ಎಡಿಟೋರಿಯಲ್

ವಿದೇಶ ವಿಹಾರ : ಭಾರತ ಸೇರಲು ಪಾಕ್‌ ಆಕ್ರಮಿತ ಕಾಶ್ಮೀರದ ಜನರು ಸಿದ್ಧ

ಶಹಬಾಜ್ ಮಾತುಕತೆಯ ನಾಟಕ, ಬಗೆಹರಿಯದ ಆರ್ಥಿಕ ಬಿಕ್ಕಟ್ಟು, ಆಹಾರಕ್ಕಾಗಿ ಜನರ ಪರದಾಟ
-ಡಿ.ವಿ.ರಾಜಶೇಖರ್

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಸೂಚನೆಗಳು ಕಾಣಿಸುತ್ತಿಲ್ಲ. ಆಹಾರ, ಔಷಧಗಳ ಅಭಾವದಿಂದ ಜನರು ಕಂಗಾಲಾಗಿದ್ದಾರೆ. ಪ್ರಧಾನಿ ಶಹಬಾಜ್ ಷರೀಫ್ ಅವರು ಅರಬ್ ದೇಶಗಳಿಂದ, ಐಎಂಎಫ್‌ನಂಥ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಹಣ ಸಾಲ ಪಡೆಯಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ಒಂದು ಬಿಲಿಯನ್ ಡಾಲರ್ ಕೊಡುವ ಭರವಸೆ ನೀಡಿದ್ದಾರೆ. ಹಾಕುವ ಎಲ್ಲ ಷರತ್ತುಗಳನ್ನೂ ತಾವು ಒಪ್ಪುವುದಾಗಿ ಹೇಳಿ ಐಎಂಎಫ್ ನಿಂದ ಹಣಕ್ಕೆ ಬೇಡಿಕೆ ಇಡಲಾಗಿದೆ. ಮಾತುಕತೆ ನಡೆದು ಈ ಹಣ ಬರಲು ಸಾಕಷ್ಟು ದಿನಗಳೇ ಕಳೆಯಬಹುದು. ಅದುವರೆಗೆ ದೇಶ ನಿಭಾಯಿಸಲು ಷರೀಫ್ ಏನೇನೋ ಸರ್ಕಸ್ ಮಾಡುತ್ತಿದ್ದಾರೆ. ಆಹಾರದ ಅಭಾವ ದೇಶ ವ್ಯಾಪಿಯಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರವನ್ನೂ (ಪಿಒಕೆ) ಬಿಟ್ಟಿಲ್ಲ. ತಾಯಂದಿರು ಮಕ್ಕಳಿಗೆ ಆಹಾರ ಕೊಡಲಾಗದೆ ಇನ್ನೆಷ್ಟು ಬಾರಿ ನೀರು ಕುಡಿಸಲಿ ಎಂದು ಗೋಳಾಡುವ ಟೆಲಿವಿಷನ್ ದೃಶ್ಯಾವಳಿಗಳು ಅಂತಾರಾಷ್ಟ್ರೀಯ ಸಮುದಾಯವನ್ನು ಕಳವಳಕ್ಕೆ ಒಳಗು ಮಾಡಿವೆ. ಗಿಲ್ಗಿಟ್, ಬಾಲ್ಟೀಸ್ತಾನ್ ಮತ್ತು ಆಜಾದ್ ಕಾಶ್ಮೀರ್ (ಜನಸಂಖ್ಯೆ ಸುವಾರು 