ಎಡಿಟೋರಿಯಲ್

ಅಸಮಾನತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದ ಪಿಕೆಟ್ಟಿ

ಟಿ.ಎಸ್.ವೇಣುಗೋಪಾಲ್

ಥಾಮಸ್ ಪಿಕೆಟ್ಟಿ ಇಂದು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಮೂರು ಮುಖ್ಯ ಗ್ರಂಥಗಳಾದ ಕ್ಯಾಪಿಟಲ್ ಇನ್ ದಿ ಟ್ವೆಂಟಿ ಫಸ್ಟ್ ಸೆಂಚುರಿ, ಕ್ಯಾಪಿಟಲ್ ಅಂಡ್ ಐಡಿಯಾಲಜಿ, ಬ್ರೀಫ್ ಹಿಸ್ಟರಿ ಆಫ್ ಇನಿಕ್ವಾಲಿಟಿ ಇಂದು ತುಂಬಾ ಚರ್ಚಿತವಾಗುತ್ತಿವೆ.

ಸಂಪತ್ತಿನ ಕೇಂದ್ರೀಕರಣ ಹಾಗೂ ಅಸಮಾನತೆಯನ್ನು ಕುರಿತ ಅವರ ೨೦ವರ್ಷಗಳ ಮಹತ್ವದ ಅಧ್ಯಯನದಿಂದ ಇಂದು ಮತ್ತೆ ಅಸಮಾನತೆಯ ಪ್ರಶ್ನೆ ಚರ್ಚೆಯಾಗುತ್ತಿದೆ. ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ಅಸಮಾನತೆಯ ಅಧ್ಯಯನವನ್ನು ಮುಂಚೂಣಿಗೆ ತಂದ ಕೀರ್ತಿ ಪಿಕೆಟ್ಟಿಗೆ ಸಲ್ಲಬೇಕು. ಅದಕ್ಕಾಗಿ ಅವರು ಅಪಾರ ಅಂಕಿಅಂಶಗಳನ್ನು ಸಂಗ್ರಹಿಸಿರುವುದೇ ಅಲ್ಲದೆ, ಅದು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಿದ್ದಾರೆ. ಅವನ್ನು ಗಮನಿಸದೇ ಇಂದು ಅಸಮಾನತೆ ಅಥವಾ ಸಂಪತ್ತಿನ, ವರಮಾನದ ಕೇಂದ್ರೀಕರಣವನ್ನು ಕುರಿತ ಯಾವುದೇ ಅಧ್ಯಯನವೂ ಸಾಧ್ಯವಿಲ್ಲ.

ಫ್ರಾನ್ಸಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಪಿಕೆಟ್ಟಿಯವರು ತಮ್ಮ ಅಧ್ಯಯನವನ್ನು ಕೇವಲ ವಿಶ್ಲೇಷಣೆಗೆ ಮಿತಿಗೊಳಿಸದೆ, ಪರಿಹಾರವನ್ನು ಸೂಚಿಸುವ ಕೆಲಸವನ್ನೂ ಮಾಡಿದ್ದಾರೆ. ಹಾಗಾಗಿ ಇವರ ಅಧ್ಯಯನ ಇಂದು ಅರ್ಥಶಾಸ್ತ್ರಜ್ಞರು, ರಾಜಕೀಯ ನಾಯಕರು ಹಾಗೂ ಸಾಮಾನ್ಯರ ಗಮನ ಸೆಳೆದಿದೆ ಮತ್ತು ಸಾಕಷ್ಟು ಚರ್ಚೆಯಾಗುತ್ತಿದೆ.

ಥಾಮಸ್ ಪಿಕೆಟ್ಟಿಯವರ ಅಧ್ಯಯನ ೨೦೦ ವರ್ಷಗಳ ಅವಽಯ ವರಮಾನ ಹಾಗೂ ಸಂಪತ್ತಿನ ಅಸಮಾನತೆಯನ್ನು ಸುದೀರ್ಘವಾಗಿ ಪರಿಶೀಲಿಸುತ್ತದೆ. ಅವರು ತಮ್ಮ ಅಧ್ಯಯನಕ್ಕೆ ತೆರಿಗೆಯ ಅಂಕಿಅಂಶವನ್ನು ಬಳಸುತ್ತಾರೆ. ಇದನ್ನು ಇಲ್ಲಿಯವರೆಗೂ ಈ ಪ್ರಮಾಣದಲ್ಲಿ ಯಾರೂ ಬಳಸಿರಲಿಲ್ಲ. ವರಮಾನ ಹಾಗೂ ಸಂಪತ್ತಿನ ಮೇಲೆ ತೆರಿಗೆ ವಿಽಸುವ ಪದ್ಧತಿ ಬಂಡವಾಳ ಶಾಹಿ ಜಗತ್ತಿನಲ್ಲಿ ಇತ್ತೀಚೆಗೆ ೨೦ನೇ ಶತಮಾನದಲ್ಲಿ ಚಾಲನೆಗೆ ಬಂದಿದೆ. ಫ್ರಾನ್ಸಿನಲ್ಲಿ ಸ್ವಲ್ಪ ಮೊದಲು ಅಂದರೆ ಕೈಗಾರಿಕಾ ಕ್ರಾಂತಿಯ ನಂತರ ಸಂಪತ್ತಿನ ಮೇಲೆ ತೆರಿಗೆ ಚಾಲ್ತಿಗೆ ಬಂತು. ಹಾಗಾಗಿ ಫ್ರಾನ್ಸಿನಲ್ಲಿ ಸಂಪತ್ತಿನ ಅಸಮಾನತೆ ಇತ್ಯಾದಿ ವಿಷಯಗಳಿಗೆ ಸಂಬಂಽಸಿದಂತೆ ಸ್ವಲ್ಪ ಹಿಂದಿನಿಂದಲೇ ಮಾಹಿತಿ ಸಿಗುತ್ತದೆ. ಪಿಕೆಟ್ಟಿ ಈ ಇನ್ನೂರು ವರ್ಷಗಳ ಅವಽಯ ಅಂಕಿಅಂಶಗಳನ್ನು ಅಧ್ಯಯನ ಮಾಡಿ, ಒಂದು ಪ್ರಮುಖ ಅಂಶವನ್ನು ನಮ್ಮ ಗಮನಕ್ಕೆ ತರುತ್ತಾರೆ. ಅಸಮಾನತೆ ೧೯೧೪ರ ತನಕ ಒಂದೇ ಸಮನೆ ಏರುತ್ತಾ ಸಾಗಿತ್ತು. ನಂತರ ೧೯೧೪ರಿಂದ ೧೯೪೦ರವರೆಗೆ ಅದು ಇಳಿಯಲು ಪ್ರಾರಂಭಿಸಿತು. ಈಗ ಮತ್ತೆ ಅಸಮಾನತೆ ಹೆಚ್ಚುತ್ತಾ ಹೋಗುತ್ತಿದೆ ಅನ್ನುವುದನ್ನು ಅವರ ಅಧ್ಯಯನ ತಿಳಿಸುತ್ತದೆ.

ಪಿಕೆಟ್ಟಿಯವರು ಗುರುತಿಸುವಂತೆ ಇಡೀ ಇನ್ನೂರು ವರ್ಷಗಳ ಚರಿತ್ರೆಯನ್ನು ಗಮನಿಸಿದರೆ ಸಮಾಜ ಸಮಾನತೆಯ ಕಡೆಗೆ ವಿಕಾಸವಾಗುತ್ತಿರುವುದನ್ನು ಗಮನಿಸಬಹುದು. ಆದರೆ ಇದು ಸ್ವಾಭಾವಿಕವಾಗಿ ನಡೆದ ಪ್ರಕ್ರಿಯೆಯಲ್ಲ. ಇದಕ್ಕಾಗಿ ವ್ಯಾಪಕವಾದ ರಾಜಕೀಯ ಸಂಘಟನೆ, ಸಾಮಾಜಿಕ ಹೋರಾಟ ನಡೆದಿದೆ. ಕಾನೂನು, ಚುನಾವಣೆ, ತೆರಿಗೆ, ಶಿಕ್ಷಣ, ಇತ್ಯಾದಿ ಸಾಂಸ್ಥಿಕ ವ್ಯವಸ್ಥೆಯಲ್ಲಿ ಹಲವು ಪೂರಕ ಬದಲಾವಣೆಗಳಾಗಿವೆ. ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಕುಲೀನರಿಗಿದ್ದ ವಿಶೇಷ ಸೌಲಭ್ಯಗಳು ರದ್ದಾದವು. ೧೭೯೧ರಲ್ಲಿ ಗುಲಾಮಗಿರಿಯ ವಿರುದ್ಧ ಬಂಡಾಯ ನಡೆಯಿತು. ಇವೆಲ್ಲಾ ಸಮಾನತೆಯ ಕಡೆಗಿನ ಚಲನೆಯನ್ನು ಸಾಧ್ಯಮಾಡಿದವು. ಗುಲಾಮರು ದಂಗೆಯೆದ್ದುದರಿಂದಲೇ ಗುಲಾಮಗಿರಿ ಹಾಗೂ ವಸಾಹತುಶಾಹಿ ವ್ಯವಸ್ಥೆಯ ಪತನ ಪ್ರಾರಂಭವಾಗಿದ್ದು.

ಪ್ರಗತಿಪರ ತೆರಿಗೆ, ಸಾಮಾಜಿಕ ಸುರಕ್ಷತೆ, ಕಾರ್ಮಿಕರ ಚಳವಳಿ, ಇವುಗಳಿಂದ ೧೯ ಮತ್ತು ೨೦ನೇ ಶತಮಾನದಲ್ಲಿ ಹೆಚ್ಚಿನ ಸಮಾನತೆ ಸಾಧ್ಯವಾಯಿತು. ಅಂದರೆ ಇಂದು ಅಸಮಾನತೆ ಇಲ್ಲ ಅಂತಲ್ಲ. ಇತ್ತೀಚಿನ ದಶಕಗಳಲ್ಲಿ ಅದು ಹೆಚ್ಚು ತೀವ್ರವೂ ಆಗುತ್ತಿದೆ. ಆದರೆ ೧೯ನೇ ಶತಮಾನದಲ್ಲಿ ಇದ್ದಷ್ಟು ಇಲ್ಲ. ಇದೊಂದು ಸಂಕೀರ್ಣ ವಾಸ್ತವ. ಸಮಾನತೆಯ ಕಡೆಗೆ ನಡೆಯುತ್ತಿದ್ದೇವೆ, ಆದರೂ ತೀವ್ರ ಅಸಮಾನ ಸಮಾಜದಲ್ಲಿ ಬದುಕುತ್ತಿದ್ದೇವೆ. ಕೆಳಗಿನ ಶೇ. ೫೦ರಷ್ಟು ಜನರನ್ನು ಗಮನಿಸಿದರೆ ಅವರಲ್ಲಿ ಸ್ವಂತದ್ದು ಅಂತ ಏನೂ ಇಲ್ಲ.

ಸಾಮಾನ್ಯವಾಗಿ ಒಮ್ಮೆ ಆರ್ಥಿಕ ಬೆಳವಣಿಗೆಯಾದರೆ, ಮಾರುಕಟ್ಟೆಯಲ್ಲಿನ ಸ್ಪರ್ಧೆಯಿಂದ ಸಂಪತ್ತಿನ ವಿತರಣೆಯಾಗಿ ಎಲ್ಲರಿಗೂ ಬೆಳವಣಿಗೆಯ ಪಾಲು ಸಿಗುತ್ತದೆ ಎನ್ನುವ ಸಮಜಾಯಿಷಿ ನೀಡಲಾಗುತ್ತದೆ. ಆದರೆ ಸಮಸ್ಯೆಯೆಂದರೆ ಕಳೆದ ಎರಡು ಶತಮಾನಗಳಿಂದ ಬೆಳವಣಿಗೆ ಆಗುತ್ತಲೇ ಇದೆ. ಆದರೆ ಕೆಳಗಿನ ಶೇ. ೫೦ ಜನರ ಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಇನ್ನೊಂದು ವಾದ ಇದೆ. ಆರ್ಥಿಕತೆ ಕಾರ್ಯ ನಿರ್ವಹಿಸಬೇಕಾದರೆ ಈ ಮಟ್ಟದ ಸಂಪತ್ತಿನ ಕೇಂದ್ರೀಕರಣ ಅನಿವಾರ್ಯ. ಆದರೆ ಪಿಕೆಟ್ಟಿಯವರು ಹೇಳುವಂತೆ ಜಾಗತಿಕ ಯುದ್ಧದ ಸಮಯದಲ್ಲಿ ಮೇಲಿನ ಶೇ. ೧೦ ಜನರ ಸಂಪತ್ತಿನ ಪ್ರಮಾಣದಲ್ಲಿ ದೊಡ್ಡ ಕುಸಿತ ಆಗಿತ್ತು. ಆಗ ಆರ್ಥಿಕತೆ ನಿಂತು ಹೋಗಿರಲಿಲ್ಲ. ವಾಸ್ತವವಾಗಿ ಆಗ ಆರ್ಥಿಕತೆ ಹೆಚ್ಚು ವೇಗವಾಗಿ ಬೆಳೆದಿತ್ತು. ೨೦ನೇ ಶತಮಾನದಲ್ಲಿ ಅಮೇರಿಕದಲ್ಲಿ ತೆರಿಗೆ ವ್ಯವಸ್ಥೆ ಹೆಚ್ಚು ಪ್ರಗತಿಪರವಾಗಿತ್ತು. ಶ್ರೀಮಂತರಿಗೆ ಶೇ.೯೦ರಷ್ಟು ತೆರಿಗೆ ಹಾಕಲಾಗುತ್ತಿತ್ತು. ಈ ಹೆಚ್ಚಿನ ತೆರಿಗೆಯಿಂದ ಬೆಳವಣಿಗೆಯಾಗಲಿ, ಉತ್ಪಾದಕತೆಯಾಗಲಿ ಅಥವಾ ಅನ್ವೇಷಣೆಯಾಗಲಿ ಕುಂಠಿತವಾಗಲಿಲ್ಲ. ಆರ್ಥಿಕ ಪ್ರಗತಿಗೆ ಶ್ರೀಮಂತರು ಬಡವರಿಗಿಂತ ನೂರೋ, ಇನ್ನೂರೋ ಪಟ್ಟು ಸಂಪತ್ತು ಇಟ್ಟುಕೊಳ್ಳಬೇಕಾಗಿಲ್ಲ. ಐದೋ, ಹತ್ತೋ ಪಟ್ಟು ವ್ಯತ್ಯಾಸ ಇದ್ದರೆ ಸಾಕು ಅನ್ನುವುದು ಪಿಕೆಟ್ಟಿಯ ವಾದ.

ಇತ್ತೀಚಿನ ದಿನಗಳಲ್ಲಿ ಶ್ರೀಮಂತರಲ್ಲಿ ಸಂಪತ್ತು ವಿಪರೀತವಾಗಿ ಕೇಂದ್ರೀಕೃತವಾಗುತ್ತಿದೆ. ಈ ಪ್ರಕ್ರಿಯೆಯನ್ನು ಸಮರ್ಥಿಸುತ್ತಾ ಇಂತಹ ಕೇಂದ್ರೀಕರಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಇದರಿಂದ ಜನರ ಸರಾಸರಿ ಆದಾಯ ಹಾಗೂ ಕೂಲಿ ಹೆಚ್ಚು ವೇಗವಾಗಿ ಏರಿಕೆಯಾಗುತ್ತದೆ ಎಂದು ೧೯೮೦ರಲ್ಲಿ ರೊನಾಲ್ಡ್ ರೇಗನ್ ಭರವಸೆಯನ್ನು ನೀಡಿದ್ದ. ಜನ ಶ್ರಮಪಟ್ಟು ದುಡಿದರೂ ಅವರ ವರಮಾನ ಹೆಚ್ಚಲಿಲ್ಲ. ಜನರನ್ನು ಸಮಾಧಾನ ಪಡಿಸಲು ರಿಪಬ್ಲಿಕನ್ ಪಕ್ಷ ಇದಕ್ಕೊಂದು ವಿವರಣೆ ನೀಡಬೇಕಾಗಿತ್ತು. ತಮ್ಮ ಸಮಸ್ಯೆಗೆ ಇನ್ಯಾರನ್ನೋ ಹೊಣೆ ಮಾಡುವುದು ಒಂದು ಪರಿಹಾರವಾಗಿ ತೋರಿತು. ಚೀನಾ, ಮೆಕ್ಸಿಕೊ, ಮುಸ್ಲಿಮರು ಇದಕ್ಕೆ ಕಾರಣ ಎನ್ನಲಾಯಿತು. ರಿಪಬ್ಲಿಕನ್ ಪಕ್ಷ ಚೀನಾ ವಿರೋಽ, ಮೆಕ್ಸಿಕನ್ ವಿರೋಽ, ಮುಸ್ಲಿಂ ವಿರೋಽ ಹೀಗೆ ಎಲ್ಲದರ ‘ವಿರೋಽ’ ಪಕ್ಷವಾಯಿತು.

ರಷ್ಯಾದ ಪತನದ ನಂತರ ಮಾರುಕಟ್ಟೆಯ ಸ್ವನಿಯಂತ್ರಣ ಶಕ್ತಿಯ ಬಗ್ಗೆ ಅಪರಿಮಿತ ವಿಶ್ವಾಸ ಮೂಡಿತ್ತು. ಮಾರುಕಟ್ಟೆಯಲ್ಲಿನ ಸ್ಪರ್ಧೆ ಹಾಗೂ ಜಾಗತೀಕರಣ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಿ ಕಾಣತೊಡಗಿತ್ತು. ಮರುಹಂಚಿಕೆ ಅಥವಾ ಮಾರುಕಟ್ಟೆಯ ನಿಯಂತ್ರಣದ ಬಗ್ಗೆ ಯೋಚಿಸುವುದನ್ನೇ ಬಿಟ್ಟಿದ್ದರು. ೨೦೦೮ರ ಆರ್ಥಿಕ ಬಿಕ್ಕಟ್ಟು ಇದನ್ನು ಸುಳ್ಳುಮಾಡಿತು. ಮಾರುಕಟ್ಟೆಯ ಸ್ಪರ್ಧೆಯಾಗಲಿ, ನಿಯಂತ್ರಣಗಳನ್ನು ರದ್ದುಗೊಳಿಸುವುದೂ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಎನ್ನುವುದು ಜನರಿಗೆ ಅರ್ಥವಾಗುತ್ತಿದೆ. ನವ ಉದಾರೀಕರಣ ಹೋಗಿ ಎಷ್ಟೋ ದೇಶಗಳಲ್ಲಿ ಆಗಿರುವಂತೆ ಹೊಸ ರಾಷ್ಟ್ರೀಯತೆ ಹುಟ್ಟಿಕೊಳ್ಳುವುದೇ ಅಥವಾ ಸಮಾನತೆ ಹಾಗೂ ಮರುಹಂಚಿಕೆಯ ಬೇಡಿಕೆಗೆ ಚಾಲನೆ ಸಿಗುವುದೇ? ಅನ್ನುವುದು ನಮ್ಮ ಮುಂದಿರುವ ಪ್ರಶ್ನೆ.

