೭೫ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸನ್ನದ್ಧಿನಲ್ಲಿ ಖಾದಿ ಗ್ರಾಮೋದ್ಯೋಗಕ್ಕೆ ಕೇಂದ್ರ ಸರ್ಕಾರ ಮರ್ಮಾಘಾತವನ್ನೇ ನೀಡಿದೆ. ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ಉತ್ಪನ್ನಗಳಲ್ಲೂ ಖಾಸಗಿ ಮತ್ತು ವಿದೇಶಿ ಬಂಡವಾಳಶಾಹಿಗಳ ಆಶೋತ್ತರಗಳಿಗೆ ಮಣೆಹಾಕುತ್ತಿರುವ ಕೇಂದ್ರ ಸರ್ಕಾರ ಇದೀಗ ತ್ರಿವರ್ಣ ಧ್ವಜದ ಉತ್ಪಾದನೆಯಲ್ಲೂ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಟ್ಟಿದೆ.
ಭಾರತದ ಧ್ವಜ ಸಂಹಿತೆ ೨೦೦೨ ಮತ್ತು ೧೯೭೧ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆಯನ್ನು ಜುಲೈ ೨೦, ೨೦೨೨ರ ಆದೇಶದ ಮೂಲಕ ಹೊಸದಾಗಿ ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ತ್ರಿವರ್ಣ ಧ್ವಜವನ್ನು ಹಾರಿಸಲು ಸಮ್ಮತಿಸಲಾಗಿತ್ತು. ಆದರೀಗ ಧ್ವಜವನ್ನು ತೆರೆದ ಸ್ಥಳಗಳಲ್ಲಿ, ‘ಹರ್ ಘರ್ ತಿರಂಗ’ ಅಭಿಯಾನದೊಂದಿಗೆ ಆಗಸ್ಟ್ ೧೩ರಿಂದ ೧೫ರವರೆಗೆ ದೇಶದ ಪ್ರತೀ ಮನೆಯ ಮೇಲೂ ಹಗಲು – ರಾತ್ರಿ ಪೂರ್ತಿ ಧ್ವಜ ಹಾರಿಸುವ ಬದಲಾವಣೆಯನ್ನು ಮಾಡಲಾಗಿದೆ. ಈ ಮೊದಲು ಯಂತ್ರದಿಂದ ಧ್ವಜ ತಯಾರಿಸುವುದನ್ನು ಮತ್ತು ಧ್ವಜ ತಯಾರಿಕೆಯಲ್ಲಿ ಪಾಲಿಸ್ಟರ್ ಬಳಕೆಯನ್ನು ನಿಷೇಧಿಸಲಾಗಿತ್ತು. ಆದರೀಗ ಪಾಲಿಸ್ಟರ್ ಉತ್ಪನ್ನಕ್ಕೆ ಮತ್ತು ಯಂತ್ರಗಳಿಂದ ತಯಾರಿಸಿದ ಧ್ವಜಗಳಿಗೆ ಮಾನ್ಯತೆ ನೀಡಲಾಗಿದೆ. ಜೊತೆಗೆ ರಾಷ್ಟ್ರಧ್ವಜವನ್ನು ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಸ್ಟರ್, ಉಣ್ಣೆ, ರೇಷ್ಮೆ, ಖಾದಿಯನ್ನು ಬಳಸಿ ತಯಾರಿಸಲಾಗುವುದು ಎಂದು ಆದೇಶಿಸಲಾಗಿದೆ.