52ಲಕ್ಷ) ಒಳಗೊಂಡ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಬಹುಪಾಲು ನಗರಗಳಲ್ಲಿ ಜನರು ಬೀದಿಗಿಳಿದು ಮೊದಮೊದಲು ಪಾಕಿಸ್ತಾನ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕ್ರಮೇಣ ಅವರೆಲ್ಲಾ ಒಕ್ಕೊರಲಿನಿಂದ ‘ನಾವು ಭಾರತ ಸೇರಲು ಬಯಸುತ್ತೇವೆ’ ‘ಅನ್ಯಾಯ ಇನ್ನು ಸಾಕು ನಮ್ಮನ್ನು ಭಾರತಕ್ಕೆ ಸೇರಿಸಿ’ ಎಂಬ ಘೋಷಣೆಗಳನ್ನು ಕೂಗಿ ಪ್ರದರ್ಶನ ನಡೆಸುತ್ತಿದ್ದಾರೆ. ಈ ಪ್ರದರ್ಶನಕ್ಕೆ ಸದ್ಯದ ಸ್ಥಿತಿಯೇ ಕಾರಣ ಇರಬಹುದಾದರೂ ಅದರ ಹಿಂದೆ ಶೋಷಣೆಯ ದೊಡ್ಡ ಚರಿತ್ರೆೆಯೇ ಇದೆ. ಅವರ ಪ್ರದೇಶವನ್ನು ಆಕ್ರಮಿಸಿಕೊಂಡು 75 ವರ್ಷಗಳೇ ಆದರೂ ಅವರ ಸ್ಥಿತಿ ಚಿಂತಾಜನಕವಾಗಿದೆ. ಹೆಸರಿಗೆ ಮಾತ್ರ ಸ್ವಾಯತ್ತ ಪ್ರದೇಶ. ಆದರೆ ನಿಯಂತ್ರಣ ಪೂರ್ತಿ ಪಾಕಿಸ್ತಾನದ್ದು. ಮೂಲಭೂತ ಸೌಲಭ್ಯಗಳಿಂದ ಆ ಪ್ರದೇಶ ಸೊರಗಿದೆ. ಸರ್ಕಾರದಿಂದ ತಮಗೆ ಯಾವುದೇ ರೀತಿಯ ಅನುಕೂಲವೂ ಆಗಿಲ್ಲ. ಇನ್ನೆಷ್ಟು ಕಾಲ ಹೀಗಿಯೇ ಗೋಳಾಡುತ್ತ ಬದುಕುವುದು ಎಂಬ ಪ್ರಶ್ನೆಯನ್ನು ಜನ ಕೇಳುತ್ತಾರೆ. ತಮ್ಮನ್ನು ಲಡಾಖ್ ಅಥವಾ ಜಮ್ಮುವಿನ ಭಾಗವಾಗಿ ಮಾಡಬೇಕೆಂಬುದು ಅವರ ಒತ್ತಾಯವಾಗಿದೆ. ಹೀಗೆ ಬೀದಿಗೆ ಬಂದು ಪ್ರತಿಭಟಿಸಿದರೆ ಪೊಲೀಸರು ಕಿರುಕುಳ ನೀಡುತ್ತಾರೆ ಎಂಬುದು ಅವರಿಗೆ ತಿಳಿದಿದೆ. ಆದರೂ ಯಾವುದಕ್ಕೂ ಜಗ್ಗದೆ ಜನರು ಬೀದಿಗಿಳಿದಿದ್ದಾರೆ. 75 ವರ್ಷಗಳು ಪಾಕಿಸ್ತಾನದ ಜೊತೆಗಿದ್ದವರು ಈಗ ಭಾರತ ಸೇರುತ್ತೇವೆ ಎಂದರೆ ಜನರನ್ನು ನಂಬಬಹುದೇ ಎನ್ನುವ ಪ್ರಶ್ನೆ ಏಳುತ್ತದೆ.
