ಎಡಿಟೋರಿಯಲ್

ಈ ಜೀವ ಈ ಜೀವನ: ಮಸೀದಿಯಲ್ಲಿ ಗಣೇಶ ಚತುರ್ಥಿ, ದರ್ಗಾದಲ್ಲಿ ಗಣೇಶ ಮೂರ್ತಿ!

ತಿಲಕರಿಗೂ ಮೊದಲು ಪುಣೆಯ ಲಕ್ಷ್ಮೀ ರೋಡಿನಲ್ಲಿ ಹಿಂದೂ ಮುಸ್ಲಿಮರು ಸೇರಿ ಭಾವೈಕ್ಯತೆ ಹುಟ್ಟು ಹಾಕಲು ಸಾರ್ವಜನಿಕ ಗಣೇಶೋತ್ಸವನ್ನು ಪ್ರಾರಂಭಿಸಿದ್ದರು 

ಪಂಜು ಗಂಗೊಳ್ಳಿ

ತಿಲಕರ ಭೇಟಿಯಿಂದ ಸ್ಪೂರ್ತಿಗೊಂಡ ಜುಮ್ಮಾ ದಾದಾ ೧೯೦೧ರಲ್ಲಿ ತಮ್ಮ ‘ವ್ಯಾಯಾಮ ಮಂದಿರ’ ಆಖಾಡಾದಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಗಣೇಶೋತ್ಸವನ್ನು ನಡೆಸುತ್ತಾರೆ. ಆಗ ಅವರಿಗೆ ೧೦೭ ವರ್ಷ ಪ್ರಾಯವಾಗಿತ್ತು. ಅಂದಿನಿಂದ ಪ್ರತೀವರ್ಷ ಜುಮ್ಮಾ ದಾದಾರ ‘ವ್ಯಾಯಾಮ ಮಂದಿರ’ದಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುವುದು ಒಂದು ವಾಡಿಕೆಯಾಯಿತು. ಜುಮ್ಮಾ ದಾದಾ ಪ್ರತಿಷ್ಠಾಪನೆ ಮಾಡಿಸುತಿದ್ದುದು ಪರಿಸರ ಸ್ನೇಹಿ ಆವೆಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿ.

ಸಾರ್ವಜನಿಕ ಗಣೇಶ ಚತುರ್ಥಿಗಳು ಹಿಂದಿನಿಂದಲೂ ಕೋಮು ಸಾಮರಸ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತ ಬಂದವುಗಳು. ಇಂತಹ ಸಾರ್ವಜನಿಕ ಗಣೇಶೋತ್ಸವಗಳನ್ನೇ ಮೂಲಭೂತವಾದಿಗಳು ಈಗ ಕೋಮುದ್ವೇಷ ಹರಡಲು ದುರುಪಯೋಗಿಸಿಕೊಳ್ಳುತ್ತಿರುವುದು ಖೇದಕರ ವಿಚಾರ. ಆದಾಗ್ಯೂ, ಸಾರ್ವಜನಿಕ ಗಣೇಶೋತ್ಸವದ ತವರು ಮನೆಯಾದ ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಹಬ್ಬ ತನ್ನ ಮೂಲಸೆಲೆಯಾದ ಕೋಮುಸಾಮರಸ್ಯವನ್ನು ಈಗಲೂ ಜೀವಂತವಾಗಿರಿಸಿಕೊಂಡಿರುವುದು ಸಮಾಧಾನ ಕೊಡುವ ಸಂಗತಿ.

ಗಣೇಶ ಚತುರ್ಥಿ ಸಂದರ್ಭದಲ್ಲಿ ಮೂರ್ತಿ ಇಟ್ಟು, ಪೂಜೆ ಪುನಸ್ಕಾರ ನಡೆಸಲು ಪಂಡಲ್ ಹಾಕುವುದು ಸಾಮಾನ್ಯ. ಆದರೆ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಾಲ್ವಾ ತಾಲೂಕಿನ ಗೋಟ್ಖಂಡಿ ಎಂಬ ಹಳ್ಳಿಯಲ್ಲಿ ಹೀಗೆ ಪಂಡಲ್ ಹಾಕುವುದಿಲ್ಲ. ಬದಲಿಗೆ, ಊರವರೆಲ್ಲ ಸೇರಿ ಗಣೇಶ ಮೂರ್ತಿಯನ್ನು ಗ್ರಾಮದ ಮಸೀದಿಯೊಳಗೆ ಪ್ರತಿಷ್ಠಾಪಿಸಿ, ಪೂಜೆ ಪುನಸ್ಕಾರ ನಡೆಸಿ, ಸಾರ್ವಜನಿಕ ಗಣೇಶೋತ್ಸವನ್ನು ನಡೆಸುತ್ತಾರೆ. ಇದು ಕಳೆದ ನಾಲ್ಕು ದಶಕಗಳಿಂದಲೂ ನಡೆದು ಬಂದ ವಾಡಿಕೆ. ಈ ವಾಡಿಕೆ ರೂಢಿಗೆ ಬರಲು ಕಾರಣವೂ ಇದೆ.

