ಎಡಿಟೋರಿಯಲ್

ಫ್ರಿಟ್ಜ್ ಹೇಬರ್ ಎಂಬ ರಕ್ಷಕನೂ ಮತ್ತು ರಾಕ್ಷಸನೂ…

ತನ್ನ ಅನ್ವೇಷಣೆಯಿಂದ ಕೋಟ್ಯಂತರ ಜನರನ್ನು ರಕ್ಷಿಸಿದಾತನೇ ಮಹಾಯುದ್ಧದ ಕಾಲದಲ್ಲಿ ಲಕ್ಷಾಂತರ ಜನರ ಸಾವಿಗೂ ಕಾರಣನಾದ!

ಕಾರ್ತಿಕ್ ಕೃಷ್ಣ

೧೯೧೮ರ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಇತಿಹಾಸದಲ್ಲೇ ಮಹತ್ವಪೂರ್ಣವಾದುದು. ಆ ಸಮಯದಲ್ಲಿ ಉದ್ಭವಿಸಿದ್ದ ಅತಿದೊಡ್ಡ ಸಮಸ್ಯೆಗೆ ಪರಿಹಾರ ಕಂಡುಹಿಡಿದುದಕ್ಕೆ ಜರ್ಮನಿಯ ರಸಾಯನಶಾಸ್ತ್ರಜ್ಞರೊಬ್ಬರಿಗೆ ಆ ವರ್ಷದ ನೊಬೆಲ್ ಪ್ರಶಸ್ತಿ ಸಿಕ್ಕಿತ್ತು. ಇಂದು ಕೋಟ್ಯಂತರ ಜನರು ಉಸಿರಾಡುತ್ತಿರುವುದಕ್ಕೆ ಆತನ ಅನ್ವೇಷಣೆಯೇ ಕಾರಣ ಎಂದರೆ ನೀವು ನಂಬಲೇ ಬೇಕು! ಇಂಥ ಸಾಧಕನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆತನ ಅನೇಕ ಸಮಕಾಲೀನ ವಿಜ್ಞಾನಿಗಳು ನಿರ್ಲಕ್ಷಿಸಿದರೆ, ಎರಡು ವಿಜ್ಞಾನಿಗಳು ತಮಗೆ ಘೋಷಣೆಯಾಗಿದ್ದ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಅದೂ ಸಾಲದೆಂಬಂತೆ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಆತನ ಬಗ್ಗೆ ಹಿಗ್ಗಾಮುಗ್ಗಾ ಜರಿದು ಲೇಖನವನ್ನೂ ಪ್ರಕಟಿಸಿದ್ದರು.

ಆತನ ಬಗ್ಗೆ ಓದುವಾಗಲೆಲ್ಲ ನನಗೆ ‘ರಾಕ್ಷಸನೂ ನೀನೆನಾ.. ರಕ್ಷಕನೂ ನೀನೇನಾ..’ ಎಂಬ ಕನ್ನಡ ಸಿನಿಮಾದ ಹಾಡೊಂದು ನೆನಪಾಗುತ್ತದೆ. ಯಾಕೆಂದರೆ ಆತ ಬಿಲಿಯನ್‌ಗಟ್ಟಲೆ ಜೀವಗಳು ಉಳಿಯುವುದಕ್ಕೆ ಹೇಗೆ ಕಾರಣಕರ್ತನಾದನೋ, ಹಾಗೆಯೇ ಲಕ್ಷಾಂತರ ಜನರು ಉಸಿರು ಕಳೆದುಕೊಳ್ಳುವುದಕ್ಕೂ ಕಾರಣನಾದ. ಆತನೇ ಫ್ರಿಟ್ಜ್ ಹೇಬರ್.

ಈ ಫ್ರಿಟ್ಜ್ ಅಂಥದೇನನ್ನು ಮಾಡಿದರು ಎಂದು ಯೋಚಿಸ್ತಾ ಇದ್ದೀರಾ? ಅದನ್ನು ತಿಳಿದುಕೊಳ್ಳಲು ಅವರು ಪರಿಹಾರ ಕಂಡು ಹಿಡಿದ ಸಮಸ್ಯೆಯ ಬಗ್ಗೆ ಒಂದಷ್ಟು ತಿಳಿದುಕೊಳ್ಳಬೇಕು. ಪೆರು ದೇಶಕ್ಕೆ ಹೊಂದಿಕೊಂಡಂತೆ ಒಂದಷ್ಟು ದ್ವೀಪಗಳಿವೆ. ಅವುಗಳನ್ನು ಕಡಲ ಹಕ್ಕಿಗಳ ವಿಹಾರ ಕೇಂದ್ರ ಎಂದರೆ ಇನ್ನಷ್ಟು ಸಮಂಜಸವೆನಿಸಬಹುದು. ಎಷ್ಟೋ ವರ್ಷಗಳಿಂದ ಈ ದ್ವೀಪಕ್ಕೆ ಸಂತಾನೋತ್ಪತ್ತಿಗಾಗಿ ಬರುವ ಹಕ್ಕಿಗಳು ಅಲ್ಲಿ ಹೇರಳವಾಗಿ ಸಿಗುವ ಮೀನುಗಳನ್ನು ತಿಂದುಂಡು, ಬಂಡೆಗಳ ಮೇಲೆಲ್ಲಾ ಹಿಕ್ಕೆ ಹಾಕುತ್ತವೆ. ಈ ಪ್ರದೇಶದ ತಾಪಮಾನ ಹೆಚ್ಚಿರುವುದರಿಂದ ಹಿಕ್ಕೆಗಳು ಗಟ್ಟಿಯಾಗಿ, ಪದರಗಳಂತೆ ಸಂಗ್ರಹಗೊಂಡು, ಬಂಡೆಯಂತೆಯೇ ರೂಪ ತಳೆಯುತ್ತವೆ. ಇದು ಶತಶತಮಾನಗಳಿಂದ ಜಾರಿಯಲ್ಲಿರುವ ಪ್ರಕ್ರಿಯೆ. ಕೆಲವೊಂದು ಹಿಕ್ಕೆ ಬಂಡೆಗಳು ಸುಮಾರು ೩೦ಮೀಟರ್‌ನಷ್ಟು ಎತ್ತವಾಗಿರುತ್ತವಂತೆ.

ವೈಜ್ಞಾನಿಕವಾಗಿ ಗುವಾನೋ ಎಂದು ಕರೆಯಲ್ಪಡುವ ಈ ಹಿಕ್ಕೆಗಳ ಮಾರಾಟ ೧೮೦೦ರ ಆಸುಪಾಸಿನಲ್ಲಿ ದೊಡ್ಡ ದಂಧೆಯಾಗಿತ್ತು. ಅದರ ಬೆಲೆ ಎಷ್ಟಿತ್ತೆಂದರೆ, ಸುಮಾರು ೪೫೦ ಗ್ರಾಂ ಚಿನ್ನವನ್ನು ೧.೮ ಕೆಜಿ ಗುವಾನೋದೊಂದಿಗೆ ಬದಲಿಸಿಕೊಳ್ಳಬಹುದಾಗಿತ್ತಂತೆ. ಹಕ್ಕಿಗಳ ಹಿಕ್ಕಿಗೆ ಇಷ್ಟೊಂದು ಬೆಲೆ ಯಾಕಿದ್ದಿರಬಹುದು?

ಅದನ್ನು ತಿಳಿದುಕೊಳ್ಳಲು ನಮ್ಮ ದೇಹದ ವ್ಯವಸ್ಥೆಯನ್ನು ಅರಿತುಕೊಳ್ಳಬೇಕು.

ಮನುಷ್ಯನ ದೇಹವು ಜಲಜನಕ, ಆಮ್ಲಜನಕ, ಇಂಗಾಲ ಹಾಗೂ ಸಾರಜನಕಗಳಿಂದ ರಚಿಸಲ್ಪಟ್ಟಿವೆ. ಸಾರಜನಕವು ಪ್ರೋಟಿನ್‌ಗಳನ್ನು ನಿರ್ಮಿಸುವ ಅಮೆನೊ ಆಸಿಡ್‌ಗಳ ಭಾಗವಾಗಿರುವುದಲ್ಲದೆ ಹಿಮೋಗ್ಲೋಬಿನ್, ್ಕಘೆಅ ಹಾಗೂ ಈಘೆಅ ಗಳಲ್ಲಿಯೂ ಕಂಡುಬರುತ್ತದೆ. ಭುವಿಯ ಮೇಲಿನ ಜೀವಿಗಳ ಅಸ್ತಿತ್ವಕ್ಕೆ ಸಾರಜನಕ ಅತ್ಯವಶ್ಯಕ. ಇಂತಿಪ್ಪ ಸಾರಜನಕ ನಮಗೆ ಸಿಗುವುದು ಸಸ್ಯಗಳಿಂದ. ಸಸ್ಯಗಳಿಗೆ ಸಾರಜನಕದ ಪೂರೈಕೆ ಮಣ್ಣಿನಿಂದ ಆಗುತ್ತದೆ. ಸಮಸ್ಯೆ ಏನೆಂದರೆ, ಭೂಮಿಯನ್ನು ಪದೇ ಪದೇ ಉಳುಮೆ ಮಾಡಿದಾಗ, ಮಣ್ಣಿನ ಸಾರಜನಕ ಮಟ್ಟ ಕುಸಿದು, ಸಸ್ಯಗಳು ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸಾರಜನಕವನ್ನು ಮತ್ತೆ ಮಣ್ಣಿಗೆ ಸೇರಿಸುವುದೇ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗ.

