ಎಡಿಟೋರಿಯಲ್

ಈ ಜೀವ ಈ ಜೀವನ | ಈಸ್ಟ್ ಇಂಡಿಯಾ ಕಂಪೆನಿಗೆ ಭಾರತೀಯ ಮಾಲೀಕ!

ಪಂಜು ಗಂಗೊಳ್ಳಿ

೨೦೦೩ರಲ್ಲಿ, ಆಗ ಚಹಾ ಪುಡಿ ಮಾರುತ್ತಿದ್ದ ‘ದಿ ಈಸ್ಟ್ ಇಂಡಿಯಾ ಕಂಪೆನಿ’ಯ ೩೦-೪೦ ಶೇರುದಾರರು ತಮಗೆ ಚಹ ಪುಡಿ ಪೂರೈಸುವಂತೆ ಸಂಜೀವ್ ಮೆಹ್ತಾರನ್ನು ಸಂಪರ್ಕಿಸಿದಾಗ, ದಿ ಈಸ್ಟ್ ಇಂಡಿಯಾ ಕಂಪೆನಿ ಎಂಬ ಹೆಸರು ಕೇಳುತ್ತಿದ್ದಂತೆ ಮೆಹ್ತಾರ ಕಿವಿ ಚುರುಕಾಗುತ್ತದೆ. ಅಂದಿನಿಂದ ಅವರು ‘ದಿ ಈಸ್ಟ್ ಇಂಡಿಯಾ ಕಂಪೆನಿಯ’ಯ ಶೇರುಗಳನ್ನು ಖರೀದಿಸಲು ಪ್ರಾರಂಭಿಸಿದರು. ಹೀಗೆ ಶೇರುಗಳನ್ನು ಖರೀದಿಸುತ್ತ ೨೦೦೫ರಲ್ಲಿ ಇಡೀ ಕಂಪೆನಿಯನ್ನು ಖರೀದಿಸಿದರು! ನಂತರ ಪ್ರಪಂಚದಾದ್ಯಂತ ಸುತ್ತಾಡಿ, ಅಸಂಖ್ಯ ವಸ್ತುಸಂಗ್ರಹಾಲಯಗಳಿಗೆ ಭೇಟಿ ಕೊಟ್ಟು, ಕಂಪೆನಿಗೆ ಸಂಬಂಧಿಸಿದ ವಸ್ತು, ಮಾಹಿತಿ, ಸಾಹಿತ್ಯಗಳನ್ನು ಅಭ್ಯಸಿಸಿ, ಅದರ ಸಂಪೂರ್ಣ ಚರಿತ್ರೆಯನ್ನು ತಿಳಿದುಕೊಂಡರು.

ರಿಷಿ ಸುನಕ್ ಇಂಗ್ಲೆಂಡಿನ ಹೊಸ ಪ್ರಧಾನಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯರು ಆತ ತಮ್ಮವ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈಗಿನ ಪಾಕಿಸ್ತಾನದ ಗುಜ್ರನ್‌ವಾಲಾ ಮೂಲದ ಅಜ್ಜ ಅಜ್ಜಿ, ಹಾಗೂ ಕೆನ್ಯಾ ಮತ್ತು ತಾಂಜಾನಿಯಾ ಮೂಲದ ಅಪ್ಪ ಅಮ್ಮನನ್ನು ಪಡೆದ ರಿಷಿ ಸುನಕ್ ಎಷ್ಟರ ಮಟ್ಟಿಗೆ ಭಾರತೀಯ ಸಂಜಾತರು ಎಂಬ ಬಗ್ಗೆ ತಕರಾರುಗಳಿದ್ದರೂ, ಒಂದೊಮ್ಮೆ ತಮ್ಮನ್ನು ಆಳಿದ ಬ್ರಿಟಿಷರನ್ನು ಈಗ ತಮ್ಮವನೊಬ್ಬ ಆಳುತ್ತಿದ್ದಾನೆಂಬ ಎಂಬ ಭಾವನೆಯೇ ಈ ಹರ್ಷಕ್ಕೆ ಮುಖ್ಯ ಕಾರಣ ಎನ್ನುವುದು ಯಾರಿಗಾದರೂ ತಿಳಿಯುವ ವಿಚಾರ. ಈ ಕಾರಣಕ್ಕಾಗಿಯೇ ಏನೋ, ಹೀಗೇಯೇ ಬೇರೆ ದೇಶಗಳಲ್ಲಿ ಜನಪ್ರತಿನಿಧಿ, ಪ್ರಧಾನಿ, ಅಧ್ಯಕ್ಷರಾಗಿರುವ ಭಾರತೀಯ ಮೂಲದ ವ್ಯಕ್ತಿಗಳ ಬಗ್ಗೆ ಭಾರತೀಯರಲ್ಲಿ ಇಷ್ಟು ತೀವ್ರ ಸ್ವರೂಪದ ಹರ್ಷೋದ್ಘಾರ ಕಂಡು ಬರುವುದಿಲ್ಲ.