ಗೋಟ್ಖಂಡಿ ಒಂದು ಚಿಕ್ಕ ಬಡ ಹಳ್ಳಿ. ಹಾಗಾಗಿ ಇಲ್ಲಿ ಸವಲತ್ತುಗಳು ತೀರಾ ಕಡಿಮೆ. ಎಷ್ಟೆಂದರೆ, ಸಾರ್ವಜನಿಕ ಗಣೇಶ ಚತುರ್ಥಿ ನಡೆಸಲು ಪಂಡಲ್ ಹಾಕಲೂ ಆರ್ಥಿಕ ಅನುಕೂಲತೆ ಇಲ್ಲದೆ ಈ ಹಳ್ಳಿಯ ಜನ ಪ್ರತೀವರ್ಷ ಗಣೇಶನ ಮೂರ್ತಿಯನ್ನು ತೆರೆದ ಬಯಲಲ್ಲಿ ಪ್ರತಿಷ್ಠಾಪಿಸಿ ಗಣೇಶ ಚತುರ್ಥಿ ನಡೆಸುತ್ತಿದ್ದರು. ಆದರೆ, ೧೯೭೯ರಲ್ಲಿ ಇದೇ ರೀತಿ ಬಯಲಿನಲ್ಲಿ ಗಣೇಶ ಚತುರ್ಥೀ ನಡೆಯುತ್ತಿದ್ದಾಗ ಬಹಳ ಜೋರಾಗಿ ಮಳೆ ಬಂತು. ಮೂರ್ತಿಯನ್ನು ರಕ್ಷಿಸಲು ಯಾವುದೇ ಸುರಕ್ಷಿತ ಸ್ಥಳವಿರಲಿಲ್ಲ. ಆಗ ಗ್ರಾಮದ ಮುಸ್ಲಿಮರು ಮುಂದೆ ಬಂದು ತಮ್ಮ ಮಸಿದಿಯೊಳಗೆ ಮೂರ್ತಿಯನ್ನು ಸ್ಥಳಾಂತರಿಸಲು ಅವಕಾಶ ಮಾಡಿಕೊಟ್ಟರು. ಅಂದಿನಿಂದ ಗಣೇಶ ಮೂರ್ತಿಯನ್ನು ಅದೇ ಮಸೀದಿಯೊಳಗೆ ಪ್ರತಿಷ್ಠಾಪಿಸಿ ಗಣೇಶ ಚತುರ್ಥಿ ನಡೆಸುವುದು ವಾಡಿಕೆಯಾಯಿತು. ಗಣೇಶ ಚತುರ್ಥಿ ನಡೆಸುವ ಮಂಡಲದೊಳಗೆ ಹಿಂದೂಗಳೊಂದಿಗೆ ಮುಸ್ಲಿಮರೂ ಇದ್ದು, ಗಣೇಶ ಚತುರ್ಥಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗಿಯಾಗುತ್ತಾರೆ. ಹಾಗೆಯೇ, ಅಲ್ಲಿನ ಹಿಂದೂಗಳೂ ಮುಸ್ಲಿಮರ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ. ರಂಜಾನ್ ಸಮಯದಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿ ಉಪವಾಸ, ರೋಜಾ ಮಾಡುತ್ತಾರೆ.

