ರೂಪ ಹಾಸನ
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ ಪಕ್ಷಗಳು ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯನ್ನು ಗಮನಿಸಿ. ಎಲ್ಲ ಪಕ್ಷಗಳೂ ಮಹಿಳೆಯರಿಗೆ ಬಾಚಿ ಬಾಚಿ ಬೊಗಸೆ ತುಂಬಿ ತುಳುಕುವಷ್ಟು ಕೊಡುಗೆ, ಉಚಿತ ಉಡುಗೊರೆ ನೀಡುವ ಆಶ್ವಾಸನೆಗಳ ಸುರಿಮಳೆಗರೆದಿವೆ.
ಆದರೆ, ಪ್ರಜಾತಂತ್ರದಲ್ಲಿ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿಸುತ್ತಾ ಯೋಜನೆಗಳ ರಚನೆಯಲ್ಲಿ, ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮತ್ತು ಶಾಸನ ಸಭೆಯ ಆಡಳಿತದಲ್ಲಿ ಸಮಾನ ಪ್ರಾತಿನಿಧ್ಯವಿರುವಂತೆ ನೋಡಿಕೊಳ್ಳದಿರುವ ಪುರು ಷಾಳ್ವಿಕೆಯ ರಾಜಕೀಯ ತಂತ್ರಗಾರಿಕೆ ಅದೆಷ್ಟು ದುಷ್ಟತನದ್ದು ಅಲ್ಲವೇ?! ಮಹಿಳೆ ಯರ ಸಮಾನ ಒಳಗೊಳ್ಳುವಿಕೆಯಿಲ್ಲದ ಯಾವುದೇ ಕ್ಷೇತ್ರ ಒಂದು ಬಗೆಯ ಮನೋ/ದೈಹಿಕ ಅಂಗವೈಕಲ್ಯತೆಯಿರುವ ಸಮಾಜವೇ ಸೈ. ಜನಸಂಖ್ಯೆಯ ಅಂದಾಜು ಅರ್ಧದಷ್ಟಿರುವ ಮಹಿಳೆಯರು ಶಾಸನ ಸಭೆಯ ಚುನಾವಣೆಗಳ ಸ್ಪರ್ಧೆಯಲ್ಲಿ ನಾವು ಎಲ್ಲಿದ್ದೇವೆ ಎಂದು ದುರ್ಬೀನು ಹಾಕಿ ಹುಡುಕಬೇಕಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಅಂದಾಜು ೪೫ ವರ್ಷಗಳ ಇತಿಹಾಸದಲ್ಲಿ ಎಷ್ಟು ಮಹಿಳೆಯರು ಸ್ಪರ್ಧಿಸಿದ್ದರು? ಅದರಲ್ಲಿ ಗೆದ್ದವರೆಷ್ಟು? ಎಂದು ಅವಲೋಕನ ಮಾಡಿದರೆ, ಈ ಅವಧಿಯಲ್ಲಿ 1,114 ಮಹಿಳಾ ಸ್ಪರ್ಧಿಗಳ ಪೈಕಿ 102 ಮಹಿಳಾ ಅಭ್ಯರ್ಥಿಗಳು ಮಾತ್ರ ಚುನಾವಣೆಯಲ್ಲಿ ಗೆದ್ದಿದ್ದಾರೆ! ಹಾಗೆ ಪ್ರತಿಯೊಂದು ಪಕ್ಷದ ಟಿಕೆಟ್ ಹಂಚಿಕೆಯಲ್ಲೂ ಹಲವು ಬಗೆಯ ರಾಜಕೀಯ ತಂತ್ರಗಾರಿಕೆಗಳೂ, ಲೆಕ್ಕಾಚಾರಗಳೂ ಕೆಲಸ ಮಾಡುತ್ತವೆ. ಜಾತಿ/ಧಾರ್ಮಿಕ ಸಮುದಾಯಗಳ ಪ್ರಾಬಲ್ಯ, ಗೆಲುವಿನ ಸಾಧ್ಯತೆ, ಹಣಬಲ, ತೋಳ್ಬಲದ ಸಾಮರ್ಥ್ಯ, ರಾಜಕೀಯ ಅನುಭವ, ಜನಬೆಂಬಲ, ಅಭ್ಯರ್ಥಿಗಳ ಸ್ಥಳೀಯ ಸಮೀಕರಣ… ಮುಂತಾದವಕ್ಕೆ ಆದ್ಯತೆ ನೀಡಲಾಗುತ್ತದೆ. ಲಿಂಗಸಮಾನತೆಯ ಅಂಶ ಅಲ್ಲಿ ಚರ್ಚೆಗೂ ಬರುವುದಿಲ್ಲ!