ಧ್ವಜ ಸಂಹಿತೆಗೆ ಹೊಸದಾಗಿ ತಂದಿರುವ ತಿದ್ದುಪಡಿ ಉದ್ದೇಶ ಇದೀಗ ಎಲ್ಲರಿಗೂ ಅರ್ಥವಾಗಬೇಕಿದೆ. ಎಲ್ಲವನ್ನೂ ತನ್ನ ಸ್ವಂತ ಲಾಭಕಿಟ್ಟು ನೋಡುತ್ತಿರುವ ಕೇಂದ್ರ ಸರ್ಕಾರದ ಮನಸ್ಥಿತಿಯು ವ್ಯಾವಹಾರಿಕ ತಂತ್ರ ಎಂದು. ಇದು ಗಾಂಧಿ ಕನಸಿನ ಕೂಸಾದ ಗ್ರಾಮಸ್ವರಾಜ್ಯ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ದೇಶಿ ಉತ್ಪನ್ನದ ಬಳಕೆಗೆ ವಿರುದ್ಧ ನಿಲುವಾಗಿದೆ. ದೇಶದಲ್ಲಿ ರಾಷ್ಟ್ರಧ್ವಜ ಸಿದ್ಧಪಡಿಸೋ ಏಕೈಕ ಸಂಸ್ಥೆ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಾಗಿದೆ. ಮಾನಕ ಬ್ಯೂರೋದಿಂದ ಮಾನ್ಯತೆ ಪಡೆದ ದೇಶದ ಏಕೈಕ ರಾಷ್ಟ್ರದ್ವಜ ತಯಾರಿಕಾ ಸಂಸ್ಥೆ ಇದಾಗಿದ್ದು ಕರ್ನಾಟಕದಲ್ಲಿರುವುದು ಕನ್ನಡಿಗರ ಹೆಮ್ಮೆಯ ಸಂಗತಿ. ಕೇಂದ್ರ ಸರ್ಕಾರ ಈ ಬಾರಿ ಯಾರು ಬೇಕಾದರೂ, ಯಾವ ಬಟ್ಟೆಯಲ್ಲಿ ಬೇಕಾದರೂ ರಾಷ್ಟ್ರ ಧ್ವಜವನ್ನು ಸಿದ್ಧಗೊಳಿಸಬಹುದು ಎಂದು ಕಾನೂನು ತಿದ್ದುಪಡಿ ಮಾಡಿರುವುದು ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯ (Khadi Village Industries Institute) ಬೆಳೆವಣಿಗೆಯನ್ನು ನಾಶಪಡಿಸಿದಂತೆಯೇ!
೭೫ರ ಸಂಭ್ರಮಕ್ಕೆ ದೇಶವೇ ಸಂತೋಷ ಮತ್ತು ಕೂತೂಹಲದಲ್ಲಿ ಇರುವಾಗಲೇ ಧ್ವಜ ತಯಾರಿಕಾ ಘಟಕಕ್ಕೆ ಸಿಡಿಲು ಬಡಿದಂತಾಗಿದ್ದು; ಸರ್ಕಾರದ ಈ ನಿರ್ಧಾರದಿಂದ ಖಾದಿ ಗ್ರಾಮೋದ್ಯೋಗ ಸಂಸ್ಥೆಯು ಅಕ್ಷರಶಃ ಬೀದಿಗೆ ಬರೋ ಸ್ಥಿತಿ ನಿರ್ಮಾಣವಾಗಲಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಗ್ರಾಮೋದ್ಯೋಗ ಸಂಸ್ಥೆ ಇದೀಗ ಮುಚ್ಚುವ ಆತಂಕ ಎದುರಿಸುತ್ತಿದೆ. ಇದರೊಂದಿಗೆ ಸಾವಿರಾರು ಜನರು ನಿರುದ್ಯೋಗಿಗಳಾಗುವ ಭಯದಲ್ಲಿದ್ದಾರೆ.
