ನೆರವು ಕೋರಲು ತಡ ಮಾಡುವ ಸಂತ್ರಸ್ತರಿಗೆ ದೌರ್ಜನ್ಯವನ್ನು ಪ್ರತ್ಯಕ್ಷವಾಗಿ ಕಂಡಂತಹ ಸಂಬಂಧಿಕರು ಅಥವಾ ನೆರೆಹೊರೆಯವರು ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಬಹುಮಟ್ಟಿಗೆ ಸಹಾಯಕವಾಗುತ್ತಾರೆ. ಹಾಗೆಯೇ ಸಂತ್ರಸ್ತರಲ್ಲಿ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಇರುವ ಆತಂಕಗಳು, ಪತಿಯ ವಿವಾಹೇತರ ಸಂಬಂಧಗಳ ಬಗ್ಗೆ ಮಾಹಿತಿ ದೊರೆಯುವುದು, ದೌರ್ಜನ್ಯವು ಅತಿರೇಕಕ್ಕೆ ಹೋಗಿ ವೈದ್ಯಕೀಯ ನೆರವು ಅನಿವಾರ್ಯವಾಗುವುದು, ಇಂತಹ ಕೆಲವು ಅಂಶಗಳೂ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ನೆರವಾಗುತ್ತವೆ. ಹಣಕಾಸು ಅಭದ್ರತೆಯ ಕಾರಣಗಳಿಂದ, ಆಸ್ತಿ ಒಡೆತನಕ್ಕೆ ಸಂಬಂಽಸಿದಂತೆ ಪಿತೃ ಪ್ರಧಾನ ನಿಯಮಗಳಿಂದ ಸಂಬಂಧವನ್ನು ತೊರೆಯುವ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಹೆಣಗಾಡುವ ಸಂತ್ರಸ್ತರು ಈ ರೀತಿಯ ನೆರವುಗಳನ್ನು ಕೋರಲು ವಿಳಂಬ ಮಾಡುವುದು ಕಂಡುಬರುತ್ತದೆ.
ನಮ್ಮ ಸಮಾಜದಲ್ಲಿ ಲಿಂಗ ಅಸಮಾನತೆಯ ಸಾಮಾಜಿಕ ಕಟ್ಟುಪಾಡುಗಳು ಎಷ್ಟು ಬೇರೂರಿವೆ ಎಂದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ದತ್ತಾಂಶಗಳಲ್ಲಿ ವರದಿ ಮಾಡಿರುವಂತೆ, ಅನೇಕ ಸಂದರ್ಭಗಳಲ್ಲಿ ಹೆಂಡತಿಯನ್ನು ಗಂಡನಾದವನು ಹೊಡೆಯುವ ಅಥವಾ ಥಳಿಸುವ ಪ್ರಕರಣಗಳಲ್ಲಿ ಪುರುಷರಿಗಿಂತಲೂ ಮಹಿಳೆಯರೇ ಅದನ್ನು ಹೆಚ್ಚು ಸ್ವೀಕೃತ ಎಂದು ಭಾವಿಸುತ್ತಾರೆ. ಒಂದು ಸಂದರ್ಶನದಲ್ಲಿ ಸಂತ್ರಸ್ತೆಯು “ನಾವು ಇರುವ ಪರಿಸ್ಥಿತಿಯಲ್ಲಿ, ನಮ್ಮ ನೋವುಗಳ ಬಗ್ಗೆ ದೂರು ದಾಖಲಿಸುವುದು ಬಹಳ ಕಷ್ಟಕರ” ಎಂದು ಹೇಳುತ್ತಾರೆ. ತಮ್ಮ ಸಂಬಂಧಿಕರಲ್ಲಿ, ಬಂಧು ಬಾಂಧವರಲ್ಲಿ, ಸ್ನೇಹಿತರಲ್ಲಿ ತಾವು ಅನುಭವಿಸಿದ ಕೌಟುಂಬಿಕ ದೌರ್ಜನ್ಯವನ್ನು ಹೇಳಿಕೊಂಡಂತಹ ಸಂತ್ರಸ್ತೆಯರು ಒಂದು ರೀತಿಯ ನೆಮ್ಮದಿಯನ್ನು ಕಾಣುವುದೇ ಅಲ್ಲದೆ ತಮ್ಮ ಮೇಲಿನ ಹೊರೆಯನ್ನು ಕಳಚಿಕೊಂಡು ಭವಿಷ್ಯದಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ಭರವಸೆಯನ್ನು ತಾಳುತ್ತಾರೆ.
ದೌರ್ಜನ್ಯದ ಅನುಭವವನ್ನು ಹಂಚಿಕೊಳ್ಳುವುದು ಮಹಿಳೆಯರ ಪಾಲಿಗೆ ಒಂದು ದಿಟ್ಟ ಹೆಜ್ಜೆಯಾಗಿರುತ್ತದೆ. ಆದರೆ ಹಿಂಸಾತ್ಮಕ ಕೌಟುಂಬಿಕ ದೌರ್ಜನ್ಯದ ಅನುಭವಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಒದಗಿಸುವಂತಹ ನೆರವು ಮತ್ತು ಸಹಾಯಕ ಸೇವೆಗಳು ಸಂತ್ರಸ್ತೆಯರ ಪಾಲಿಗೆ ಭಾವುಕತೆ, ಭರವಸೆಗಳು, ಅನಿಶ್ಚಿತತೆ, ಭೀತಿ ಮತ್ತು ಅಸಮಾಧಾನಗಳನ್ನೊಳಗೊಂಡ ಪ್ರಯಾಸಕರ ಮಾರ್ಗವಾಗಿಯೇ ಕಾಣುತ್ತದೆ. ದೇಶವ್ಯಾಪಿಯಾಗಿ ಕೆಲವೇ ಸುರಕ್ಷತಾ ವಸತಿಗೃಹಗಳು ಇರುವುದರಿಂದ ಅಸಂಖ್ಯಾತ ಮಹಿಳೆಯರಿಗೆ ಅನ್ಯ ನೆಲೆಗಳೇ ಇಲ್ಲದಿರುವುದು ವಾಸ್ತವ ಸಂಗತಿಯಾಗಿದೆ. ಮತ್ತೊಂದೆಡೆ ಸ್ವತಂತ್ರವಾಗಿ ಆಸ್ತಿಪಾಸ್ತಿ ಹೊಂದಿರುವ ಅಥವಾ ಸಂಪರ್ಕಗಳನ್ನು ಹೊಂದಿರುವ ಅಥವಾ ಕೆಲವು ಸರ್ಕಾರೇತರ ಎನ್‌ಜಿಒಗಳ ಬೆಂಬಲವನ್ನು ಹೊಂದಿರುವ ಸಂತ್ರಸ್ತೆಯರು ಮಾತ್ರವೇ ನ್ಯಾಯ ವ್ಯವಸ್ಥೆಯ ಬಾಗಿಲು ಬಡಿಯಲು ಸಾಧ್ಯವಾಗುತ್ತದೆ.
ಹಾಗಾಗಿ ಅನೇಕ ಸಂತ್ರಸ್ತೆಯರಿಗೆ ಅವರ ಪರಿಸ್ಥಿತಿಗಳ ಸುಧಾರಣೆಯು ಆರ್ಥಿಕ ಸ್ವಾವಲಂಬನೆಯನ್ನು ಅವಲಂಬಿಸಿರುತ್ತದೆ. ಹೊಸ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ, ಹೊಸ ಜೀವನೋಪಾಯದ ಅವಕಾಶಗಳನ್ನು ಬಳಸಿಕೊಳ್ಳುವುದರ ಮೂಲಕ ಇದನ್ನು ಸಾಽಸಬಹುದಾಗಿದೆ.
ಪೊಲೀಸರ ಪಾತ್ರ
ತಮ್ಮ ದೌರ್ಜನ್ಯದ ಅನುಭವಗಳನ್ನು ಪೊಲೀಸರಿಗೆ ವರದಿ ಮಾಡಿರುವಂತಹ ಮಹಿಳೆಯರು ಸಿನಿಕತನದಿಂದಲೇ ಮಾತನಾಡುತ್ತಾರೆ. ಅಲ್ಪ ಸಂಖ್ಯೆಯ ಕೆಲವೇ ಮಹಿಳೆಯರು ಸಕಾರಾತ್ಮಕ ಅನುಭವವನ್ನು ಪಡೆದಿದ್ದರೂ, ನಾವು ಸಂದರ್ಶಿಸಿದ ಬಹುಸಂಖ್ಯೆಯ ಸಂತ್ರಸ್ತೆಯರ ದೃಷ್ಟಿಯಲ್ಲಿ ಪೊಲೀಸರು ಸಮಸ್ಯೆಯ ಒಂದು ಭಾಗವಾಗಿ ಕಾಣುತ್ತಾರೆಯೇ ಹೊರತು, ದೌರ್ಜನ್ಯದ ಪರಿಹಾರವಾಗಿ ಕಾಣುವುದಿಲ್ಲ. ಎಲ್ಲ ರಾಜ್ಯಗಳಲ್ಲೂ ನಾವು ಗಮನಿಸಿದಂತೆ, ಪೊಲೀಸರು ಮಹಿಳೆಯರನ್ನು ಅವರ ದೌರ್ಜನ್ಯಯುತ ಕುಟುಂಬಗಳಿಗೇ ಹಿಂದಿರುಗುವಂತೆ, ಸಂಗಾತಿಯೊಡನೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತವೆ.ಅಥವಾ pwdva ಕಾಯ್ದೆ ಯಲ್ಲಿ ಅಪೇಕ್ಷಿಸುವಂತೆ ಮಹಿಳೆಯರನ್ನು ರಕ್ಷಣಾ ಅದಿಕಾರಿಗಳೊಡನೆ ಸಂಪರ್ಕಿಸಿ, ಇತರ ಸೇವಾ ಕೇಂದ್ರಗಳನ್ನು ಸಂಪರ್ಕಿಸುವುದರ ಬದಲು ದೂರು ಸಲ್ಲಿಸುವುದರ ಬದಲಾಗಿ ದೌರ್ಜನ್ಯ ಎಸಗುವವರ ವಿರುದ್ಧ ಪ್ರತಿದಾಳಿಯನ್ನು ಮಾಡುವಂತೆ ಸೂಚಿಸಲಾಗುತ್ತದೆ. ಅನೇಕ ರಾಜ್ಯಗಳಲ್ಲಿ ಇನ್ನೂ ರಕ್ಷಣಾ ಅಕಾರಿಗಳ ನೇಮಕ ಆಗಿಲ್ಲ. ಹೀಗೆ ನೇಮಕ ಆಗಿರುವ ರಾಜ್ಯಗಳಲ್ಲೂ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಕೌಶಲವಿಲ್ಲದ ಹಾಗೂ ಹೆಚ್ಚಿನ ಕೆಲಸದ ಹೊರೆ ಹೊತ್ತಿರುವ ಸಿಬ್ಬಂದಿಯಿಂದ ಕಾರ್ಯನಿರ್ವಹಣೆಯೇ ಅಸಾಧ್ಯವಾಗುವಂತಿರುತ್ತದೆ.
ದೌರ್ಜನ್ಯ-ಹಿಂಸೆಯ ಅನುಭವಗಳನ್ನು ಹಂಚಿಕೊಳ್ಳುವುದು ಮಹಿಳೆಯರ ಪಾಲಿಗೆ ದಿಟ್ಟ ಹೆಜ್ಜೆಯಾದರೂ ಸೇವೆಗಳನ್ನು ಸಂಪರ್ಕಿಸುವುದು ಮತ್ತು ಬೆಂಬಲ ಪಡೆಯುವುದು ಅನಿಶ್ಚಿತತೆ, ಭೀತಿ ಮತ್ತು ಅಸಮಾಧಾನಗಳನ್ನು ಹುಟ್ಟುಹಾಕುವುದೇ ಹೆಚ್ಚು.
ಪ್ರಭುತ್ವವು ಪಿತೃಪ್ರಧಾನವಾದ ಮತ್ತು ಇತರ ಭಿನ್ನ ಹಿತಾಸಕ್ತಿಗಳಿಗೆ ಪ್ರಥಮ ಆದ್ಯತೆ ನೀಡುತ್ತದೆ ಎಂಬ ವಾಸ್ತವವನ್ನು ಮಹಿಳೆಯರು ಅರಿತಿದ್ದಾರೆ. ಮಹಿಳೆ ಯರ ಪಾಲಿಗೆ ಪ್ರಭುತ್ವ ವಿಫಲವಾಗಿದೆ. ಪ್ರಭುತ್ವದ ಶಾಸಕಾಂಗವು ಕೌಟುಂಬಿಕ ದೌರ್ಜನ್ಯ ಮತ್ತು ಹಿಂಸೆಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದ್ದರೂ, ರಕ್ಷಣೆಯ ಆದೇಶಗಳ ಮೂಲಕ ನಾಗರಿಕ ಪರಿಹಾರಗಳು ಲಭ್ಯವಾಗಿದ್ದರೂ ಕೂಡ , ಕೌಟುಂಬಿಕ ದೌರ್ಜನ್ಯದ ಪರಿಣಾಮಗಳನ್ನು ನಿರ್ವಹಿಸುವ ಕಾರ್ಯವನ್ನು ಸಂತ್ರಸ್ತರ ಮತ್ತು ಅವರ ಕುಟುಂಬದವರ ಪಾಲಿಗೇ ಉಪಗುತ್ತಿಗೆ ನೀಡಲಾಗಿದೆ. ವರ್ತಮಾನದ ಸಂದರ್ಭದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅತಿ ದೊಡ್ಡ ಅಪರಾಧ ಇದೇ ಆಗಿದೆ.
ಮೂಲ : still a nightmare for domestic violence survivors ಕೃಪೆ: ದ ಹಿಂದೂ
ಮೂಲ ಲೇಖಕರು: ಫಿಲಿಪ್ಪಾ ವಿಲಿಯಮ್ಸ್, ಸ್ವರ್ಣ ರಾಜಗೋಪಾಲನ್, ಗಿರಿಜಾ ಗೋಡ್ಬೋಲೆ, ರುಚಿತಾ ಗೋಸ್ವಾಮಿ.
ಅನುವಾದ : ನಾ ದಿವಾಕರ
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…