್ರೆಗೆ ಮಹತ್ವವಾದ ಸ್ಥಾನವಿದೆ.ಇದನ್ನು ಮನಗಂಡೇ ಬ್ರಿಟಿಷ್ ಚರಿತ್ರೆಕಾರರಲ್ಲಿ ಪ್ರಮುಖರಾಗಿದ್ದ…

6 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಜುಂಜುಂ ಫ್ಯಾಕ್ಟರಿ ಮಾಲೀಕನ ಸಾವಿನ ವೃತ್ತಾಂತ

ಎಡಗೈಯಲ್ಲಿದ್ದ ಸಿಗರೇಟ್ ಅನ್ನು ಬಾಯಲ್ಲಿಟ್ಟು ಹೊಗೆ ಎಳೆದುಕೊಂಡವನು ಅದನ್ನು ಹೊರಬಿಟ್ಟಾಗ ಸುರುಳಿ ಸುರುಳಿಯಾಗಿ ಹೊಗೆ ಮೇಲೇರತೊಡಗಿತು. ಹೀಗೆ ಬಾಯೊಳಗೆ ಎಳೆದುಕೊಂಡ…

6 hours ago