ಎಡಿಟೋರಿಯಲ್

ವಿದ್ಯುತ್ ಅವಘಡ: ಜೀವ ಹಾನಿ ತಪ್ಪಿಸಲು ಸೆಸ್ಕ್ ತುರ್ತು ಕ್ರಮ ಕೈಗೊಳ್ಳಬೇಕು

ವಿದ್ಯುತ್ ಅವಘಡಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜೀವ ಹಾನಿಗೆ ಹೊಣೆ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ವಿದ್ಯುತ್ ಸರಬರಾಜು ನಿಗಮಗಳ ನಿರ್ಲಕ್ಷ್ಯ ಧೋರಣೆ ಒಂದೆಡೆಯಾದರೆ ನಮ್ಮ ಅಜಾಗರೂಕತೆಯೂ ಅವಘಡಗಳಿಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಬೆಂಕಿಯ ಜೊತೆ ಸರಸ ಬೇಡ ಎಂಬ ಮಾತಿನಂತೆ ವಿದ್ಯುತ್ ಜೊತೆಗೆ ಹುಡುಗಾಟಿಕೆ ಬಿಟ್ಟು, ಮುಂಜಾಗ್ರತೆವಹಿಸಿದರೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ. ಇದರಲ್ಲಿ ನಿಗಮದ ಹೊಣೆಗಾರಿಕೆಯೂ ದೊಡ್ಡದಿದೆ. ಜೀವ ಹಾನಿ ಉಂಟಾದಾಗ ಸಂತಾಪ ಸೂಚಿಸಿ, ಮೃತನ ಕುಟುಂಬಕ್ಕೆ ಪರಿಹಾರ ಧನ ನೀಡಿ ಕೈತೊಳೆದು ಕೊಳ್ಳುವುದು ಮಾನವೀಯತೆಯಲ್ಲ. ಆದಷ್ಟು ಜೀವ ಹಾನಿ ಉಂಟಾಗದಂತೆ ಕ್ರಮವಹಿಸುವ ಕೆಲಸವಾಗಬೇಕಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯೊಂದರಲ್ಲೇ ಕಳೆದ ೨೫ ದಿನಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಏಳು ಮಂದಿ ಮೃತ ಪಟ್ಟಿರುವುದು ಜನರಲ್ಲಿ ಆತಂಕದ ಜೊತೆಗೆ ಸೆಸ್ಕ್ ಕಾರ್ಯ ವೈಖರಿ ಬಗ್ಗೆ ಜನಾಕ್ರೋಶಕ್ಕೂ ಕಾರಣವಾಗಿದೆ.

೧೯೫೭ರಲ್ಲಿ ಮೈಸೂರು ಪ್ರಾಂತ್ಯದ ವಿದ್ಯುತ್ ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಾಗಿ ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯನ್ನು ರಚಿಸಲಾಗಿತ್ತು. ಕರ್ನಾಟಕ ರಾಜ್ಯ ಉದಯವಾದ ನಂತರದ ದಿನಗಳಲ್ಲಿ ಇತರೆ ಖಾಸಗಿ ವಿತರಣಾ ಕಂಪನಿಗಳನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯೊಂದಿಗೆ ವಿಲೀನಗೊಳಿಸಲಾಗಿತ್ತು. ವಿದ್ಯುತ್ ಕ್ಷೇತ್ರಗಳ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸುವ ಜತೆಗೆ ಕೇಂದ್ರ ಸರ್ಕಾರದ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಚನೆಯಾದ ನಂತರ ೧೯೯೯ರಿಂದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯು ನಿಗಮವಾಗಿ ಪರಿವರ್ತನೆಯಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ರಚನೆಯಾಯಿತು. ಭೌಗೋಳಿಕ ಪ್ರದೇಶಗಳನ್ನಾಧರಿಸಿ ೨೦೦೨ರಿಂದ ರಾಜ್ಯದಲ್ಲಿ ಬೆಸ್ಕಾ, ಮೆಸ್ಕಾಂ, ಹೆಸ್ಕಾಂ ಹಾಗೂ ಗೆಸ್ಕಾಂ ರಚನೆಯಾಗಿದೆ. ಬಳಿಕ ೨೦೦೫ರಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬೇರ್ಪಡಿಸಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಅಸ್ತಿತ್ವಕ್ಕೆ ಬಂದಿದ್ದು, ಮೈಸೂರು, ಮಂಡ್ಯ, ಚಾಮರಾಜ ನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಜವಾಬ್ದಾರಿ ಹೊತ್ತಿದೆ.

