ಎಡಿಟೋರಿಯಲ್

ದಸರೆಗೆ ಬರುವ ಪ್ರವಾಸಿ ವಾಹನಗಳ ತೆರಿಗೆ ವಿನಾಯ್ತಿ ಅವಧಿ ವಿಸ್ತರಣೆ ಅತ್ಯಗತ್ಯ

ದೇಶ, ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಆಗಮಿಸುವ ಹೊರ ರಾಜ್ಯಗಳ ಪ್ರವಾಸಿ ವಾಹನಗಳಿಗೆ ಮುಂಚಿತವಾಗಿ ತೆರಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕಿದೆ. ಮೈಸೂರು ಜಿಲ್ಲೆಯಲ್ಲದೆ ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಿಗೂ ಈ ತೆರಿಗೆ ವಿನಾಯಿತಿಯನ್ನು ವಿಸ್ತರಿಸಿದರೆ ಎರಡು ವರ್ಷಗಳಿಂದ ಸೊರಗಿರುವ ಪ್ರವಾಸೋದ್ಯಮಕ್ಕೆ ಉತ್ತೇಜನವಷ್ಟೇ ಅಲ್ಲ ಚೇತರಿಕೆಯನ್ನೂ ನೀಡಿದಂತಾಗಲಿದೆ. ಪ್ರತ್ಯಕ್ಷವಾಗಿ ಮತ್ತು ಮತ್ತು ಪರೋಕ್ಷವಾಗಿ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಲಕ್ಷಾಂತರ ಜನರಿಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕಾಗಿ ಸರಳ ದಸರಾ ಆಚರಿಸಿದ್ದ ರಾಜ್ಯ ಸರ್ಕಾರ ಈ ಬಾರಿ ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. ಅದಕ್ಕೆ ತಕ್ಕಂತೆ ಜಿಲ್ಲಾಡಳಿತವು ಉಪಸಮಿತಿಗಳನ್ನು ರಚಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅರಮನೆ ಆವರಣದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾರಾಜ ಕಾಲೇಜು ಮೈದಾನದಲ್ಲಿ ಜರುಗುವ ಯುವ ದಸರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಕರೆಯಲು ಪಟ್ಟಿ ತಯಾರು ಮಾಡಲಾಗುತ್ತಿದೆ. ಹೀಗಾಗಿ, ಈ ಬಾರಿ ಅತಿಹೆಚ್ಚು ಪ್ರವಾಸಿಗರನ್ನು ನಿರೀಕ್ಷಿಸಲಾಗಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ದಸರಾ ವೆಬ್‌ಸೈಟ್ ಮೂಲಕ ಜಂಬೂಸವಾರಿ ಪ್ರಚಾರ, ವಿಮಾನ ನಿಲ್ದಾಣಗಳಲ್ಲಿ ಪ್ರಚಾರ ಮಾಡುವ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಮೂಲಕ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ.

ದಸರಾ ಹಬ್ಬಕ್ಕೆಂದು ಕರ್ನಾಟಕಕ್ಕೆ ಬರುವ ಪ್ರವಾಸಿ ವಾಹನಗಳಿಗೆ ಸರ್ಕಾರ ಪ್ರತಿ ವರ್ಷ ಹತ್ತು ದಿನಗಳ ತೆರಿಗೆ ವಿನಾಯಿತಿ ನೀಡುತ್ತಾ ಬಂದಿದೆ. ಅದನ್ನು ಮುಂದುವರಿಸುವುದರ ಜತೆಗೆ ಹೆಚ್ಚುವರಿಯಾಗಿ ಒಂದು ತಿಂಗಳ ಅವಧಿಗೆ ವಿಸ್ತರಿಸಬೇಕು ಮತ್ತು ತೆರಿಗೆ ವಿನಾಯ್ತಿ ಸೌಲಭ್ಯವನ್ನು ಅಕ್ಕಪಕ್ಕದ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂಬುದು ಪ್ರವಾಸೋದ್ಯಮ ಅವಲಂಬಿತ ವಲಯದ ಬೇಡಿಕೆಯಾಗಿದೆ.

ನವರಾತ್ರಿಯ ದಿನಗಳಲ್ಲಿ ತಮಿಳುನಾಡು, ಕೇರಳ, ಆಂದ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಪ್ರವಾಸಿಗರು ಹರಿದು ಬಂದರೂ ತಮಿಳುನಾಡು, ಕೇರಳ ರಾಜ್ಯದಿಂದ ಹೆಚ್ಚಾಗಿ ವಾಹನಗಳು ಬರಲಿವೆ. ಸಾಮಾನ್ಯ ದಿನಗಳಲ್ಲಿ ಕಾರು, ಮೆಟಡೋರ್, ಟೆಂಪೋ, ಮಿನಿ ಬಸ್, ಪ್ರವಾಸಿ ಬಸ್ ಸೇರಿದಂತೆ ಆಯಾ ವಾಹನಗಳ ಸೀಟುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಿಕೊಳ್ಳಲಾಗುತ್ತದೆ.

ದಸರಾ ಸಂದರ್ಭದಲ್ಲಿ ಮೈಸೂರಿಗೆ ಬರುವ ವಾಹನಗಳಿಗೆ ತೆರಿಗೆ ವಿನಾಯ್ತಿ ಇದ್ದರೂ ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ತೆರಳಿದಾಗ ತೆರಿಗೆ ಪಾವತಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಸಾಕಷ್ಟು ಜನರು ನವರಾತ್ರಿಯ ಸಂದರ್ಭದಲ್ಲಿ ಆಗಮಿಸಲು ಹಿಂದೇಟು ಹಾಕುತ್ತಾರೆ. ಹಾಗಾಗಿ, ರಾಜ್ಯ ಸರ್ಕಾರ ಒಂದು ತಿಂಗಳ ಕಾಲ ತೆರಿಗೆ ವಿನಾಯ್ತಿ ಘೋಷಿಸಿ ಮುಕ್ತ ಪ್ರವೇಶ ನೀಡಿದರೆ ಪ್ರವಾಸಿಗರ ಸಂಖ್ಯೆ ದೊಡ್ಡಪ್ರಮಾಣದಲ್ಲಿ ಹೆಚ್ಚಲಿದ್ದು, ಮೈಸೂರು ಪ್ರದೇಶದ ಪ್ರವಾಸೋದ್ಯಮ ಚಟುವಟಿಕೆ ಪುಟಿದೇಳಲಿದೆ. ಪ್ರವಾಸಿಗರು ವಾಸ್ತವ್ಯ ಹೂಡುವುದರಿಂದ ಪಂಚತಾರಾ ಹೋಟೆಲ್ ಗಳು, ವಸತಿಗೃಹಗಳ ಕೊಠಡಿಗಳು ತುಂಬುವ ಜತೆಗೆ, ಹೋಟೆಲ್ ವ್ಯಾಪಾರವೂ ಬಿರುಸುಗೊಳ್ಳುತ್ತದೆ. ಅರಮನೆ, ಚಾಮುಂಡಿಬೆಟ್ಟ, ಕೃಷ್ಣರಾಜ ಸಾಗರ, ಬಂಡೀಪುರ, ನಾಗರಹೊಳೆ ಅಭಯಾರಣ್ಯ ಸಫಾರಿಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚುವುದರಿಂದ ಸ್ಥಳೀಯ ಟ್ಯಾಕ್ಸಿ ಮಾಲೀಕರು, ಚಾಲಕರಿಗೂ ಆರ್ಥಿಕವಾಗಿ ನೆರವಾಗಲಿದೆ. ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಪ್ರಕಾರ, ಮಾಮೂಲಿ ದಿನಗಳಲ್ಲಿ ನಾಲ್ಕರಿಂದ ಐದು ಸಾವಿರ ವಾಹನಗಳು ಬಂದರೆ, ದಸರೆ ಸಂದರ್ಭದಲ್ಲಿ ೨೦ರಿಂದ ೨೫ಸಾವಿರ ವಾಹನಗಳು ಬರಲಿವೆ. ಮೈಸೂರು ನಗರಕ್ಕೆ ಬಂದವರು ಕೊಡಗು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರವಾಸಿ ತಾಣಗಳ ವೀಕ್ಷಣೆಗೂ ತೆರಳುತ್ತಾರೆ. ಆದ್ದರಿಂದ ಈ ಬಾರಿ ಹೊರ ರಾಜ್ಯದ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಕುರಿತಾದ ಆದೇಶವನ್ನು ತ್ವರಿತವಾಗಿ ಹೊರಡಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾವಾಸಿಗಳು ಬರಲು ಸಾಧ್ಯವಾಗಲಿದೆ. ಈಗಾಗಲೇ ಪ್ರವಾಸೋದ್ಯಮಿಗಳು, ಹೋಟೆಲ್, ಟ್ರಾವೆಲ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಗೂ ತೆರಿಗೆ ವಿನಾಯ್ತಿ ವಿಸ್ತರಿಸಲು ಮನವಿ ಮಾಡಿದ್ದಾರೆ.

