ಹುಲ್ಲುಗಾವಲುಗಳೇ ಅಳಿದ ಭಾರತದಲ್ಲಿ ಚೀತಾ ಪುನರುತ್ಥಾನ!
ಏಳು ದಶಕಗಳ ಹಿಂದೆ ಭಾರತದ ಅರಣ್ಯದಿಂದಲೇ ಇಲ್ಲವಾದ ವಿಶ್ವದ ಅತಿ ವೇಗದಲ್ಲಿ ಓಡುವ ಚೀತಾ ಎನ್ನುವ ವಿಶಿಷ್ಟ ಕಾಡು ಪ್ರಾಣಿಗೆ ಮತ್ತೆ ಭಾರತದಲ್ಲಿ ಪುನರುತ್ಥಾನಗೊಳ್ಳುವ ಕಾಲ ಕೂಡಿ ಬಂದಿದೆ. ಮೂರು ದಶಕಗಳಿಂದಲೇ ಚರ್ಚೆಯಾಗುತ್ತಿರುವ, ಹದಿಮೂರು ವರ್ಷದ ಹಿಂದೆಯೇ ಯುಪಿಎ ಸರ್ಕಾರದ ಅವಧಿಯಲ್ಲಿ ಪರಿಸರ ಸಚಿವರಾಗಿದ್ದ ಜೈರಾಂ ರಮೇಶ್ ಅವರ ಕಾಲದಲ್ಲಿಯೇ ಒಪ್ಪಂದವಾಗಿದ್ದ ಚೀತಾ ಪುನರುತ್ಥಾನದ ಯೋಜನೆ ಈಗ ಜಾರಿಗೆ ಬರುತ್ತಿದೆ. ಅದೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನುಮ ದಿನದ ದಿನದಂದು ಚೀತಾಗಳನ್ನು ಭಾರತದ ಕಾಡಿನಲ್ಲಿ ಪುನರ್ ಸ್ಥಾಪಿಸಿ ದೀರ್ಘ ನೆಲೆಯಲ್ಲಿ ಮತ್ತೆ ಇದರ ವೈಭವ ಮರುಕಳಿಸುವಂತೆ ಮಾಡುವ ಉದ್ದೇಶವಿದೆ. ಮೋದಿ ಅವರು ಚೀತಾದಷ್ಟೇ ವೇಗದ ಆಡಳಿತ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಈ ದಿನವನ್ನೇ ಆಯ್ಕೆ ಮಾಡಿಕೊಂಡಿರಬಹುದು! ಅದು ಒತ್ತಟ್ಟಿಗಿರಲಿ.
ಆದರೆ ನಮ್ಮ ಮನೆಯ ಅಕ್ಕಪಕ್ಕದಲ್ಲಿ ಬದುಕು ಕಂಡಿಕೊಂಡಿರುವ ಚಿರತೆಯ ಹಿರಿಯಣ್ಣ ಈ ಚೀತಾ. ದೊಡ್ಡ ಬೆಕ್ಕುಗಳ ಜಾತಿಯ ಪ್ರಮುಖ ಮೂರು ತಳಿಗಳಲ್ಲಿ ಚೀತಾಗಳು ಹೆಚ್ಚು ಬದುಕು ಕಂಡಿಕೊಂಡಿದ್ದು ಏಷಿಯಾ ಹಾಗೂ ಆಫ್ರಿಕಾದಲ್ಲಿ. ಏಕೆಂದರೆ ಈ ಎರಡು ಬಗೆಯ ಚೀತಾಗಳಿಗೆ ಬೇಕಾದದ್ದು ಸಮೃದ್ಧ ಹುಲ್ಲುಗಾವಲು ಹಾಗೂ ಆಹಾರದ ನೆಲೆ. ಭಾರತದಲ್ಲೂ ಹೆಚ್ಚಾಗಿದ್ದ ಚೀತಾಗಳು ಬೇಟೆ, ಆವಾಸಸ್ಥಾನದ ಕೊರತೆಯಿಂದ ನಿಧಾನವಾಗಿ ಕಣ್ಮರೆಯಾದವು. ೧೯೪೭ರಲ್ಲಿ ಛತ್ತೀಸಗಢದ ಸಾಲ್ ಅರಣ್ಯದಲ್ಲಿದ್ದ ಮೂರು ಚೀತಾಗಳನ್ನು ಬೇಟೆಯಾಡಲಾಗಿತ್ತು.