ವಿದ್ಯುತ್ ಅವಘಡಗಳ ಬಗ್ಗೆ ಸೆಸ್ಕ್ ಕಾಲ ಕಾಲಕ್ಕೆ ಜನ ಜಾಗೃತಿ ಹೆಸರಲ್ಲಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ಕೈ ತೊಳೆದುಕೊಳ್ಳುವ ಬದಲಿಗೆ ನಿಗಮದ ಸಿಬ್ಬಂದಿ ಕ್ಷೇತ್ರಗಳಲ್ಲಿ ಸಂಚರಿಸಿ ಜನರಿಗೆ ವಿದ್ಯುತ್ ಅವಘಡಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ ವಿದ್ಯುತ್ ಅಡಚಣೆ ಸಂಬಂಧದ ದೂರುಗಳಿಗೆ ನಗರ ಪ್ರದೇಶಗಳಲ್ಲಿ ತ್ವರಿತಗತಿಯಲ್ಲಿ ಸ್ಪಂದಿಸುವಂತೆಯೇ ಗ್ರಾಮೀಣ ಪ್ರದೇಶಗಳ ಜನರ ಅದರಲ್ಲೂ ರೈತಾಪಿ ವರ್ಗದವರ ದೂರಿಗೆ ತಕ್ಷಣವೇ ಸ್ಪಂದಿಸಿದರೆ ಮಾನವ ಮತ್ತು ವನ್ಯಪ್ರಾಣಿಗಳ ಜೀವ ಹಾನಿಯನ್ನು ತಡೆಗಟ್ಟಬಹುದಾಗಿದೆ.

ನಗರ ಪ್ರದೇಶಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಮನೆಯ ಮುಂದೆ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಆಜಾಗರೂಕತೆಯಿಂದ ಸ್ಪರ್ಶಿಸಿ ಜೀವ ಹಾನಿಯಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗುವ ವಿದ್ಯುತ್ ಅವಘಡಗಳಿಗೆ ವಿದ್ಯುತ್ ಸರಬರಾಜು ನಿಗಮವೇ ನೇರ ಹೊಣೆ. ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಮಾರ್ಗಗಳು ಹಿಗ್ಗಿ ಕೃಷಿ ಜಮೀನಿನ ಮೇಲೆ ಜೋತು ಬಿದ್ದಿರುವ ಬಗ್ಗೆ ದೂರುಗಳು ಬಂದರೂ ಸಕಾಲಕ್ಕೆ ಸ್ಪಂದಿಸದಿರುವುದು ಒಂದೆಡೆಯಾದರೆ, ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಮಾಡುವುದಲ್ಲದೆ, ಅಗತ್ಯ ಲೋಡ್ ನೀಡದಿರುವ, ಪರಿವರ್ತಕ (ಟಿಸಿ)ಗಳು ಹಾಳಾದರೂ ಸಕಾಲಕ್ಕೆ ಬದಲಾಯಿಸದ ಬಹುತೇಕ ಸಂದರ್ಭಗಳಲ್ಲಿ ಕಷ್ಟಪಟ್ಟು ಸಾಲ ಮಾಡಿ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯಲ್ಲಿ ರೈತರೇ ದುರಸ್ತಿಗೆ ಮುಂದಾದಾಗ ಜೀವಹಾನಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಜತೆಗೆ ಬೇಸಿಗೆ ಸಂದರ್ಭದಲ್ಲಿ ಆಹಾರ ಮತ್ತು ನೀರನ್ನರಸಿ ನಾಡಿಗೆ ಲಗ್ಗೆಯಿಡುವ ವನ್ಯಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳುವ ಸಲುವಾಗಿ ಜಮೀನಿನ ಸುತ್ತ ಹರಿಸುವ ಅಕ್ರಮ ವಿದ್ಯುತ್ ಪ್ರವಹಿಸಿ ವನ್ಯಪ್ರಾಣಿಗಳು ಸಾವನ್ನಪ್ಪಿರುವ ಪ್ರಕರಣಗಳೂ ಇವೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಮನುಷ್ಯನ ಜೀವಕ್ಕೆ ಎರವಾಗುವುದೂ ಖಂಡಿತ.

ಸೆಸ್ಕ್ ಅಧಿಕಾರಿಗಳು ಹೇಳುವ ಪ್ರಕಾರ ಬೆಳೆ ಮತ್ತು ರೈತರ ಹಿತದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ಅವಘಡಗಳ ಕುರಿತು ಜನ ಜಾಗೃತಿ ಮತ್ತು ಜಾಥಗಳನ್ನು ನಡೆಸಿ ಅರಿವು ಮೂಡಿಸಲಾಗುತ್ತಿದೆ. ಆದರೂ ಅಲ್ಲಲ್ಲಿ ಅವಘಡಗಳು ಉಂಟಾಗುತ್ತಿವೆ. ವಿದ್ಯುತ್ ಮಾರ್ಗಗಳಲ್ಲಿ ದಿನದ ೨೪ ಗಂಟೆಯೂ ನಿರಂತರವಾಗಿ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಕಲ್ಪಿಸುವ ಮಾರ್ಗಗಳಲ್ಲಿ ೧೧ ಕೆ.ವಿ.ವಿದ್ಯುತ್ ಪ್ರವಹಿಸುತ್ತಿದ್ದು, ಈ ತೀವ್ರತರವಾದ ವಿದ್ಯುತ್ ಪ್ರವಹಿಸುವ ಮಾರ್ಗಗಳಲ್ಲಿ ಮಳೆ-ಗಾಳಿಗೆ ತಂತಿಗಳು ಜೋತು ಬೀಳುವುದು, ತುಂಡಾಗಿ ಕೆಳಗೆ ಬೀಳುವ ಸಾಧ್ಯತೆ ಹೆಚ್ಚು. ಈ ವಿದ್ಯುತ್ ಪ್ರವಹಿಸುವ ತಂತಿಗಳು ತುಂಡಾಗಿ ಭೂಮಿಗೆ ಬೀಳುತ್ತಿದ್ದಂತೆ ಪರಿವರ್ತಕಗಳು(ಟಿಸಿ) ಜಾಮ್ ಆಗಿ ಸೆಸ್ಕ್‌ಗೆ ಮಾಹಿತಿ ರವಾನೆಯಾಗುತ್ತದೆ. ಸೆಸ್ಕ್ ಸಿಬ್ಬಂದಿ ಸ್ವಯಂಪ್ರೇರಿತವಾಗಿ ಸ್ಥಳಕ್ಕೆ ತೆರಳಿ ಸರಿಪಡಿಸುತ್ತಾರೆ. ಆದರೆ, ಬಹುತೇಕ ನಗರ ಪ್ರದೇಶಗಳಲ್ಲಿ ೨೨೦ ವೋಲ್ಟ್ಸ್ ವಿದ್ಯುತ್ ಪ್ರವಹಿಸುವ ತಂತಿಗಳು ತುಂಡಾಗಿ ಕೆಳಗಡೆ ಬಿದ್ದಾಗ ಸ್ವಯಂಪ್ರೇರಿತವಾಗಿ ಮಾಹಿತಿ ದೊರೆಯುವ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದನ್ನು ಕಂಡು ಬಂದಲ್ಲಿ ಸಾರ್ವಜನಿಕರೇ ಸಹಾಯವಾಣಿ ೧೯೧೨ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕಾದ ಅವಶ್ಯಕತೆ ಇದೆ.

 

andolana

Share
Published by
andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

3 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago