ಕ್ಯಾನ್ಸರ್ ರೋಗಿಗಳಿಗೆ ಬದುಕಿನ ಭರವಸೆ ನೀಡಿದ ಡಾ.ವಿಶ್ವೇಶ್ವರ
ನಾಳೆಯ ಬಗ್ಗೆ ಚಿಂತಿಸುವುದಕ್ಕಿಂತ ಈ ದಿನದ, ಈ ಹೊತ್ತಿನ ಬಗ್ಗೆ ಆಲೋಚಿಸಬೇಕು. ಕ್ಯಾನ್ಸರ್ ಎಂದರೆ ಸಾವು ಎನ್ನುವುದಕ್ಕಿಂತ ಇದೊಂದು ಸಾಮಾನ್ಯ ಕಾಯಿಲೆ ಎಂಬ ನಂಬಿಕೆ ಇಡಬೇಕು. ರೋಗದಿಂದ ಸತ್ತವರ ಪಟ್ಟಿಯನ್ನು ನೋಡಿ ಪರಿತಪಿಸುವುದಕ್ಕಿಂತ ಬದುಕುಳಿದು ನಮ್ಮಂತೆ ಜೀವಿಸುತ್ತಿರುವ ಕ್ಯಾನ್ಸರ್ ಗೆದ್ದ ಕಲಿಗಳೊಂದಿಗೆ ಬೆರೆತು ಮಾತನಾಡಬೇಕು. ನೋಡಮ್ಮ, ಬದುಕುವ ಛಲ, ಜೀವನೋತ್ಸಾಹ ನಿನ್ನಲ್ಲಿದ್ದರೆ ಇದರಿಂದ ಹೊರ ಬರುವುದು ಸಲೀಸು. ಹೆದರಬೇಡ ನಾನಿದ್ದೇನೆ’ ಎಂದು ಬಂದ ಸಹಸ್ರಾರು ರೋಗಿಗಳಲ್ಲಿ ದಿನಪ್ರತಿ ಧೈರ್ಯ ತುಂಬುತ್ತಾ ಅವರನ್ನು ಚಿಕಿತ್ಸೆಗೆ ಪ್ರೇರಣೆಗೊಳಿಸುತ್ತಿದ್ದವರು ಡಾ.ಎಂ.ಎಸ್. ವಿಶ್ವೇಶ್ವರ. ಸ್ತನ ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಹೆಚ್ಚಿನ ಪರಿಣತಿ ಪಡೆದಿದ್ದವರು. ವೃತ್ತಿಬಾಂಧವರಲ್ಲಿ ನುರಿತ ರೇಡಿಯೇಶನ್ ಆಂಕಾಲಾಜಿಸ್ಟ್ ಎಂದೇ ಜನಪ್ರಿಯರಾಗಿದ್ದರು. ಅರವತ್ತರ ಹೊಸ್ತಿಲಲ್ಲಿದ್ದ ಡಾ.ವಿಶ್ವೇಶ್ವರ ನಮ್ಮನ್ನೆಲ್ಲ ಅಗಲಿದ್ದಾರೆ. ಕ್ಯಾನ್ಸರ್ ರೋಗಿಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದ ವಿಶ್ವೇಶ್ವರರು ಕ್ಯಾನ್ಸರ್ ಗೆದ್ದ ನನ್ನಂತಹವರ ಪಾಲಿಗೆ ಸಾಕ್ಷಾತ್ ವಿಶ್ವೇಶ್ವರನೇ ಆಗಿದ್ದವರು.