ಪಾಲ್ಗೊಳ್ಳುವಿಕೆಯ ಸಮಾಜವಾದ ಹಾಗೂ ಒಕ್ಕೂಟ ಪ್ರಜಾಸತ್ತೆಯನ್ನು ಪರ್ಯಾಯವಾಗಿ ಪಿಕೆಟ್ಟಿ ಸೂಚಿಸುತ್ತಾರೆ. ಪಿಕೆಟ್ಟಿಯವರು ಇನ್ನೂ ಹಲವು ಪರಿಹಾರಗಳನ್ನು ಸೂಚಿಸುತ್ತಾರೆ. ಮೊದಲನೆಯದಾಗಿ ಎಲ್ಲರಿಗೂ ಕನಿಷ್ಠ ಪಿತ್ರಾರ್ಜಿತ ಆಸ್ತಿ ಇರಬೇಕು. ೨೫ ವರ್ಷವಾದವರು ೧,೨೦,೦೦೦ ಯೂರೋ ಪಡೆಯಬೇಕು. ಆಗ ಒಂದು ಕ್ರಿಯಾತ್ಮಕವಾದ ಆರ್ಥಿಕತೆ ಅಸ್ತಿತ್ವಕ್ಕೆ ಬರುತ್ತದೆ. ಕೆಳಸ್ತರದಲ್ಲಿರುವ ಶೇ.೫೦ರಷ್ಟು ಬಡವರಿಗೆ ಆರ್ಥಿಕತೆ ತಮಗೆ ನ್ಯಾಯ ಒದಗಿಸಿದೆ ಅನ್ನಿಸುವುದಿಲ್ಲ. ತಾವು ತುಂಬಾ ಕಷ್ಟಪಟ್ಟು, ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ದುಡಿದರೂ ತಮ್ಮ ವರಮಾನ ಹೆಚ್ಚುತ್ತಿಲ್ಲ ಅನ್ನುವ ಬೇಸರ ಅವರಿಗಿದೆ. ವರಮಾನ ಹಾಗೂ ಸಂಪತ್ತಿನ ಮರು ಹಂಚಿಕೆ ಸಾಧ್ಯವಾಗಬೇಕು. ಇಲ್ಲದೇ ಹೋದರೆ ನಿರಂಕುಶವಾದಿ ಬೆಳವಣಿಗೆಯ ಕ್ರಮ ಜಾರಿಯಾಗಿಬಿಡುವ ಅಪಾಯವಿದೆ. ೨೦ನೇ ಶತಮಾನದ ಚರಿತ್ರೆಯನ್ನು ನೋಡಿದರೆ ಪ್ರಗತಿಪರ ತೆರಿಗೆ ಅತ್ಯಂತ ಯಶಸ್ವಿಯಾಗಿತ್ತು. ಆದ್ದರಿಂದ ಶಿಕ್ಷಣ ಹಾಗೂ ಸಾಮಾಜಿಕ ಸುರಕ್ಷೆ ವ್ಯಾಪಕವಾಗಿ ಬೆಳೆದಿತ್ತು. ಇಂದು ನಾವು ಆ ದಿಕ್ಕಿನಲ್ಲಿ ಯೋಚಿಸಬೇಕು.

ಅವರು ಭವಿಷ್ಯಕ್ಕೆ ಎರಡು ಚಿಂತನೆಗಳನ್ನು ಮುಂದಿಡುತ್ತಾರೆ. ಮೊದಲನೆಯದು ಸಾಮಾಜಿಕ ಒಕ್ಕೂಟ ವ್ಯವಸ್ಥೆ. ಎರಡನೆಯದು ಪಾರ್ಟಿಸಿಪೇಟರಿ ಸಮಾಜವಾದ. ಜಾಗತೀಕರಣವನ್ನು ಹೆಚ್ಚು ಸಾಮಾಜಿಕವಾಗಿ ಸಂಘಟಿಸಬೇಕು. ನಮ್ಮೆಲ್ಲ ಅಂತಾರಾಷ್ಟ್ರೀಯ ಒಪ್ಪಂದಗಳು ಕೇವಲ ಮುಕ್ತವ್ಯಾಪಾರ ಹಾಗೂ ಮುಕ್ತಬಂಡವಾಳದ ಹರಿವಿನ ಬಗ್ಗೆಯೇ ಆಗುತ್ತಿರುತ್ತವೆ, ಅದು ತಪ್ಪಬೇಕು. ಸಮಾನ ಬೆಳವಣಿಗೆ ಹಾಗೂ ಸಮಾನ ಅಭಿವೃದ್ಧಿಯನ್ನು ಕುರಿತಂತೆ ನಾವು ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ದೊಡ್ಡ ಅಂತಾರಾಷ್ಟ್ರೀಯ ಕಾರ್ಪೋರೇಷನ್ನುಗಳಿಗೆ, ಅತಿ ಶ್ರೀಮಂತರಿಗೆ, ಎಷ್ಟು ತೆರಿಗೆ ಹಾಕಬೇಕು? ಇಂಗಾಲದ ಹೂರಸೂಸುವಿಕೆಗೆ ಯಾವ ರೀತಿಯಲ್ಲಿ ಮಿತಿ ಹಾಕಬೇಕು? ಇತ್ಯಾದಿ ವಿಷಯಗಳನ್ನು ಕುರಿತು ಒಪ್ಪಂದಗಳು ಆಗಬೇಕು. ಮುಕ್ತ ವ್ಯಾಪಾರ ಹಾಗೂ ಬಂಡವಾಳದ ಹರಿವು, ಇವೆಲ್ಲಾ ಇಂತಹ ಹೆಚ್ಚು ಸಾಮಾಜಿಕವಾದ ಅಂತಾರಾಷ್ಟ್ರೀಯ ಒಪ್ಪಂದದ ಭಾಗವಾಗಬಹುದೇ ಹೊರತು ಅದೇ ಪ್ರಧಾನವಾಗಬಾರದು. ಬಾಳಿಕೆಯ ಅಭಿವೃದ್ಧಿ ಹಾಗೂ ಸಮಾನ ಬೆಳವಣಿಗೆಗೆ ಗುರಿಗಳನ್ನು ಹಾಕಿಕೊಳ್ಳಬೇಕು. ಒಪ್ಪಂದಗಳ ದಿಕ್ಕು ಬದಲಾಗಬೇಕು.

ಎರಡನೆಯದಾಗಿ ಪಿಕೆಟ್ಟಿಯವರು ಪಾಲ್ಗೊಳ್ಳುವಿಕೆಯ ಸಮಾಜವಾದವನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಅವರ ದೃಷ್ಟಿಯಲ್ಲಿ ಎಲ್ಲರಿಗೂ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು. ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣಕ್ಕೆ ಅವಕಾಶವಿರಬೇಕು. ಸಾಮಾನ್ಯವಾಗಿ ಕೆಳಸ್ತರದ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸುವುದು, ಹಾಗೂ ಅದಕ್ಕೆ ಹಣವನ್ನು ಕ್ರೋಢೀಕರಿಸುವುದು ನಮ್ಮ ಗುರಿಯಾಗಿರುವುದೇ ಇಲ್ಲ. ಆ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಹೀಗಾಗಬಾರದು.

ಜೊತೆಗೆ ಜನರ ಬಳಿ ಹಣ ಇರಬೇಕು. ಹಣದ ಜೊತೆ ಅಽಕಾರ ಹಾಗೂ ಅವಕಾಶಗಳು ಬರುತ್ತವೆ. ನಿಮ್ಮಲ್ಲಿ ಹಣ ಇಲ್ಲದೇ ಹೋದರೆ ನಿಮಗೆ ಸಮಾಜದಲ್ಲಿ ಧ್ವನಿ ಇರುವುದಿಲ್ಲ. ಸಿಕ್ಕ ಅವಕಾಶವನ್ನು ಒಪ್ಪಿಕೊಳ್ಳಬೇಕು. ಆದರೆ ನಿಮ್ಮಲ್ಲಿ ೨೦೦,೦೦೦ ಯುರೋಗಳು ಇದ್ದಿದ್ದರೆ ಸಿಕ್ಕ ಕೆಲಸವನ್ನು ತಕ್ಷಣ ಒಪ್ಪಿಕೊಳ್ಳಬೇಕಾಗಿಲ್ಲ. ಸಮಾಜದಲ್ಲಿ ಅಽಕಾರದ ಹಂಚಿಕೆಯಲ್ಲಿ ಬದಲಾವಣೆಯನ್ನು ತರುತ್ತದೆ. ಹಾಗಾಗಿ ಸಂಪತ್ತಿನ ಮೇಲೆ ತೆರಿಗೆ ಹಾಕಿ ಬಂದ ಹಣದಲ್ಲಿ ೨೫ ವರ್ಷದ ಎಲ್ಲ ಯುವಕರಿಗೂ ೧,೨೦,೦೦೦ ಯೂರೋಗಳನ್ನು ವರ್ಗಾಯಿಸಬೇಕು. ಇದರಿಂದ ಅವರಿಗೆ ತಮ್ಮದೇ ಆದ ಉದ್ದಿಮೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಬಹುಪಾಲು ಜನ ಆರ್ಥಿಕತೆಯಲ್ಲಿ ಪಾಲುಗೊಳ್ಳಬೇಕು. ಆರ್ಥಿಕತೆ ವಿಶಾಲವಾದ ಜನಸಮುದಾಯವನ್ನು ಆಶ್ರಯಿಸಿ ಬೆಳೆಯಬೇಕು. ದೇಶದ ಬಹುಸಂಖ್ಯಾತ ಜನ ಅದರ ಭಾಗವಾಗಬೇಕು.

ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ ಅನ್ನುವುದು ಸರಿಯಲ್ಲ. ಬದಲಾವಣೆ ಹಿಂದೆಯೂ ಆಗಿತ್ತು. ಮುಂದೆಯೂ ಆಗುತ್ತಲೇ ಇರುತ್ತದೆ. ಆದರೆ ಇದಕ್ಕಾಗಿ ಒಂದು ಪ್ರಬಲವಾದ ಸಾಮಾಜಿಕ ಸಂಘಟನೆ ರೂಪುಗೊಳ್ಳಬೇಕು. ಅದರ ಬೆಂಬಲಕ್ಕೆ ಸಾಮೂಹಿಕ ಆಂದೋಲನ ಹಾಗೂ ಸಂಘಟನೆಗಳು ಇರಬೇಕು. ಆರ್ಥಿಕ ಪ್ರಶ್ನೆಗಳು ತುಂಬಾ ಮುಖ್ಯ. ಅದನ್ನು ಬೇರೆಯವರಿಗೆ ಬಿಟ್ಟು ಸುಮ್ಮನಿರಬಾರದು. ಸಮಾನತೆಗಾಗಿ ನಡೆಸುವ ಹೋರಾಟಕ್ಕೆ ಬೇಕಾದ ಜ್ಞಾನವನ್ನು ಜನ ಪಡೆದುಕೊಳ್ಳುವುದು ಅತ್ಯಾವಶ್ಯಕ. ಪಿಕೆಟ್ಟಿಯವರ ಬರಹಗಳು ಇಂತಹ ಹೋರಾಟಕ್ಕೆ ಜನರನ್ನು ಸಿದ್ಧಗೊಳಿಸಲು ಬೇಕಾದ ಸಾಮಗ್ರಿಯನ್ನು ಒದಗಿಸುತ್ತವೆ. ಹಾಗಾಗಿ ಪಿಕೆಟ್ಟಿಯವರ ಸಿದ್ಧಾಂತಗಳನ್ನು ಕುರಿತು ಇಂದು ವ್ಯಾಪಕವಾದ ಚರ್ಚೆ ನಡೆಯಬೇಕಾಗಿದೆ. ಇದೊಂದು ವಿಶಾಲವಾದ ರಾಜಕೀಯ ಸಂಘಟನೆಯ ಸೈದ್ಧಾಂತಿಕ ಬುನಾದಿಯಾಗಬಹುದು.

ಇದೇ ತಿಂಗಳು ೨೪ ಹಾಗೂ ೨೫ರಂದು ಸಂಜೆ ೬.೩೦ಕ್ಕೆ ಮೈಸೂರಿನ ಸುರುಚಿ ರಂಗಮಂದಿರದಲ್ಲಿ ಪಿಕೆಟ್ಟಿಯವರ ಚಿಂತನೆಗಳ ಬಗ್ಗೆ ಚರ್ಚೆ ಇಟ್ಟುಕೊಳ್ಳಲಾಗಿದೆ. ಆಸಕ್ತರಿಗೆ ಸ್ವಾಗತ.

andolanait

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

51 mins ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

1 hour ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

1 hour ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

1 hour ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

1 hour ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

1 hour ago