ಶೇಕಡಾ ೨೦ರಷ್ಟು ಸಾರಜನಕವನ್ನು ಹೊಂದಿರುವ ಗುವಾನೋವನ್ನು ಮಣ್ಣಿಗೆ ಸೇರಿಸಿ, ಅಧಿಕ ಫಸಲನ್ನು ಪಡೆಯಬಹುದೆಂದು ದಕ್ಷಿಣ ಅಮೆರಿಕಾದ ಇಂಕಾ ನಾಗರಿಕತೆಗೆ ತಿಳಿದಿತ್ತಂತೆ! ಪೆರು ದೇಶದ ಗುವಾನೋ ದ್ವೀಪಗಳು ಜಗತ್ತಿನ ಇತರ ದೇಶದ ಕಣ್ಣಿಗೆ ಬಿದ್ದು, ಅದನ್ನು ವಶಪಡಿಸಿಕೊಳ್ಳಲು ಯುದ್ಧವೇ ಜರುಗಿತ್ತು. ಜಗತ್ತಿಗೆ ಸಾರಜನಕದ ಅವಶ್ಯಕತೆ ಹೆಚ್ಚಿದಂತೆ, ಗುವಾನೋ ಕೂಡ ಈ ದ್ವೀಪಗಳಿಂದ ಕಣ್ಮರೆಯಾಗುತ್ತಾ ಬಂತು. ಪೆರು ದೇಶ ಗುವಾನೋ ರಫ್ತನ್ನು ನಿರ್ಬಂಧಿಸಿತ್ತು ಕೂಡ.

ಆಗ ವಿಧಿಯಿಲ್ಲದೇ ಬೇರೆ ಮೂಲದಿಂದ ಸಾರಜನಕವನ್ನು ಉತ್ಪಾದಿಸಲೇ ಬೇಕಿತ್ತು. ವಿಜ್ಞಾನ ತನ್ನ ಚಮತ್ಕಾರವನ್ನು ತೋರಿಸಿದ್ದು ಈ ಮಹತ್ವಪೂರ್ಣ ಘಟ್ಟದಲ್ಲಿ!

ಸಾರಜನಕ ಅಷ್ಟೊಂದು ವಿರಳವೇನಲ್ಲ. ವಾತಾವರಣ ೭೮% ಸಾರಜನಕದಿಂದ ತುಂಬಿದೆ! ಆದರೆ ಪ್ರಾಣಿಗಳು ಅಥವಾ ಸಸ್ಯಗಳು ನೇರವಾಗಿ ಅದನ್ನು ಬಳಸಿಕೊಳ್ಳಲು ಶಕ್ತವಾಗಿಲ್ಲ ಅಷ್ಟೇ. ಸಾರಜನಕ ವಾತಾವರಣದಲ್ಲಿ ಹೇಗಿರುತ್ತದೆಯೆಂದರೆ, ಸಾರಜನಕದ ಎರಡು ಅಣುಗಳು ಟ್ರಿಪಲ್ ಕೋವಲೆಂಟ್ ಬಾಂಡ್‌ನಿಂದ ಜೋಡಿಯಾಗಿರುತ್ತವೆ. ಎರಡು ಚೆಂಡುಗಳನ್ನು ಹತ್ತಿರವಿಟ್ಟು ಮೂರು ದಾರಗಳಿಂದ ಹೊಲಿದು ಬೆಸೆಯುವಂತೆ ಊಹಿಸಿಕೊಳ್ಳಿ. ಈ ಸಾರಜನಕ ಅಣುವಿನ ಜೋಡಿಯನ್ನು ಬೇರ್ಪಡಿಸಲು ಅಪಾರವಾದ ಶಕ್ತಿಬೇಕು. ಸುಮಾರು ೯.೨ ಎಲೆಕ್ಟ್ರಾನ್ ವೋಲ್ಟ್‌ನಷ್ಟು . ಇದು ನಮ್ಮ ವಾತಾವರಣದಲ್ಲಿ ಜರುಗುವುದು ಸಿಡಿಲಿನ ಸಮಯದಲ್ಲಿ. ಸಿಡಿಲಿನಿಂದ ಬೇರ್ಪಟ್ಟ ಸಾರಜನಕದ ಅಣುಗಳು ನೈಟ್ರೋಜನ್ ಆಕ್ಸೈಡ್ ಆಗಿ ಪರಿವರ್ತನೆಗೊಂಡು ಮಳೆ ಹನಿಗಳೊಂದಿಗೆ ಭೂಮಿಗಿಳಿಯುತ್ತವೆ.