ಆಗಲೇ ಇವುಗಳ ಅವಸಾನವಾಗಿತ್ತು. ೧೯೫೨ರಲ್ಲಿ ಚೀತಾಗಳನ್ನು ಅಳಿವಿನಂಚಿಗೆ ಸರಿದ ಪ್ರಾಣಿ ಎಂದು ಘೋಷಿಸಲಾಯಿತು. ಇಡೀ ವಿಶ್ವದಲ್ಲಿ ಏಳು ಸಾವಿರ ಚೀತಾಗಳಿರುವ ಅಂದಾಜಿದೆ. ಮೂರನೇ ಒಂದು ಭಾಗ ಆಫ್ರಿಕಾದಲ್ಲಿವೆ. ಈಗಲೂ ಅಲ್ಲಿ ಇರುವ ನೈಸರ್ಗಿಕ ಹುಲ್ಲುಗಾವಲು ಕಾರಣಕ್ಕೆ ಸಂತತಿ ಸಮೃದ್ಧ್ದಿಯಾಗಿದೆ. ಇರಾನ್ ಭಾಗದಲ್ಲಿ ಏಷಿಯನ್ ಚೀತಾಗಳ ಪ್ರಮಾಣ ಸಾಕಷ್ಟಿದೆ. ಇದೇ ಚೀತಾ ಗಳು ಕರ್ನಾಟಕದ ಹುಲ್ಲುಗಾವಲುಗಳಲ್ಲೂ ನೆಲೆ ಕಂಡುಕೊಂಡಿದ್ದವು. ಹಳೇ ಮೈಸೂರು ಭಾಗದ ಕೊಳ್ಳೇಗಾಲ ಸಮೀಪ ೧೯೦೮ರಲ್ಲಿ ಚೀತಾ ಸಂತತಿ ಇದ್ದುದನ್ನು ಬ್ರಿಟಿಷ್ ಬೇಟೆಗಾರರು ಉಲ್ಲೇಖಿಸುತ್ತಾರೆ. ಏಕೆಂದರೆ ಹುಲ್ಲುಗಾವಲು ಇಲ್ಲಿ ಯಥೇಚ್ಛವಾಗಿದ್ದ ಸಂಕೇತವಿದು. ಚೀತಾ ಭಾರತದಲ್ಲಿ ಅಳಿದ ಬಳಿಕ ಆಫ್ರಿಕಾ ಚೀತಾಗಳನ್ನು ನಮ್ಮ ಮೃಗಾಲಯಗಳಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ದೇಶದ ಮೂರು ಮೃಗಾಲಯಗಳಲ್ಲಿ ಈಗಲೂ ಚೀತಾಗಳಿವೆ. ಅದರಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯವೂ ಒಂದು.
ದಶಕದ ಹಿಂದೆಯೇ ಚೀತಾ ತಂದರೂ ಸೂಕ್ತ ವಾತಾವರಣವಿಲ್ಲದೇ ಅವು ಮೈಸೂರಲ್ಲಿ ಬದುಕುಳಿಯಲಿಲ್ಲ. ಎರಡು ವರ್ಷಗಳ ಹಿಂದೆ ಮತ್ತೆ ಮೂರು ಚೀತಾಗಳನ್ಬು ಮೈಸೂರಿಗೆ ತರಲಾಗಿದೆ. ಈಗ ಅವುಗಳಿಗೆ ಪ್ರತ್ಯೇಕ ಜಾಗ ಕಲ್ಪಿಸಿರುವ ಜತೆಗೆ ಉತ್ತಮ ನಿರ್ವಹಣೆಯಿಂದ ಸಹಜ ಬದುಕು ಕಂಡುಕೊಂಡಿವೆ.