‘ಕ್ಯಾನ್ಸರ್’ ಈ ಹೆಸರೆ ಹಾಗೇ. ಎಂತಹ ಬಲಿಷ್ಠರನ್ನು ಬಲಿಯಾಗಿಸಿ ಬಿಡುತ್ತದೆ. ಬಡವ- ಶ್ರೀಮಂತರೆನ್ನದೆ ಬೆಂಬಿಡದೆ ಕಾಡುವ ಕಿರಾತಕ. ಹಸುಗೂಸಿನಿಂದಿಡಿದು ಆಬಾಲವೃದ್ಧಾರಾದಿಯಾಗಿ ಇದರ ಪ್ರತಾಪಕ್ಕೆ ಬಲಿಯಾಗಿ ಹೋಗಿದ್ದಾರೆ. ಸೆಟೆದು ನಿಂತವರಿಗೆ ಇದರ ವಿರುದ್ಧ ಹೋರಾಡಿ ಹೊರ ಬರುವುದು ಸಲೀಸು. ಇಲ್ಲದಿದ್ದರೆ ಸಾವೇ ಲೇಸು ಎನ್ನುವಷ್ಟರ ಮಟ್ಟಿಗೆ ಮಾನವ ಕುಲವನ್ನು ಹೊಕ್ಕಿ ಕಾಡುತ್ತಿರುವ ಮಹಾಮಾರಿ. ಇಂದು ವಿಶ್ವವನ್ನು ಭಯದ ಕೂಪದಲ್ಲಿ ಬೀಳಿಸಿರುವ ಕಾಯಿಲೆಗಳಲ್ಲಿ ಇದರದೇ ಸಿಂಹಪಾಲು. ಪ್ರತಿವರ್ಷ ಲಕ್ಷೋಪಲಕ್ಷ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಿರಿವಂತರ ಕಾಯಿಲೆ ಎನ್ನುವಷ್ಟರ ಮಟ್ಟಿಗೆ ಇದರ ಚಿಕಿತ್ಸಾ ವೆಚ್ಚ ಬಲು ದುಬಾರಿಯಾಗಿದೆ.
ಸಾವಿರಗಟ್ಟಲೆ ತಿರುಗಾಟಕ್ಕೆ ಬೇಕಾದರೆ, ಲಕ್ಷಾಂತರ ರೂಪಾಯಿಗಳು ಇವರ ಚಿಕಿತ್ಸೆಗೆ ಬೇಕಾಗುತ್ತದೆ. ರೋಗಿಗಳನ್ನೇಷ್ಟೆ ನುಂಗದೆ ಆ ಕುಟುಂಬದವರ ಮನೆ-ಮಠಗಳನ್ನು ಮಾರಿಸಿ ಬೀದಿಪಾಲಾಗಿಸಿ ಮತ್ತೊಮ್ಮೆ ಚೇತರಿಸಿಕೊಳ್ಳಲಾರದಷ್ಟೂ ಬಡತನಕ್ಕೆ ಈ ಕಾಯಿಲೆ ದೂಡುತ್ತದೆ. ಭಾರತದಲ್ಲಂತೂ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ.
ಭಾರತದಲ್ಲಿ ರೋಗಿಗಳ ಅನುಪಾತಕ್ಕೆ ಹೊಂದುವಷ್ಟು ವೈದ್ಯರಿಲ್ಲ. ಇರುವ ವೈದ್ಯರಲ್ಲೆ ತಜ್ಞವೈದ್ಯರ ಕೊರತೆ ಹೆಚ್ಚಿದೆ. ಬೆರಳೆಣಿಕೆಯಷ್ಟು ಇರುವ ತಜ್ಞ ವೈದ್ಯರಲ್ಲಿ ಡಾ.ಎಂ.ಎಸ್.ವಿಶ್ವೇಶ್ವರ ಅವರಂತಹವರು ತೀವ್ರ ಅಪರೂಪ. ಶ್ರೇಷ್ಠ ವಿಕಿರಣ ಆಂಕಾಲಾಜಿಸ್ಟ್ ಆದ ಡಾ.ವಿಶ್ವೇಶ್ವರ ಮೈಸೂರಿನ ರಾಮಾನುಜ ರಸ್ತೆಯಲ್ಲಿ ವಾಸವಿದ್ದ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ ಆರಾಧ್ಯ ಮತ್ತು ಹೇಮಾವತಿ ದಂಪತಿಯ ಮಗ. ಇಬ್ಬರು ಮಕ್ಕಳಲ್ಲಿ ಇವರೇ ಮೊದಲಿಗರು. ತಾಯಿ ಹೇಮಾವತಿ ಲಿವರ್ ಕ್ಯಾನ್ಸರ್‌ಗೆ ತುತ್ತಾದದ್ದು ಹಾಗೂ ಸಹೋದರ ಸದಾನಂದ ದುರಂತ ಸಾವಿನಲ್ಲಿ ಕೊನೆಯಾದದ್ದು ಇವರ ಜೀವನದ ಅತ್ಯಂತ ಕಹಿ ನೆನಪುಗಳಾಗಿದ್ದವು. ವಿದ್ಯಾರ್ಥಿ ದಿಸೆಯಲ್ಲಿಯೇ ಚುರುಕು ವಿದ್ಯಾರ್ಥಿ ಎನಿಸಿದ್ದ ಇವರು