ಈ ಬೇಡಿಕೆಗೆ ಸರ್ಕಾರ ತ್ವರಿತವಾಗಿ ಸ್ಪಂದಿಸಿ ತೆರಿಗೆ ವಿನಾಯ್ತಿ ನೀಡುವ ಸಂಬಂಧ ಆದೇಶ ಹೊರಡಿಸಬೇಕಿದೆ. ದಸರಾ ಮಹೋತ್ಸವ ಆರಂಭಕ್ಕೆ ಕೇವಲ ಹನ್ನೆರಡು ದಿನಗಳಿರುವುದರಿಂದ ಸೆಪ್ಟೆಂಬರ್ ೨೦ರಿಂದ ಅಕ್ಟೋಬರ್ ೨೦ರ ತನಕ ತೆರಿಗೆ ವಿನಾಯಿತಿ ಘೋಷಿಸಿದರೆ ಅನುಕೂಲವಾಗಲಿದೆ. ಹತ್ತು ದಿನಗಳ ತೆರಿಗೆ ವಿನಾಯಿತಿಯನ್ನು ಒಂದು ತಿಂಗಳಿಗೆ ವಿಸ್ತರಿಸಿದರೆ ಸರ್ಕಾರಕ್ಕೆ ದೊಡ್ಡ ಹೊರೆಯೇನೂ ಆಗದು. ಪ್ರವಾಸಿಗರು ಬಂದಷ್ಟು ಸ್ಥಳೀಯವಾಗಿ ಆರ್ಥಿಕ ಚಟುವಟಿಕೆ ಚೇತರಿಕೆಗೆ ಕಾರಣವಾಗುವುದರಿಂದ ಸರ್ಕಾರಕ್ಕೆ ಪರೋಕ್ಷವಾಗಿ ಹೆಚ್ಚಿನ ತೆರಿಗೆ ಸಂದಾಯವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲೇ ನಾಲ್ಕೂ ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್ ಸದಸ್ಯರ ಸಭೆ ನಡೆಸಿ ಸಿಎಂ ಬಳಿಗೆ ನಿಯೋಗ ಕರೆದೊಯ್ದು ತೆರಿಗೆ ವಿನಾಯಿತಿ ಪಡೆಯಲು ತ್ವರಿತವಾಗಿ ಪ್ರಯತ್ನಿಸಬೇಕಿದೆ.

andolana

Recent Posts

ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ರಾಜಕಾರಣಿಗಳಿವರು…

ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…

5 hours ago

ಹೆಬ್ಬಾಳಿನಲ್ಲಿ ಡ್ರಗ್ಸ್‌ ಲ್ಯಾಬ್‌ ಶಂಕೆ : ಶೆಡ್‌ವೊಂದರ ಮೇಲೆ ಎನ್‌ಸಿಬಿ ದಾಳಿ

ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…

5 hours ago

ನಿಗಮ ಮಂಡಳಿ | ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ

ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…

6 hours ago

ಡಿಜಿಟಲ್‌ ಅರೆಸ್ಟ್‌ ಕುತಂತ್ರ : 1 ಕೋಟಿ ವಂಚನೆ

ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…

6 hours ago

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ಇನ್ನಿಲ್ಲ ; ಬೆಂಗಳೂರು ಚಲೋ ಮುಂದೂಡಿಕೆ

ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್‌ ಸುಬ್ಬರಾವ್‌ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…

7 hours ago

ಮೈಸೂರು | ಮೃಗಾಲಯದ ಯುವರಾಜ ಸಾವು

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…

7 hours ago