ಪ್ರೊ.ಆರ್.ಎಂ.ಚಿಂತಾಮಣಿ
‘ಸಾಧುವಲ್ಲದ ಸಲಹೆಗಳನ್ನು ಕೊಟ್ಟರೆ ಅವುಗಳು ಮುಂದೆ ಎಂದಾದರೂ ಒಂದು ದಿನ ತನಗೇ ಮುಳುವಾಗ ಬಹುದು’– ಹೀಗೊಂದು ಮಾತು ನಮ್ಮಲ್ಲಿದೆ. ಕೇಂದ್ರ ಹಣಕಾಸು ಇಲಾಖೆಯು ಈ ತಿಂಗಳ ಮೊದಲ ವಾರದಲ್ಲಿ ಹಣ ಪರಭಾರೆ ಅವ್ಯವಹಾರ ತಡೆ ಕಾಯ್ದೆ 2002ರ (prevention of money laundering act 2002) ತಿದ್ದುಪಡಿ ನಿಯಮಗಳನ್ನು ಜಾರಿಗೆ ತಂದಿದ್ದು, ಕಾಯ್ದೆ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಇನ್ನು ಮುಂದೆ ವೃತ್ತಿ ನಿರತ ಚಾರ್ಟರ್ಡ್ ಅಕೌಂಟಂಟರು, ಕಾಸ್ಟ್ ಅಕೌಂಟಂಟರು ಮತ್ತು ಕಂಪೆನಿಯ ಕಾರ್ಯದರ್ಶಿಗಳಿಂದ ಸಲಹೆ ಮತ್ತು ಸೇವೆ ಪಡೆಯುವವರು (clients) ಇವರ ಸಹಾಯದಿಂದ ಹಣ ಪರಭಾರೆ ಅವ್ಯವಹಾರದಲ್ಲಿ ತೊಡಗಿದ್ದು ಕಂಡುಬಂದರೆ ಅವರೊಡನೆ ಇವರೂ ಈ ಕಾಯ್ದೆ ಪ್ರಕಾರ ಹೊಣೆಗಾರರಾಗುತ್ತಾರೆ.
ಕಾಯ್ದೆಯ 2ನೇ ಕಲಮಿನ 1ನೇ ಉಪಕಲಮಿನಲ್ಲಿರುವ 5a ಪರಿಚ್ಛೇದ ಉಪಪರಿಚ್ಛೇದ qಜಿರಲ್ಲಿ ಈ ಕಾಯ್ದೆಯ ವ್ಯಾಪ್ತಿಗೆ ಬರುವ ಸಂಬಂಧಪಟ್ಟ ವ್ಯಕ್ತಿಗಳು, ಕಂಪೆನಿಗಳು ಮತ್ತು ಸಂಸ್ಥೆಗಳ ಬಗ್ಗೆ ವಿವರಣೆಗಳನ್ನು ಕೊಡಲಾಗಿದೆ. ಈಗ ತಿದ್ದುಪಡಿಯಾದ ಈ ಉಪ ಪರಿಚ್ಛೇದದಲ್ಲಿ ಈ ಮೂರೂ ಗುಂಪಿನ ವೃತ್ತಿಪರರನ್ನು ಸೇರಿಸಲಾಗಿದೆ. ಇವರು ವೃತ್ತಿಗೆ ತಕ್ಕಂತೆ ಶುಲ್ಕ ಪಡೆದು ಸಲಹೆ ಮಾತ್ರ ಒದಗಿಸಿದರೆ ಈ ಕಾಯ್ದೆ ಅನ್ವಯಿಸುವುದಿಲ್ಲ. ಆದರೆ ತಮ್ಮ ಕ್ಲೆ ಂಟ್‌ಗಳ ಪರವಾಗಿ ಹಣಕಾಸು ವ್ಯವಹಾರ ನಿರ್ವಹಿಸುವುದಾಗಲಿ, ಆಸ್ತಿ ಖರೀದಿ ಮತ್ತು ಮಾರಾಟ ಮಾಡುವ ಕೆಲಸ ನಡೆಸುವುದಾಗಲಿ ಮಾಡಿದಾಗ ಇವರ ಜವಾಬ್ದಾರಿ ಬರುತ್ತದೆ. ಸರ್ಕಾರ, ಸಂಬಂಧಪಟ್ಟ ಇಲಾಖೆಗಳು ಕೇಳಿದಾಗ ವರದಿ ಸಲ್ಲಿಸುವ ಹೊಣೆಗಾರಿಕೆ ಇವರಿಗಿದೆ. ತಪ್ಪು ಮಾಡಿದಾಗ ದಂಡವನ್ನೂ ಕಟ್ಟಬೇಕಾಗುತ್ತದೆ. ಆದ್ದರಿಂದ ಇವರು ತಾವು ಕ್ಲೆ ಂಟ್ ಪ್ರತಿನಿಧಿಯಾಗಿ ನಿರ್ವಹಿಸುವ ಎಲ್ಲ ಹಣಕಾಸು ವ್ಯವಹಾರಗಳ ವಿವರವಾದ ದಾಖಲೆಗಳನ್ನು ಬರೆದಿಟ್ಟುಕೊಳ್ಳಬೇಕಲ್ಲದೆ ಅವುಗಳನ್ನು ಸಂರಕ್ಷಿಸಿಟ್ಟುಕೊಳ್ಳಬೇಕು. ಕೇಂದ್ರ ಹಣಕಾಸು ಇಲಾಖೆಯಲ್ಲಿರುವ ಹಣಕಾಸು ತನಿಖಾ ಘಟಕ (financial intelligence unit) ಕೇಳಿದಾಗ ವರದಿ ಕಳಿಸಬೇಕು. ಗೌಪ್ಯತೆಯನ್ನೂ ಕಾಪಾಡಿಕೊಳ್ಳಬೇಕು.
ಇತ್ತೀಚೆಗೆ ಮನಿ ಲಾಂಡರಿಂಗ್ ಮೂಲಕ ವಿದೇಶಗಳಲ್ಲಿ ಬೇನಾಮಿ ಆಸ್ತಿಗಳನ್ನು ಹೊಂದುವುದು, ಕಪ್ಪು ಹಣದ ನಿರ್ಮಾಣ, ಭಯೋತ್ಪಾದಕರಿಗೆ ಹಣ ಪೂರೈಕೆ, ಆನ್ಲೈನ್ ಗೇಮಿಂಗ್ ಸಂಸ್ಥೆಗಳಿಂದ ಜನರಿಗೆ ಸೈಬರ್ ವಂಚನೆ ಮುಂತಾದ ಅವ್ಯವಹಾರಗಳು ಹೆಚ್ಚಾಗಿದ್ದು, ಅವುಗಳಲ್ಲಿ ಸಿ.ಎ.ಗಳು, ಕಾಸ್ಟ್ ಅಕೌಂಟೆಂಟ್‌ಗಳು ಮತ್ತು ಕಂಪೆನಿ ಕಾರ್ಯದರ್ಶಿಗಳು ಶಾಮೀಲಾಗಿದ್ದಾ ರೆಂದು ಅಧಿಕೃತ ವರದಿಗಳು ಸರ್ಕಾರಕ್ಕೆ ಬಂದಿದ್ದು, ಅವುಗಳನ್ನು ತಡೆಯಲು ಈ ನೋಟಿಫಿಕೇಶನ್ ಇನ್ನೊಂದು ಅಸ್ತ್ರವಾಗಿದೆ ಎಂದು ಹೇಳಲಾಗಿದೆ.
