ಎಡಿಟೋರಿಯಲ್

ಕಬ್ಬು ಅರೆಯಲಾರಂಭಿಸಿದರೂ ರೈತರ ಪಾಲಿಗೆ ಕಹಿಯಾಗಿಯೇ ಇರುವ ಮೈಷುಗರ್

ಮಂಡ್ಯ ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿದ್ದ ಮೈಷುಗರ್ ಮತ್ತೆ ಕಬ್ಬು ಅರೆಯಲು ಆರಂಭಿಸಿದೆ. ರೈತರ ಪಾಲಿಗೆ ಸಿಹಿಯಾಗಬೇಕಿದ್ದ ಈ ಬೆಳವಣಿಗೆ ಕಹಿಯಾಗಿಯೇ ಉಳಿದಿದೆ. ಅದಕ್ಕೆ ಮುಖ್ಯ ಕಾರಣ ಸರ್ಕಾರ ಮತ್ತು ಆಡಳಿತ ಮಂಡಳಿಯ ರೈತ ವಿರೋಧಿ ನಿಲುವುಗಳು. ಮೈಷುಗರ ನಷ್ಟಕ್ಕೀಡಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಅದನ್ನು ಖಾಸಗಿಯವರಿಗೆ ವಹಿಸುವ ತೀವ್ರ ಪ್ರಯತ್ನಗಳೂ ನಡೆದಿದ್ದವು. ಆದರೆ, ಸರ್ಕಾರ ತಾನೇ ನಿರ್ಹವಹಿಸುವ ಹೊಣೆ ಹೊತ್ತು ಅದಕ್ಕೆ ಬಜೆಟ್‌ನಲ್ಲಿ ಅನುದಾನ ಒದಗಿಸಿದೆ. ಇದೀಗ ಕಾರ್ಖಾನೆ ಕಬ್ಬು ಅರೆಯಲು ಆರಂಭಿಸಿದೆ. ಆದರೆ, ಪೂರ್ವಸಿದ್ಧತೆ ಇಲ್ಲದೆಯೇ ಕಬ್ಬು ಅರೆಯಲು ಆರಂಭಿಸಿದ್ದರಿಂದಾಗಿ ರೈತರಿಗೆ ನೆರವಾಗುವ ಬದಲು ಸಂಕಷ್ಟಗಳೇ ಎದುರಾಗುತ್ತಿವೆ. ಈ ಸಮಸ್ಯೆ ಒಂದು ಕಡೆಯಾದರೆ, ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನೀಡಲು ಹಿಂದೇಟು ಹಾಕುವ ಮೂಲಕ ಆಡಳಿತ ಮಂಡಳಿ ರೈತರನ್ನು ಹಾದಿ ತಪ್ಪಿಸುತ್ತಿದೆ ಎಂಬುದು ಬೆಳೆಗಾರರ ಆರೋಪ. ಪಾರದರ್ಶಕತೆ ಕಾಪಾಡಿಕೊಳ್ಳಲಾಗದ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಆಡಳಿತ ಮಂಡಳಿಯು ನೇರವಾಗಿ ಷೇರುದಾರರ ಸಭೆ ನಡೆಸುವ ಬದಲು ವಿಡಿಯೋಕಾನ್ಫರೆನ್ಸ್ ಮೂಲಕ ಸಭೆ ನಡೆಸಿದೆ. ಇಂತಹ ಸಭೆ ನಡೆಸಲು ರೈತರು ವಿರೋಧ ವ್ಯಕ್ತಪಡಿಸಿದ್ದರೂ ಅದನ್ನು ಆಡಳಿತ ಮಂಡಳಿ ಲೆಕ್ಕಿಸಿಲ್ಲ.

ವಿಡಿಯೋ ಕಾನ್ಫರೆನ್ಸ್ ಮೂಲಕ ಇಂತಹ ಪ್ರಮುಖ ಸಭೆ ನಡೆಸುವುದರಿಂದ ಕಬ್ಬು ಬೆಳೆಗಾರರು ತಮ್ಮ ಸಂಕಷ್ಟಗಳನ್ನು ವಿವರವಾಗಿ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ, ಅಲ್ಲದೇ ತಾಂತ್ರಿಕ ಕಾರಣಗಳಿಂದಾಗಿ ರೈತರಿಗೆ ಇಂತಹ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗದು. ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸುವ ಮುನ್ನ ರೈತರಿಗೆ ಮಾಹಿತಿ ನೀಡಿ ಅರಿವು ಮೂಡಿಸುವ ಕೆಲಸವೂ ಆಗಿಲ್ಲ. ಹೀಗಾಗಿ ರೈತರು ಆಕ್ರೋಶ ವ್ಯಕ್ತಪಡಿಸಿರುವುದು ಸಹಜವೇ.

ಕಂಪೆನಿಯ ೮೧ನೇ ವಾರ್ಷಿಕ ವರದಲ್ಲಿಯಲ್ಲಿ ಇತ್ತೀಚಿನ ಲಾಭ-ನಷ್ಟದ ವಿವರಗಳು ಇಲ್ಲ. ೨೦೧೪-೧೫ನೇ ಸಾಲಿನಲ್ಲೇ ೪೦೨ ಕೋಟಿ ರೂ.ನಷ್ಟದಲ್ಲಿತ್ತು ಎಂಬ ಹಳೆಯ ಅಂಕಿಅಂಶಗಳನ್ನೇ ವಾರ್ಷಿಕ ವರದಿಯಲ್ಲಿ ಪ್ರಸ್ತಾಪವಾಗಿದೆ. ನಂತರದ ವರ್ಷಗಳಲ್ಲಿ ಕಾರ್ಖಾನೆ ನಡೆಯದೇ ಇದ್ದರೂ ನಿರ್ವಹಣೆ, ಮೇಲ್ವಿಚಾರಣೆ ಸೇರಿದಂತೆ ವಿವಿಧ ರೀತಿಯ ವೆಚ್ಚಗಳಾಗಿವೆ. ಅವುಗಳೆಲ್ಲವೂ ಪ್ರಸ್ತಾಪವಾಗದೇ ಇರುವುದರಿಂದ ರೈತರು ಆಕ್ಷೇಪ ಎತ್ತಿದ್ದಾರೆ.
ಕಾರ್ಖಾನೆ ಆಡಳಿತ ಮಂಡಳಿ ರೈತರೊಂದಿಗೆ ನೇರವಾಗಿ ಸಭೆ ನಡೆಸಿ, ಅಗತ್ಯ ವಿವರ ಮತ್ತು ಸ್ಪಷ್ಟನೆಗಳನ್ನು ನೀಡಬೇಕಿತ್ತು. ಆದರೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಆಡಳಿತ ಮಂಡಳಿ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದೆ ಎಂಬ ಅನುಮಾನ ಬಂದು, ಸಭೆಯ ವೇಳೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ರೈತರು ಎತ್ತಿದ ಹಲವು ಪ್ರಶ್ನೆಗಳಿಗೆ ಆಡಳಿತ ಮಂಡಳಿ ಸಮರ್ಪಕ ಉತ್ತರ ನೀಡುವ ಪ್ರಯತ್ನವನ್ನೂ ಮಾಡಿಲ್ಲ. ಹೀಗಾಗಿ ಸಭೆಯಲ್ಲಿ ಗೊಂದಲವಾಗಿ ರೈತರು ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ನೇರವಾಗಿ ಸಭೆ ನಡೆಸದ ಆಡಳಿತ ಮಂಡಳಿ ನಿಲುವು ಖಂಡಿಸಿ ಸಭೆಯಿಂದ ಹೊರ ನಡೆದಿದ್ದಾರೆ.

ಒಂದು ವೇಳೆ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಸಭೆ ನಡೆಸದೇ, ನೇರವಾಗಿ ರೈತರೊಂದಿಗೆ ಸಭೆ ನಡೆಸಿದ್ದರೆ, ಆಡಳಿತ ಮಂಡಳಿ ರೈತರ ಮನವೊಲಿಸಬಹುದಿತ್ತು.

ಅಸಲಿಗೆ ೨೦೧೪ರಲ್ಲೇ ಕಂಪೆನಿಯು ೪೦೨ ಕೊಟಿ ರೂ. ನಷ್ಟವನ್ನು ದಾಖಲಿಸಿದೆ. ಆದರೆ ಇಲ್ಲಿಯವರೆಗೆ ಎಷ್ಟು ನಷ್ಟವಾಗಿದೆ ಎಂಬುದರ ವಿವರಗಳೇ ಇಲ್ಲ. ಮಾತ್ರವಲ್ಲ ಮೈಶುಗರ್ ಹೊಂದಿರುವ ಆಸ್ತಿಯ ಇಂದಿನ ಮೌಲ್ಯದ ಬಗ್ಗೆಯೂ ನಿಖರ ಮಾಹಿತಿ ಬಹಿರಂಗಪಡಿಸಿಲ್ಲ. ಆಂತರಿಕ ಲೆಕ್ಕಪರಿಶೋಧಕರನ್ನು ನೇಮಕಗೊಳಿಸದೆ ಯಾವ ದಾಖಲಾತಿಗಳನ್ನು ಮಂಡಿಸಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂಬ ಪ್ರಶ್ನೆ ಷೇರುದಾರರದು. ಇದು ಕಂಪನಿ ಕಾಯ್ದೆಗೂ ವಿರುದ್ಧವಾದ ನಡೆಯೂ ಹೌದು.

ಕಳೆದ ಸೆಪ್ಟೆಂಬರ್ ೧ರಿಂದ ಕಬ್ಬು ಅರೆಯಲು ಆರಂಭಿಸಿದ ಕಾರ್ಖಾನೆಗೆ ಪ್ರತಿನಿತ್ಯ ೫ ಸಾವಿರ ಟನ್ ಅರೆಯುವ ಸಾಮರ್ಥ್ಯ ಇದೆ ಎಂದು ಹೇಳಲಾಗಿತ್ತು. ಆದರೆ ಮೊದಲ ೬೦ ದಿನಗಳಲ್ಲಿ ಅರೆದಿದ್ದು ಕೇವಲ ೪೦ ಸಾವಿರ ಟನ್ ಮಾತ್ರ. ಮೈಶುಗರ್ ಕಂಪನಿಯ ಅಧ್ಯಕ್ಷ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು. ಗುಂಜನ್‌ಕೃಷ್ಣ, ಬಿ.ಶರತ್, ಎಚ್.ಶಿವಾನಂದ ಕಲಕೇರಿ, ಡಾ.ಜಿ.ಎಸ್.ಮಂಗಳಾ ಹಾಗೂ ಪಾಟೀಲ್ ಅಪ್ಪಾಸಾಹೇಬ್ ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ. ನುರಿತ ಆಡಳಿತಗಾರರು ಕಾರ್ಖಾನೆ ನಡೆಸಿದರೂ ಕೂಡ ಸಾಮರ್ಥ್ಯಕ್ಕನುಗುಣವಾಗಿ ಕಬ್ಬು ಅರೆದಿಲ್ಲ. ಅಲ್ಲದೇ, ಕಬ್ಬು ಸರಬರಾಜು ಮಾಡಿದ ರೈತರಿಗೆ ಮುಂಗಡವಾಗಿ ೧೫೦೦ ರೂ. ಮಾತ್ರ ನೀಡಿದ್ದಾರೆ. ಕಾರ್ಖಾನೆ ಪ್ರಾರಂಭವಾದಾಗ ಜಿಲ್ಲಾ ಉಸ್ತುವಾರಿ ಸಚಿವರು ಕಬ್ಬು ಸರಬರಾಜು ಮಾಡಿದ ೧೫ ದಿನಗಳಲ್ಲೇ ಹಣ ಪಾವತಿಸುವ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಹಾಗೆಯೇ ಉಳಿದಿದೆ.

ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಸರಬರಾಜು ಮಾಡಿದವರಿಗೆ ತ್ವರಿತವಾಗಿ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸಬೇಕು. ಹಾಗೂ ಕಾರ್ಖಾನೆಯ ಪ್ರತಿ ವರ್ಷದ ಲಾಭ ನಷ್ಟ ವಿವರಗಳನ್ನು ರೈತರ ಮುಂದಿಡಬೇಕು. ಆಗ ಮಾತ್ರವೇ ರೈತರು ಕಾರ್ಖಾನೆಯ ಮಂಡಳಿ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯ.

andolana

Recent Posts

ದಸರಾ ಉನ್ನತ ಮಟ್ಟದ ಸಭೆ: ದಸರಾ ಪಾಸ್‌ಗಳನ್ನು ಸಂಪೂರ್ಣ ತಿರಸ್ಕರಿಸಿದ ಸಂಸದ ಯದುವೀರ್‌ ಒಡೆಯರ್‌

ಬೆಂಗಳೂರು: ಇಂದು ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು…

13 hours ago

ಜೀಪಿನ ಮೇಲೆ ಬಿದ್ದ ಮರದ ಕೊಂಬೆ: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣದಲ್ಲಿ ಭಾರಿ ಗಾಳಿ-ಮಳೆಯ ನಡುವೆ ಚಲಿಸುತ್ತಿದ್ದ ಜೀಪಿನ ಮೇಲೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ…

14 hours ago

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಅ.11ಕ್ಕೆ ದಸರಾ ಉದ್ಘಾಟನೆ

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ದಿನಾಂಕ ಫಿಕ್ಸ್‌ ಆಗಿದೆ. ಅಕ್ಟೋಬರ್.‌11ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ…

15 hours ago

ಜನವಸತಿ ಪ್ರದೇಶದಲ್ಲಿ ಸಂಚರಿಸಿ ಆತಂಕ ಸೃಷ್ಟಿಸಿದ ಕಾಡಾನೆ

ಸುಂಟಿಕೊಪ್ಪ: ಕೊಡಗರಹಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸುವ ಮೂಲಕ ಈ ಭಾಗದ ನಿವಾಸಿಗಳಲ್ಲಿ ಅತಂಕ ಮೂಡಿಸಿದ ಘಟನೆಯೊಂದು ವರದಿಯಾಗಿದೆ. ಕಾಡಾನೆಯೊಂದು…

16 hours ago

ವಯನಾಡು ಭೂಕುಸಿತ ದುರಂತ ಪ್ರಕರಣ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ವಯನಾಡು: ವಯನಾಡ್ ಭೂಕುಸಿತ ಸ್ಥಳದಲ್ಲಿ ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ಏಳಕ್ಕೆ ಏರಿದೆ…

16 hours ago

ಚೀನಾ ಪ್ರವಾಹದ ಮಧ್ಯೆ 900ಕ್ಕೂ ಹೆಚ್ಚು ವಿಷಕಾರಿ ಹಾವುಗಳು ನಾಪತ್ತೆ: ನೀರಿಗೆ ಇಳಿಯದಂತೆ ಜನತೆಗೆ ಸೂಚನೆ

ಬೀಜಿಂಗ್:‌ ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾವುಗಳ ಸಂತಾನೋತ್ಪತ್ತಿ ಕೇಂದ್ರಗಳು ಹಾನಿಗೊಳಗಾಗಿವೆ. ಪರಿಣಾಮ ಗುವಾಂಗ್ಕ್ಸಿ ಪ್ರದೇಶದಲ್ಲಿ ಹೆಚ್ಚು ಸರ್ಪಗಳು ತಪ್ಪಿಸಿಕೊಂಡಿವೆ.…

17 hours ago