ಅದೇನೇ ಇರಲಿ, ಭಾರತವು ಬ್ರಿಟಿಷರ ಅಡಿಯಾಳಾಗಲು ಮುಖ್ಯ ಕಾರಣವಾದ ‘ದಿ ಈಸ್ಟ್ ಇಂಡಿಯಾ ಕಂಪೆನಿ’ ಎಂಬುದು ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಿರುವ ಹೆಸರು. ಆ ‘ದಿ ಈಸ್ಟ್ ಇಂಡಿಯಾ ಕಂಪೆನಿ’ಗೆ ಈಗ ಒಬ್ಬ ಅಚ್ಚ ಭಾರತೀಯ ಮಾಲೀಕ ಎನ್ನುವ ವಿಚಾರ ಮಾತ್ರ ಹೆಚ್ಚಿನ ಭಾರತೀಯರಿಗೆ ತಿಳಿದಿರಲಿಕ್ಕಿಲ್ಲ!

೧೫೮೮ರಲ್ಲಿ ಸ್ಪಾನಿಷ್ ಸೋಲಿನ ನಂತರ ಲಂಡನ್ನಿನ ಕೆಲ ವ್ಯಾಪಾರಿಗಳು ಆಗಿನ ಇಂಗ್ಲೆಂಡಿನ ರಾಣಿ ಒಂದನೇ ಎಲಿಝಬೆತ್‌ಗೆ ಮನವಿ ಸಲ್ಲಿಸಿ, ತಮಗೆ ವ್ಯಾಪಾರಕ್ಕಾಗಿ ಈಸ್ಟ್ ಇಂಡೀಸ್ (ಭಾರತ)ಗೆ ಹೋಗಲು ಅನುಮತಿ ಕೇಳಿದರು. ೧೫೯೧ರಲ್ಲಿ ಅವರಿಗೆ ಅನುಮತಿ ಸಿಕ್ಕಿ, ಮೂರು ಹಡಗುಗಳು ಯಾನ ಶುರು ಮಾಡಿದವು. ಅವುಗಳಲ್ಲಿ ಎರಡು ಹಡಗುಗಳು ಸಮುದ್ರದಲ್ಲಿ ಕಣ್ಮರೆಯಾಗಿ, ಒಂದು ಹಡಗು ಮಲಯ ತನಕ ಯಾನ ೧೫೯೪ರಲ್ಲಿ ಇಂಗ್ಲೆಂಡಿಗೆ ವಾಪಾಸಾಯಿತು.

೧೫೯೬ರಲ್ಲಿ ಮತ್ತೆ ಮೂರು ವ್ಯಾಪಾರಿ ಹಡಗುಗಳು ಭಾರತದತ್ತ ಹೊರಟು, ಅವೆಲ್ಲವೂ ಸಮುದ್ರದಲ್ಲಿ ನಾಪತ್ತೆಯಾದವು. ೧೫೯೮ರ ಸೆಪ್ಟಂಬರ್ ೨೪ರಂದು ಇನ್ನೊಂದು ವ್ಯಾಪಾರಿಗಳ ತಂಡ ೩೦೦೦ ಪೌಂಡುಗಳನ್ನು ಒಟ್ಟಗೂಡಿಸಿ, ಒಂದು ಕಂಪೆನಿಯನ್ನು ಹುಟ್ಟು ಹಾಕಿ, ಹಡಗುಗಳನ್ನು ಖರೀದಿಸಿ, ರಾಣಿಯ ಅನುಮತಿ ಪಡೆದು ೧೬೦೦ ರಲ್ಲಿ ಯಾನ ಹೊರಟು, ಯಶಸ್ವಿಯಾಗಿ ಭಾರತ ತಲುಪಿತು. ಆ ವ್ಯಾಪಾರಿಗಳು ಹುಟ್ಟು ಹಾಕಿದ ಆ ಕಂಪೆನಿಯೇ ‘ದಿ ಈಸ್ಟ್ ಇಂಡಿಯಾ ಕಂಪೆನಿ’.