ಭಾರತದಲ್ಲಿ ಚೀತಾ ನಾಶವಾಗಲು ಸಾಕಷ್ಟು ಕಾರಣಗಳಿವೆ. ಶತಮಾನದ ಹಿಂದೆ ಹಲವು ರಾಜ್ಯಗಳಲ್ಲಿ ಹುಲ್ಲುಗಾವಲು ಯಥೇಚ್ಛವಾಗಿದ್ದವು. ಕಾಡಿನ ಮೇಲಿನ ಒತ್ತಡ, ಮಿತಿ ಮೀರಿದ ಬೇಟೆ ಕಾರಣದಿಂದ ವನ್ಯಜೀವಿ ಕಡಿಮೆಯಾಗಿ ಕಾಡು ನಾಶವಾಗಿ ಹುಲ್ಲುಗಾವಲು ಕ್ಷೀಣಿಸಿದೆ. ಇದರೊಟ್ಟಿಗೆ ಅರಣ್ಯ ಇಲಾಖೆ ರೂಪಿಸಿದ ಸಾಮಾಜಿಕ ಅರಣ್ಯದ ತಪ್ಪು ನೀತಿಯಿಂದಾಗಿ ನೀಲಗಿರಿಯಂಥ ಮರಗಳನ್ನು ಬೆಳೆಸಿ ಹುಲ್ಲುಗಾವಲಂತೂ ಬಹುತೇಕ ನಾಶವಾಗಿವೆ. ಈಗ ಇಂಥ ಹುಲ್ಲುಗಾವಲು ಇಲ್ಲದೇ ಚೀತಾವನ್ನು ಸಂರಕ್ಷಣೆ ಮಾಡಲು ಸಾಧ್ಯವೇ ಎನ್ನುವ ದೊಡ್ಡ ಪ್ರಶ್ನೆ ನಮ್ಮ ಮುಂದಿದೆ. ಏಕೆಂದರೆ ಹುಲ್ಲುಗಾವಲು ಪ್ರದೇಶದಲ್ಲಿಯೇ ಚೀತಾ ಜತೆಗೆ ಹೈನಾ, ತೋಳಗಳೂ ನೆಲೆಸಿವೆ. ಚೀತಾದ ಆಹಾರ ಸರಪಳಿಯಾದ ಕೃಷ್ಣ ಮೃಗ, ಚಿಂಕಾರಗಳೂ ಇಲ್ಲಿಯೇ ಇವೆ. ಬಹುತೇಕ ಕಡೆ ಈ ಆಹಾರ ಸರಪಳಿ ಕಡಿದು ಹೋಗಿದೆ. ಅರಣ್ಯ ಪ್ರದೇಶಗಳೂ ಜನವಸತಿ ಪ್ರದೇಶಗಳಿಗೆ ಹತ್ತಿರವಾಗಿವೆ. ವನ್ಯಪ್ರಾಣಿಗಳ ಮೇಲೆ ಹಿಂದೆ ಇದ್ದ ಪ್ರೀತಿಯೂ ಕಡಿಮೆಯಾಗಿ ನಮಗೆ ತೊಂದರೆಯಾದರೆ ವಿಷವಿಕ್ಕಿ ಅವುಗಳನ್ಬು ಹೊಸಕಿ ಹಾಕುತ್ತೇವೆ ಎನ್ನುವ ಮನುಷ್ಯನ ನಡವಳಿಕೆಯನ್ನು ಕಂಡಿದ್ದೇವೆ. ಆವಾಸಸ್ಥಾನವೇ ಕಡಿಮೆಯಾಗಿರುವ, ಜನರ ಯೋಚನೆಯೂ ಭಿನ್ನವಿರುವಾಗ ಭಾರತದಲ್ಲಿ ಚೀತಾ ಪುನರುತ್ಥಾನ ಯೋಜನೆಯ ಜಾರಿ ನಿರೀಕ್ಷೆಯಂತೆ ಆಗಬಹುದೇ ಎಂಬ ಪ್ರಶ್ನೆ ಪರಿಸರ ಪ್ರಿಯರ ಮನಸ್ಸಿನಲ್ಲಿದೆ.
ದೇಶದಲ್ಲಿ ಹುಲಿ, ಆನೆ ಸಹಿತ ೧೧ ಪ್ರಾಣಿ, ಪಕ್ಷಿಗಳ ಸಂರಕ್ಷಣೆ ಯೋಜನೆ ಜಾರಿಯಲ್ಲಿದೆ. ಇದರಿಂದ ಕೋಟಿಗಟ್ಟಲೇ ಹಣವೂ ಕಾಡಿನೊಳಗೆ ಹರಿದರೂ ಒಂದಷ್ಟು ಉಪಯೋಗವೂ ಆಗಿದೆ. ಎಷ್ಟು ಎನ್ನುವ ವಿಮರ್ಶೆ ಆಗುವ ಸಮಯದಲ್ಲಿಯೇ ಹುಲಿ ಯೋಜನೆಯಡಿ ವಿಶ್ವದ ಮೊದಲನೇ ಅಂತರ ಖಂಡ ನಡುವಿನ ಚೀತಾ ಪುನರುತ್ಥಾನದ ಕಾರ್ಯಕ್ರಮ ರೂಪಿಸಲಾಗಿದೆ.
ಮಧ್ಯಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡ ೨೫ ಹಳ್ಳಿಗಳ ೧೫೦೦ಕ್ಕೂ ಕುಟುಂಬಗಳನ್ನು ಈಗಾಗಲೇ ಪರಿಹಾರ ನೀಡಿ ಸ್ಥಳಾಂತರಿಸಲಾಗಿದೆ. ತೈಲ ಸಂಸ್ಥೆಗಳು ಸೇರಿ ಹಲವು ಸರ್ಕಾರಿ ಸಂಸ್ಥೆಗಳು ಸಿಎಸ್‌ಆರ್ ಅನುದಾನವನ್ನು ಈ ಕಾರ್ಯಕ್ರಮಕ್ಕೆ ಹಸ್ತಾಂತರಿಸಿವೆ.
‘ಭಾರತದಲ್ಲಿ ಪ್ರಾಣಿಯೊಂದರ ಪುನರುತ್ಥಾನಕ್ಕೆ ಇಷ್ಟು ದೊಡ್ಡ ಕಾರ್ಯಕ್ರಮ ರೂಪಿಸಿರುವುದು ಇದೇ ಮೊದಲು. ಮಧ್ಯಪ್ರದೇಶದ ಕುನ್ಹೊ ಅರಣ್ಯದಲ್ಲಿ ನೈಸರ್ಗಿಕ ಹುಲ್ಲುಗಾವಲು ಕಡಿಮೆ. ಪ್ರತಿಷ್ಠೆಗಾಗಿ ಕಾರ್ಯಕ್ರಮ ರೂಪಿಸುವುದಕ್ಕಿಂತ ದೀರ್ಘ ನೆಲೆಯಲ್ಲಿ ಯೋಚಿಸಿದರೆ ಒಳ್ಳೆಯದು. ಚೀತಾ ತೀರ ನಾಜೂಕಿನ ಪ್ರಾಣಿ. ಜನರೂ ತಮ್ಮ ನೆಲೆಗಳ ಮೇಲೆ ದಾಳಿ ಮಾಡಿ ಆಗುವ ಪ್ರಾಣಹಾನಿ, ತಮ್ಮ ಕುರಿ, ಮೇಕೆಗಳ ಮೇಲೆ ದಾಳಿ ಮಾಡುವ ಪ್ರಾಣಿ ಕಾಟದಿಂದ ತಪ್ಪಿಸಿಕೊಳ್ಳಲು ವಿಷವಿಡುವ ಸನ್ನಿವೇಶಗಳು ಇವೆ.
ಹುಲ್ಲುಗಾವಲುಗಳಲ್ಲೇ ಬದುಕುವ, ಅಳಿವಂಚಿನಲ್ಲಿರುವ ಗೊರವಾಯನ ಹಕ್ಕಿ( ಗ್ರೇಟ್ ಇಂಡಿಯನ್ ಬಸ್ಟರ್ಡ್) ಸಂರಕ್ಷಣೆ ವಿಚಾರದಲ್ಲಿ ಆಗಿರುವ ತಪ್ಪುಗಳು ನಮ್ಮ ಮುಂದೆ ಇರುವಾಗ ಅರಣ್ಯ, ಪರಿಸರ ಇಲಾಖೆ ಅತಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲೇಬೇಕು’ ಎನ್ನುವ ಹಿರಿಯ ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ ಅವರ ಸಲಹೆ ಸೂಕ್ತವಾಗಿಯೇ ಇದೆ.
ನಿವೃತ್ತ ಐಎಎಸ್ ಅಧಿಕಾರಿ, ವನ್ಯಜೀವಿ ತಜ್ಞ, ಒಂದು ಕಾಲಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ವನ್ಯಜೀವಿ ಸಲಹೆಗಾರರಾಗಿದ್ದ ಡಾ.ರಂಜಿತ್ ಸಿನ್ಹಾ ಜಾಲಾ ಅವರ ಬಹು ವರ್ಷದ ಆಶಯದ ಜತೆಗೆ ಮಾರ್ಗದರ್ಶನದಲ್ಲಿಯೇ ಈಗ ಕಾರ್ಯಕ್ರಮ ನಿಗದಿಯಾಗಿದೆ.
ಆಫ್ರಿಕಾದ ನಮೀಬಿಯಾದಿಂದ ಐದು ಗಂಡು, ಮೂರು ಹೆಣ್ಣು ಸಹಿತ ಎಂಟು ಚೀತಾಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿಳಿದಿವೆ. ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಶನಿವಾರ ಬೆಳಿಗ್ಗೆ ಕುನ್ಹೋ ಅರಣ್ಯವನ್ನು ತಲುಪಲಿವೆ. ಹೈ ಪ್ರೊಫೈಲ್ ಕಾರ್ಯಕ್ರಮವಾಗಿ ಮಾರ್ಪಟ್ಟಿರುವ ಪುನರುತ್ಥಾನದ ಯೋಜನೆ ಗೆ ಪ್ರಧಾನಿ ಚಾಲನೆ ನೀಡುವರು. ಮುಂದಿನ ವರ್ಷದೊಳಗೆ ೫೦ ಚೀತಾಗಳು ಭಾರತ ಸೇರಲಿವೆ. ಮಧ್ಯಪ್ರದೇಶದ ನಂತರ ಮಹಾರಾಷ್ಟ್ರ, ಕರ್ನಾಟಕದ ಅರಣ್ಯದಲ್ಲಿ ಚೀತಾಗಳನ್ನು ಮೋದಿ ಅವರಂತೆ ಸ್ವಾಗತಿಸುವ ಕಾರ್ಯಕ್ರಮ ಮುಂದೆ ಇರಲಿವೆ. ಹಳೆ ಮೈಸೂರು ಭಾಗವೂ ಸೇರಿ ಕರ್ನಾಟಕದ ಬೀದರ್, ರಾಣೆಬೆನ್ನೂರುಗಳಲ್ಲಿ ಚೀತಾ ಆವಾಸಸ್ಥಾನಕ್ಕೆ ನಿಗದಿತ ಅರಣ್ಯಪ್ರದೇಶವಿದೆ. ಇದರ ಮಧ್ಯೆ ಪ್ರತ್ಯೇಕ ಚೀತಾ ಯೋಜನೆ, ಅದಕ್ಕೊಂದಿಷ್ಟು ಕೋಟಿ ರೂ ಅನುದಾನ, ಆಯಾ ರಾಜ್ಯಗಳಲ್ಲಿ ಕಾಡುವಾಸಿಗಳ ಸ್ಥಳಾಂತರ ಯೋಜನೆಗಳೂ ಸೃಷ್ಟಿಯಾಗಬಹುದು. ಭಾರೀ ಪ್ರಚಾರಕ್ಕಿಂತ ಚೀತಾಗಳು ಉಳಿದು ನೈಸರ್ಗಿಕ ಹುಲ್ಲುಗಾವಲು ಕಾಡು ವೃದ್ಧಿಯಾದರೆ ಮಾತ್ರ ಕಾರ್ಯಕ್ರಮಕ್ಕೆ ಅರ್ಥ ಬರಬಹುದು.