ಈ ಪರಿಕಲ್ಪನೆಯನ್ನು ಬಳಸಿಕೊಂಡು ೧೮೧೧ರಿಂದ ಕೆಲಸವನ್ನು ಆರಂಭಿಸಿದ ಕೆಲವು ವಿಜ್ಞಾನಿಗಳು, ಗುವಾನೋದ ಪರಮಾಣು ರಚನೆಯಲ್ಲಿ ಕಂಡುಬಂದ ಅಮೋನಿಯಾ (ಘೆಏ೩) ದಂತೆ ಜಲಜನಕ ಹಾಗೂ ಸಾರಜನಕವನ್ನು ಸೇರಿಸಲು ಪ್ರಯತ್ನಿಸಿ ವಿಫಲರಾದರು. ಸುಮಾರು ನೂರು ವರುಷಗಳ ನಂತರ ಇದನ್ನು ಯಶಸ್ವಿಯಾಗಿ ಮಾಡಿದವನೇ ಫ್ರಿಟ್ಜ್ ಹೇಬರ್!

ಜರ್ಮನಿಯ ಅತಿದೊಡ್ಡ ರಾಸಾಯನಿಕ ಸಂಸ್ಥೆಯಾಗಿದ್ದ ಆಅಖಊ, ಹೇಬರ್ ಕಂಡುಹಿಡಿದ ಸಂಸ್ಕರಣ ವಿಧಾನವನ್ನು (ಅದನ್ನು ಹೇಬರ್ ಪ್ರೋಸೆಸ್ ಎನ್ನುತ್ತಾರೆ) ವಾಣಿಜ್ಯೀಕರಣಗೊಳಿಸಿ, ಮುಂದಿನ ನಾಲ್ಕು ವರುಷಗಳಲ್ಲಿ ದಿನವೊಂದಕ್ಕೆ ಐದು ಟನ್ ಗಳಷ್ಟು ಅಮೋನಿಯಾ ಉತ್ಪಾದಿಸುವ ಕಾರ್ಖಾನೆಯನ್ನೂ ಸ್ಥಾಪಿಸುತ್ತಾರೆ.

ಅಲ್ಲಿಂದ ಶುರುವಾಯ್ತು ನೋಡಿ ಕೃಷಿ ಕ್ಷೇತ್ರದ ಕ್ರಾಂತಿ! ಉತ್ಪಾದನೆ ಹೆಚ್ಚಾಯ್ತು, ಜನರ ಆಹಾರದ ಅಭಾವವೂ ನೀಗಿತು, ಜನರ ಮರಣ ಪ್ರಮಾಣ ಕಡಿಮೆಯಾಯಿತು. ವಿಜ್ಞಾನ ವಿಶ್ಲೇಷಕರ ಪ್ರಕಾರ, ಭೂಮಿ ಇಂದು ಸುಮಾರು ನಾಲ್ಕು ಬಿಲಿಯನ್ ಹೆಚ್ಚು ಜನರನ್ನು ಹೊರಲು ಕಾರಣವಾಗಿದ್ದು ಫ್ರಿಟ್ಜ್ ಹೇಬರ್‌ನ ಅನ್ವೇಷಣೆ!

ಇಷ್ಟೆಲ್ಲ ಸಾಧನೆ ಮಾಡಿದ ವಿಜ್ಞಾನಿ ವಿಲನ್ ಆಗಿದ್ದು ಹೇಗೆ? ಆತನ ಬದುಕನ್ನು ಬದಲಿಸಿದ್ದು ಒಂದನೇ ಮಹಾಯುದ್ಧ! ಮೂಲತಃ ಜರ್ಮನಿಯವನಾಗಿದ್ದ ಈತ ಮಹಾ ದೇಶಭಕ್ತ. ತನ್ನ ಜ್ಞಾನವನ್ನು ದೇಶದ ಸುರಕ್ಷತೆಗೆ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ರಾಸಾಯನಿಕ ಆಯುಧಗಳ ಅನ್ವೇಷಣೆಯಲ್ಲಿ ತೊಡಗಿದ. ಕೈಸರ್ ವಿಲ್ಹೆಮ್ ಭೌತಿಕ ರಸಾಯನಶಾಸ್ತ್ರ ಮತ್ತು ಎಲೆಕ್ಟ್ರೋ ಕೆಮಿಸ್ಟ್ರಿ ಸಂಸ್ಥೆಯಲ್ಲಿ ಹಲವಾರು ಶೋಧನೆಗಳನ್ನು ನಡೆಸಿ, ಕೊನೆಗೆ ‘ಕ್ಲೋರಿನ್ ಅನಿಲ’ ಎಂಬ ವಿಷಕಾರಿ ರಾಸಾಯನಿಕ ಆಯುಧವನ್ನು ತಯಾರಿಸಿದ ಫ್ರಿಟ್ಜ್, ಸುಮಾರು ೧ ಲಕ್ಷ ಜನರ ಸಾವಿಗೆ ಕಾರಣನಾದ!

ನೆನಪಿರಲಿ, ಜರ್ಮನಿ ತನ್ನ ಗ್ಯಾಸ್ ಚೇಂಬರ್‌ಗಳಲ್ಲಿ ಬಳಸಿದ ಘಢ್ಚ್ಝಟ್ಞ-ಆ ಅನಿಲ ತಯಾರಾದದ್ದು ಕೂಡ ಇದೆ ಸಂಸ್ಥೆಯಲ್ಲಿ.

ಫ್ರಿಟ್ಜ್ ಒಬ್ಬ ಅಪರಿಮಿತ ದೇಶಭಕ್ತನೋ ಅಥವಾ ಕೋಟ್ಯಂತರ ಜನರನ್ನು ಉಳಿಸಿದ ಮಹಾ ವಿಜ್ಞಾನಿಯೋ ಅಥವಾ ಹಲವರ ಸಾವಿಗೆ ಕಾರಣನಾದ ಕ್ರೂರಿಯೋ ಎಂಬುದನ್ನು ನಿರ್ಧರಿಸುವುದು ಕಷ್ಟಸಾಧ್ಯ. ಒಬ್ಬ ವಿಜ್ಞಾನಿ ಈ ತರಹದ ದ್ವಂದ್ವದಲ್ಲಿ ಜೀವ ಸವೆಸಬೇಕಾದದ್ದು ಮಾತ್ರ ಒಂದು ದುರಂತ. ಈಗ ಮತ್ತೆ ಆ ಹಾಡಿನ ಸಾಲನ್ನು ನೆನಪಿಸಿಕೊಳ್ಳಿ.. ರಾಕ್ಷಸನೂ ನೀನೇನಾ.. ರಕ್ಷಕನೂ ನೀನೇನಾ..!

andolana

Recent Posts

ಪೌತಿ ಖಾತಾ ಅರ್ಜಿ ಶೀಘ್ರ ವಿಲೇವಾರಿ ಮಾಡಿ : ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ

ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ…

7 hours ago

ಜಿ-ರಾಮ್‌ಜಿ ವಾಪಸ್‌ ಪಡೆಯಿರಿ : ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು…

7 hours ago

ಹಣ ಅಕ್ರಮ ವರ್ಗಾವಣೆ ಪ್ರಕರಣ : ಕಾಂಗ್ರೆಸ್‌ ಶಾಸಕ ವೀರೇಂದ್ರಗೆ ಜಾಮೀನು

ಬೆಂಗಳೂರು : ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಬಿಗ್‌ ರಿಲೀಫ್‌…

9 hours ago

ಮೈಸೂರಿನಲ್ಲಿ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ : ಜಿಲ್ಲಾಧಿಕಾರಿ ಮೆಚ್ಚುಗೆ

ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…

9 hours ago

ಕೈಗಾರಿಕೆ ಸ್ಥಾಪನೆಗೆ ಅರ್ಜಿ ಬಂದರೆ ಸಂಪೂರ್ಣ ಬೆಂಬಲ: ಸಚಿವ ಚಲುವರಾಯಸ್ವಾಮಿ ಭರವಸೆ

ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…

10 hours ago

ಜ.1ರಂದು ಚಾ.ಬೆಟ್ಟಕ್ಕೆ ಹೆಚ್ಚಿನ ಜನ ನಿರೀಕ್ಷೆ : ಅಗತ್ಯ ವ್ಯವಸ್ಥೆಗೆ ಜಿಲ್ಲಾಧಿಕಾರಿ ಸೂಚನೆ

ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…

11 hours ago