ದಿ ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಕಾಲಿಡುವ ಮೊದಲೇ ಇಲ್ಲಿ ಡಚ್ ಮತ್ತು ಪೋರ್ಚುಗೀಸ್ ಮೂಲದ ಕಂಪೆನಿಗಳು ವ್ಯಾಪಾರ ನಡೆಸುತ್ತಿದ್ದವು. ಆದರೆ, ದಿ ಈಸ್ಟ್ ಇಂಡಿಯಾ ಕಂಪೆನಿ ತನ್ನ ಕುತಂತ್ರಗಳ ಮೂಲಕ ಡಚ್ ಮತ್ತು ಪೋರ್ಚುಗೀಸ್ ಕಂಪೆನಿಗಳನ್ನು ಮುಗಿಸಿ, ಇಂಗ್ಲೆಂಡಿನ ದೊರೆ ಎರಡನೇ ಚಾರ್ಲ್ಸ್‌ನಿಂದ ಹಣ ಮುದ್ರಿಸುವುದು, ಸೈನ್ಯವನ್ನು ಹೊಂದುವುದು, ತಾನು ವ್ಯಾಪಾರ ಮಾಡುತ್ತಿರುವ ಭೂಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವುದು, ಸ್ವಾಧೀನ ಪಡಿಸಿಕೊಂಡ ಪ್ರದೇಶಗಳಲ್ಲಿ ನ್ಯಾಯ ತೀರ್ಮಾನ ಮಾಡುವುದು, ಯುದ್ದ ನಡೆಸುವುದು ಮತ್ತು ಅಗತ್ಯವಾದೆಡೆ ಒಡಂಬಡಿಕೆಗಳನ್ನು ಮಾಡಿಕೊಳ್ಳುವುದು ಮೊದಲಾದ ಅಧಿಕಾರಗಳನ್ನು ಪಡೆದು, ಮುಂದೆ ಇಡೀ ಭಾರತವೇ ಬ್ರಿಟಿಷ್ರ ಅಧೀನಕ್ಕೊಳಪಡಲು ಕಾರಣವಾಯಿತು.

ದಿ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಹೆಚ್ಚು ಭಾರತದ ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತ ಹೋದಂತೆ, ಆ ಪ್ರದೇಶಗಳ ಆಡಳಿತವನ್ನು ಸಮರ್ಪಕವಾಗಿ ನೋಡಿಕೊಳ್ಳುವುದು ಅದಕ್ಕೆ ದುಸ್ತರವಾಗತೊಡಗಿತು. ೧೮೫೭ರಲ್ಲಿ ನಡೆದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಬ್ರಿಟಿಷರ ದೃಷ್ಟಿಯಲ್ಲಿ ‘ಸೈನಿಕರ ದಂಗೆ’)ದಿಂದ ಅಸಮಧಾನಗೊಂಡ ಬ್ರಿಟಿಷ್ ಸರ್ಕಾರ ದಿ ಈಸ್ಟ್ ಇಂಡಿಯಾ ಕಂಪೆನಿಯನ್ನು ರಾಷ್ಟ್ರೀಕರಣಗೊಳಿಸಿ ಅದರ ವಶದಲ್ಲಿದ್ದ ಭಾರತದ ಭೂಭಾಗ, ಸೈನ್ಯವನ್ನು ತನ್ನ ನೇರ ಅಧಿಕಾರಕ್ಕೆ ಒಳಪಡಿಸಿತು. ಮತ್ತು, ಬಂಗಾಳದ ಗವರ್ನರ್ ಆಗಿದ್ದ ವಾರನ್ ಹೇಸ್ಟಿಂಗ್ಸ್‌ನನ್ನು ಭಾರತದ ಪ್ರಪ್ರಥಮ ಗವರ್ನರ್ ಜನರಲ್ ಆಗಿ ನೇಮಿಸಿ, ಭಾರತದಲ್ಲಿ ತನ್ನ ನೇರ ಆಡಳಿತವನ್ನು ಪ್ರಾರಂಭಿಸಿತು. ಹೀಗೆ ತನ್ನ ಆಡಳಿತಾಧಿಕಾರವನ್ನು ಕಳೆದುಕೊಂಡ ದಿ ಈಸ್ಟ್ ಇಂಡಿಯಾ ಕಂಪೆನಿ ೧೮೭೪ರ ಜನವರಿ ೧ ರಂದು ‘ಈಸ್ಟ್ ಇಂಡಿಯಾ ಸ್ಟಾಕ್ ಡಿವೆಡೆಂಡ್ ರಿಡೆಮ್ಷನ್ ಆಕ್ಟ್’ ನಡಿ ಬರ್ಖಾಸ್ತುಗೊಂಡಿತು.

ಆದರೆ, ಅದರ ಹೆಸರು ‘ದಿ ಈಸ್ಟ್ ಇಂಡಿಯಾ ಕಂಪೆನಿ’ ಬ್ರಿಟಿಷ್ ಗವರ್ನಮೆಂಟ್ ಟ್ರೆಸರಿಯ ಮಾಲಿಕತ್ವದಲ್ಲಿ ಹಾಗೆಯೇ ಉಳಿದುಕೊಂಡಿತು. ಮುಂದೆ ಒಂದು ಶತಮಾನದ ನಂತರ, ಅಂದರೆ ೧೯೭೪ರಲ್ಲಿ ಕೆಲವು ಖಾಸಗೀ ಹೂಡಿಕೆದಾರರು ಒಗ್ಗೂಡಿ ದಿ ಈಸ್ಟ್ ಇಂಡಿಯಾ ಕಂಪೆನಿಯನ್ನು ಪುನರುಜ್ಜೀವನಗೊಳಿಸಿ ಚಹಾ ಮತ್ತು ಕಾಫಿ ವ್ಯಾಪಾರದಲ್ಲಿ ತೊಡಗಿಸಿದರು.

ಮುಂಬೈಯಲ್ಲಿ ಹುಟ್ಟಿ ಬೆಳೆದ, ಜೈನ ಸಮುದಾಯಕ್ಕೆ ಸೇರಿದ ಸಂಜೀವ್ ಮೆಹ್ತಾ ಒಬ್ಬ ಗುಜರಾತಿ ವಜ್ರದ ವ್ಯಾಪಾರಿ. ತನ್ನ ೨೭ನೇ ವಯಸ್ಸಿನಲ್ಲಿ ೧೯೮೯ರಲ್ಲಿ ಲಂಡನ್ನಿಗೆ ಹೋಗಿ, ಸಕ್ಯೆಾಪ್ ಯಾರ್ಡ್‌ಅನ್ನು ಖರೀದಿಸಿ, ಭಾರತಕ್ಕೆ ಯಂತ್ರಗಳ ಚಿಕ್ಕಪುಟ್ಟ ಬಿಡಿಭಾಗಗಳನ್ನು ಮಾರುವ ವ್ಯಾಪಾರ ಶುರು ಮಾಡಿದರು.

೨೦೦೩ರಲ್ಲಿ, ಆಗ ಚಹಾ ಪುಡಿ ಮಾರುತ್ತಿದ್ದ ‘ದಿ ಈಸ್ಟ್ ಇಂಡಿಯಾ ಕಂಪೆನಿ’ಯ ೩೦-೪೦ ಶೇರುದಾರರು ತಮಗೆ ಚಹ ಪುಡಿ ಪೂರೈಸುವಂತೆ ಸಂಜೀವ್ ಮೆಹ್ತಾರನ್ನು ಸಂಪರ್ಕಿಸಿದಾಗ, ದಿ ಈಸ್ಟ್ ಇಂಡಿಯಾ ಕಂಪೆನಿ ಎಂಬ ಹೆಸರು ಕೇಳುತ್ತಿದ್ದಂತೆ ಮೆಹ್ತಾರ ಕಿವಿ ಚುರುಕಾಗುತ್ತದೆ. ಅಂದಿನಿಂದ ಅವರು ‘ದಿ ಈಸ್ಟ್ ಇಂಡಿಯಾ ಕಂಪೆನಿಯ’ಯ ಶೇರುಗಳನ್ನು ಖರೀದಿಸಲು ಪ್ರಾರಂಭಿಸಿದರು. ಹೀಗೆ ಶೇರುಗಳನ್ನು ಖರೀದಿಸುತ್ತ ೨೦೦೫ರಲ್ಲಿ ಇಡೀ ಕಂಪೆನಿಯನ್ನು ಖರೀದಿಸಿದರು!

ಸಂಜೀವ್ ಮೆಹ್ತಾ ‘ದಿ ಈಸ್ಟ್ ಇಂಡಿಯಾ ಕಂಪೆನಿ’ಯನ್ನು ಖರೀದಿಸಿದ ನಂತರ ಮೊದಲಿಗೆ ಮಾಡಿದ ಕೆಲಸವೆಂದರೆ ಪ್ರಪಂಚದಾದ್ಯಂತ ಸುತ್ತಾಡಿ, ಅಸಂಖ್ಯ ವಸ್ತುಸಂಗ್ರಹಾಲಯಗಳಿಗೆ ಭೇಟಿ ಕೊಟ್ಟು, ಕಂಪೆನಿಗೆ ಸಂಬಂಧಿಸಿದ ವಸ್ತು, ಮಾಹಿತಿ, ಸಾಹಿತ್ಯಗಳನ್ನು ಅಭ್ಯಸಿಸಿ, ಅದರ ಸಂಪೂರ್ಣ ಚರಿತ್ರೆಯನ್ನು ತಿಳಿದುಕೊಂಡರು.

ತನ್ನ ಸ್ವಾರ್ಥ, ಲಾಭಕ್ಕಾಗಿ ಎಂತೆಂತಹ ದಬ್ಬಾಳಿಕೆ, ರಕ್ತದೋಕುಳಿಗಳನ್ನು ನಡೆಸಿದ ‘ದಿ ಈಸ್ಟ್ ಇಂಡಿಯಾ ಕಂಪೆನಿ’ ಚರಿತ್ರೆಯ ಪುಟಗಳಲ್ಲಿ ಒಂದು ರಾಕ್ಷಸೀ ಕಂಪೆನಿಯೆಂದೇ ಚಿತ್ರಿಸಲ್ಪಟ್ಟಿದೆ. ಇಂತಹ ಕಂಪೆನಿಗೆ ಸಂಜೀವ್ ಮೆಹ್ತಾ ನಿಧಾನವಾಗಿ ಒಂದು ಮಾನವೀಯ ರೂಪವನ್ನು ಕೊಡುತ್ತ ಬಂದರು. ಈ ಮಾನವೀಯ ಮುಖದ ಒಂದು ಭಾಗವಾಗಿ ಕಂಪೆನಿಯ ಲಕ್ಷುರಿ ಗೂಡ್ಸ್, ರಿಯಲ್ ಎಸ್ಟೇಟ್ ಮೊದಲಾದವುಗಳ ವ್ಯವಹಾರದಿಂದ ಬಂದ ಒಟ್ಟು ಲಾಭದಲ್ಲಿ ಒಂದಷ್ಟು ಪ್ರಮಾಣವನ್ನು ತನ್ನ ಹೆತ್ತವರು ನಡೆಸುತ್ತಿರುವ ರತ್ನನಿಧಿ ಚಾರಿಟೆಬಲ್ ಟ್ರಸ್ಟಿಗೆ ಕೊಡುತ್ತಾರೆ. ಇದಕ್ಕೂ ಮೊದಲು ಹಲವಾರು ಭಾರತೀಯ ಉದ್ಯಮಿಗಳು ಬ್ರಿಟಿಷ್ ಕಂಪೆನಿಗಳನ್ನು ಖರೀದಿಸಿದ್ದರೂ, ಸಂಜೀವ್ ಮೆಹ್ತಾ ‘ದಿ ಈಸ್ಟ್ ಇಂಡಿಯಾ ಕಂಪೆನಿ’ಯನ್ನು ಖರೀದಿಸಿದುದು ಸಾಂಕೇತಿಕವಾಗಿ ಹೆಚ್ಚು ಗಮನಾರ್ಹವಾದುದು.

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

6 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

7 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

7 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

8 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

8 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

8 hours ago