ಎಡಿಟೋರಿಯಲ್

ಈ ಜೀವ ಜೀವನ : ಅನಾಥಾಶ್ರಮದಲ್ಲಿ ಬೆಳೆದ ಬಾಲಕ ಈಗ ಐಎಎಸ್ ಅಧಿಕಾರಿ!

ಕೇರಳದ ಮಲ್ಲಪುರ ಜಿಲ್ಲೆಯ ಕೊಂಡೊಟ್ಟಿಯ ಹತ್ತಿರದ ಎಡವನ್ನಾಪಾರ ಎಂಬ ಒಂದು ಕುಗ್ರಾಮದಲ್ಲಿ ಹುಟ್ಟಿದ ಮೊಹಮ್ಮದ್ ಅಲಿ ಶಿಹಾಬ್ ತನ್ನ ನೆರೆ ಹೊರೆಯ ಉಳಿದ ಮಕ್ಕಳಂತೆಯೇ ಒಬ್ಬ ಪೋಕರಿ ಹುಡುಗ. ಶಾಲೆಗೆ ಚಕ್ಕರ್ ಹೊಡೆಯುವುದೆಂದರೆ ಅವನಿಗೆ ಎಲ್ಲಿಲ್ಲದ ಸಂತೋಷ. ಶಾಲೆ ತಪ್ಪಿಸಲು ನೆಪ ಹುಡುಕುವುದರಲ್ಲಿ ಅವನನ್ನು ಯಾರೂ ಮೀರಿಸಲಾರರು. ಆದರೆ, ಕೆಲವೊಮ್ಮೆ ಶಾಲೆ ತಪ್ಪಿಸಲು ಅವನಿಗೆ ನಿಜವಾದ ಕಾರಣವೂ ಇರುತ್ತಿತ್ತು. ಅವನ ತಂದೆ ಕೊರೋತ್ ಅಲಿ ಒಂದು ಪಾನ್ ಬೀಡಾ ಅಂಗಡಿ ನಡೆಸುತ್ತಿದ್ದರು. ಅಸ್ತಮಾ ರೋಗಿಯಾದ ಅವರಿಗೆ ಆರೋಗ್ಯ ಹದಗೆಟ್ಟಾಗಲೆಲ್ಲ ಮೊಹಮ್ಮದ್ ಶಿಹಾಬ್ ಅಂಗಡಿಯಲ್ಲಿ ಕುಳಿತು ಅವರಿಗೆ ಸಹಾಯ ಮಾಡಲು ಶಾಲೆಗೆ ಚಕ್ಕರ್ ಹೊಡೆಯಬೇಕಾಗುತ್ತಿತ್ತು. ಅಪ್ಪ ಬೀಡಾ ಅಂಗಡಿ ನಡೆಸುತ್ತಿದ್ದ ಕಾರಣಕ್ಕೋ ಏನೋ, ದೊಡ್ಡವನಾದ ಮೇಲೆ ತಾನೂ ಅಂತಹದೇ ಒಂದು ಅಂಗಡಿ ಹಾಕುತ್ತೇನೆಂದು ಕನಸು ಕಾಣುತ್ತಿದ್ದನು.

ಆದರೆ, 1991ರಲ್ಲಿ ಮೊಹಮ್ಮದ್ ಅಲಿ ಶಿಹಾಬ್ ಹನ್ನೊಂದು ವರ್ಷದವನಾಗಿದ್ದಾಗ ಅವನ ತಂದೆ ತೀರಿಕೊಂಡು ಕುಟುಂಬ ದುರಂತದ ಸುಳಿಗೆ ಸಿಲುಕಿತು. ಆಗ ತಾನು ಮತ್ತು ಐದು ಮಕ್ಕಳಿದ್ದ ಕುಟುಂಬವನ್ನು ನಡೆಸುವ ಜವಾಬ್ದಾರಿ ಅವನ ತಾಯಿ ಫಾತಿಮಾರ ಮೇಲೆ ಬಿದ್ದಿತು. ಆದರೆ, ಆರ್ಥಿಕ ಮುಗ್ಗಟ್ಟು ಎಷ್ಟು ತೀವ್ರವಾಯಿತೆಂದರೆ, ಗಂಡ ತೀರಿಕೊಂಡ ಎರಡು ತಿಂಗಳ ನಂತರ ಫಾತಿಮಾ ಹನ್ನೊಂದು ವರ್ಷದ ಶಿಹಾಬ್, ಎಂಟು ವರ್ಷದ ಸೌರಾಭಿ ಮತ್ತು ಐದು ವರ್ಷದ ನಸೀಬಾಳನ್ನು ಕೋಝಿಕೋಡೆಯ ಒಂದು ಮುಸ್ಲಿಂ ಅನಾಥಾಶ್ರಮಕ್ಕೆ ಸೇರಿಸಬೇಕಾಯಿತು. ಹೀಗೆ ಆನಾಥಾಶ್ರಮ ಸೇರಿದ ಮೊಹಮ್ಮದ್ ಶಿಹಾಬ್ ಮತ್ತು ಅವನ ತಂಗಿಯರು ಮುಂದಿನ ಹತ್ತು ವರ್ಷಗಳನ್ನು ಅಲ್ಲಿಯೇ ಕಳೆದರು.

ಆದರೆ, ಅನಾಥಾಶ್ರಮಕ್ಕೆ ಸೇರಿಸಲ್ಪಟ್ಟದ್ದು ಮೊಹಮ್ಮದ್ ಅಲಿ ಶಿಹಾಬ್‌ರ ಜೀವನದ ಅತಿಮುಖ್ಯ ತಿರುವಾಗಿ ಪರಿಣಮಿಸಿತು. ಅಲ್ಲಿ ಅವರ ಜೀವನ ಒಂದು ನಿಶ್ಚಿತ ಶಿಸ್ತಿಗೆ ಒಳಪಟ್ಟಿತು. ಅವರ ಶಾಲಾ ಕಲಿಕೆಗೆ ಒಂದು ಸ್ಪಷ್ಟ ರೂಪುರೇಷೆ ಬಂದಿತು. ಎಷ್ಟೆಂದರೆ, ರಾತ್ರಿ ಎಂಟು ಗಂಟೆಗೆ ಊಟ ಮುಗಿಸಿ, ಮಲಗಿ, ಪುನಃ ನಡು ರಾತ್ರಿ ಎದ್ದು ಓದಲು ಕುಳಿತುಕೊಳ್ಳುತ್ತಿದ್ದರು. ಅಕ್ಕಪಕ್ಕದಲ್ಲಿ ಮಲಗಿದ ಇತರ ಮಕ್ಕಳ ನಿದ್ರೆಗೆ ತೊಂದರೆಯಾಗದಂತೆ ಹೊದಿಕೆಯ ಒಳಗೆ ಮಂದ ಬೆಳಕಿನ ಟಾರ್ಚಲ್ಲಿ ಓದುತ್ತಿದ್ದರು. ಆ ಶ್ರಮ ಮತ್ತು ಸಾಧನೆಯ ಫಲವಾಗಿ, ಅವರು ಹತ್ತನೇ ಕ್ಲಾಸನ್ನು ಬಹಳ ಒಳ್ಳೆಯ ಅಂಕಗಳೊಂದಿಗೆ ಪಾಸು ಮಾಡಿದರು.

ಮುಂದೆ, ರೆಗ್ಯುಲರ್ ಕಾಲೇಜಿನಲ್ಲಿ ಗ್ರ್ಯಾಜುಯೇಷನ್ ನಡೆಸಲು ತೀರ್ಮಾನಿಸಿ, ಮೊಹಮ್ಮದ್ ಶಿಹಾಬ್ ಆಶ್ರಮವನ್ನು ಬಿಟ್ಟು ಊರಿಗೆ ಮರಳುತ್ತಾರೆ. ಆದರೆ, ಅವರ ಕುಟುಂಬ ಇನ್ನೂ ಆರ್ಥಿಕ ಸಂಕಷ್ಟದಿಂದ ಹೊರಬಾರದ ಕಾರಣದಿಂದಾಗಿ ಅವರ ಮನೆಯಲ್ಲಿ ನಿರೀಕ್ಷಿತ ಬೆಂಬಲ ಸಿಗದೆ ಅವರು ಒಂದು ಪ್ರೈಮರಿ ಶಾಲೆಯಲ್ಲಿ ಶಿಕ್ಷಕ ಕೆಲಸಕ್ಕೆ ಸೇರುತ್ತಾರೆ. ಮತ್ತು, ಶಿಕ್ಷಕ ವೃತ್ತಿಮಾಡುತ್ತಲೇ ಕೇರಳ ರಾಜ್ಯದ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಬರೆದು ಪಾಸಾಗುತ್ತಾರೆ. ನಂತರ, ಶಿಕ್ಷಕ ಉದ್ಯೋಗ ಬಿಟ್ಟು, ಕೇರಳ ವಾಟರ್ ಅಥಾರಿಟಿ ಇಲಾಖೆಯಲ್ಲಿ ಪೀವನ್ ಕೆಲಸಕ್ಕೆ ಸೇರುತ್ತಾರೆ. ಹಾಗೆಯೇ, ಮುಂದಿನ ಮೂರು ವರ್ಷಗಳ ಕಾಲ ಕೇರಳ ಸರ್ಕಾರದ ವಿವಿಧ ಇಲಾಖೆಗಳಲ್ಲಿ ರೈಲ್ವೆ ಟಿಸಿ, ಜೈಲ್ ವಾರ್ಡನ್ ಮೊದಲಾದ ಕೆಳ ಹಂತದ ಉದ್ಯೋಗಗಳನ್ನು ಮಾಡುತ್ತ, ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಹಿಸ್ಟ್ರಿಯಲ್ಲಿ ಬಿಎ ಪದವಿ ಪಡೆಯುತ್ತಾರೆ. ಆಗ ಅವರಿಗೆ ಇಪ್ಪತ್ತೇಳು ವರ್ಷ ಪ್ರಾಯ.

ಮೊಹಮ್ಮದ್ ಅಲಿ ಶಿಹಾಬ್ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಪಾಸ್ ಮಾಡಿದ್ದು ತಿಳಿದಿದ್ದ ಅವರ ಅಣ್ಣ ಒಂದು ದಿನ ಅವರಿಗೆ ಐಎಎಸ್ ಪರೀಕ್ಷೆ ಕಟ್ಟಲು ಸಲಹೆ ನೀಡುತ್ತಾರೆ. ಆದರೆ, ಮೊಹಮ್ಮದ್ ಶಿಹಾಬ್ ತಯಾರಿದ್ದರೂ ಅದಕ್ಕೆ ಬೇಕಾದ ಆರ್ಥಿಕ ಅನುಕೂಲತೆಗಳು ಅವರಿಗಿರಲಿಲ್ಲ. ಆಗ ಅವರು ಸೇರಿದ್ದ ಬಾಲಾಶ್ರಮವೇ ಅವರಿಗೆ ಬೇಕಾದ ಆರ್ಥಿಕ ಬೆಂಬಲ ನೀಡಲು ಮುಂದೆ ಬಂದಿತು. ಮತ್ತು, ದೆಹಲಿ ಮೂಲದ ಝಕಾತ್ ಫೌಂಡೇಷನ್ ಅವರಿಗೆ ಉಚಿತ ಕೋಚಿಂಗ್‌ಗೆ ವ್ಯವಸ್ಥೆ ಮಾಡಿಕೊಟ್ಟಿತು. ಮೊಹಮ್ಮದ್ ಅಲಿ ಶಿಹಾಬ್ 2007ರಲ್ಲಿ ಮೊದಲ ಬಾರಿ ಐಎಎಸ್ ಪರೀಕ್ಷೆಗೆ ಕುಳಿತರು. ಆದರೆ ಪಾಸಾಗಲಾಗಲಿಲ್ಲ. ಮುಂದೆ 2008ರಲ್ಲಿ ಕುಳಿತರು. ಆಗಲೂ ವಿಫಲರಾದರು.

ಈ ಮಧ್ಯೆ ಅವರ ಮದುವೆಯಾಗಿ, ಒಂದು ಮಗುವೂ ಆಗಿತ್ತು. ಸಾಂಸಾರಿಕ ಜವಾಬ್ದಾರಿ ಮತ್ತು ಪರೀಕ್ಷೆ ತಯಾರಿಯ ನಡುವೆ ಅವರಿಗೆ ಮೂವತ್ತರ ಪ್ರಾಯ ಸಮೀಪಿಸಿತು. ಮುಂದೆ ತನಗೆ ಪರೀಕ್ಷೆಗೆ ಕುಳಿತುಕೊಳ್ಳಲು ಹೆಚ್ಚು ಅವಕಾಶವಿಲ್ಲ ಎನ್ನುವುದನ್ನು ಮನಗಂಡ ಮೊಹಮ್ಮದ್ ಅಲಿ ಶಿಹಾಬ್ 2011ರಲ್ಲಿ ಪುನಃ ಯುಪಿಎಸ್‌ಸಿ ಪರೀಕ್ಷೆಗೆ ಕುಳಿತುಕೊಂಡರು. ಆ ಬಾರಿ ಅವರು 226 ಅಂಕಗಳನ್ನು ಪಡೆದು ಪಾಸು ಮಾಡಿ, ನಾಗಾಲ್ಯಾಂಡ್ ಕೇಡರಿನ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾದರು. ಅವರು ಐಎಎಸ್ ಅಧಿಕಾರಿಯಾದುದರಲ್ಲಿ ಇನ್ನೊಂದು ವಿಶೇಷತೆಯೇನೆಂದರೆ, ಅವರ ಇಂಗ್ಲಿಷ್ ಅಷ್ಟೇನೂ ಚೆನ್ನಾಗಿಲ್ಲದ ಕಾರಣ, ಒಬ್ಬರು ಅನುವಾದಕರ ಸಹಾಯ ಪಡೆದು ಸಂದರ್ಶನ ಎದುರಿಸಿ, ೩೦೦ರಲ್ಲಿ 201 ಮಾರ್ಕುಗಳನ್ನು ಪಡೆದುದು.

ಬಡತನ ತಮ್ಮ ಹಣೆಬರಹ, ಪೂರ್ವ ಜನ್ಮದ ಕರ್ಮ ಎಂದು ತಮ್ಮನ್ನು ತಾವೇ ಹಳಿದುಕೊಳ್ಳುವವರಿಗೆ ಮೊಹಮ್ಮದ್ ಅಲಿ ಶಿಹಾಬ್‌ರ ಜೀವನಗಾಥೆ ಒಂದು ಸ್ಛೂರ್ತಿದಾಯಕ ಪಾಠವಾಗಬಹುದು. ಮಲಯಾಳಂನಲ್ಲಿ ‘ವಿರಳಟ್ಟಂ (ಬೆರಳ ತುದಿ)’ ಎಂಬ ಹೆಸರಲ್ಲಿ ಶಿಹಾಬ್‌ರ ಆತ್ಮಕತೆಯೂ ಪ್ರಕಟವಾಗಿದೆ. ಅವರ ಹೆಂಡತಿ ಆಯೆಷಾ ಫೆಮಿನಾ, ಅಕ್ಕ ಮೈಮೂನಾ ಮತ್ತು ಅವರೊಂದಿಗೆ ಅನಾಥಾಶ್ರಮ ಸೇರಿದ್ದ ತಂಗಿಯರಾದ ಸೌರಾಭಿ ಮತ್ತು ನಸೀಬಾ ಸರ್ಕಾರಿ ಶಾಲಾ ಶಿಕ್ಷಕಿಯರಾಗಿದ್ದಾರೆ. ಅಣ್ಣ ಗಫೂರ್ ಅಬ್ದುಲ್ ಆಯುರ್ವೇದ ವೈದ್ಯರಾಗಿದ್ದಾರೆ.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago