ಎಡಿಟೋರಿಯಲ್

ಸಂಪಾದಕೀಯ: ಪರಿಶುದ್ಧತೆ ಕಾಪಾಡಿಕೊಂಡರಷ್ಟೇ ಸಾವಯವ ಬೆಲ್ಲಕ್ಕೆ ಉತ್ತಮ ಮಾರುಕಟ್ಟೆ

ಬೆಲ್ಲದ ಸಿಹಿ ಆರೋಗ್ಯಕರ ಎನ್ನುವ ವರದಿಗಳು ಇಂದು ಜನರನ್ನು ಫಳಫಳ ಹೊಳೆಯುವ ಸಕ್ಕರೆಯಿಂದ ವಿಮುಖರನ್ನಾಗಿಸುತ್ತಿದೆ. ಸಕ್ಕರೆಯ ರಾಸಯನಿಕ ಅಂಶಗಳಿಂದ ಬೇಸತ್ತಿರುವ ಜನರು ಸಾವಯವ ಬೆಲ್ಲದ ಕಡೆಗೆ ಗಮನ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ಸ್ಥಳೀಯ ಕೃಷಿ ಉತ್ಪನ್ನಗಳು ಮತ್ತು ಪಾರಂಪರಿಕ ಗೃಹೋಪಯೋಗಿ ವಸ್ತುಗಳಿಗೆ ಉತ್ತೇಜನ ನೀಡಿ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶದಾದ್ಯಂತ ಜಾರಿಗೊಳಿಸಿರುವ ‘ವೋಕಲ್ ಫಾರ್ ಲೋಕಲ್’ ಹಾಗೂ ‘ಒಂದು ಉತ್ಪನ್ನ ಒಂದು ನಿಲ್ದಾಣ’ ಎಂಬ ಯೋಜನೆಯಡಿ ಕಬ್ಬಿನ ರಸ ಮತ್ತು ಉಪ ಉತ್ಪನ್ನಗಳ ಮಾರಾಟಕ್ಕೆ ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ.

ಈ ಕಾರ್ಯಕ್ರಮದಡಿ ಸ್ಥಳೀಯವಾಗಿ ಪ್ರಮುಖವಾಗಿ ಬೆಳೆಯುವ ಮತ್ತು ಉತ್ಪಾದಿಸುವ ಕೃಷಿ ಉತ್ಪನ್ನ ಅಥವಾ ಇನ್ನಿತರ ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆ ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾರಾಟ ಮತ್ತು ಪ್ರದರ್ಶನ ಮಾಡಲು ಸರ್ಕಾರ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಟ್ಟಿದೆ.
ಈ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಕೃಷಿ ಉತ್ಪನ್ನವಾದ ಕಬ್ಬಿನ ರಸ ಮತ್ತು ಸಾವಯವ ಬೆಲ್ಲ ಮಾರಾಟದ ಮಳಿಗೆ ತೆರೆಯಲು ವ್ಯಾಪಾರಸ್ಥರಿಗೆ ಅವಕಾಶ ನೀಡಲಾಗಿದ್ದು, ಕೇಂದ್ರ ಸರ್ಕಾರದ ಈ ಯೋಜನೆಯಿಂದ ರೈತರು ಸ್ಥಳೀಯವಾಗಿ ಬೆಳೆಯುವ ಬೆಳೆಗಳ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗಲಿದೆ.

ದೇಶದ ವಿವಿಧ ಭಾಗಗಳಿಗೆ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸ್ಥಳೀಯವಾಗಿ ಯಾವ ಬೆಳೆ ಮತ್ತು ಉತ್ಪನ್ನಗಳು ಲಭ್ಯವಾಗುತ್ತದೆ ಎಂಬ ಮಾಹಿತಿ ಸಿಗಲಿದೆ. ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿದಂತಾಗುತ್ತದೆ ಎಂಬ ಆಶಯವಿದೆ.

ವಾಸ್ತವದಲ್ಲಿ ದೇಶದ ಬಹುತೇಕ ರೈಲು ನಿಲ್ದಾಣಗಳಲ್ಲಿ ಅಲ್ಲಿನ ಸ್ಥಳೀಯ ಹೈನೋದ್ಯಮದ ಉತ್ಪನ್ನಗಳ ಮಳಿಗೆಗಳಿರುತ್ತವೆ. ಅಧಿಕೃತವಾಗಿ ಆಯಾ ಜಿಲ್ಲೆ ಅಥವಾ ಆಯಾ ಪ್ರದೇಶದ ಉತ್ಪನ್ನಗಳಿದ್ದರೆ ಅದಕ್ಕೆ ಬೇಡಿಕೆಯೂ ಹೆಚ್ಚಿರುತ್ತದೆ. ಆದರೆ, ಅದು ಅಸಲಿಯತ್ತಿನ ಸರಕಾಗಿರಬೇಕಷ್ಟೆ. ರಾಸಾಯನಿಕ ಬಳಸಿ ತಯಾರಿಸಿದ ಬೆಲ್ಲವನ್ನಿರಿಸಿ ಸಾವಯವ ಬೆಲ್ಲ ಎಂದು ಯಾಮಾರಿಸಲು ಪ್ರಯತ್ನಿಸಿದ್ದೇ ಆದರೆ ಗ್ರಾಹಕರಲ್ಲಿ ಬಹಳ ಬೇಗ ವಿಶ್ವಾಸ ಕಳೆದುಹೋಗಲಿದೆ. ಗ್ರಾಹಕರ ವಿಶ್ವಾಸ ಕಳೆದುಕೊಂಡರೆ ಸಾವಯವ ಬೆಲ್ಲಕ್ಕೆ ಮಾರುಕಟ್ಟೆ ಲಭ್ಯವಾಗುವುದು, ಬೆಲೆ ಸ್ಥಿರತೆ ಕಾಪಾಡಿಕೊಳ್ಳುವದು ಕಷ್ಟವಾಗಲಿದೆ. ಆದ್ದರಿಂದ ಪರಿಶುದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ನಿಗಾ ವ್ಯವಸ್ಥೆಯನ್ನು ಜಾರಿಗೆ ತರುವ ಅಗತ್ಯವೂ ಇದೆ.

ವಿಶ್ವದ ಬೆಲ್ಲದ ಬೇಡಿಕೆ ಪೈಕಿ ಶೇ.೭೦ರಷ್ಟನ್ನು ಭಾರತವೇ ಪೂರೈಸುತ್ತಿದೆ. ೨೦೧೯-೨೦ರಲ್ಲಿ ೩.೪೧ ಲಕ್ಷ ಮೆ.ಟನ್ ಬೆಲ್ಲವನ್ನು ರಫ್ತು ಮಾಡಿದು, ಇದರ ಮೌಲ್ಯ ೧,೬೩೩ ಕೋಟಿ ರೂಪಾಯಿಗಳು. ಪ್ರತಿ ವರ್ಷದ ಸರಾಸರಿಯೂ ಇದೇ ಆಸುಪಾಸಿನಲ್ಲಿರುತ್ತದೆ ಎಂದರೆ ಬೆಲ್ಲದ ಉದ್ಯಮದ ಅಗಾಧತೆಯನ್ನು ಊಹಿಸಬಹುದು. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಕರ್ನಾಟಕವು ಅತಿ ಹೆಚ್ಚು ಬೆಲ್ಲವನ್ನು ಉತ್ಪಾದಿಸುವ ರಾಜ್ಯವಾಗಿದೆ.
ಮಂಡ್ಯದ ಸವಿ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆ ಇದೆ. ೨೦೦೦ನೇ ಇಸವಿಯಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು ೫,೭೦೦ ಬೆಲ್ಲ ತಯಾರಿಸುವ ಘಟಕಗಳಿದ್ದವು. ಆದರಿಂದ ೬೦೦ ಕ್ಕಿಂತಲೂ ಕಡಿಮೆ ಘಟಕಗಳು ಮಾತ್ರ ಸಕ್ರಿಯವಾಗಿವೆ. ಪ್ರಸ್ತುತ ಜಿಲ್ಲೆಯಲ್ಲಿ ೪೦೦ ರಿಂದ ೫೦೦ ಆಲೆಮನೆಗಳು ಕಾರ್ಯನಿರ್ವಹಿಸುತ್ತಿದ್ದು, ೪೨,೫೦೦ ಎಕರೆಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಹೋಗುವಷ್ಟೇ ಕಬ್ಬು ಆಲೆಮನೆಗಳಿಗೂ ಹೋಗುತ್ತದೆ ಎಂದರೆ ಬೆಲ್ಲಕ್ಕೆ ಇರುವ ಬೇಡಿಕೆಯನ್ನು ಮನವರಿಕೆ ಮಾಡಿಕೊಡುತ್ತಿದೆ.

ಬೆಲ್ಲದ ಬೇಡಿಕೆಗೆ ಆರೋಗ್ಯಾಂಶವೇ ಕಾರಣ. ಬೆಲ್ಲದ ಆರೋಗ್ಯಕರ ಅಂಶಗಳ ಬಗ್ಗೆ ಬೆಳಕು ಚೆಲ್ಲಿರುವ ವೈದ್ಯಕೀಯ ಸಂಶೋಧನೆಗಳಿಂದಾಗಿ ಜನರು ಸಾಂಪ್ರದಾಯಿಕ ಬೆಲ್ಲದೆಡೆಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಬೆಲ್ಲವು ಕಾರ್ಬೋಹೈಡ್ರೇಟ್ ಅಂಶಗಳ ಉಗ್ರಾಣವಾಗಿದ್ದು, ಇದು ನಮ್ಮ ದೇಹದ ಒಳಗೆ ಹೋಗಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳನ್ನು ಅಪಾರ ಪ್ರಮಾಣದಲ್ಲಿ ಹೊಂದಿದ್ದು, ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಅದು ಕರಗಲು, ಹೀರಿಕೊಳ್ಳಲು ಮತ್ತು ಸಮೀಕರಣಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಮ್ಮ ದೇಹಕ್ಕೆ ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದು ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣದ ಮಟ್ಟವನ್ನು ಹೆಚ್ಚಿಸದೆ, ಹೆಚ್ಚು ಅವಧಿಯವರೆಗೆ ಶಕ್ತಿಯನ್ನು ಒದಗಿಸುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆಯವರಿಗೂ ಇದು ಪ್ರಯೋಜನಕಾರಿ ಎನ್ನುತ್ತದೆ ಮೆಡಿಕಲ್ ಜರ್ನಲ್‌ನ ವರದಿ.

ಸಾಂಪ್ರದಾಯಿಕವಾಗಿ ನಮ್ಮ ಆಲೆಮನೆಗಳಲ್ಲಿ ಉತ್ಪಾದಿಸುವ ಬಕೆಟ್ಬೆಲ್ಲ, ಕುರಿಕಾಲಚ್ಚು, ಅಚ್ಚುಬೆಲ್ಲ, ಪೌಡರ್ ಹಾಗೂ ಕ್ಯಾಂಡಿ ರೂಪದಲ್ಲಿ ಬೆಲ್ಲವನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇನ್ನೂ ಕೆಲ ಹೈಟೆಕ್ ಆಲೆಮನೆಗಳಲ್ಲಿ ಸಿರಪ್ ರೂಪದಲ್ಲೂ ಪ್ಯಾಕಿಂಗ್ ಮಾಡಲಾಗುತ್ತಿದೆ.

ಕೆಲವರ್ಷಗಳ ಹಿಂದೆ ಹೊಸಪೇಟೆ ಮುಂತಾದ ಕಡೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಮಾಡಿದಾಗ ಕಂಡ ಕಲಬೆರಕೆಯಿಂದಾಗಿ ಬೆಲ್ಲ ತಿನ್ನುವುದೇ ಅಪಾಯಕಾರಿ ಎಂಬ ಗುಲ್ಲೆಬ್ಬಿತ್ತು. ಕೈಗಾರಿಕಾ ದರ್ಜೆಯ ರಾಸಾಯನಿಕಗಳು ಮತ್ತು ಸಿಂಥೆಟಿಕ್ ಬಣ್ಣಗಳನ್ನು ಅನುಮತಿಸುವ ಮಟ್ಟವನ್ನು ಮೀರಿ ಬೆಲ್ಲಕ್ಕೆ ಕಲಬೆರಕೆ ಮಾಡಲಾಗುತ್ತಿತ್ತು. ಕಲಬೆರಕೆ ಬೆಲ್ಲ ತಯಾರಿಕೆ ತಡೆದಷ್ಟೂ ಉದ್ಯಮಕ್ಕೆ ಉತ್ತಮ ಮಾರುಕಟ್ಟೆ ಮತ್ತು ಭವಿಷ್ಯ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ನಿಗಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

andolana

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

1 hour ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

2 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

3 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

3 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

3 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

4 hours ago