ಬಾಲಗಂಗಾಧರ ತಿಲಕರು ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ಮೂಡಿಸಲು ೧೮೯೩ರಲ್ಲಿ ಸಾರ್ವಜನಿಕ ಗಣೇಶೋತ್ಸವಗಳನ್ನು ನಡೆಸಲು ಶುರು ಮಾಡಿದ್ದನ್ನು ಎಲ್ಲರೂ ಬಲ್ಲರು. ಆದರೆ, ತಿಲಕರಿಗೂ ಮೊದಲು ಪುಣೆಯ ಲಕ್ಷ್ಮೀ ರೋಡಿನಲ್ಲಿ ಇಬ್ಬರು ಹಿಂದೂ ಮತ್ತು ಇಬ್ಬರು ಮುಸ್ಲಿಮರು ಸೇರಿ ಹಿಂದೂ- ಮುಸ್ಲಿಂ ಭಾವೈಕ್ಯತೆ ಹುಟ್ಟು ಹಾಕಲು ಸಾರ್ವಜನಿಕ ಗಣೇಶೋತ್ಸವನ್ನು ಪ್ರಾರಂಭಿಸಿದ್ದನ್ನು ತಿಳಿದವರು ಬಹಳ ಕಡಿಮೆ. ‘ಗುರೂಜಿ ತಾಲೀಮ್ ಮಂಡಲ್’ ಎಂಬುದು ಆ ಹಿಂದೂ ಮುಸ್ಲಿಮರು ಸೇರಿ ಹುಟ್ಟು ಹಾಕಿದ ಒಂದು ಕುಸ್ತಿ ಆಖಾಡ. ಇದರಲ್ಲಿ ಹಿಂದೂ, ಮುಸ್ಲಿಮರು ಧರ್ಮಭೇದವಿಲ್ಲದೆ ದೈಹಿಕ ಕಸರತ್ತು ಮಾಡುತ್ತಿದ್ದರು. ಈ ಆಖಾಡದಲ್ಲೇ ಹಿಂದೂ ಮುಸ್ಲಿಮರು ಒಟ್ಟು ಸೇರಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಪ್ರಾರಂಭಿಸಿದ ನಂತರ ‘ಗುರೂಜಿ ತಾಲೀಮ್ ಮಂಡಲ್’ ಮಹಾರಾಷ್ಟ್ರದ ಅತ್ಯಂತ ಹಳೇಯ ಗಣಪತಿ ಪಂಡಲ್ ಎಂಬ ಖ್ಯಾತಿಯನ್ನೂ ಪಡೆಯಿತು.

ಹಾಗೆಯೇ, ೧೨೦ ವರ್ಷಗಳ ಹಿಂದೆ ೧೦೭ ವರ್ಷ ಪ್ರಾಯದ ಮುಸ್ಲಿಮರೊಬ್ಬರು ಯುವಕರನ್ನು ಒಗ್ಗೂಡಿಸಿ, ಅವರಲ್ಲಿ ಪರಸ್ಪರ ಸಹೋದರತೆ ಮತ್ತು ದೇಶಪ್ರೇಮದ ಭಾವನೆಯನ್ನು ಹುಟ್ಟು ಹಾಕಲು ಸಾರ್ವಜನಿಕ ಗಣೇಶೋತ್ಸವನ್ನು ಪ್ರಾರಂಭಿಸಿದ ಬಗ್ಗೆ ಹೆಚ್ಚು ಜನಕ್ಕೆ ತಿಳಿದಿಲ್ಲ. ಅವರ ಹೆಸರು ಜುಮ್ಮಾ ದಾದಾ. ಜುಮ್ಮಾ ದಾದಾ ಆಗಿನ ಬರೋಡಾದ ಖ್ಯಾತ ಕುಸ್ತಿ ಪೈಲ್ವಾನರು. ಅವರು ೧೮೮೦ರಲ್ಲಿ ‘ವ್ಯಾಯಾಮ ಮಂದಿರ’ ಎಂಬ ಕುಸ್ತಿ ಆಖಾಡಾವನ್ನು ಹುಟ್ಟು ಹಾಕಿದ್ದರು. ‘ವ್ಯಾಯಾಮ ಮಂದಿರ’ ಆಖಾಡಕ್ಕೆ ಎಲ್ಲಾ ಧರ್ಮಗಳ ಹುಡುಗರು ಮಾತ್ರವಲ್ಲದೆ ಹುಡುಗಿಯರೂ ಸಾಧನೆ ಮಾಡಲು ಬರುತ್ತಿದ್ದರು.

ಬ್ರಿಟಿಷರ ವಿರುದ್ಧ ಕಾಯಾಚರಣೆ ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರು ಆಗಾಗ್ಗೆ ‘ವ್ಯಾಯಾಮ ಮಂದಿರ’ದಲ್ಲಿ ಆಶ್ರಯ ಪಡೆಯುತ್ತಿದ್ದರು.

ಆಗ ಬರೋಡಾವನ್ನು ಮೂರನೇ ಸಯ್ಯಾಜಿರಾವ್ ಗಾಯಕವಾಡ್ ಆಳುತ್ತಿದ್ದರು. ಬಾಲಗಂಗಾಧರ ತಿಲಕರು ಸಯ್ಯಾಜಿರಾವ್ರನ್ನು ಭೇಟಿಯಾಗಲು ಆಗಾಗ್ಗೆ ಬರೋಡಾಕ್ಕೆ ಹೋಗುತ್ತಿದ್ದರು. ಹೀಗೆ ಒಮ್ಮೆ ಬರೋಡಾಕ್ಕೆ ಹೋದ ಸಂದರ್ಭದಲ್ಲಿ ತಿಲಕರಿಗೆ ಜುಮ್ಮಾ ದಾದಾರ ಬಗ್ಗೆ ತಿಳಿದು, ಅವರನ್ನು ಭೇಟಿಯಾಗುತ್ತಾರೆ. ತಿಲಕರ ಭೇಟಿಯಿಂದ ಸ್ಪೂರ್ತಿಗೊಂಡ ಜುಮ್ಮಾ ದಾದಾ ೧೯೦೧ರಲ್ಲಿ ತಮ್ಮ ‘ವ್ಯಾಯಾಮ ಮಂದಿರ’ ಆಖಾಡಾದಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಗಣೇಶೋತ್ಸವನ್ನು ನಡೆಸುತ್ತಾರೆ.