ಹಿಂದಿನ ಕೆಲವು ಪ್ರಕರಣಗಳು
ಸತ್ಯಂ ಕಂಪ್ಯೂಟರ‍್ಸ್ ಹಗರಣದಲ್ಲಿ ಕಂಪೆನಿ ಪ್ರಮೋಟರ್ ರಾಮಲಿಂಗ ರಾಜು ಮಾಡಿದ್ದ ಹಲವು ರೀತಿಯ ಅವ್ಯವಹಾರಗಳಲ್ಲಿ ಆಡಿಟರರು ಮತ್ತು ಕೆಲವು ಕಂಪೆನಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದು ಬೆಳಕಿಗೆ ಬಂದಿತ್ತು. ಆಗ ಅವರ ಮೇಲೆ ವೃತ್ತಿ ಸಂಸ್ಥೆಗಳಿಂದ ಕ್ರಮವೂ ಆಗಿತ್ತು.
ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ಒಂದು ಆದೇಶದಂತೆ ಇನ್‌ಫ್ರಾಸ್ಟ್ರಕ್ಚರ್ ಲೀಜಿಂಗ್ ಅಂಡ್ ಫೈನಾನ್ಸಿಯಲ್ ಸರ್ವಿಸ್ (ಐ.ಎಲ್. ಅಂಡ್ ಎಫ್.ಎಸ್.) ವಂಚನೆ ಮತ್ತು ಹಣಕಾಸು ದುರುಪಯೋಗ ಹಗರಣದಲ್ಲಿ ಶಾಮೀಲಾಗಿದ್ದ ವಂಚಕ ಆಡಿಟರ್ ಮೇಲಿನ ಕೇಸುಗಳನ್ನು (ಅವರು ಪ್ರಕರಣ ಬೆಳಕಿಗೆ ಬಂದ ನಂತರ ರಾಜೀನಾಮೆ ಕೊಟ್ಟಿದ್ದರೂ ಸಹಿತ) ಮುಂದುವರಿಸಬೇಕು, ಕೈ ಬಿಡಬಾರದು ಎಂದು ಅತ್ಯಂತ ಕಠಿಣ ಪದಗಳಲ್ಲಿ ಹೇಳಲಾಗಿದೆ. ಅದೇ ರೀತಿ ಕಂಪೆನಿ ಆಡಿಟರರು ಮೋಸ ನಡವಳಿಕೆ ಹೊಂದಿ ದ್ದರೆ ಅಥವಾ ಕಂಪೆನಿ ಆಡಳಿತಕ್ಕೆ ಮೋಸ ಮಾಡುವುದಕ್ಕೆ ಬೆಂಬಲ ನೀಡಿದ್ದರೆ ಅಥವಾ ವಂಚನೆಯಲ್ಲಿ ಪಾಲ್ಗೊಂಡಿದ್ದರೆ ಅವರ ವಿರುದ್ಧ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ ತನಗೆ ಕಂಪೆನಿ ಕಾಯ್ದೆಯ 140(5) ಕಲಮಿನನ್ವಯ ಲಭಿಸಿರುವ ಅಧಿಕಾರವನ್ನು ಬಳಸಿಕೊಂಡು ತಾನೇ ಸ್ವತಃ(suomoto) ಅಥವಾ ತಕರಾರು ಅರ್ಜಿ ಆಧರಿಸಿ ಕ್ರಮ ಕೈಗೊಳ್ಳಬಹುದೆಂಬುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಇದೇ ರೀತಿ ವೃತ್ತಿ ಸಂಹಿತೆಗೆ ತಕ್ಕ ನಡವಳಿಕೆ ಇಲ್ಲದೆ ತಪ್ಪು ಮಾಡಿದ್ದಕ್ಕೆ ದಿವಾಣ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹಗರಣದಲ್ಲಿ ಶಾಖೆಗಳ ಆಡಿಟರರಿಗೆ ನ್ಯಾಷನಲ್ ಫೈನಾನ್ಸಿಯಲ್ ರಿಪೋರ್ಟಿಂಗ್ ಅಥಾರಿಟಿ (ಎನ್.ಎಫ್.ಆರ್. ಎ.) ನಿರ್ಬಂಧಗಳನ್ನು ಹೇರಿದ್ದೂ ಉಂಟು. ತೀರ ಇತ್ತೀಚೆಗೆ ಕೆಫೆ ಕಾಫಿ ಡೇ ಕಂಪೆನಿಯ ಅಂಗಸಂಸ್ಥೆ ಅಮಾಲ್ಗಾಮೇಟೆಡ್ ಕಾಫೀ ಎಸ್ಟೇಟ್ಸ್ ಪ್ರಕರಣದಲ್ಲಿ ವೃತ್ತಿ ಧರ್ಮವನ್ನು ಉಲ್ಲಂಘಿಸಿದ ಕಾರಣಕ್ಕೆ ಆಡಿಟ್ ಫರ್ಮ್ ಒಂದು ಪ್ರಾಕ್ಟೀಸಿಂಗ್ ಲೈಸೆನ್ಸ್ ಕಳೆದುಕೊಳ್ಳಬೇಕಾಯಿತು.
ಐದು ಆಕ್ಷೇಪಾರ್ಹ ಕಾರ್ಯಗಳು
ಸಿ.ಎ.ಗಳು, ಕಾಸ್ಟ್ ಅಕೌಂಟೆಂಟರು ಮತ್ತು ಕಂಪೆನಿ ಕಾರ್ಯದರ್ಶಿಗಳು ವೃತ್ತಿನಿರತರಾಗಿದ್ದು, ತಮ್ಮ ಕ್ಲೆ ಂಟ್‌ಗಳ ಪ್ರತಿನಿಧಿಗಳಾಗಿ ಕೆಳಗಿನ 5 ಕಾರ್ಯಗಳನ್ನು ನಿರ್ವಹಿಸಿದರೆ ಅವರು ಪಿ.ಎಂ.ಎಲ್. ಆಕ್ಟಿಗೆ ಒಳಪಡುತ್ತಾರೆ.
1
ದೇಶದಲ್ಲಿ ಮತ್ತು ವಿದೇಶಗಳಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು.
2
ಬ್ಯಾಂಕ್‌ಗಳಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸುವುದು. ಶೇರುಗಳು, ಡಿಬೆಂಚರುಗಳು, ಬಾಂಡುಗಳು ಮತ್ತು ಮ್ಯೂಚುವಲ್ ಫಂಡ್ ಯೂನಿಟ್‌ಗಳು ಮುಂತಾದ ಸೆಕ್ಯೂರಿಟಿಗಳ (ಹೂಡಿಕೆಗಳ) ಖಾತೆಗಳನ್ನು ನಿರ್ವಹಿಸುವುದು. ಇತರ ಆಸ್ತಿಗಳನ್ನು ನಿರ್ವಹಿಸುವುದು.
3
ನಗದು ಹಣದ ನಿರ್ವಹಣೆ (ಬಂದದ್ದು, ಹೋದದ್ದು, ಕೊಡುಕೊಳ್ಳುವುದು)
4
ಕಂಪೆನಿಗಳು, ಸೀಮಿತ ಜವಾಬ್ದಾರಿ ಪಾಲುದಾರಿಕೆಗಳು (ಎಲ್.ಎಲ್.ಪಿ.ಗಳು) ಮತ್ತು ಟ್ರಸ್ಟ್‌ಗಳನ್ನು ಹುಟ್ಟು ಹಾಕುವುದಲ್ಲದೆ ಅವುಗಳಿಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡುವುದು.
5
ವ್ಯಾಪಾರ ಮತ್ತು ವ್ಯವಹಾರ ಸಂಸ್ಥೆಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು.
ಇವುಗಳಿಂದ ದೂರವಿದ್ದರೆ ಯಾವುದೇ ರೀತಿಯಲ್ಲಿ ತೊಂದರೆಯಾಗಲಾರದು. ಒಟ್ಟಿನಲ್ಲಿ ವೃತ್ತಿ ಚೌಕಟ್ಟನ್ನು ಮೀರಬಾರದು. ಕಪ್ಪು ಸಂಪತ್ತಿನ ನಿರ್ಮಾಣವನ್ನು ತಡೆಗಟ್ಟಲು ಮತ್ತು ಸಂಪನ್ಮೂಲ ಪರಭಾರೆಯಾಗಿ (laundering) ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ನೈತಿಕವಾಗಿ ನ್ಯಾಯ ಸಮ್ಮತವಲ್ಲದ ಕೆಲಸಗಳಿಗೆ ಬಳಕೆಯಾಗುವುದನ್ನು ತಡೆಗಟ್ಟಲು ಇದು ಒಂದು ಪ್ರಮುಖ ಹೆಜ್ಜೆ ಎಂಬುದು ನಿಸ್ಸಂಶಯ. ಇದರಿಂದ ವೃತ್ತಿಪರರ ವೃತ್ತಿ ಬದ್ಧತೆ ಹೆಚ್ಚುವುದಲ್ಲದೆ ಅವರನ್ನು ಧೂರ್ತರು ದುರು ಪಯೋಗ ಮಾಡಿಕೊಳ್ಳುವುದೂ ನಿಲ್ಲಬಹುದು. ಇಲ್ಲಿ ಪಾರದರ್ಶಕತೆ ಮತ್ತು ಕಾಯ್ದೆ ಬದ್ಧತೆ ಮುಖ್ಯವಾಗಿರುತ್ತದೆ.
ಎಚ್ಚರಿಕೆ ವಹಿಸುವುದು ಮುಖ್ಯ
ಈ ಮೂರು ವೃತ್ತಿನಿರತರು ತಮ್ಮ ವೃತ್ತಿ ಸೇವೆ ಮತ್ತು ಸಲಹೆ ಪಡೆಯುವವರೊಡನೆ (ಕ್ಲೆ ಂಟ್–ಕಕ್ಷಿದಾರರು) ಸಂಬಂಧ ನಿರ್ಮಿಸಿಕೊಳ್ಳುವ ಮೊದಲು ಅವರ ಹಿನ್ನೆಲೆಯನ್ನು ವಿವರವಾಗಿ ತಿಳಿದುಕೊಳ್ಳಬೇಕು. ಸಲಹೆ ಪಡೆಯುವ ಉದ್ದೇಶಗಳನ್ನು ಅರಿತುಕೊಳ್ಳಬೇಕು. ಅವು ನ್ಯಾಯ ಸಮ್ಮತವೇ ಅಥವಾ ಅದರ ಹಿಂದೆ ಏನೋ ಗುಪ್ತ ಆಸಕ್ತಿ ಇದಿಯೇ ಎನ್ನುವುದನ್ನೂ ತರ್ಕಿಸಿಕೊಳ್ಳಬೇಕು. ಹಣಕಾಸು ಮೂಲಗಳ ಬಗ್ಗೆಯೂ ತಿಳಿಯಬೇಕು. ಅವುಗಳೂ ಸಾಧುವೆ ಎಂಬುದನ್ನೂ ಪರಿಶೀಲಿಸಬೇಕು. ಅವರ ಉದ್ಯೋಗ ವ್ಯವಹಾರಗಳು ಕಾಯ್ದೆ ಬದ್ಧವೇ ಎಂಬುದೂ ಮುಖ್ಯ. ಆದಾಯಗಳನ್ನು ಯಾವ ಉದ್ದೇಶಗಳಿಗೆ ಬಳಸ ಬಯಸುತ್ತಾರೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ. ತಾಂತ್ರಿಕವಾಗಿ ಇದೆಲ್ಲವನ್ನೂ ಸೇರಿಸಿದಂತೆ ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿರಿ’ (know your client kyc) ಎಂದು ಕರೆಯುತ್ತೇವೆ ಇದು ವೃತ್ತಿ ಸುಸ್ಥಿರತೆಗೆ ಮುಖ್ಯ.
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…
ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…
ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ವಿಧಾನಪರಿಷತ್ ಕಲಾಪದಲ್ಲಿ…
ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…
ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ…
ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…