‘ಸರ್ಕಾರದ ಮಾತು ನಂಬಿ ನಾವು ಧ್ವಜ ತಯಾರಿಸಿದ್ದೇವೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ ೭೦ ರಿಂದ ೮೦ ಲಕ್ಷ ರೂಪಾಯಿ ಧ್ವಜ ಮಾರಾಟ ಮಾಡುತ್ತಿದ್ದೆವು. ಆದರೆ ಈ ವರ್ಷ ಕೇವಲ ೧೨ ಲಕ್ಷ ರೂಪಾಯಿ ಧ್ವಜ ಮಾರಾಟವಾಗಿದೆ. ಆದರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಧ್ವಜಗಳ ಸಂಗ್ರಹ ಇದ್ದಲ್ಲಿಯೇ ಇದೆ. ಅವುಗಳ ಮಾರಾಟ ಹೇಗೆಂಬುದು ತೋಚದಂತಾಗಿದೆ’ ಎಂದು ಬೆಂಗೇರಿ ಖಾದಿ ಸಂಸ್ಥೆಯು ಸುದ್ದಿ ಮಾಧ್ಯಮವೊಂದರಲ್ಲಿ ತಮ್ಮ ದುಸ್ಥಿತಿಯನ್ನು ವ್ಯಕ್ತಪಡಿಸಿದೆ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರಿಗೆ ಬಹಿಷ್ಕಾರ ಹಾಕಲು ಬಳಸಿದ ಮಹಾತಂತ್ರಗಳಲ್ಲಿ ಖಾದಿ ಉದ್ಯಮ ಅಥವಾ ಸ್ವದೇಶಿ ಉತ್ಪನ್ನದ ಬಳಕೆ ಮಹತ್ವದ್ದು. ಆದರೆ ಇದೀಗ ವಿದೇಶಿ ಉತ್ಪನ್ನಗಳಿಗೆ ಮಣೆಹಾಕಿ ಖಾದಿ ಉದ್ಯಮವನ್ನು ನಿರ್ಲಕ್ಷಿಸಿ ಅದೇ ವಿದೇಶಿಗರನ್ನು ವ್ಯಾಪಾರದ ದೃಷ್ಟಿಯಿಂದ ಭಾರತಕ್ಕೆ ಮರಳಿ ಕರೆತರುತ್ತಿರುವ ಉದ್ದೇಶ ಆಜಾದೀಕಾ ಅಮೃತ ಮಹೋತ್ಸವದ ವೇಳೆಯಲ್ಲಾಗುತ್ತಿರುವ ಮಹಾ ಪ್ರಮಾದ!
ಈ ಪಾಲಿಸ್ಟರ್ ಬಟ್ಟೆಯಲ್ಲಿ ತ್ರಿವರ್ಣ ಧ್ವಜ ತಯಾರಿಸಲು ಮತ್ತು ಧ್ವಜ ತಯಾರಿಕೆಯಲ್ಲಿ ಯಂತ್ರಗಳ ಬಳಕೆಗೆ ಕೇಂದ್ರ ಸರ್ಕಾರ ಮೇಕ್ ಇನ್ ಚೈನಾ ಕಂಪನಿಗಳಿಗೆ ಅವಕಾಶ ಮಾಡಿ ಕೊಡಲೊರಟಿರುವುದು ರಾಷ್ಟ್ರೀಯ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾಗಿದೆ. ನಮ್ಮ ರಾಷ್ಟ್ರ ಧ್ವಜವನ್ನು ನಮ್ಮ ದೇಶದಲ್ಲಿ ಉತ್ಪಾದಿಸದೇ ಬೇರೆಲ್ಲೋ ಉತ್ಪಾದಿಸುತ್ತಿರುವುದು ನಮ್ಮನ್ನು ಹೆತ್ತ ತಂದೆ- ತಾಯಿಗಳನ್ನು ಎಲ್ಲೋ ಅನಾಥ ಆಶ್ರಮದಲ್ಲಿಟ್ಟು ನೋಡಿಕೊಂಡಂತಾಗುತ್ತದೆ. ಇದರಿಂದ ತ್ರಿವರ್ಣ ಧ್ವಜಕ್ಕೆ ಈ ಬಾರಿ ೭೫ನೇ ಸ್ವಾತಂತ್ರ್ಯೋತ್ಸವದ ಮಹಾ ಸುಗಳಿಗೆಯಲ್ಲಿ ಆಗುತ್ತಿರುವ ಭಾರೀ ಅವಮಾನ ಎಂದೇ ಪರಿಗಣಿಸಬಹುದು.
ಪಾಲಿಸ್ಟರ್ ಬಳಕೆ ಈ ದೃಷ್ಟಿಯಲ್ಲಿ ಪರಿಸರ ಸ್ನೇಹಿಯಲ್ಲ ಮತ್ತು ಸ್ವದೇಶಿ ಚಿಂತನೆಯೂ ಅಲ್ಲ. ಯಂತ್ರಗಳಿಗೆ ಮಾನ್ಯತೆ ನೀಡಿರುವುದು ಗುಡಿಕೈಗಾರಿಕೆಗಳ ಜೀವಂತಿಕೆಗೆ ಮಾರಕ ಎನ್ನುವುದು ಸರ್ಕಾರಕ್ಕೆ ಅರಿವಾಗಬೇಕಿದೆ. ಭಾರತೀಯರ ಮತ್ತು ರಾಷ್ಟ್ರೀಯ ಗೌರವದ ಹಿತದೃಷ್ಟಿಯಲ್ಲಿ ಈ ತಿದ್ದುಪಡಿಯನ್ನು ಈ ಬಾರಿಯ ಸ್ವಾತಂತ್ರೋತ್ಸವ ಆಚರಣೆಗೂ ಮುನ್ನ ಹಿಂಪಡೆದರೆ ಸರ್ವೋದಯದ ಒಳಿತೆಂದೇ ಭಾವನೆ.
ಭಾರತವನ್ನು ಈ ದಶಕದಲ್ಲಿ ಭಾರೀ ಬದಲಾವಣೆಗೆ ಒಳಪಡಿಸುತ್ತಿರುವ ಹಿನ್ನಲೆಯಲ್ಲಿ ಎಲ್ಲವೂ ಕೆಡುಕುಗಳೇ ಇವೆ ಎನ್ನುವುದು ಸರಿಯಲ್ಲ ಎಂಬುವುದು ಸಾರ್ವಜನಿಕರಿಗೂ ತಿಳಿದಿದೆ. ಸರ್ಕಾರದ ಹಿತಚಿಂತನೆಗಳಿಗೆ ದೇಶದ ಜನತೆಯ ಬೆಂಬಲವೂ ಇದೆ. ಆದರೆ ಈ ಎಲ್ಲಾ ಬೆಳೆವಣಿಗೆಗಳು ಅಥವಾ ಹೊಸ ಬದಲಾವಣೆಗಳಲ್ಲಿ ಸರ್ಕಾರದ ಸ್ವಾರ್ಥ ಮತ್ತು ನಿರಂಕುಶ ಆಡಳಿತ ಇನ್ನೊಂದು ಬಗೆಯಲ್ಲಿ ಗೋಚರಿಸುತ್ತಿರುವುದು ಸಾರ್ವಜನಿಕರ ಗ್ರಹಿಕೆಗೆ ಈಗಾಗಲೇ ದಕ್ಕಿದೆ. ಇದರ ಪರಿಣಾಮ ಪ್ರಜಾಪ್ರಭುತ್ವದ ಆಶೋತ್ತರಗಳಿಗೆ ಯಾರೇ ಅಡ್ಡಿಪಡಿಸಿದರೂ ದೇಶದ ಜನತೆ ಉಗ್ರವಾದ ಆಂದೋಲನಕ್ಕೆ ಸಜ್ಜಾಗುತ್ತಾರೆ ಎನ್ನುವುದಂತೂ ಸತ್ಯ. ಹಾಗಾಗಿ ಭಾರತದಂಥಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಡಳಿತಕ್ಕೆ ಬರುವಂತಹ ಯಾವುದೇ ಸರ್ಕಾರ ದೇಶದ ಸಾಂವಿಧಾನಿಕ ನೀತಿಗೆ ಬದ್ಧವಾಗಿದ್ದರೆ ಎಲ್ಲವೂ ಸೌಖ್ಯ!
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…