ಆಗ ಅವರಿಗೆ ೧೦೭ ವರ್ಷ ಪ್ರಾಯವಾಗಿತ್ತು. ಅಂದಿನಿಂದ ಪ್ರತೀವರ್ಷ ಜುಮ್ಮಾ ದಾದಾರ ‘ವ್ಯಾಯಾಮ ಮಂದಿರ’ದಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುವುದು ಒಂದು ವಾಡಿಕೆಯಾಯಿತು. ಜುಮ್ಮಾ ದಾದಾ ಪ್ರತಿಷ್ಠಾಪನೆ ಮಾಡಿಸುತಿದ್ದುದು ಪರಿಸರ ಸ್ನೇಹಿ ಆವೆಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿ. ಈಗಲೂ ‘ವ್ಯಾಯಾಮ ಮಂದಿರ’ದಲ್ಲಿ ಪ್ರತಿಷ್ಠಾಪನೆಯಾಗುವ ಗಣೇಶ ಮೂರ್ತಿ ಆವೆಮಣ್ಣಿನಿಂದ ಮಾಡಲ್ಪಟ್ಟಿದ್ದು ಮಾತ್ರವಲ್ಲದೆ, ಅದರ ರೂಪು, ಆಕಾರ, ಗಾತ್ರ ಎಲ್ಲವೂ ಪ್ರಪ್ರಥಮ ಬಾರಿಗೆ ಪ್ರತಿಷ್ಠಾಪಿಸಲ್ಪಟ್ಟ ಮೂರ್ತಿಯನ್ನೇ ಹೋಲುತ್ತದೆ.

ಬಾಬು ಜಮಾಲ್ ದರ್ಗಾ ಕೊಲ್ಲಾಪುರದ ಪ್ರಸಿದ್ಧ ದರ್ಗಾ. ಇದರ ಮುಖ್ಯ ದ್ವಾರದಲ್ಲಿ ಗಣಪತಿಯ ಒಂದು ಕೆತ್ತನೆ ಇರುವುದು ಇದರ ವಿಶೇಷತೆ. ಈ ಗಣಪತಿ ಚಿತ್ರದಿಂದಾಗಿ ಇಲ್ಲಿ ನಡೆಯುವ ಗಣೇಶ ಚತುರ್ಥಿಯಲ್ಲಿ ಹಿಂದೂ ಮುಸ್ಲಿಮರು ಧರ್ಮಭೇದವಿಲ್ಲದೆ ಭಾಗವಹಿಸುವ ಮೂಲಕ ವಿಶೇಷ ಸಂಭ್ರಮ ಕಂಡು ಬರುತ್ತದೆ.

andolana

Recent Posts

ತಾಪಮಾನ ಇಳಿಕೆ : ಬೆಂಗಳೂರಲ್ಲಿ ಚಳಿ ಹೆಚ್ಚಳ

ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…

6 hours ago

ಸಿಎ ಸೈಟ್‌ ಕಟ್ಟಡ ನಿರ್ಮಾಣ ಕಾಲಮಿತಿ ; 3 ವರ್ಷದಿಂದ 5 ವರ್ಷ ಹೆಚ್ಚಳದ ಭರವಸೆ

ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…

6 hours ago

ಮೈಸೂರು : ಆನ್‌ಲೈನ್‌ನಲ್ಲಿ ವೈದ್ಯರೊಬ್ಬರಿಗೆ 82 ಲಕ್ಷ ರೂ. ವಂಚನೆ

ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…

6 hours ago

SC/ST ದೌರ್ಜನ್ಯ ತಡೆ : ನಾಗರಿಕ ಹಕ್ಕು ಜಾರಿ ನೂತನ ಠಾಣೆ ಮೈಸೂರಲ್ಲಿ ಕಾರ್ಯರಂಭ

ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…

6 hours ago

ಕೆಪಿಎ-ಮಹಿಳಾ-ಮಕ್ಕಳ ಅಭಿವೃದ್ಧಿ ಸಂಸ್ಥೆ ನಡುವೆ ಒಡಂಬಡಿಕೆ

ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…

6 hours ago

ಮೈಸೂರಲ್ಲಿ ಎಸ್.ಎಲ್.ಬೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಘೋಷಣೆ

ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

7 hours ago