ಭಾರತ ಮತ್ತು ಪಾಕಿಸ್ತಾನ ಪ್ರತ್ಯೇಕ ದೇಶಗಳಾದ 1947ರಲ್ಲಿಯೇ ಪಿಒಕೆ ಸಮಸ್ಯೆ ಭಾರತಕ್ಕೆ ಎದುರಾಯಿತು. ಸ್ವಾತಂತ್ರ್ಯ ಬಂದ ಕೆಲವೇ ದಿನಗಳಲ್ಲಿ ಪಸ್ತೂನರು ಕಾಶ್ಮೀರ ಪ್ರದೇಶವನ್ನು ಅತಿಕ್ರಮಿಸಲಾರಂಭಿಸಿದರು. ಅವರಿಗೆ ಪಾಕಿಸ್ತಾನದ ಸೇನಾಧಿಕಾರಿಗಳ ಬೆಂಬಲ ಇತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಾಶ್ಮೀರದ ರಾಜ ಹರಿಸಿಂಗ್ ತಮ್ಮ ದೇಶವನ್ನು ಭಾರತದ ಜೊತೆ ವಿಲೀನಗೊಳಿಸಲು ನಿರ್ಧರಿಸಿ ಒಪ್ಪಂದಕ್ಕೆ ಸಹಿ ಹಾಕಿದರು. ಆ ನಂತರ ಮಾತ್ರ ಭಾರತದ ಸೇನೆ ಪಿಒಕೆ ಪ್ರದೇಶ ಪ್ರವೇಶಿಸಿ ಅತಿಕ್ರಮಣಕಾರರನ್ನು ಅಲ್ಲಿಂದ ತೆರವು ಮಾಡಿಸಿದರು. ವಾಸ್ತವ ಗಡಿ ರೇಖೆಯ ಗುರುತಿಸಿ ಎರಡೂ ಕಡೆಯವರಿಗೆ ಬಂದೂಕು ಕೆಳಗಿಳಿಸಲು ಸೂಚಿಸಲಾಯಿತು. ಆ ವೇಳೆಗೆ ಆಕ್ರಮಿಸಿಕೊಂಡಿದ್ದ ಪ್ರದೇಶ ಪಾಕಿಸ್ತಾನದ ಪಾಲಾಯಿತು. ಅಲ್ಲಿನ ಜನರು ಅನಿವಾರ್ಯವಾಗಿ ಪಾಕಿಸ್ತಾನದ ಪ್ರಜೆಗಳಾದರು. ಇದೇನೆ ಇದ್ದರೂ ಪಿಒಕೆ ಜನರು ಭಾರತ ಸೇರಲು ಪಾಕಿಸ್ತಾನ ಬಿಡುವ ಸಾಧ್ಯತೆ ಇಲ್ಲ. ಹೀಗಾಗಿ ಆ ರೀತಿಯದ್ದೇನಾದರೂ ಬೆಳವಣಿಗೆ ಆಗಬೇಕಾದರೆ ಎರಡೂ ಸರ್ಕಾರಗಳ ಒಪ್ಪಿಗೆ ಅಗತ್ಯ. ಅಥವಾ ಯುದ್ಧ ಮಾಡಿ ಭಾರತ ಆ ಪ್ರದೇಶವನ್ನು ವಶಮಾಡಿಕೊಳ್ಳಬೇಕು. ರಷ್ಯಾ ದೇಶ ಯುಕ್ರೇನ್ ದೇಶದ ಕೆಲವು ಪ್ರದೇಶಗಳನ್ನು ವಶಮಾಡಿಕೊಳ್ಳಲು ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ನೋಡಿದರೆ ಪಾಕಿಸ್ತಾನದ ಜೊತೆಗಿನ ಭಾರತದ ಯುದ್ಧವನ್ನು ಈ ಸನ್ನಿವೇಶದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನದ ಜೊತೆ ನಡೆಸಿದ ಎಲ್ಲ ಮೂರೂ ಯುದ್ಧಗಳಲ್ಲಿ ಭಾರತ ಗೆದ್ದಿರುವುದರಿಂದ ಪಿಒಕೆ ಗೆಲ್ಲವುದು ಅಸಾಧ್ಯವಾದುದೇನಲ್ಲ.
ಪಿಒಕೆ ವಶಪಡಿಸಿಕೊಳ್ಳುವುದರಿಂದ ಭಾರತಕ್ಕೆ ಅನುಕೂಲಗಳು ಇವೆ. ಅಂತೆಯೇ ಅದರಿಂದ ಉದ್ಭವವಾಗುವ ಸಮಸ್ಯೆಗಳೂ ಇವೆ. ಪಿಒಕೆ ವಶಮಾಡಿಕೊಂಡರೆ ಮುಖ್ಯವಾಗಿ ಪಾಕಿಸ್ತಾನದಿಂದ ತರಬೇತಿ ಪಡೆದ ಉಗ್ರಗಾಮಿಗಳು ಕಾಶ್ಮೀರದಲ್ಲಿ ನಡೆಸುತ್ತಿರುವ ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಬೀಳಲಿದೆ. ಏಕೆಂದರೆ ಪಾಕಿಸ್ತಾನದ ಸೇನೆ ರಹಸ್ಯವಾಗಿ ನಡೆಸುತ್ತಿರುವ ಉಗ್ರಗಾಮಿ ತರಬೇತಿ ಶಿಬಿರಗಳು ಇರುವುದು ಈ ಪ್ರದೇಶದಲ್ಲಿಯೇ. ಮೊತ್ತೊಂದು ಮುಖ್ಯ ಅನುಕೂಲವೆಂದರೆ ಪಿಒಕೆಗೆ ಇರುವ ನೆರೆ. ಚೀನಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಇರಾನ್, ರಷ್ಯಾ ಹೀಗೆ ಹಲವು ದೇಶಗಳಿಗೆ ಸಂಪರ್ಕ ಸುಲಭವಾಗುತ್ತದೆ. ವಾಣಿಜ್ಯ ವಹಿವಾಟು ಹೆಚ್ಚಲಿದೆ. ಈ ದೇಶಗಳೆಲ್ಲಾ ಸ್ನೇಹದಿಂದಿದ್ದರೆ ಅನುಕೂಲ. ಇದೇ ಕಾರಣವಾಗಿ ಚೀನಾ, ಇರಾನ್ ದೇಶಗಳು ಹಗೆ ಸಾಧಿಸ ಹೊರಟರೆ ಭಾರತಕ್ಕೆ ದೊಡ್ಡ ಸಮಸ್ಯೆೆಯೇ ಬಂದೊದಗುತ್ತದೆ. ಪಾಕಿಸ್ತಾನದ ನಾಯಕರು ಸತತವಾಗಿ ಕಾಶ್ಮೀರ ತಮಗೆ ಸೇರಬೇಕೆಂದು ಹೇಳುತ್ತ ಬಂದಿದ್ದಾರೆ. ಜನಮತಗಣನೆ ಆಗಬೇಕೆಂದು ಒತ್ತಾಯಿಸುತ್ತಿದ್ದಾರೆ. ರಾಜಾ ಹರಿಸಿಂಗ್ ಅವರೇ ಜಮ್ಮು-ಕಾಶ್ಮೀರವನ್ನು ಭಾರತಕ್ಕೆ ಕೊಟ್ಟಿರುವಾಗ ಬೇರೆ ಪರೀಕ್ಷೆಗಳ ಅಗತ್ಯವಿಲ್ಲ ಎಂದೂ ಹಾಗೆೆಯೇ ಈಗಾಗಲೇ ಪ್ರಜಾತಂತ್ರ ಮಾರ್ಗದಲ್ಲಿ ಚುನಾವಣೆಗಳು ನಡೆದಿರುವುದರಿಂದ ಜನಮತಗಣನೆ ಅಗತ್ಯವಿಲ್ಲ ಎಂದು ಭಾರತ ವಾದ ಮಾಡುತ್ತ ಬಂದಿದೆ. ಪಿಒಕೆ ಭಾರತದ ವಶ ಆದರೆ ಆ ಪ್ರದೇಶ ದುರ್ಬಳಕೆಯಾಗುವುದು ತಪ್ಪುತ್ತದೆ ಎನ್ನುವುದು ನಿಜವಾದರೂ ಈಗಾಗಲೇ ದೊಡ್ಡ ಸಮಸ್ಯೆಯಾಗಿರುವ ಜಮ್ಮು-ಕಾಶ್ಮೀರದ ಸಮಸ್ಯೆಯ ಜೊತೆಗೆ ಪಿಒಕೆಯ ಸಮಸ್ಯೆಯನ್ನೂ ಹೊತ್ತುಕೊಂಡಂತಾಗುತ್ತದೆ..
ಭಾರತ ವಿಭಜನೆಯಾದ ಸಂದರ್ಭದಲ್ಲಿ ಪಿಒಕೆಯನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿರುವುದರ ಬಗ್ಗೆ ಈಗಿನ ಬಿಜೆಪಿ ಸರ್ಕಾರಕ್ಕೆ ಅಸಮಾಧಾನವಿದೆ. ಈ ವಿಚಾರ ಸಂಸತ್ತಿನಲ್ಲಿಯೂ ಪ್ರಸ್ತಾಪವಾಗಿದೆ. ಸಂಸತ್ತಿನಲ್ಲಿ ಗೃಹ ಸಚಿವರು ಪಿಒಕೆಯನ್ನು ಭಾರತದ ಭಾಗ ಮಾಡಿಕೊಳ್ಳುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.
ಈ ಮಧ್ಯೆ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಸಾಲದ ಕಂತು ಮತ್ತು ಬಡ್ಡಿ ಕಟ್ಟಲೂ ಹಣವಿಲ್ಲದಾಗಿದೆ. ಪೆಟ್ರೋಲ್, ಡೀಸೆಲ್, ಅಗತ್ಯ ಔಷಧ, ವಿದ್ಯುತ್ ಉತ್ಪಾದನೆಗಾಗಿ ತೈಲವನ್ನು ಆಮದು ಮಾಡಿಕೊಳ್ಳಲು ಡಾಲರ್ ಹಣ ಇಲ್ಲ. ಹೀಗಾಗಿ ಪ್ರಧಾನಿ ಶಹಬಾಜ್ ಷರೀಫ್ ಅವರು ಸಾಲಕ್ಕಾಗಿ ಪರದಾಡುತ್ತಿದ್ದಾರೆ. ಬಹುಶಃ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಭಾರತದೊಡನೆ ಮಾತುಕತೆಯ ನಾಟಕಮಾಡಿದ್ದಾರೆ. ’ಅಲ್ ಅರೇಬಿಯಾ’ ಟಿವಿ ಸುದ್ದಿ ಮಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಈ ಪ್ರಸ್ತಾಪ ಮಾಡಿ ಈಗ ನಗೆಪಾಟಲಿಗೆ ಗುರಿಯಾಗಿದ್ದಾರೆ. ಕಾಶ್ಮೀರ ವಿವಾದವೂ ಸೇರಿದಂತೆ ಎಲ್ಲ ಸೂಕ್ಷ್ಮ ವಿವಾದಗಳೂ ಬಗೆಹರಿಯಬೇಕಿದೆ ಎಂದು ಹೇಳಿದ್ದಾರೆ. ಆದರೆ ಹಿಂದಿನ ನಾಯಕರಂತೆೆಯೇ ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಪ್ರತಿಯಾಗಿ ಭಾರತವೂ ಕೆಲವು ಷರತ್ತುಗಳನ್ನು ಹಾಕಿದೆ. ಮೊದಲು ಕಾಶ್ಮೀರದಲ್ಲಿ ಭಯೋತ್ಪಾದಕರ ಹಾವಳಿ ನಿಲ್ಲಬೇಕು. ಉತ್ತಮ ವಾತಾವರಣ ಸೃಷ್ಟಿಯಾದರೆ ಭಾರತ ಮಾತುಕತೆಗೆ ಸಿದ್ಧ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗಾಚಿ ತಿಳಿಸಿದ್ದಾರೆ. ಹೀಗಾಗಿ ಮಾತುಕತೆಗಳು ಸದ್ಯಕ್ಕೆ ಆರಂಭವಾಗುವ ಸೂಚನೆಯಿಲ್ಲ.
ಜನರಿಗೆ ಊಟದ್ದೇ ಸಮಸ್ಯೆಯಾಗಿರುವಾಗ ಇತರ ಸಮಸ್ಯೆಗಳ ಕಡೆ ಗಮನ ಸಹಜವಾಗಿ ಇಲ್ಲ. ಪಾಕಿಸ್ತಾನಕ್ಕೆ ಈಗ ಸ್ನೇಹಿತರೇ ಇಲ್ಲವಾಗಿದೆ. ಎಷ್ಟು ಸಾರಿ ಭಿಕ್ಷಾ ಪಾತ್ರೆ ಹಿಡಿದು ಅರಬ್ ಮಿತ್ರ ದೇಶಗಳನ್ನು ಸಾಲ ಕೇಳಲು ಸಾಧ್ಯ? ತಮಗೆ ಮುಜುಗರವಾಗುತ್ತಿದೆ ಎಂದು ಪ್ರಧಾನಿ ಷಹಬಾದ್ ಷರೀಫ್ ಅವರೇ ಹೇಳಿದ್ದಾರೆ. ಭಾರತದ ಜೊತೆ ಸ್ನೇಹದಿಂದ ಇದ್ದಿದ್ದರೆ ಬಹುಶಃ ನೆರವು ಸಿಗುತ್ತಿತ್ತು. ಶ್ರೀಲಂಕಾ ಇಂಥದ್ದೇ ಬಿಕ್ಕಟ್ಟು ಎದುರಿಸಿದಾಗ ಭಾರತ ಅಪಾರ ಪ್ರಮಾಣದಲ್ಲಿ ನೆರವಾಗಿದೆ. ಐಎಂಎಫ್‌ನಿಂದ ಸಾಲ ಪಡೆಯಲು ಚೀನಾ, ಜಪಾನ್ ಜೊತೆಗೆ ಭಾರತವೂ ಗ್ಯಾರಂಟಿಗೆ ಸಹಿ ಮಾಡಿದೆ. ಪಾಕಿಸ್ತಾನಕ್ಕೂ ಇದೇ ರೀತಿ ಭಾರತ ನೆರವು ನೀಡಬಹುದಿತ್ತು. ಆದರೆ ಪಾಕಿಸ್ತಾನ ಭಾರತದ ಜೊತೆಗೆ ಸ್ನೇಹ ಉಳಿಸಿಕೊಂಡಿಲ್ಲ. ಪಾಕಿಸ್ತಾನದ ಈ ಸ್ಥಿತಿ ಅಂತಿಮವಾಗಿ ರಾಜಕೀಯ ಬಿಕ್ಕಟ್ಟಾಗಿ ಪರಿಣಮಿಸಬಹುದು. ತಾನೇ ಸಾಕಿದ ತೆಹರೀಕಿ ಇ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಪಾಕಿಸ್ತಾನದ ಆಡಳಿತವನ್ನು ವಶಪಡಿಸಿಕೊಳ್ಳಲು ಹೊಂಚುಹಾಕುತ್ತಿರುವಂತಿದೆ. ಈ ಬೆಳವಣಿಗೆಗಳನ್ನು ನೋಡಿದರೆ ಅಲ್ಲಿ ಮಿಲಿಟರಿ ಆಡಳಿತ ಬಂದರೆ ಆಶ್ಚರ್ಯವಿಲ್ಲ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago