ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಹನೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಸಣ್ಣ ಈರುಳ್ಳಿ ಬೆಲೆ ಕುಸಿದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ೧೫ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಕೆಲವು ಜಮೀನುಗಳಲ್ಲಿ ಈರುಳ್ಳಿ ಮಣ್ಣಿನಲ್ಲೇ ಕೊಳೆತು ಹೋದರೆ ಇನ್ನು ಕೆಲವು ಕಡೆ ಕೂಲಿಕಾರರ ಅಭಾವದಿಂದ ಕೊಯ್ಲು ಮಾಡಲು ಸಾಧ್ಯವಾಗಿಲ್ಲ.
ಜಿಲ್ಲೆಯ ೩ ತಾಲೂಕುಗಳಲ್ಲಿ ಪಂಪ್ಸೆಟ್ ನೀರಾವರಿ ಜಮೀನುಗಳಲ್ಲಿ ರೈತರು ಮಳೆಗಾಲದ ಈರುಳ್ಳಿ ಬೆಳೆಯವುದು ಸಾಮಾನ್ಯ. ಏಪ್ರಿಲ್ ಕೊನೆಯ ಮತ್ತು ಮೇ ತಿಂಗಳ ಮೊದಲ ವಾರ ಈರುಳ್ಳಿ ಬಿತ್ತನೆ ಮಾಡಿದ್ದು ಈಗ ಕೊಯ್ಲಿಗೆ ಬಂದಿದೆ. ವಿಪರೀತ ಮಳೆಯಾದ್ದರಿಂದ ತೇವಾಂಶ ಹೆಚ್ಚಳವಾಗಿ ಶೀತ ತುಂಬಿಕೊಂಡು ಈರುಳ್ಳಿ ಫಸಲು ಇಳುವರಿ ಕುಸಿದಿದೆ ಜೊತೆಗೆ ಬೆಲೆಯು ಪಾತಾಳ ಮುಟ್ಟಿದೆ.
ಮಳೆಯ ನಡುವೆಯೂ ಕೊಯ್ಲು ಮಾಡಿದ್ದರೂ ಖರೀದಿಸುವವರು ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಸಣ್ಣ ಈರುಳ್ಳಿಗೆ ನೆರೆಯ ತಮಿಳುನಾಡು ರಾಜ್ಯವೇ ಪ್ರಮುಖ ಮಾರುಕಟ್ಟೆಯಾಗಿದೆ. ಕ್ವಿಂಟಲ್ ಈರುಳ್ಳಿ ಈಗ ೩೦೦ ರಿಂದ ೧೦೦೦ ರೂ. ತನಕ ಬೆಲೆಯಿದೆ. ಗುಣಮಟ್ಟದ ಈರುಳ್ಳಿ ಮಾತ್ರ ೧೦೦೦ ಸಾವಿರ ರೂ.ಗಳಿಗೆ ಖರೀದಿಸುತ್ತಾರೆ. ಉಳಿದದ್ದನ್ನು ಖರೀದಿದಾರರು ಕೇಳಿದ ಬೆಲೆಗೆ ನೀಡಬೇಕಾದ ಪರಿಸ್ಥಿತಿಯಿದೆ. ೩ ತಿಂಗಳ ಹಿಂದೆ ಕ್ವಿಂಟಲ್ ಬಿತ್ತನೆ ಈರುಳ್ಳಿಗೆ ೨೫೦೦ ರೂ. ಬೆಲೆ ನೀಡಿ ಖರೀದಿಸಿ ಬಿತ್ತನೆ ಮಾಡಲಾಗಿದೆ. ಈಗ ಖರೀದಿ ಮಾಡುವವರೇ ಇಲ್ಲ. ಸ್ಥ
ಳೀಯ ದಳ್ಳಾಳಿಗಳು ಮನಸ್ಸಿಗೆ ಬಂದಂತೆ ದರ ನಿಗದಿ ಮಾಡಿ ಖರೀದಿಸಿ ತಮಿಳುನಾಡಿಗೆ ಕಳುಹಿಸುತ್ತಾರೆ. ಅಲ್ಲಿಂದ ಹೊರ ದೇಶಗಳಿಗೆ ರಫ್ತಾಗುತ್ತದೆ.
ಒಂದು ಕ್ವಿಂಟಲ್ ಈರುಳ್ಳಿ ಕೊಯ್ಲು ಮಾಡಲು ಕೂಲಿಯಾಳುಗೆ ೩೦೦ ರೂ. ಕೂಲಿ ನೀಡಬೇಕು. ಹೋಬಳಿ ಕೇಂದ್ರವಾದ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರವಾದ ತೆರಕಣಾಂಬಿ ಗ್ರಾಮದ ತರಕಾರಿ ಮಂಡಿಯಲ್ಲಿ ಮಾರಾಟವಾದ ಈರುಳ್ಳಿಯ ಬೆಲೆಯಲ್ಲಿ ಸಾವಿರ ರೂ.ಗೆ ೧೦೦ ರೂ., ಗುಂಡ್ಲುಪೇಟೆ ಎಪಿಎಂಸಿಯಲ್ಲಿ ೮೦ ರೂ., ಜಮೀನುಗಳಲ್ಲಾದರೆ ಮೂಟೆಗೆ ೨೦ ರೂ. ಕಮೀಷನ್ ನೀಡಬೇಕಿದೆ ರೈತರು.
ಸಣ್ಣ ಈರುಳ್ಳಿ ೩ ತಿಂಗಳ ಫಸಲಾಗಿದ್ದು, ಬಿತ್ತನೆ ಬೀಜಕ್ಕೆ, ಔಷಧಕ್ಕೆ, ಗೊಬ್ಬರಕ್ಕೆ ಮತ್ತು ಕಳೆ ತೆಗೆಸಲು ರೈತರು ಸಹಸ್ರಾರು ರೂ. ಖರ್ಚು ಮಾಡಿರುತ್ತಾರೆ. ಶ್ರಮ ಹಾಕಿ ಬೆಳೆದರೂ ಕನಿಷ್ಠ ಬೆಲೆಯಾದರೂ ಸಿಗುವುದಿಲ್ಲ. ಕ್ವಿಂಟಲ್ ಈರುಳ್ಳಿ ೨೦೦೦ ರೂ.ಗೆ ಮಾರಾಟವಾದರೆ ರೈತರ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಇಂತಹ ದರ ಅಪರೂಪಕ್ಕೊಮ್ಮೆ ಮಾತ್ರ ದೊರೆತ ನಿದರ್ಶನಗಳಿವೆ.
ಈರುಳ್ಳಿಯನ್ನು ಬೆಳೆದ ನಂತರ ದಾಸ್ತಾನು ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಚಾಮರಾಜನಗರ, ಗುಂಡ್ಲುಪೇಟೆ, ಸಂತೇಮರಹಳ್ಳಿ, ಕೊಳ್ಳೇಗಾಲ, ಹನೂರು ಪಟ್ಟಣಗಳಲ್ಲಿ ಎಪಿಎಂಸಿಗಳಿದ್ದರೂ ಶೈತ್ಯಾಗಾರಗಳಿಲ್ಲ. ಕೊಯ್ಲು ನಂತರ ಸಂಗ್ರಹಿಸಿ ಉತ್ತಮ ಬೆಲೆ ಸಿಗುವ ಸಂದರ್ಭಕ್ಕೆ ಮಾರಾಟ ಮಾಡುವ ಅನುಕೂಲ ರೈತರಿಗಿಲ್ಲ. ಆದ್ದರಿಂದ ತರಕಾರಿ, ಈರುಳ್ಳಿ, ಅರಿಶಿಣ ಬೆಳೆದ ರೈತರು ಕೊಯ್ಲು ಮಾಡಿದ ನಂತರ ಖರೀದಿದಾರರು ನಿಗದಿ ಮಾಡಿದ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿಯಿದೆ. ಇದೆಲ್ಲ ನಮ್ಮನ್ನಾಳುವ ಸರ್ಕಾರಗಳಿಗೆ ಗೊತ್ತಿದ್ದರೂ ಜಾಣಕುರುಡು ಪ್ರದರ್ಶನ ಮಾಡುತ್ತಿವೆ. ರೈತರಿಗೆ ಅಗತ್ಯವಿರುವ ಮಾರುಕಟ್ಟೆ, ಶೈತ್ಯಾಗಾರಗಳನ್ನು ನಿರ್ಮಿಸದೆ ಅನ್ಯಾಯ ಮಾಡುತ್ತಿವೆ.
ಇನ್ನು ತೋಟಗಾರಿಕೆ ಇಲಾಖೆಯು ಸಣ್ಣ ಪ್ರಮಾಣದಲ್ಲಿ ರೈತರು ತಮ್ಮ ಜಮೀನುಗಳಲ್ಲೇ ಶೈತ್ಯಾಗಾರಗಳನ್ನು ನಿರ್ಮಿಸಿಕೊಳ್ಳಲು ಸಹಾಯಧನ ನೀಡುತ್ತಿದೆ. ಇದನ್ನು ದೊಡ್ಡ ರೈತರು ಮಾತ್ರ ಮಾಡಿಕೊಳ್ಳಲು ಸಾಧ್ಯ. ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅಸಾಧ್ಯ. ಈ ಬಗ್ಗೆ ರೈತರಲ್ಲಿ ಆಸಕ್ತಿ ಕಡಿಮೆ ಎಂಬುದನ್ನು ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.
ಕೊಯ್ಲು ನಂತರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವಂತಹ ಕೌಶಲ್ಯವನ್ನು ಬೆಳೆಸುವ ಯತ್ನ ಸಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ, ರೈತರು, ಯುವ ರೈತರು ಧೈರ್ಯವಾಗಿ ಮುನ್ನುಗ್ಗುತ್ತಿಲ್ಲ. ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸಹಯೋಗದಲ್ಲಿ ಕೌಶಲ್ಯಾಧಾರಿತ ತರಬೇತಿ ನೀಡುತ್ತಿವೆ. ಕೃಷಿ ಉತ್ಪನ್ನಗಳ ಆಧಾರಿತ ಸಣ್ಣ ಪುಟ್ಟ ಉದ್ದಿಮೆ ಸ್ಥಾಪನೆಗೆ ಸಾಲ ಸೌಲಭ್ಯ ಪಡೆಯವ ಬಗ್ಗೆಯೂ ಮಾರ್ಗದರ್ಶನ ಮಾಡುತ್ತಿವೆ. ಇದರಿಂದ ನಿರೀಕ್ಷಿತ ಫಲ ಲಭ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿರುವ ರೈತ
ಸಂಘಟನೆಗಳು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು, ಶೈತ್ಯಾಗಾರಗಳನ್ನು ನಿರ್ಮಿಸಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತಲೇ ಇವೆ. ಈ ಕೂಗು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೇಳಿದರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಪರಿಣಾಮ ರೈತರು ಬೆಲೆ ಕುಸಿತದ ನಷ್ಟ ಅನುಭವಿಸಬೇಕಿದೆ.
ಬೆಲೆ ಕುಸಿತದಂತಹ ಸಂದರ್ಭದಲ್ಲಾದರೂ ಸರ್ಕಾರ ರೈತರ ನೆರವಿಗೆ ಧಾವಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರ ಇಂತಹ ಸಂದರ್ಭದಲ್ಲಿ ನೆರವಿಗೆ ಬಂದಾಗ ಮಾತ್ರ ಉದ್ದೇಶಿತ ಗುರಿ ಸಾಧಿಸಲು ಸಾಧ್ಯ.
ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…
'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್‌ನಾಥ್‌ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…