ರಾಜಕೀಯ–ರಾಜಕಾರಣದ ಚುನಾವಣಾ ತಂತ್ರಗಾರಿಕೆಗಳು ಹೆಚ್ಚಾಗಿ ಗಂಡು ಪಾಳೇಗಾರಿಕೆಯ ಕ್ಷೇತ್ರವೇ ಆಗಿರುವಾಗ, ಪುರುಷರಿಗೆ ಅಸ್ತಿತ್ವದ ಭಯ ಕಾಡುತ್ತದೆ. ಹೀಗಾಗಿ ಒಂದೋ ರಾಜಕಾರಣಿ ಸತ್ತಿದ್ದು, ಅನುಕಂಪಗಿಟ್ಟಿಸಲು ಅವನ ಪತ್ನಿಗೆ, ಕುಟುಂಬದ ರಾಜಕೀಯ ಪುರುಷರ ಬೆಂಬಲವಿರುವವರಿಗೆ ಅಥವಾ ಸೋಲು ಖಚಿತವಾದ ಸ್ಥಳದಲ್ಲಿ ಮಾತ್ರ ಮಹಿಳೆಗೆ ಟಿಕೆಟ್ ನೀಡುವುದನ್ನು ಹೆಚ್ಚಾಗಿ ಕಾಣುತ್ತಾ ಬಂದಿದ್ದೇವೆ! ಜೊತೆಗೆ ಇತ್ತೀಚೆಗೆ ಸಿನಿಮಾ ಕ್ಷೇತ್ರದ ಮಹಿಳೆಯರನ್ನು ಕೇವಲ ಅವರ ತಾರಾಮೌಲ್ಯವನ್ನು ಪರಿಗಣಿಸಿ, ಮತ್ಯಾವ ರಾಜಕೀಯ ಅರ್ಹತೆ ಇಲ್ಲದಿದ್ದಾಗಲೂ ರಾಜಕೀಯಕ್ಕೆ ಕರೆ ತರುವ ಕೆಟ್ಟ ಪದ್ಧತಿಯೂ ಚಾಲ್ತಿಗೆ ಬಂದಿದೆ.
ಇಂತಹ ಅವಲಕ್ಷಣದ ರಾಜಕೀಯ ಸನ್ನಿವೇಶದಲ್ಲಿ ನಾಯಕತ್ವ ಗುಣ, ಸಂಘಟನಾ ಚಾತುರ್ಯವಿರುವ ಮಹಿಳೆಯರು ಕೂಡ ರಾಜಕೀಯ ಪ್ರವೇಶಿಸಲು ಬಯಸುವುದು ಕಡಿಮೆಯೆ. ಆದರೆ ಈ ಚಿತ್ರಣ ಹೇಗಾದರೂ ಸರಿ ಬದಲಾಗಲೇಬೇಕು.
ಇನ್ನು ಚುನಾವಣೆ ಗೆದ್ದ ಮಹಿಳೆಯರಲ್ಲಿ ಸಚಿವ ಸ್ಥಾನ ದಕ್ಕಿದ್ದೆಷ್ಟು ಮಂದಿಗೆ ಎಂದು ನೋಡಿದರೆ– 1952ರಲ್ಲಿ ರಾಜ್ಯ ಮೊದಲ ಶಾಸಕಾಂಗ ಸಭೆ ಅಸ್ತಿತ್ವಕ್ಕೆ ಬಂದ ನಂತರದಿಂದ ಇದುವರೆಗೆ ಕೇವಲ 31 ಮಹಿಳೆಯರು ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ಅದರಲ್ಲಿ ಹೆಚ್ಚಿನವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ‘ಮಹಿಳೆಯರು ಮುಖ್ಯವಾಗಿ ಕುಟುಂಬ ಪಾಲಕರು ಮತ್ತು ಸಂಸ್ಕೃ ತಿ ರಕ್ಷಕರು ಆದ್ದರಿಂದ ಅವರಿಗೆ ಈ ಹುದ್ದೆಗಳೇ ಅರ್ಹ’ ಎಂಬ ಪಿತೃಪ್ರಾಧಾನ್ಯದ ಪೂರ್ವಗ್ರಹವೇ ಈ ಹಂಚಿಕೆಯ ಹಿಂದಿರುವ ಲೆಕ್ಕಾಚಾರವೆಂಬುದು ಯಾರೂ ಊಹಿಸಬಹುದಾದ ಸತ್ಯ. ಇದಕ್ಕೆ ಅಪವಾದವೆಂಬಂತೆ ಒಂದೆರಡು ಬಾರಿ ಮಾತ್ರ ವೈದ್ಯಕೀಯ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ವಿದ್ಯುತ್ ಖಾತೆಗಳ ಸಚಿವ ಸ್ಥಾನ ಮಹಿಳೆಯರಿಗೆ ದೊರಕಿದೆಯಷ್ಟೇ. ಇನ್ನು ಮುಖ್ಯಮಂತ್ರಿ ಇರಲಿ, ಉಪಮುಖ್ಯಮಂತ್ರಿಯ ಸ್ಥಾನವೂ ಕನಸಾಗಿಯೇ ಉಳಿದಿದೆ!