ಎಲ್ಲ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದರು. ಬಾಲ್ಯದಲ್ಲಿಯೆ ವೈದ್ಯನಾಗಬೇಕು, ನನ್ನಮ್ಮನಂತೆ ಬೇರೆಯವರ ಅಮ್ಮಂದಿರು ಸಾಯದಂತೆ ರಕ್ಷಿಸಬೇಕೆಂದುಕೊಂಡು ವೈದ್ಯನಾಗಬೇಕೆಂಬ ಇವರ ಕನಸು ನನಸಾದದ್ದು ೧೯೮೫ರಲ್ಲಿ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಮುಗಿಸಿ ಬೆಂಗಳೂರಿನ ಕಿದ್ವಾಯಿ ಮೆಮೊರಿಯಲ್‌ಆಸ್ಪತ್ರೆಯಲ್ಲಿ ಇವರು ಆಯ್ದುಕೊಂಡ ವಿಭಾಗ ರೇಡಿಯೇಷನ್ ಆಂಕಲಾಜಿ. ಪರಿಪೂರ್ಣ ತಜ್ಞತೆಯೊಂದಿಗೆ ಮೈಸೂರಿಗೆ ಬಂದವರೇ ಮತ್ತೆಂದೂ ಬೇರೆ ಕ್ಷೇತ್ರದ ಕಡೆ ಹೋದವರಲ್ಲ.
ಡಾ.ವಿಶ್ವೇಶ್ವರ ಅವರು ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಕೊಡಲು ಆರಂಭಿಸಿದದಾಗ ರೋಗಿಗಳ ಸಂಖ್ಯೆ ಇಂದಿನಷ್ಟಿರಲಿಲ್ಲ. ೧೯೯೦ರ ದಶಕದಲ್ಲಿ ಅತ್ಯಂತ ವಿರಳ ಕ್ಯಾನ್ಸರ್ ರೋಗಿಗಳು ಮೈಸೂರಿನ ಭಾಗದಲ್ಲಿದ್ದು, ಇವರೆಲ್ಲರ ಚಿಕಿತ್ಸೆಗಾಗಿ ಭಾರತ್ ಕ್ಯಾನ್ಸರ್ ಆಸ್ಪತ್ರೆ ಹೊಸದಾಗಿ ಆರಂಭವಾಗಿತ್ತು. ಅಂದು ಈ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿದ ವಿಶ್ವೇಶ್ವರ ಅವರು ೨೯ ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿದರು. ಕೇವಲ ಇವರ ಸೇವೆಯನ್ನು ಚಿಕಿತ್ಸೆಗಷ್ಟೆ ಸೀಮಿತಗೊಳಿಸಿಕೊಳ್ಳದೆ, ನನ್ನಂತೆ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಬೇಕೆನ್ನುವ ಹೆಬ್ಬಯಕೆಯಿಂದ ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಕಳೆದ ೧೧ ವರ್ಷಗಳಿಂದ ವೈದ್ಯ ವಿದ್ಯಾರ್ಥಿಗಳಿಗೆ ಅಸೋಸಿಯೆಟೆಡ್ ಪ್ರೊಫೆಸರ್ ಆಗಿ ಸೇವೆಸಲ್ಲಿಸುತ್ತಿದ್ದರು. ೫೯ ವರ್ಷದ ಈ ಹಿರಿಯ ತಜ್ಞ ವೈದ್ಯರು ಗರ್ಭಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವುದರಲ್ಲಿ ಎತ್ತಿದ ಕೈ. ಕೇವಲ ವೃತ್ತಿ ಪರಿಣತ ವೈದ್ಯರಷ್ಟೆ ಅಲ್ಲದೆ ಮಾನವೀಯ ಮೌಲ್ಯಗಳ್ಳುಳ ಮಹಾಗಣಿ. ಮೃದು ಹಾಗೂ ಮಿತಭಾಷಿಯೂ ಹೌದು. ತಮ್ಮ ಸೇವೆಯ ಉದ್ದಕ್ಕೂ ಪರರಿಂದ ನಿಂದನೆಗೆ ಒಳಗಾಗದೆ, ಸಹೊದ್ಯೋಗಿಗಳೊಂದಿಗೆ ಸಭ್ಯತೆಯಿಂದ ವರ್ತಿಸಿ ಸ್ನೇಹಪರತೆಯಿಂದ ನಡೆದುಕೊಂಡವರು.
ಇವರ ಕೈಗುಣ ಮೈಸೂರಿಗಷ್ಟೆ ಸೀಮಿತವಾಗದೆ ನಾಡಿನ ಗಡಿಯನ್ನು ದಾಟಿದೆ. ನೂರಾರು ರೋಗಿಗಳು ಮೈಸೂರಿನತ್ತ ಮುಖಮಾಡಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದು ಹೋಗುತ್ತಿರುವುದಕ್ಕೆ ಡಾ.ವಿಶ್ವೇಶ್ವರರ ಸೇವೆಯೇ ಸಾಕ್ಷಿಯಾಗಿದೆ.
ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ವೈದ್ಯರು ಬಂದು ಹೋಗಿರುತ್ತಾರೆ. ಆದರೆ, ರೋಗಿಗಳ ಮತ್ತು ಅವರ ಕುಟುಂಬದವರಲ್ಲಿ ಶಾಶ್ವತವಾಗಿ ನೆಲೆಯೂರುವವರು ಮಾತ್ರ ವಿರಳ. ತಮ್ಮ ಸಾರ್ಥಕವಾದ ಸೇವೆಯಲ್ಲಿ ಸಹಸ್ರಾರು ರೋಗಿಗಳನ್ನು ಸಾವಿನಿಂದ ಪಾರು ಮಾಡಿಸಿ ಅವರ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಪರರ ಜೀವವನ್ನು ಉಳಿಸಲು ಹೋರಾಟ ಮಾಡುತ್ತಿದ್ದ ಡಾ. ವಿಶ್ವೇಶ್ವರ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿರಲಿಲ್ಲ. ಅಂತಹ ನಿಸ್ವಾರ್ಥ ಸೇವೆ ಅವರದ್ದಾಗಿತ್ತು. ಡಾ. ವಿಶ್ವೇಶ್ವರ ಅವರಿಲ್ಲದ ಕ್ಷಣವನ್ನು ನೆನಪಿಸಿಕೊಳ್ಳುವುದು ಅವರ ಸೇವೆಯನ್ನು ಪಡೆದ ರೋಗಿಗಳಿಗೆ ಮತ್ತು ಅವರ ಉಪನ್ಯಾಸವನ್ನು ಕೇಳಿದ ಸಹಸ್ರಾರು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ.
ಕಳೆದ ೩ ವರ್ಷಗಳ ಹಿಂದೆಯೇ ಲಿವರ್ ಸಮಸ್ಯೆಗೆ ಒಳಗಾಗಿ ಕಸಿ ಮಾಡಿಸಿಕೊಂಡಿದ್ದರು. ಆದರೂ ಕ್ಯಾನ್ಸರ್ ರೋಗಿಗಳ ಸೇವೆಯಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದು ಅವರ ಶ್ರೇಷ್ಠ ಸೇವೆಗೆ ಸಾಕ್ಷಿಯಾಗಿದೆ. ತಮ್ಮ ವೃತ್ತಿ ಬದುಕಿನ ಸಾಧನೆಯ ಸಿಹಿ ನೆನಪುಗಳನ್ನು ತಮ್ಮ ಮಡದಿ ಜಲಜಾಕ್ಷಿ, ವೈದ್ಯರಾಗಿರುವ ಮಗಳು ರಾಧಿಕಾ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಮಗ ರಾಘವನೊಂದಿಗೆ ಹಂಚಿಕೊಳ್ಳಬೇಕಾದ ಕ್ಷಣದಲ್ಲೇ ಡಾ. ವಿಶ್ವೇಶ್ವರ ಅಗಲಿದ್ದಾರೆ.
ನಮಗೊಂದು ಹೊಸ ಬದುಕುಕೊಟ್ಟ ಡಾ.ವಿಶ್ವೇಶ್ವರ ಸರ್, ನೀವು ಕಾಲನ ಕೆರೆಗೆ ಓಗೊಟ್ಟಿದ್ದೀರಿ.. ಸಾರ್ಥಕ ಸೇವೆಯನ್ನು ನಮ್ಮ ನೆನಪಿನಲ್ಲಿಟ್ಟು ಕಾಣದೂರಿಗೆ ಹೊರಟ ನಿಸ್ವಾರ್ಥ, ಶ್ರೇಷ್ಠ ವೈದ್ಯರಾದ ನಿಮಗಿದೋ ಇಡೀ ಮನಕುಲದ ಮಹಾನಮನ!