ಈ ಬಾರಿಯ ಚುನಾವಣೆಯ ಚಿತ್ರಣದಲ್ಲೇನೂ ಮಹಿಳಾ ಪ್ರಾತಿನಿಧ್ಯದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಈ ಬಾರಿ ಸ್ಪರ್ಧಿಸಿರುವ 2613 ಅಭ್ಯರ್ಥಿಗಳಲ್ಲಿ, 185 ಮಹಿಳೆಯರು ಮಾತ್ರ ಕಣದಲ್ಲಿದ್ದಾರೆ. ಕಳೆದ ಬಾರಿ 219 ಇದ್ದ ಸಂಖ್ಯೆ ಈ ಬಾರಿ ಏರಿಕೆಯ ಬದಲು, ಮತ್ತಷ್ಟು ಕುಸಿತ ಕಂಡಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜನತಾದಳ ಈ ಬಾರಿ ಶೇ.5ರಷ್ಟೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಲ್ಲವೆಂಬುದು ವಿಪರ್ಯಾಸ. ಹಾಗೆ ಎಡ ಹಾಗೂ ಪ್ರಗತಿಪರ ಚಿಂತನೆಯ ಪಕ್ಷಗಳಲ್ಲಿ ಮಹಿಳಾ ಸ್ಪರ್ಧೆ ಗೌಣ, ಇಲ್ಲವೇ ಬೆರಳೆಣಿಕೆಯಷ್ಟು ಮಾತ್ರ ಇರುವುದು ದುರಂತ. ಪ್ರಾಯೋಗಿಕವಾಗಿ ಸ್ಪರ್ಧಿಸುವ ಕೆಲ ಹೊಸ ಪಕ್ಷಗಳಲ್ಲಿ ಹೆಚ್ಚಿನ ಮಹಿಳೆಯರು ಚುನಾವಣಾ ಕಣಕ್ಕಿಳಿದಿರುವುದು ಸ್ವಾಗತಾರ್ಹ. ಹೀಗಿದ್ದೂ ಒಟ್ಟಾರೆ ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕೇವಲ ಶೇ.7ರಷ್ಟು ಮಾತ್ರ!
ಆದರೆ, ಚುನಾವಣೆಯಲ್ಲಿ ಸ್ಪರ್ಧೆಗಿಳಿಸಲು ಮಹಿಳೆಯರನ್ನು ಒಳಗೊಳ್ಳುವುದು ಅತ್ಯಲ್ಪವಾದರೂ, ರಾಜಕೀಯ ಪಕ್ಷಗಳ ಗೆಲುವಿಗೆ ಮಹಿಳಾ ಮತದಾರರೇ ನಿರ್ಣಾಯಕರು! ಮಹಿಳಾ ಮತದಾರರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 2.63 ಕೋಟಿ ಮಹಿಳಾ ಮತದಾರರಿದ್ದಾರೆ. ಅದರಲ್ಲೂ ಕರ್ನಾಟಕದ ಅರ್ಧದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ! ಹೀಗಾಗಿ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಮಹಿಳೆ ಹೆಚ್ಚಾಗಿ ವೋಟ್ ಬ್ಯಾಂಕ್ ಆಗಿ ಮಾತ್ರ ಗೋಚರಿಸುತ್ತಿದ್ದಾಳೆ. ಹೆಚ್ಚಿನ ರಾಷ್ಟ್ರೀಯ, ಪ್ರಾದೇಶಿಕ ಅಥವಾ ಪ್ರಗತಿಪರ ಪಕ್ಷಗಳು ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯ ಕುರಿತು ದಶಕಗಳಿಂದ ತುಟಿಯಂಚಿನ ಒತ್ತಾಯದ ಮಾತುಗಳನ್ನಾಡುತ್ತಲೇ ಬಂದಿವೆ. ಆದರೆ ಯಾರಿಗೂ ಇಚ್ಛಾಶಕ್ತಿ ಇಲ್ಲ. ಅವುಗಳು ಆಂತರ್ಯದಲ್ಲಿ ಈ ಮೀಸಲಾತಿಯ ವಿರೋಧವಾಗಿಯೇ ಇವೆ! ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬಂದರೆ ರಾಜಕಾರಣದಲ್ಲಿ ಪುರುಷ ಪ್ರಾತಿನಿಧ್ಯ ಕಡಿಮೆ ಆಗುತ್ತದೆ ಎನ್ನುವ ಆತಂಕ, ಅಧಿಕಾರದ ರುಚಿಯನ್ನು ಅನುಭವಿಸುತ್ತಾ ಬಂದಿರುವ ಎಲ್ಲ ಪಕ್ಷಗಳ ಹೆಚ್ಚಿನ ಪುರುಷಾಧಿಪತಿಗಳದ್ದೂ! ಆಗಿದೆ.
ಆದರೆ, ಇನ್ನು ಮುಂದೆಯೂ ಹೀಗಾಗಬಾರದು. ಮಹಿಳಾ ಮೀಸಲಾತಿಯು ರಾಜಕೀಯವನ್ನೂ ಒಳಗೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ಜಾರಿಗೆ ಬರಬೇಕು. ವೈಜ್ಞಾನಿಕವಾಗಿ ಶಾಸನಸಭೆಗೆ ಮಹಿಳಾ ಮೀಸಲಾತಿಯು ಜನಸಂಖ್ಯಾಧಾರಿತ ವಾಗಿ –ಅಂದರೆ ಶೇ.50ರಷ್ಟು ಮೀಸಲಾತಿಯನ್ನು ಪಡೆಯಬೇಕಿರುವುದು ಎಲ್ಲ ರೀತಿಯಲ್ಲೂ ಅಪೇಕ್ಷಣೀಯವಾದುದು. ಆದರೆ ಸದ್ಯ, ಸರ್ಕಾರಗಳು ಒಪ್ಪಿಕೊಂಡಿರುವ ಶೇ.33 ಆದರೂ ತಕ್ಷಣಕ್ಕೆ ಜಾರಿಯಾಗಲೇಬೇಕು. ಆಗ ಮಾತ್ರ ನಮ್ಮ ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳೆಯನ್ನು ಒಳಗೊಂಡ ಸರ್ಕಾರಗಳಲ್ಲಿ ಒಟ್ಟಾರೆ ಸಮಾಜದಲ್ಲಿ ಮೂಲಮಟ್ಟದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಾಗಬಹುದು. ಇನ್ನಾದರೂ ಇದನ್ನು ಸಾಧ್ಯವಾಗಿಸುವತ್ತ ಎಚ್ಚೆತ್ತ ಮಹಿಳಾ ಸಮೂಹ ತುರ್ತು ಕಾರ್ಯಪ್ರವೃತ್ತವಾಗಲೇಬೇಕಿದೆ.
ಚೆನ್ನೈ: ನೆರೆಯ ರಾಜ್ಯ ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾಕಿದ್ದ ವಾಹನಗಳನ್ನು ತಡೆದು ತಮಿಳು ಪುಂಡರು ಕನ್ನಡಿಗರ ಮೇಲೆ ದರ್ಪ ಮೆರೆದಿರುವ…
ಬೆಂಗಳೂರು: ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಅಲ್ಲ ಎನ್‌ಡಿಎ 140ರಿಂದ 150 ಸ್ಥಾನ ಗೆಲ್ಲುತ್ತದೆ ಎಂದು ಜೆಡಿಎಸ್…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಚಂದ್ರಾ ಲೇಔಟ್‌ನ ಬಿಎಂಟಿಸಿ ಡಿಪೋ ಬಳಿ ಇಂದು…
ಮಧ್ಯಪ್ರದೇಶ: ಇಲ್ಲಿನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಮಿನಿ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್…
ಮೈಸೂರು: ಗ್ರಾಮದೇವತೆ ಹಬ್ಬದಲ್ಲಿ ಬಂಡಿ ಓಡಿಸುವಾಗ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ತಲಕಾಡು ಗ್ರಾಮದಲ್ಲಿ ನಡೆದಿದೆ.…
ಹುಣಸೂರು: ತಾಲ್ಲೂಕಿನ ಸಾಲುಮರದ ತಿಮ್ಮಕ್ಕ ಉದ್ಯಾನವನ ಪಕ್ಕದ ಕಲ್‌ಬೆಟ್ಟದ ಬಳಿ ಗೋಡೌನ್ ಒಂದರಲ್ಲಿ ೧೮ ಲಕ್ಷ ರೂ. ಮೌಲ್ಯದ ೧,೨೯೬…